ನೆಲಮಂಗಲ, ಯಲಹಂಕ, ದೇವನಹಳ್ಳಿ ಮತ್ತು ಹೊಸಕೋಟೆ ಸೇರಿದಂತೆ ಬಹುತೇಕ ಬೆಂಗಳೂರು ನಗರ ಮತ್ತು ನಗರದಂಚಿನ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ಸಿನ ಭದ್ರ ಕೋಟೆ. ಕ್ಷೇತ್ರ ರಚನೆಯಾದ 1977ರಿಂದ ಈವರೆಗೆ ನಡೆದಿರುವ 11 ಚುನಾವಣೆಗಳಲ್ಲಿ ಒಮ್ಮೆ ಮಾತ್ರ ಜೆಡಿಎಸ್ ಗೆಲುವು ಪಡೆದಿದ್ದನ್ನು ಹೊರತುಪಡಿಸಿ ಉಳಿದಂತೆ ಇಲ್ಲಿ ಕಾಂಗ್ರೆಸ್ಸಿನದ್ದೇ ಪಾರುಪತ್ಯ.
ಈ ಹಿಂದಿನ; 2009ರ ಚುನಾವಣೆಗಳಲ್ಲಿ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯ್ಲಿ ಅವರು ದಕ್ಷಿಣ ಕನ್ನಡದಿಂದ ವಲಸೆ ಬಂದು ಕ್ಷೇತ್ರದಲ್ಲಿ ತಮ್ಮ ಖಾತೆ ತೆರೆದಿದ್ದರು. ಬಿಜೆಪಿಯ ಸಿ ಅಶ್ವಥನಾರಾಯಣ ವಿರುದ್ಧ ಆ ಬಾರಿ ಅವರು 11,649 ಮತಗಳ ಅಂತರದ ಸಾಧಾರಣ ಜಯ ದಾಖಲಿಸಿದ್ದರು. ಆ ಬಳಿಕ 2014ರಲ್ಲಿ ಮತ್ತೆ ಕಾಂಗ್ರೆಸ್ಸಿನಿಂದ ಕಣಕ್ಕಿಳಿದಿದ್ದ ಅವರಿಗೆ ಬಿಜೆಪಿಯ ಬಿ ಎನ್ ಬಚ್ಚೇಗೌಡ ಪೈಪೋಟಿ ನೀಡಿದ್ದರು. ಅಲ್ಲದೆ, ಆ ಬಾರಿ ಈಗಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕೂಡ ಜೆಡಿಎಸ್ನಿಂದ ಕಣಕ್ಕಿಳಿದು ಕ್ಷೇತ್ರ ರಾಜ್ಯಮಟ್ಟದಲ್ಲಿ ಗಮನಸೆಳೆಯುಲು ಕಾರಣರಾಗಿದ್ದರು. ಆದರೆ, ಪ್ರಭಾವಿ ನಾಯಕರ ತೀವ್ರ ಪೈಪೋಟಿಯ ನಡುವೆಯೂ ಮೊಯ್ಲಿ ಅವರು ತಮ್ಮ ಗೆಲುವಿನ ಅಂತರವನ್ನು 35,218 ಮತಗಳಿಗೆ ಹೆಚ್ಚಿಸಿಕೊಳ್ಳುವ ಮೂಲಕ ಕ್ಷೇತ್ರದ ಮೇಲಿನ ತಮ್ಮ ಹಿಡಿತವನ್ನು ಸಾಬೀತು ಮಾಡಿದ್ದರು.
