ನವೆಂಬರ್ 2016ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೋಟ್ ಬ್ಯಾನ್ ನಡೆಸಿದ ನಂತರ ಭಾರತದಲ್ಲಿ ಐವತ್ತು ಲಕ್ಷ ಜನ ಉದ್ಯೋಗ ಕಳೆದುಕೊಂಡರೆಂದು ಹೊಸದಾಗಿ ಬಿಡುಗಡೆಯಾದ ವರದಿಯೊಂದು ಮತ್ತೊಮ್ಮೆ ಖಚಿತಪಡಿಸಿದೆ. ಕೆಲಸ ಕಳೆದುಕೊಂಡವರಲ್ಲಿ ಬಹುಪಾಲು ಜನ ಅನೌಪಚಾರಿಕ ಕ್ಷೇತ್ರದಲ್ಲಿ ದುಡಿಯುತ್ತಿದ್ದವರಾಗಿದ್ದು ಸಮಾಜದ ಶೋಷಿತ ಸಮುದಾಯಗಳಿಗೆ ಸೇರಿದವರಾಗಿದ್ದರೆಂದೂ ಇದರಲ್ಲಿ ಹೇಳಲಾಗಿದೆ.
ಮಂಗಳವಾರ ಬೆಂಗಳೂರಿನ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ Centre for Sustainable Employment (CSE) ‘ಉದ್ಯೋಗಸ್ಥ ಭಾರತದ ಸ್ಥಿತಿಗತಿ – 2019’ ಎಂಬ ಶೀರ್ಷಿಕೆಯಡಿ ವರದಿಯನ್ನು ಬಿಡುಗಡೆಗೊಳಿಸಿದೆ.
ನೋಟ್ ಬ್ಯಾನ್ – 50 ಲಕ್ಷ ಉದ್ಯೋಗ ನಾಶ
“ಇದು ಒಟ್ಟಾರೆ ಅಂಕಿಅಂಶವಾಗಿದೆ. ಆದ್ದರಿಂದ ಒಂದು ಕಡೆ ನಾಶವಾಗಿರುವ ಉದ್ಯೋಗಗಳು ಬೇರೆ ಎಲ್ಲಾದರೂ ಸೇರ್ಪಡೆಯಾಗಿದ್ದರೂ ಒಟ್ಟಾರೆ ಉದ್ಯೋಗಳನ್ನು ಗಮನಿಸಿದಾಗ, ಸಾಕಷ್ಟು ಉದ್ಯೋಗಗಳು ನಷ್ಟವಾಗಿವೆ ಎಂಬ ಅಂಶ ಸ್ಪಷ್ಟವಾಗುತ್ತದೆ. ಐವತ್ತು ಲಕ್ಷ ಉದ್ಯೋಗಾವಕಾಶಗಳು ಇಳಿಮುಖವಾಗಿವೆ. ಅದರಲ್ಲೂ ಜಿಡಿಪಿ ಪ್ರಬಲವಾಗಿ ಪ್ರಗತಿ ಹೊಂದುತ್ತಿದೆ ಎಂದು ಹೇಳಲಾಗುತ್ತಿರುವ ಸಂದರ್ಭದಲ್ಲಿ ಇದು ಆರ್ಥಿಕತೆಯ ದೃಷ್ಟಿಯಿಂದ ಒಳ್ಳೆಯ ಮುನ್ಸೂಚನೆಯಲ್ಲ. ಒಟ್ಟಾರೆಯಾಗಿ, ಉದ್ಯೋಗ ನಷ್ಟವಾಗುವುದು ಆಶಾದಾಯಕವೆನಿಸದು. ಉದ್ಯೋಗ ಹೆಚ್ಚಳವಾಗಬೇಕೇ ವಿನಾ ಕಡಿತಗೊಳ್ಳಬಾರದು”ಎಂದು ವರದಿಯನ್ನು ನೀಡಿರುವ CSE ಮುಖ್ಯಸ್ಥ ಪ್ರೊ. ಅಮಿತ್ ಬಸೋಲೆ ಹೇಳಿದ್ದಾರೆ.
