ರಾಜಧಾನಿ ಬೆಂಗಳೂರಿನ ಲೋಕಸಭಾ ಕ್ಷೇತ್ರಗಳ ಪೈಕಿ ವಲಸಿಗರೇ ಹೆಚ್ಚಾಗಿರುವ ಕ್ಷೇತ್ರ ಎಂದರೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ. ಹಾಲಿ ಕೇಂದ್ರ ಸಚಿವ ಸದಾನಂದ ಗೌಡ ಮತ್ತು ರಾಜ್ಯದ ಹಾಲಿ ಸಚಿವ ಕೃಷ್ಣ ಬೈರೇಗೌಡರ ಸ್ಪರ್ಧೆಯಿಂದ ಈ ಕ್ಷೇತ್ರ ಕುತೂಹಲದ ಕಣವಾಗಿ ಮಾರ್ಪಟ್ಟಿದೆ.
ಮೊದಲಿನಿಂದಲೂ ಈ ಕ್ಷೇತ್ರದ ಹೆಸರು ಬದಲಾಗುತ್ತಲೇ ಬಂದಿದೆ ಹೊರತೂ, ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸಿದ್ದು ಕಡಿಮೆ. ಮೊದಲಿಗೆ ಬೆಂಗಳೂರು ಉತ್ತರ ನಂತರ ಬೆಂಗಳೂರು ನಗರ ಎಂದು ಕರೆಸಿಕೊಳ್ಳುತ್ತಿದ್ದ ಈ ಕ್ಷೇತ್ರ 60ರ ದಶಕದಲ್ಲಿಬೆಂಗಳೂರು ದಕ್ಷಿಣ ಕ್ಷೇತ್ರದೊಂದಿಗೆ ವಿಲೀನವಾಗಿತ್ತು. ಆ ನಂತರ ಮತ್ತೆ ಬೆಂಗಳೂರು ಉತ್ತರ ಕ್ಷೇತ್ರವಾಗಿ ರೂಪುಗೊಂಡಿತು. ಮಾಜಿ ಕೆಂದ್ರ ಸಚಿವ ಸಿ.ಕೆ. ಜಾಫರ್ ಷರೀಫ್ ಏಳು ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದರು. ಅವರಿಗಿಂತ ಮೊದಲು ಕೇಶವ್ ಐಯ್ಯಂಗಾರ್ ಎರಡುಬಾರಿ, ಕೆ. ಹನುಮಂತಯ್ಯ ಮೂರು ಬಾರಿ ಗೆದ್ದಿದ್ದರು. ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದ ಕ್ಷೇತ್ರದಲ್ಲಿ ಒಮ್ಮೆ ಮಾತ್ರ ಜನತಾದಳ ಗೆದ್ದಿತ್ತು. 2004ರಿಂದ ಮಾತ್ರ ಈ ಕ್ಷೇತ್ರದ ಮೇಲೆ ಬಿಜೆಪಿ ಹಿಡಿತ ಸಾಧಿಸಿದೆ. ನಿವೃತ್ತ ಪೊಲೀಸ್ ಅಧಿಕಾರಿ ಎಚ್.ಟಿ. ಸಾಂಗ್ಲಿಯಾನ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದು, ಪಕ್ಷಕ್ಕೆ ನೆಲೆ ಒದಗಿಸಿದ್ದರು.
