ಕಳೆದ ಶತಮಾನದ ಐವತ್ತರ ದಶಕದಲ್ಲಿ ಗೇಣಿದಾರರ ಸ್ವಾಭಿಮಾನದ ಹೋರಾಟ ಕಾಗೋಡು ಚಳವಳಿಯಿಂದ ಇತ್ತೀಚಿನ ದಲಿತ- ರೈತ ಚಳವಳಿಗಳವರೆಗೆ ನಾಡಿನ ಜನಪರ ಹೋರಾಟಗಳಿಗೆ ಜನ್ಮನೀಡಿದ ಶಿವಮೊಗ್ಗ, ಇದೀಗ ತನ್ನ ಆ ಬಂಡಾಯದ ಗುಣ ಕಳೆದುಕೊಂಡು, ವ್ಯವಸ್ಥೆಯ ಗೇಣಿದಾರನಾಗಿ ಬದಲಾಗಿದೆ. ಹಾಗಾಗಿ, ಇತ್ತೀಚಿನ ವರ್ಷಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಗಳು ಕೂಡ ರಾಜ್ಯದ ಇತರೆಡೆಯಂತೆ ಜನಪರ ಆಶಯಗಳು, ಜ್ವಲಂತ ಸಮಸ್ಯೆಗಳನ್ನು ಮರೆತು ಕೋಮುವಾದ ಮತ್ತು ಕೋಮುವಾದಿ ರಾಜಕಾರಣ ಪ್ರೇರಿತ ಹುಸಿ ರಾಷ್ಟ್ರೀಯತೆಯ ಬೆನ್ನೇರಿದೆ.
ಹಾಗಾಗಿ, ಇಲ್ಲಿನ ಸಣ್ಣರೈತರ ಬದುಕಿನ ಹಕ್ಕು ಮತ್ತು ಅಸ್ತಿತ್ವ ಉಳಿಸಿಕೊಳ್ಳಲು ಕಾಗೋಡು ಚಳವಳಿಯ ಮಾದರಿಯಲ್ಲೇ ಮತ್ತೊಂದು ಹೋರಾಟದ ಜರೂರಿನ ಹೊತ್ತಲ್ಲೂ, ಈ ಬಾರಿಯ ಚುನಾವಣೆ ‘ಮತ್ತೊಮ್ಮೆ ಮೋದಿ’, ‘ಪಾಕಿಸ್ತಾನ’, ‘ಗಡಿ ಸುರಕ್ಷೆ’, ‘ದೇಶದ ಭದ್ರತೆ’ಯಂತಹ ಕಪೋಲಕಲ್ಪಿತ ಸಂಗತಿಗಳ ಸುತ್ತವೇ ಗಿರಕಿಹೊಡೆಯತೊಡಗಿದೆ. ಕಳೆದ 70 ವರ್ಷಗಳ ಅವಧಿಯಲ್ಲಿ ಸಾಲು-ಸಾಲು ಜಲಾಶಯ, ಅಭಯಾರಣ್ಯಗಳ ಕಾರಣಕ್ಕೆ ನಿರ್ವಸತಿಗರಾಗಿ ಬೀದಿಗೆ ಬಿದ್ದ ಲಕ್ಷಾಂತರ ಕುಟುಂಬಗಳಿಗೆ ಏಕೈಕ ಆಸರೆಯಾಗಿದ್ದ ತುಂಡು ಭೂಮಿ ಕೂಡ ಈಗ ಅವರ ಕೈಜಾರುತ್ತಿದೆ.