ಕೆಲಸಗಳು ಕಡಿತಗೊಂಡಿದ್ದು ನೋಟ್ ಬ್ಯಾನ್ ಸಂದರ್ಭದಲ್ಲಿ (ಸೆಪ್ಟೆಂಬರ್-ಡಿಸೆಂಬರ್ 2016ರ ನಡುವಿನ 4 ತಿಂಗಳಲ್ಲಿ) ಮತ್ತು ಉದ್ಯೋಗ ಬೆಳವಣಿಗೆ ಹಾಗೇ ಇಳಿಮುಖವಾಗಿ ಸಮಸ್ಥಿತಿಗೆ ಬಂದಿದ್ದು ಡಿಸೆಂಬರ್ 2018ರಲ್ಲಿ (ಸಂಶೋಧಕರು ಅಧ್ಯಯನ ನಡೆಸಿದ ಅಂತಿಮ ತ್ರೈಮಾಸಿಕ ಸೆಪ್ಟೆಂಬರ್- ಡಿಸೆಂಬರ್ 2018 ಅವಧಿಯದ್ದು) ಎಂದು ದತ್ತಾಂಶಗಳು ಸೂಚಿಸುತ್ತವೆ ಎಂದು ಬಸೋಲೆ ತಿಳಿಸಿದ್ದಾರೆ.
ನಿರುದ್ಯೋಗ ಹೆಚ್ಚಳಕ್ಕೆ ನೋಟ್ ಬ್ಯಾನ್ ಮತ್ತು ಜಿಎಸ್ಟಿ ಕಾರಣ
ಕಳೆದ ದಶಕದಿಂದ ದೇಶದಲ್ಲಿ ನಿರುದ್ಯೋಗ ದರ ಸತತವಾಗಿ ಏರುತ್ತಲಿದ್ದು ಮೋದಿಯವರು ನೋಟ್ ಅಮಾನ್ಯೀಕರಣವನ್ನು ಘೋಷಿಸಿದ ಸಮಯದಲ್ಲಿ ನೌಕರಿ ಕಡಿತ ಆರಂಭವಾಗಿ ಅತಿಹೆಚ್ಚು ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆ ಕಂಡುಬಂದಿರುವುದೆಂದು ವರದಿ ಹೇಳುತ್ತದೆ. ಆದರೆ ಲಭ್ಯವಿರುವ ದತ್ತಾಂಶದ ಆಧಾರದಲ್ಲಿ “ಕಾರ್ಯಕಾರಣ ಸಂಬಂಧವನ್ನು”ಸ್ಪಷ್ಟವಾಗಿ ಕಲ್ಪಿಸಲು ಸಾಧ್ಯವಾಗಿಲ್ಲ ಎಂದೂ ವರದಿಯಲ್ಲಿ ತಿಳಿಸಲಾಗಿದೆ. ಉದ್ಯೋಗ ಕಡಿತ ಮತ್ತು ಉದ್ಯೋಗಾವಕಾಶಗಳ ನಾಶಕ್ಕೆ ಕಾರಣಗಳೇನಿರಬಹುದು ಎಂದು ಕೇಳಿದಾಗ, “ಅನೌಪಚಾರಿಕ ಆರ್ಥಿಕತೆಗೆ ಸಂಬಂಧಿಸಿದಂತೆ ನೋಟ್ ಅಮಾನ್ಯೀಕರಣ ಮತ್ತು ಜಿಎಸ್ಟಿಗಳ ಹೊರತಾಗಿ ಬೇರೆ ಯಾವ ಕಾರಣಗಳೂ ನನಗೆ ಗೋಚರಿಸದು” ಎಂದಿದ್ದಾರೆ ಪ್ರೊ. ಬಸೋಲೆ.

