ಮಧ್ಯ ಕರ್ನಾಟಕದ ವಾಣಿಜ್ಯ ನಗರಿ, ಇಡೀ ರಾಜ್ಯದ ಭೌಗೋಳಿಕ ಕೇಂದ್ರ ದಾವಣಗೆರೆ, ಬೆಣ್ಣೆದೋಸೆ, ಮಿರ್ಚಿ-ಮಂಡಕ್ಕಿಗಷ್ಟೇ ಜನಪ್ರಿಯವಲ್ಲ; ರಾಜ್ಯದ ಮಹತ್ವದ ಹೊಸ ರಾಜಕೀಯ ಅಲೆಯ ಸಭೆ- ಸಮಾವೇಶಗಳಿಗೂ ನೆಲೆಯಾದ ಹೆಗ್ಗಳಿಕೆ ಅದರದ್ದು. ಒಂದು ಕಾಲದ ಜವಳಿ ಉದ್ಯಮದ ಮೂಲಕ ಕರ್ನಾಟಕದ ಮ್ಯಾಚೆಂಸ್ಟರ್ ಎನಿಸಿಕೊಂಡಿದ್ದ ಅಪ್ಪಟ ದೇಸಿ ಖದರಿನ ನೆಲ, ಈಗ ಶಿಕ್ಷಣ, ಉದ್ಯಮ- ವಹಿವಾಟು ಮೂಲಕ ಅತ್ತ ಮುಂಬೈ, ಇತ್ತ ಬೆಂಗಳೂರು, ಅತ್ತ ಬಯಲು ಸೀಮೆ, ಇತ್ತ ಮಲೆನಾಡು ಮತ್ತು ಕರಾವಳಿಯ ನಡುವಿನ ಜುಗಾರಿಕ್ರಾಸ್ ಆಗಿದೆ.
ಇಲ್ಲಿನ ರಾಜಕಾರಣ ಕೂಡ ರಾಜ್ಯದ ಉಳಿದೆಡೆಗಿಂತ ಭಿನ್ನ. ಒಂದು ಕಾಲದ ಕಾಂಗ್ರೆಸ್ ಭದ್ರಕೋಟೆ, ಬಳಿಕ ಜನತಾ ಪರಿವಾರದ ನೆಲೆಯಾಗಿ, ಇದೀಗ ಕಳೆದ ಎರಡು ದಶಕದಿಂದ ಬಿಜೆಪಿಯ ಪಾರುಪಥ್ಯಕ್ಕೆ ಸಾಕ್ಷಿಯಾಗಿದೆ. ಲಿಂಗಾಯತ ಪ್ರಾಬಲ್ಯದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಜಾತಿ ಮತ್ತು ಧರ್ಮವೇ ಪ್ರತಿ ಚುನಾವಣೆಯಲ್ಲಿ ನಿರ್ಣಾಯಕ. ಅದರಲ್ಲೂ ಲೋಕಸಭಾ ಚುನಾವಣೆಯ ವಿಷಯದಲ್ಲಂತೂ ಕಳೆದ 25 ವರ್ಷಗಳಿಂದಲೂ ಇಲ್ಲಿ ಲಿಂಗಾಯಿತರಲ್ಲೇ ಸಾದರ ಬಣದ ಎರಡು ಕುಟುಂಬಗಳ ನಡುವೆಯೇ ಸೆಣೆಸಾಟ ನಡೆದಿತ್ತು.
