2014ರ ಮಹಾ ಚುನಾವಣೆಗಳ ಮುನ್ನ “160 ಕ್ಲಬ್” ಬಗ್ಗೆ ಮಾತುಗಳು ಕೇಳಿಬರುತ್ತಿದ್ದವು. ಬಿಜೆಪಿ 160ರ ಆಸುಪಾಸಿನಲ್ಲೇನಾದರೂ ಸ್ಥಾನಗಳನ್ನು ಗಳಿಸಿದಲ್ಲಿ, ಪಕ್ಷದೊಳಗಿನ ನರೇಂದ್ರ ಮೋದಿ ವಿರೋಧಿಗಳು ಅವರಿಗೆ ಪ್ರಧಾನಮಂತ್ರಿ ಹುದ್ದೆಯನ್ನು ತಪ್ಪಿಸುವುದು ಇದರ ಉದ್ದೇಶವಾಗಿತ್ತು. ಇದೀಗ 2019ರಲ್ಲಿ ಪುನಃ ಮೋದಿ ನೇತೃತ್ವದಲ್ಲಿ ಬಿಜೆಪಿ 272ಕ್ಕಿಂತ ಅಧಿಕ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಕ್ಷೀಣವಾಗುತ್ತಿರುವಂತೆ “160 ಕ್ಲಬ್” ಮತ್ತೆ ಸದ್ದು ಮಾಡಲಾರಂಭಿಸಿದೆ. ಈ ಬಾರಿ ಅದರ ಪ್ರಧಾನಿ ಅಭ್ಯರ್ಥಿಯೂ ಕಾಣಿಸುತ್ತಿದ್ದಾರೆ, ಅವರೇ ನಿತಿನ್ ಜೈರಾಮ್ ಗಡ್ಕರಿ.
ಗಡ್ಕರಿಯವರ ಆಸೆ, ಆಕಾಂಕ್ಷೆಗಳು ಎಲ್ಲರಿಗೂ ತಿಳಿದಿರುವುದೇ. ಆದರೆ ಈಗ ಅವರ ಪರವಾಗಿರುವ ಕೆಲವು ಅಂಶಗಳಿವೆ. ಯಾರಿಗೆ ಗೊತ್ತು? ಅವರೇ ಭಾರತದ ಮುಂದಿನ ಪ್ರಧಾನಮಂತ್ರಿ ಆದರೂ ಆಗಬಹುದು.
- ಗಡ್ಕರಿಯವರ ಬೆನ್ನಿಗೆ ನಿಂತ ಪ್ರಾದೇಶಿಕ ಪಕ್ಷಗಳು
ಒಂದು ವೇಳೆ, 2019ರ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಪಷ್ಟ ಬಹುಮತವಿಲ್ಲದ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹಮ್ಮಿದ್ದೇ ಆದಲ್ಲಿ, ಎನ್ಡಿಎ ಮೈತ್ರಿಕೂಟದ ಸದಸ್ಯರು ತೀರ್ಮಾನ ಕೈಗೊಳ್ಳಲು ಮುಂದೆ ನಿಲ್ಲುತ್ತಾರೆ. ನರೇಂದ್ರ ಮೋದಿಯವರನ್ನು ಪುನಃ ಪ್ರಧಾನಮಂತ್ರಿಯ ಹುದ್ದೆಗೇರಿಸುವ ಜರೂರು ಈ ಯಾವ ಮಿತ್ರರಿಗೂ ಇರುವುದಿಲ್ಲ. ಮೇ 2014ರಿಂದ ಮೋದಿ-ಶಾ ದ್ವಯರಿಂದ ಅಂಚಿಗೆ ತಳ್ಳಲ್ಪಟ್ಟವರಲ್ಲಿ ಕೆಲವರಾದರೂ, ಅದರಲ್ಲೂ ಅವರನ್ನು ಆರ್ ಎಸ್ಎಸ್ ಪ್ರಚೋದಿಸಿ ಮುಂದೆ ತಳ್ಳಿದಾಗ, ಬೇರೆ ಯಾರನ್ನಾದರೂ ಪ್ರಧಾನಿಯ ಪಟ್ಟಕ್ಕೇರಿಸಲು ಒತ್ತಾಯಿಸಬಹುದು. ಈ ಆಯ್ಕೆಯನ್ನು ಸಾರ್ವಜನಿಕವಾಗಿ ಎಲ್ಲರೂ ಕೇಳಲೆಂದು ಮೊದಲೇ ಸ್ಪಷ್ಟಪಡಿಸಲಾಗುತ್ತಿದೆ. ಈ ಆಯ್ಕೆಯೇ ನಿತಿನ್ ಜೈರಾಮ್ ಗಡ್ಕರಿ.
