ಪ್ರಶ್ನೆ: ಕಳೆದ ಐದು ವರ್ಷಗಳಲ್ಲಿ ನೀವು ಕಂಡಂತಹ ಬದಲಾವಣೆಗಳೇನು?
ಆಶಿಶ್ ನಂದಿ: ಇದನ್ನು ನಾನು ನನ್ನ ಮಾತುಗಳಲ್ಲಿ ವಿವರಿಸಲು ಹೋಗುವುದಿಲ್ಲ. ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಕಲಿಸುವ ನನ್ನ ಸ್ನೇಹಿತರಾದ ರಾಜಕೀಯ ಅರ್ಥಶಾಸ್ತ್ರಜ್ಞರೊಬ್ಬರು ಇದನ್ನು ಅತ್ಯಂತ ಸಮರ್ಪಕವಾಗಿ ಹೇಳುತ್ತಾರೆ. ಗುಜರಾತ್ ಮಾದರಿಯ ಅಭಿವೃದ್ಧಿಯನ್ನು ಎಲ್ಲಿಯೂ ಅನುಸರಿಸಿಲ್ಲ, ಆದರೆ ಗುಜರಾತ್ ಮಾದರಿಯ ದ್ವೇಷವನ್ನು ಭಾರತದೆಲ್ಲೆಡೆ ಹರಡಲಾಗಿದೆ. ಇದೀಗ ಭಾರತದ ಸಾರ್ವಜನಿಕ ಬದುಕಿನಲ್ಲಿ ಅದು ಪ್ರಧಾನವಾಗಿ ಕಾಣಿಸಿಕೊಂಡಿರುವ ಮಾದರಿಯಾಗಿಬಿಟ್ಟಿದೆ.
ಭಾರತದ ಮಧ್ಯಮ ವರ್ಗವು ಈಗ ಟೊಳ್ಳಾಗಿರುವ ಮಧ್ಯಮ ವರ್ಗವಾಗಿದೆ. ಪರಂಪರಾಗತ ಮಧ್ಯಮ ವರ್ಗವು ಈ 70 ವರ್ಷಗಳ ಅವಧಿಯಲ್ಲಿ ಆರಕ್ಕಿಂತ ಅಧಿಕ ಪಟ್ಟು ಬೆಳೆದಿದೆ. ಆದರೆ ಈ ಹೊಸ ಮಧ್ಯಮ ವರ್ಗವು ಮಧ್ಯಮ-ವರ್ಗದ ಹಣಕಾಸನ್ನು ಗಳಿಸಿದ್ದರೂ ಮಧ್ಯಮ-ವರ್ಗದ ಮೌಲ್ಯಗಳನ್ನು ಹೊಂದಿಲ್ಲ. ಸಾಮಾನ್ಯವಾಗಿ ಮಧ್ಯಮ ವರ್ಗವು ಮೌಲ್ಯಗಳನ್ನು ಹೊಂದಿರುತ್ತದೆಂದು ಮತ್ತು ಹಳೆಯ ಮೌಲ್ಯಗಳು ಸವಕಲಾಗುವಾಗ ಇದು ಹೊಸದನ್ನು ಅಳವಡಿಸಿಕೊಳ್ಳುತ್ತದೆ ನಂಬಲಾಗಿದೆ. ಆದರೆ ಈಗ ನೋಡುತ್ತಿರುವ ಮಧ್ಯಮ ವರ್ಗ ಭಿನ್ನವಾಗಿದೆ. ಈ ವರ್ಗದಲ್ಲಿ ತೋರಿಕೆಯ ಭಾವವಾದರೂ ಕಾಣುತ್ತಿಲ್ಲ. ತಾವು ಮಧ್ಯಮ ವರ್ಗಕ್ಕೆ ಸೇರಿದವರೆಂದಾಗಲೀ, ಮತ್ತು ಹಿಂದಿನ ಪೀಳಿಗೆಗಳಲ್ಲಿ ಇದ್ದ ರೀತಿ ತಾವು ಮಧ್ಯಮ ವರ್ಗದ ಮೌಲ್ಯಗಳನ್ನು ಹೊಂದಿದವರು ಎಂಬ ತೋರಿಕೆಯೂ ಇಲ್ಲವಾಗಿದೆ.