ಹೊಲ, ತೋಟ, ಮನೆ-ಮಠ ಕಳೆದುಕೊಳ್ಳುವ ಜೊತೆಗೆ ಆ ಬಡಪಾಯಿ ರೈತರು ಭೂ ಕಬಳಿಕೆ ಕಾಯ್ದೆಯಡಿ(192 ಎ) ಕೇಸು ಜಡಿಸಿಕೊಂಡು, ಜೈಲಿಗೆ ಹೋಗಬೇಕಾದ ಮತ್ತು ಕನಿಷ್ಠ ಹತ್ತು ಸಾವಿರ ದಂಡ ತೆರಬೇಕಾದ ಸ್ಥಿತಿ ಇದೆ. ಈಗಾಗಲೇ ಜಿಲ್ಲೆಯಲ್ಲಿ ಹಲವು ಅಮಾಯಕ ರೈತರು ಜೈಲುಪಾಲಾಗಿದ್ದು, ಸದ್ಯದಲ್ಲೇ 346ಕ್ಕೂ ಹೆಚ್ಚು ಮಂದಿಯನ್ನು ಜೈಲಿಗಟ್ಟಲು ತೀರ್ಮಾನ ಆಗಿದೆ. 192 ಎ ಪ್ರಕರಣದಡಿ ಜಿಲ್ಲೆಯ ಸುಮಾರು 35 ಸಾವಿರ ರೈತರ ಮೇಲೆ ಈಗಾಗಲೇ ಬೆಂಗಳೂರಿನ ಭೂ ಕಬಳಿಕ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿದ್ದು, ಶೀಘ್ರ ವಿಲೇವಾರಿ ನ್ಯಾಯಾಲಯದಲ್ಲಿ ಬೇಸಿಗೆ ರಜೆಯ ಬಳಿಕ ತಿಂಗಳಿಗೆ ನೂರಾರು ಪ್ರಕರಣಗಳಂತೆ ಇತ್ಯರ್ಥವಾಗಿ ಜೈಲುಗಳ ಮುಂದೆ ರೈತರು ಸಾಲುಗಟ್ಟುವ ದಿನ ದೂರವಿಲ್ಲ ಎಂಬ ಆತಂಕ ಜನರದ್ದು.
ಮತ್ತೊಂದು ಕಡೆ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ತಿರಸ್ಕೃತರಾದವರನ್ನು ಅರಣ್ಯದಿಂದ ಹೊರಹಾಕಿ ಎಂಬ ಸುಪ್ರೀಂಕೋರ್ಟ್ ತೀರ್ಪು ಕಾಡಂಚಿನ ಜನರಲ್ಲಿ ಆತಂಕ ಹುಟ್ಟಿಸಿದೆ. ಜಿಲ್ಲೆಯಲ್ಲಿ ಸುಮಾರು 87 ಸಾವಿರ ಅರಣ್ಯ ಹಕ್ಕು ಅರ್ಜಿಗಳನ್ನು 2011ರಲ್ಲಿ ಒಂದೇ ಏಟಿಗೆ ಯಾವ ಪರಿಶೀಲನೆ ಇಲ್ಲದೆ ವಜಾ ಮಾಡಲಾಗಿದೆ. ಹಾಗೇ ವಜಾಗೊಂಡ ಆ 87 ಸಾವಿರ ಅರ್ಜಿದಾರರ ಅಷ್ಟೂ ಕುಟುಂಬಗಳು ಈಗ ಕೋರ್ಟಿನ ತೀರ್ಪಿನ ಬಳಿಕ ಅಕ್ಷರಶಃ ಬೀದಿಗೆ ಬೀಳಲಿವೆ. ಈ ನಡುವೆ 2006ರಲ್ಲೇ ಜಾರಿಗೆ ಬಂದ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಹ ಸಾಂಪ್ರದಾಯಿಕ ಅರಣ್ಯವಾಸಿಗಳಿಗೆ ಭೂಮಿಯ ಹಕ್ಕು ನೀಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಯಾವುದೇ ಪ್ರಯತ್ನಗಳು ನಡೆದಿಲ್ಲ.
ಮತ್ತೊಂದೆಡೆ, ಬ್ರಿಟಿಷ್ ಕಾಲದ(1904) ಒಂದು ಸುತ್ತೋಲೆಯನ್ನು ಇಟ್ಟುಕೊಂಡು ಮೈಸೂರು ಸರ್ಕಾರ 1963ರಲ್ಲಿ ಹೊರಡಿಸಿ ಆದೇಶವನ್ನು 2011ರಲ್ಲಿ ಜಾರಿಗೊಳಿಸಲಾಗಿದೆ. ಆ ಮೂಲಕ ಸಾಗುವಳಿ, ಜನವಸತಿ, ಕೆರೆ, ಗೋಮಾಳ, ಸೊಪ್ಪಿನಬೆಟ್ಟಗಳಾಗಿ ಜನಬಳಕೆಯಲ್ಲಿದ್ದ ಸುಮಾರು 1.80 ಲಕ್ಷ ಎಕರೆ ಕಂದಾಯ ಭೂಮಿಯನ್ನು ರಾತ್ರೋರಾತ್ರಿ ಅರಣ್ಯ ಭೂಮಿ ಎಂದು ದಾಖಲೆ ತಿದ್ದುಪಡಿ ಮಾಡಿ ಇಂಡೀಕರಣ ಮಾಡಲಾಗಿದೆ. ಆ ಪೈಕಿ ಸುಮಾರು 1.50 ಲಕ್ಷ ಎಕರೆ ಜಮೀನು ಸಣ್ಣ ಮತ್ತು ಭೂರಹಿತ ಕೂಲಿಕಾರ್ಮಿಕರಿಗೆ ಆಸರೆಯಾಗಿದ್ದ ಬಗರ್ ಹುಕುಂ ಸಾಗುವಳಿ ಭೂಮಿ. ಇದೀಗ ಅರಣ್ಯ ಇಲಾಖೆ ಜಿಲ್ಲೆಯ ವಿವಿಧೆಡೆ ಅಂತಹ ಭೂಮಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದ್ದು, ಅದರಿಂದಾಗಿ ಕನಿಷ್ಠ 60-70 ಸಾವಿರ ಕುಟುಂಬಗಳು ಬೀದಿಪಾಲಾಗಲಿವೆ.
ಒಟ್ಟಾರೆ, 192 ಎ ಕಾಯ್ದೆ, ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ವೈಫಲ್ಯ ಹಾಗೂ ಕಂದಾಯ ಭೂಮಿ ಇಂಡೀಕರಣದಿಂದಾಗಿ ಜಿಲ್ಲೆಯ ಸುಮಾರು ಎರಡು ಲಕ್ಷ ಕುಟುಂಬಗಳು ಬದುಕಿನ ಆಸರೆಯನ್ನೇ ಕಳೆದುಕೊಂಡು ಬೀದಿಗೆ ಬೀಳುವುದಷ್ಟೇ ಅಲ್ಲದೆ, ಸರ್ಕಾರಿ ಭೂಮಿ ಕಬಳಿಕೆ ಕೇಸಿನಡಿ ಜೈಲಿಗೆ ಹೋಗಬೇಕಾಗಿದೆ. ಈ ಪೈಕಿ ಬಹುತೇಕ ಕುಟುಂಬಗಳು ಈಗಾಗಲೇ ಹಿರೇಭಾಸ್ಕರ, ಲಿಂಗನಮಕ್ಕಿ, ಚಕ್ರಾ-ಸಾವೇಹಕ್ಲು, ವಾರಾಹಿ ಮತ್ತಿತರ ಜಲವಿದ್ಯುತ್ ಯೋಜನೆಗಳಲ್ಲಿ ಮೂರು- ನಾಲ್ಕು ಬಾರಿ ಪದೇಪದೇ ಸಂತ್ರಸ್ತರಾದವರೇ. ಶಾಪಗ್ರಸ್ತರ ಮೇಲೆ ಇದೀಗ ಮತ್ತೊಮ್ಮೆ ಗಧಾಪ್ರಹಾರ ಆರಂಭವಾಗಿದೆ.