ಮೊದಲಿಗೆ ಈ ಹೆಜ್ಜೆಯನ್ನಿಡುವ ಎನ್ಡಿಎ ಮಿತ್ರ ಯಾರೆಂಬುದೂ ಸ್ಪಷ್ಟವಾಗೇ ಇದೆ: ಅದು ಶಿವಸೇನೆ. ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿ ಪಕ್ಷದ ಸಂಸದ ಸಂಜಯ್ ರಾವತ್ ಬರೆದಿರುವ ಲೇಖನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು.
ಪ್ರಾದೇಶಿಕ ಪಕ್ಷಗಳಲ್ಲಿರುವ ಗಡ್ಕರಿ ಬಗೆಗಿನ ಒಲವು ಕೇವಲ ಎನ್ಡಿಎ ಮಿತ್ರಕೂಟಕ್ಕೆ ಸೀಮಿತವಾಗಿಲ್ಲ. ವಿರೋಧಪಕ್ಷಗಳ ಜೊತೆ ಸುಮಧುರ ಸಂಬಂಧಗಳನ್ನು ಇರಿಸಿಕೊಂಡಿರುವ ಅವರು ವಿಪಕ್ಷಗಳಲ್ಲಿ ಅತ್ಯಂತ ಜನಪ್ರಿಯ ಸಚಿವರೆನಿಸಿಕೊಂಡಿರುವುದು ಸುಳ್ಳಲ್ಲ. ರಾಜಕೀಯ ಎದುರಾಳಿಗಳ ವಿರುದ್ಧ ಮೋದಿ-ಶಾ ರೀತಿಯ ಅಸ್ಪೃಶ್ಯತೆಯನ್ನಾಗಲೀ, ಹಗೆತನವನ್ನಾಗಲೀ ಅವರು ಅನುಸರಿಸಿಲ್ಲ. ವಿರೋಧ ಪಕ್ಷಗಳೂ ಅವರನ್ನು ಒಪ್ಪುವಂತೆ ಮತ್ತೊಬ್ಬ ಮಹಾರಾಷ್ಟ್ರದ ಪ್ರಧಾನಿ ಆಕಾಂಕ್ಷಿ ಶರದ್ ಪವಾರ್ ಜೊತೆ ಸ್ನೇಹ ಬೆಳೆಸಿಕೊಂಡಿದ್ದಾರೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿ ಬಿಜೆಪಿಯೇತರ ಮತ್ತು ಎನ್ಡಿಎಯೇತರ ರಾಜ್ಯಗಳಿಗೂ ಸಹ ಅವರು ಉದಾರವಾಗಿ ಸ್ಪಂದಿಸಿದ್ದಾರೆ ಎಂಬಿತ್ಯಾದಿಯಾಗಿ ಹೇಳಲಾಗಿದೆ. “ಪ್ರತಿ ರಾಜ್ಯದ ಮುಖ್ಯಮಂತ್ರಿಯೂ ನಾನು ಅವನ/ಳ ರಾಜ್ಯಕ್ಕೇ ಅತಿಹೆಚ್ಚು ಕೆಲಸ ಮಾಡಿದ್ದೇನೆಂದು ತಿಳಿಯುತ್ತಾನೆ/ಳೆ. ಇದು ನನಗೆ ಸಂತಸ ತರುತ್ತದೆ” ಎಂದು 2017ರಲ್ಲಿ ನಾಗಪುರದಲ್ಲಿ ತಮ್ಮ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸಂದರ್ಭದಲ್ಲಿ ಗಡ್ಕರಿ ಹೇಳಿದ್ದರು. ಲೋಕಸಭೆಯಲ್ಲಿ ವಿಪಕ್ಷಗಳ ನಾಯಕರು ಬಹಿರಂಗವಾಗಿಯೇ ಗಡ್ಕರಿಯವರನ್ನು ಹೊಗಳಿದ್ದು ಅಚ್ಚರಿ ತರುವ ಸಂಗತಿಯೇನಲ್ಲ.