ಮಧ್ಯಮ ವರ್ಗಕ್ಕೆ ಸೇರಿದವರಲ್ಲಿ ಕೆಲ ಲಕ್ಷಣಗಳಿದ್ದವು. ಉದಾಹರಣೆಗೆ, ನೀವು ಯಾವುದೇ ಬೆಂಗಾಲಿ ಕುಟುಂಬದಲ್ಲೂ ರವೀಂದ್ರನಾಥ ಟ್ಯಾಗೋರರ 15 ಸಂಪುಟಗಳ ಕೃತಿಗಳನ್ನು ಇಲ್ಲವೇ ವಿಲಿಯಮ್ ಶೇಕ್ಸ್ಪಿಯರ್ನ ಎಲ್ಲಾ ಬರಹಗಳನ್ನು ಅಥವಾ ರವಿಶಂಕರ್ ಅವರ ಸಿಡಿ/ ಡಿವಿಡಿಗಳನ್ನು ಕಾಣಬಹುದು. ಇದರಿಂದಾಗಿ ಮೌಲ್ಯಗಳು ಬದುಕುಳಿದವಲ್ಲದೆ ಒಂದು ಪೀಳಿಗೆಯನ್ನು ಬಿಟ್ಟು ಅವು ಪುನಃ ಮರಳಿ ಬರಲು ಸಾಧ್ಯವಾಗಿದೆ.
ಈಗ ನಾವು ಯಾವುದೇ ಉತ್ಸಾಹವಿಲ್ಲದಂತಿದ್ದೇವೆ. ಅಂತಹ ಮೌಲ್ಯಗಳು ಸವೆಯಲು ಕಾರಣವೇನೆಂಬುದನ್ನು ಗುರುತಿಸಲು ಸ್ವಲ್ಪ ಕಷ್ಟವೇ. ಹೊಸ ಆಡಳಿತದ ಪ್ರಭಾವದಿಂದ ಬದಲಾವಣೆಗಳು ಉಂಟಾಗಿವೆ ಮತ್ತು ರಾಜಕೀಯ ಪ್ರಭುತ್ವದಲ್ಲಿ ಅಂತಹ ಜನರೇ ತುಂಬಿಹೋಗಿದ್ದಾರೆ. ಅವರಲ್ಲಿ ಕೆಲವು ಅಪವಾದಗಳಿರಬಹುದು. ಆದರೆ ಅಮಿತ್ ಶಾ ಗಾಗಲೀ ಮೋದಿಗಾಗಲೀ ಅಂತಹ ನಿಜವಾದ ಮೌಲ್ಯಗಳೇನೆಂಬುದರ ಪರಿವೆ ಇರುವುದರ ಬಗ್ಗೆ ನನಗಂತೂ ಅನುಮಾನವಿದೆ. ಮೋದಿ ಮಧ್ಯಮ ವರ್ಗದಿಂದ ಬಂದವನಾಗಿದ್ದರೂ ದುರಾದೃಷ್ಟವಶಾತ್ ಆತ ಆರೆಸ್ಸೆಸ್ಸಿನ ಶಿಶು. ಏಕಕಾಲದಲ್ಲಿ ವಿಭಿನ್ನ ಆಲೋಚನಾಕ್ರಮಗಳು ಮತ್ತು ದೃಷ್ಟಿಕೋನಗಳನ್ನು ಹೊಂದಿರುವಾಗ ಉತ್ಸಾಹದಿಂದ ಚರ್ಚೆ, ಸಂವಾದಗಳನ್ನು ನಡೆಸುವ ವ್ಯವಸ್ಥೆಯ ಬಗ್ಗೆ ಅವರಿಗೆ ತಿಳಿವಳಿಕೆ ಅಷ್ಟಾಗಿ ಇಲ್ಲ.
ಆದ್ದರಿಂದಲೇ ಅವರು ಪ್ರತಿರೋಧವನ್ನು ಹತ್ತಿಕ್ಕಲು ಬಯಸುತ್ತಾರೆ. ನಮ್ಮ ಸುತ್ತಮುತ್ತಲೂ ಇದೇ ನಡೆಯುತ್ತಿರುವುದು. ಅವರು ಟಿವಿ ಚಾನೆಲ್ಗಳನ್ನು ಖರೀದಿಸುತ್ತಿದ್ದಾರೆ, ಪತ್ರಕರ್ತರಿಗೆ ಸಮನ್ಸ್ ನೀಡಲಾಗುತ್ತಿದೆ. ಮೊದಲೆಲ್ಲಾ ಸಾಕ್ಷಿಗಳನ್ನು ವಿಚಾರಣೆಗೆಂದು ಕರೆಯಲಾಗುತ್ತಿತ್ತು, ಆದರೆ ಈಗ ಮಾಧ್ಯಮಗಳನ್ನು ಕರೆಯಲಾಗುತ್ತಿದೆ. ಯಾರಿಗೆ ಜಾಹೀರಾತು ನೀಡಬೇಕು, ಯಾರನ್ನು ಪ್ರೋತ್ಸಾಹಿಸಬೇಕು, ಯಾರನ್ನು ಮಾಡಬಾರದೆಂದು ಸರ್ಕಾರವೇ ನಿರ್ಧರಿಸುತ್ತದೆ. ಈಗ ಇವೆಲ್ಲವೂ ಕೆಲಸ ಮಾಡುತ್ತವೆ. ಹಾಗಾಗಿ ಒಂದರ್ಥದಲ್ಲಿ ಮಧ್ಯಮ ವರ್ಗಕ್ಕೆ ಏಕಧ್ವನಿಯನ್ನು ಪರಿಚಯಿಸುವ ಯತ್ನ ನಡೆದಿದೆ. ಅಂದರೆ ಅವರು ವೈವಿಧ್ಯತೆಯನ್ನು ಸಹಿಸುವುದಿಲ್ಲ.