20-24 ವಯೋಮಾನದ ಯುವಜನರಲ್ಲಿ ಹೆಚ್ಚಿದ ನಿರುದ್ಯೋಗ
ಭಾರತದಲ್ಲಿನ ಉದ್ಯೋಗ ಮತ್ತು ಶ್ರಮಶಕ್ತಿಯ ಬಗ್ಗೆ ಅಧ್ಯಯನ ನಡೆಸಿ ನೀಡಿರುವ ‘ಉದ್ಯೋಗಸ್ಥ ಭಾರತದ ಸ್ಥಿತಿಗತಿ – 2019’ ವರದಿಯ ಪ್ರಕಾರ 20-24 ವಯೋಮಾನದ ಯುವಜನರಲ್ಲಿ ನಿರುದ್ಯೋಗ ಅತಿಹೆಚ್ಚಿದ್ದು, ಇವರು ಯುವ ಶ್ರಮಶಕ್ತಿಯನ್ನು ಪ್ರತಿನಿಧಿಸುವುದರಿಂದ ಇದು ಅತ್ಯಂತ ಆಘಾತಕಾರಿ ಅಂಶವಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರು ಮತ್ತು ಪುರುಷರೆಲ್ಲರಿಗೂ ಇದು ಅನ್ವಯವಾಗುತ್ತದೆ.
“ಸಾಮಾನ್ಯವಾಗಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಬಾಧಿತರಾಗಿದ್ದಾರೆ. ಮಹಿಳೆಯರಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದ್ದು ಶ್ರಮಶಕ್ತಿ ಪಾಲುದಾರಿಕೆ ದರವು ಕಡಿಮೆಯಿರುತ್ತದೆ” ಎಂದು ವರದಿಯಲ್ಲಿ ಹೇಳಿದೆ.
ಪ್ರತಿ ನಾಲ್ಕು ತಿಂಗಳಿಗೊಮ್ಮೆ ಸುಮಾರು 1,60,000 ಕುಟುಂಬಗಳನ್ನು ಸಮೀಕ್ಷೆ ನಡೆಸಿರುವ CMIE ದತ್ತಾಂಶಗಳನ್ನು ಆಧರಿಸಿ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯ ಅಧ್ಯಯನ ಕೈಗೊಂಡಿತ್ತು. ಮೂರು ವಿಭಿನ್ನ ಸಂಸ್ಥೆಗಳ ದತ್ತಾಂಶಗಳನ್ನು ತುಲನೆ ಮಾಡಿರುವ ಅಧ್ಯಯನವು ಮೂರರಲ್ಲೂ ನಿರುದ್ಯೋಗದ ಗತಿ ಒಂದೇ ರೀತಿಯಲ್ಲಿದೆ ಎಂದು ದೃಢೀಕರಿಸಿದೆ.
ಉದ್ಯೋಗದ ಬಗ್ಗೆ ಚಕಾರ ಎತ್ತದ ಮೋದಿ ಚುನಾವಣಾ ಪ್ರಚಾರ
ನರೇಂದ್ರ ಮೋದಿಯವರು ಎರಡನೇ ಅವಧಿಗೆ ದೇಶದ ಆಡಳಿತ ಚುಕ್ಕಾಣಿ ಹಿಡಿಯುವ ಯತ್ನದಲ್ಲಿ ಪ್ರಚಾರ ನಡೆಸಿದ್ದಾರೆ. 2014ರಲ್ಲಿ ಜನಾದೇಶ ಗಳಿಸಿ ಗೆಲುವು ಸಾಧಿಸುವ ಮುನ್ನ ಜನತೆಗೆ ಉದ್ಯೋಗಸೃಷ್ಟಿಯ ಕುರಿತು ನೀಡಿದ್ದ ಆಶ್ವಾಸನೆಯ ಬಗ್ಗೆ ಈ ಬಾರಿಯ ಪ್ರಚಾರಗಳಲ್ಲಿ ಅವರು ಚಕಾರ ಎತ್ತುತ್ತಿಲ್ಲ. ಮೋದಿ ಸರ್ಕಾರವು ತಾನೇ ನೀಡಿದ್ದ ಭರವಸೆಯಂತೆ ಎಲ್ಲರಿಗೂ ಉದ್ಯೋಗ ಕಲ್ಪಿಸಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ, ನೋಟ್ ಅಮಾನ್ಯೀಕರಣದಂತಹ ಜನವಿರೋಧಿ ನೀತಿಗಳು ಭಾರತದ ಆರ್ಥಿಕತೆಯಲ್ಲಿನ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಿದೆ.

