ಇದು ಚೌಕೀದಾರ ನರೇಂದ್ರ ಮೋದಿ ಮತ್ತು 36 ಮಂದಿ ವಂಚಕರ ಕತೆ! ಭಾರತದ ವ್ಯಥೆ!
ಪ್ರಧಾನಿ ನರೇಂದ್ರ ಮೋದಿ ತಾನು ‘ಚೌಕಿದಾರ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ನಿಜಾ, ಅವರು ಚೌಕಿದಾರರೇ ಇರಬಹುದು. ಆದರೆ, ಅವರೊಬ್ಬ ಅಸಮರ್ಥ ಚೌಕಿದಾರ ಎಂಬುದು ಸಾಬೀತಾಗಿದೆ. ಅವರ ಚೌಕಿದಾರಿಕೆಯಲ್ಲಿ 36 ವಂಚಕರು ದೇಶದ ವಿವಿಧ ಬ್ಯಾಂಕುಗಳು, ಸಂಸ್ಥೆಗಳಿಗೆ ಒಟ್ಟು 40,000 ಕೋಟಿ ರುಪಾಯಿ ವಂಚಿಸಿ ಪರಾರಿಯಾಗಿದ್ದಾರೆ. ಅಂದರೆ ನರೇಂದ್ರ ಮೋದಿ ಚೌಕಿದಾರಿಕೆ ಸರಿಯಿಲ್ಲ. ಅವರಿಗೆ ಸಮರ್ಥವಾಗಿ ಚೌಕಿದಾರಿಕೆ ಮಾಡಲು ಬರುವುದಿಲ್ಲ ಎಂದೇ ಇದರ ಅರ್ಥ. ಅಥವಾ ನೀರವ್ ಮೋದಿ, ಲಲಿತ್ ಮೋದಿ ಸಹ ಪರಾರಿಯಾಗಿರುವ 36 ದೇಶಭ್ರಷ್ಟರ ಪಟ್ಟಿಯಲ್ಲಿರುವುದರಿಂದ ಖುದ್ದು ಚೌಕಿದಾರನೇ ಕಳ್ಳನಿಗೆ ಕೀಲಿಕೊಟ್ಟು ಸಹಕರಿಸಿರಬಹುದೇ? ಎಂಬ ಅನುಮಾನವೂ ಕಾಡುತ್ತಿದೆ.
ಕಳೆದ ಚುನಾವಣೆಯಲ್ಲಿ ತಮ್ಮನ್ನು ತಾವು ಸೇವಕ ಎಂದು ಕರೆದುಕೊಂಡು ಅಧಿಕಾರ ಗಿಟ್ಟಿಸಿಕೊಂಡ ನಂತರ ‘ಪ್ರಧಾನ ಸೇವಕ’ರಾದ ನರೇಂದ್ರ ಮೋದಿ ಐದು ವರ್ಷಗಳ ಕಾಲ ‘ದೇಶೋದ್ಧಾರ’ ಮಾಡಿ 2019ರ ಚುನಾವಣೆಯಲ್ಲಿ ಚೌಕಿದಾರ ಅವತಾರ ಎತ್ತಿದ್ದಾರೆ. ಈಗ ಇಡೀ ದೇಶದಲ್ಲಿ ಚೌಕಿದಾರರದ್ದೇ ಹವಾ!
ನರೇಂದ್ರ ಮೋದಿ ‘ಚೌಕಿದಾರಿಕೆ‘ ಸರಿಯಿಲ್ಲ ಎಂಬುದನ್ನು ಪರೋಕ್ಷವಾಗಿ ಜಾರಿ ನಿರ್ದೇಶನಾಲಯವೇ ಹೇಳಿದೆ. ಅಗಸ್ಟಾವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಫ್ಟರ್ ಹಗರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದ ಮುಂದೆ ಸೋಮವಾರ ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯದ ಪರ ಅಭಿಯೋಜಕರಾದ ಎನ್ ಕೆ ಮತ್ತಾ ಮತ್ತು ಡಿ ಪಿ ಸಿಂಗ್ ಅವರು ಈ ಮಾಹಿತಿ ನೀಡಿದ್ದಾರೆ. ‘ಇತ್ತೀಚಿನ ವರ್ಷಗಳಲ್ಲಿ ವಿಜಯ್ ಮಲ್ಯ, ನೀರವ್ ಮೋದಿ, ಲಲಿತ್ ಮೋದಿ, ಮೆಹುಲ್ ಚೋಕ್ಸಿ ಸೇರಿದಂತೆ 36 ಮಂದಿ ವಂಚಿಸಿ ದೇಶಬಿಟ್ಟು ಪರಾರಿಯಾಗಿದ್ದಾರೆ. ಆದ್ದರಿಂದ ಅಗಸ್ಟಾ ವೆಸ್ಟ್ ಲ್ಯಾಂಡ್ ಆರೋಪಿ ಸುಶೇನ್ ಮೋಹನ್ ಗುಪ್ತಾಗೆ ಜಾಮೀನು ನೀಡಬಾರದು, ನೀಡಿದರೆ, ನೀರವ್ ಮೋದಿ, ಮಲ್ಯ ರೀತಿಯಲ್ಲಿ ದೇಶಬಿಟ್ಟು ಪರಾರಿಯಾಗುವ ಸಾಧ್ಯತೆ ಇದೆ’ ಎಂದು ಮನವಿ ಮಾಡಿದ್ದಾರೆ. ‘ವಿಜಯ್ ಮಲ್ಯ, ಲಲಿತ್ ಮೋದಿ, ನೀರವ್ ಮೋದಿ, ಮೆಹುಲ್ ಚೊಕ್ಸಿ ಮತ್ತು ಸಂದೇಸರ ಸಹೋದರರ ಸಂಬಂಧಗಳು ನಮ್ಮ ಸಮಾಜದೊಂದಿಗೆ ಆಳವಾಗಿ ಬೇರುಬಿಟ್ಟಿವೆ, ಆದರೂ ಅವರು ದೇಶ ಬಿಟ್ಟು ಪರಾರಿಯಾಗಿದ್ದಾರೆ. ಇವರು ಸೇರಿದಂತೆ 36 ಮಂದಿ ಇತ್ತೀಚಿನ ವರ್ಷಗಳಲ್ಲಿ ವಂಚನೆ ಮಾಡಿ ದೇಶಬಿಟ್ಟು ಪರಾರಿಯಾಗಿದ್ದಾರೆ’ ಎಂದು ಜಾರಿ ನಿರ್ದೇಶನಾಲಯದ ಅಭಿಯೋಜಕರು ವಿಶೇಷ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ನರೇಂದ್ರ ಮೋದಿ ಚೌಕಿದಾರಿಕೆಯಲ್ಲಿ ದೇಶಬಿಟ್ಟು ಪರಾರಿಯಾಗಿರುವ ವಂಚಕರು ವಿವಿಧ ಬ್ಯಾಂಕುಗಳು, ಸಂಸ್ಥೆಗಳಿಗೆ ವಂಚಿಸಿರುವ ಮೊತ್ತ 40,000 ಕೋಟಿ ರುಪಾಯಿಗಳು!

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಲೋಕಸಭೆಗೆ ಸಲ್ಲಿಸಿರುವ ಅಂಕಿ ಅಂಶಗಳ ಕುರಿತಂತೆ ‘ದಿ ಮಿಂಟ್’ 2018 ಏಪ್ರಿಲ್ 19ರಂದು ಪ್ರಕಟಿಸಿರುವ ವರದಿ ಪ್ರಕಾರ ಬ್ಯಾಂಕುಗಳು, ಸಾರ್ವಜನಿಕ ಸಂಸ್ಥೆಗಳಿಗೆ ವಂಚಿಸಿರುವ 15 ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಮತ್ತು ಕೇಂದ್ರೀಯ ತನಿಖಾ ದಳ(ಸಿಬಿಐ) 31 ವ್ಯಕ್ತಿಗಳ ವಿರುದ್ಧ ತನಿಖೆ ನಡೆಸುತ್ತಿದ್ದು, ವಂಚನೆ ಮಾಡಿರುವ ಒಟ್ಟು ಮೊತ್ತವು 40000 ಕೋಟಿ ರುಪಾಯಿಗಳು.
ವಂಚನೆ ಮಾಡಲಾಗಿರುವ 40,000 ಕೋಟಿ ರುಪಾಯಿಗಳ ಪೈಕಿ ನೀರವ್ ಮೋದಿ ಮತ್ತವರ ಕುಟುಂಬದ ಸಂಬಂಧಿಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚಿಸಿರುವ ಮೊತ್ತ 12,636 ಕೋಟಿ ರುಪಾಯಿಗಳು. (ನಂತರ ಮುಂದುವರೆದ ತನಿಖೆಯಿಂದ ನೀರವ್ ಮೋದಿ ವಂಚಿಸಿದ ಮೊತ್ತವು 13,800 ಕೋಟಿಗೆ ಏರಿದೆ) ನೀರವ್ ಮೋದಿ, ಆತನ ಪತ್ನಿ ಅಮಿ ಮೋದಿ, ಸಹೋದರ ನಿಶಾಲ್ ಮೋದಿ ಅವನ ಸೋದರ ಸಂಬಂಧಿ ಮೆಹುಲ್ ಚೊಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚಿಸಿರುವ ಅತಿಹೆಚ್ಚು ಮೊತ್ತ ಅಂದರೆ, 13,800 ಕೋಟಿ ರುಪಾಯಿ. ವಿಜಯ್ ಮಲ್ಯ ಕಿಂಗ್ ಫಿಶರ್ ಏರ್ಲೈನ್ಸ್ ಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವ ವಿವಿಧ ಬ್ಯಾಂಕುಗಳ ಸಮೂಹದಿಂದ 9,000 ಕೋಟಿ ಸಾಲ ಪಡೆದು ಮರುಪಾವತಿ ಮಾಡದೇ ವಂಚಿಸಿ ಪರಾರಿಯಾಗಿದ್ದಾರೆ. ವಿನ್ಸಮ್ ಡೈಮಂಡ್ ಮಾಲೀಕ ಜತಿನ್ ಮೆಹ್ತಾ 7,000 ಕೋಟಿ ರುಪಾಯಿ ವಂಚಿಸಿದ್ದಾನೆ. ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ 125 ಕೋಟಿ ವಂಚಿಸಿ ಪರಾರಿಯಾಗಿದ್ದಾನೆ. ಸ್ಟರ್ಲಿಂಗ್ ಬಯೋಟೆಕ್ ನಿರ್ದೇಶಕರಾದ ಚೇತನ್ ಜಯಂತಿಲಾಲ್ ಸಂದೇಸರ ಮತ್ತು ನಿತಿನ್ ಜಯಂತಿಲಾಲ್ ಸಂದೇಸರ ಬ್ಯಾಂಕುಗಳಿಗೆ ಮಾಡಿರುವ ವಂಚನೆಯ ಮೊತ್ತ 5,000 ಕೋಟಿ ರುಪಾಯಿಗಳು. ಮುಂಬೈ ಮೂಲದ ಜವಳಿ ರಪ್ತು ಮಾಡುವ ಎಬಿಸಿ ಕಾಟ್ ಸ್ಪಿನ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ಆಶಿಸ್ ಜೊಬನ್ ಪುತ್ರಾ ಮತ್ತು ಆತನ ಪತ್ನಿ 770 ಕೋಟಿ ರುಪಾಯಿ ವಂಚಿಸಿದ್ದಾರೆ. ವಜ್ರದ ವ್ಯಾಪಾರಿ ರಿತೇಶ್ ಜೈನ್ 1,500 ಕೋಟಿ ರುಪಾಯಿ ವಂಚಿಸಿ ವಿದೇಶಕ್ಕೆ ಹಾರಿದ್ದಾನೆ. ವಂಚನೆ ಪ್ರಕರಣ ಎದುರಿಸುತ್ತಿರುವ ಸುರೇಂದರ್ ಸಿಂಗ್, ಅಂಗದ್ ಸಿಂಗ್ ಮತ್ತು ಹರ್ಸಾಹಿಬ್ ಸಿಂಗ್ ವಿದೇಶಕ್ಕೆ ಹಾರಿದ್ದಾರೆ. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಗೆ 390 ಕೋಟಿ ವಂಚಿಸಿರುವ ಸಭ್ಯ ಸೇಥ್, 150 ಕೋಟಿ ರುಪಾಯಿ ತೆರಿಗೆ ವಂಚಿಸಿರುವ ಸಂಜಯ್ ಭಂಡಾರಿ ಸಹ ವಿದೇಶಕ್ಕೆ ಹಾರಿದ್ದಾರೆ. 2,223 ಕೋಟಿ ವಂಚಿಸಿ ಪರಾರಿಯಾಗಿದ್ದ ಗಣೇಶ್ ಜ್ಯುವೆಲರಿ ಹೌಸ್ ಮಾಲೀಕ ನಿಲೇಶ್ ಪಾರೇಖ್ ದೇಶಕ್ಕೆ ಮರಳಿದಾಗ ಸಿಬಿಐ ಬಂಧಿಸಿ ತನಿಖೆ ನಡೆಸಿತ್ತು. ಉಳಿದ ವಂಚಕರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

ಈಗಾಗಲೇ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ ಜಾರಿಗೆ ಬಂದಿದೆ. ಆದರೆ, ಘೋಷಿತ ದೇಶಭ್ರಷ್ಟರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆದಿದೆ. ದೇಶಬಿಟ್ಟು ಪರಾರಿಯಾಗಿರುವವರು ಆಡಳಿತ ಪಕ್ಷದೊಂದಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಅವರನ್ನು ವಿದೇಶಗಳಿಂದ ಹಿಡಿದು ತರುವ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂಬ ಆರೋಪವೂ ಇದೆ. ದೊಡ್ಡ ಸಮಾರಂಭವೊಂದರಲ್ಲಿ ನೀರವ್ ಮೋದಿ ಮತ್ತು ನರೇಂದ್ರ ಮೋದಿ ಅವರು ಒಟ್ಟಿಗೆ ಪಾಲ್ಗೊಂಡಿದ್ದ ಛಾಯಾಚಿತ್ರಗಳು ಈ ಆರೋಪಕ್ಕೆ ಪುಷ್ಠಿ ನೀಡುತ್ತಿವೆ.
ಅದೇನೆ ಇರಲಿ ನರೇಂದ್ರ ಮೋದಿ ಚೌಕಿದಾರಿಕೆ ಸಮರ್ಥವಾಗಿಲ್ಲ ಎಂಬುದಂತೂ ಸ್ಪಷ್ಟವಾಗಿದೆ. ನಮಗೆ ಸಮರ್ಥ ಪ್ರಧಾನಿ ಬೇಕೋ ಅಥವಾ ಅಸಮರ್ಥ ಚೌಕಿದಾರ ಬೇಕೋ ಎಂಬುದನ್ನು ನಿರ್ಧರಿಸಲು ಇದು ಸಕಾಲ!
ಇದನ್ನೂ ಓದಿ
More Articles
By the same author