ಬಿಜೆಪಿ ಅಭ್ಯರ್ಥಿ ಸದಾನಂದ ಗೌಡ ಈ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವುದು ಇದು ಎರಡನೇ ಬಾರಿ. 2014ರ ಚುನಾವಣೆಯಲ್ಲಿ 2.29 ಲಕ್ಷ ಮತಗಳ ಭಾರಿ ಅಂತರದಿಂದ ಅವರು ಗೆದ್ದಿದ್ದರು. ಆಗ ‘ಹೊರಗಿನವರು’ ಎಂಬ ಹಣೆಪಟ್ಟಿಯ ನಡುವೆಯೂ ಮೋದಿ ಅಲೆಯಲ್ಲಿ ತೇಲಿ ಹೋಗಿದ್ದರು. ಈ ಬಾರಿ ಕೇಂದ್ರ ಸಚಿವರಾಗಿದ್ದರೂ ಕೂಡ ‘ಮತ್ತೊಮ್ಮೆ ಮೋದಿ’ ಅಲೆಯಲ್ಲಿಯೇ ತೇಲುವ ನಿರೀಕ್ಷೆಯಲ್ಲಿದ್ದಾರೆ. ಬಿಜೆಪಿಯ ಆಂತರಿಕ ಸಮೀಕ್ಷೆಗಳೇ ಸದಾನಂದ ಗೌಡರಿಗೆ ಒಳ್ಳೆಯ ಮಾರ್ಕ್ಸ್ ನೀಡಿರಲಿಲ್ಲ. ಹೀಗಾಗಿ ಕ್ಷೇತ್ರ ಬದಲಾಯಿಸುತ್ತಾರೆ ಎಂಬ ವದಂತಿಗಳ ನಡುವೆಯೇ ಅವರು ಮತ್ತೆ ಕಣಕ್ಕಿಳಿದಿದ್ದಾರೆ.
ಸಿ.ಕೆ. ಜಾಫರ್ ಷರೀಫ್ ನಂತರ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಗೆ ಸೂಕ್ತ ಅಭ್ಯರ್ಥಿಗಳೇ ಸಿಕ್ಕಿಲ್ಲ ಎನ್ನಬಹುದು. ಷರೀಫ್ ಕೂಡ 2004 ಮತ್ತು 2009ರಲ್ಲಿ ಸೋತಿದ್ದರು. 2014ರಲ್ಲಿ ಈ ಕ್ಷೇತ್ರದಲ್ಲಿ ಹಿಂದೊಮ್ಮೆ ಜನತಾದಳದ ಅಭ್ಯರ್ಥಿಯಾಗಿ ಗೆದ್ದಿದ್ದ ಸಿ. ನಾರಾಯಣಸ್ವಾಮಿ ಕಾಂಗ್ರೆಸ್ ನಿಂದ ಕಣಕ್ಕಿಳಿದರೂ ಹೆಚ್ಚಿನ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿಯೇ ಇನ್ನೂ ಪಕ್ಷವಿತ್ತು. ಜೆಡಿಎಸ್ ನೊಂದಿಗೆ ಸೀಟು ಹಂಚಿಕೆಯ ಸಂದರ್ಭದಲ್ಲಿ ಈ ಕ್ಷೇತ್ರವನ್ನು ಸುಲಭವಾಗಿಯೇ ಜೆಡಿಎಸ್ ಗೆ ಬಿಟ್ಟುಕೊಡಲಾಗಿತ್ತು. ಈ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಮಾಜಿ ಪ್ರಧಾನಿ ದೇವೇಗೌಡರೇ ಕಣಕ್ಕಿಳಿಯಲು ನಿರ್ಧರಿಸಿದ್ದರು.
ಆದರೆ, ಕೊನೆಯ ಕ್ಷಣದಲ್ಲಿ ಒಳ ಹೊಡೆತದ ಭೀತಿಯಿಂದ ಗೌಡರು ತುಮಕೂರನ್ನು ಆಯ್ಕೆ ಮಾಡಿಕೊಂಡರು. ‘ಯುದ್ಧ ಕಾಲೇ ಶಸ್ತ್ರಾಭ್ಯಾಸಂ’ ಎಂಬಂತೆ ಕೊನೆಗೆ ಈ ಕ್ಷೇತ್ರದಲ್ಲಿ ಸ್ಪರ್ಧಿಸಬಲ್ಲ ಸೂಕ್ತ ಅಭ್ಯರ್ಥಿಗೆ ಹುಡುಕಾಟ ನಡೆಯಿತು. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಂತೆ ಕಾಂಗ್ರೆಸ್ ನಾಯಕರನ್ನೇ ಪಕ್ಷದಿಂದ ಕಣಕ್ಕಿಳಿಸಲು ಮುಂದಾದ ಗೌಡರು ಇದಕ್ಕಾಗಿ ಸಾಕಷ್ಟು ಪ್ರಯತ್ನ ಪಟ್ಟರು. ಈಗ ಕಾಂಗ್ರೆಸ್ ನಿಂದ ಕಣಕ್ಕಿಳಿದ ಕೃಷ್ಣ ಬೈರೇಗೌಡರ ಮನೆಗೇ ಹೋಗಿ ಈ ‘ಆಫರ್’ ನೀಡಿದರು. ಇದೂ ಸಾಧ್ಯವಾಗದೇ ಇದ್ದಾಗ ಕೊನೆಗೆ ಈ ಕ್ಷೇತ್ರವನ್ನೇ ಕಾಂಗ್ರೆಸ್ ಗೆ ಬಿಟ್ಟುಕೊಟ್ಟರು.
