ಮೊಟ್ಟಮೊದಲ; 1952ರ ಮಹಾಚುನಾವಣೆಯಲ್ಲಿಯೇ ಭಾರೀ ಕಾಂಗ್ರೆಸ್ ಅಲೆಗೆ ಪ್ರತಿಯಾಗಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಶಿವಮೂರ್ತಿ ಸ್ವಾಮಿ ಅಳವಂಡಿ ಅವರನ್ನು ಗೆಲ್ಲಿಸುವ ಮೂಲಕ ಪ್ರಜ್ಞಾವಂತಿಕ ಮೆರೆದ ವೈಶಿಷ್ಟ್ಯತೆ ಕೊಪ್ಪಳ ಲೋಕಸಭಾ ಕ್ಷೇತ್ರದ್ದು. ಎಲ್ಲೆಡೆಯಂತೆ ಆರಂಭದ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಜನತಾ ಪರಿವಾರದ ನಡುವಿನ ಹಣಾಹಣಿಯ ಕಣವಾಗಿದ್ದ ಕ್ಷೇತ್ರ ಕಳೆದ ಒಂದು ದಶಕದಿಂದ ಬಿಜೆಪಿ ಮತ್ತು ಕಾಂಗ್ರೆಸ್ ಪ್ರತಿಸ್ಪರ್ಧೆಯ ಅಂಕಣವಾಗಿದೆ.
ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಪಕ್ಷಗಳ ಬಲಾಬಲದ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸಮಬಲ ಹೊಂದಿವೆ. ಕನಕಗಿರಿ, ಗಂಗಾವತಿ, ಶಿರಗುಪ್ಪ ಮತ್ತು ಯಲಬುರ್ಗಾದಲ್ಲಿ ಬಿಜೆಪಿ ಶಾಸಕರಿದ್ದರೆ, ಕೊಪ್ಪಳ, ಕುಷ್ಟಗಿ ಮತ್ತು ಮಸ್ಕಿಯಲ್ಲಿ ಕಾಂಗ್ರೆಸ್ ಹಾಗೂ ಸಿಂಧನೂರಿನಲ್ಲಿ ಜೆಡಿಎಸ್ ಅಧಿಕಾರ ಹಿಡಿದಿವೆ.
2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಬಸವರಾಜ ರಾಯರಡ್ಡಿ ವಿರುದ್ಧ ಸುಮಾರು 81 ಸಾವಿರ ಮತಗಳ ಅಂತರದಿಂದ ಜಯ ಗಳಿಸುವ ಮೂಲಕ ಶಿವರಾಮನಗೌಡ ಅವರು ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಖಾತೆ ತೆರೆದಿದ್ದರು. ಆದರೆ, 2014ರಲ್ಲಿ ಶಿವರಾಮಗೌಡ ಅವರ ಬದಲಿಗೆ ಸಂಗಣ್ಣ ಕರಡಿ ಅವರನ್ನು ಕಣಕ್ಕಿಳಿಸಿದ್ದ ಬಿಜೆಪಿ, ಕಾಂಗ್ರೆಸ್ಸಿನ ಕೆ ಬಸವರಾಜ ಹಿಟ್ನಾಳ ವಿರುದ್ಧ ಸುಮಾರು 32 ಸಾವಿರ ಮತಗಳ ಅಂತರದ ಜಯ ದಾಖಲಿಸಿತ್ತು.
ಈ ಬಾರಿ ಮತ್ತೊಮ್ಮೆ ಬಿಜೆಪಿಯಿಂದ ಸಂಗಣ್ಣ ಕರಡಿಯವರೇ ಕಣಕ್ಕಿಳಿದಿದ್ದು, ಎರಡನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಈ ಬಾರಿ ಬಸವರಾಜ ಹಿಟ್ನಾಳ್ ಅವರ ಪುತ್ರ ರಾಜಶೇಖರ ಹಿಟ್ನಾಳ ಕಣಕ್ಕಿಳಿದಿದ್ದು, ತಮ್ಮ ತಂದೆಯ ಸೋಲಿನ ಸೇಡು ತೀರಿಸಿಕೊಳ್ಳುವ ಉಮೇದಿನಲ್ಲಿದ್ದಾರೆ.
