ಕೆನರಾ ಎನ್ನಲಾಗುತ್ತಿದ್ದ ಉತ್ತರಕನ್ನಡ ಲೋಕಸಭಾ ಕ್ಷೇತ್ರ ಹಲವು ವೈಶಿಷ್ಟ್ಯಗಳ ಆಗರ. ಉತ್ತರಕನ್ನಡ, ಬೆಳಗಾವಿ ಸೇರಿದ ಎರಡು ಜಿಲ್ಲೆಗಳು, ಉತ್ತರಕನ್ನಡದ 6 ವಿಧಾನಸಭಾ ಕ್ಷೇತ್ರಗಳು ಹಾಗೂ ಬೆಳಗಾವಿಯ ಕಿತ್ತೂರು, ಖಾನಾಪುರ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಭೌಗೋಳಿಕವಾಗಿ ಅತಿ ವಿಸ್ತಾರದ 18 ಲಕ್ಷ ಮತದಾರರನ್ನು ಹೊಂದಿರುವ ಕ್ಷೇತ್ರ. ಭೌಗೋಳಿಕವಾಗಿ ಮಲೆನಾಡು, ಅರೆಮಲೆನಾಡು, ಕರಾವಳಿ ವ್ಯಾಪ್ತಿ ಹೊಂದಿರುವ ಈ ಲೋಕಸಭಾ ಕ್ಷೇತ್ರ ಗುಡ್ಡಗಾಡಿನ ಬುಡಕಟ್ಟುಗಳು, ಹಿಂದುಳಿದ ವರ್ಗಗಳು, ಬ್ರಾಹ್ಮಣರೊಂದಿಗೆ ಮೂರು ಲಕ್ಷಕ್ಕೂ ಅಧಿಕ ಅಲ್ಪಸಂಖ್ಯಾತರ ಮತ ಬಾಹುಳ್ಯದ ಕ್ಷೇತ್ರ.
ಹಿಂದೆ 1950ರ ನಂತರ ಒಂದೆರಡು ಅವಧಿ ಪಕ್ಷೇತರ, ಜನತಾ ಪರಿವಾರ, ಪ್ರಜಾ ಸಮಾಜವಾದಿ ಪಕ್ಷಗಳ ಬೆಂಬಲದ ಅಭ್ಯರ್ಥಿಗಳಾದ ಬಿ.ಪಿ. ಕದಂ, ಚುಟುಕುಬ್ರಹ್ಮ ದಿನಕರ ದೇಸಾಯಿ ಪ್ರತಿನಿಧಿಸಿದ್ದನ್ನು ಹೊರತುಪಡಿಸಿದರೆ 2000ದ ಮೊದಲು, ನಂತರದ ಅವಧಿಗಳಲ್ಲಿ ಕ್ರಮವಾಗಿ ಕಾಂಗ್ರೆಸ್, ಬಿ.ಜೆ.ಪಿ.ಗಳದ್ದೇ ಪ್ರಾಬಲ್ಯದ ಹೆಗ್ಗಳಿಕೆ. ಕಾಂಗ್ರೆಸ್, ಇಂದಿರಾ ಯುಗದಲ್ಲಿ ಅನಾಯಾಸವಾಗಿ ಗೆಲ್ಲುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜನಸಂಘ, ಜನತಾ ಪರಿವಾರಗಳು ಸ್ಫರ್ಧೆ ಒಡ್ಡುತ್ತಿದ್ದರೂ ಅವರು ಗೆದ್ದ ದೃಷ್ಟಾಂತಗಳೇ ಇಲ್ಲ. ನಂತರ ಭಟ್ಕಳ ಕ್ಷೇತ್ರದ ಕೋಮುಗಲಭೆಗಳ ಹಿನ್ನೆಯಲ್ಲಿ ಬಿ.ಜೆ.ಪಿ. ಈ ಕ್ಷೇತ್ರದಲ್ಲಿ ಮುನ್ನೆಲೆಗೆ ಬಂದಿದ್ದು ವಿಶೇಷ.