ಭಾರತದಲ್ಲಿ ಯಾವಾಗಲೂ ಶಾಂತಿ ಚಳವಳಿ ನಡೆದುಕೊಂಡು ಬಂದಿತ್ತು. ಇದೀಗ ಶಾಂತಿ ಚಳವಳಿಗಳ ಬಗ್ಗೆ ಮಾತನಾಡುವುದೇ ಅಪರಾಧವಾಗಿಬಿಟ್ಟಿದೆ. ವಿರೋಧಪಕ್ಷಗಳು ಕೂಡ ಬಾಯಿಬಿಡಲು ಧೈರ್ಯ ಮಾಡುತ್ತಿಲ್ಲ. ಸೇನೆ ಪರಮಪವಿತ್ರವೋ ಎಂಬಂತೆ ಅದನ್ನು ಯಾರೂ ವಿಮರ್ಶಿಸುವಂತಿಲ್ಲ. ಭಾರತದ ರಾಜಕೀಯ ರಂಗದಲ್ಲಿ ಯಾವ ಕ್ಷೇತ್ರವೂ ಪವಿತ್ರವಲ್ಲ. ಹಾಗಿದ್ದ ಮೇಲೆ ಸೇನೆ ಪವಿತ್ರವಾಗಬೇಕೇಕೆ? ನ್ಯಾಯಾಂಗವನ್ನೂ ಸಹ ಗಂಭೀರವಾಗಿ ವಿಮರ್ಶೆಗೊಳಪಡಿಸಬಹುದಾಗಿದೆ. ಅವರೇನೂ ಟೀಕಿಸುವ ಜನರನ್ನು ಬೆನ್ನತ್ತಿ ಹೋಗುವುದಿಲ್ಲ.
ದೇವಾನುದೇವತೆಗಳೂ ಕೂಡ ಪ್ರತಿರೋಧವನ್ನು ಸಹಿಸುತ್ತಾರೆ. ನಮ್ಮಲ್ಲಿ ಅನೇಕ ದೇವದೇವತೆಗಳು ಒಬ್ಬರನ್ನೊಬ್ಬರು ಇಷ್ಟಪಡುವುದಿಲ್ಲವಾದರೂ ಅವರಲ್ಲಿ ಸಹಿಷ್ಣುತೆ ಇದೆ. ಭಾರತದಲ್ಲಿ ಶತಶತಮಾನಗಳಿಂದಲೂ ಸಹಬಾಳ್ವೆ ನಡೆಸಿಕೊಂಡು ಬಂದಿರುವ ತತ್ವಶಾಸ್ತ್ರದ ಆರು ಪ್ರಧಾನ ಶಾಖೆಗಳ ಬಗ್ಗೆ ನಾವು ಮಾತನಾಡುತ್ತೇವೆ. ಈಗ ಮೊಟ್ಟಮೊದಲ ಬಾರಿಗೆ ಒಂದು ಏಕರೂಪಿ ಸಮಾಜವೆಷ್ಟು ಸುಂದರ ಎಂದು ಹೇಳುವುದನ್ನು ಕೇಳುತ್ತಿದ್ದೇವೆ. ಇಲ್ಲಿಗೆ ಬಂದು ನಿಂತಿದ್ದೇವೆ ನಾವು!