ಕಳೆದ ಹಲವು ಚುನಾವಣೆಗಳಿಂದ ಪರಸ್ಪರರ ವಿರುದ್ಧ ಕಣಕ್ಕಿಳಿಯುವ ಮೂಲಕವೇ ಗಮನ ಸೆಳೆದಿರುವ ಹಿಟ್ನಾಳ ಮತ್ತು ಕರಡಿ ಕುಟುಂಬಗಳು ಈ ಬಾರಿಯೂ ಮತ್ತೊಮ್ಮೆ ಎದುರಾಳಿಗಳಾಗಿದ್ದು, ಕುತೂಹಲ ಕೆರಳಿಸಿದೆ. 2014ಕ್ಕೆ ಮುನ್ನ ವಿಧಾನಸಭಾ ಕಣದಲ್ಲಿ ನಡೆಯುತ್ತಿದ್ದ ಕೊಪ್ಪಳದ ಈ ಎರಡು ಪ್ರತಿಷ್ಠಿತ ಕುಟುಂಬಗಳ ನಡುವಿನ ಹಣಾಹಣಿ, ಕಳೆದ ಲೋಕಸಭಾ ಚುನಾವಣೆಯಿಂದ ಸಂಸತ್ ಕಣಕ್ಕೆ ವಿಸ್ತರಣೆಗೊಂಡಿದೆ. ವಿಧಾನಸಭಾ ಚುನಾವಣೆಗಳಲ್ಲಿ ಕೊಪ್ಪಳ ಕ್ಷೇತ್ರದಿಂದ ಸಾಂಪ್ರದಾಯಿಕ ಎದುರಾಳಿಗಳಾಗಿದ್ದ ಸಂಗಣ್ಣ ಕರಡಿ ಮತ್ತು ಬಸವರಾಜ್ ಹಿಟ್ನಾಳ್ ನಡುವಿನ ಕದನ ಪಕ್ಷಗಳ ಪೈಪೋಟಿಗಿಂತ ಎರಡು ಕುಟುಂಬಗಳ ನಡುವಿನ ಹಣಾಹಣಿ ಎಂದೇ ಹೆಸರಾಗಿತ್ತು.
ಒಟ್ಟು ಐದು ಚುನಾವಣೆಗಳಲ್ಲಿ ಪರಸ್ಪರ ಎದರಾಳಿಗಳಾಗಿದ್ದ ಈ ಹಿರಿಯ ನಾಯಕರಲ್ಲಿ, ಹಿಟ್ನಾಳ್ ಒಮ್ಮೆ ಮಾತ್ರ ಗೆಲುವು ಪಡೆದಿದ್ದರೆ, ಉಳಿದ ನಾಲ್ಕು ಬಾರಿ ಕರಡಿ ಗೆಲುವು ದಾಖಲಿಸಿದ್ದರು. ಆದರೆ, 2013ರಲ್ಲಿ ಸಂಗಣ್ಣ ಕರಡಿ ವಿರುದ್ಧ ಕಣಕ್ಕಿಳಿದಿದ್ದ ಬಸವರಾಜ್ ಹಿಟ್ನಾಳ್ ಪುತ್ರ ರಾಘವೇಂದ್ರ ಹಿಟ್ನಾಳ್, ಮೊದಲ ಬಾರಿ ಗೆಲುವು ದಾಖಲಿಸುವ ಮೂಲಕ ತಂದೆಯ ಸೋಲಿನ ಸೇಡು ತೀರಿಸಿಕೊಂಡಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಸಂಗಣ್ಣ ಪುತ್ರ ಅಮರೇಶ್ ಕರಡಿ ವಿರುದ್ಧವೂ ಜಯಭೇರಿ ಬಾರಿಸಿರುವ ರಾಘವೇಂದ್ರ ಸದ್ಯ ಕೊಪ್ಪಳ ಶಾಸಕರು. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಆಪ್ತರಾಗಿರುವ ರಾಘವೇಂದ್ರ, ತಮ್ಮ ಪ್ರಭಾವ ಬಳಸಿ ಇದೀಗ ಸಹೋದರ ರಾಜಶೇಖರ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದು, ಮತ್ತೊಮ್ಮೆ ಲೋಕಸಭಾ ಕಣದಲ್ಲಿ ಕರಡಿ ಕುಟುಂಬದ ವಿರುದ್ಧ ತೊಡೆತಟ್ಟಿದ್ದಾರೆ.
