ಐಟಿ ಪಾರ್ಕ್, ಸ್ಲಂ, ಕಮರ್ಷಿಯಲ್ ಏರಿಯಾ, ಪ್ರತಿಷ್ಠಿತ ವಸತಿ ಬಡಾವಣೆಗಳು, ಮಾರುಕಟ್ಟೆ, ಸಿನಿಮಾದವರ ಗಾಂಧಿನಗರ.. ಹೀಗೆ ಎಲ್ಲವನ್ನೂ ಒಳಗೊಂಡು ಅತ್ಯಂತ ಸಂಕೀರ್ಣ ಲೋಕಸಭಾ ಕ್ಷೇತ್ರ ಎನಿಸಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ‘ಸೀಟಿ’ಯ ಶಿಳ್ಳೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಬೆಚ್ಚಿಬೀಳುತ್ತಿವೆ.
ಹೌದು, ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಸ್ಪರ್ಧೆಯಿಂದ ಈ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದ್ದು, ರಾಷ್ಟ್ರದ ಗಮನ ಸೆಳೆದಿದೆ.
ಈ ಕ್ಷೇತ್ರ ರಚನೆಯಾದಾಗಿನಿಂದ ಅಂದರೆ 2008ರ ನಂತರ ನಡೆದ ಎರಡೂ ಚುನಾವಣೆಯಲ್ಲಿ ಬಿಜೆಪಿಯ ಪಿ.ಸಿ. ಮೋಹನ್ ಗೆದ್ದಿದ್ದಾರೆ. ಹ್ಯಾಟ್ರಿಕ್ ಸಾಧನೆಯ ತವಕದಲ್ಲಿ ಅವರು ಬಿರುಸಿನ ಪ್ರಚಾರ ನಡೆಸಿದ್ದಾರೆ. ಕಳೆದ ಚುನಾವಣೆಯಲ್ಲಿ ‘ಯುವ’ ಕೋಟಾದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ರಿಜ್ವಾನ್ ಅರ್ಷದ್ ಮತ್ತೆ ಈ ಬಾರಿ ತೊಡೆತಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸುಮಾರು 40 ಸಾವಿರ ಮತ ಪಡೆದಿದ್ದ ಆಪ್ ಈ ಬಾರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಆದರೆ ಸದ್ದಿಲ್ಲದೆ ಗ್ರೌಂಡ್ ವರ್ಕ್ ಮಾಡಿ, ರಾಜಕೀಯ ಪಕ್ಷಗಳ ಜನವಿರೋಧಿ ನೀತಿಯನ್ನು ಚುನಾವಣಾ ರಾಜಕಾರಣದ ಮೂಲಕವೇ ಸೋಲಿಸಬೇಕೆಂದು ಪಣತೊಟ್ಟಿರುವ ನಟ ಪ್ರಕಾಶ್ ರಾಜ್ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ತೆರಿಗೆ ಆದಾಯ ತಂದುಕೊಡುವ ಪ್ರದೇಶಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಎಲ್ಲವರ್ಗದ ಜನರೂ ಇದ್ದಾರೆ. ಬಹುಭಾಷಿಗರನ್ನು, ಮುಸ್ಲೀಂ ಅಂತೆಯೇ ಕ್ರಿಶ್ಚಿಯನ್ ಮತದಾರರನ್ನೂ ಒಳಗೊಂಡ ಈ ಕ್ಷೇತ್ರ ಒಂದು ರೀತಿಯಲ್ಲಿ ಮಿನಿ ಭಾರತವಿದ್ದಂತೆ. ಸಂಚಾರ ದಟ್ಟಣೆ ಕಣ್ಣಿಗೆ ಕಾಣುವ ದೊಡ್ಡ ಸಮಸ್ಯೆಯಾದರೆ, ಕುಡಿಯುವ ನೀರಿನ ಸಮಸ್ಯೆ ಪ್ರತಿದಿನ ಜನರನ್ನು ಹಿಂಡುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಲಂಗಳು ಅಗತ್ಯ ಮೂಲಸೌಕರ್ಯಗಳನ್ನೇ ಹೊಂದಿಲ್ಲ. ಇನ್ನು ಬೆಂಗಳೂರಿನ ಹೊರವಲಯದ ಕೆಲ ಪ್ರದೇಶಗಳೂ ಈ ಕ್ಷೇತ್ರಕ್ಕೆ ಸೇರಿದ್ದು, ಇಲ್ಲಿಯ ಸಮಸ್ಯೆಗಳ ಪಟ್ಟಿ ದೊಡ್ಡದಿದೆ. ಸಣ್ಣಪುಟ್ಟ ವ್ಯಾಪಾರಸ್ಥರು, ಮಾರ್ವಾಡಿಗಳು ತಮ್ಮದೇ ಆದ ನೋವುಗಳನ್ನು ನುಂಗಿಕೊಂಡಿದ್ದಾರೆ.