ಬರದ ನಾಡಿಗೆ ಎತ್ತಿನಹೊಳೆಯ ನೀರು ತರುವುದು ಮತ್ತು ಉದ್ಯೋಗಾವಕಾಶ ಸೃಷ್ಟಿಸುವ ಭರವಸೆಯೊಂದಿಗೆ ಮೊಯ್ಲಿ ಅವರು ಕಳೆದ ಬಾರಿ ಚುನಾವಣೆ ಗೆದ್ದಿದ್ದರು. ಆದರೆ, ಐದು ವರ್ಷಗಳಲ್ಲಿ ಆ ಎರಡೂ ಕೇವಲ ಭರವಸೆಗಳಾಗೇ ಉಳಿದಿವೆ. ಎತ್ತಿನಹೊಳೆ ಕಾಮಗಾರಿ 2013ರಲ್ಲೇ ಆರಂಭವಾಗಿದ್ದರೂ ನೀರು ಚಿಕ್ಕಬಳ್ಳಾಪುರ ತಲುಪುವುದು ಸದ್ಯಕ್ಕೆ ಸಾಧ್ಯವಾಗಲಿಕ್ಕಿಲ್ಲ ಎಂಬ ಸ್ಥಿತಿ ಇದೆ. ಜೊತೆಗೆ ಕಣದ ಚಿತ್ರಣ ಕೂಡ ಈ ಬಾರಿ ಬದಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಮೊಯ್ಲಿ ವಿರುದ್ಧ ಈ ಬಾರಿ ಬಿಜೆಪಿಯಿಂದ ಮತ್ತೆ ಬಚ್ಚೇಗೌಡರೇ ಕಣಕ್ಕಿಳಿದಿದ್ದಾರೆ.
ಜೊತೆಗೆ, ಸಿಐಟಿಯು ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮಿ ಅವರು ಸಿಪಿಎಂ ಅಭ್ಯರ್ಥಿಯಾಗಿಯೂ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ ಎಸ್ ದ್ವಾರಕನಾಥ್ ಅವರು ಬಿಎಸ್ ಪಿ ಅಭ್ಯರ್ಥಿಯಾಗಿಯೂ ಕಣಕ್ಕಿಳಿದಿದ್ದಾರೆ. ಕಮ್ಯುನಿಸ್ಟ್ ಕಾರ್ಮಿಕ ಸಂಘಟನೆಗಳು ಹಾಗೂ ದಲಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಈ ಇಬ್ಬರ ಸ್ಪರ್ಧೆ ಹೊಸ ಲೆಕ್ಕಾಚಾರಗಳಿಗೆ ಚಾಲನೆ ನೀಡಿದೆ. ಜೊತೆಗೆ ಕಳೆದ ಬಾರಿ ಎಚ್ ಡಿಕೆ ಹಾಗೂ ಬಚ್ಚೇಗೌಡರ ನಡುವೆ ಹಂಚಿಹೋಗಿದ್ದ ಕ್ಷೇತ್ರದ ನಿರ್ಣಾಯಕ ಒಕ್ಕಲಿಗ ಮತಗಳು ಈ ಬಾರಿ ಹಂಚಿಹೋಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಹಾಗಾಗಿ ಮೊಯ್ಲಿ ಅವರ ಎತ್ತಿನಹೊಳೆಯ ನೀರು ಕ್ಷೇತ್ರಕ್ಕೆ ತಲುಪದಿದ್ದರೂ, ಈ ಬಾರಿ ಅವರ ಬೆವರಂತೂ ಭರ್ಜರಿಯಾಗೇ ಕಿತ್ತುಕೊಳ್ಳುತ್ತಿದೆ!