ಲಿಂಗಾಯತ ಮತ ಬಾಹುಳ್ಯದ ಕ್ಷೇತ್ರದಲ್ಲಿ ಕುರುಬ ಸಮುದಾಯ ಎರಡನೇ ಅತಿದೊಡ್ಡ ಸಂಖ್ಯೆಯ ಮತದಾರರನ್ನು ಹೊಂದಿದ್ದು, ರಾಜಕೀಯವಾಗಿ ಸಾಕಷ್ಟು ಪ್ರಭಾವ ಹೊಂದಿದೆ. ಆ ಹಿನ್ನೆಲೆಯಲ್ಲಿ ಬಿಜೆಪಿ ಲಿಂಗಾಯತ ನಾಯಕ ಸಂಗಣ್ಣ ಅವರಿಗೆ ಟಿಕೆಟ್ ನೀಡಿದ್ದು, ಹಾಲಿ ಸಂಸದರ ಬಗ್ಗೆ ಕ್ಷೇತ್ರದಲ್ಲಿ ಪೂರಕ ವಾತಾವರಣ ಇಲ್ಲ ಎಂಬ ಪಕ್ಷದ ಆಂತರಿಕ ಸಮೀಕ್ಷೆಯ ಹೊರತಾಗಿಯೂ ಖುದ್ದು ಬಿ ಎಸ್ ಯಡಿಯೂರಪ್ಪ ಅವರೇ ತಮ್ಮ ಆಪ್ತ ಸಂಗಣ್ಣ ಅವರಿಗೆ ಟಿಕೆಟ್ ಕೊಡಿಸಿ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ಸಿನಿಂದ ಸಿದ್ದರಾಮಯ್ಯ ಅವರೇ ತಮ್ಮ ಆಪ್ತರಾದ ಹಿಟ್ನಾಳ್ ಕುಟುಂಬದ ಮತ್ತೊಬ್ಬ ಸಹೋದರನನ್ನು ಕಣಕ್ಕಿಳಿಸಿದ್ದಾರೆ.
ಈ ನಡುವೆ, ಕ್ಷೇತ್ರದಲ್ಲಿ 2014ರ ಬಳಿಕ ಸಾಕಷ್ಟು ರಾಜಕೀಯ ಸ್ಥಿತ್ಯಂತರಗಳು ನಡೆದಿದ್ದು, 2009ರಲ್ಲಿ ಕಾಂಗ್ರೆಸ್ ವಿರುದ್ಧ ಜಯಭೇರಿ ಭಾರಿಸುವ ಮೂಲಕ ಬಿಜೆಪಿಗೆ ನೆಲೆ ಒದಗಿಸಿಕೊಟ್ಟಿದ್ದ ಪ್ರಭಾವಿ ಪಂಚಮಸಾಲಿ ನಾಯಕ ಶಿವರಾಮನಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಗಂಗಾವತಿ ಅಷ್ಟೇ ಅಲ್ಲದೆ, ಲೋಕಸಭಾ ಕ್ಷೇತ್ರದಾದ್ಯಂತ ಶಿವರಾಮನಗೌಡರು ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಹಾಗೇ ಕಳೆದ ಲೋಕಸಭಾ ಚುನಾವಣೆಯ ಹೊತ್ತಲ್ಲಿ ಬಿಜೆಪಿಯಲ್ಲಿದ್ದ ಕುರುಬ ಸಮುದಾಯದ ಪ್ರಮುಖ ನಾಯಕ ಹಾಗೂ ಮಾಜಿ ಸಂಸದ ಕೆ ವಿರೂಪಾಕ್ಷಪ್ಪ ಮತ್ತೆ ಕಾಂಗ್ರೆಸ್ಸಿಗೆ ಮರಳಿದ್ದಾರೆ. ಸಿಂಧನೂರು, ಕುಷ್ಟಗಿ, ಮಸ್ಕಿ, ಸಿರುಗುಪ್ಪ, ಕಾರಟಗಿ ಮತ್ತು ಕನಕಗಿರಿ ಭಾಗದಲ್ಲಿ ತಮ್ಮದೇ ಆದ ಬೆಂಬಲಿಗರ ದೊಡ್ಡ ಪಡೆಯನ್ನೇ ಹೊಂದಿರುವ ವಿರೂಪಾಕ್ಷಪ್ಪ ಅವರ ಪ್ರವೇಶ ಕೂಡ ಕಾಂಗ್ರೆಸ್ಸಿಗೆ ಬಲ ತಂದಿದೆ.