ಸತತವಾಗಿ ಈ ಕ್ಷೇತ್ರದಿಂದ ಆಯ್ಕೆಯಾಗುತ್ತಿರುವ ಪಿ ಸಿ ಮೋಹನ್ ಸ್ಥಳೀಯರಿಗೆ ಸುಲಭವಾಗಿ ಸಿಗುತ್ತಾ, ಎಲ್ಲರನ್ನೂ ಮೆಚ್ಚಿಸಲು ಪ್ರಯತ್ನಿಸುತ್ತಾ, ತಮ್ಮ ರಾಜಕಾರಣದ ಬೇರುಗಳನ್ನು ಹರಡಿಕೊಂಡಿದ್ದಾರೆ. ಉಪನಗರ ರೈಲು ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ದೊರೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೆಪಿಯ ಇತರೆ ನಾಯಕರಂತೆ ವಿವಾದಗಳಿಗೆ ಎಡೆ ಮಾಡುವ ಇಲ್ಲ ಸಲ್ಲದ ಮಾತುಗಳನ್ನಾಡದೆ, ಸಾಧ್ಯವಾದಷ್ಟು ಎಲ್ಲರೊಂದಿಗೂ ಸೌಹಾರ್ದತೆಯಿಂದ ನಡೆದುಕೊಂಡು, ಈ ಕ್ಷೇತ್ರದ ಮೇಲೆ ತಮ್ಮ ಬಿಗಿಹಿಡಿತ ಮುಂದುವರೆಸಿದ್ದಾರೆ. ಅದೇ ಸಮಯದಲ್ಲಿ ಪಿ ಸಿ ಮೋಹನ್ ಗೆದ್ದು ಹೋದ ಮೇಲೆ ನಮಗೆ ಮುಖವನ್ನೇ ತೋರಿಸಿಲ್ಲ, ಅವರೇನು ಮಾಡಿದ್ದಾರೆಂದೂ ಗೊತ್ತಿಲ್ಲ, ಅವರ ಕ್ಷೇತ್ರಕ್ಕಾಗಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸಿಲ್ಲ ಎಂಬ ಅಭಿಪ್ರಾಯವೂ ಸೆಂಟ್ರಲ್ ನಲ್ಲಿ ವ್ಯಕ್ತವಾಗುತ್ತಿದೆ. ಹೀಗಾಗಿ ಪಿ ಸಿ ಮೋಹನ್ ಸಹ ಹೆಚ್ಚಾಗಿ ನಂಬಿಕೊಂಡಿರುವುದು ‘ಮೋದಿ ಅಲೆ’ಯನ್ನು.
