ಬೆಂಗಳೂರು: ಇಂದು ಪ್ರಜಾಪ್ರಭುತ್ವವನ್ನು ಉಳಿಸುವ ದೃಷ್ಟಿಯಿಂದ ತೂಮಕೂರಿನಲ್ಲಿ ಸಿಪಿಐ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ, ಬೆಂಗಳೂರು ಕೇಂದ್ರದಲ್ಲಿ ಪ್ರಕಾಶ್ ರಾಜ್, ಚಿಕ್ಕಬಳ್ಳಾಪುರದಲ್ಲಿ ಸಿಪಿಐ(ಎಂ) ಅಭ್ಯರ್ಥಿ ಕಾಮ್ರೇಡ್ ವರಲಕ್ಷ್ಮಿ ಹಾಗೂ ಮಿಕ್ಕ ಕಡೆಗಳಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸಲು ಭಾರತೀಯ ಕಮ್ಯುನಿಷ್ಟ್ ಪಕ್ಷ (ಸಿಪಿಐ) ಮತಯಾಚನೆ ನಡೆಸಲಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಸಾಥಿ ಸುಂದರೇಶ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ಅವರು, “ಅಚ್ಚೇ ದಿನ್ ನೀಡುವ ಭರವಸೆಯೊಂದಿಗೆ 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರ ಸರ್ಕಾರ ಜನರಲ್ಲಿ ಸಾಕಷ್ಟು ಕನಸುಗಳನ್ನು ಬಿತ್ತಿತ್ತು. ಬೆಲೆ ಏರಿಕೆ ನಿಯಂತ್ರಣಕ್ಕೆ ತರುತ್ತೇನೆಂದಿದ್ದ ಅವರು ಬೆಲೆಗಳನ್ನು ಇಳಿಸಲಿಲ್ಲ. ವಿದೇಶಗಳಿಂದ ಕಪ್ಪುಹಣ ವಾಪಸ್ ತಂದು ಜನರ ಖಾತೆಗಳಿಗೆ ಹದಿನೈದು ಲಕ್ಷ ರೂಪಾಯಿಗಳನ್ನು ಜಮೆ ಮಾಡುವುದಾಗಿ ಭರವಸೆ ನೀಡಿದ್ದರೂ ಅದು ಜನರಿಗೆ ಸಿಗಲೇ ಇಲ್ಲ. ವರ್ಷಕ್ಕೆರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುತ್ತೇನೆಂದು ನೀಡಿದ್ದ ಆಶ್ವಾಸನೆ ಹುಸಿಯಾಗಿದೆ. ಜನರಲ್ಲಿ ಬಿತ್ತಿದ್ದ ಕನಸುಗಳೆಲ್ಲಾ ಭಗ್ನವಾಗಿವೆ. ಅವರು ಕೊಟ್ಟಂತಹ ಆಶ್ವಾಸನೆಗಳನ್ನು ಈಡೇರಿಸುವ ಬದಲಿಗೆ ಮೋದಿಯವರು ಭಾವನಾತ್ಮಕ ವಿಷಯಗಳನ್ನಾಧರಿಸಿ ರಾಜಕಾರಣ ಮಾಡಿದ್ದಾರೆ” ಎಂದು ಮೋದಿ ನೀಡಿದ್ದ ಪೊಳ್ಳು ಭರವಸೆಗಳ ಬಗ್ಗೆ ಕಿಡಿಕಾರಿದರು.
ಇದೇ ಸಂದರ್ಭದಲ್ಲಿ ದೇಶದೊಳಗೆ ದಲಿತರ ಮೇಲೆ ಸಾಕಷ್ಟು ಹಲ್ಲೆಗಳಾಗಿ, ಜನರ ಆಹಾರದ ಹಕ್ಕನ್ನು ಕಸಿದು ಮುಸ್ಲಿಮರ ವಿರುದ್ಧ ದಾಳಿಗಳಾದರೂ ಇವರಿಗೆಲ್ಲಾ ರಕ್ಷಣೆ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಸಿಪಿಐ ಕಾರ್ಯದರ್ಶಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
“ಕೇಂದ್ರ ಮಂತ್ರಿಮಂಡಲದಲ್ಲಿ ಪ್ರಧಾನಿಯ ಹೊರತಾಗಿ ಇತರ ಸಚಿವರು ಇದ್ದರೆಂಬುದೇ ಯಾರಿಗೂ ತಿಳಿಯದಂತಾಗಿದ್ದು, ಎಲ್ಲರ ಅಧಿಕಾರವನ್ನೂ ಪ್ರಧಾನಿಯವರೇ ವಹಿಸಿಕೊಂಡಿದ್ದರು. ಯಾವ ಸಚಿವರಿಗೂ ಸ್ವತಂತ್ರವಾಗಿ ಕೆಲಸ ಮಾಡಲಾರದ ಸಂದರ್ಭ ನಿರ್ಮಾಣವಾಗಿತ್ತು” ಎಂದು ಪ್ರಧಾನಿ ಮೋದಿಯ ಸರ್ವಾಧಿಕಾರಿ ಧೋರಣೆ ಬಗ್ಗೆ ಮಾತನಾಡಿದ” ಸಾಥಿ ಸುಂದರೇಶ್, ಎಲ್ಲಾ ಇಲಾಖೆಗಳಲ್ಲೂ, ಸ್ವಾಯತ್ತ ಸಂಸ್ಥೆಗಳಲ್ಲೂ ಪ್ರಧಾನಿ ಮೋದಿಯವರ ಅನಗತ್ಯ ಹಸ್ತಕ್ಷೇಪವನ್ನು ನಾವು ಕಾಣುತ್ತಿದ್ದೇವೆ. ಐದು ವರ್ಷಗಳ ಕಾಲ ಜನವಿರೋಧಿ ಸರ್ಕಾರ ಅಧಿಕಾರದಲ್ಲಿದ್ದ ಕಾರಣ ಈಗ ಆಡಳಿತದ ಬದಲಾವಣೆಗಾಗಿ ಪ್ರಜ್ಞಾವಂತ ಜನ ಬಯಸುತ್ತಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಆದ್ದರಿಂದ ಭಾರತದಲ್ಲಿ ಇಂದು ಪ್ರಜಾತಂತ್ರ ಉಳಿಸಲು, ಸಂವಿಧಾನ ರಕ್ಷಿಸಲು ಜನವಿರೋಧಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಅಧಿಕಾರದಿಂದ ದೂರವಿಡಬೇಕಿದ್ದು, ಬಿಜೆಪಿಯನ್ನು ಸೋಲಿಸಿ ಪ್ರಜಾತಂತವನ್ನ್ರು ಉಳಿಸುವ, ಸಂವಿಧಾನವನ್ನು ರಕ್ಷಿಸುವ ಜಾತ್ಯಾತೀತ ಸರ್ಕಾರವನ್ನು ಚುನಾಯಿಸಬೇಕಾದ ಜರೂರಿರುವುದಾಗಿ ಸಿಪಿಐ ರಾಜ್ಯ ಮುಖಂಡ ಅಭಿಪ್ರಾಯಿಸಿದ್ದಾರೆ.
