ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದ ಡಿಎಂಕೆ ಅಭ್ಯರ್ಥಿಯ ಕಚೇರಿಯಿಂದ ಕೆಲದಿನಗಳ ಹಿಂದೆ ಅಪಾರ ಮೊತ್ತದ ಹಣ ವಶವಾಗಿದ್ದ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಚುನಾವಣೆಯನ್ನು ಸದ್ಯ ಸ್ಥಗಿತಗೊಳಿಸಿ ಮಂಗಳವಾರ ಆದೇಶ ಹೊರಡಿಸಲಾಗಿದೆ.
ಚುನಾವಣಾ ಆಯೋಗವು ಸೋಮವಾರ ಮಾಡಿರುವ ಶಿಫಾರಸ್ಸಿನ ಅನ್ವಯ ವೆಲ್ಲೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಹೊರಡಿಸಲಾಗಿದ್ದ ಆದೇಶವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಹಿಂಪಡೆದಿದ್ದಾರೆ. ರಾಜ್ಯದ ಇತರ 38 ಸಂಸದೀಯ ಕ್ಷೇತ್ರಗಳ ಚುನಾವಣೆಯ ಜೊತೆಯಲ್ಲಿ ವೆಲ್ಲೂರು ಮತಕ್ಷೇತ್ರಕ್ಕೂ ಮತದಾನವು ಏಪ್ರಿಲ್ 18ರಂದು ನಡೆಯಬೇಕಿತ್ತು. ಇದರಿಂದಾಗಿ ಅಭ್ಯರ್ಥಿಗಳು ಅಕ್ರಮ ಹಣ ಬಳಕೆ ಮಾಡಿರುವ ಆರೋಪದ ಮೇಲೆ ಚುನಾವಣೆಯೇ ಸ್ಥಗಿತಗೊಂಡಿರುವುದು 2019ರ ಚುನಾವಣೆಗಳಲ್ಲಿ ಇದೇ ಮೊದಲೆಂಬಂತಾಗಿದೆ.
ಏಪ್ರಿಲ್ 10ರಂದು ಆದಾಯ ತೆರಿಗೆ ಇಲಾಖೆ ನೀಡಿದ್ದ ವರದಿಯ ಆಧಾರದಲ್ಲಿ ವೆಲ್ಲೂರಿನ ಡಿಎಂಕೆ ಅಭ್ಯರ್ಥಿ ಕಾತಿರ್ ಆನಂದ್ ಮತ್ತು ಪಕ್ಷದ ಇತರ ಇಬ್ಬರು ನಾಯಕರ ವಿರುದ್ಧ ಜಿಲ್ಲಾ ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದರು. ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಗಣನೆಗೆ ತೆಗೆದುಕೊಂಡು ಘೋಷಣೆಯಾಗಿದ್ದ ಚುನಾವಣೆಯನ್ನು ರದ್ದುಗೊಳಿಸುವ ಶಿಫಾರಸ್ಸು ಮಾಡಿದೆ.
ಕಾತಿರ್ ಆನಂದ್ ಅವರು ತಮ್ಮ ನಾಮಪತ್ರ ಜೊತೆ ಸಲ್ಲಿಸುವ ಚುನಾವಣಾ ಪ್ರಮಾಣಪತ್ರದಲ್ಲಿ “ತಪ್ಪು ಮಾಹಿತಿ” ನೀಡಿರುವುದಕ್ಕಾಗಿ 1951ರ ಜನ ಪ್ರಾತಿನಿಧ್ಯ ಕಾಯಿದೆಯಡಿ, ಆರೋಪಕ್ಕೊಳಗಾಗಿದ್ದಾರೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ. ಡಿಎಂಕೆ ಪಕ್ಷದ ಇನ್ನಿಬ್ಬರು ಮುಖಂಡರಾದ ಶ್ರೀನಿವಾಸನ್ ಮತ್ತು ದಾಮೋದರನ್ ಅವರ ವಿರುದ್ಧ ಲಂಚದ ಆರೋಪದಡಿ ದೂರು ದಾಖಲಿಸಲಾಗಿದೆ.