“ಜಿಲ್ಲೆಯ ರೈತಾಪಿ ಜನರ ಬದುಕನ್ನೇ ಕಸಿದುಕೊಂಡಿರುವ 192 ಎ, ಅರಣ್ಯ ಹಕ್ಕು ಅರ್ಜಿ ತಿರಸ್ಕಾರ ಹಾಗೂ ಕಂದಾಯ ಭೂಮಿ ಇಂಡೀಕರಣಗಳೆಲ್ಲವೂ ನಡೆದಿರುವುದು ಬಿಜೆಪಿ ನಾಯಕ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೇ. ಅವರ ಅಧಿಕಾರವಧಿಯಲ್ಲಿಯೇ ಅರಣ್ಯವಾಸಿ ಬುಡಕಟ್ಟು ಸೇರಿದಂತೆ ಜಿಲ್ಲೆಯ ಬಹುಸಂಖ್ಯಾತ ದುರ್ಬಲ ಸಮುದಾಯಗಳ ಬದುಕು ಕಸಿದು ಜೈಲಿಗೆ ಅಟ್ಟುವ ಕಾಯ್ದೆ-ಕಾನೂನುಗಳು ಜಾರಿಯಾಗಿವೆ. ಹಾಗಾಗಿ, ಜನರ ಸಾವು-ಬದುಕಿನ ಈ ವಿಷಯಗಳನ್ನು ಮರೆಮಾಚಲು ಬಿಜೆಪಿ ನಾಯಕರು ಮೋದಿ, ಚೌಕಿದಾರ, ಪಾಕಿಸ್ತಾನ, ಸೇನೆಯ ಭಜನೆ ಮಾಡುತ್ತಿದ್ದಾರೆ. ಇದು ಮಲೆನಾಡಿನ ಜನರಿಗೆ ಬಗೆಯು ಮಹಾದ್ರೋಹ” ಎಂಬುದು ಕಾಂಗ್ರೆಸ್- ಜೆಡಿಎಸ್ ಮೈತ್ರಿಪಕ್ಷಗಳ ಆರೋಪ.
ಜೊತೆಗೆ ಕಸ್ತೂರಿ ರಂಗನ್ ವರದಿ ತೂಗುಗತ್ತಿ, ಜಿಲ್ಲೆಯ ಪ್ರಮುಖ ಉದ್ಯಮಗಳಾದ ಭದ್ರಾವತಿಯ ಎಂಪಿಎಂ ಮತ್ತು ವಿಐಎಸ್ ಎಲ್ ಪುನರುಜ್ಜೀವನ, ಬರಪೀಡಿತ ಪ್ರದೇಶಗಳಿಗೆ ನೀರಾವರಿ ಯೋಜನೆಗಳ ವಿಷಯದಲ್ಲಿಯೂ ಮೈತ್ರಿಪಕ್ಷಗಳು, ಹತ್ತು ವರ್ಷಗಳ ಕಾಲ ಸಂಸದರಾಗಿದ್ದ ಯಡಿಯೂರಪ್ಪ ಮತ್ತು ಅವರ ಪುತ್ರರತ್ತ ಬೆರಳು ಮಾಡುತ್ತಾರೆ.
ಆದರೆ, ಪ್ರತಿಪಕ್ಷಗಳ ಆ ಪ್ರಶ್ನೆಗಳಿಗೆ, “ಹೌದು ನಮ್ಮಿಂದ ಏನೂ ತಪ್ಪಾಯ್ದು. ಆದರೆ, 2011ರ ನಂತರ ನಿಮ್ಮದೇ ಸರ್ಕಾರವಿತ್ತಲ್ಲ. ಈಗಲೂ ನಿಮ್ಮದೇ ಸರ್ಕಾರವಿದೆಯಲ್ಲ? ನೀವ್ಯಾಕೆ ಆ ಕಾನೂನುಗಳಿಗೆ ತಿದ್ದುಪಡಿ ತರುವ ಅಥವಾ ತೆಗೆದುಹಾಕುವ ಪ್ರಯತ್ನ ಮಾಡಲಿಲ್ಲ” ಎಂದು ತಿರುಗೇಟು ನೀಡುತ್ತಿದ್ದಾರೆ. ಆದರೆ, ಬಹುತೇಕ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಸ್ಥಳೀಯ ಯಾವ ಸಮಸ್ಯೆಗಳನ್ನೂ ಪ್ರಸ್ತಾಪಿಸುತ್ತಿಲ್ಲ. ಬದಲಾಗಿ ‘ಮತ್ತೊಮ್ಮೆ ಮೋದಿ’, ಸಂಸದರಾಗಿ ಜಿಲ್ಲೆಗೆ ಹೆಚ್ಚುವರಿ ರೈಲು ಗಾಡಿ ಬಿಡಿಸಿದ್ದು, ಹೆದ್ದಾರಿ ಕಾಮಗಾರಿ ಮಾಡಿಸಿದ್ದು ಮತ್ತು ತುಮರಿ ಸೇತುವೆ ಮಂಜೂರಾತಿಗೆ ಪ್ರಯತ್ನಿಸಿದ್ದನ್ನೇ ಮುಂದುಮಾಡಿ ಕೇಸರಿಪಡೆ ಪ್ರಚಾರ ನಡೆಸಿದೆ.
