ಚುನಾವಣೆಯಲ್ಲಿ ಸೋಲು ಗೆಲುವುಗಳು ಇದ್ದದ್ದೇ. ಇವತ್ತಿನ ‘ಸಮ್ಮಿಶ್ರ’ದ ದಿನಗಳಲ್ಲಂತೂ ಬಹುಮತ ಪಡೆದ ಪಕ್ಷವೇ ಅಧಿಕಾರ ಹಿಡಿಯುವಲ್ಲಿ ಸೋಲಬಹುದು ಅಲ್ಪ ಸ್ಥಾನ ಪಡೆದಂತಹ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯಲೂಬಹುದು. ರಾಜಕಾರಣದ ಸಾಧ್ಯಾಸಾಧ್ಯತೆಗಳು ಹೇಗೇಗೊ ಸಾಗುತ್ತಿರುವ ಸಂದರ್ಭದಲ್ಲಿ ಒಟ್ಟಾರೆ ಅಧಿಕಾರಕ್ಕಾಗಿ ಪೂರ್ಣ ಬಹುಮತ, ಇಲ್ಲಾ ಅದಕ್ಕಾಗಿ ಯಾವುದೋ ತಂತ್ರ ಪ್ರತಿತಂತ್ರಗಳ ಚಿತ್ರವಿಚಿತ್ರ ಲೆಕ್ಕಾಚಾರಗಳನ್ನು ಇವತ್ತಿನ ರಾಜಕಾರಣದಲ್ಲಿ ಕಾಣಬಹುದು. ಇವತ್ತಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೈತ್ರಿಯನ್ನು ನೆಚ್ಚಿಕೊಂಡಿದ್ದು, ಒಂದು ವೇಳೆ ಅದು ಗೆದ್ದರೆ ಅವರಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂಬುದೇ ಸ್ಪಷ್ಟವಿಲ್ಲ. ಈ ಹಿಂದೆ ಪ್ರಧಾನಿಯಾಗಿದ್ದ ಯಾವ ವ್ಯಕ್ತಿಯೂ ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಲೂ ಇಲ್ಲ. ಆದರೆ ಬಿಜೆಪಿಯ ಕತೆ ಹಾಗಿಲ್ಲ.
ಬಿಜೆಪಿಯಲ್ಲಿ ಇಂದಿಗೂ ಎಲ್ಲವೂ ‘ಮೋದಿ’ ಸುತ್ತಲೇ ಗಿರಕಿ ಹೊಡೆಯುತ್ತಿದೆ. ದೇಶದಲ್ಲಿ ಯಾವ ಅಭ್ಯರ್ಥಿಯೂ ಆತನ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತಾಡದೇ (ಅದು ಇದ್ದರೆ ತಾನೇ) “ಮೋದಿ ಮತ್ತೊಮ್ಮೆ” ಎಂದು ಕೇವಲ ಮೋದಿ ಹೆಸರಲ್ಲೇ ಮತ ಯಾಚಿಸುತಿದ್ದಾರೆ. 60 ವರ್ಷಗಳಲ್ಲಿ ಆಗದಂತ ಅಭಿವೃದ್ಧಿ (!!?) ಕೇವಲ ಐದು ವರ್ಷಗಳಲ್ಲಿ ಮೋದಿ ಮಾಡಿದ್ದಾರೆ. ಇಡೀ ವಿಶ್ವವೇ ಈಗ ಭಾರತದತ್ತ ನೋಡುವಂತಾಗಿದೆ (ಯಾಕೋ…!!) ಪಾಕಿಸ್ತಾನಕ್ಕೆ ತಕ್ಕ ಉತ್ತರವನ್ನು ಮೋದಿ ಕೊಟ್ಟಿದ್ದಾರೆ. (ಈ ಅವಧಿಯಲ್ಲಿಯೇ ಗಡಿಯಲ್ಲಿ ಪಾಕ್ ನ ಅಪ್ರಚೋದಿತ ದಾಳಿ ಪ್ರತಿನಿತ್ಯವೆಂಬಂತೆ ನಡೆಯುತಿದ್ದು, ಅತೀ ಹೆಚ್ಚು ಯೋಧರು ಈ ಸಂಬಂಧ ಪ್ರಾಣ ತೆತ್ತಿದ್ದರು. ಪುಲ್ವಾಮ ಪ್ರತಿಕಾರದ ಬಳಿಕವೂ ಇದು ಮುಂದುವರೆದಿತ್ತು.) ಇಂತಹ ಅರ್ಥವಿಲ್ಲದ “ಗಿಣಿಪಾಠ” ವನ್ನೇ ಅಭ್ಯರ್ಥಿಗಳು ಅಭಿಮಾನಿಗಳು ಜನರ ಮುಂದಿಡುತ್ತಿದ್ದಾರೆ.