ಪರಿಸ್ಥಿತಿ ಈಗ ಬದಲಾಗುವುದು ಕಷ್ಟವೇ. ಏಕೆಂದರೆ ಈ ವ್ಯವಸ್ಥೆಯನ್ನು ಬಹಳ ಸಮರ್ಥವಾಗಿ ನಿಭಾಯಿಸಲಾಗಿದೆ. ಸ್ವಲ್ಪ ಮಟ್ಟಿಗೆ ಅಭಿವೃದ್ಧಿ ಬದಲಾವಣೆ ತರುತ್ತದೆ. ಒಂದು ದೇಶ ಅದ್ಭುತವಾದ ಅಭಿವೃದ್ಧಿಗಾಗಿ ಹಾತೊರೆದಾಗಲೆಲ್ಲಾ, ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸಿ ನಿಭಾಯಿಸಲು ಬಿಟ್ಟಿಲ್ಲ. ಈ ವ್ಯವಸ್ಥೆಯ ಬಗ್ಗೆ ನಾನೇನೂ ತೀರಾ ಹೆಚ್ಚು ಭರವಸೆ ಹೊಂದಿಲ್ಲವಾದರೂ ಭಾರತದ ಮತದಾರರು ತಮ್ಮ ತೀರ್ಮಾನವನ್ನು ಹೇಳುವರೆಂದು ನಂಬಿದ್ದೇನೆ.

ಪ್ರಶ್ನೆ: ಮುಂದಿನ ಐದು ವರ್ಷಗಳು ಹೇಗಿರಬಹುದೆಂದು ನಿಮ್ಮ ಅನಿಸಿಕೆ?
ಆಶಿಶ್ ನಂದಿ: ಪರಿಸ್ಥಿತಿ ಅಷ್ಟೇನೂ ಬದಲಾಗದೆಂದು ನನ್ನ ಅನಿಸಿಕೆ. ಭಾರತದ ರಾಜಕಾರಣವನ್ನು ಬದಲಿಸುವುದು ಬಹಳ ಕಷ್ಟ. ಏಕೆಂದರೆ ನಾವು ಬದುಕುತ್ತಿರುವುದು ಮಾಧ್ಯಮ-ತೀಕ್ಷ್ಣವಾದ ಪ್ರಚಾರದ ನಡುವಿನಲ್ಲಿ. ನಮ್ಮಲ್ಲಿರುವ ರಾಶಿರಾಶಿ ನಾಯಕರ ನೈಜ ವ್ಯಕ್ತಿತ್ವ, ನೈಜ ಅಭಿಪ್ರಾಯಗಳು, ನೈಜ ನಂಬಿಕೆಗಳು ನನಗಂತೂ ಇನ್ನೂ ತಿಳಿದೇ ಇಲ್ಲ. ಅವರು ಬಹಳಷ್ಟು ವಿಷಯಗಳನ್ನು ಹೇಳುತ್ತಾರೆ, ಏಕೆಂದರೆ ಅದರಿಂದಾಗಿ ಅವರಿಗೆ ಮತಗಳು ಲಭಿಸುತ್ತವೆಂದಷ್ಟೇ. ಅವೆಲ್ಲವೂ ಮಾಧ್ಯಮ-ಪ್ರೇರಿತ. ಈಗ ಇದು ಅಮೇರಿಕದ ಅಧ್ಯಕ್ಷೀಯ ಚುನಾವಣೆಯಂತೆ ಆಗುತ್ತಿದೆ.
ಆದರೆ ಭಾರತದ ಪ್ರಜಾತಂತ್ರವು ಅದಕ್ಕೆ ವಿನ್ಯಾಸಗೊಂಡಿಲ್ಲ. ನಮಗೆ ಅತ್ಯಂತ ಅವಶ್ಯವಾಗಿರುವ ಪ್ರತಿನಿಧಿ (Representational system) ವ್ಯವಸ್ಥೆಯನ್ನು ಬಿಟ್ಟುಹೋಗುತ್ತಿದ್ದೇವೆ. ಆದ್ದರಿಂದ ಈ ಪರಿಸ್ಥಿತಿ ಪ್ರಜಾತಂತ್ರ ವ್ಯವಸ್ಥೆಗೇ ಅತ್ಯಂತ ಅಪಾಯಕಾರಿಯಾಗಿದೆ. ಅಷ್ಟೇ ಅಲ್ಲ, ಇದು ಪ್ರಜಾತಾಂತ್ರಿಕ ಸಂವಿಧಾನದಡಿಯಲ್ಲೇ ಒಂದು ಸರ್ವಾಧಿಕಾರಿ ಆಳ್ವಿಕೆಗೆ ಎಡೆಮಾಡಿಕೊಡುತ್ತಿದೆ.