- ಗಡ್ಕರಿಯನ್ನು ಬೆಂಬಲಿಸೀತೆ ಬಿಜೆಪಿ?
ಮೋದಿ-ಶಾಗಳ ಪ್ರಜಾತಂತ್ರವಿರೋಧಿ ಧೋರಣೆಯ ಬಗ್ಗೆ ಬೇಸರ ಹೊಂದಿರುವ ಬಿಜೆಪಿಯಲ್ಲಿನ ಬಹುತೇಕ ನಾಯಕರು ಇವರ ಬದಲಿಗೆ ಬೇರೊಂದು ನಾಯಕತ್ವ ಬಂದರೆ ನೆಮ್ಮದಿಯ ಉಸಿರಾಡುತ್ತಾರೆ.
ಮೋದಿ-ಶಾಗಳ ಕಾಲದಲ್ಲಿ ಅಪ್ರಸ್ತುತ ಎನಿಸಿರುವ ಬಿಜೆಪಿಯೊಳಗಿನ ಹಲವು ಮುಖಂಡರ ಅಸಮಾಧಾನಕ್ಕೆ ‘ಗಡ್ಕರಿ ಯೋಜನೆ’ಯು ಮೌನವಾಗಿಯೇ ರೆಕ್ಕೆಪುಕ್ಕ ಹಚ್ಚುತ್ತಿದೆ. ಮಾಜಿ ಕೇಂದ್ರ ಸಚಿವ ಸಂಘ ಪ್ರಿಯ ಗೌತಮ್ ಗಟ್ಟಿ ಧ್ವನಿಯಲ್ಲದಿರಬಹುದು, ಆದರೆ ಅಂಚಿಗೆ ಸರಿಸಲ್ಪಟ್ಟ ಉತ್ತರಪ್ರದೇಶ ಮೂಲದ ಪಕ್ಷದ ಹಿರಿಯ ನಾಯಕರಾಗಿ, ಗಡ್ಕರಿಯವರನ್ನು ಉಪ-ಪ್ರಧಾನ ಮಂತ್ರಿ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಸರ್ಕಾರಿ ಸಂಸ್ಥೆಯ ಮುಖ್ಯಸ್ಥರೂ ಆಗಿರುವ ಮಹಾರಾಷ್ಟ್ರದ ಧೀಮಂತ ರೈತ ನಾಯಕರೊಬ್ಬರು ಗಡ್ಕರಿಯನ್ನು ಪ್ರಧಾನಮಂತ್ರಿ ಮಾಡಬೇಕೆಂದು ಆರ್ ಎಸ್ಎಸ್ ಪ್ರಮುಖ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದು ಬಹಿರಂಗವಾಗಿಯೇ ಒತ್ತಾಯಿಸಿದ್ದಾರೆ.