ಕಾಂಗ್ರೆಸ್ ಜಿಲ್ಲೆ, ಅದಕ್ಕೂ ಹಿಂದೆ ಸ್ವಾತಂತ್ರ್ಯ, ರೈತ ಹೋರಾಟದ ಜಿಲ್ಲೆ ಎನಿಸಿಕೊಂಡಿದ್ದ ಉತ್ತರಕನ್ನಡ ಜಿಲ್ಲೆಯ ಕಳೆದ ಶತಮಾನ ಮತ್ತು ಈ ಶತಮಾನಗಳ ಸಾರ್ವಜನಿಕ ಸಮಸ್ಯೆಗಳ ವಿಚಾರದಲ್ಲಿ ಹೆಚ್ಚಿನ ವ್ಯತ್ಯಾಸ ಆಗಿಲ್ಲ. ಅರಣ್ಯಭೂಮಿ ಸಾಗುವಳಿ ಹಕ್ಕಿನ ಪ್ರಶ್ನೆ, ಭೂ ಸುಧಾರಣೆ ಕಾನೂನು ಜಾರಿ ಸಮಸ್ಯೆ, ಯೋಜನಾ ನಿರಾಶ್ರಿತರ ಸಮಸ್ಯೆ, ನಿರುದ್ಯೋಗ, ಪ್ರತಿಭಾ ಪಲಾಯನಗಳ ಸಮಸ್ಯೆ ಹೀಗೆ ಶತಮಾನಗಳಿಂದ ಉತ್ತರಕನ್ನಡ ಜಿಲ್ಲೆ ಬಳಲುತ್ತಿದ್ದುದೇ ಇಂಥ ಬಹುಸಂಖ್ಯಾತರ ಮೂಲಭೂತ ಸಮಸ್ಯೆಗಳಿಂದ.
1960-70 ರ ದಶಕದಲ್ಲಿ ಸ್ವತಂತ್ರವಾಗಿ ಪ್ರಜಾ ಸಮಾಜವಾದಿ ಪಕ್ಷದ ಬೆಂಬಲದಿಂದ ಗೆದ್ದಿದ್ದ ಡಾ.ದಿನಕರ ದೇಸಾಯಿ ಸ್ವಾತಂತ್ರ್ಯ ಪೂರ್ವದಿಂದ ರೈತ ಹೋರಾಟ, ಸ್ವಾತಂತ್ರ್ಯ ಹೋರಾಟಗಳಲ್ಲಿ ಪಾಲ್ಗೊಂಡಿದ್ದವರು. ಅವರು ಸಂಸತ್ ಸದಸ್ಯರಾಗಿದಾಗ್ದಲೂ(ಅವರು) ಮಿಡಿದದ್ದು ಈ ಕ್ಷೇತ್ರದ ಶಿಕ್ಷಣ, ಸಾರಿಗೆ, ಅರಣ್ಯ, ಭೂಮಿ ಹಕ್ಕಿನ ಹೋರಾಟದ ಜನಸಾಮಾನ್ಯರ ಬಗೆಗೆ.
ಇವರ ಕಾಲದಲ್ಲಿ ರಾಜಕೀಯ ಮುಖಂಡರಾಗಿದ್ದ ರಾಮಕೃಷ್ಣ ಹೆಗಡೆಯವರಿಗೆ ಪರ್ಯಾಯವಾಗಿ ಹಿಂದುಳಿದ ವರ್ಗಗಳ ನೇತಾರರಾಗಿ ಕಾಂಗ್ರೆಸ್ ಗೆ ಬಲ ತುಂಬಿದ್ದವರು ಸೊರಬದ ಸಾರೆಕೊಪ್ಪ ಬಂಗಾರಪ್ಪ. 1980 ರ ಅವಧಿಯಲ್ಲಿ ಜೋಕಿಂ ಆಳ್ವ ಎಂಬ ದಕ್ಷಿಣ ಕನ್ನಡದ ಕಾಂಗ್ರೆಸ್ ಮುಖಂಡ ಸಂಸದರಾಗಿದ್ದೂ ಈ ಕ್ಷೇತ್ರದ ಚರಿತ್ರೆ ಸೇರಿದೆ. ಹೀಗೆ ಭೌಗೋಳಿಕ ವೈವಿಧ್ಯ, ಜೀವವೈವಿಧ್ಯ, ಜನಾಂಗೀಯ ವೈವಿಧ್ಯಗಳ ಈ ಕ್ಷೇತ್ರದಲ್ಲಿ ನಾನಾ ಸಮುದಾಯಗಳ ಒಂದು ಲಕ್ಷಕ್ಕೂ ಅಧಿಕ ಕುಟುಂಬಗಳು ಅರಣ್ಯಭೂಮಿ ಅತಿಕ್ರಮಣದಾರರಾಗಿರುವುದು ಈ ಜಿಲ್ಲೆಯ ವೈಶಿಷ್ಟ್ಯ ಮತ್ತು ದುರಂತ.