ಕೇಂದ್ರ ಸರ್ಕಾರವು ಎನ್ಎಸ್ಎಸ್ಒ ನಂತಹ ತನ್ನದೇ ಸಂಸ್ಥೆಗಳು ನೀಡಿದ ಅಹಿತಕರವಾದ ಉದ್ಯೋಗದ ವರದಿಗಳನ್ನು ಹತ್ತಿಕ್ಕಿದೆ ಎಂಬ ಆರೋಪವೂ ವ್ಯಾಪಕವಾಗಿದೆ. 2017-18ನೇ ಸಾಲಿನಲ್ಲಿ ಭಾರತದ ನಿರುದ್ಯೋಗ ದರವು 45 ವರ್ಷಗಳಲ್ಲೆ ಅತಿ ಹೆಚ್ಚಿತ್ತೆಂದು ಹೇಳಲಾಗಿದೆ. ವಿವಿಧ ಶೈಕ್ಷಣಿಕ ಅರ್ಹತೆಗಳುಳ್ಳ ಜನರ ಶ್ರಮಶಕ್ತಿ ಪಾಲುದಾರಿಕೆ ದರ (Labour Participation Rate) ಮತ್ತು ಉದ್ಯೋಗ ಪಾಲುದಾರಿಕೆ ದರ (Work Participation Rate) ಇವುಗಳನ್ನು ವಿಶ್ಲೇಷಿಸಿ, ಎರಡೂ ಪ್ರಮಾಣಗಳು ಇಳಿಮುಖವಾಗಿರುವುದಕ್ಕೆ ಗ್ರಾಮೀಣ ಮತ್ತು ನಗರಪ್ರದೇಶಗಳಲ್ಲಿರುವ ಕಡಿಮ ವಿದ್ಯಾಭ್ಯಾಸವುಳ್ಳ ಜನ ಪ್ರಮುಖ ಕಾರಣ ಎಂದು CSE ವರದಿ ಹೇಳುತ್ತದೆ. ಶ್ರಮಶಕ್ತಿ ಪಾಲುದಾರಿಕೆ ದರ (LPR) ಎಂದರೆ ಒಟ್ಟು ಜನಸಂಖ್ಯೆಯಲ್ಲಿ ಉದ್ಯೋಗಕ್ಕೆ ಲಭ್ಯವಿರುವ ಜನರ ಪ್ರಮಾಣ. ಒಟ್ಟು ಜನಸಂಖ್ಯೆಯಲ್ಲಿ ಈಗಾಗಲೇ ಉದ್ಯೋಗದಲ್ಲಿರುವ ಜನರ ಪ್ರಮಾಣವನ್ನು ಉದ್ಯೋಗ ಪಾಲುದಾರಿಕೆ (WPR) ಎನ್ನಲಾಗುತ್ತದೆ.
ದುಪ್ಪಟ್ಟಾದ ನಿರುದ್ಯೋಗ ದರ – ವರದಿ ಬಹಿರಂಗ
“1999ರಿಂದ 2011ರ ವರೆಗೆ ನಿರುದ್ಯೋಗ ದರವು ಶೇ.2-3ರಷ್ಟಿದ್ದು, 2015ರಲ್ಲಿ ಏಕಾಏಕಿ ಶೇ.5ಕ್ಕೂ, 2018ರಲ್ಲಿ ಶೇ.6ಕ್ಕಿಂತ ಜಾಸ್ತಿ ಹೆಚ್ಚಿದೆ. PLFS ಮತ್ತು CMIE-CPDX ವರದಿಗಳ ಪ್ರಕಾರ ಒಟ್ಟಾರೆ ನಿರುದ್ಯೋಗ ದರವು 2018ರಲ್ಲಿ ಶೇ.6ರಷ್ಟಿದ್ದು 2000-2011ರ ಅವಧಿಯಲ್ಲಿದ್ದ ಪ್ರಮಾಣದ ದುಪ್ಪಟ್ಟಾಗಿದೆ” ಎಂದು ಅಮಿತ್ ಬಸೋಲೆ, ಆನಂದ್ ಶ್ರೀವಾಸ್ತವ ಮತ್ತು ರೋಸಾ ಅಬ್ರಹಾಂ ಮಂಡಿಸಿರುವ ಸಂಶೋಧನಾ ಪ್ರಬಂಧದಲ್ಲಿ ಹೇಳಲಾಗಿದೆ.