ಇದರೊಂದಿಗೆ ಕಾಂಗ್ರೆಸ್ ನ ಕೆಲ ಪ್ರಭಾವಶಾಲಿ ನಾಯಕರೇ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಗುಟ್ಟಾಗಿ ಇವರ ಪರ ಕೆಲಸ ಮಾಡುವುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ. ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತಿತರ ಬಿಜೆಪಿ ನಾಯಕರು ಆಗಾಗ ಅಡ್ಡಗಾಲು ಹಾಕುತ್ತಿದ್ದಾರೆಯಾದರೂ ಪಕ್ಷ ಇದಕ್ಕೆಲ್ಲಾ ಅವಕಾಶ ನೀಡದೆ, ಮೋಹನ್ ಅವರ ಆತಂಕವನ್ನು ದೂರ ಮಾಡುವ ಕೆಲಸ ಮಾಡಿದೆ. ನಗರದ ಮತದಾದರರು ‘ಮತ್ತೊಮ್ಮೆ ಮೋದಿ’ ಅಲೆಯಲ್ಲಿ ತಮ್ಮನ್ನು ತೇಲಿಸುತ್ತಾರೆ ಎಂದು ಅವರು ಬಲವಾಗಿ ನಂಬಿದ್ದಾರೆ. ಆದರೆ ಜಿಎಸ್ ಟಿ ಜಾರಿ, ನೋಟು ರದ್ದತಿ ಮತ್ತಿತರ ಕೇಂದ್ರದ ನಿರ್ಧಾರಗಳು ವ್ಯಾಪಾರಿ ಸಮುದಾಯಕ್ಕೆ ಹೊಡೆತ ನೀಡಿದ್ದು, ಬಿಜೆಪಿಗೆ ಒಳಹೊಡೆತ ನೀಡಲಿದೆ ಎಂಬ ವಿಶ್ಲೇಷಣೆಯೂ ಇದೆ. ಹೀಗಾಗಿ ಈ ಚುನಾವಣೆ ಪಿ ಸಿ ಮೋಹನ್ ಗೆ ಈ ಹಿಂದಿಗಿಂತಲೂ ಹೆಚ್ಚು ಸವಾಲೊಡ್ಡುವ ಸಾಧ್ಯತೆಗಳಿವೆ.
ಕಾಂಗ್ರೆಸ್ಸಿನ ರಿಜ್ವಾನ್ ಅರ್ಷದ್ ಕಳೆದ ಚುನಾವಣೆಯಲ್ಲಿ ಯುವ ಉತ್ಸಾಹದಿಂದ ಓಡಾಡಿದ್ದರೂ 1.37 ಲಕ್ಷ ಅಂತರದಿಂದ ಸೋತಿದ್ದರು. ಪಕ್ಷದ ಹಿರಿಯ ನಾಯಕ ಜಾಫರ್ ಷರೀಫ್ ಅವರೇ ರಿಜ್ವಾನ್ ಕಾಲೆಳೆದಿದ್ದರು. ಈ ಬಾರಿ ಈ ಕೆಲಸವನ್ನು ಮಾಜಿ ಸಚಿವ, ಹಿರಿಯ ಮುಖಂಡ ರೋಷನ್ ಬೇಗ್ ಮಾಡುತ್ತಿದ್ದಾರೆ. ಟಿಕೇಟ್ ಆಕಾಂಕ್ಷಿಯಾಗಿದ್ದ ಬೇಗ್ ಅದು ಸಿಕ್ಕಿಲ್ಲವೆಂದು ಪಕ್ಷದ ವಿರುದ್ಧವೇ ಮುನಿಸಿಕೊಂಡಿದ್ದಾರೆ. ಇತ್ತ ಮಾಜಿ ಸಂಸದ ಸಾಂಗ್ಲಿಯಾನ, ನಾಯಕ ಅಲೆಗ್ಸಾಂಡರ್ ಕೂಡ ಪಕ್ಷದಿಂದ ದೂರ ಸರಿದಿದ್ದಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರ ಮತಗಳಿರುವುದರಿಂದ ಈ ಎಲ್ಲ ಬೆಳವಣಿಗೆಗಳು ರಿಜ್ವಾನ್ ಅವರಿಗೆ ಹಿನ್ನಡೆಯುಂಟು ಮಾಡಿದರೂ ಆಶ್ಚರ್ಯವಿಲ್ಲ. ಆದರೆ ಈ ಬಾರಿ ಅವರು ಮೈತ್ರಿ ಅಭ್ಯರ್ಥಿಯಾಗಿರುವುದರಿಂದ ಜೆಡಿಎಸ್ ನಾಯಕರು ಅವರ ಬೆನ್ನಿಗೆ ನಿಂತು ದುಡಿಯುತ್ತಿದ್ದಾರೆ. ರಾಜ್ಯ ನಾಯಕರಗಳೂ ಈಗಾಲೇ ಪ್ರಚಾರ ಕೈಗೊಂಡಿದ್ದಾರೆ.
