ದೆಹಲಿ ಸೇರಿದಂತೆ ಎಎಪಿ ಪ್ರಾಬಲ್ಯದ ರಾಜ್ಯಗಳ ಲೋಕಸಭಾ ಸ್ಥಾನ ಹೊಂದಾಣಿಕೆಗೆ ಸಂಬಂಧಿಸಿದಂತೆ ಮೈತ್ರಿ ವಿಷಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್ ನಡುವಿನ ಹಗ್ಗಜಗ್ಗಾಟ ಇನ್ನೂ ಬಗೆಹರಿದಿಲ್ಲ.
ಈ ನಡುವೆ, ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಮೈತ್ರಿ ಎಂದರೆ, ಬಿಜೆಪಿಯ ಮೂಲೋತ್ಪಾಟನೆ ಎಂದೇ ಅರ್ಥ. ಅದನ್ನು ನಿಜ ಮಾಡುವ ನಿಟ್ಟಿನಲ್ಲಿ ಎಎಪಿಗೆ ನಾಲ್ಕು ಸ್ಥಾನ ಬಿಟ್ಟುಕೊಡಲು ಈಗಲೂ ಕಾಂಗ್ರೆಸ್ ಸಿದ್ಧವಿದೆ. ಆದರೆ, ಕೇಜ್ರಿವಾಲ್ ಅವರು ಮೈತ್ರಿ ವಿಷಯದಲ್ಲಿ ಮತ್ತೊಮ್ಮೆ ಯೂ ಟರ್ನ್ ಹೊಡೆದಿದ್ದಾರೆ. ಮೈತ್ರಿಯ ವಿಷಯದಲ್ಲಿ ಈಗಲೂ ಕಾಂಗ್ರೆಸ್ ಅವಕಾಶವನ್ನು ಮುಕ್ತವಾಗಿಟ್ಟುಕೊಂಡಿದೆ. ಆದರೆ, ಇನ್ನು ಹೆಚ್ಚಿನ ಸಮಯವಿಲ್ಲ” ಎಂದು ಸೋಮವಾರ ಸಂಜೆ ರಾಹುಲ್ ಗಾಂಧಿ ಟ್ವೀಟ್ ಮಾಡಿರುವುದು ಈ ವಿಷಯದಲ್ಲಿ ಮತ್ತೊಂದು ಸುತ್ತಿನ ಹಗ್ಗಜಗ್ಗಾಟಕ್ಕೆ ಚಾಲನೆ ನೀಡಿದೆ.
An alliance between the Congress & AAP in Delhi would mean the rout of the BJP. The Congress is willing to give up 4 Delhi seats to the AAP to ensure this.
But, Mr Kejriwal has done yet another U turn!
Our doors are still open, but the clock is running out. #AbAAPkiBaari
— Rahul Gandhi (@RahulGandhi) April 15, 2019
ರಾಹುಲ್ ಟ್ವೀಟ್ ಗೆ ಮರುಕ್ಷಣವೇ ಪ್ರತಿಕ್ರಿಯಿಸಿರುವ ಅರವಿಂದ್ ಕೇಜ್ರಿವಾಲ್ ಅವರು, “ಯಾವ ಯೂ ಟರ್ನ್? ಮೈತ್ರಿ ಕುರಿತ ಮಾತುಕತೆಗಳು ಈಗಲೂ ಮುಂದುವರಿದಿವೆ. ನಿಮ್ಮ ಟ್ವೀಟ್ ನೋಡಿದರೆ; ನಿಮಗೆ ಮೈತ್ರಿ ಬೇಕಿಲ್ಲ, ಬದಲಾಗಿ ಮೈತ್ರಿ ಹೆಸರು ಹೇಳಿಕೊಂಡು ಪ್ರಚಾರ ಪಡೆಯುವುದು ಮಾತ್ರ ಬೇಕಿದೆ ಎನಿಸುತ್ತದೆ. ನಿಮ್ಮ ಇಂತಹ ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡುತ್ತಿರುವುದನ್ನು ಕಂಡು ನನಗೆ ಬೇಸರವಾಗುತ್ತಿದೆ. ಇವತ್ತು ಮೋದಿ-ಶಾ ಜೋಡಿಯ ಅಪಾಯದಿಂದ ದೇಶವನ್ನು ಉಳಿಸುವುದು ನಮ್ಮ ಮುಂದಿನ ದೊಡ್ಡ ಉದ್ದೇಶವಾಗಬೇಕಿದೆ. ಆದರೆ, ನೀವು ಉತ್ತರಪ್ರದೇಶ ಮತ್ತು ಇತರ ಕಡೆಗಳಲ್ಲಿ ಮೋದಿ ವಿರೋಧಿ ಮತಗಳನ್ನು ವಿಭಜಿಸುವ ಮೂಲಕ ಅವರಿಗೇ ಅನುಕೂಲಮಾಡಿಕೊಡುತ್ತಿರುವುದು ದುರಾದೃಷ್ಟಕರ” ಎಂದು ತಿರುಗೇಟು ನೀಡಿದ್ದಾರೆ.