ಹೌದು, ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಲೇ ಬೇಕಿದೆ. ಇಲ್ಲವಾದಲ್ಲಿ ದೊಡ್ಡ ಅನಾಹುತವೇ ನಡೆದೀತು. ಅಂದರೆ ದೇಶಕ್ಕಲ್ಲ ಸ್ವತಃ ಮೋದಿಗೆ ಮತ್ತವರ ಪಕ್ಷ ಸಿದ್ಧಾಂತಕ್ಕೆ. ಅಧಿಕಾರದ ಅಧೀನದಲ್ಲಿ ಎಲ್ಲವನ್ನೂ ನಿಭಾಯಿಸಬಹುದು. ಮುಖ್ಯವಾಗಿ ಪ್ರಚಾರ ಮಾಧ್ಯಮಗಳು, ಕಾನೂನು ಎಲ್ಲವನ್ನೂ ಹಿಡಿತಕ್ಕೆ ತಂದು ಆಟ ಆಡಬಹುದು. ಆದರೆ ಅಧಿಕಾರ ಕೈ ಕೊಟ್ಟರೆ ಕೆಲಸ ಖಂಡಿತ ಸುಲಭವಲ್ಲ. ದೊಡ್ಡ ಮಟ್ಟದಲ್ಲಿ ಅ-ಹಿಂ-ದ ವರ್ಗ, ಮಹಿಳೆಯರ ಆಶಾಕಿರಣವಾದ ಸಂವಿಧಾನ ತಿದ್ದುಪಡಿ, ಮೀಸಲಾತಿಗೆ ಚಟ್ಟ ಕಟ್ಟೋದು ಮನುಶಾಸನಕ್ಕೆ ಪೂರಕವಾದ ಅಂಶಗಳ ಅಳವಡಿಕೆಯೇ ಮೊದಲಾದ ಕಾರ್ಯಗಳು ಇನ್ನೂ ಹಂತ ಹಂತವಾಗಿ ಆಗಬೇಕಿದೆ.
ಇನ್ನೂ ಮುಖ್ಯವಾಗಿ ವಿರೋಧಿಗಳು ಅಧಿಕಾರವೇರಿದರೆ, ಕಳೆದು ಹೋಗಿಸಲ್ಪಟ್ಟ ರಫೇಲ್ ಫೈಲ್ ಸಿಗುತ್ತದೆ. ಈವರೆಗೆ ಖರೀದಿಯಾದ ಮಾಧ್ಯಮಗಳ ಮೂಲಕ ಜನರಿಗೆ ಬಿಂಬಿಸಲ್ಪಟ್ಟ ಅಭಿವೃದ್ಧಿಯ ಸುಳ್ಳು ಅಂಕಿಅಂಶಗಳ ‘ಭಂಡ’ವಾಳ ಬಯಲಾಗುತ್ತದೆ. ಗೋಪ್ರೇಮ (ಮಾಂಸ ರಫ್ತು) ದ ಅಸಲಿಯತ್ತು, ಮಾಡರ್ನ್ ಚೌಕಿದಾರನ ಚೌಕಾಸಿ ವ್ಯವಹಾರಗಳು, ನೋಟ್ ಬ್ಯಾನ್ ಬಳಿಕದ ಸಣ್ಣ ಉದ್ದಿಮೆಗಳ ನಷ್ಟ, ನಿರುದ್ಯೋಗ ಹಾಗು ಸಾವುಗಳ ಸತ್ಯ ಹೊರಬರುತ್ತದೆ. ಒಟ್ಟಾರೆ, ‘ಅಚ್ಚೇದಿನ್’ ದ ಹೂರಣ ಬಟಾಬಯಲಾಗುವ ಕಾರಣ ಹೇಗಾದರೂ ಸರಿಯೇ ಅನ್ಯರ ಆಡಳಿತ ಬರಲೇ ಬಾರದೆನ್ನುವ ಹಟಕ್ಕೆ ಸರ್ಕಾರ ಬಂದಂತಿದೆ.