ಕ್ಷೇತ್ರದ ಶಾಸಕರಾಗಿರುವ ಕೆ ಜೆ ಜಾರ್ಜ್ ಮತ್ತು ಜಮೀರ್ ಅಹಮದ್ ಸಚಿವರಾಗಿದ್ದಾರೆ. ಇವರಿಗೆ ರಿಜ್ವಾನ್ ಗೆಲುವು ಪ್ರತಿಷ್ಠೆಯ ವಿಷಯವಾಗಿದೆ. ಕಳೆದ ಚುನಾವಣೆಯಲ್ಲಿ ಸೋತರೂ ರಿಜ್ವಾನ್ ಮನೆಯಲ್ಲಿ ಕೂತವರಲ್ಲ, ಈ ಕ್ಷೇತ್ರದಾದ್ಯಂತ ಓಡಾಡುತ್ತಲೇ ಜನರೊಂದಿಗಿದ್ದರು. ಹೀಗಾಗಿ ಕಳೆದ ಚುನಾವಣೆಯ ಸೋಲು ಅನುಕಂಪವಾಗಿ ಮಾರ್ಪಡಬಹುದು ಎಂದೂ ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಈ ಯುವ ನಾಯಕನ ಬೆಳವಣಿಗೆಗೆ ಸ್ವಪಕ್ಷದ ಹಿರಿಯ ನಾಯಕರು ಹೇಗೆ ಅವಕಾಶ ಮಾಡಿಕೊಡಲಿದ್ದಾರೆ ಎಂಬುದು ಈ ಚುನಾವಣೆಯಲ್ಲಿ ಗೊತ್ತಾಗಲಿದೆ.
ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಮೂರರಲ್ಲಿ ಬಿಜೆಪಿ ಗೆದ್ದಿದೆ. ಹಾಗೆ ನೋಡಿದರೆ ಸಂಘಟನೆಯ ದೃಷ್ಟಿಯಿಂದ ಕಾಂಗ್ರೆಸ್ ಬಲಿಷ್ಠವಾಗಿದೆಯಾದರೂ, ಬಿಜೆಪಿಯೇನೂ ಕಡಿಮೆಯಿಲ್ಲ. ಪ್ರಧಾನಿ ಮೋದಿಯೇ ಬಂದು ಪ್ರಚಾರ ನಡೆಸಿದ್ದರೂ, ಯುವ ಜನತೆಯ ನಿರುದ್ಯೋಗದ ಸಮಸ್ಯೆಗೆ ಉತ್ತರ ಸಿಕ್ಕಿಲ್ಲ. ಎಚ್ ಎಎಲ್ ನಂತಹ ಸಾರ್ವಜನಿಕ ಉದ್ಯಮಗಳನ್ನು ನಷ್ಟಕ್ಕೆ ತಳ್ಳಿದ್ದು, ಇಲ್ಲಿಯ ಜನತೆಗೆ ಅರ್ಥವಾಗದೇ ಇರುವ ವಿಷಯವೇನೂ ಅಲ್ಲ. ಆದರೂ ಮತ್ತೊಮ್ಮೆ ಮೋದಿಯ ಅಲೆಯನ್ನು ಎದುರಿಸಲು ದೋಸ್ತಿಪಕ್ಷಗಳು ಸಾಕಷ್ಟು ಬೆವರು ಸುರಿಸಬೇಕಾಗಿದೆ.