ಅಲ್ಲದೆ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳೇ ಸಾಂಪ್ರದಾಯಿಕ ಎದುರಾಳಿಗಳಾಗಿರುವ ಹಳೇ ಮೈಸೂರು ಭಾಗದ ಇತರ ಕ್ಷೇತ್ರಗಳಲ್ಲಿ ಇರುವ ಬಿಕ್ಕಟ್ಟೇ ಚಿಕ್ಕಬಳ್ಳಾಪುರದಲ್ಲೂ ಇದೆ. ನಾಯಕರ ಮಟ್ಟದಲ್ಲಿ ಮೈತ್ರಿ, ಹೊಂದಾಣಿಕೆ, ಏನೇ ಆಗಿದ್ದರೂ ತಳಮಟ್ಟದ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರ ನಡುವೆ ದಶಕಗಳ ಜಿದ್ದಾಜಿದ್ದಿ ಮರೆತು ಪರಸ್ಪರ ಹೆಗಲಮೇಲೆ ಕೈಹಾಕಿ ಜಂಟಿ ನಗೆ ಬೀರಿ ಮತದಾರರ ಮುಂದೆ ಕೈಜೋಡಿಸುವುದು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮೈತ್ರಿ ಪಕ್ಷಗಳ ಹೊಂದಾಣಿಕೆ ತಳಮಟ್ಟದಲ್ಲಿ ಎಷ್ಟರಮಟ್ಟಿಗೆ ಜಾರಿಯಾಗುತ್ತದೆ ಎಂಬುದು ಕೂಡ ಮೊಯ್ಲಿ ಅವರ ಹ್ಯಾಟ್ರಿಕ್ ಕನಸಿನ ಭವಿಷ್ಯ ನಿರ್ಧರಿಸಲಿದೆ.
ಮತ್ತೊಂದೆಡೆ, ಸಿಪಿಎಂನ ಎಸ್ ವರಲಕ್ಷ್ಮಿ ಹಾಗೂ ಬಿಎಸ್ ಪಿಯ ದ್ವಾರಕನಾಥ್ ಅವರು ಪಡೆಯುವ ಮತಗಳು ಕೂಡ ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತಗಳೇ ಎಂಬುದು ಗಮನಾರ್ಹ. ಮುಖ್ಯವಾಗಿ ಕಾರ್ಮಿಕ ಸಂಘಟನೆಗಳು ಪ್ರಬಲವಾಗಿರುವ ಕ್ಷೇತ್ರದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಕಣಕ್ಕಿಳಿದಿರುವುದರಿಂದ, ವರಲಕ್ಷ್ಮಿ ಅವರ ಮತಗಳಿಕೆ ಗಣನೀಯವಾಗಿ ಏರಲಿದ್ದು, ಆ ಏರಿಕೆಗೆ ತಕ್ಕಂತೆ ಕಾಂಗ್ರೆಸ್ ಮತಗಳಿಕೆ ಇಳಿಯಬಹುದು ಎಂಬ ಲೆಕ್ಕಾಚಾರವೂ ಇದೆ. ಹಾಗೇ ದ್ವಾರಕನಾಥ್ ಅವರೂ ಪ್ರಬಲ ಅಭ್ಯರ್ಥಿಯಾಗಿದ್ದು ದಲಿತ ಸಮುದಾಯಗಳ ನಡುವೆ ಸಾಕಷ್ಟು ಪ್ರಭಾವ ಹೊಂದಿದ್ದಾರೆ ಎಂಬ ಅಂಶ ಕೂಡ ಮತ್ತೆ ಕಾಂಗ್ರೆಸ್ ಮತಬುಟ್ಟಿಗೇ ಅಪಾಯ.
ಆದರೆ, ಮತ್ತೊಂದು ಕಡೆ ಪ್ರತಿಸ್ಪರ್ಧಿ ಬಚ್ಚೇಗೌಡರು ಈ ಬಾರಿ ಒಕ್ಕಲಿಗ ಜಾತಿ ಮತಗಳಷ್ಟೇ ಅಲ್ಲದೆ, ‘ಮತ್ತೊಮ್ಮೆ ಮೋದಿ’ ಅಲೆಯ ಮೇಲೆ ಬಹುಸಂಖ್ಯಾತ ಯುವ ಸಮುದಾಯವನ್ನು ಸೆಳೆಯುತ್ತಿದ್ದಾರೆ. ಜೊತೆಗೆ ಎರಡು ಅವಧಿಗೆ ಕ್ಷೇತ್ರದ ಚುಕ್ಕಾಣಿ ಹಿಡಿದಿದ್ದ ಮೊಯ್ಲಿ ಅವರ ವೈಫಲ್ಯಗಳ ಹಿನ್ನೆಲೆಯಲ್ಲಿ ಎದ್ದಿರುವ ಆಡಳಿತ ವಿರೋಧಿ ಅಲೆ ಕೂಡ ಬಚ್ಚೇಗೌಡರ ಪರವಾಗೇ ಕೆಲಸ ಮಾಡಲಿದೆ ಎಂಬ ಮಾತುಗಳಿವೆ.