ಪ್ರತಿಶತ 70ಕ್ಕಿಂತ ಹೆಚ್ಚು ಅರಣ್ಯ ಹೊಂದಿರುವ ಉತ್ತರಕನ್ನಡದಲ್ಲೇ 97 ಸಾವಿರ ಅರಣ್ಯ ವಾಸಿ ಕುಟುಂಬಗಳು, ಬೆಳಗಾವಿಯ ಇಪ್ಪತ್ತು ಸಾವಿರಕ್ಕೂ ಅಧಿಕ ಕುಟುಂಬಗಳು 75-80 ವರ್ಷಗಳಿಂದ ಅರಣ್ಯ ಭೂಮಿ ಸಾಗುವಳಿದಾರರಾಗಿರುವುದು ಈ ಜಿಲ್ಲೆಯ ತೀರದ ಸಂಕಷ್ಟಕ್ಕೆ ಕೈಗನ್ನಡಿ. ಇದೇ ವಿಚಾರ ಹಲವು ಬಾರಿ ಚುನಾವಣೆಯ ವಿಷಯವಾಗಿತ್ತಾದರೂ ಇದಕ್ಕೆ ಪರ್ಯಾಯವಾಗಿ ಮೇಲ್ವರ್ಗಗಳ ಪರಿಸರ ಚಳವಳಿ ಚುನಾವಣಾ ವಿಷಯಗಳಾಗಿ ಸಾಹಿತಿ ಶಿವರಾಮ ಕಾರಂತ, ನಟರಾದ ಅನಂತನಾಗ್, ರಾಮಕೃಷ್ಣ ಅವರೆಲ್ಲಾ ಸೋತುಹೋದ ಚರಿತ್ರೆ ಈ ಕ್ಷೇತ್ರಕ್ಕಿದೆ.
ಇಂಥ ವಿಭಿನ್ನ ವೈಶಿಷ್ಟ್ಯಗಳ ಈ ಕ್ಷೇತ್ರದಲ್ಲಿ ಈ ಬಾರಿ ಹುರಿಯಾಳುಗಳಾಗಿರುವವರು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತು ಮಾಜಿ ಸಚಿವ, ಯುವ ನಾಯಕ ಆನಂದ ವಸಂತ ಅಸ್ನೋಟಿಕರ್. ಅನಂತಕುಮಾರ ಹೆಗಡೆ ನಿರಂತರ ನಾಲ್ಕು ಬಾರಿ ಸೇರಿ ಒಟ್ಟೂ ಐದು ಅವಧಿಗೆ ಹಿಂದಿನ ಕೆನರಾ, ಈಗಿನ ಉತ್ತರಕನ್ನಡ ಲೋಕಸಭಾ ಕ್ಷೇತ್ರ ಗೆದ್ದು ಕೇಂದ್ರ ಸಚಿವರಾಗಿ ದ್ವೇಷದ ಮಾತು, ವಿವಾದಗಳಿಂದ ಕುಖ್ಯಾತರಾದವರು. ಇವರ ಎದುರಾಳಿ ಯುವಕ ಆನಂದ ವಸಂತ ಅಸ್ನೋಟಿಕರ್ ಎರಡು ಅವಧಿ ಶಾಸಕರಾಗಿ ಒಮ್ಮೆ ಸಚಿವರಾಗಿ 40 ವರ್ಷದೊಳಗೆ ರಾಜ್ಯ ರಾಜಕಾರಣದ ನಾನಾ ಮಜಲುಗಳಿಗೆ ಸಾಕ್ಷಿಯಾದವರು.
ಪ್ರಮುಖ ಎರಡು ರಾಷ್ಟ್ರೀಯ ಪಕ್ಷಗಳಲ್ಲಿದ್ದು ಜನಪ್ರತಿನಿಧಿ, ಸಚಿವರಾಗಿದ್ದ ಆನಂದ ಈ ಬಾರಿ ಜಾತ್ಯಾತೀತ ಜನತಾದಳದ ಹುರಿಯಾಳು. ಕೇಂದ್ರ ಸಚಿವರಾಗಿರುವ ಅನಂತಕುಮಾರ ಪ್ರತಿನಿಧಿಸುವ ಬಿಜೆಪಿ, ಕ್ಷೇತ್ರದಲ್ಲಿ ೫ ವಿಧಾನಸಭಾ ಕ್ಷೇತ್ರಗಳನ್ನು ತನ್ನ ವಶದಲ್ಲಿರಿಸಿಕೊಂಡಿದೆ. ಆನಂದ ಅಸ್ನೋಟಿಕರ್ ರ ಜೆಡಿಎಸ್ ಪಕ್ಷದ ಒಬ್ಬರೂ ವಿಧಾನಸಭಾ ಸದಸ್ಯರಿಲ್ಲ, ಆದರೆ ಇವರ ಮೈತ್ರಿ ಸಂಗಾತಿ ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ವಿಧಾನಸಭಾ ಸದಸ್ಯರನ್ನು ಹೊಂದಿದೆ.