ಕರ್ನಾಟಕದಲ್ಲಿ ತುಮಕೂರು ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿ ಎನ್.ಶಿವಣ್ಣ ಸ್ಪರ್ಧಿಸಿದ್ದು, ಇವರ ಗುರುತು ಕುಡುಗೋಲು ಮತ್ತು ತೆನೆಗೆ ಮತ ಚಲಾಯಿಸಲು ತುಮಕೂರು ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಣದಲ್ಲಿರುವ ಸಿಪಿಐ(ಎಂ) ಅಭ್ಯರ್ಥಿ ವರಲಕ್ಷ್ಮಿ ಅವರ ಪರವಾಗಿ ಈಗಾಗಲೇ ಕ್ಷೇತ್ರದಲ್ಲಿ ಸಿಪಿಐ ಮತಯಾಚನೆಯಲ್ಲಿ ನಿರತವಾಗಿದೆ. ಬೆಂಗಳೂರು ಕೇಂದ್ರ ಕ್ಷೇತ್ರದ ಸ್ವತಂತ್ರ ಉಮೇದುವಾರನಾಗಿರುವ ಹೋರಾಟಗಾರ ಮತ್ತು ಪ್ರಗತಿಪರ ಚಿಂತಕ ಪ್ರಕಾಶ್ ರಾಜ್ ಅವರಿಗೆ ಭಾರತ ಕಮ್ಯುನಿಸ್ಟ್ ಪಕ್ಷ ಬೆಂಬಲ ಸೂಚಿಸಿದೆ. ದೇಶದಲ್ಲಿ ಪ್ರಜಾತಂತ್ರಿಕ ಮತ್ತು ಜಾತ್ಯಾತೀತ ಸರ್ಕಾರದ ಸ್ಥಾಪನೆಯ ಉದ್ದೇಶದಿಂದ ಮತ್ತು ಜನತೆಯ ಹಿತದೃಷ್ಟಿಯಿಂದ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ರಾಜ್ಯದ ಉಳಿದಿರುವ 25 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟವನ್ನು ಬೆಂಬಲಿಸಲು ಸಿಪಿಐ ತೀರ್ಮಾನಿಸಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಾಥಿ ಸುಂದರೇಶ್ ತಿಳಿಸಿದ್ದಾರೆ. ಭಾರತ ಕಮ್ಯುನಿಸ್ಟ್ ಪಕ್ಷವು (ಸಿಪಿಐ), ಕಾಂಗ್ರೆಸ್ – ಜೆಡಿಎಸ್ ಮೈತ್ರಿಕೂಟದ ಭಾಗವಾಗಿರುವುದಿಲ್ಲ ಎಂದು ಈ ವೇಳೆ ಅವರು ಸ್ಪಷ್ಟಪಡಿಸಿದರು.
ಕಾರ್ಮಿಕ ಮುಖಂಡ ಕಾಮ್ರೇಡ್ ಅನಂತಸುಬ್ಬರಾವ್ ಮಾತನಾಡಿ, “ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ದೇಶದ ಕಾರ್ಮಿಕರು ಹಿಟ್ಲರ್ ಕಾಲದ ಸರ್ವಾಧಿಕಾರವನ್ನು ಅನುಭವಿಸಬೇಕಾಗುತ್ತದೆ, ಈ ಕಾರಣದಿಂದಾಗಿ ಮೋದಿ ಸರ್ಕಾರ ಸೋಲುವುದು ದೇಶದ ಕಾರ್ಮಿಕ ವರ್ಗಕ್ಕೆ ಬಹಳ ಮುಖ್ಯ ಎಂದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯರಾದ ಕಾರ್ಯದರ್ಶಿ ಪಿ ವಿ ಲೋಕೇಶ್, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಡಿ ಎ ವಿಜಯ್ ಭಾಸ್ಕರ್, ಎಐವೈಎಫ್ ಸಂಚಾಲಕ ಎಚ್ ಎಂ ಸಂತೋಷ್ ಹಾಜರಿದ್ದರು.