ಇನ್ನು ನಟ ಪ್ರಕಾಶ್ ರಾಜ್ ನಿರೀಕ್ಷೆಗೂ ಮೀರಿ ಮತದಾರರ ಒಲವು ಗಳಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ನಾಲ್ಕು ತಿಂಗಳಿನಿಂದ ಈ ಕ್ಷೇತ್ರದಲ್ಲಿ ಓಡಾಡಿರುವುದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆಯೇ ಹೊರತು, ಯೋಚಿಸುವಂತೆ ಮಾಡಿಲ್ಲ. ನಗರದ ಪ್ರಜ್ಞಾವಂತ ಮತದಾರರು ಇವರ ಭಿನ್ನದನಿಯನ್ನು ಗುರುತಿಸಿದ್ದಾರೆ. ‘ನೀವು ಹೇಳುವುದು ಸರಿ, ನಾವು ನಿಮ್ಮೊಂದಿಗಿದ್ದೇವೆ’ ಎಂಬ ಮಾತು ಎಲ್ಲೆಡೆಯಿಂದ ಕೇಳಿ ಬರುತ್ತಿದೆ. ಇದು ಮತವಾಗಿ ಮಾರ್ಪಟ್ಟಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಬಹುದು.
ಪ್ರಯತ್ನಿಸಿದ್ದರೆ ಕಾಂಗ್ರೆಸ್ ನಿಂದ ಟಿಕೆಟ್ ದೊರೆಯುತ್ತಿತ್ತಾದರೂ ಆ ಬಗ್ಗೆ ತಲೆಕೆಡಿಸಿಕೊಳ್ಳದೇ ಸ್ವತಂತ್ರವಾಗಿಯೇ ಸ್ಪರ್ಧಿಸಬೇಕೆಂದು ಮೊದಲೇ ನಿರ್ಧರಿಸಿ ಕಣಕ್ಕಿಳಿದ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಾಮಾನ ಅಂತರ ಕಾಯ್ದುಕೊಂಡಿದ್ದಾರೆ. ‘ಜನರ ಪ್ರಣಾಳಿಕೆ’ ರೂಪಿಸಿ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಹೋದಲ್ಲಿ ಬಂದಲ್ಲಿ ನಟನ ಪ್ರಬುದ್ಧ ಮಾತುಗಳನ್ನು ಕೇಳಲು ಜನ ಸೇರುತ್ತಿದ್ದಾರೆ.
ತಮಿಳು ಭಾಷಿಗರೇ ಈ ಕ್ಷೇತ್ರದಲ್ಲಿ ಹೆಚ್ಚಿದ್ದು, ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿ, ಪ್ರಸಿದ್ಧಿ ಪಡೆದಿರುವ ಪ್ರಕಾಶ್ ರಾಜ್ ಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಲು ಕಾರಣವಾಗಿದೆ. ‘ಜಸ್ಟ್ ಆಸ್ಕಿಂಗ್’ ಆಂದೋಲನದ ಮೂಲಕ ವ್ಯವಸ್ಥಿತ ಪ್ರಚಾರ ನಡೆಸಿದ್ದರೂ, ಅವರದು ಏಕಾಂಗಿ ಹೋರಾಟವಾಗಿರುವುದರಿಂದ ಕ್ಷೇತ್ರದ ಎಲ್ಲ ಮತದಾರರನ್ನೂ ತಲುಪುವುದು ಕಷ್ಟವಾಗುತ್ತಿದೆ. ಸೋಲು-ಗೆಲುವಿನ ಯೋಚನೆಯನ್ನು ಮೀರಿದ ಆದರ್ಶ ಅವರದ್ದಾಗಿರುವುದರಿಂದ ಜನರೊಂದಿಗೆ ಬೆರೆಯುವ ಈ ಅವಕಾಶವನ್ನು ಅವರು ಎಂಜಾಯ್ ಮಾಡುತ್ತಿರುವುದು ಸುಳ್ಳಲ್ಲ.
