ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ 72 ತಾಸು ಹಾಗೂ ಬಿ ಎಸ್ ಪಿ ನಾಯಕಿ ಮಾಯಾವತಿ ಅವರಿಗೆ 48 ತಾಸುಗಳ ಕಾಲ ಲೋಕಸಭಾ ಚುನಾವಣಾ ಪ್ರಚಾರದಿಂದ ಹೊರಕ್ಕುಳಿಯುವಂತೆ ಚುನಾವಣಾ ಆಯೋಗವು ಆದೇಶ ಹೊರಡಿಸಿದೆ. ತಮ್ಮ ಭಾಷಣದ ಸಂದರ್ಭದಲ್ಲಿ ಮಿತಿ ಮೀರಿ ಆಡಿದ ಮಾತುಗಳನ್ನಾಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣದಿಂದ ಆಯೋಗ ಈ ನಿಷೇಧ ಹೊರಡಿಸಿದೆ ಎನ್ನಲಾಗಿದೆ. ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ಈ ನಿಷೇಧ ಜಾರಿಯಲ್ಲಿರುತ್ತದೆ.
ಇದಕ್ಕೂ ಮುನ್ನ ಮಾಯಾವತಿ ಹಾಗೂ ಯೋಗಿ ಆದಿತ್ಯನಾಥ ಅವರು ಭಾಷಣ ಮಾಡುವಾಗ ದ್ವೇಷ ಬಿತ್ತುವ ಮಾತುಗಳನ್ನಾಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಸುಪ್ರೀಂ ಚುನಾವಣಾ ಆಯೋಗದಿಂದ ಮಾಹಿತಿ ಕೇಳಿತ್ತು.
ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ನೇತೃತ್ವದ ಪೀಠವು ಶಾರ್ಜಾದಲ್ಲಿರುವ ಎನ್ನಾರೈ ಶಿಕ್ಷಕರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆ ನಡೆಸಿತ್ತು. ಈ ದಾವೆಯಲ್ಲಿ ಚುನಾವಣೆಯ ಸಂದರ್ಭದಲ್ಲಿ ಜಾತಿ ಮತ್ತು ಧರ್ಮಗಳನ್ನು ಗುರಿಪಡಿಸಿಕೊಂಡು ದ್ವೇಷಪೂರಿತವಾಗಿ ಭಾಷಣ ಮಾಡುವ ವ್ಯಕ್ತಿಗಳ ಮೇಲೆ ಚುನಾವಣಾ ಆಯೋಗವು ಸೂಕ್ತ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲು ಮನವಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಚುನಾವಣಾ ಭಾಷಣಗಳಲ್ಲಿ ದ್ವೇಷದ ಮಾತುಗಳನ್ನು ಆಡುವವರ ಕುರಿತು ಕ್ರಮ ಕೈಗೊಳ್ಳಲು ತನಗೆ ಸೀಮಿತಿ ಅಧಿಕಾರವಿದೆ ಎಂದು ತಿಳಿಸಿತ್ತು.