ಸುಶಿಕ್ಷಿತ ಮತದಾರರೇ ಹೆಚ್ಚಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಎರಡು ದಶಕಗಳ ನಂತರ ಅನಂತ್ ಕುಮಾರ್ ಅವರು ಇಲ್ಲದೇ ಚುನಾವಣೆ ನಡೆಯುತ್ತಿದೆ. ಹೌದು, ಮಾಜಿ ಕೇಂದ್ರ ಸಚಿವ, ಬಿಜೆಪಿಯ ಹಿರಿಯ ನಾಯಕ ಅನಂತ್ ಕುಮಾರ್ 1996ರಿಂದ ಈ ಕ್ಷೇತ್ರದಲ್ಲಿ ಸತತವಾಗಿ ಗೆಲ್ಲುತ್ತಾ ಬಂದಿದ್ದರು. ಅವರ ನಿಧನದಿಂದಾಗಿ ಚುನಾವಣೆ ಘೋಷಣೆಯಾಗುವುದಕ್ಕಿಂತಲೂ ಮೊದಲೇ ತೆರವಾಗಿದ್ದ ಈ ಕ್ಷೇತ್ರದಲ್ಲಿ ರಾಜಕಾರಣ ಮಾತ್ರ ಅವರ ಸುತ್ತಲೇ ಸುತ್ತುತ್ತಿದೆ.
ಮಾಜಿ ಮುಖ್ಯಮಂತ್ರಿಗಳಾದ ಕೆ. ಹನುಮಂತಯ್ಯ, ಆರ್. ಗುಂಡೂರಾವ್ ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದು ಇತಿಹಾಸ. ಅನಂತ್ ಕುಮಾರ್ ಗೆಲ್ಲುವುದಕ್ಕೂ ಮೊದಲು; ಅಂದರೆ 1991ರಲ್ಲಿಯೇ ವೆಂಕಟಗಿರಿಗೌಡ ಈ ಕ್ಷೇತ್ರದಲ್ಲಿ ಗೆದ್ದು, ಬಿಜೆಪಿಗೆ ಖಾತೆ ತೆರೆದುಕೊಟ್ಟಿದ್ದರು. ಆ ನಂತರ ಈ ಕ್ಷೇತ್ರ ಬಿಜೆಪಿಯ ಬಿಗಿ ಹಿಡಿತದಲ್ಲಿಯೇ ಇದೆ. 2009ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೃಷ್ಣ ಬೈರೇಗೌಡರು ಮಾತ್ರ ಈ ಬಿಜೆಪಿ ಕೋಟೆಗೆ ಲಗ್ಗೆ ಹಾಕುವ ಯತ್ನ ನಡೆಸಿದ್ದರು. 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಇನ್ಫೋಸಿಸ್ ನ ಸಹ ಸಂಸ್ಥಾಪಕ, ‘ಆಧಾರ್’ ರೂವಾರಿ ನಂದನ್ ನಿಲೇಕಣಿ ಕಣಕ್ಕಿಳಿದಿದ್ದರೂ, ನಿರೀಕ್ಷಿತ ಪೈಪೋಟಿ ನೀಡಿರಲಿಲ್ಲ.
ವ್ಯವಸ್ಥಿತವಾಗಿರುವ ಹೆಸರಾಂತ ಬಡಾವಣೆಗಳನ್ನು ಹೊಂದಿರುವ ಕ್ಷೇತ್ರದಲ್ಲಿ ಸಮಸ್ಯೆಗಳಿಲ್ಲ ಎಂದೇನೂ ಇಲ್ಲ. ಸಂಚಾರ ದಟ್ಟಣೆ ದಿನದಿಂದ ದಿನ್ನಕ್ಕೆ ಹೊಸ ಹೊಸ ತಲೆನೋವು ಸೃಷ್ಟಿಸುತ್ತಿದೆ. ಕೆಲ ಭಾಗದಲ್ಲಿ ಕುಡಿಯುವ ನೀರಿಗೆ ಪರದಾಡಬೇಕಾದ ಸ್ಥಿತಿ ಇದೆ. ಹೊಸದಾಗಿ ಅಭಿವೃದ್ಧಿಯಾಗುತ್ತಿರುವ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಕಣ್ಣಿಗೆ ರಾಚುತ್ತಿದೆ. ಕೊಳಗೇರಿಗಳು ನಗರದ ಅಭಿವೃದ್ಧಿಯನ್ನು ಅಣಕಿಸುತ್ತಿವೆ. ಆದರೆ ಇದೆಲ್ಲಕ್ಕಿಂತ ಹೆಚ್ಚಾಗಿ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ವಿಷಯಗಳೇ ಇದುವರೆಗೂ ಚುನಾವಣೆಯ ವಿಷಯವಾಗುತ್ತಾ ಬಂದಿರುವುದು ವಿಶೇಷ. ಈ ಬಾರಿ ಕೂಡ, ಬಿಜೆಪಿ, ಪ್ರಧಾನಿ ಮೋದಿಯವರ ಸಾಧನೆಯನ್ನೇ ಚುನಾವಣೆಯ ವಿಷಯವಾಗಿಸಲು ಪ್ರಯತ್ನಿಸುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ಹೇಗಾದರೂ ಮಾಡಿ ಸ್ಥಳೀಯ ವಿಷಯಗಳತ್ತ ಮತದಾರರ ಗಮನ ಸೆಳೆಯಬೇಕೆಂದು ಪ್ರಯತ್ನಿಸುತ್ತಿದೆ.