ಆದರೆ, ಕ್ಷೇತ್ರವ್ಯಾಪ್ತಿಯಲ್ಲಿ ಇರುವ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ(ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇಪಲ್ಲಿ, ದೊಡ್ಡಬಳ್ಳಾಪುರ, ಹೊಸಕೋಟೆ) ಕಾಂಗ್ರೆಸ್ ಹಾಗೂ ಎರಡು(ದೇವನಹಳ್ಳಿ ಮತ್ತು ನೆಲಮಂಗಲ) ಕ್ಷೇತ್ರಗಳಲ್ಲಿ ಜೆಡಿಎಸ್ ಇದ್ದು, ಮೈತ್ರಿಪಕ್ಷಗಳೇ ಪ್ರಾಬಲ್ಯ ಹೊಂದಿವೆ. ಯಲಹಂಕ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಹಾಗಾಗಿ, ಮೈತ್ರಿ ಬಲದ ಮೇಲೆ ಸ್ಥಳೀಯ ಶಾಸಕರ ಬೆಂಬಲದೊಂದಿಗೆ ಹ್ಯಾಟ್ರಿಕ್ ಭಾರಿಸುವ ವಿಶ್ವಾಸದಲ್ಲಿ ಮೊಯ್ಲಿ ಇದ್ದಾರೆ. ಆದರೆ, ಸವಾಲು ಮಾತ್ರ ಈ ಬಾರಿ ಕಠಿಣ ಇದೆ ಎಂಬುದು ಅವರಿಗೂ ಗೊತ್ತು!
ಒಟ್ಟಾರೆ 17.95 ಸಾವಿರ ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮತಗಳೇ ದೊಡ್ಡ ಸಂಖ್ಯೆಯಲ್ಲಿದ್ದು, ಆ ಬಳಿಕ ಬಲಿಜ, ಕುರುಬ, ಈಡಿಗ ಮುಂತಾದ ಹಿಂದುಳಿದ ವರ್ಗಗಳ ಮತಗಳಿವೆ. ಒಕ್ಕಲಿಗರು ಕೂಡ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಒಕ್ಕಲಿಗ ಮತಗಳೇ ಇಲ್ಲಿ ನಿರ್ಣಾಯಕ.
ಹಾಗಾಗಿ ದಕ್ಷಿಣಕನ್ನಡದ ಮೊಯ್ಲಿ ಅವರೊಂದಿಗೆ ಘಟ್ಟಸೀಮೆಯ ಎತ್ತಿನಹೊಳೆ ನೀರು ಸದ್ಯ ಬಯಲ ನಾಡಿಗೆ ತಲುಪುವುದೋ ಇಲ್ಲವೋ ಎಂಬುದಂತೂ ಖಾತ್ರಿಯಾಗಿಲ್ಲ. ಆದರೆ, ಬೆಂದನೆಲದ ಚಿಕ್ಕಾಬಳ್ಳಾಪುರ ಲೋಕಸಭಾ ಕಣವಂತೂ ಈ ಬಾರಿ ಕಟ್ಟಾಳುಗಳ ಬೆವರು ಕಿತ್ತುಬರುವಂತೆ ಈ ಬಾರಿ ರಂಗೇರಿದೆ.