ಪ್ರಶ್ನೆ: ಇದನ್ನು ಹೇಗೆ ಎದುರಿಸುವಿರಿ? ಈ ಪರಿಸ್ಥಿತಿಯನ್ನು ಬದಲಿಸಲು ಒಂದು ಹೊಸ ತಲೆಮಾರಿನ ನಾಯಕತ್ವ ಉದಯವಾಗುತ್ತಿದೆ ಎನ್ನಬಹುದೇ?
ಆಶಿಶ್ ನಂದಿ: ಭಾರತದ ರಾಜಕಾರಣದ ಕೇಂದ್ರ ಸ್ಥಾನಗಳಲ್ಲಿ ಈ ಹೊಸ ತಲೆಮಾರಿನ ನಾಯಕತ್ವಕ್ಕೆ ಅಷ್ಟು ಸುಲಭವಾಗಿ ಪ್ರವೇಶ ಸಿಗದು. ಅವರು ಒಳಬರಲು ಯತ್ನಿಸುತ್ತಾರೆ. ಅವರಿಗೆ ಇನ್ನೂ ಅವಕಾಶವಿದೆ ಎನಿಸುತ್ತದೆ. ಈ ಸದ್ಯ ಜನ ಬೇರೆ ಏನನ್ನೋ ನಿರೀಕ್ಷಿಸುತ್ತಿದ್ದಾರೆಯೇ ಹೊರತು ಪರಿಸ್ಥಿತಿಯನ್ನು ಬದಲಿಸುವ ಹೊಸ ತಲೆಮಾರಿನ ಆ ನಾಯಕತ್ವವವನ್ನಲ್ಲ. ಭಾರತೀಯ ಮತದಾರರ ಸ್ಥಿತಿಸ್ಥಾಪಕತ್ವದಲ್ಲಿ ನಾನು ಇಟ್ಟಿರುವ ವಿಶ್ವಾಸ ಪರಿಸ್ಥಿತಿಯನ್ನು ಬದಲಿಸಬಲ್ಲದು. ಏಕೆಂದರೆ ಈ ಹಿಂದೆಯೂ ಸಹ ಇಂತಹ ಬಿರುಗಾಳಿಗಳನ್ನು ಅವರು ಎದುರಿಸಿ ನಿಭಾಯಿಸಿದ್ದಾರೆ.
ಪ್ರಶ್ನೆ: ಬಿಜೆಪಿಯನ್ನು ಯಾವ ಕಾರಣಕ್ಕಾಗಿ ನೆನೆಸಿಕೊಳ್ಳಲಾಗುವುದು ಎಂದು ನಿಮ್ಮ ಅಭಿಪ್ರಾಯ?
ಆಶಿಶ್ ನಂದಿ: ಭಾರತವನ್ನು ಲಿಂಚಿಂಗ್ ರಾಜಧಾನಿಯನ್ನಾಗಿಸಿದ್ದಕ್ಕಾಗಿ. ಅಮೆರಿಕದಲ್ಲಿ ಅವರು ಏನೇನು ಮಾಡುತ್ತಾರೋ, ಅದನ್ನೆಲ್ಲಾ ಅವರಿಲ್ಲಿ ಮಾಡಬೇಕು. 1950ರ ವರೆಗೆ ಅಮೆರಿಕ ವಿಶ್ವದಲ್ಲೇ ಲಿಂಚಿಂಗ್ ರಾಜಧಾನಿ ಎನಿಸಿಕೊಂಡಿತ್ತು. ಇದೀಗ 70 ವರ್ಷಗಳ ನಂತರ ಭಾರತದಲ್ಲಿ ಆ ಸಂಪ್ರದಾಯವನ್ನು ನಾವು ಪುನರಾರಂಭಿಸಿದ್ದೇವೆ. ಸೊಹರಾಬುದ್ದೀನ್ ಎನ್ಕೌಂಟರ್ ಮತ್ತು ಆತನ ಪತ್ನಿ ಕೌಸರ್ ಬಿ ಹತ್ಯೆ ಪ್ರಕರಣಗಳಲ್ಲಿ ಸಾಕಷ್ಟು ಸಾಕ್ಷಿಗಳು ಪ್ರತಿಕೂಲವಾಗಿ ತಿರುಗಿಬಿಟ್ಟವು. ಸರ್ಕಾರವು ಅವನನ್ನು ಕಾನೂನುಬಾಹಿರವಾಗಿ ಕೊಂದಿದೆ. ಇದು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ “ಸರ್ವರಿಗೂ ಉಚಿತ” ಕೊಲೆಗಳಿಗೆ ಆದೇಶಿಸಿದಂತೆಯೇ!