ಕಾಂಗ್ರೆಸ್ ನಾಯಕ ಎಂ ಆರ್ ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ ಈ ಕ್ಷೇತ್ರದಿಂದ ಸ್ಪರ್ಧಿಸಲು ಒಂದಿಷ್ಟು ಸಿದ್ಧತೆ ನಡೆಸಿದ್ದು ಬಿಟ್ಟರೆ ಮತ್ತಿನ್ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಕೊನೆಯ ಕ್ಷಣದಲ್ಲಿ ಅನಿವಾರ್ಯತೆಗೆ ಸಿಲುಕಿದ ಪಕ್ಷದ ಹೈಕಮಾಂಡ್ ಸಚಿವರಾಗಿದ್ದ ಕೃಷ್ಣ ಬೈರೇಗೌಡರನ್ನೇ ಕಣಕ್ಕಿಳಿಸುವ ತೀರ್ಮಾನ ತೆಗೆದುಕೊಂಡಿತ್ತು. ಹೀಗಾಗಿ 2009ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಕೃಷ್ಣ ಭೈರೇಗೌಡರು ಅನಿವಾರ್ಯವಾಗಿ ಮತ್ತೊಮ್ಮೆ ಚುನಾವಣೆ ಎದುರಿಸಬೇಕಾಗಿ ಬಂದಿತು.
ಬಿಜೆಪಿ ಅಭ್ಯರ್ಥಿ ಸದಾನಂದ ಗೌಡ ಮತ್ತು ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡ ಇಬ್ಬರೂ ‘ಬೇರೆ ರಾಜಕಾರಣಿಗಳಂತಲ್ಲ’ ಎಂದು ಗುರುತಿಸಿಕೊಂಡವರು. ಇಬ್ಬರೂ ಸಜ್ಜನರೆಂದೇ ಹೆಸರು ಮಾಡಿದ್ದಾರೆ. ಆದರೆ ಸಚಿವರಾಗಿ ಇಬ್ಬರೂ ಹೇಳಿಕೊಳ್ಳುವಂತಹ ಒಳ್ಳೆಯ ಕೆಲಸ ಮಾಡಿಲ್ಲ ಎಂಬ ಅಭಿಪ್ರಾಯವಿದೆ.
ಹಾಗೆ ನೋಡಿದರೆ ಸದಾನಂದ ಗೌಡರು ಸಿಕ್ಕ ಒಳ್ಳೊಳ್ಳೆಯ ಅವಕಾಶಗಳನ್ನು ತಾವಾಗಿಯೇ ಹಾಳು ಮಾಡಿಕೊಂಡವರು. ಮೊದಲಿಗೆ ಬೃಹತ್ ರೈಲ್ವೆ ಖಾತೆಯನ್ನೇ ಇವರಿಗೆ ನೀಡಲಾಗಿತ್ತು. ಈ ಖಾತೆಯನ್ನು ನಿರ್ವಹಿಸುವಲ್ಲಿ ಅಸಮರ್ಥರಾದರೆಂದು ಮುಂದೆ ಕಾನೂನು ಖಾತೆ ನೀಡಲಾಯಿತು. ಅಲ್ಲಿಯೂ ಗೌಡರು ಸೋತಿದ್ದರಿಂದ ಕೊನೆಗೆ ಅಂಕಿ-ಅಂಶ ಹಾಗೂ ಕಾರ್ಯಾನುಷ್ಠಾನ ಇಲಾಖೆಯ ಜವಾಬ್ದಾರಿ ವಹಿಸಲಾಗಿತ್ತು. ರೈಲ್ವೆ ಮತ್ತು ಕಾನೂನು ಸಚಿವರಾಗಿ ರಾಜ್ಯದಲ್ಲಿ ಸಾಕಷ್ಟು ಕೆಲಸ ಮಾಡಿ, ರಾಜಕೀಯವಾಗಿ ಬಲಷ್ಠರಾಗಬಹುದಾಗಿದ್ದ ಅವಕಾಶವನ್ನು ಅವರು ಬಳಸಿಕೊಳ್ಳಲಿಲ್ಲ.