ಕ್ಷೇತ್ರದ ಅನ್ನದಾತರು ಮತ್ತು ಕಾರ್ಮಿಕರು ಬದುಕಿನ ಆಸರೆಯನ್ನೇ ಕಳೆದುಕೊಂಡು ದಿಕ್ಕುಗೆಟ್ಟಿರುವ ಹೊತ್ತಿನಲ್ಲಿ ಜನಾಕ್ರೋಶದ ಕುದಿಕೆಂಡವಾಗಬೇಕಿದ್ದ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಪರಸ್ಪರ ದೋಷಾರೋಪಣೆಯ ಕೆಸರೆರಚಾಟ ಮುಂದುವರಿದಿದೆ. ಐದು ತಿಂಗಳ ಹಿಂದಿನ ಉಪ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿದ್ದ ಇಬ್ಬರ ಮಾಜಿ ಮುಖ್ಯಮಂತ್ರಿಗಳ ಪುತ್ರರೇ ಈ ಬಾರಿಯೂ ಕಣದಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿದ್ದರೆ, ಬಿಜೆಪಿಯಿಂದ ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರ ಕಣಕ್ಕಿಳಿದಿದ್ದಾರೆ. ರಾಘವೇಂದ್ರ ಮೂರನೇ ಬಾರಿಗೆ ಲೋಕಸಭೆಗೆ ಪ್ರವೇಶಿಸಲು ಯತ್ನಿಸುತ್ತಿದ್ದರೆ, ಮಧು ಲೋಕಸಭಾ ಕಣದಲ್ಲಿ ಮೊದಲ ಜಯದ ರುಚಿ ನೋಡಲು ಸೆಣೆಸುತ್ತಿದ್ದಾರೆ.
ಒಟ್ಟು 16.75 ಲಕ್ಷ ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಕಳೆದ ಬಾರಿ ಬಿ ವೈ ರಾಘವೇಂದ್ರ ಅವರು ಸುಮಾರು 52 ಸಾವಿರ ಮತಗಳ ಅಂತರದ ಜಯ ಪಡೆದಿದ್ದರು. ಕ್ಷೇತ್ರ ವ್ಯಾಪ್ತಿಗೆ ಸೇರುವ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರವೂ ಸೇರಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳು ವ್ಯಾಪ್ತಿಗೊಳಪಟ್ಟಿದ್ದು, ಆ ಪೈಕಿ ಏಳು ಕಡೆ(ಶಿಕಾರಿಪುರ, ಸೊರಬ, ಸಾಗರ, ತೀರ್ಥಹಳ್ಳಿ, ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ ಹಾಗೂ ಬೈಂದೂರು) ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ಒಂದು ಕಡೆ(ಭದ್ರಾವತಿ) ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. 2009ರ ಬಳಿಕ ನಡೆದ ಮೂರು ಲೋಕಸಭಾ ಚುನಾವಣೆಗಳಲ್ಲೂ ಇಲ್ಲಿ ಬಿಜೆಪಿಯೇ ಜಯಭೇರಿ ಭಾರಿಸಿದ್ದು, 2014ರ ಚುನಾವಣೆಯಲ್ಲಿ ಬಿ ಎಸ್ ಯಡಿಯೂರಪ್ಪ ಅವರು 3.63 ಲಕ್ಷದಷ್ಟು ಭಾರೀ ಬಹುಮತದೊಂದಿಗೆ ಆಯ್ಕೆಯಾಗಿದ್ದರು. ಮೋದಿ ಅಲೆ ಮತ್ತು ಸಿಎಂ ಆಗಿ ಅವರು ಮಾಡಿದ್ದ ಜಿಲ್ಲೆಯ ಅಭಿವೃದ್ಧಿ ಕೆಲಸಗಳು ಅವರ ಕೈಹಿಡಿದಿದ್ದವು.