ಪ್ರಶ್ನೆ: ಈ ಐದು ವರ್ಷಗಳಲ್ಲಿ ಬಿಜೆಪಿಯ ಕಾರ್ಯನಿರ್ವಹಣೆಯ ಬಗ್ಗೆ ಏನು ಹೇಳುತ್ತೀರಿ?
ಆಶಿಶ್ ನಂದಿ: ಅವರು ಮನಸ್ಸಿಟ್ಟು ಕೆಲಸಕಾರ್ಯ ಮಾಡಿದರೆಂದು ನನಗೆ ಅನಿಸುವುದಿಲ್ಲ. ಅವರು ಕೆಲಸ ಮಾಡಿದ್ದೇವೆಂದು ಹೇಳುತ್ತಿದ್ದಾರೆ, ಆದರೆ ಅವರ ಗಮನವನ್ನೆಲ್ಲಾ ಮಾಧ್ಯಮಗಳಲ್ಲೇ ನೆಟ್ಟಿದ್ದರು. ಅವರ ಗಮನವಂತೂ ಸಾರ್ವಜನಿಕರು ಇದ್ದಾಗ ಮಾತ್ರ! ಪ್ರತಿಯೊಬ್ಬ ಆಡಳಿತಗಾರನನ್ನೂ ಅಪ್ಪಿಕೊಳ್ಳುವುದರಲ್ಲಿ ಮೋದಿ ವಿಶ್ವ ದಾಖಲೆ ಸಾಧಿಸಿದ್ದಾರೆ. ಬೇರಾವ ಭಾರತೀಯ ಪ್ರಧಾನಮಂತ್ರಿಯೂ ಈ ಸಾಧನೆಗೆ ಸರಿಸಾಟಿಯಾಗಲಾರ. ಇದು ಗಿನ್ನೆಸ್ ದಾಖಲೆಯ ಪುಸ್ತಕವನ್ನು ಸೇರಲು ಅರ್ಹತೆ ಪಡದಿದೆ!
ಪ್ರಶ್ನೆ: ಬಿಜೆಪಿ ಅಧಿಕಾರಕ್ಕೆ ಬಂದರೆ ನಾವು ಯಾವುದರ ಬಗ್ಗೆ ಹೆದರಬೇಕಾಗುತ್ತದೆ?
ಆಶಿಶ್ ನಂದಿ: ವ್ಯವಸ್ಥೆಯು ಇನ್ನಷ್ಟು ಮುಚ್ಚಿಹೋಗುತ್ತದೆ ಎಂದು ನನಗನಿಸುತ್ತದೆ. ಅಧಿಕಾರ ಎಂಬುದು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಪರೀಕ್ಷಿಸಲು ಒಳ್ಳೆಯ ಮನೋವೈಜ್ಞಾನಿಕ ಮಾಪಕ. ಈ ಕ್ಷಣದಲ್ಲಿ ಮೋದಿ ತಾನು ಯಾರಿಂದಲೂ ಏನನ್ನೂ ಕಲಿಯುವುದಿಲ್ಲ ಎಂದು ತಿಳಿದಿದ್ದಾರೆ. ಅವರು ಎಲ್ಲವನ್ನೂ ಬಲ್ಲವರೆಂದು ತಿಳಿದು ಎಲ್ಲಾ ವಿಷಯಗಳ ಕುರಿತೂ ಮಾತನಾಡುತ್ತಾರೆ. ಜ್ಞಾನದ ಅಗತ್ಯವಿಲ್ಲ ಎಂಬ ಯೋಚನೆ ಅವರಿಗೆ ಎಲ್ಲಿಂದ ಬರುತ್ತದೋ ಯಾರಿಗೆ ಗೊತ್ತು! ಅವರಿಗೆ ಜ್ಞಾನವೆಂದರೆ ತಿರಸ್ಕಾರ.
