ಕಳೆದ ಮಾರ್ಚ್ 12 ಮತ್ತು ಏಪ್ರಿಲ್ 12ರ ನಡುವೆ ನರೇಂದ್ರ ಮೋದಿ ಸರ್ಕಾರದ ಜನಪ್ರಿಯತೆ ಸೂಚ್ಯಂಕ 12 ಪಾಯಿಂಟ್ ಕುಸಿದಿದೆ ಎಂದ ಸಿ-ವೋಟರ್-ಐಎಎನ್ಎಸ್ ಟ್ರ್ಯಾಕರ್ ಸಮೀಕ್ಷೆ ತಿಳಿಸಿದೆ.
ಫೆಬ್ರವರಿ 26ರಂದು ಬಾಲಾಕೋಟ್ನಲ್ಲಿ ನಡೆದಿದ್ದ ವಾಯುದಾಳಿಯ ನಂತರದ ದಿನಗಳಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಸಾಧನೆಯ ಸೂಚ್ಯಂಕವು ಉತ್ತುಂಗಕ್ಕೇರಿತ್ತು. ಮಾರ್ಚ್ 7ರಂದು ಈ ದರ ಗರಿಷ್ಠ ಮಟ್ಟವನ್ನು, ಅಂದರೆ 62.06 ಪಾಯಿಂಟ್ ಮುಟ್ಟಿತ್ತು.
ಮಾರ್ಚ್ 22ರ ವರೆಗೆ 50 ಪಾಯಿಂಟ್ನ ಆಸುಪಾಸಲ್ಲಿದ್ದ ಸರ್ಕಾರದ ಜನಪ್ರಿಯತೆ ಸೂಚ್ಯಂಕವು ಏಪ್ರಿಲ್ 12ರಂದು 43.25ಕ್ಕೆ ಕುಸಿದಿದೆ. ಏಪ್ರಿಲ್ 11ರಂದು ದೇಶದ 91 ಲೋಕಸಭಾ ಸ್ಥಾನಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆದಿತ್ತು. ಸರಿಯಾಗಿ ಒಂದು ತಿಂಗಳ ಹಿಂದೆ, ಅಂದರೆ ಮಾರ್ಚ್ 12ರಂದು ಸರ್ಕಾರದ ಜನಪ್ರಿಯತೆ ಸೂಚ್ಯಂಕ 55.28 ಇತ್ತು.
ಬಿಜೆಪಿ ನೇತೃತ್ವದಲ್ಲಿ ಆಡಳಿತ ನಡೆಸುತ್ತಿರುವ ಕೇಂದ್ರ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಸಮೀಕ್ಷೆ ನಡೆಸಲಾಗಿ ಜನರಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಸರ್ಕಾರದ ಕಾರ್ಯಸಾಧನೆಯ ಕುರಿತು “ತುಂಬಾ ಸಮಾಧಾನ ತಂದಿದೆ”, “ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ”, “ಸಮಾಧಾನಕರವಾಗಿಲ್ಲ” ಮತ್ತು “ಗೊತ್ತಿಲ್ಲ/ಹೇಳಲಾಗದು” ಎಂಬ ಉತ್ತರಗಳಲ್ಲಿ ಒಂದನ್ನು ಆಯ್ದುಕೊಳ್ಳಲು ತಿಳಿಸಲಾಗಿತ್ತು. ಈ ರೀತಿ ಸಮೀಕ್ಷೆಗೊಳಪಟ್ಟವರು ನೀಡಿದ ಉತ್ತರಗಳನ್ನು ಆಧರಿಸಿ ಸಿ-ವೋಟರ್-ಐಎಎನ್ಎಸ್ ಟ್ರ್ಯಾಕರ್ ಫಲಿತಾಂಶ ಬಿಡುಗಡೆ ಮಾಡಿದೆ.
ಮಾರ್ಚ್ 7ರಂದು ಸರ್ಕಾರದ ಕಾರ್ಯವೈಖರಿ ತುಂಬಾ ಸಮಾಧಾನ ತಂದಿದೆ ಎಂದು ಶೇ.51.32ರಷ್ಟು ಜನ ಉತ್ತರಿಸಿದ್ದರು. ಆದರೆ ಎಲ್ಲಾ ಪ್ರತಿಕ್ರಿಯೆಗಳನ್ನೂ ಒಟ್ಟುಗೂಡಿಸಿ ನೋಡಿದಾಗ ಒಟ್ಟಾರೆ ಜನಪ್ರಿಯತೆ ನಿರಂತರವಾಗಿ ಇಳಿಮುಖವಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ ಫುಲ್ವಾಮಾ ದಾಳಿಗೂ ಮೊದಲು ವ್ಯಕ್ತವಾಗಿದ್ದ ಅಭಿಪ್ರಾಯವನ್ನು ಈಗ ಜನ ಪುನಃ ವ್ಯಕ್ತಪಡಿಸುತ್ತಿದ್ದಾರೆಂಬ ಅಂಶ ಸ್ಪಷ್ಟವಾಗಿದೆ.
ಜನವರಿ 1ರಂದು ಸರ್ಕಾರದ ಒಟ್ಟಾರೆ ಜನಪ್ರಿಯತೆ ದರವು 32.4 ಇದ್ದು ಇಡೀ ತಿಂಗಳು 30ರಿಂದ 40 ಪಾಯಿಂಟ್ಗಳ ನಡುವೆ ತೂಗಾಡುತ್ತಿತ್ತು. ಫೆಬ್ರವರಿ 14ರಂದು ಫುಲ್ವಾಮಾ ದಾಳಿಯಾದ ಕೂಡಲೇ ಸರ್ಕಾರದ ಜನಪ್ರಿಯತೆ ಏರಿದ್ದು, ಪಾಕಿಸ್ತಾನದ ಬಾಲಾಕೋಟ್ ದಾಳಿಯ ನಂತರ ಮುಗಿಲು ಮುಟ್ಟಿತ್ತು ಎಂದು ಸಿ-ವೋಟರ್-ಐಎಎನ್ಎಸ್ ಸಮೀಕ್ಷಾ ವರದಿ ಬಹಿರಂಗಪಡಿಸಿದೆ.