ಇನ್ನು ಬಹಳ ಮುಖ್ಯವಾಗಿ ಯಾವುದೇ ಚುನಾವಣೆಯಲ್ಲಿ ಹಣ ಹಂಚುವ ವಿಷಯವೇ ನಿರ್ಣಯಾತ್ಮಕವಾಗಿದೆ. ಪ್ರಚಾರ ಕೆಲಸಕ್ಕೆ ಒಂದಷ್ಟು ಹಣವನ್ನು ಪ್ರಕಾಶ್ ರೈ ಖರ್ಚು ಮಾಡಬಲ್ಲರಾದರೂ ಕಾಂಗ್ರೆಸ್, ಬಿಜೆಪಿ ಹಂಚುವಂತೆ ತಲೆಗೆ ಇಷ್ಟು ಎಂದು ಚುನಾವಣೆಯ ಹಿಂದಿನ ದಿನ ಹಂಚಿ ಚುನಾವಣೆ ನಡೆಸಲಾರರು. ಮತದಾರರ ಮನೋಬದಲಾವಣೆಯನ್ನು ನಂಬಿಕೊಂಡಿರುವ ಅವರ ಪ್ರಯತ್ನಕ್ಕೆ ಯಶ ಸಿಗುವುದೇ ಎಂಬುದು ದೊಡ್ಡ ಪ್ರಶ್ನೆ. ಇತ್ತೀಚಿನ ಬೆಳವಣಿಗೆಗಳಲ್ಲಿ ಚುನಾವಣೆಯ ಫಲಿತಾಂಶವನ್ನು ಬಹುತೇಕ ನಿರ್ಧರಿಸುತ್ತಿರುವುದು ಈ ಚುನಾವಣೆ ಹಿಂದಿನ ದಿನದ ತಲಾ ಹಣಹಂಚಿಕೆ ಎಂಬುದನ್ನು ಪರಿಗಣಿಸಬೇಕಾಗುತ್ತದೆ. ಇದಕ್ಕೆ ಹಣ ಹಾಗೂ ಹಣ ತಲುಪಿಸಬಲ್ಲ ಕಾರ್ಯಕರ್ತರ ನೆಟ್ವರ್ಕ್ ಎರಡೂ ಮುಖ್ಯ. ಆದರೆ ಈ ವಿಷಯದಲ್ಲಿ ಬಿಜೆಪಿ ನಂ 1 ಸ್ಥಾನದಲ್ಲಿದ್ದರೆ ನಂತರದಲ್ಲಿ ಕಾಂಗ್ರೆಸ್ ಜೆ ಡಿ ಎಸ್ ಗಳಿವೆ.
ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಕಾಂಗ್ರೆಸ್ ನ ಮತಬುಟ್ಟಿಗೇ ಕೈಹಾಕುತ್ತಾರೆ ಎಂದು ಬಿಜೆಪಿ ನಂಬಿದೆ. ಮೇಲ್ನೋಟಕ್ಕೆ ಹಾಗೆನಿಸಿದರೂ ಪ್ರಕಾಶ್ ರಾಜ್ ರ ಒಳಹೊಡೆತದ ಬಿಸಿ ಎರಡೂ ಪಕ್ಷಗಳಿಗೂ ತಟ್ಟುತ್ತಿರುವುದು ನಿಧಾನವಾಗಿ ಅರಿವಾಗುತ್ತಿದೆ. ಒಟ್ಟು 24 ಅಭ್ಯರ್ಥಿಗಳು ಈ ಕಣದಲ್ಲಿದ್ದು, ಬೆಂಗಳೂರಿನ ಹೃದಯದಂತಿರುವ ಈ ಕ್ಷೇತ್ರವನ್ನು ಯಾರು ಗೆಲ್ಲುತ್ತಾರೆ ಎಂಬುದು ಮತದಾರರಿಗೆ ಮಾತ್ರ ಗೊತ್ತಿದೆ.