“ಇಡೀ ಅವಧಿಯಲ್ಲಿ ಒಟ್ಟಾರೆ ನಿರುದ್ಯೋಗ ಪ್ರಮಾಣವು ಶೇ.3ರಷ್ಟಿದ್ದು ವಿದ್ಯಾವಂತರಲ್ಲಿ ನಿರುದ್ಯೋಗವು ಶೇ.10ರಷ್ಟಿತ್ತು. ಶಿಕ್ಷಣ ಪಡೆದಿರುವವರಲ್ಲಿ 2011ರಿಂದೀಚೆಗೆ ಶೇ.9ರಷ್ಟಿದ್ದ ನಿರುದ್ಯೋಗ 2016ರಲ್ಲಿ ಶೇ.15-16ರಷ್ಟಾಗಿದೆ ಎಂದೂ ತಿಳಿಸಲಾಗಿದೆ. ಭಾರತದಲ್ಲಿ ಎರಡೇ ವರ್ಷಗಳಲ್ಲಿ ದುಡಿಯಬಲ್ಲ ವಯೋಮಾನದ (15 ರ್ಷಕ್ಕಿಂತ ಮೇಲ್ಪಟ್ಟು) ಜನಸಂಖ್ಯೆ, 2016ರಲ್ಲಿ 950.8 ದಶಲಕ್ಷಗಳಿದ್ದದ್ದು 2018ರಲ್ಲಿ 983.1 ದಶಲಕ್ಷಗಳಿಗೆ ಹೆಚ್ಚಳವಾಗಿದೆ.
ನಿರುದ್ಯೋಗದಿಂದ ಅತಿಹೆಚ್ಚು ಸಂಕಷ್ಟಕ್ಕೊಳಗಾಗಿದ್ದು ತಳಸಮುದಾಯಗಳು …
“ಶೈಕ್ಷಣಿಕ ಮಟ್ಟವು ನಿರುದ್ಯೋಗ ಸಮಸ್ಯೆಯ ಮೇಲೆ ಬಹುವಿಧವಾದ ಪರಿಣಾಮ ಬೀರುತ್ತದೆ. ಕಡಿಮೆ ವಿದ್ಯಾಭ್ಯಾಸವುಳ್ಳ ಅತಿ ಹೆಚ್ಚು ಜನರಿಗೆ ಕೆಲಸ ನೀಡಬಹುದಾದ ಅನೌಪಚಾರಿಕ ಕ್ಷೇತ್ರವು ನೋಟ್ ಅಮಾನ್ಯೀಕರಣ ಮತ್ತು ಜಿಎಸ್ಟಿಗಳ ಅನುಷ್ಠಾನದಿಂದ ಅತ್ಯಂತ ಸಂಕಷ್ಟಕ್ಕೊಳಗಾಯಿತೆಂಬ ಅಭಿಪ್ರಾಯವನ್ನು ದೃಢಗೊಂಡಿದೆ” ಎಂದು ವರದಿ ಹೇಳುತ್ತದೆ. ಆರ್ಥಿಕವಾಗಿ ತಳಸ್ತರದಲ್ಲಿರುವ ಜನಸಮುದಾಯಗಳೇ ಅತಿಹೆಚ್ಚು ಬಾಧಿತರಾಗಿರುವುದು ಎಂಬುದು ಇದರಿಂದ ಸ್ಪಷ್ಟವಾಗಿದೆ.
