ಒಂದು ಕಾಲದಲ್ಲಿ ಚಿನ್ನವನ್ನೇ ಬೆಳೆಯುತ್ತಿದ್ದ ಮತ್ತು ಈಗ ಏನನ್ನೂ ಬೆಳೆಯಲಾಗದ ಮಟ್ಟಿಗೆ ಬರಡಾಗಿರುವ ಕ್ಷೇತ್ರ ಕೋಲಾರ. ಕುಡಿಯುವ ನೀರಿಗೂ ತೀವ್ರ ಹಾಹಾಕಾರ, ಬೆಳೆ ಬಿತ್ತಲೂ ಹನಿ ನೀರಿಲ್ಲದ ಬರಗಾಲ, ಕಿತ್ತುತಿನ್ನುವ ನಿರುದ್ಯೋಗ ಜೊತೆಗೆ ಆತಂಕಕಾರಿ ಪ್ರಮಾಣದ ಸಾಮಾಜಿಕ ಶೋಷಣೆ, ದಬ್ಬಾಳಿಕೆಗಳ ಕಾರಣಕ್ಕೆ ಇಡೀ ರಾಜ್ಯದಲ್ಲೇ ಹೆಸರುವಾಸಿಯಾಗಿರುವುದು ಈ ಒಂದು ಕಾಲದ ಚಿನ್ನದ ನಾಡು.
1951ರಿಂದ ಈವರೆಗೆ ನಡೆದಿರುವ ಒಟ್ಟು 16 ಚುನಾವಣೆಗಳಲ್ಲಿ, 1984ರಲ್ಲಿ ಒಂದು ಬಾರಿ ಹೊರತುಪಡಿಸಿ ಉಳಿದಂತೆ ಎಲ್ಲಾ ಬಾರಿಯೂ ಇಲ್ಲಿ ಗೆಲುವು ಪಡೆದು ಪಾರುಪತ್ಯ ಮೆರೆಯುತ್ತಿರುವುದು ಕಾಂಗ್ರೆಸ್ ಪಕ್ಷವೇ. ಹಾಗಾಗಿಯೇ ಇದು ಕಾಂಗ್ರೆಸ್ಸಿನ ಅಭೇದ್ಯ ಕೋಟೆ ಎಂದೇ ಜನಪ್ರಿಯ. ಅದರಲ್ಲೂ ಹಾಲಿ ಸಂಸದ ಕೆ ಎಚ್ ಮುನಿಯಪ್ಪ 1991ರಿಂದ ಈವರೆಗೆ ಸತತ ಏಳು ಬಾರಿ ಜಯಗಳಿಸಿ, ಸೋಲಿಲ್ಲದ ಸರದಾರ ಎಂದೇ ಹೆಸರಾಗಿದ್ದು, ಈ ಬಾರಿ ಎಂಟನೇ ಬಾರಿಗೆ ತಮ್ಮ ದಿಗ್ವಿಜಯ ಮುಂದುವರಿಸುವ ವಿಶ್ವಾಸದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಮೀಸಲು ಕ್ಷೇತ್ರದಲ್ಲಿ ಮುನಿಯಪ್ಪ ವಿರುದ್ಧದ ಆಡಳಿತ ವಿರೋಧಿ ಅಲೆ ಹಾಗೂ ಕಾಂಗ್ರೆಸ್ಸಿನ ಒಳಗೇ ಇರುವ ತೀವ್ರ ಬಣ ರಾಜಕಾರಣದ ಲಾಭ ಪಡೆಯುವ ಲೆಕ್ಕಾಚಾರದಲ್ಲಿ ಬಿಜೆಪಿ ಎಸ್ ಮುನಿಸ್ವಾಮಿ ಅವರನ್ನು ಬೆಂಗಳೂರಿನಿಂದ ಕರೆತಂದು ಕಣಕ್ಕಿಳಿಸಿದೆ. ವಿಧಾನಸಭಾ ಕ್ಷೇತ್ರಗಳ ಅಧಿಕಾರದ ವಿಷಯದಲ್ಲಾಗಲೀ, ತಳಮಟ್ಟದ ಕೇಡರ್ ವಿಷಯದಲ್ಲಾಗಲೀ ನೆಲೆಯೇ ಇಲ್ಲದ ಸ್ಥಿತಿಯಲ್ಲಿರುವ ಬಿಜೆಪಿ, ಮುನಿಯಪ್ಪ ಅವರ ವಿರೋಧಿ ಅಲೆಯೊಂದಿಗೆ, ‘ಮತ್ತೊಮ್ಮೆ ಮೋದಿ’ ಅಲೆಯೂ ಸೇರಿ ಗೆಲುವಿನ ದಡ ತಲುಪುವ ಲೆಕ್ಕಾಚಾರದಲ್ಲಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ಮತದಾರರೇ ಚುನಾವಣೆಯ ದಿಕ್ಕು ನಿರ್ಧರಿಸುವ ಮೀಸಲು ಕ್ಷೇತ್ರದಲ್ಲಿ; ಎಡಗೈ ಮತ್ತು ಬಲಗೈ ಬಣ ರಾಜಕೀಯವೇ ಯಾವಾಗಲೂ ನಿರ್ಣಾಯಕ. ಒಟ್ಟು 16.12 ಲಕ್ಷ ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ/ ಪಂಗಡದ ಮತದಾರರೇ ಸುಮಾರು 4.5 ಲಕ್ಷದಷ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಆ ಪೈಕಿ ಕಾಂಗ್ರೆಸ್ಸಿನ ಕೆ ಎಚ್ ಮುನಿಯಪ್ಪ ಅವರ ಎಡಗೈ ಸಮುದಾಯದ ಬಲ ಸುಮಾರು 90 ಸಾವಿರ. ಸುಮಾರು 2.5 ಲಕ್ಷ ಮತಗಳನ್ನು ಹೊಂದಿರುವ ಬಲಗೈ ಬಣದಲ್ಲಿ ಮತ್ತೆ ದೊಡ್ಡದಾಳಿ ಮತ್ತು ಚಿಕ್ಕತಾಳಿ ಒಳಪಂಗಡಗಳಲ್ಲೇ ಮತ ವಿಭಜನೆಯಾಗಲಿವೆ. ಬಲಗೈ ಬಣದ ಈ ಪ್ರಾಬಲ್ಯ ಮತ್ತು ಕ್ಷೇತ್ರದಲ್ಲಿ ತಮ್ಮ ಸಮುದಾಯಕ್ಕೇ ಟಿಕೆಟ್ ನೀಡಬೇಕು ಎಂಬ ದಶಕಗಳ ಕಾಲದ ಆ ಒಳಪಂಗಡಗಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡೇ ಬಿಜೆಪಿ ಬಲಗೈ ಬಣಕ್ಕೆ ಸೇರಿದ ಮುನಿಸ್ವಾಮಿ ಅವರನ್ನು ಕಣಕ್ಕಿಳಿಸಿದೆ.
ಅಲ್ಲದೆ, ಕ್ಷೇತ್ರದಲ್ಲಿ ಸುಮಾರು 4 ಲಕ್ಷ ಮತಗಳನ್ನು ಹೊಂದಿರುವ ಒಕ್ಕಲಿಗರು, 1.80 ಲಕ್ಷ ಮತ ಹೊಂದಿರುವ ಕುರುಬರು, ಸುಮಾರು 80 ಸಾವಿರ ಮತ ಹೊಂದಿರುವ ಸವಿತಾ ಸಮಾಜ ಹಾಗೂ 60 ಸಾವಿರ ಮತ ಹೊಂದಿರುವ ಬಲಿಜ ಸಮಾಜದ ಮತಗಳ ದಿಕ್ಕು ಯಾವುದು ಎಂಬುದು ಅಂತಿಮವಾಗಿ ನಿರ್ಣಾಯಕ. ಆದರೆ, ಕೇವಲ ಜಾತಿ- ಸಮುದಾಯದ ವಿಷಯಗಳೇ ಇಲ್ಲಿನ ಆಯ್ಕೆಯನ್ನು ನಿರ್ಧರಿಸುವುದಿಲ್ಲ ಎಂಬುದಕ್ಕೆ ಕೇವಲ 90 ಸಾವಿರ ಮತದಾರರನ್ನು ಹೊಂದಿರುವ ಸಮುದಾಯದ ಮುನಿಯಪ್ಪ ಏಳು ಬಾರಿ ಸತತ ಜಯಭೇರಿ ಭಾರಿಸಿರುವುದೇ ಉದಾಹರಣೆ. ಹಾಗಾಗಿ, ಇಲ್ಲಿ ಅಂತಹ ಲೆಕ್ಕಾಚಾರಗಳನ್ನು ತಿರುವುಮಾಡಿ ಗೆಲುವು ಪಡೆಯುವ ಚಾಕಚಕ್ಯತೆ ಮತ್ತು ವ್ಯವಸ್ಥಿತ ಜಾಲವನ್ನು ಮುನಿಯಪ್ಪ ಹೊಂದಿದ್ದಾರೆ ಎಂಬ ಮಾತೂ ಇವೆ.