ಜಾತೀವಾರು ಪ್ರಾಬಲ್ಯದಲ್ಲಿ ಹಿಂದುಳಿದ ವರ್ಗಗಳು, ಮರಾಠಿ ಭಾಷಿಗರು ನಿರ್ಣಾಯಕರಾಗಿರುವ ಕ್ಷೇತ್ರದಲ್ಲಿ ಮರಾಠಿ ಮಾತೃಭಾಷಿಗರ ನಾಲ್ಕು ಲಕ್ಷ, ಉತ್ತರಕನ್ನಡ ಜಿಲ್ಲೆಯ ಬಹುಸಂಖ್ಯಾತರಾದ ದೀವರ ಮೂರು ಲಕ್ಷ ಮತಗಳು ನಿರ್ಣಾಯಕ. ಹಾಗಾಗಿ ಉಭಯ ಅಭ್ಯರ್ಥಿಗಳ ದೃಷ್ಟಿ ಈ ನಿರ್ಣಾಯಕ ಮತದಾರರ ಸಮೂದಾಯದ ಮೇಲೇ ಇದೆ. ಜಾ. ದಳದ ಅಭ್ಯರ್ಥಿ ಸ್ವಯಂ ಮರಾಠಿ ಮಾತನಾಡುವ ಕೊಂಕಣಿ, ಮರಾಠರ ಪ್ರತಿನಿಧಿ, ಅತಿಸೂಕ್ಷ್ಮ ಬಾಂದಿ ಸಮೂದಾಯದವರು. ಅವರಿಗೆ ಮರಾಠರು, ರಾಜಕೀಯ ಅನ್ಯಾಯಕ್ಕೊಳಗಾಗಿರುವ ನಾಮಧಾರಿಗಳು ಬೆಂಬಲಿಸುತ್ತಾರೆ ಎನ್ನುವುದು ಅವರ ನಿರೀಕ್ಷೆ ಮತ್ತು ಅಪೇಕ್ಷೆ.
ಆದರೆ ಉತ್ತರಕನ್ನಡ ಕ್ಷೇತ್ರವನ್ನು ಬಿಜೆಪಿ ಕ್ಷೇತ್ರವನ್ನಾಗಿಸಿರುವ ಬ್ರಾಹ್ಮಣ ಹವ್ಯಕ ಮುಖಂಡರಾದ ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಅನಂತಕುಮಾರ ಹೆಗಡೆಯವರಿಗೆ ಮರಾಠರು ಮತ್ತು ನಾಮಧಾರಿಗಳೆನ್ನುವ ದೀವರ ಒಲವು ಗಳಿಸಿ, ಚುನಾವಣೆ ಗೆಲ್ಲುವುದೇ ಗುರಿ. ಹೀಗೆ ಭಾಷಾ ಮತ್ತು ಜನಾಂಗೀಯ ಮತ ಬ್ಯಾಂಕ್ಗಳೊಂದಿಗೆ ಬಿಜೆಪಿಗೆ ಬ್ರಾಹ್ಮಣರು; ಅವರಲ್ಲಿ 1.5 ಲಕ್ಷಕ್ಕೂ ಹೆಚ್ಚಿರುವ ಹವ್ಯಕ ಮತದಾರರೇ ಶ್ರೀರಕ್ಷೆ.