ಅಲ್ಲದೆ, ಎಎಪಿಯ ಸಂಜಯ್ ಸಿಂಗ್ ಕೂಡ ರಾಹುಲ್ ಗಾಂಧಿ ಟ್ವಿಟರ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, “ಪಂಜಾಬಿನಲ್ಲಿ ಎಎಪಿ ನಾಲ್ವರು ಸಂಸದರು ಮತ್ತು 20 ಮಂದಿ ಶಾಸಕರನ್ನು ಹೊಂದಿದೆ. ಆದರೆ, ಅಲ್ಲಿ ಕಾಂಗ್ರೆಸ್ ಒಂದು ಸೀಟನ್ನು ಕೂಡ ಎಎಪಿಗೆ ಬಿಟ್ಟುಕೊಡಲು ಸಿದ್ಧವಿಲ್ಲ. ಹರ್ಯಾಣದಲ್ಲಿ ಕಾಂಗ್ರೆಸ್ ಏಕೈಕ ಸಂಸದರನ್ನು ಹೊಂದಿದ್ದರೂ, ಅಲ್ಲಿ ಕೂಡ ಯಾವುದೇ ಸ್ಥಾನ ಹಂಚಿಕೆಗೆ ಸಿದ್ಧವಿಲ್ಲ. ಆದರೆ ದೆಹಲಿಯಲ್ಲಿ ಒಂದೇ ಒಂದು ಸಂಸದರನ್ನಾಗಲೀ, ಶಾಸಕರನ್ನಾಗಲೀ ಹೊಂದಿಲ್ಲದ ಕಾಂಗ್ರೆಸ್, ಮೂರು ಸ್ಥಾನಗಳನ್ನು ಬಿಟ್ಟುಕೊಡುವಂತೆ ನಮಗೆ ಕೇಳುತ್ತಿದೆ. ಇದನ್ನು ಹೊಂದಾಣಿಕೆ ಎನ್ನುತ್ತಾರ? ದೆಹಲಿಯಲ್ಲಷ್ಟೇ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಮಾತನಾಡುವ ನೀಡುವ ನೀವು ಬೇರೆ ರಾಜ್ಯದಲ್ಲೂ ಯಾಕೆ ಆ ಕಾಳಜಿ ವಹಿಸುತ್ತಿಲ್ಲ?” ಎಂದು ಸವಾಲೆಸಿದಿದ್ದಾರೆ.
ಈ ಮೊದಲು ಲೋಕಸಭಾ ಚುನಾವಣಾ ಮೈತ್ರಿ ಮಾತುಕತೆ ಆರಂಭದಲ್ಲಿ; ಎಎಪಿ ದೆಹಲಿ, ಪಂಜಾಬ್, ಹರ್ಯಾಣ ಹಾಗೂ ಗೋವಾ ಸೇರಿದಂತೆ ಒಟ್ಟು 33 ಲೋಕಸಭಾ ಸ್ಥಾನಗಳನ್ನು ತನಗೆ ಬಿಟ್ಟುಕೊಡುವಂತೆ ಕಾಂಗ್ರೆಸ್ ಮುಂದೆ ಷರತ್ತು ಒಡ್ಡಿತ್ತು. ಆದರೆ, ತನ್ನ ಸರ್ಕಾರವಿರುವ ಪಂಜಾಬ್ ಮತ್ತು ಸಾಕಷ್ಟು ಪ್ರಾಬಲ್ಯವಿರುವ ಗೋವಾ ಮತ್ತು ಹರ್ಯಾಣದಲ್ಲಿ ಎಎಪಿಯೊಂದಿಗೆ ಮೈತ್ರಿಗೆ ಆಸಕ್ತಿ ವಹಿಸದ ಕಾಂಗ್ರೆಸ್, ಕೇವಲ ದೆಹಲಿಯಲ್ಲಿ ಮಾತ್ರ ಹೊಂದಾಣಿಕೆಗೆ ಉತ್ಸುಕವಾಗಿತ್ತು. ಆ ಹಿನ್ನೆಲೆಯಲ್ಲಿ ದೆಹಲಿಯ ಒಟ್ಟು ಏಳು ಲೋಕಸಭಾ ಸ್ಥಾನಗಳ ಪೈಕಿ ನಾಲ್ಕನ್ನು ಎಎಪಿಗೆ ಬಿಟ್ಟುಕೊಡುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದರು.
ವಾರಗಳ ಕಾಲ ನಡೆದ ಹಗ್ಗಜಗ್ಗಾಟದ ಬಳಿಕ, ಭಾನುವಾರ ತಮ್ಮ ನಿಲುವನ್ನು ಸಡಿಲಿಸಿದ್ದ ಎಎಪಿ ನಾಯಕ ಕೇಜ್ರಿವಾಲ್, ಮೋದಿ- ಅಮಿತ್ ಶಾ ಜೋಡಿಯಿಂದ ದೇಶವನ್ನು ಬಚಾವು ಮಾಡಲು ತಾವು ಯಾವ ಹೊಂದಾಣಿಕೆಗೂ ಸಿದ್ಧ ಎಂದು ಹೇಳಿದ್ದರು. ದೆಹಲಿಯಲ್ಲಿ ಭಾನುವಾರ ನಡೆದ ವಿವಿಧ ಪ್ರತಿಪಕ್ಷಗಳ ನಾಯಕರ ಸಭೆಯ ಬಳಿಕ ಹೊರಬಿದ್ದಿದ್ದ ಕೇಜ್ರಿವಾಲ್ ಅವರ ಈ ಹೇಳಿಕೆ ಮತ್ತೆ ಕಾಂಗ್ರೆಸ್- ಎಎಪಿ ಮೈತ್ರಿಯ ಸಾಧ್ಯತೆಯ ಸೂಚನೆ ನೀಡಿತ್ತು.
ಆದರೆ, ಎರಡೂ ಪಕ್ಷಗಳು ಅಂತಿಮ ನಿರ್ಧಾರಕ್ಕೆ ಬರುವ ಮುನ್ನವೇ, ಇದೀಗ ರಾಹುಲ್ ಅವರು ಕೇಜ್ರಿವಾಲ್ ಅವರ ಮೇಲೆಯೇ ಗೂಬೆ ಕೂರಿಸುವ ಯತ್ನ ಮಾಡಿರುವುದು ಮೈತ್ರಿ ವಿಷಯದಲ್ಲಿ ಉಭಯ ಪಕ್ಷಗಳ ನಡುವೆ ಮತ್ತಷ್ಟು ಆರೋಪ-ಪ್ರತ್ಯಾರೋಪಕ್ಕೆ ಚಾಲನೆ ನೀಡಿದೆ. ಅದೇ ಹೊತ್ತಿಗೆ, ‘ಮೈತ್ರಿ ವಿಷಯದಲ್ಲಿ ಕಾಂಗ್ರೆಸ್ ಬಾಗಿಲು ಇನ್ನೂ ತೆರೆದೇ ಇದೆ’ ಎಂಬ ವಾಕ್ಯವನ್ನೂ ಅವರು ಸೇರಿಸಿರುವುದರಿಂದ ಮತ್ತು ರಾಹುಲ್ ಹೇಳಿಕೆಗೆ ನೀಡಿರುವ ತಮ್ಮ ಪ್ರತಿಕ್ರಿಯೆಯಲ್ಲಿ ಕೇಜ್ರಿವಾಲ್ ಕೂಡ, ‘ಮಾತುಕತೆಗಳು ಇನ್ನೂ ಮುಗಿದಿಲ್ಲ’ ಎಂದಿರುವುದರಿಂದ ಉಭಯ ಪಕ್ಷಗಳ ಮೈತ್ರಿಯ ಅಧ್ಯಾಯ ಇನ್ನೂ ಮುಗಿದಿಲ್ಲ ಎಂಬ ಸೂಚನೆಯಂತೂ ಸಿಕ್ಕಿದೆ.
ದೆಹಲಿಯಲ್ಲಿ ಮೇ 12ರಂದು ಆರನೇ ಹಂತದ ಚುನಾವಣೆಯಲ್ಲಿ ಮತದಾನ ನಡೆಯಲಿರುವುದರಿಂದ, ಕಾಂಗ್ರೆಸ್- ಎಎಪಿ ಮೈತ್ರಿ ಮಾತುಕತೆಗಳನ್ನು ಅಂತಿಮಗೊಳಿಸಲು ಇನ್ನೂ ಕಾಲ ಮಿಂಚಿಲ್ಲ. ಆದರೆ, ಈ ವಿಷಯದಲ್ಲಿ ಉಭಯ ನಾಯಕರ ನಡುವಿನ ಬಹಿರಂಗ ವಾಕ್ಸಮರ ಎಷ್ಟರಮಟ್ಟಿಗೆ ಒಟ್ಟಾರೆ ಮಾತುಕತೆಯ ಮೇಲೆ ಪರಿಣಾಮ ಬೀರಲಿದೆ ಎಂಬುದರ ಮೇಲೆ ಎಲ್ಲವೂ ನಿಂತಿದೆ.