ಅವರು ಕೇವಲ ಅನ್ವಯಿಕ ಜ್ಞಾನದ ಬಗ್ಗೆ ಯೋಚಿಸುತ್ತಾರೆ. ಆದರೆ ನಿಜವಾದ ಸೈದ್ಧಾಂತಿಕ ತಿಳಿವಳಿಕೆ ಇಲ್ಲದೆ ಅನ್ವಯಿಕ ಜ್ಞಾನ ದಕ್ಕುವುದಿಲ್ಲ. ಭಾರತ ತನ್ನದೇ ಆದ ಜ್ಞಾನ ಪದ್ಧತಿಗಳನ್ನು ಹೊಂದಬೇಕು. ಈ ದೇಶ ಶತಮಾನಗಳಿಂದಲೂ ತನ್ನದೇ ಜ್ಞಾನ ಪದ್ಧತಿಯನ್ನು ಪಡೆದಿದ್ದು, ಅದು ಕೇವಲ ಭಾರತದಲ್ಲಲ್ಲದೆ ಇಂಡಿಕ್ ನಾಗರಿಕತೆಗೇ ವಿಭಿನ್ನ ರೀತಿಯಲ್ಲಿ ತನ್ನನ್ನು ತಾನು ಪ್ರಕಟಪಡಿಸಿಕೊಂಡಿತ್ತು. ಇಂಡಿಕ್ ನಾಗರಿಕತೆಯು ಅಫ್ಘಾನಿಸ್ತಾನದಿಂದ ವಿಯೆತ್ನಾಂ ವರೆಗೆ ಹರಡಿಕೊಂಡಿರುವ ದೇಶಗಳನ್ನು ಒಳಗೊಂಡಿರುತ್ತದೆ. ಇವುಗಳ ಮತ್ತು ಬೇರೆಲ್ಲಾ ದೇಶಗಳ ಬಗ್ಗೆ ನಾವು ತಿಳಿದುಕೊಳ್ಳಬೇಕು.

ಪ್ರಶ್ನೆ: ಬಿಜೆಪಿ ಸರ್ಕಾರದಿಂದ ಅತಿಹೆಚ್ಚು ತೊಂದರೆಗೊಳಗಾಗಿರುವ ಜನವಿಭಾಗ ಯಾವುದು?
ಆಶಿಶ್ ನಂದಿ: ಅವರೆಲ್ಲರೂ ಆದಿವಾಸಿಗಳನ್ನು ಕೀಳಾಗಿ ಕಂಡಿದ್ದಾರೆ ಎಂಬುದು ಬಹಳ ಸ್ಪಷ್ಟವಾಗಿದೆ ಎನಿಸುತ್ತದೆ. ಎರಡನೆಯದಾಗಿ ರೈತರು ಮತ್ತು ಮೂರನೆಯದಾಗಿ ಮುಸ್ಲಿಮರು.
ಸೋನಿಯಾ ಗಾಂಧಿಯವರು ರಚಿಸಿದ್ದ ರಾಷ್ಟ್ರೀಯ ಸಲಹಾ ಮಂಡಳಿ ಅತ್ಯಂತ ಒಳ್ಳೆಯ ದೋಷಪರಿಹಾರಕ ಕ್ರಮವಾಗಿತ್ತು. ರಾಜಕಾರಣಿಯಾದವರು ಎಲ್ಲಾ ಪಕ್ಷಗಳತ್ತ ಗಮನ ಹರಿಸಿ, ಎಲ್ಲರೊಡನೆ ಮಾತುಕತೆ ನಡೆಸಿ ಅಂತಿಮವಾಗಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಅಮೆರಿಕ ತಾಲಿಬಾನ್ ಜೊತೆಗೆ ಸಂಧಾನ ಮಾಡಬಹುದಾದರೆ, ನಮ್ಮ ಸರ್ಕಾರ ನಕ್ಸಲೈಟರ ಜೊತೆ ಮಾತನಾಡಲು ಸಾಧ್ಯವಾಗದೇಕೆ ಎಂಬುದು ನನ್ನ ಪ್ರಶ್ನೆ. ನಕ್ಸಲರ ಪೈಕಿ ಶೇ.90ಕ್ಕಿಂತ ಹೆಚ್ಚು ಕಾರ್ಯಕರ್ತರು ಆದಿವಾಸಿಗಳೆಂಬುದನ್ನು ಮರೆಯಬಾರದು ಮತ್ತು ನಾವು ಅವರ ವಿರುದ್ಧ ನಮ್ಮ ಭದ್ರತಾ ಪಡೆಗಳನ್ನು ನಿಯೋಜಿಸುತ್ತಿದ್ದೇವೆ.
