ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರದಲ್ಲಿ ‘ಅಭಿವೃದ್ಧಿ’ ಮತ್ತು ತಾವೇ ಜಾರಿಗೆ ತಂದ ‘ಆರ್ಥಿಕ ಸುಧಾರಣೆ’ಗಳನ್ನು ಮರೆತು ‘ರಾಷ್ಟ್ರೀಯತೆ’ಗೆ ಮೊರೆ ಹೋಗಿದ್ದಾರೆ. ಯುಪಿಎ ಸರ್ಕಾರದ ಸಾಧನೆಗೆ ಹೋಲಿಸಿದರೆ ಎನ್ಡಿಎ- 2 ಅವಧಿಯ ಸರ್ಕಾರದ ಸಾಧನೆ ಕಳಪೆ ಆಗಿದೆ ಎಂಬುದೇ ಇದಕ್ಕೆ ಕಾರಣ. ಮೋದಿ ಆಡಳಿತವು ಯುಪಿಎ-1 ಮತ್ತು ಯುಪಿಎ- 2 ಸರ್ಕಾರಗಳ ಸಾಧನೆಗಳಿಗೆ ಹೋಲಿಸಿದರೆ, ಅಂತ್ಯಂತ ಕಳಪೆಯಾಗಿತ್ತು ಎಂಬುದನ್ನು ಈಗಾಗಲೇ ಅಂಕಿ ಅಂಶಗಳ ಮೂಲಕ ವಿವರಿಸಲಾಗಿದೆ.
ಇತ್ತೀಚೆಗೆ ಬಿಡುಗಡೆ ಆಗಿರುವ ಹೊಸ ಅಂಕಿ ಅಂಶಗಳೂ ಸಹ ಮೋದಿ ಸರ್ಕಾರದ ಕಳಪೆ ಸಾಧನೆಯನ್ನು ಎತ್ತಿ ತೋರಿಸುತ್ತಿವೆ.
ದೇಶದ ಆರ್ಥಿಕ ಅಭಿವೃದ್ಧಿ ತ್ವರಿತಗತಿಯಲ್ಲಿ ಸಾಗಬೇಕಾದರೆ ಪ್ರತಿ ವರ್ಷದಲ್ಲೂ ಹೊಸ ಹೊಸ ಹೂಡಿಕೆ ಪ್ರಸ್ತಾಪಗಳು ಹೆಚ್ಚುತ್ತಾ ಹೋಗಬೇಕು. ಈ ಪ್ರಸ್ತಾಪಗಳು ಹೆಚ್ಚಿನ ಪ್ರಮಾಣದಲ್ಲಿ ಅನುಷ್ಠಾನಗೊಳ್ಳಬೇಕು. ಆದರೆ, 2018-19ನೇ ಸಾಲಿನಲ್ಲಿ ಬಂದಿರುವ ಹೊಸ ಹೂಡಿಕೆ ಪ್ರಸ್ತಾಪಗಳು 9.5 ಲಕ್ಷ ಕೋಟಿ ರುಪಾಯಿಗಳಿಗೆ ತಗ್ಗಿದೆ. ಇದು ಕಳೆದ 14 ವರ್ಷಗಳ ಪೈಕಿ ಅತ್ಯಂತ ಕನಿಷ್ಠಮಟ್ಟವಾಗಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ, 2015-16ರಿಂದೀಚೆಗೆ ಅಂದರೆ ಮೋದಿ ಅಧಿಕಾರಕ್ಕೆ ಬಂದ ನಂತರ ಹೊಸ ಹೂಡಿಕೆ ಪ್ರಸ್ತಾಪಗಳು ಪ್ರಮಾಣ ಸತತ ನಾಲ್ಕು ವರ್ಷಗಳಿಂದ ಕುಸಿಯುತ್ತಲೇ ಇದೆ.
