ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತೀವ್ರ ಗಾಯಗೊಂಡು ತಿರುವನಂತಪುರದ ಆಸ್ಪತ್ರೆಯಲ್ಲಿ ದಾಖಲಾಗಿರುವ ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ಒಂದು ಕಡೆ ರಾಜಕಾರಣಿಗಳು ಪರಸ್ಪರ ದ್ವೇಷ ಕಾರುತ್ತಿರುವಾಗ ಚುನಾವಣಾ ಬಿಸಿಯಲ್ಲೂ ಪರಸ್ಪರ ವಿರೋಧಿಸುವ ಪಕ್ಷಗಳ ನಾಯಕರು ಹೀಗೆ ಮಾನವೀಯವಾಗಿ ನಡೆಸುಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ.
ತಮ್ಮನ್ನು ಭೇಟಿ ಮಾಡಿರುವ ನಿರ್ಮಲಾ ಸೀತಾರಾಮನ್ ಅವರ ಒಳ್ಳೆಯತನಕ್ಕೆ ಶಶಿತರೂರ್ ಕೃತಜ್ಞತೆ ಸಲ್ಲಿಸಿದ್ದಾರೆ.
“ತಮ್ಮ ಬಿಡುವಿರದ ಚುನಾವಣಾ ಪ್ರಚಾರದ ನಡುವೆಯೂ ಇಂದು ನನ್ನನ್ನು ಆಸ್ಪತ್ರೆಯಲ್ಲಿ ಬಂದು ಭೇಟಿ ಮಾಡಿದ ನಿರ್ಮಲಾ ಸೀತಾರಾಮನ್ ಅವರ ಸ್ಪಂದನೆ ನನ್ನ ಮನಸ್ಸಿಗೆ ನಾಟಿದೆ. ಭಾರತದ ರಾಜಕಾರಣದಲ್ಲಿ ಇಂತಹದ ನಾಗರಿಕ ವರ್ತನೆ ಎಂಬುದು ತೀರಾ ಅಪರೂಪವಾಗಿಬಿಟ್ಟಿದೆ. ತಮ್ಮಸನ್ನಡೆತೆಯ ಮೂಲಕ ನಿರ್ಮಲಾ ಅವರು ಅದನ್ನು ತೋರಿರುವುದು ಮಹತ್ವದ ಸಂಗತಿ ಎಂದು ಭಾವಿಸುತ್ತೇನೆ” ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.
ಕೇರಳದಲ್ಲಿ ದೇವಸ್ಥಾನವೊಂದರಲ್ಲಿ ತುಲಾಭಾರ ನೆರವೇಸಿರಿಸುವ ಸಂದರ್ಭದಲ್ಲಿ ಸಂಭವಿಸಿದ ಅನಾಹುತದಲ್ಲಿ ತುಲಾಭಾರದ ಕಬ್ಬಿಣದ ಸರಳು ತಲೆಯ ಮೇಲೆ ಬಿದ್ದು ಶಶಿ ತರೂರ್ ಗಾಯಗೊಂಡಿದ್ದರು. ಅವರನ್ನು ತ್ರಿವೇಂದ್ರಂ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Touched by the gesture of @nsitharaman, who dropped by today morning to visit me in the hospital, amid her hectic electioneering in Kerala. Civility is a rare virtue in Indian politics – great to see her practice it by example! pic.twitter.com/XqbLf1iCR5
— Shashi Tharoor (@ShashiTharoor) April 16, 2019
ತ್ರಿವೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಶಶಿತರೂರ್ ಸಿಪಿಐ ಪಕ್ಷದ ಸಿ ದಿವಾಕರನ್ ಹಾಗೂ ಬಿಜೆಪಿಯ ರಾಜಶೇಖರನ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಅಭ್ಯರ್ಥಿಯ ಪರವಾಗಿ ರೋಡ್ ಶೋನಲ್ಲಿ ಭಾಗವಹಿಸಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ಶಶಿತರೂರ್ ಆಸ್ಪತ್ರೆಗೆ ದಾಖಲಾಗಿರುವುದು ತಿಳಿದು, ಅವರನ್ನು ಭೇಟಿ ಮಾಡಿ, ಶೀಘ್ರವಾಗಿ ಗುಣಮುಖರಾಗಲು ಹಾರೈಸಿ ಸದ್ಭಾವನೆ ಮೆರೆದಿದ್ದಾರೆ.