ಈಗ ಇಂತಹ ಪರಿಸ್ಥಿತಿಯಲ್ಲಿ, ಆದಿವಾಸಿಗಳು ಎರಡು ತರದ ಆಲೋಚನೆಗಳನ್ನು ಮಾಡುತ್ತಿದ್ದಾರೆ. ಆದಿವಾಸಿಗಳು ನಮ್ಮ ಪ್ರಜಾತಂತ್ರದ ಮರೆತುಹೋಗಿರುವ ಭಾಗವಾಗಿದ್ದಾರೆ. ಅಲ್ಲದೆ ಈ ವರೆಗೂ ಅವರು ಯಾವುದೇ ಬೇಡಿಕೆಗಳನ್ನೂ ಇಟ್ಟಿರಲಿಲ್ಲ. ಅವರ ಅವಶ್ಯಕತೆಗಳು ಅತ್ಯಂತ ಕನಿಷ್ಟ ಪ್ರಮಾಣದ್ದು. ಅವರು ನಮ್ಮ ಪರಿಸರ ಆರೋಗ್ಯದ ಸಂರಕ್ಷಕರು; ಒಂದು ಹಂತ ಮೀರಿ ಅವರು ಅರಣ್ಯ ನಾಶಕ್ಕೆ ಅವಕಾಶ ಕೊಡುವುದಿಲ್ಲ, ಎಗ್ಗಿಲ್ಲದೆ ನಡೆಯುವ ಗಣಿಗಾರಿಕೆಯನ್ನು ತಡೆಯುತ್ತಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲಿ ಸಮುದಾಯಗಳ ಒಂದು ಇಡೀ ಸಮೂಹವನ್ನೇ ಕೆಲಸಕ್ಕೆ ಬಾರದವರೆಂಬಂತೆ ಮಾಡಿಬಿಡಲಾಗಿದೆ. ಅವರ ಭವಿಷ್ಯದ ಬಗ್ಗೆ ಯಾರೂ ಚಿಂತಿಸುವುದಿಲ್ಲ. ಇನ್ನು, ರೈತರಿಗೆ ಸಂಬಂಧಿಸಿದಂತೆ, ಕೃಷಿಕರ ಸಂಖ್ಯೆಯನ್ನು ಇಳಿಸಬೇಕೆಂದು ಸರ್ಕಾರ ಬಯಸಿದೆ ಎಂಬುದನ್ನು ಎಲ್ಲರೂ ತಿಳಿದಿದ್ದಾರೆ. ಭಾರತದಲ್ಲಿ ಕೃಷಿ-ಅವಲಂಬಿತ ನಾಗರಿಕರ ಪ್ರಮಾಣವನ್ನು ಕಡಿತಗೊಳಿಸಬೇಕೆಂಬುದು ಅವರ ಆಶಯ. ಅದ್ಭುತ ಬೆಳವಣಿಗೆ ಎಂಬ ಆಲೋಚನೆಯು ಒಂದು ಹಿಡಿ ಆಳುವ ಗಣ್ಯರನ್ನು ಹುಟ್ಟುಹಾಕಿದ್ದು, ಅವರು ಸುಮ್ಮನೆ ನಿಲ್ಲುವುದೇ ಇಲ್ಲ. ಶ್ರೀಮತಿ ಗಾಂಧಿಯವರ ರಾಷ್ಟ್ರೀಯ ಸಲಹಾ ಮಂಡಳಿ ಮತ್ತು ಎನ್ಜಿಒಗಳು, ಭಾರತದ ಪ್ರಗತಿಗೆ ಅಡ್ಡಿ ಬರುವಂತಹ ವಿಚಾರಗಳನ್ನು ಮಾತನಾಡುತ್ತಾರೆಂದು ಮತ್ತು ಅಂತಹವುಗಳನ್ನೇ ಸಮರ್ಥಿಸಿಕೊಳ್ಳುತ್ತಾರೆಂದು ಅವರು ತಿಳಿದಿದ್ದಾರೆ.
ಈ ಆಡಳಿತವು ಡೊನಾಲ್ಡ್ ಟ್ರಂಪ್ ಆಡಳಿತವಿದ್ದಂತೆಯೇ. ವಿನಾಶಕಾರಕ ಆಲೋಚನೆಗಳನ್ನೇ ಅವರು ರಕ್ಷಿಸುತ್ತಿದ್ದಾರೆ. ಆದರೆ ಅವರು ಹಾಗೆ ಯೋಚಿಸುವುದಿಲ್ಲ. ಜ್ಞಾನದೀವಿಗೆಯನ್ನು ಹೊತ್ತು ಮುಂಚೂಣಿಯಲ್ಲಿದ್ದೇವೆ ಎಂದು ಅವರು ತಿಳಿದಿದ್ದಾರೆ. ಈಗ ದೇಶವನ್ನು ಮೊದಲಿನ ಸ್ಥಿತಿಗೆ ಮರಳಿಸುವುದು ಕಷ್ಟವಾದೀತು.
More Articles
By the same author