ಮಹಿಳೆಯರಲ್ಲಿ ಉದ್ಯೋಗ ಕಡಿತಕ್ಕೆ ಸಂಬಂಧಪಟ್ಟಂತೆ ಅಂಕಿಅಂಶಗಳನ್ನು ಏಕೆ ಪ್ರತ್ಯೇಕವಾಗಿ ಸಿದ್ಧಪಡಿಸಿಲ್ಲವೆಂದು ಕೇಳಿದಾಗ ಪ್ರೊ.ಬಸೋಲೆ ವಿವರಿಸಿದ್ದು ಹೀಗೆ: ಮಹಿಳೆಯರ ಬಗ್ಗೆ CMIE ನೀಡುವ ದತ್ತಾಂಶಗಳು ನಮ್ಮ ಅಧ್ಯಯನಕ್ಕೆ ಅಷ್ಟೊಂದು ನೆರವಾಗುವುದಿಲ್ಲ. 2016ರ ಲೇಬರ್ ಬ್ಯೂರೊ ಮತ್ತು CMIE ಸಮೀಕ್ಷಾ ವರದಿಗಳನ್ನು ನಾವು ಹೋಲಿಕೆ ಮಾಡಲು ಆಯ್ದುಕೊಂಡೆವು, ಏಕೆಂದರೆ ಅವುಗಳೇ ಇತ್ತೀಚಿನ ಸಮೀಕ್ಷೆಗಳಾಗಿರುವುದು. ಅವುಗಳಲ್ಲಿ ಮಹಿಳೆಯರ ಕುರಿತ ದತ್ತಾಂಶಗಳು ಒಂದೇ ತರನಾಗಿಲ್ಲ. ಆದರೆ ಪುರುಷರಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಹೋಲಿಸಬಹುದಾಗಿತ್ತು.”
ಕುಸಿದ ಉದ್ಯೋಗಾವಕಾಶ – ಸಂಕಷ್ಟದಲ್ಲಿ ಮಹಿಳೆಯರು

“ಭಾರತದ ಶ್ರಮಶಕ್ತಿ ಮಾರುಕಟ್ಟೆಯಲ್ಲಿ ಮತ್ತು ಶ್ರಮಶಕ್ತಿ ಅಂಕಿಅಂಶಗಳನ್ನು ಕ್ರೋಢೀಕರಿಸುವ ಪದ್ಧತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಭಾರೀ ಕೋಲಾಹಲ ಉಂಟಾಗಿದೆ. ಈ ಅಧ್ಯಯನದಿಂದ ನಾಲ್ಕು ಮುಖ್ಯ ಅಂಶಗಳನ್ನು ನಾವು ಗಮನಿಸಬಹುದಾಗಿದೆ.
• ಯಾವುದೇ ಸಮೀಕ್ಷೆ ಗಮನಿಸಿದರೂ 2011ರ ನಂತರ ನಿರುದ್ಯೋಗ ಪ್ರಮಾಣದಲ್ಲಿ ಏರಿಕೆ ಕಾಣುತ್ತೇವೆ
• ಅತಿಹೆಚ್ಚು ಶಿಕ್ಷಣ ಪಡೆದವರು ಮತ್ತು ಯುವಜನರಲ್ಲಿ ನಿರುದ್ಯೋಗ ಹೆಚ್ಚಾಗಿದೆ
• ಈ ಅವಧಿಯಲ್ಲಿ ಕಡಿಮೆ ವಿದ್ಯಾವಂತರು ನೌಕರಿ ಕಳೆದುಕೊಂಡಿದ್ದಾರೆ ಮತ್ತು ಉದ್ಯೋಗಾವಕಾಶಗಳು ಕುಸಿದಿವೆ
• ನಿರುದ್ಯೋಗ ಪ್ರಮಾಣ ಮತ್ತು ಶ್ರಮಶಕ್ತಿ ಪಾಲುದಾರಿಕೆಗೆ ಸಂಬಂಧಿಸಿದಂತೆ ಮಹಿಳೆಯರು ಹೆಚ್ಚು ಸಂಕಷ್ಟಕ್ಕೆ ಗುರಿಯಾಗಿದ್ದಾರೆ” ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.
More Articles
By the same author
Related Articles
From the same category