ಈ ಬಾರಿ ಲೆಕ್ಕಾಚಾರ ಬದಲಾಗಿದೆ. ಅದೂ, ಸಾದರ ಲಿಂಗಾಯತರ ಪ್ರಭಾವಿ ಕಾಂಗ್ರೆಸ್ ನಾಯಕರ ಮರ್ಜಿಯಲ್ಲೇ ಆ ಬದಲಾವಣೆಯಾಗಿದೆ ಎಂಬುದು ಸಮುದಾಯ ಕ್ಷೇತ್ರದ ರಾಜಕೀಯದಲ್ಲಿ ಸಾಧಿಸಿರುವ ಹಿಡಿತಕ್ಕೆ ಸಾಕ್ಷಿ. 1977ರಲ್ಲಿ ಕ್ಷೇತ್ರ ಮರುವಿಂಗಡಣೆಯ ಬಳಿಕ ಅಸ್ತಿತ್ವಕ್ಕೆ ಬಂದ ಕ್ಷೇತ್ರದಲ್ಲಿ 1996ರವರೆಗೆ ಕಾಂಗ್ರೆಸ್ ಪ್ರಾಬಲ್ಯ ಮೆರೆದಿತ್ತು. ಟಿ ವಿ ಚಂದ್ರಶೇಖರಪ್ಪ, ಚನ್ನಯ್ಯ ಒಡೆಯುರಂಥ ನಾಯಕರು ಪ್ರತಿನಿಧಿಸಿದ್ದರು. 1984ರಿಂದ 1991ರವರೆಗೆ ಸತತ ಮೂರು ಬಾರಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕುರುಬ ಸಮುದಾಯಕ್ಕೆ ಸೇರಿದ ಸಾತ್ವಿಕ ರಾಜಕಾರಣಿ ಚನ್ನಯ್ಯ ಒಡೆಯರ್ ವಿರುದ್ಧ ರಾಮಜನ್ಮಭೂಮಿ ಅಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದ ಭೀಮಸಮುದ್ರದ ಶ್ರೀಮಂತ ಸಾದರ ನಾಯಕ ಜಿ ಮಲ್ಲಿಕಾರ್ಜುನಪ್ಪ ಅವರು ಸಾದರ ರಾಜಕಾರಣಕ್ಕೆ ಚಾಲನೆ ನೀಡಿದರು.
1998ರಲ್ಲಿ ಅವರ ವಿರುದ್ಧ ಕಾಂಗ್ರೆಸ್ಸಿನಿಂದ ಕಣಕ್ಕಿಳಿದ ಸಾದರ ನಾಯಕ ಶಾಮನೂರು ಶಿವಶಂಕರಪ್ಪ ಗೆಲವು ಪಡೆದರೂ ಕೇವಲ ಒಂದೇ ವರ್ಷದಲ್ಲಿ ಮತ್ತೆ ಚುನಾವಣೆ ಎದುರಿಸಬೇಕಾಯಿತು. ಆದರೆ, ದಾವಣಗೆರೆ ಲೋಕಸಭಾ ಕ್ಷೇತ್ರ ದಶಕಗಳ ಕಾಲ ಪರಸ್ಪರ ಹತ್ತಿರದ ಸಂಬಂಧಿಗಳೂ ಆದ ಇಬ್ಬರು ಸಾದರ ಕುಟುಂಬಗಳ ನಡುವಿನ ಹಣಾಹಣಿಯ ಕಣವಾಗಿ ಬದಲಾಗಲು ಆ ಚುನಾವಣೆ ನಾಂದಿ ಹಾಡಿತು. 1999ರಲ್ಲಿ ಮತ್ತೆ ಜಿ ಮಲ್ಲಿಕಾರ್ಜುನಪ್ಪ ಮತ್ತು ಶಿವಶಂಕರಪ್ಪ ಮುಖಾಮುಖಿಯಾದರು ಮತ್ತು ಜಿ ಎಂ ಮತ್ತೊಮ್ಮೆ ಕೇಸರಿ ಭಾವುಟ ಹಾರಿಸಿದರು. ಅವರ ನಿಧನದ ಬಳಿಕ ಅವರ ಪುತ್ರ ಜಿ ಎಂ ಸಿದ್ದೇಶ್ವರ 2004ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದರೆ, ಅವರಿಗೆ ಪ್ರತಿಯಾಗಿ ಶಾಮನೂರು ಶಿವಶಂಕರಪ್ಪ ಪುತ್ರ, ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಕಣಕ್ಕಿಳಿದಿದ್ದರು. ಆ ಮೂಲಕ ತಂದೆಯರ ನಡುವಿನ ಹಣಾಹಣಿ ವಾರಸುದಾರಿಕೆ ಮಕ್ಕಳಿಗೆ ವರ್ಗಾವಣೆಯಾಗಿತ್ತು. ಆ ಬಳಿಕ 2009 ಮತ್ತು 2014ರಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ ನೇರ ಹಣಾಹಣಿ ನಡೆದಿತ್ತು ಮತ್ತು ಅಂತಿಮವಾಗಿ ಪ್ರತಿ ಬಾರಿಯೂ ಎಸ್ ಎಸ್ ಮಲ್ಲಿಕಾರ್ಜುನ ವಿರುದ್ಧ ಸಿದ್ದೇಶ್ವರ ಗೆಲುವು ದಾಖಲಿಸಿದ್ದರು.