ಲಕ್ಷಾಂತರ ಕೋಟಿ ಖರ್ಚಿನ ಜಾಹೀರಾತುಗಳು, ಯಾವ ಯಾವುದೋ ನೆಪ (ಸೈನಿಕರು, ರೈತರು, ವಿಜ್ಞಾನಿಗಳು, ಮಹಿಳೆಯರು, ಯುವಕರು)ದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ದೇಶಾದ್ಯಂತ ಲೈವ್ ಮಾತುಕತೆಗಳು ಸಮರ್ಥನೆಗಳು, ವಿರೋಧಿಗಳನ್ನು ಕೆಳಮಟ್ಟಕ್ಕಿಳಿದು (ಡಿಸ್ಲೆಕ್ಸಿಯಾ ಪ್ರಕರಣ ಗೊತ್ತಲ್ಲ) ಹಂಗಿಸುವಿಕೆ ಇವೆಲ್ಲ ಈ ತಂತ್ರದ ಸಣ್ಣ ಭಾಗವಷ್ಟೆ.
ಗಮನಿಸಿ, ಈಗ ಚುನಾವಣಾ ಹೊಸ್ತಿಲಿನಲ್ಲಿ ಯಾರಿಗೂ ರಾಮಮಂದಿರ ನೆನಪಿಲ್ಲ, ರಾಫೆಲ್ ಬೇಡ, 15 ಲಕ್ಷ ಉಹುಂ, ಸ್ಮಾರ್ಟ್ ಸಿಟಿ, ಕಪ್ಪು ಹಣ ವಾಪಸ್, ಕೋಟಿ ಉದ್ಯೋಗ, ಅಭಿವೃದ್ಧಿ, ಬುಲೆಟ್ ಟ್ರೈನ್, ರೈತಸಾಲ, ಮಹದಾಯಿ ಮೋಸ, ಮಲ್ಯಾದಿ ಮಹಿಮರ ಪರಾರಿ ಎಲ್ಲವೂ ಅಚಾನಕ್ ಮರೆತೇ ಹೋಗಿದೆ. ಅವನ್ನೆಲ್ಲ ಉಪಾಯದಿಂದ ‘ದೇಶಭಕ್ತಿ’ಯ ಹೊಗೆ ಹಾಕಿ ವಿಸ್ಮೃತಿಗೆ ತಳ್ಳಲಾಗಿದೆ. ಫುಲ್ವಾಮ ಯೋಜಿತ ದುರಂತ, ಬಾಲಾ ಕೋಟ್ ಪ್ರತಿದಾಳಿ, ಜಿನೇವಾ ಒಪ್ಪಂದದ ಪರಿಣಾಮ ಪಾಕ್ ನಿಂದ ವಾಪಾಸಾದ ಯೋಧ ಅಭಿನಂದನ್ ಪ್ರಕರಣ. ಆಬಳಿಕ ಅದಕ್ಕೆಲ್ಲ ಗರಿ ಎಂಬಂತೆ ಉಪಗ್ರಹ ಹೊಡೆದುರುಳಿಸಿದ DRDO ವಿಜ್ಞಾನಿಗಳ ಕ್ಷಿಪಣಿ ತಂತ್ರಜ್ಞಾನದ ಸಾಧನೆ ಈ ಎಲ್ಲದರ ಸಖತ್ ಲಾಭವನ್ನು ಸರ್ಕಾರ ಉಪಾಯವಾಗಿ ಪಡೆದುಕೊಂಡಿತು. ಆ ಮೂಲಕ ಜನರ ಗಮನ ಹಾಗೂ ಇಡೀ ಚಿತ್ರಣವೇ ಒಂದೆರಡು ದಿನಗಳಲ್ಲಿ ಬದಲಾಗಿ ಬಿಟ್ಟಿತ್ತು. ಈ ಬಗ್ಗೆ ಅನುಮಾನಿಸಿದ ವಿರೋಧಿಗಳನ್ನು ಮಾಧ್ಯಮ ಪಡೆ ವಿಲನ್ ಪಟ್ಟಕ್ಕೇರಿಸಿತು ಅಬ್ಬಾ… ಎಂಥಾ ರಾಜಕೀಯ ಕಾರ್ಯಾಚರಣೆ…! ತಂತ್ರಗಾರಿಕೆ….!!