ಚುನಾವಣೆಗಾಗಿ ಬಳಸಲಾಗುವ ಅಕ್ರಮ ಹಣದ ಶಂಕೆಯ ಹಿನ್ನೆಲೆಯಲ್ಲಿ ಮಾರ್ಚ್ 30ರಂದು ಕಾತಿರ್ ಆನಂದ್ ರ ತಂದೆ ದುರೈ ಮುರುಗನ್ ಅವರ ಮನೆಯನ್ನು ಶೋಧಿಸಿದ್ದ ಆದಾಯ ತೆರಿಗೆ ಅಧಿಕಾರಿಗಳು “ಅಧಿಕ” ಹಣವೆಂದು ಹೇಳಲಾದ 10.50 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದರು. ಎರಡು ದಿನಗಳ ನಂತರ ಅದೇ ಜಿಲ್ಲೆಯಲ್ಲಿ ಡಿಎಂಕೆ ನಾಯಕನ ಜೊತೆಗಾರನಿಗೆ ಸೇರಿದ್ದೆನ್ನಲಾದ ಸಿಮೆಂಟ್ ಗೋದಾಮಿನಿಂದ 11.53 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡರೆಂದು ಹೇಳಲಾಗಿದೆ.
ಆದರೆ ತಾವು ಏನೊಂದು ಮಾಹಿತಿಯನ್ನೂ ಮುಚ್ಚಿಟ್ಟಿಲ್ಲವೆಂದು ಮುರುಗನ್ ಹೇಳಿದ್ದಾರೆ. ಆದಾಯ ತೆರಿಗೆ ಇಲಾಖೆ ಕಾರ್ಯಾಚರಣೆಯ ಸಂದರ್ಭವನ್ನು ಪ್ರಶ್ನಿಸಿರುವ ಅವರು, ಈ ದಾಳಿಗಳು ತಮ್ಮನ್ನು ಚುನಾವಣಾರಂಗದಲ್ಲಿ ಎದುರಿಸಲಾಗದ ಕೆಲವು ರಾಜಕೀಯ ನಾಯಕರ “ಪಿತೂರಿ” ಎಂದು ಆರೋಪಿಸಿದ್ದಾರೆ.
ತಮಿಳುನಾಡಿನ ಚುನಾವಣಾ ಚರಿತ್ರೆಯಲ್ಲಿ ಅಕ್ರಮ ಹಣ ಬಳಕೆ ಮತ್ತು ಮತದಾರರಿಗೆ ಆಮಿಷ ಒಡ್ಡುವ ಆರೋಪದ ಮೇರೆಗೆ ಚುನಾವಣೆಗಳನ್ನು ರದ್ದುಪಡಿಸಲಾಗಿರುವುದು ಇದೇ ಮೊದಲಲ್ಲ. ಕೆಲವು ವರ್ಷಗಳ ಹಿಂದೆ ಇದೇ ಕಾರಣದಿಂದ ಆರ್ ಕೆ ನಗರದ ಉಪಚುನಾವಣೆ ಸ್ಥಗಿತಗೊಂಡಿತ್ತು.
“ಮತದಾರರನ್ನು ಹಾಳುಮಾಡುವ ಹಣ ಮತ್ತು ಉಡುಗೊರೆ ಹಂಚಿಕೆಯ ಪ್ರಭಾವ ಕ್ರಮೇಣ ಇಲ್ಲದಂತಾದಾಗಬೇಕು” ವೆಲ್ಲೂರು ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆಯನ್ನು ಪುನಃ ನಡೆಸುವುದಾಗಿ ಚುನಾವಣಾ ಆಯೋಗ ಹೇಳಿದೆ.
ಕಳೆದ ವಾರವಷ್ಟೇ ಬಿಜೆಪಿ ಪಕ್ಷದ ಖಾತೆಯಿಂದ ಬಿಡಿಸಿದ್ದ 8 ಕೋಟಿ ರೂಪಾಯಿ ನಗದು ಹಣವನ್ನು ಹೈದರಾಬಾದ್ ಪೊಲೀಸರು ವಶಪಡಿಸಿಕೊಂಡಿದ್ದರು. ಈ ಬಾರಿಯ ಚುನಾವಣೆಗಳಲ್ಲಿ ವಶಪಡಿಸಿಕೊಳ್ಳಲಾದ ನಗದು, ಮದ್ಯ ಮತ್ತಿತರ ನಿಷೇಧಿತ ವಸ್ತುಗಳ ಮೌಲ್ಯ 1,582 ಕೋಟಿಗಳನ್ನು ಮೀರಿದೆ ಎಂದು ‘ದ ವೈರ್’ ಪತ್ರಿಕೆ ವರದಿ ಮಾಡಿತ್ತು.