2018-19ನೇ ಸಾಲಿನಲ್ಲಿ ಕೇವಲ 9.5 ಲಕ್ಷ ಕೋಟಿ ರುಪಾಯಿ ಮೌಲ್ಯದ ಹೂಡಿಕೆ ಪ್ರಸ್ತಾಪ ಬಂದಿರುವುದು ಜಾಗತಿಕ ಮಟ್ಟದಲ್ಲಿ ತ್ವರಿತವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಹೆಗ್ಗಳಿಕೆಯನ್ನು ಪ್ರಶ್ನಿಸುವಂತಾಗಿದೆ.
ಅಂದರೆ, ಪ್ರಧಾನಿ ನರೇಂದ್ರ ಮೋದಿ ಮತ್ತವರ ಬೆಂಬಲಿಗರು ದೇಶದಲ್ಲಿ ಭಾರಿ ಹೂಡಿಕೆ ಮಾಡಲಾಗುತ್ತಿದೆ ಎಂದು ಪ್ರಚಾರ ಮಾಡುತ್ತಿರುವುದು ಸುಳ್ಳು ಎಂಬುದು ಈ ಅಂಕಿ ಅಂಶಗಳಿಂದ ಸಾಬೀತಾಗುತ್ತಿದೆ. ಯುಪಿಎ-1 ಮತ್ತು ಯುಪಿಎ-2 ಸರ್ಕಾರದ ಅವಧಿಯಲ್ಲಿ 2006-07ರಿಂದ 2010-11ರವರೆಗೆ ಸರಾಸರಿ ಪ್ರತಿ ವರ್ಷ 25 ಲಕ್ಷ ಕೋಟಿ ರುಪಾಯಿ ಮೌಲ್ಯದ ಹೊಸ ಹೂಡಿಕೆ ಪ್ರಸ್ತಾಪಗಳು ಬಂದಿದ್ದವು. ನಂತರದಲ್ಲಿ ಹೂಡಿಕೆ ಪ್ರಸ್ತಾಪಗಳ ಪ್ರಮಾಣ ಕೊಂಚ ತಗ್ಗಿತ್ತು.
2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ಹೊಸ ಸರ್ಕಾರದ ಮೇಲಿನ ಭರವಸೆಯೊಂದಿಗೆ ಹೂಡಿಕೆಗಳ ಪ್ರಸ್ತಾಪಗಳ ಪ್ರಮಾಣವು 2014-15ರಲ್ಲಿ 21 ಲಕ್ಷ ಕೋಟಿಗೆ ಏರಿತು. ಅದೇ ಕೊನೆ. ನಂತರದ ನಾಲ್ಕು ವರ್ಷಗಳಿಂದ ಹೂಡಿಕೆ ಪ್ರಸ್ತಾಪಗಳ ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಬಂದು 2018-19ರಲ್ಲಿ ಕೇವಲ 9.5 ಲಕ್ಷ ಕೋಟಿಗೆ ತಗ್ಗಿದೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಹೂಡಿಕೆದಾರರಿಗೆ ಸರ್ಕಾರದ ಮೇಲೆ ಇದ್ದ ವಿಶ್ವಾಸವು ಕ್ರಮೇಣ ಕುಸಿಯುತ್ತಾ ಬಂತು. ನರೇಂದ್ರ ಮೋದಿ ಜಾರಿಗೆ ತರಲಾರಂಭಿಸಿದ ಆರ್ಥಿಕ ಸುಧಾರಣೆಗಳು, ಹೊಸ ನೀತಿಗಳು ಹೂಡಿಕೆದಾರ ಸ್ನೇಹಿ ಆಗಿರಲಿಲ್ಲ. 2016ರಲ್ಲಿ ಜಾರಿಗೆ ತಂದ ಅಪನಗದೀಕರಣ, 2017ರಲ್ಲಿ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಯೋಜನೆಗಳಿಂದಾಗಿ ದೇಶದ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದರಿಂದ ಹೂಡಿಕೆದಾರರು ಹಿಂದೆ ಸರಿದರು. ಹೊಸ ಹೂಡಿಕೆ ಪ್ರಸ್ತಾಪಗಳು ಗಣನೀಯವಾಗಿ ಕುಸಿದವು.