ಅನಂತ್ ಕುಮಾರ್ ಅವರ ಉತ್ತರಾಧಿಕಾರಿಯಾಗಿ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರಿಗೆ ರಾಜ್ಯ ಬಿಜೆಪಿ ಟಿಕೆಟ್ ನೀಡಲು ತೀರ್ಮಾನಿಸಿತ್ತು. ಅವರು ಆಗಲೇ ಚುನಾವಣಾ ಕಚೇರಿಯನ್ನು ತೆರೆದು, ಒಂದು ಹಂತದ ಪ್ರಚಾರವನ್ನೂ ಆರಂಭಿಸಿದ್ದರು. ‘ಹಸಿರು ಭಾನುವಾರ’ ಎಂಬ ಕಾರ್ಯಕ್ರಮದ ಮೂಲಕ ಕೇತ್ರದಾದ್ಯಂತ ಕಾರ್ಯಕರ್ತರನ್ನು ಸಂಘಟಿಸಿದ್ದ ಅವರಿಗೆ ‘ಅದಮ್ಯ ಚೇತನ’ ಸಂಸ್ಥೆ ಕಟ್ಟಿದ ಅನಭವವಿತ್ತು. ಆದರೆ ಪಕ್ಷದ ಹೈಕಮಾಂಡ್ ಕೊನೆಯ ಕ್ಷಣದಲ್ಲಿ ‘ಕೈ ಕೊಟ್ಟು’ ಪಕ್ಷದ ಯುವ ನೇತಾರ, ಹಿಂದುತ್ವದ ಪ್ರಖರ ಪ್ರತಿಪಾದಕ, ಮಾತುಗಾರ ತೇಜಸ್ವಿ ಸೂರ್ಯರನ್ನು ಕಣಕ್ಕಿಳಿಸಿದೆ.
ಒಂದು ಹಂತದಲ್ಲಿ ನಗರ ಬಿಜೆಪಿಯ ಮೇಲೆ ತಮ್ಮ ಹಿಡಿತವನ್ನು ಬಿಗಿಗೊಳಿಸಲು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರು ತೇಜಸ್ವಿನಿಗೆ ಟಿಕೆಟ್ ನೀಡುವುದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದರಾದರೂ, ‘ಅವರಿಗೆ ನೀಡುವುದು ಬೇಡವಾದರೆ ಯುವ ಮುಂದಾಳು ತೇಜಸ್ವಿಗೆ ನೀಡುತ್ತೇವೆ’ ಎಂದು ಪಕ್ಷದ ವರಿಷ್ಠರು ಹೇಳುತ್ತಿದ್ದಂತೆಯೇ, ಈ ತಂತ್ರಗಾರಿಕೆ ‘ಉಲ್ಟಾ’ ಹೊಡೆಯತ್ತದೆ ಎಂದುಕೊಂಡು ತೇಜಸ್ವಿನಿಯವರ ಪರವಾಗಿ ಬ್ಯಾಟಿಂಗ್ ಆರಂಭಿಸಿ, ಪ್ರಚಾರಕ್ಕೂ ಇಳಿದುಬಿಟ್ಟಿದ್ದರು!