ಆದರೆ, ಪ್ರಮುಖವಾಗಿ ಈ ಬಾರಿ ನೀರಾವರಿ ಮತ್ತು ಕುಡಿಯುವ ನೀರು ಒದಗಿಸುವ ವಿಷಯದಲ್ಲಿ ಮುನಿಯಪ್ಪ ತಮ್ಮ ಹಿಂದಿನ ಚುನಾವಣೆಗಳ ಭರವಸೆಯನ್ನು ಉಳಿಸಿಕೊಂಡಿಲ್ಲ ಮತ್ತು ನಿರುದ್ಯೋಗ ನಿವಾರಣೆಯ ನಿಟ್ಟಿನಲ್ಲಿ ಕೆಜಿಎಫ್ ಚಿನ್ನದ ಗಣಿ ಪುನರಾರಂಭದ ಮಾತನ್ನೂ ಉಳಿಸಿಕೊಂಡಿಲ್ಲ ಎಂಬ ಆಕ್ರೋಶ ಕ್ಷೇತ್ರದಲ್ಲಿ ದೊಡ್ಡ ಸದ್ದುಮಾಡುತ್ತಿದೆ. ಅಭಿವೃದ್ಧಿ ವಿಷಯದಲ್ಲಿನ ಈ ಅಸೀಮ ನಿರ್ಲಕ್ಷ್ಯದೊಂದಿಗೆ ಈ ಬಾರಿ ಅವರಿಗೆ ತಮ್ಮದೇ ಕಾಂಗ್ರೆಸ್ಸಿನ ಹಲವು ಹಾಲಿ ಮತ್ತು ಮಾಜಿ ಶಾಸಕರು ಬಹಿರಂಗ ಬಂಡಾಯವೆದ್ದಿರುವುದು ದೊಡ್ಡ ಸವಾಲಾಗಿದೆ.
ಒಂದು ಕಡೆ ಶ್ರೀನಿವಾಸಪುರ ಶಾಸಕ ಹಾಗೂ ಸ್ಪೀಕರ್ ರಮೇಶ್ ಕುಮಾರ್ ಅವರು ಚುನಾವಣೆಯಿಂದ ಹೊರಗುಳಿದಿದ್ದಾರೆ. ಮುನಿಯಪ್ಪ ಅವರಿಗೆ ಈ ಬಾರಿ ಟಿಕೆಟ್ ನೀಡಬಾರದು ಎಂದು ಪ್ರಬಲ ಲಾಬಿ ನಡೆಸಿದ್ದ ಅವರ ಗುಂಪು, ಇದೀಗ ಪ್ರಚಾರದಿಂದಲೇ ಅಂತರ ಕಾಯ್ದುಕೊಂಡಿದೆ. ಜೊತೆಗೆ ಕಾಂಗ್ರೆಸ್ ಮಾಜಿ ಶಾಸಕ ಎಂ ಸಿ ಸುಧಾಕರ್ ಕೂಡ ಬಿಜೆಪಿ ಪರ ಬಹಿರಂಗ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ಮತ್ತೊಂದು ಕಡೆ ಜೆಡಿಎಸ್ ಶಾಸಕರು ಮತ್ತು ಕಾರ್ಯಕರ್ತರು ಮುನಿಯಪ್ಪ ಪರ ನಿಂತಿದ್ದಾರೆ.
ಮತ್ತೊಂದು ಮೋದಿ ಮತ್ತೊಮ್ಮೆ ಅಲೆಯನ್ನೇ ನೆಚ್ಚಿ, ಅದರೊಂದಿಗೆ ಬಲಗೈ ಬಣದ ಮತಗಳ ದೋಚುವ ಲೆಕ್ಕಾಚಾರದಲ್ಲಿರುವ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಅವರಿಗೆ ಕ್ಷೇತ್ರ ಹೊಸದು. ಬೆಂಗಳೂರು ಬಿಬಿಎಂಪಿ ಸದಸ್ಯರಾಗಿದ್ದ ಅವರು, ಇದೀಗ ಏಕಾಏಕಿ ಕೋಲಾರಕ್ಕೆ ವಲಸೆ ಬಂದು ಲೋಕಸಭಾ ಚುನಾವಣೆಗೆ ನಿಂತಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ(ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಬಂಗಾರಪೇಟೆ, ಕೆಜಿಎಫ್, ಶಿಡ್ಲಘಟ್ಟ) ಮತ್ತು ಎರಡು ಕಡೆ(ಕೋಲಾರ ಮತ್ತು ಚಿಂತಾಮಣಿ) ಜೆಡಿಎಸ್ ಶಾಸಕರಿದ್ದು, ಬಿಜೆಪಿಗೆ ನೆಲೆಯೇ ಇಲ್ಲ. ಜೊತೆಗೆ ಕೇಡರ್ ಲೆಕ್ಕದಲ್ಲೂ ಬಿಜೆಪಿ ಇಲ್ಲಿ ತೀರಾ ದುರ್ಬಲ. ಹಾಗಾಗಿ ಕೇವಲ ಮುನಿಯಪ್ಪ ವಿರುದ್ಧದ ಮತದಾರರ ಅಸಮಾಧಾನ ಮತವಾಗಿ ಪರಿವರ್ತನೆಯಾದಲ್ಲಿ, ಮುನಿಸ್ವಾಮಿ ಅನಿವಾರ್ಯ ಆಯ್ಕೆಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಆದರೆ, ಕಳೆದ ಎರಡು ಚುಣಾವಣೆಗಳಲ್ಲೂ ಕ್ಷೇತ್ರದ ಅದೇ ಜ್ವಲಂತ ವಿಷಯಗಳನ್ನು ಇಟ್ಟುಕೊಂಡೇ ಮುನಿಯಪ್ಪ, ವರ್ಷದಿಂದ ವರ್ಷಕ್ಕೆ ತಮ್ಮ ಗೆಲುವಿನ ಅಂತರವನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ ಎಂಬುದು ಗಮನಾರ್ಹ. 2009ರಲ್ಲಿ ಬಿಜೆಪಿಯ ಪ್ರಬಲ ಅಭ್ಯರ್ಥಿ ಡಿ ಎಸ್ ವೀರಯ್ಯ ಅವರ ವಿರುದ್ಧ 23,006 ಮತಗಳ ಅಂತರದ ಜಯ ಪಡೆದಿದ್ದ ಮುನಿಯಪ್ಪ, 2014ರಲ್ಲಿ ಮೋದಿ ಅಲೆಯ ಹೊರತಾಗಿಯೂ ಬಿಜೆಪಿ ಅಭ್ಯರ್ಥಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿ, ಜೆಡಿಎಸ್ನ ಕೆ ಕೇಶವ ವಿರುದ್ಧ 47,850 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದರು.
ಈ ನಡುವೆ, ಮತದಾನಕ್ಕೆ ಕೆಲವೇ ದಿನಗಳ ಬಾಕಿ ಇರುವಾಗ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ ಕೆ ಶಿವಕುಮಾರ್ ಅವರು ಕೋಲಾರ ಕಾಂಗ್ರೆಸ್ ನಾಯಕರ ಸಭೆ ನಡೆಸಿ, ಎಲ್ಲರೂ ಒಟ್ಟಾಗಿ ಪಕ್ಷದ ಹೈಕಮಾಂಡ್ ಸೂಚನೆಯಂತೆ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲು ಸೂಚಿಸಿದ್ದಾರೆ. ಹಾಗಾಗಿ, ಭಿನ್ನಮತ ಬಹುತೇಕ ಬದಿಗೆ ಸರಿದಿದೆ ಎಂಬ ಮಾಹಿತಿ ಕೂಡ ಇದೆ.
ಅದೇನೇ ಇರಲಿ, ಹಿಂದಿನ ಏಳು ಚುನಾವಣೆಗಳಲ್ಲಿ ನಡೆದ ತಮ್ಮ ಜಾದೂ ಈ ಬಾರಿ ಅಷ್ಟು ಸಲೀಸಾಗಿ ನಡೆಯಲಾರದು ಎಂಬ ಸೂಚನೆ ಮುನಿಯಪ್ಪ ಅವರಿಗೆ ಸಿಕ್ಕಾಗಿದೆ. ಹಾಗಾಗಿಯೇ ಈಗ ಅವರು ಹಿಂದೆಂದಿಗಿಂತ ಬಿರುಸಾಗಿ ತಮ್ಮದೇ ಪಡೆ ಕಟ್ಟಿಕೊಂಡು ಕ್ಷೇತ್ರದ ಮೂಲೆಮೂಲೆ ಸುತ್ತತೊಡಗಿದ್ದಾರೆ. ಪಕ್ಕದ ಚಿಕ್ಕಬಳ್ಳಾಪುರದಂತೆಯೇ ಇಲ್ಲಿಯೂ ಎತ್ತಿನಹೊಳೆ, ಕೆ ಸಿ ವ್ಯಾಲಿ ನೀರು ಹರಿಯದೇ ಇದ್ದರೂ, ಈ ಬಾರಿ ರಾಜ್ಯದ ಅತ್ಯಂತ ಹಿರಿಯ ಸಂಸದರಲ್ಲಿ ಒಬ್ಬರಾದ ಕೆ ಎಚ್ ಮುನಿಯಪ್ಪ ಅವರು ಭರ್ಜರಿ ಬೆವರು ಸುರಿಸುತ್ತಿದ್ದಾರೆ.