- ಗಡ್ಕರಿ ಪರ ನಿಂತ ಆರ್ ಎಸ್ಎಸ್
2013ರಲ್ಲಿ ನರೇಂದ್ರ ಮೋದಿಯವರ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ, ಪ್ರಧಾನಿ ಹುದ್ದೆಗೆ ಮೋದಿಯವರನ್ನು ಬೆಂಬಲಿಸುವುದನ್ನು ಬಿಟ್ಟು ಆರ್ ಎಸ್ಎಸ್ ಗೆ ಬೇರೆ ದಾರಿಯೇ ಇರಲಿಲ್ಲ. ಆದರೆ ಸಾರ್ವಜನಿಕ ವಲಯದಲ್ಲಿ ಮೋದಿಯವರ ಜನಪ್ರಿಯತೆ ಕುಸಿದು, ಬಹುಮತಕ್ಕೆ ಬೇಕಾಗಿದ್ದಕ್ಕಿಂತ ಸಾಕಷ್ಟು ಕಡಿಮೆ ಸ್ಥಾನಗಳನ್ನು ಅವರ ನಾಯಕತ್ವದಲ್ಲಿ ಬಿಜೆಪಿ ಪಡೆದದ್ದೇ ಆದಲ್ಲಿ, ಆರ್ ಎಸ್ಎಸ್ ಗೆ ಮೋದಿಯವರನ್ನು ಬೆಂಬಲಿಸುವ ಯಾವುದೇ ಅನಿವಾರ್ಯತೆ ಇರಲಾರದು.
ನಿತಿನ್ ಗಡ್ಕರಿ ಅವರು ನಾಗಪುರದ ಆರ್ ಎಸ್ಎಸ್ ಕೇಂದ್ರ ಕಚೇರಿಯ ಜೊತೆಯಲ್ಲೇ ಬೆಳೆದ ಸಂಘದ ಸ್ವಂತ ಮಗ ಎಂದರೆ ತಪ್ಪಲ್ಲ. ಗಡ್ಕರಿಯವರನ್ನು ಇನ್ನೂ ಒಂದು ಹೆಜ್ಜೆ ಸಂಘಕ್ಕೆ ಸಮೀಪ ತರುವ ಅಂಶವೆಂದರೆ ಅವರ ಜಾತಿ. ಆರ್ ಎಸ್ಎಸ್ ನ ಮೇಲ್ಪಂಕ್ತಿ ನಾಯಕತ್ವದಂತೆ ಗಡ್ಕರಿ ಸಹ ಮಹಾರಾಷ್ಟ್ರದ ಬ್ರಾಹ್ಮಣನೇ. ಅವರು ಅಂತಹ ವರ್ಚಸ್ಸಿರುವ ಜನನಾಯಕ ಅಲ್ಲದಿದ್ದರೂ ಮತ್ತು ಕೆಲವೇ ಚುನಾವಣೆಗಳಲ್ಲಿ ಗೆದ್ದು ಬಂದಿದ್ದರೂ ಸಹ, 1995ರಲ್ಲಿ ಗಡ್ಕರಿ ಮಹಾರಾಷ್ಟ್ರದಲ್ಲಿ ಸಚಿವರಾದರು ಮತ್ತು 2010ರಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಗದ್ದುಗೆಗೂ ಏರಿದರು.
ಗಡ್ಕರಿಯವರನ್ನು ಎರಡನೇ ಅವಧಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಿ ಪುನರ್ನೇಮಕ ಮಾಡಲು ಬಿಜೆಪಿ ತನ್ನ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಆರ್ ಎಸ್ಎಸ್ ಕ್ರಮ ಕೈಗೊಂಡಿತಾದರೂ ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿ ಈ ಯತ್ನವನ್ನು ಮೂಲೆಗೆ ಸರಿಸಲಾಯಿತು. ಅದೇ ಸಮಯದಲ್ಲಿ ಜೋರಾಗಿ ಗುಡುಗುತ್ತಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಜೊತೆ ಗಡ್ಕರಿ ರಾಜಕೀಯ ಸಮರದಲ್ಲಿ ತೊಡಗಿದ್ದ ವಿಚಾರ ಎಲ್ಲರಿಗೂ ತಿಳಿದಿರುವುದೇ. ಆರ್ ಎಸ್ಎಸ್ ನ ಹಿರಿಯ ಸಿದ್ಧಾಂತಿ ಎಂ.ಜಿ.ವೈದ್ಯ ಅವರು ಮೋದಿಯವರನ್ನು ಬಹಿರಂಗವಾಗಿಯೇ ನಿಂದಿಸಿದ್ದರು.