ಈ ಬಾರಿಯೂ ಇದೇ ಇಬ್ಬರು ನಾಯಕರ ನಡುವೆ ಮತ್ತೊಮ್ಮೆ ದಾವಣಗೆರೆ ಲೋಕಸಭಾ ಕ್ಷೇತ್ರ ಎರಡು ಸಾದರ ಲಿಂಗಾಯತ ಕುಟುಂಬಗಳ ನಡುವಿನ ಪ್ರತಿಷ್ಠೆಯ ಪಣವಾಗಲಿದೆ ಎಂದೇ ಊಹಿಸಲಾಗಿತ್ತು. ಆದರೆ, ಸತತ ಸೋಲುಗಳ ಹಿನ್ನೆಲೆಯಲ್ಲಿ ಶಾಮನೂರು ಕುಟುಂಬ ಸ್ಪರ್ಧೆಯ ಆಸಕ್ತಿ ಕಳೆದುಕೊಂಡಿತ್ತು. ಆದರೂ ಕಾಂಗ್ರೆಸ್ ಅವರನ್ನೇ ಕಣಕ್ಕಿಳಿಸುವ ಪ್ರಯತ್ನ ನಡೆಸಿತು. ಹಾಗಾಗಿಯೇ ‘ಧಣಿ’ಗಳ ಮನವೊಲಿಸುವ ಕಾಂಗ್ರೆಸ್ ಮತ್ತೆ ಮತ್ತೆ ಯತ್ನಗಳ ಫಲವಾಗಿ ನಾಮಪತ್ರ ಸಲ್ಲಿಕೆಯ ಕೊನೇ ಕ್ಷಣದಲ್ಲಿ ಟಿಕೆಟ್ ನಿರ್ಧಾರವಾಯಿತು. ಕೊನೆಗೂ ಕಣಕ್ಕಿಳಿಯಲು ಒಪ್ಪದ ಶಾಮನೂರು ಕುಟುಂಬ, ಅಂತಿಮವಾಗಿ ತಮ್ಮ ಕುಟುಂಬನಿಷ್ಠ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಬಿ ಮಂಜಪ್ಪ ಅವರನ್ನು ಸೂಚಿಸಿ, ಅವರ ಪರ ಕೆಲಸ ಮಾಡುವುದಾಗಿ ಹೇಳಿದ್ದರಿಂದ ಕಾಂಗ್ರೆಸ್ ಅವರಿಗೇ ಟಿಕೆಟ್ ನೀಡಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.