ಹಿಂದೆಲ್ಲಾ ಜಾತ್ಯಾತೀತ ಮತದಾರರ ಮತ ವಿಭಜನೆ, ಹಿಂದುಳಿದ ವರ್ಗಗಳ ದಿಕ್ಕುತಪ್ಪಿಸುವ ಉಪಾಯಗಳಿಂದ ಚುನಾವಣೆ ಗೆಲ್ಲುತ್ತಿದ್ದ ಬಿಜೆಪಿ ಮತ್ತು ಅನಂತಕುಮಾರ ಹೆಗಡೆಯವರಿಗೆ ಈ ಬಾರಿ ಆಡಳಿತ ವಿರೋಧಿ ಅಲೆಯೊಂದಿಗೆ ಜಾತ್ಯಾತೀತ ಮತಗಳ ಒಗ್ಗೂಡುವಿಕೆ ಕೈ ಕೊಡಲಿದೆ ಎನ್ನುವ ಚರ್ಚೆ ಕ್ಷೇತ್ರದಲ್ಲಿದೆ. ಆದರೆ ಕಾಂಗ್ರೆಸ್ ಸಂಘಟನೆ ಅವಲಂಬಿಸಿರುವ ಜಾ.ದಳದ ಅಭ್ಯರ್ಥಿ ಆನಂದ ಅಸ್ನೋಟಿಕರ್ ಜನತಾ ಪರಿವಾರ ಮತ್ತು ಕಾಂಗ್ರೆಸ್ ಮತಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ಯಶಸ್ವಿಯಾದರೆ 7ನೇ ಬಾರಿ ಸ್ಫರ್ಧಿಸಿರುವ ಅನಂತಕುಮಾರ ಹೆಗಡೆಯವರಿಗೆ ಸಾಡೆಸಾಥಿಯಾಗಿ ಕಾಡುವ ಅಪಾಯವಿದೆ.
ಅನಂತಕುಮಾರ ಹೆಗಡೆ ಅಧಿಕಾರದಲ್ಲಿದ್ದರೂ ಜನ ಸ್ಫಂದನೆ ಇಲ್ಲದ ಆರೋಪಕ್ಕೆ ತುತ್ತಾದರೆ, ಆನಂದ ಅಧಿಕಾರವಿಲ್ಲದೆ ಜನಸಂಪರ್ಕ, ಜನಸ್ಫಂಧನದಿಂದ ದೂರ ಇದ್ದವರು. ಅನಂತಕುಮಾರ ಹೆಗಡೆ ಮತ್ತವರ ಪಕ್ಷ ಬಿಜೆಪಿ ನಾನಾ ವಿರೋಧ, ಅನುಕೂಲಗಳು, ಅನಾನುಕೂಲಗಳ ಮಧ್ಯೆ ಸಂಘಟನೆಯಲ್ಲಿ ಮುಂದಿದೆ. ಆದರೆ ಅರಣ್ಯ ಭೂಮಿ ಸಾಗುವಳಿದಾರರ ಬಗ್ಗೆ ಕೆಲಸ ಮಾಡದ, ವಿಶ್ವಾಸ ಹೊಂದದ ಹಿಂದುಳಿದ ವರ್ಗಗಳನ್ನು ಉಪೇಕ್ಷಿಸಿದ ಆರೋಪ ಇವರ ಓಟಕ್ಕೆ ತಡೆಯೊಡ್ಡುವ ಸಾಧ್ಯತೆ ನಿಚ್ಛಳವಾಗಿದೆ.
ಕೊನೆಯ ಅವಧಿಯಲ್ಲಿ ಅಭ್ಯರ್ಥಿ ಘೋಷಣೆ, ಸಂಘಟನೆ ಇಲ್ಲದ ಪಕ್ಷಗಳ ಅನಾನುಕೂಲಗಳ ನಡುವೆ ಹಿಂದುಳಿದ ವರ್ಗಗಳು, ರೈತರು, ಮರಾಠಿ ಭಾಷಿಗರ ಒಲವಿನ ನಿರೀಕ್ಷೆಯಲ್ಲಿರುವ ಆನಂದ, ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ವಿಶ್ವಾಸದಲ್ಲಿದ್ದಾರೆ. ಬಿಜೆಪಿ ಈ ಬಾರಿ ‘ಮತ್ತೊಮ್ಮೆ ಮೋದಿ’ ಎನ್ನುವ ಮೋದಿ ಅಲೆ ಲಾಭಕ್ಕೆ ಕಸರತ್ತು ಮಾಡುತ್ತಿದ್ದರೆ, ಮೈತ್ರಿಯ ಆನಂದ ಅವರು, ಅನಂತಕುಮಾರ ವೈಫಲ್ಯ ಮತ್ತು ಕಾಂಗ್ರೆಸ್ ಭೀಮಬಲದ ಲಾಭಕ್ಕಾಗಿ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ನ ಬಹಿರಂಗದ ಬೆಂಬಲ ಆಂತರ್ಯದಲ್ಲಿ ಕೆಲಸ ಮಾಡಿದರೆ ಜೆಡಿಎಸ್ ಗೆ ಮೊದಲಬಾರಿ ಈ ಕ್ಷೇತ್ರ ಗೆಲ್ಲುವ ಅವಕಾಶ ಸಿಗಬಹುದು. ಕಾಂಗ್ರೆಸ್ ಕೈಕೊಟ್ಟರೆ ಮೇಲ್ವರ್ಗದ ನಾಗಾಲೋಟಕ್ಕೆ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಹುಸಂಖ್ಯಾತರು ಕಾಲಾಳುಗಳಾಗುವ ಅನಿವಾರ್ಯತೆ ಮುಂದುವರಿಯಲಿದೆ.