ಹಿಟ್ನಾಳ ಅವರ ಸಮುದಾಯದ ಮತಗಳೊಂದಿಗೆ ಪಂಚಮಸಾಲಿ, ನಿರ್ಣಾಯಕವಾಗಿರುವ ಮುಸ್ಲಿಂ ಮತಗಳು ಮತ್ತು ಇತರ ಹಿಂದುಳಿದ ಮತ್ತು ದಲಿತ ಮತಗಳನ್ನೇ ಕಾಂಗ್ರೆಸ್ ನೆಚ್ಚಿದೆ. ಸಿದ್ದರಾಮಯ್ಯ ಸರ್ಕಾರದ ಸಾಧನೆ ಹಾಗೂ ವೈಯಕ್ತಿಕವಾಗಿ ಸಹೋದರ ರಾಘವೇಂದ್ರ ಹಿಟ್ನಾಳ್ ಕೆಲಸಗಳನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಪ್ರಚಾರ ನಡೆಸುತ್ತಿದ್ದರೆ, ಬಿಜೆಪಿ ಮೋದಿ ಮತ್ತೊಮ್ಮೆ ಘೋಷಣೆಗೆ ಜೋತುಬಿದ್ದಿದೆ. ವೈಯಕ್ತಿಕವಾಗಿ ಪಕ್ಷದ ಅಭ್ಯರ್ಥಿ , ಸಂಸದ ಸಂಗಣ್ಣ ಕರಡಿ ವಿರುದ್ಧ ದೊಡ್ಡ ಪ್ರಮಾಣದ ಆಡಳಿತ ವಿರೋಧಿ ಅಲೆ ಬಿಜೆಪಿಗೆ ಸವಾಲಾಗಿ ಪರಿಣಮಿಸಿದೆ.
ಈ ನಡುವೆ, ಯಲಬುರ್ಗಾದ ಬಸವರಾಜ ರಾಯರಡ್ಡಿ, ಗಂಗಾವತಿಯ ಇಕ್ಬಾಲ್ ಅನ್ಸಾರಿ ಹಾಗೂ ಕನಕಗಿರಿಯ ಶಿವರಾಜ ತಂಗಡಗಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಾಣಲು ಕುರುಬ ಸಮುದಾಯವೇ ಕಾರಣ ಎಂಬ ಮಾತುಗಳೂ ಕೇಳಿಬರುತ್ತಿವೆ. ಆ ಹಿನ್ನೆಲೆಯಲ್ಲಿ ಆ ನಾಯಕರು ಮುನಿಸಿಕೊಂಡಿದ್ದರು. ಆದರೆ, ಸಿದ್ದರಾಮಯ್ಯ ಅವರೇ ಖುದ್ದಾಗಿ ಈ ನಾಯಕರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದು, ಇದೀಗ ಕಾಂಗ್ರೆಸ್ಸಿನ ಎಲ್ಲಾ ನಾಯಕರೂ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಪಕ್ಷದಲ್ಲಿ ಆಂತರಿಕವಾಗಿ ಯಾವ ಅಪಸ್ವರವೂ ಇಲ್ಲ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿದೆ.
ಹಾಗೇ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ದೊಡ್ಡ ಮತಬ್ಯಾಂಕ್ ಆಗಿರುವ ಮುಸ್ಲಿಮರಿಗೆ ಈವರೆಗೆ ಪಕ್ಷ ಸರಿಯಾದ ಪ್ರಾತಿನಿಧ್ಯ ನೀಡಿಲ್ಲ ಎಂಬ ಅಸಮಾಧಾನ ಆ ಸಮುದಾಯದಿಂದ ಕೇಳಿಬರುತ್ತಿದ್ದು, ಗಂಗಾವತಿಯಲ್ಲಿ ಸಮುದಾಯದ ಇಕ್ಬಾಲ್ ಅನ್ಸಾರಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಾಣಲು ಕುರಬ ಸಮುದಾಯ ಬೆಂಬಲ ನೀಡದಿರುವುದೇ ಕಾರಣ ಎಂಬುದು ಅವರ ವಾದ. ಆದರೆ, ಈ ಸೂಕ್ಷ್ಮ ತಿಳಿದ ಸಿದ್ದರಾಮಯ್ಯ ಅವರು ಸಮುದಾಯದ ನಾಯಕ ಇಕ್ಬಾಲ್ ಅನ್ಸಾರಿ ಸೇರಿದಂತೆ ಪ್ರಮುಖರೊಂದಿಗೆ ಮಾತುಕತೆ ನಡೆಸಿದ್ದು ಸಮಾಧಾನಪಡಿಸಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ರಾಘವೇಂದ್ರ ಹಿಟ್ನಾಳ, ಬಸವರಾಜ್ ಹಿಟ್ನಾಳ್ ಹಾಗೂ ಡಿಸಿಸಿ ಅಧ್ಯಕ್ಷ, ಮಾಜಿ ಸಚಿವ ಶಿವರಾಜ್ ತಂಗಡಗಿ ಅವರು ಸಮುದಾಯದ ಮುಖಂಡರೊಂದಿಗೆ ಮಾತುಕತೆ ನಡೆಸಿ, ಡ್ಯಾಮೇಜ್ ಕಂಟ್ರೋಲ್ ಮಾಡುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಬಹಿರಂಗ ಸಭೆಯಲ್ಲಿಯೇ ಇಡೀ ಸಮುದಾಯ ಕಾಂಗ್ರೆಸ್ ಪರವಾಗಿರುತ್ತೆ. ಕೋಮುವಾದದ ವಿರುದ್ಧ ಕಾಂಗ್ರೆಸ್ ಗೆ ಮತ ಚಲಾಯಿಸುತ್ತಾರೆ ಎಂಬ ಹೇಳಿಕೆ ನೀಡಿದ್ದಾರೆ ಎಂಬ ಮಾತೂ ಇದೆ.
ಮತ್ತೊಂದು ಕಡೆ, ಬಿಜೆಪಿ ಕೊನೇ ಕ್ಷಣದಲ್ಲಿ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಖಾತ್ರಿಪಡಿಸಿದ್ದು, ಟಿಕೆಟ್ ವಿಷಯದಲ್ಲಿ ಉಂಟಾಗಿದ್ದ ಗೊಂದಲ ಮತ್ತು ಅತೃಪ್ತರ ಅಸಮಾಧಾನಗಳ ಕಾರಣಕ್ಕೆ ಬಿಜೆಪಿ ಪ್ರಚಾರದಲ್ಲಿ ಕೂಡ ಹಿಂದೆ ಬಿದ್ದಿತ್ತು. ಈ ನಡುವೆ, ಪ್ರಧಾನಿ ಮೋದಿಯವರೇ ಕ್ಷೇತ್ರಕ್ಕೆ ಬಂದ ಹೋದ ಬಳಿಕ ಬಿಜೆಪಿ ಪರ ಹವಾ ಏಳುತ್ತಿದೆ. ಆದರೆ, ತಮಗೆ ಕಳೆದ ಬಾರಿಯಷ್ಟು ಈ ಬಾರಿ ಸಲೀಸಿಲ್ಲ ಎಂಬುದು ಸ್ವತಃ ಕರಡಿ ಅವರಿಗೂ ಗೊತ್ತಿದೆ.