ವಿಶೇಷ ಎಂದರೆ ಯುಪಿಎ ಸರ್ಕಾರದ ಅವಧಿಯಲ್ಲಿ ಹೂಡಿಕೆದಾರರ ಸ್ನೇಹಿ ಪರಿಸರ ಇದ್ದುದರಿಂದಾಗಿ ಖಾಸಗಿ ವಲಯದ ಹೂಡಿಕೆಗಳು ಪ್ರಮಾಣ ಗಣನೀಯವಾಗಿ ಹೆಚ್ಚಿತ್ತು. 2006-11 ರ ಅವಧಿಯಲ್ಲಿ ಖಾಸಗಿ ವಲಯದ ಹೂಡಿಕೆ ಪ್ರಸ್ತಾಪಗಳ ಪ್ರಮಾಣವು ಶೇ.62ರಷ್ಟಿತ್ತು. ಆದರೆ, ಮೋದಿ ಆಧಿಕಾರಕ್ಕೆ ಬಂದ ಆರಂಭದಲ್ಲಿ ಹೂಡಿಕೆ ಪ್ರಸ್ತಾಪಗಳು ಹೆಚ್ಚಿದ್ದರೂ ಸಹ ಅದು ಖಾಸಗಿ ವಲಯದಿಂದ ಹೆಚ್ಚಿನ ಪ್ರಮಾಣದ ಹೂಡಿಕೆ ಬಂದಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಶೇ.62ರಷ್ಟು ಖಾಸಗಿ ವಲಯದ ಹೂಡಿಕೆ ಬಂದಿದ್ದರೆ, ಮೋದಿ ಸರ್ಕಾರದ ಆರಂಭದಲ್ಲಿ ಶೇ.47ರಷ್ಟು ಮಾತ್ರ ಖಾಸಗಿ ವಲಯದ ಹೂಡಿಕೆ ಬಂದಿದೆ. 2018-19ರಲ್ಲಿ ಒಟ್ಟಾರೆ ಹೂಡಿಕೆ ಪ್ರಸ್ತಾಪಗಳ ಪ್ರಮಾಣ ತಗ್ಗಿದ್ದರೂ ಖಾಸಗಿ ಹೂಡಿಕೆ ಪ್ರಸ್ತಾಪಗಳ ಪ್ರಮಾಣ ಕೊಂಚ ಚೇತರಿಸಿದೆ. ಆದರೆ, ಜೆಟ್ ಏರ್ವೇಸ್ 1.31 ಲಕ್ಷ ಕೋಟಿ ಮೊತ್ತದ 150 ‘ಬೋಯಿಂಗ್ 737 ಮ್ಯಾಕ್ಸ್8’ ವಿಮಾನಗಳನ್ನು ಖರೀದಿಸುವ ಪ್ರಸ್ತಾಪ ರದ್ದಾಗಿದೆ. ಈ ಮೊತ್ತವನ್ನು ಪರಿಗಣಿಸಿದರೆ, 2018-19ರಲ್ಲಿನ ಹೂಡಿಕೆ ಪ್ರಸ್ತಾಪಗಳ ಮೊತ್ತವು 8.19 ಲಕ್ಷ ಕೋಟಿಗೆ ಇಳಿಯುತ್ತದೆ.