2.5 ಲಕ್ಷ ಮುಸ್ಲಿಂ ಸೇರಿದಂತೆ 3 ಲಕ್ಷಕ್ಕೂ ಅಧಿಕ ಅಲ್ಫಸಂಖ್ಯಾತರ ಮತಗಳು, ದೀವರ ಮತಗಳು ಗಣನೆಗೆ ಬಾರದೆ, ಅಭಿವೃದ್ಧಿ ಬಗ್ಗೆ ಭರವಸೆ ನೀಡದೆ ನಡೆಯಲಿರುವ ಈ ಚುನಾವಣೆ ಹೊಸ ದಿಕ್ಕು, ಭರವಸೆ ನೀಡುವುದೆ? ಎನ್ನುವ ಪ್ರಶ್ನೆಗೆ ಮುಂಗಾರು ಮಳೆಯ ಸಿಂಚನದ ಮೇ ಕೊನೆಯ ಅವಧಿಯಲ್ಲಿ ಉತ್ತರ ಸಿಗಲಿದೆ. ಮೋದಿ ಅಲೆ ಮತ್ತು ಐದು ಶಾಸಕರ ಬಲದ ಬಿಜೆಪಿಗೆ ಅಭ್ಯರ್ಥಿಯೇ ಋಣಾತ್ಮಕ ಅಂಶ. ದಲಿತರು, ಹಿಂದುಳಿದವರು, ಜಾತ್ಯಾತೀತರು, ಸಾಹಿತಿಗಳು ಸೇರಿದಂತೆ ಅನೇಕರನ್ನು ಲೇವಡಿ ಮಾಡಿ ವಿವಾದಿತ ವ್ಯಕ್ತಿಯಾಗಿರುವ ಅನಂತಕುಮಾರ ವಿರುದ್ಧ ಪ್ರಗತಿಪರರು, ಯೋಜನಾ ಕಾರ್ಯಕರ್ತರು, ಯೋಜನಾ ನಿರಾಶ್ರಿತರ ವಿರೋಧಗಳಿವೆ.
ಜೆ.ಡಿ.ಎಸ್ ಅಭ್ಯರ್ಥಿ ಆನಂದ್ ಅವರಿಗೆ ಪಕ್ಷಾಂತರಿ ಎನ್ನುವ ಆರೋಪವಿದ್ದರೂ ಕಾಂಗ್ರೆಸ್, ಜೆ.ಡಿ.ಎಸ್. ಮೈತ್ರಿಯ ಅನುಕೂಲ ವರವಾಗುವ ಲಕ್ಷಣಗಳಿವೆ. ಅಡಿಕೆ ಬೆಳೆಗಾರರು, ಮೀನುಗಾರರು, ಬಹುಸಂಖ್ಯಾತ ಹಿಂದುಳಿದವರ ಪ್ರತಿನಿಧಿ ಎಂದುಕೊಳ್ಳುವ ಆನಂದ ಅವರಿಗೆ ಕಾಂಗ್ರೆಸ್ ಕೈ ಕೊಡದಿದ್ದರೆ ಆಯ್ಕೆಯಾದರೂ ಆಶ್ಚರ್ಯವಿಲ್ಲ. ಆಡಳಿತ ವಿರೋಧಿ ಅಲೆಯ ಅನಂತಕುಮಾರ ಹೆಗಡೆ ವಿರುದ್ಧ ಭರವಸೆಗಳಿಂದಲೇ ನಿರೀಕ್ಷೆ ಹೆಚ್ಚಿಸಿರುವ ಆನಂದರ ಗೆಲುವನ್ನು ಮೋದಿ ಅಲೆ ನಿಯಂತ್ರಿಸುವುದೇ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ.