ಕುಖ್ಯಾತ ಮಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಎಬಿವಿಪಿ ಕಾರ್ಯಕರ್ತೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಇಂದೇ ಬಿಜೆಪಿಗೆ ಸೇರ್ಪಡೆಯಾಗಿ ಬಿಜೆಪಿ ಅಭ್ಯರ್ಥಿಯಾಗಿಯೂ ಸ್ಪರ್ಧಿಸಲಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರದಿಂದ ಕಾಂಗ್ರೆಸ್ ದಿಗ್ಗಜ ಮತ್ತು ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರ ವಿರುದ್ಧವೇ ಸಾದ್ವಿ ಹಣಾಹಣಿ ನಡೆಸಲಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮತ್ತು ಉಮಾಭಾರತಿ ಸ್ಪರ್ಧಿಸಲು ಒಪ್ಪದ ಕಾರಣ ಇದೀಗ ಆ ಕ್ಷೇತ್ರದಿಂದ ಸಾಧ್ವಿ ಪ್ರಗ್ಯಾ ಸಿಂಗ್ ಅವರನ್ನು ಬಿಜೆಪಿ ಕಣಕ್ಕಿಳಿಸುವುದಾಗಿ ಬುಧವಾರ ಬಿಜೆಪಿ ತೀರ್ಮಾನಿಸಿದೆ.
ಮಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಬುಧವಾರ ಭಾರತೀಯ ಜನತಾ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾದರು. ಇದಕ್ಕೂ ಮುನ್ನ ಬಿಜೆಪಿಯ ಹಿರಿಯ ನಾಯಕರಾದ ಶಿವರಾಜ್ ಸಿಂಗ್ ಚೌಹಾನ್, ರಾಮ್ ಲಾಲ್ ಮತ್ತು ಪ್ರಭಾತ್ ಝಾ ಅವರೊಂದಿಗೆ ಸಭೆ ನಡೆಸಲಾಯಿತು. ಸಾಧ್ವಿ “ಅಧಿಕೃತವಾಗಿ ನಾನು ಬಿಜೆಪಿ ಸೇರ್ಪಡೆಯಾಗಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುತ್ತೇನೆ” ಎಂದಿದ್ದಾರೆ.
2008ರ ಮಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಪ್ರಮುಖರಾದ ಸಾಧ್ವಿ ಸಿಂಗ್ ಠಾಕೂರ್ ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. 2008ರ ಸೆಪ್ಟೆಂಬರ್ 29ರಂದು ಮಹಾರಾಷ್ಟ್ರದ ಮುಂಬಯಿಯಿಂದ 270 ಕಿಮೀ. ದೂರದಲ್ಲಿರುವ ಮಲೇಗಾಂವ್ ಪ್ರದೇಶದಲ್ಲಿ ಮೊಟಾರ್ ಸೈಕಲ್ ಗೆ ಜೋಡಿಸಿದ್ದ ಸ್ಫೋಟಕ ವಸ್ತುವನ್ನು ಸ್ಫೋಟಿಸಲಾಗಿತ್ತು. 7 ಜನರು ಹತರಾಗಿ 100 ಮಂದಿ ಗಾಯಗೊಂಡಿದ್ದರು.
ಲೆಫ್ಟೆನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಸಮೀರ್ ಕುಲಕರ್ಣಿ ಮತ್ತಿತರರ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧಿ ಕೃತ್ಯಗಳ ನಿಯಂತ್ರಣ ಕಾಯಿದೆಯಡಿ ದಾಖಲಾಗಿದ್ದ ಕಠಿಣ ಆರೋಪಗಳನ್ನು 2017 ಡಿಸೆಂಬರ್ 27ರಂದು ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ನ್ಯಾಯಾಲಯ ಕೈಬಿಟ್ಟಿತ್ತು. ಆದರೆ ಇತರೆ ಆರೋಪಗಳನ್ನು ಇನ್ನೂ ನ್ಯಾಯಾಲಯದಲ್ಲಿ ಎದುರಿಸುತ್ತಿದ್ದಾರೆ.
ಇದಲ್ಲದೆ ಸಂಘ ಪರಿವಾರದ ಎಬಿವಿಪಿ, ದುರ್ಗಾ ವಾಹಿನಿ, ಇತ್ಯಾದಿಗಳ ಜೊತೆ ಗುರುತಿಸಿಕೊಂಡ ಕೇಸರಿ ವಸ್ತ್ರಧಾರಿ ಸಾಧ್ವಿ ಪ್ರಜ್ಞಾ ಸಿಂಗ್ ತಮ್ಮ ಆಕ್ಷೇಪಾರ್ಹ ಹೇಳಿಕೆ ಮತ್ತು ಪ್ರಚೋದನಾಕಾರಿ ಭಾಷಣಗಳಿಂದಾಗಿ ವಿವಾದಗಳನ್ನು ಸೃಷ್ಟಿಸಿದ್ದಾರೆ. “ಭಗವಾ (ಕೇಸರಿ) ಧ್ವಜ ಮತ್ತು ಹಿಂದೂತ್ವ ಭಯೋತ್ಪಾದನೆಯ ಬಗ್ಗೆ ಮಾತನಾಡುವವರಿಗೆ ಎಚ್ಚರಿಕೆ ನೀಡಬೇಕು. ದೇಶದ ವಿರುದ್ಧ ಮಾತನಾಡುವವರಿಗೆ ಎಚ್ಚರಿಕೆ ನೀಡಬೇಕು. ಕೇಸರಿ ಬಟ್ಟೆಗೆ ಘನತೆ ಮರಳಿ ತಂದುಕೊಡಲು ನಾನು ಪಣ ತೊಡುತ್ತೇನೆ” ಎಂದು ಹೇಳಿದ ಸಾಧ್ವಿ, “ಜೈ ಶ್ರೀ ರಾಮ್” ಉದ್ಘರಿಸಿದ್ದಾರೆ.
“ರಾಷ್ಟ್ರದ ವಿರುದ್ಧ ಸಂಚು ಹೂಡುತ್ತಿರುವವರ ವಿರುದ್ಧ ನಾವೆಲ್ಲರೂ ಹೋರಾಡಿ ಸೋಲಿಸುತ್ತೇವೆ” ಎಂದು ಹೇಳಿರುವ ಸಾಧ್ವಿ, ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಲು ಪಿತೂರಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಮಧ್ಯೆ ಸಾಧ್ವಿಯನ್ನು ಭೂಪಾಲದ ಚುನಾವಣಾರಂಗಕ್ಕೆ ಸ್ವಾಗತಿಸಿರುವ ದಿಗ್ವಿಜಯ್ ಸಿಂಗ್, ನಗರದ ಶಾಂತಿಯುತ, ಸುಶಿಕ್ಷಿತ, ಅತ್ಯಾಧುನಿಕ ವಾತಾವರಣ ಅವರಿಗೆ ಇಷ್ಟವಾಗಬಹುದು ಎಂದಿದ್ದಾರೆ. “ಸಾಧ್ವಿಗಾಗಿ ತಾಯಿ ನರ್ಮದೆಯಲ್ಲಿ ಪಾರ್ಥಿಸುತ್ತೇನೆ ಹಾಗೂ ಸತ್ಯ, ಅಹಿಂಸೆ ಮತ್ತು ಧರ್ಮದ ಹಾದಿಯಲ್ಲಿ ನಮ್ಮೆಲ್ಲರನ್ನೂ ಕರೆದುಕೊಂಡು ಹೋಗಲು ತಾಯಿ ನರ್ಮದೆಯನ್ನು ಬೇಡಿಕೊಳ್ಳುತ್ತೇನೆ” ಎಂದಿದ್ದಾರೆ ದಿಗ್ವಿಜಯ್ ಸಿಂಗ್. ಕೇಸರಿ ಭಯೋತ್ಪಾದನೆಯನ್ನು ಉಗ್ರವಾಗಿ ಖಂಡಿಸಿದ್ದ ಕಾಂಗ್ರೆಸ್ ನಾಯಕರಲ್ಲಿ ದಿಗ್ವಿಜಯ್ ಸಿಂಗ್ ಪ್ರಮುಖರು.
ಸಾಕಷ್ಟು ಮುಸ್ಲಿಂ ಮತದಾರರಿದ್ದರೂ ಸಹ 1989ರಿಂದೀಚೆಗೆ ಭೋಪಾಲ್ ಕ್ಷೇತ್ರದಲ್ಲಿ ಬಿಜೆಪಿ ಒಂದು ಬಾರಿಯೂ ಸೋಲುಂಡೇ ಇಲ್ಲ ಎಂಬುದು ಗಮನಾರ್ಹ. ಆದ ಕಾರಣ ಮುಖ್ಯಮಂತ್ರಿ ಕಮಲ್ ನಾಥ್ ಅವರು ಕಾಂಗ್ರೆಸ್ ಬಹುಕಾಲದಿಂದ ಗೆದ್ದಿಲ್ಲದಂತಹ ಕ್ಷೇತ್ರಗಳಾದ ಭೋಪಾಲ್ ಅಥವಾ ಇಂದೋರ್ ಗಳಲ್ಲಿ ಸ್ಪರ್ಧಿಸಲು ದಿಗ್ವಿಜಯ್ ಸಿಂಗ್ ಅವರನ್ನು ಕೇಳಿಕೊಂಡಿದ್ದರೆಂದು ಹೇಳಲಾಗಿದೆ. ಈ ಸವಾಲನ್ನು ಸ್ವೀಕರಿಸಿದ ಕಾಂಗ್ರೆಸ್ ನ ಹಿರಿಯ ನಾಯಕ ಅಂತಿಮವಾಗಿ ಭೋಪಾಲ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಪ್ರಬಲ ಕಾಂಗ್ರೆಸ್ ಅಭ್ಯರ್ಥಿಯ ಎದುರು ಹಿಂದೂತ್ವವಾದಿ ಫೈರ್ ಬ್ರ್ಯಾಂಡ್ ಎಂದೇ ಗುರುತಿಸಲ್ಪಡುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಕಣಕ್ಕಿಳಿಸಿ ಮತಗಳ ಧ್ರುವೀಕರಣವನ್ನು ಬಿಜೆಪಿ ನಿರೀಕ್ಷಿಸಿದೆ ಎಂದು ವಿಶ್ಲೇಷಿಸಲಾಗಿದೆ.