ಹೀಗಾಗಿ ಈ ಚುನಾವಣೆಯಲ್ಲಿ ಅವರು ಎದುರುಸಿರು ಬಿಡುತ್ತಾ ಪ್ರಚಾರಮಾಡಬೇಕಾಗಿದೆ. ಈ ಕ್ಷೇತ್ರದಿಂದ ಆಯ್ಕೆಯಾದ ಮೇಲೆ ಸದಾನಂದ ಗೌಡರು ಸರಿಯಾಗಿ ಕೆಲಸ ಮಾಡಿಲ್ಲ, ಕ್ಷೇತ್ರದ ಜನತೆಯ ಕೈಗೇ ಸಿಗುತ್ತಿಲ್ಲ. ಹೊರಗಿನವರಾಗಿರುವುದರಿಂದ ಇನ್ನೂ ಕ್ಷೇತ್ರದ ಮೇಲೇ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ ಎಂದು ಈ ಕ್ಷೇತ್ರದ ಜನ ಅಲ್ಲಲ್ಲಿ ಇನ್ನೂ ಗೊಣಗುತ್ತಲೇ ಇದ್ದಾರೆ.
ಕಾಂಗ್ರೆಸ್ ನ ಕೃಷ್ಣಬೈರೇಗೌಡ ಕೂಡ ಕ್ಷೇತ್ರಕ್ಕೆ ಹೊರಗಿನವರಾದರೂ, ಸ್ಥಳೀಯರೊಂದಿಗೆ ಒಂದಿಷ್ಟು ಬೆರೆತಿದ್ದಾರೆ. ನೇರ ನಡೆ-ನುಡಿಯ ಸರಳ ವ್ಯಕ್ತಿತ್ವದಿಂದ ಗಮನ ಸೆಳೆಯುತ್ತಿದ್ದಾರೆ. ಅಲ್ಲದೆ ಹೈಟೆಕ್ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿ ದೊಡ್ಡದಿರುವುದರಿಂದ ಅವರಿಗೂ ಇಲ್ಲಿಯ ನಾಡಿಮಿಡಿತ ಪೂರ್ಣವಾಗಿ ಅರ್ಥವಾಗಿಲ್ಲ. ಕೊನೆಯ ಕ್ಷಣದಲ್ಲಿ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದರಿಂದ ಯಾವುದೇ ರೀತಿಯ ಸಿದ್ಧತೆ ಇಲ್ಲದೆ ಪ್ರಚಾರಕ್ಕಿಳಿದು ಮತದಾರರ ಮನ ಗೆಲ್ಲಲು ಹರ ಸಾಹಸ ಪಡುತ್ತಿದ್ದಾರೆ. ಈ ಹಿಂದಿನ ಸರಕಾರದಲ್ಲಿ ಮತ್ತು ಹಾಲಿ ಸರಕಾರದಲ್ಲಿ ಸಚಿವರಾಗಿದ್ದರೂ ಕೂಡ ನಗರದ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿಲ್ಲ ಎಂಬ ದೂರುಗಳ ನಡುವೆಯೇ ಅವರ ಬಿರುಸಿನ ಪ್ರಚಾರ ಸಾಗಿದೆ.
ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಗೆದ್ದಿದೆ. ಎರಡು ಕ್ಷೇತ್ರದಲ್ಲಿ ಜೆಡಿಎಸ್ ನ ಶಾಸಕರಿದ್ದಾರೆ. ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಮೈತ್ರಿ ಅಭ್ಯರ್ಥಿಯಾಗಿ ಕೃಷ್ಣ ಬೈರೇಗೌಡರು ಕಣಕ್ಕಿಳಿದಿರುವುದರಿಂದ ಒಟ್ಟಾರೆ ಅವರಿಗೆ ಏಳು ಶಾಸಕರ ಬೆಂಬಲವಿದೆ. ಬಿಜೆಪಿ ಒಂದೇ ಕ್ಷೇತ್ರದಲ್ಲಿ ಗೆದ್ದಿದ್ದರೂ ನಗರದ ಶಿಕ್ಷಿತ ಮತದಾದರರು ಮೋದಿಗೆ ಬೆಂಬಲ ನೀಡುವುದರಿಂದ ತಮ್ಮ ಗೆಲುವು ಸಾಧ್ಯ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಅಭ್ಯರ್ಥಿ ಸದಾನಂದಗೌಡರಿದ್ದಾರೆ.
ಕಳೆದ ಚುನಾವಣೆಯಲ್ಲಿ (2014) ಬಿಜೆಪಿಯ ಮೂವರು ಶಾಸಕರು ಅವರ ಬೆಂಬಲಕ್ಕಿದ್ದರು. ಉಳಿದ ಐವರಲ್ಲಿ ಇಬ್ಬರು ಜೆಡಿಎಸ್ ಗೆ ಸೇರಿದ್ದರೆ, ಮೂವರು ಕಾಂಗ್ರೆಸ್ ನವರಾಗಿದ್ದರು. ಆದರೆ ಜೆಡಿಎಸ್ ಕೂಡ ಈ ಚುನಾವಣೆಯಲ್ಲಿ ಅಬ್ದುಲ್ ಅಜೀಂ ಅವರನ್ನುಕಣಕ್ಕಿಳಿಸಿತ್ತು. ಅವರು ಸುಮಾರು ಒಂದು ಲಕ್ಷಗಳಷ್ಟು ಮತ ಪಡೆದು ಮೂರನೇ ಸ್ಥಾನಪಡೆದಿದ್ದರು. ಮಿತ್ರ ಪಕ್ಷಗಳ ಪ್ರಾಬಲ್ಯ ಈ ಕ್ಷೇತ್ರದಲ್ಲಿ ಹೆಚ್ಚಿರುವುದು ಈ ಚುನಾವಣೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬ ಲೆಕ್ಕಾಚಾರ ನಡೆಯುತ್ತಲೇ ಇದೆ.
ಒಂದು ವೇಳೆ ಈ ಚುನಾವಣೆಯಲ್ಲಿ ಕೃಷ್ಣ ಬೈರೇಗೌಡರು ಗೆದ್ದರೆ, ಸಚಿವ ಸ್ಥಾನ ಬಿಡಬೇಕಾಗುತ್ತದೆ. ಅದು ತಮಗೆ ಒಲಿಯಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಶಾಸಕರು ಹುರುಪಿನಿಂದ ಪ್ರಚಾರ ಮಾಡುತ್ತಿದ್ದಾರೆ. ಜತೆಗೆ ಜೆಡಿಎಸ್ ಶಾಸಕರೂ ಸಾಥ್ ನೀಡುತ್ತಿರುವುದು, ಬಿಜೆಪಿ ಪಾಳಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಬಹಳ ವರ್ಷಗಳ ನಂತರ ಇಬ್ಬರು ಒಕ್ಕಲಿಗ ಅಭ್ಯರ್ಥಿಗಳು ಪರಸ್ಪರ ಎದುರಾಳಿಗಳಾಗಿರುವುದರಿಂದ ಒಕ್ಕಲಿಗರು ಯಾರನ್ನು ಬೆಂಬಲಿಸಲಿದ್ದಾರೆ ಎಂಬ ಬಗ್ಗೆ ಕುತೂಹಲ ಬೇರೆಯವರಿಗಿದೆ.
ರಾಜ್ಯದ ವಿವಿಧ ಭಾಗದಿಂದ ಮಾತ್ರವಲ್ಲದೆ, ದೇಶದ ವಿವಿಧ ಭಾಗದಿಂದಲೂ ಬಂದ ವಲಸಿಗರು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಯಾವ ಪಕ್ಷ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬುದರ ಮೇಲೆ ಸದಾನಂದ ಗೌಡರ ಮತ್ತು ಕೃಷ್ಣೆ ಬೈರೇಗೌಡರ ಭವಿಷ್ಯ ನಿಂತಿದೆ.