ಕೊನೆಗೂ ಪಕ್ಷದ ಹೈಕಮಾಂಡ್ ತೇಜಸ್ವಿಗೇ ಟಿಕೆಟ್ ನೀಡಿ ‘ಸಾಮ್ರಾಟ್’ ಅಶೋಕ್ ಗೂ ಶಾಕ್ ನೀಡಿತ್ತು. ಈ ಎಲ್ಲ ಬೆಳವಣಿಗೆಯಿಂದಾಗಿ ಬಿಜೆಪಿ ಒಡೆದ ಮನೆಯಂತಾಗಿದ್ದು, ‘ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ’ ಎಂಬುದು ಪ್ರತಿ ಹಂತದಲ್ಲಿಯೂ ಕಾರ್ಯಕರ್ತರಿಗೆ ಮನವರಿಕೆಯಾಗುತ್ತಿದೆ. ಒಂದೆಡೆ ಶಾಸಕರಾದ ಅಶೋಕ್, ಸೋಮಣ್ಣ ಮತ್ತೊಂದೆಡೆ ತೇಜಸ್ವಿನಿ ಅನಂತ್ ಕುಮಾರ್ ಒಲ್ಲದ ಮನಸ್ಸಿನಿಂದ ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚಿಸುತ್ತಿದ್ದಾರೆ. ಅನಂತ್ ಕುಮಾರ್ ಅಭಿಮಾನಿಗಳಂತೂ ತೇಜಸ್ವಿನಿಯವರಿಗೆ ಟಿಕೆಟ್ ನೀಡದೇ ಇರುವುದಕ್ಕೆ ಒಳಗೊಳಗೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
‘ಯಾವ ಕಾರಣದಿಂದ ಪಕ್ಷ ತೇಜಸ್ವಿನಿಗೆ ಟಿಕೆಟ್ ನೀಡಿಲ್ಲ ಎಂಬುದನ್ನು ತಿಳಿಸಿ’ ಎಂಬ ಶಾಸಕ ವಿ. ಸೋಮಣ್ಣ ಮತ್ತಿತರ ನಾಯಕರ ಪ್ರಶ್ನೆಗೆ ಬಿಜೆಪಿ ಹೈಕಮಾಂಡ್ ಇದುವರೆಗೂ ಉತ್ತರ ನೀಡಿಲ್ಲ. ಸಂಘಟನಾ ಕಾರ್ಯದರ್ಶಿ ಸಂತೋಷ್ ನೀಡಿದ ‘ಡಿಎನ್ ಎ’ ಸೂತ್ರ ಕ್ಕೆ ಪಕ್ಷದಲ್ಲಿಯೇ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತೇಜಸ್ವಿನಿ ಅನಂತ್ ಕುಮಾರ್ ಗೆ ಪಕ್ಷದ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸುವ ಯತ್ನ ನಡೆದಿದೆಯಾದರೂ, ಅವರು ಈ ಹುದ್ದೆಯನ್ನು ಇನ್ನೂ ಒಪ್ಪಿಕೊಂಡಿಲ್ಲ.
ಇತ್ತ ಕಾಂಗ್ರೆಸ್ ನಲ್ಲಿ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆದೇ ಇತ್ತು. ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಮಾಜಿ ಶಾಸಕ ಪ್ರಿಯಕೃಷ್ಣ ಅವರ ಹೆಸರು ಕೇಳಿಬರುತ್ತಿತ್ತಾದರೂ ಇಬ್ಬರೂ ಸ್ಪರ್ಧಿಸಲು ಇಷ್ಟಪಟ್ಟಿರಲಿಲ್ಲ. ಈ ನಡುವೆ ಪ್ರಧಾನಿ ಮೋದಿಯೇ ಈ ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತಾರೆ ಎಂಬ ವದಂತಿ ಹರಡಿದ್ದರಿಂದ ಪಕ್ಷದ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆಯನ್ನಿಡಲು ನಿರ್ಧರಿಸಿ, ದೆಹಲಿ ರಾಜಕಾರಣದಲ್ಲಿ ಮಿಂಚುತ್ತಿದ್ದ ಬಿ.ಕೆ. ಹರಿಪ್ರಸಾದ್ ಅವರನ್ನು ಕಣಕ್ಕಿಳಿಸುವ ತೀರ್ಮಾನ ತೆಗೆದುಕೊಂಡು ಬಿಜೆಪಿಗಿಂತಲೂ ಮೊದಲೇ ಅಭ್ಯರ್ಥಿಯನ್ನು ಘೋಷಿಸಿತು. ಬೆಂಗಳೂರು ಉತ್ತರ ಕ್ಷೇತ್ರದಿಂದ ಅಥವಾ ಮಂಗಳೂರಿನಲ್ಲಿ ಕಣಕ್ಕಿಳಿಯಲು ಇಚ್ಛಿಸಿದ್ದ ಹರಿಪ್ರಸಾದ್ ಪಕ್ಷದ ಈ ತೀರ್ಮಾನವನ್ನು ಒಪ್ಪಿಕೊಂಡು ದಕ್ಷಿಣಕ್ಕೆ ಬಂದರು. ಅವರಿಗೆ ಈ ಕ್ಷೇತ್ರವೇನೂ ಹೊಸದಲ್ಲ, 1999ರಲ್ಲಿಯೇ ಈ ಕ್ಷೇತ್ರದಿಂದ ಅವರೊಮ್ಮೆ ಸ್ಪರ್ಧಿಸಿದ್ದರು.
ಹಿರಿಯರ ಅಸಮಾಧಾನದ ನಡುವೆ ಕಣಕ್ಕಿಳಿದ ತೇಜಸ್ವಿ ಸೂರ್ಯ, ಮಹಿಳಾ ಮೀಸಲು ವಿರೋಧಿ ನಿಲುವು, ಮೋದಿ ವಿರೋಧಿಗಳೆಲ್ಲಾ ದೇಶ ದ್ರೋಹಿಗಳೆಂಬ ಹೇಳಿಕೆ, ಹಿಂಸೆಯ ಮಾತು, ಅಲ್ಪಸಂಖ್ಯಾತ ವಿರೋಧಿ ಟ್ವೀಟ್ , ‘ಮೀ ಟೂ’ ಆರೋಪ, ಪತ್ರಿಕಾ ಸ್ವಾತಂತ್ರ್ಯದ ನಿರ್ಬಂಧ ಮತ್ತಿತರ ಕಾರಣಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ‘ಮತ್ತೊಮ್ಮೆ ಮೊದಿ’ಯ ಅಲೆ ಇದೆಲ್ಲವನ್ನೂ ಕೊಚ್ಚಿಕೊಂಡು ಹೋಗಿಬಿಡುತ್ತದೆ ಎಂಬ ಧೈರ್ಯದಲ್ಲಿ ಹೋದಲ್ಲಿ, ಬಂದಲ್ಲಿ ‘ಮೋದಿ… ಮೋದಿ’ ಎಂದು ಪ್ರಚಾರ ಮಾಡುತ್ತಿದ್ದಾರೆ. ಪಕ್ಷದ ನಾಯಕರ, ಶಾಸಕರ ಮುನಿಸನ್ನು ಒಂದಿಷ್ಟು ಶಮನ ಮಾಡಿರುವ ಆರ್ ಎಸ್ ಎಸ್, ಬಿಜೆಪಿ ಕೋಟೆಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸುತ್ತಿದೆ.
ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವ ಹರಿಪ್ರಸಾದ್ ಈ ಕ್ಷೇತ್ರಕ್ಕೆ ಬೇಕಾಗಿರುವ ಚಾಣಕ್ಷತನವನ್ನು ಮೈಗೂಡಿಸಿಕೊಂಡು ಬಿರುಸಿನ ಪ್ರಚಾರ ನಡೆಸಿದ್ದಾರೆ.
ಕ್ಷೇತ್ರದ ಫಲಿತಾಂಶದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದ್ದ ಜೆಡಿಎಸ್ ನ ಬೆಂಬಲ ಇರುವುದರಿಂದ ಅವರ ಹುಮ್ಮಸ್ಸು ಹೆಚ್ಚಿದೆ. ದೇವೇಗೌಡರ ಒಂದು ಸಂದೇಶ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂದು ಕಾಂಗ್ರೆಸ್ ನಂಬಿದೆ. ಬೇರೆ ಬೇರೆ ಕಾರಣಗಳಿಂದ ಈ ಭಾಗದ ಕಾಂಗ್ರೆಸ್ ಶಾಸಕರು, ನಾಯಕರು ಕೂಡ ಹರಿಪ್ರಸಾದ್ ಬೆಂಬಲಕ್ಕೆ ನಿಂತು, ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನ ದೊಡ್ಡ ಕೊರತೆ ಎಂದರೆ ಕ್ಷೇತ್ರದಾದ್ಯಂತ ಕೆಳ ಹಂತದಲ್ಲಿ ಕಾರ್ಯಕರ್ತರ ದೊಡ್ಡ ಪಡೆ ಇಲ್ಲದಿರುವುದು. ಪ್ರಚಾರದ ಸಂದರ್ಭದಲ್ಲಿಯೇ ಈ ಕೊರತೆ ಎದ್ದು ಕಾಣುತ್ತಿದೆ. ಪಕ್ಷ ಸತತವಾಗಿ ಸೋಲುತ್ತಲೇ ಬಂದಿರುವುದು ಇದಕ್ಕೆ ಕಾರಣವಾಗಿರಬಹುದು. ಅನಂತ್ ಕುಮಾರ್ ಕೇವಲ ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನಲ್ಲದೆ, ಬೇರೆ ಪಕ್ಷದ ಮತಗಳ ಬುಟ್ಟಿಗೂ ಕೈ ಹಾಕುತ್ತಿದ್ದರು. ಅವರ ಗೆಲವಿಗೆ ಬೆಂಬಲ ನೀಡುತ್ತಿದ್ದ ಕಾಣದ ‘ಕೈ’ಗಳೆಲ್ಲಾ ಈ ಬಾರಿ ಹಸ್ತಕ್ಕೆ ಮತ ಯಾಚಿಸುತ್ತಿರುವುದು ಬದಲಾವಣೆಗೆ ಕಾರಣವಾದರೂ ಆಗಬಹುದು.
ಕಳೆದ ಚುನಾವಣೆಯಲ್ಲಿ ‘ಆಧಾರ್’ ಯೋಜನೆಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ, ತಾವು ಗೆದ್ದರೆ ಈ ಯೋಜನೆಯನ್ನು ರದ್ದುಪಡಿಸುವುದಾಗಿ ಭರವಸೆ ನೀಡಿಯೇ ನಂದನ್ ನಿಲೇಕಣಿ ವಿರುದ್ಧ ಅನಂತ್ ಕುಮಾರ್ ಗೆದ್ದಿದ್ದರು. ಮುಂದೆ ಈ ಯೋಜನೆಯ ಜಾರಿಯನ್ನೇ ಬಿಜೆಪಿ ತನ್ನ ಸಾಧನೆ ಎಂದು ಬಣ್ಣಿಸಿಕೊಂಡಿದ್ದು ಬೇರೆ ಮಾತು. ಆದರೆ ಈಗ ಅನಂತ್ ಕುಮಾರ್ ವಿರುದ್ಧ ಒಂದೇ ಒಂದು ಮಾತನಾಡದೆ ಹರಿಪ್ರಸಾದ್ ಜಾಣತನ ತೋರಿಸುತ್ತಿದ್ದಾರೆ. ಅವರ ಅಭಿಮಾನಿಗಳು ಕಮಲದ ಬದಲಿಗೆ ‘ನೋಟ’ ಒತ್ತಿದರೆ ಅದೇ ತಮಗೆ ಲಾಭ ಎಂಬ ಲೆಕ್ಕಾಚಾರ ಅವರದು. ಕ್ಷೇತ್ರದ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಐದು ಮತ್ತು ಕಾಂಗ್ರೆಸ್ ಮೂರು ಕ್ಷೇತ್ರದಲ್ಲಿ ಗೆದ್ದಿವೆ. ಬಿಜೆಪಿ ಶಾಸಕರ ಪೈಕಿ ರವಿಸುಬ್ರಮಣ್ಯ ತನ್ನ ಅಣ್ಣನ ಮಗನಾಗಿರುವ ತೇಜಸ್ವಿಯನ್ನು ಗೆಲ್ಲಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಇನ್ನು ನಾಲ್ವರದು ತೋರಿಕೆಯ ಪ್ರಚಾರ.
ಬಿಜೆಪಿಯ ಹೊಸ ಮುಖದ ಪ್ರಯೋಗದಿಂದ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ಈ ಚುನಾವಣೆಯ ಫಲಿತಾಂಶ ಬದಲಾವಣೆಗಳಿಗೆ ಕಾರಣವಾಗುತ್ತದೆಯೇ ಎಂಬುದು ಅನಂತ್ ಕುಮಾರ್ ಬೆಂಬಲಿಗರ ನಿರ್ಧಾರದ ಮೇಲೆ ನಿಂತಿದೆ ಎನ್ನುತ್ತಿದ್ದಾರೆ ರಾಜಕೀಯ ಪಂಡಿತರು.