- ಗಡ್ಕರಿಯ ಜೊತೆ ನಿಂತ ಮಹಾರಾಷ್ಟ್ರ
ಈ ದೇಶದಲ್ಲಿ ಮಹಾರಾಷ್ಟ್ರದ ಯಾವ ವ್ಯಕ್ತಿಯೂ ಪ್ರಧಾನಮಂತ್ರಿ ಗಾದಿಯಲ್ಲಿ ಕುಳಿತಿರುವ ಇತಿಹಾಸವಿಲ್ಲ (ಮೊರಾರ್ಜಿ ದೇಸಾಯಿ ಗುಜಾರಾತಿನವರಾಗಿದ್ದರು). ಮಹಾರಾಷ್ಟ್ರದ ವ್ಯಕ್ತಿಯೊಬ್ಬ ಪ್ರಧಾನಿಯಾಗಬೇಕು ಎಂಬ ಪ್ರಾದೇಶಿಕತೆ ಅಥವಾ ಉಪ-ರಾಷ್ಟ್ರೀಯತೆಯ ಭಾವನೆ ಅದೆಷ್ಟು ಪ್ರಬಲವಾಗಿದೆ ಎಂದರೆ ಆ ಧ್ವನಿಯನ್ನು ನೀವು ಮುಂಬಯಿಯಲ್ಲಿ ಟ್ಯಾಕ್ಸಿ ಚಾಲಕರಿಂದ ಕೇಳಬಹುದು.
ಈ ಭಾವನೆಯು ನಿತಿನ್ ಗಡ್ಕರಿಯವರ ಪರವಾಗಿಯೂ ಕೇಳಿಬರುತ್ತಿದೆ. ಭಾರತ ಒಂದಲ್ಲಾ ಒಂದು ದಿನ ಮರಾಠಿ ಪ್ರಧಾನಿಯನ್ನು ಪಡೆಯುತ್ತದೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಇತ್ತೀಚೆಗೆ ಹೇಳಿದಾಗ, ವಿರೋಧಪಕ್ಷ ಎನ್ಸಿಪಿಯ ಶರದ್ ಪವಾರ್ ಅವರೋ ಅಥವಾ ತಮ್ಮ ಮೈತ್ರಿಕೂಟದ ಸಹಭಾಗಿ ಬಿಜೆಪಿಯ ನಿತಿನ್ ಗಡ್ಕರಿಯವರೋ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸದೆ ತೇಲಿಸಿಬಿಟ್ಟರು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಇದೇ ರೀತಿಯ ಹೇಳಿಕೆ ನೀಡಿ, 2050ರ ಹೊತ್ತಿಗೆ ಮಹಾರಾಷ್ಟ್ರದವರು ಒಬ್ಬರಿಗಿಂತ ಹೆಚ್ಚು ಮಂದಿ ಪ್ರಧಾನಮಂತ್ರಿಗಳಾಗಿರುತ್ತಾರೆ ಎಂದಿದ್ದಾರೆ. ಬಹುಶಃ ಅವರು ತಮ್ಮನ್ನೂ ಈ ಪಟ್ಟಿಯೊಳಗೆ ಸೇರಿಸಿಕೋಂಡಿದ್ದಾರೇನೋ!