ಈಡಿಗ, ಲಿಂಗಾಯತ, ಬ್ರಾಹ್ಮಣ ಮತ್ತು ಒಕ್ಕಲಿಗ ಸಮುದಾಯಗಳು ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದು, ಮುಸ್ಲಿಂ, ಕ್ರೈಸ್ತ ಹಾಗೂ ಪರಿಶಿಷ್ಟ ಜಾತಿ ಮತ್ತು ಜನಾಂಗ ಕೂಡ ಗಣನೀಯ ಪ್ರಮಾಣದಲ್ಲಿವೆ. ಆದರೆ, ಹಿಂದುತ್ವದ ಅಮಲು ತಳಮಟ್ಟಕ್ಕೂ ತಲುಪಿರುವ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಸಮುದಾಯ ಇಡಿಯಾಗಿ ಒಂದು ಪಕ್ಷ, ಒಬ್ಬ ವ್ಯಕ್ತಿಗೆ ಕೊಟ್ಟುಕೊಳ್ಳುವ ಸ್ಥಿತಿ ಇಲ್ಲ ಎಂಬುದು ಇತ್ತೀಚಿನ ಚುನಾವಣೆಗಳಲ್ಲಿ ಮತ್ತೆಮತ್ತೆ ಸಾಬೀತಾಗಿದೆ. ಅಂದಾಜು ಸುಮಾರು 3.5 ಲಕ್ಷ ಮತಗಳನ್ನು ಹೊಂದಿರುವ ಈಡಿಗ ಸಮುದಾಯದ ಬಂಗಾರಪ್ಪ, ಅವರ ಪುತ್ರಿ ಗೀತಾ ಶಿವರಾಜಕುಮಾರ್ ಹಾಗೂ ಮಧು ಬಂಗಾರಪ್ಪ ಅವರು ಕಳೆದ ಮೂರೂ ಚುನಾವಣೆಗಳಲ್ಲಿ ಲಿಂಗಾಯತ ಸಮುದಾಯದ ಯಡಿಯೂರಪ್ಪ ಮತ್ತು ಅವರ ಪುತ್ರ ರಾಘವೇಂದ್ರ ಎದುರು ಸತತ ಸೋಲುಕಂಡಿದ್ದಾರೆ. ಹಾಗಾಗಿ, ಸಮುದಾಯವಾರು ಪ್ರಾಬಲ್ಯದ ಲೆಕ್ಕಾಚಾರಗಳು ಹೆಚ್ಚಿನ ಪ್ರಯೋಜನಕ್ಕೆ ಬರಲಾರವು ಎಂಬ ಮಾತಿದೆ.
ಆದರೆ, ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದು, ಜೆಡಿಎಸ್ ಪ್ರಾಬಲ್ಯ ಅಷ್ಟಾಗಿ ಇರದ ಕ್ಷೇತ್ರದಲ್ಲಿ ತಳಮಟ್ಟದಲ್ಲಿಯೂ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಹೊಂದಾಣಿಕೆ ಸಹಜವಾಗೇ ಸಲೀಸಾಗಿದೆ. ಆದರೆ, ಬಿಜೆಪಿಯ ಕೇಡರ್ ಬಲದ ಮುಂದೆ ಈ ಮೈತ್ರಿ ಬಲ ಈಗಲೂ ದುರ್ಬಲವಾಗಿಯೇ ಕಾಣುತ್ತಿದೆ. ಬಿಜೆಪಿ ಮನೆಮನೆ ಪ್ರಚಾರ, ಪೇಜ್ ಪ್ರಮುಖ ಮುಂತಾದ ತಳಮಟ್ಟದ ಜಾಲವನ್ನು ಬಲವಾಗಿ ಹೊಂದಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಆ ವಿಷಯದಲ್ಲಿ ದುರ್ಬಲವಾದಂತಿದೆ.