ಈ ಹಪಹಪಿತನಕ್ಕೂ ಒಂದು ದೊಡ್ಡ ಕಾರಣವಿದೆ. ಅದೇ ಪಂಚರಾಜ್ಯಗಳ ಚುನಾವಣಾ ಫಲಿತಾಂಶ. ಆ ಕಹಿ ಘಟನೆ ಬಿಜೆಪಿಗೆ ನುಂಗಲಾರದ ತುತ್ತಾಗಿತ್ತು. ಗೆಲುವು ಕಠಿಣ ಎನ್ನುವ ಸೂಚನೆ ಮೊದಲೇ ಸಿಕ್ಕಿತ್ತಾದರೂ ಸ್ವತಃ ಮೋದಿಯೇ ಅಬ್ಬರದ ಪ್ರಚಾರಕ್ಕೆ ಫೀಲ್ಡಿಗಿಳಿದರೂ ಬಿಜೆಪಿ ಮಣ್ಣುಮುಕ್ಕಿತ್ತು. ಇದು ಮತ್ತೆ ಲೋಕಸಭೆಯಲ್ಲಿ ಪುನರಾವರ್ತನೆಯಾಗದಿರಲಿ ಎಂದೇ ಇವೆಲ್ಲ ಚಿತ್ರ ವಿಚಿತ್ರ ತಂತ್ರಗಳು. ಅವುಗಳೂ ಏನಂತೀರಿ…
ಪ್ರಭಾವಿ ದೃಶ್ಯ ಮಾದ್ಯಮವಾದ ಸಿನಿಮಾ ಮೂಲಕ ಸರ್ಜಿಕಲ್ ದಾಳಿ ಕುರಿತ ಪ್ರಾಯೋಜಿತ ‘ಉರಿ’ ಸಿನಿಮಾ, ಕಾಂಗ್ರೆಸ್ ನ ಮನಮೋಹನ್ ಸಿಂಗ್ ಅಪ್ರಯೋಜಕ ಪ್ರಧಾನಿ ಎಂದು ಬಿಂಬಿಸುವ ಆಕ್ಸಿಡೆಂಟಲ್ ಪಿ ಎಂ, ಚಿತ್ರ, ಚುನಾವಣಾ ನೀತಿ ಸಂಹಿತೆಯನ್ನೂ ಮೀರಿ ತೆರೆಗೆ ಬರಲಿರುವ ನಮೋ ಸಿನಿಮಾ (ಆದರೆ, ರಫೇಲ್ ಹಗರಣ ಕುರಿತ ಪುಸ್ತಕ ಬಿಡುಗಡೆಗೆ ಆಯೋಗ ನಿರಾಕರಿಸಿದೆ) ನಮೋ ಟೀವಿ ಛಾನೆಲ್, ಒನ್ ವೇ -ಮನ್ ಕಿ ಬಾತು, ವಿರೋಧಿಗಳ ವಿರುದ್ಧ ಐಟಿ ಅಸ್ತ್ರ, DRDO ವಿಜ್ಞಾನಿಗಳ ಕಾಂಗ್ರೆಸ್ ಕಾಲದ ಸಾಧನೆಯನ್ನು ಪ್ರಧಾನಿ ಜನರೆದುರು ಬಿಂಬಿಸಿಕೊಂಡ ರೀತಿ. ಅಬ್ಬಾ..!!
ಹಳೆ ಇತಿಹಾಸದ ವಾಸ್ತವ ಸ್ಥಿತಿಗತಿಗಳ ಅಷ್ಟೊಂದು ಅರಿವಿರದ ಯುವ ಮತದಾರರೇ ಅಧಿಕವಿರುವ (ಈ ಸಹಸ್ರಮಾನದಲ್ಲಿ ಹುಟ್ಟಿದವರ ಮೊದಲ ಲೋಕಸಭಾ ಮತದಾನವಿದು) ನಮ್ಮ ದೇಶದಲ್ಲಿ ಇಂತಹ ಕು-ತಂತ್ರಗಳು ಸುಲಭದಲ್ಲಿ ವರ್ಕೌಟಾಗುತ್ತವೆ. ಇದಲ್ಲವೆ ನೋವಿನ ಸಂಗತಿ.
ಮತದಾನ ಜವಾಬ್ದಾರಿಯುತವಾಗಿರಲಿ.
-ಶಶಿ ಉಡುಪಿ