- ಗಡ್ಕರಿ ಪರ ವಹಿಸಿರುವ ಬೃಹತ್ ಬಂಡವಾಳಿಗರು
ಬೃಹತ್ ಬಂಡವಾಳಿಗರು ಬಹಿರಂಗವಾಗಿ ಗಡ್ಕರಿಯವರ ಪರ ವಹಿಸಲಾಗದಿದ್ದರೂ “ಪ್ರಧಾನಿಯಾಗಿ ಗಡ್ಕರಿ” ಪಿಸುಮಾತನ್ನು ಉದ್ಯಮಪತಿಗಳು ಮತ್ತು ಉದ್ದಿಮೆಗಳು ಹಬ್ಬಿಸುತ್ತಿವೆ. ಏಕೆಂದರೆ ನರೇಂದ್ರ ಮೋದಿ ಅಥವಾ ರಾಹುಲ್ ಗಾಂಧಿಯವರಿಗಿಂತಲೂ ಹೆಚ್ಚು ವ್ಯವಹಾರ-ಸ್ನೇಹಿಯಾಗಿ ಗಡ್ಕರಿಯವರನ್ನು ನೋಡಲಾಗುತ್ತಿದೆ. ವಿಜಯ್ ಮಲ್ಯ ಅಪರಾಧಿಯಲ್ಲ ಎಂದು ಸಾರ್ವಜನಿಕವಾಗಿ ಹೇಳುವ ತಾಕತ್ತು ಅವರಿಗಿದೆ ಎಂದರೆ ಬೃಹತ್ ಉದ್ಯಮಪತಿಗಳು ಅವರ ಬಗ್ಗೆ ಇನ್ನೆಷ್ಟು ಒಲವು ತೋರಬಹುದೆಂದು ನೀವೇ ಊಹಿಸಿಕೊಳ್ಳಬಹುದು.
ಗಡ್ಕರಿಯವರ ವಿರುದ್ಧ ಇರುವ ಆರೋಪಗಳು ಸರ್ವವ್ಯಾಪಿಯಾಗಿರುವ ರಾಜಕೀಯ ಭ್ರಷ್ಟಾಚಾರದ ವ್ಯಾಪ್ತಿಗೆ ಬರುವಂತಹದ್ದು: ಹಿತಾಸಕ್ತಿಗಳ ನಡುವಿನ ಸಂಘರ್ಷ, ಶೆಲ್ ಕಂಪನಿಗಳು, ಇತ್ಯಾದಿ. ಈಗಿನ ಪರಿಸ್ಥಿತಿಯಲ್ಲಂತೂ ತಮ್ಮ ಬಗೆಗಿನ ಭ್ರಷ್ಟ ಚಿತ್ರಣದಿಂದ ಹಾಗೂ ಹೀಗೂ ಪಾರಾಗಿದ್ದಾರೆ. ಏಕೆಂದರೆ ದೇಶದಲ್ಲಿ ಉಂಟಾಗಿರುವ ಆರ್ಥಿಕ ಕುಸಿತದಿಂದಾಗಿ ಜನ ತಮ್ಮ ಉದ್ಯೋಗಗಳ ಕುರಿತು ಹೆಚ್ಚು ಚಿಂತಿಸುತ್ತಿದ್ದಾರೆಯೇ ಹೊರತು ಭ್ರಷ್ಟಾಚಾರದ ಬಗ್ಗೆ ಅಲ್ಲ.
ಇದರ ಜೊತೆಗೆ ಗಡ್ಕರಿ ಮೋದಿ ಸರ್ಕಾರದ ಉತ್ತಮ ಸಚಿವರಲ್ಲೊಬ್ಬರು ಎಂಬ ಖ್ಯಾತಿಯನ್ನೂ ಗಳಿಸಿದ್ದಾರೆ.