ಆರ್ಥಿಕ ಬೆಳವಣಿಗೆಯಲ್ಲಿ ಖಾಸಗಿ ವಲಯದ ಹೂಡಿಕೆ ಹೆಚ್ಚು ಪ್ರಾಮುಖ್ಯತೆ ವಹಿಸುತ್ತದೆ. ಅಂದರೆ, ಸಾರ್ವಜನಿಕ ವಲಯದ ಹೂಡಿಕೆ ನಿಯಮಿತವಾಗಿ ಹೆಚ್ಚುತ್ತಿರುತ್ತದೆ. ಆದರೆ, ಅದಕ್ಕೆ ಪೂರಕವಾಗಿ ಖಾಸಗಿ ವಲಯದ ಹೂಡಿಕೆ ಹೆಚ್ಚಿದಾಗ ಮಾತ್ರ ಆರ್ಥಿಕತೆಗೆ ಚೇತರಿಕೆ ಬರುತ್ತದೆ. ಖಾಸಗಿ ವಲಯದ ಹೂಡಿಕೆಯು ಸಾರ್ವಜನಿಕ ವಲಯದ ಹೂಡಿಕೆಗಿಂತ ಗಣನೀಯ ಪ್ರಮಾಣದಲ್ಲಿ ಹೆಚ್ಚಿದ್ದರೆ, ಅದು ಸರ್ಕಾರದ ಬಗ್ಗೆ ಹೂಡಿಕೆದಾರರಿಗೆ ಇರುವ ವಿಶ್ವಾಸದ ಪ್ರತೀಕ.
ಆ ಲೆಕ್ಕದಲ್ಲಿ ಖಾಸಗಿ ವಲಯದ ಹೂಡಿಕೆದಾರರಿಗೆ ಎನ್ಡಿಎ-2 ಅಂದರೆ ನರೇಂದ್ರ ಮೋದಿ ಸರ್ಕಾರಕ್ಕಿಂತಲೂ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-1 ಮತ್ತು ಯುಪಿಎ-2 ಸರ್ಕಾರದ ಮೇಲೆ ಹೆಚ್ಚು ವಿಶ್ವಾಸ ಇತ್ತು. ಯುಪಿಎ-1ರ ಅವಧಿಯಲ್ಲಿ ಒಟ್ಟು ಹೂಡಿಕೆಯಲ್ಲಿ ಖಾಸಗಿ ವಲಯದ ಹೂಡಿಕೆ ಶೇ.62.40ರಷ್ಟು ಮತ್ತು ಸಾರ್ವಜನಿಕ ವಲಯದ ಹೂಡಿಕೆ ಶೇ.36.60ರಷ್ಟಿತ್ತು. ಯುಪಿಎ-2 ಅವಧಿಯಲ್ಲಿ ಇದು ಶೇ.55.90 ಮತ್ತು ಶೇ.44.10ರಷ್ಟಿತ್ತು. ಆದರೆ, ನರೇಂದ್ರ ಮೋದಿ ಅವಧಿಯಲ್ಲಿ ಖಾಸಗಿ ವಲಯದ ಹೂಡಿಕೆ ಪ್ರಮಾಣ ಗಣನೀಯವಾಗಿ ತಗ್ಗಿತು. ಮೋದಿ ಅವಧಿಯಲ್ಲಾದ ಹೂಡಿಕೆ ಪೈಕಿ ಶೇ.50.70ರಷ್ಟು ಮಾತ್ರ ಖಾಸಗಿ ಹೂಡಿಕೆಯಾದರೆ ಸಾರ್ವಜನಿಕ ವಲಯದ ಹೂಡಿಕೆ ಶೇ.49.30ರಷ್ಟಿತ್ತು. ಅಂದರೆ, ಹೂಡಿಕೆದಾರರಿಗೆ ಸರ್ಕಾರದ ಮೇಲೆ ವಿಶ್ವಾಸ ಇಲ್ಲದೇ ಹೋದಾಗ ಖಾಸಗಿ ವಲಯದ ಹೂಡಿಕೆಯು ಗಣನೀಯವಾಗಿ ತಗ್ಗುತ್ತದೆ. ಮೋದಿ ಸರ್ಕಾರದ ಅವಧಿಯಲ್ಲಿ ಒಟ್ಟಾರೆ ಹೂಡಿಕೆ ಪ್ರಸ್ತಾಪಗಳು ಕುಸಿದಿರುವುದಷ್ಟೇ ಅಲ್ಲದೇ ಖಾಸಗಿ ವಲಯದ ಹೂಡಿಕೆ ಪ್ರಸ್ತಾಪಗಳು ಗಣನೀಯವಾಗಿ ತಗ್ಗಿವೆ!
Pl change Modi and save India don’t vote bjp they r fully corrupted persons in the world