ಮುಂಬಯಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಬಾಲಿವುಡ್ ನಟಿ ಊರ್ಮಿಳಾ ಮಾತೊಂಡ್ಕರ್ ಅವರು ಪೊಲೀಸ್ ಭದ್ರತೆಗಾಗಿ ಕೋರಿಕೆ ಸಲ್ಲಿಸಿದ್ದು ಇದೀಗ ಭದ್ರತೆ ಒದಗಿಸಲಾಗಿದೆ ಎಂದು ಮುಂಬಯಿ ಪೊಲೀಸರು ತಿಳಿಸಿದ್ದಾರೆ. ಸೋಮವಾರದಂದು ಅವರು ಮುಂಬಯಿಯ ಕರಾವಳಿ ಉಪನಗರದಲ್ಲಿ ಪ್ರಚಾರ ನಡೆಸುತ್ತಿದ್ದಾಗ, ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ಮಧ್ಯೆ ಗಲಾಟೆ ಸಂಭವಿಸಿತ್ತೆಂದು ಹೇಳಲಾಗಿದೆ. ಈ ಘಟನೆಯ ನಂತರ ಅವರು ಪೊಲೀಸ್ ಭದ್ರತೆಗೆ ಕೋರಿದ್ದರೆಂದು ತಿಳಿದುಬಂದಿದೆ.
“ಭಯ ಹುಟ್ಟಿಸಲೆಂದೇ ಅವರು ಹೀಗೆ ವರ್ತಿಸುತ್ತಿದ್ದಾರೆ. ಇದು ಆರಂಭವಷ್ಟೇ ಆಗಿದ್ದು ಇನ್ನು ಮುಂದೆ ಹಿಂಸಾತ್ಮಕ ತಿರುವನ್ನು ಪಡೆಯಲು ಸಾಧ್ಯವಿದೆ. ನನಗೆ ಜೀವ ಬೆದರಿಕೆ ಇರುವುದರಿಂದ ಪೊಲೀಸ್ ಭದ್ರತೆಗಾಗಿ ಆಗ್ರಹಿಸಿ ನಾನು ದೂರು ದಾಖಲಿಸಿದ್ದೇನೆ” ಎಂದು ಊರ್ಮಿಳಾ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದರು.
ಬೋರಿವಾಲಿ ರೈಲು ನಿಲ್ದಾಣದ ಹೊರಗೆ ಅವರು ಪ್ರಚಾರ ಕೈಗೊಳ್ಳುತ್ತಿರುವಾಗ ಕೆಲವರು ಮೋದಿ ಮೋದಿ ಎಂದು ಕೂಗಾಡಲು ಆರಂಭಿಸಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಜಗಳಕ್ಕಿಳಿದರೆಂದು ಮತ್ತು ಕ್ಷಣದಲ್ಲೇ ಎರಡೂ ಗುಂಪುಗಳ ನಡುವೆ ಘರ್ಷಣೆ ಉಂಟಾಯಿತೆಂದು ಹೇಳಲಾಗಿದೆ. ನಂತರ ಊರ್ಮಿಳಾ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾವು ಶಾಂತಿಯುತವಾಗಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದೆವು. ಆಗ ಅಲ್ಲೇ ಎಲ್ಲಿಂದಲೋ 15-20 ಜನರು ಬಂದು ಘೋಷಣೆಗಳನ್ನು ಕೂಗಲು ಶುರು ಮಾಡಿದರು. ನಾನು ಅದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ. ಇಂತಹ ಘಟನೆಗಳು ನಡೆಯುವುದು ಸಹಜವೆಂದು ಭಾವಿಸಿ ನಾನು ಹಾಗೇ ಸುಮ್ಮನಾಗಲು ಬಿಟ್ಟುಬಿಡಿ ಎಂದು ನಮ್ಮವರಿಗೆ ಸಂಜ್ಞೆ ಮಾಡಿದೆ. ಆದರೆ ಅವರೆಲ್ಲರೂ ಅಸಭ್ಯ ಭಾಷೆ ಬಳಸಿ ಅಶ್ಲೀಲವಾಗಿ ಕುಣಿಯಲು ಆರಂಭಿಸಿದರು. ಬಹುಶಃ ಅವರು ನಮ್ಮ ಜೊತೆ ಓಡಾಡುತ್ತಿದ್ದ ಮಹಿಳೆಯರಿಗೆ ಬೆದರಿಕೆ ಒಡ್ಡಬೇಕೆಂದು ಬಯಸಿದ್ದರೋ ಏನೊ. ಆಗ ಘರ್ಷಣೆ ಸಂಭವಿಸಿ ಅವರು ಮಹಿಳೆಯರ ಮೇಲೂ ಹಲ್ಲೆಗೈದರು. ಅವರದ್ದು ದ್ವೇಷದ ರಾಜಕಾರಣವೆಂದು ನಾನು ಮೊದಲ ದಿನದಿಂದಲೂ ಹೇಳುತ್ತಿದ್ದೇನೆ. ಇದು ಮುಂಬಯಿಯಲ್ಲಿ ನಡೆಯಲು ನಾನು ಬಿಡುವುದಿಲ್ಲ ಎಂದು ಎಎನ್ಐ ಸುದ್ದಿ ಸಂಸ್ಥೆಯ ಜೊತೆ ಊರ್ಮಿಳಾ ಮಟೊಂಡ್ಕರ್ ಹೇಳಿಕೊಂಡಿದ್ದಾರೆ.
ಊರ್ಮಿಳಾ ಅವರು ಈ ಕೆಳಗಿನಂತೆ ಟ್ವೀಟ್ ಮಾಡಿದ್ದಾರೆ.
“ಬಿಜೆಪಿ ಕಾರ್ಯಕರ್ತರು ನೀತಿ ಸಂಹಿತೆಯನ್ನು ಕಣ್ಣಿಗೆ ರಾಚುವಂತೆ ಉಲ್ಲಂಘಿಸಿ ದ್ವೇಷಮಯ ಕೃತ್ಯಗಳಲ್ಲಿ ಭಾಗಿಯಾಗಿರುವುದನ್ನು ನೋಡಿ ಆಘಾತವಾಗುತ್ತಿದೆ… ನನ್ನ ಸುರಕ್ಷತೆಗಾಗಿ ಮತ್ತು ನನ್ನ ಮಹಿಳಾ ಬೆಂಬಲಿಗರ ಘನತೆ ಉಳಿಸಲು ಪೊಲೀಸರಲ್ಲಿ ದೂರು ದಾಖಲಿಸಬೇಕಾಯಿತು”
Shocked at the blatant violation of code of conduct and hostile acts by BJP workers.. I was constrained to lodge police complaint for my own safety and to save the dignity of my female supporters.. #AapliMumbaichiMulagi pic.twitter.com/gqPL4DZGOH
— Urmila Matondkar (@OfficialUrmila) April 15, 2019