ಸ್ವತಃ ಉದ್ಯಮಿಯಾಗಿರುವ ಗಡ್ಕರಿಯವರ ವ್ಯವಹಾರ ಹಿತಾಸಕ್ತಿಗಳು ಭ್ರಷ್ಟಾಚಾರದ ಆರೋಪಗಳಿಗೆ ದಾರಿಮಾಡಿಕೊಟ್ಟಿವೆ. ಇದರಿಂದಾಗಿ 2013ರಲ್ಲಿ ಅವರು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. 2012ರಲ್ಲಿ ನಡೆದ ಲೋಕಪಾಲ್ ಚಳವಳಿಯ ಸಂದರ್ಭದಲ್ಲಿ ಗಡ್ಕರಿಯವರ ವಿರುದ್ಧ ಅರವಿಂದ್ ಕೇಜ್ರಿವಾಲ್ ಮಾಡಿದ್ದ ಭ್ರಷ್ಟಾಚಾರದ ಆರೋಪಗಳು ಅವರ ರಾಜೀನಾಮೆಗೆ ನಾಂದಿ ಹಾಡಿದವು. ಕಾಲ ಎಷ್ಟು ಬದಲಾಗಿದೆ ನೋಡಿ, ಈಗ ಕೇಜ್ರಿವಾಲ್ ಕೂಡ ಗಡ್ಕರಿಯವರನ್ನು ಹೊಗಳುತ್ತಿದ್ದಾರೆ!
- ಗಡ್ಕರಿಗಾಗಿ ಗಡ್ಕರಿ
ಗಡ್ಕರಿ ಈಗಾಗಲೇ ಪ್ರಚಾರದಲ್ಲಿ ತೊಡಗಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಅವರು ಹೇಳಿದ್ದೇನೆಂದರೆ: ಅಸಹಿಷ್ಣುತೆ ಕೆಟ್ಟದ್ದು, ನೆಹರು ಅವರ ಭಾಷಣಗಳನ್ನು ನಾನು ಇಷ್ಟಪಡುತ್ತೇನೆ, ಚುನಾವಣಾ ಸೋಲುಗಳಿಗೆ ಪಕ್ಷದ ನಾಯಕತ್ವ ಹೊಣೆ ಹೊರಬೇಕು, ಕೃಷಿ ಬಿಕ್ಕಟ್ಟು ಇರುವುದನ್ನು ನಾವು ಒಪ್ಪಿಕೊಳ್ಳಬೇಕು, ದೇಶವನ್ನು ಕಾಡುತ್ತಿರುವ ಅತಿದೊಡ್ಡ ಸಮಸ್ಯೆ ನಿರುದ್ಯೋಗ, ಇತ್ಯಾದಿ.
“ಸೂಕ್ತ ನೀತಿಗಳನ್ನು ಅನುಸರಿಸುವುದರೊಂದಿಗೆ ಭಾರತವನ್ನು ಪ್ರಬಲವಾದ ಆರ್ಥಿಕ ಶಕ್ತಿಯಾಗಿ ಪರಿವರ್ತಿಸಬಹುದೆಂದು ನಾನು ನಂಬಿದ್ದೇನೆ. ದುರಾಡಳಿತವನ್ನು ಹೋಗಲಾಡಿಸಿ ಸೂಕ್ತ ನೀತಿಗಳನ್ನು ಅನುಸರಿಸಲು ಇದು ಸಕಾಲ. ನಾನು ರಾಜಕೀಯವಾಗಿ ಮಾತನಾಡುತ್ತಿಲ್ಲ, ಆದರೆ ಪ್ರಜಾತಂತ್ರದ ಮತ್ತು ದೇಶದ ಹಿತದೃಷ್ಟಿಯಲ್ಲಿ ನಮಗೆ ಒಳ್ಳೆಯ ನಾಯಕತ್ವದ ಅಗತ್ಯವಿದೆ” ಎಂದು ಗಡ್ಕರಿ ಮುಂಬಯಿಯಲ್ಲಿ ಇತ್ತೀಚೆಗೆ ಹೇಳಿದ್ದರು.
(ಮೂಲ: ದ ಪ್ರಿಂಟ್)