ಮೈಸೂರು: ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಹೆಸರು ಥಳುಕು ಹಾಕಿಕೊಂಡಿರುವ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಯುವತಿಯೊಬ್ಬಳು ಮೈಸೂರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಮಾಡುತ್ತಿರುವ ಮೈಸೂರಿನ ಶೃತಿ ಜಿ ಎಸ್ ಎಂಬ ಯುವತಿ ಸಾಮಾಜಿಕ ಜಾಲತಾಣದಲ್ಲಿ ನನ್ನ ಫೋಟೋ ಬಳಸಿ ಚಾರಿತ್ರ್ಯ ಹರಣ ಮಾಡುತ್ತಿರುವುದಾಗಿ ಹಾಗೂ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೈಸೂರು ಜಿಲ್ಲಾಧಿಕಾರಿ ಹಾಗೂ ಚುನಾವಣಾ ಆಯುಕ್ತರಾದ ಅಭಿರಾಂ ಶಂಕರ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಯುವತಿ ಜಿಲ್ಲಾಧಿಕಾರಿಗಳಿಗೆ ನೀಡಿರುವ ದೂರಿನಲ್ಲಿ, ತನ್ನದಲ್ಲದ ಯಾವುದೋ ವಾಟ್ಸಪ್ ಸಂದೇಶ ಮತ್ತು ಆಡಿಯೋ ರೆಕಾರ್ಡ್ ಬಳಸಿ ಪ್ರತಾಪ್ ಸಿಂಹ ಅವರ ಜೊತೆ ನನಗೆ ಸಂಬಧವಿದೆ ಎಂಬಂತೆ ಬಿಂಬಿಸುತ್ತಿದ್ದಾರೆ. ಈ ಮೂಲಕ ನನ್ನ ಚಾರಿತ್ರ್ಯ ಹರಣ ಮಾಡಲಾಗುತ್ತಿದೆ ಎಂದು ದೂರಿದ್ದಾಳೆ.
ಅಲ್ಲದೇ, “ಕಾಲೇಜು ದಿನಗಳಿಂದಲೂ ನಾನು ಪ್ರತಾಪ್ ಸಿಂಹ ಅವರ ಓದುಗ ಅಭಿಮಾನಿ. ಅವರು ಸಂಸದರಾದ ನಂತರ ಅವರ ಕಚೇರಿಗೆ ಮೂರ್ನಾಲ್ಕು ಭಾರಿ ಭೇಟಿ ನೀಡಿದ್ದೇನೆ, ಅವರೂ ಸೇರಿದಂತೆ ಅವರ ಮಗಳ ಜೊತೆಗೆ ತೆಗೆಸಿಕೊಂಡಿರುವ ಸೆಲ್ಫಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೆ. ಈ ಚಿತ್ರಗಳನ್ನು ಕಿಡಿಗೇಡಿಗಳು ದುರ್ಬಳಕೆ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ” ಎಂದೂ ಆರೋಪಿಸಿದ್ದಾಳೆ.
ಇದನ್ನೂ ಓದಿ
ಮೈಸೂರಿನಲ್ಲಿ ವೈರಲ್ ಆಯ್ತು ಬಿಜೆಪಿ ಸಂಸದರ ಬೆತ್ತಲೆ ಜಗತ್ತು! ಲೈಂಗಿಕ ಹಗರಣದಲ್ಲಿ ಸಿಕ್ಕಿಬಿದ್ದರೇ ಸಿಂಹ?
ಪ್ರತಾಪ್ ಸಿಂಹ ಅವರ ರಾಜಕೀಯ ವೈರತ್ವಕ್ಕೆ ನನ್ನ ಫೋಟೋ ಬಳಸಿ ಹೆಣ್ಣು ಮಕ್ಕಳ ಬದುಕಿನ ಜೊತೆ ಆಟವಾಡುತ್ತಿದ್ದಾರೆ. ಇಂತಹ ನೀಚ ಕೃತ್ಯದ ವಿರುದ್ಧ ಕಠಿಣ ಕ್ರಮಕೈಗೊಂಡು, ಸಾಮಾಜಿಕ ಜಾಲತಾಣದಲ್ಲಿ ಇದನ್ನು ಹರಿಬಿಡದಂತೆ ನಿರ್ಭಂಧಿಸಿ ನನಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದಾಳೆ.
ಪ್ರಕರಣದ ಸಂಬಂಧ ಟ್ರೂಥ್ ಇಂಡಿಯಾ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದಾಗ ಸಂಪರ್ಕಕ್ಕೆ ಸಿಗಲಿಲ್ಲ. ನಂತರ ಹೆಚ್ಚುವರಿ ಆಯುಕ್ತೆ ಅನುರಾಧ ಅವರು, ದೂರಿನ ಬಗ್ಗೆ ಇನ್ನೂ ಕ್ರಮಕೈಗೊಂಡಿಲ್ಲ ಹಾಗೂ ಪ್ರಕರಣ ಸಂಬಂಧ ಬೇರೆ ಯಾವುದೇ ದೂರು ಬಂದಿಲ್ಲ ಎಂದು ತಿಳಿಸಿದರು.
ಪ್ರತಾಪ್ ಸಿಂಹ ಹಾಗೂ ತೇಜಸ್ವಿ ಸೂರ್ಯ ವಿರುದ್ಧ ಮಹಿಳಾ ಆಯೋಗಕ್ಕೆ ಪ್ರತ್ಯೇಕ ದೂರು
ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಆಡಿಯೋ, ವಿಡಿಯೋ, ವಾಟ್ಸಾಪ್ ಸ್ಕ್ರೀನ್ ಶಾಟ್ ಗಳು ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕರಣಗಳ ಬಗ್ಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಕೂಡಲೇ ಸ್ವಯಂ, ಪ್ರೇರಿತ ದೂರು ದಾಖಲಿಸಿ ಅಗತ್ಯ ಕ್ರಮ, ತನಿಖೆ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ವಾರ್ಡ್ ಅಧ್ಯಕ್ಷೆ ಆಶಾ ರಾಜ್ ಎಂಬುವರು ಮಂಗಳವಾರ ದೂರು ಸಲ್ಲಿಸಿದ್ದಾರೆ.