ಆದರೆ, ತಮ್ಮ ತಂದೆ ಬಂಗಾರಪ್ಪ ಅವರ ವರ್ಚಸ್ಸು ಮತ್ತು ಕಾಗೋಡು ತಿಮ್ಮಪ್ಪ ಅವರ ಬಲದ ಮೇಲೆ ಮಧು ಬಂಗಾರಪ್ಪ ಕ್ಷೇತ್ರದ ಜ್ವಲಂತ ವಿಷಯಗಳನ್ನೇ ಪ್ರಮುಖವಾಗಿ ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ದಾಳಿ ನಡೆಸುತ್ತಿದ್ದು, ಕಳೆದ ಹತ್ತು ವರ್ಷ ಕಾಲ ಯಡಿಯೂರಪ್ಪ ಮತ್ತು ಅವರ ಮಗನಿಗೆ ಅವಕಾಶ ನೀಡಿದ್ದೀರಿ. ಇದೊಂದು ಬಾರಿ ತಮಗೆ ಆಶೀರ್ವದಿಸಿ ಎಂದು ಮತದಾರರಿಗೆ ಮನವಿ ಮಾಡುತ್ತಿದ್ದಾರೆ. ಆ ಮೂಲಕ ಅನುಕಂಪದ ಅಲೆ ಹುಟ್ಟಿಸುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಅತ್ತ ಬಿಜೆಪಿ ಕೂಡ ಸಾಕಷ್ಟು ಪ್ರಚಾರ ತಂತ್ರಗಳನ್ನು ಅಳವಡಿಸಿಕೊಂಡಿದ್ದು, ಮತದಾನದ ದಿನ ಸಮೀಪಿಸುತ್ತಿದ್ದಂತೆ ಮನೆಮನೆ ಭೇಟಿಗಳನ್ನು ತೀವ್ರಗೊಳಿಸಿದೆ.
ಸದ್ಯಕ್ಕೆ ಮಧು ಬಂಗಾರಪ್ಪ ಮತ್ತು ರಾಘವೇಂದ್ರ ನಡುವೆ ಸಮಬಲದ ಹೋರಾಟದ ಕಣವಾಗಿ ಕ್ಷೇತ್ರ ಮಾರ್ಪಟ್ಟಿದ್ದು, ಭಾರೀ ಹಣಾಹಣಿಗೆ ಸಾಕ್ಷಿಯಾಗಿದೆ. ಮತದಾನದ ಮುನ್ನಾ ದಿನ ಮ್ಯಾಜಿಕ್ ನಲ್ಲಿ ಸದಾ ಮುಂದಿರುವ ಹಣಬಲದ ಬಿಜೆಪಿಯ ತಂತ್ರಗಾರಿಕೆಗೆ ಪ್ರತಿಯಾಗಿ ಮಿತ್ರಪಕ್ಷಗಳು ಎಷ್ಟರಮಟ್ಟಿಗೆ ಪ್ರತಿತಂತ್ರ ಹೆಣೆಯುತ್ತವೆ ಎಂಬುದರ ಮೇಲೆ ಅಂತಿಮವಾಗಿ ಎಲ್ಲವೂ ನಿಂತಿದೆ ಎಂಬುದು ಸದ್ಯ ಕ್ಷೇತ್ರದಲ್ಲಿ ಕೇಳಿಬರುತ್ತಿರುವ ಮಾತು. ಅದೇನೇ ಇರಲಿ, ಈ ಚುಣಾವಣೆಯ ಫಲಿತಾಂಶ, ಸುಮಾರು ಎರಡು ಲಕ್ಷ ಮಂದಿ ಮಲೆನಾಡಿನ ಅನ್ನದಾತರ ನಾಳೆಗಳು ಜೈಲು ಕಂಬಿಗಳ ಒಳಗೋ, ಹೊರಗೋ ಎಂಬುದನ್ನಂತೂ ನಿರ್ಧರಿಸಲಿದೆ ಎಂದರೆ ಅತಿಶಯೋಕ್ತಿಯಲ್ಲ!