ಕ್ಷೇತ್ರದಲ್ಲಿ ಲಿಂಗಾಯಿತರನ್ನು ಹೊರತುಪಡಿಸಿದರೆ ಮತ್ತೊಂದು ಪ್ರಭಾವಿ ಕುರುಬ ಸಮುದಾಯಕ್ಕೆ ಸೇರಿರುವ ಮಂಜಪ್ಪ, ಆ ಸಮುದಾಯದ ದಶಕಗಳ ರಾಜಕೀಯ ಅವಕಾಶ ವಂಚಿತರು ಎಂಬ ಕೊರಗಿಗೆ ಈ ಬಾರಿ ಸಮಾಧಾನ ತಂದಿದ್ದಾರೆ. ಹಾಗಾಗಿ ಪ್ರಬಲ ಸಾದರ ಲಿಂಗಾಯತರ ರಾಜಕೀಯ ಪ್ರಾಬಲ್ಯಕ್ಕೆ ಪ್ರತಿಯಾಗಿ ಹಿಂದುಳಿದವರು ಸೇರಿದಂತೆ ಅಹಿಂದ ವರ್ಗ, ಪರಿಶಿಷ್ಟರು ಒಗ್ಗೂಡಿದರೆ ಮಂಜಪ್ಪ ಬಲ ವೃದ್ಧಿಸಬಹುದು ಎಂಬ ಲೆಕ್ಕಾಚಾರಗಳಿವೆ. ಜೊತೆಗೆ, ಕ್ಷೇತ್ರದ ಬಹುಸಂಖ್ಯಾತ ಮತ್ತೊಂದು ಲಿಂಗಾಯತ ಬಣ, ಪಂಚಮಸಾಲಿಗಳು ಕೂಡ ಈ ಬಾರಿ ತಮ್ಮನ್ನು ರಾಜಕೀಯವಾಗಿ ಮೂಲೆಗುಂಪು ಮಾಡಿರುವ ಸಾದರ ವಿರುದ್ಧ ಗುಪ್ತಗಾಮಿನಿಯಾಗಿ ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಜಿಲ್ಲಾ ಪಂಚಾಯ್ತಿ ಮಟ್ಟವನ್ನು ಹೊರತುಪಡಿಸಿ ಹೆಚ್ಚಿನ ರಾಜಕೀಯ ಅನುಭವ ಇಲ್ಲದ ಮಂಜಪ್ಪ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿರುವ ಹಿನ್ನಲೆಯಲ್ಲಿ ಜಿ ಎಂ ಸಿದ್ದೇಶ್ವರರ ಸತತ ನಾಲ್ಕನೇ ಬಾರಿಯ ಆಯ್ಕೆಯ ದಾರಿ ಸುಗಮವಾಗಿದೆ ಎಂಬ ಅಭಿಪ್ರಾಯವಿದೆ. ಆದರೆ, ಅಹಿಂದ, ಪಂಚಮಸಾಲಿ ಮತ ಧ್ರುವೀಕರಣ ಹಾಗೂ ಶಾಮನೂರು ಕುಟುಂಬದೊಂದಿಗೆ ಜೆಡಿಎಸ್ ನಾಯಕ ಎಚ್ ಎಸ್ ಶಿವಶಂಕರ್ ಮತ್ತು ಎಚ್ ಎಸ್ ನಾಗರಾಜ್ ಅವರ ಪ್ರಾಮಾಣಿಕ ಪ್ರಯತ್ನಗಳು ಫಲಕೊಟ್ಟದಲ್ಲಿ ಸಿದ್ದೇಶ್ವರ ಅವರ ಕನಸು ಭಗ್ನವಾದರೂ ಅಚ್ಚರಿ ಇಲ್ಲ!
ಆದರೆ, ಕ್ಷೇತ್ರವ್ಯಾಪ್ತಿಯ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ 6ರಲ್ಲಿ (ದಾವಣಗೆರೆ ಉತ್ತರ, ಜಗಳೂರು, ಮಾಯಕೊಂಡ, ಹೊನ್ನಾಳಿ, ಚನ್ನಗಿರಿ, ಹರಪನಹಳ್ಳಿ) ಬಿಜೆಪಿ ಅಧಿಕಾರ ಹಿಡಿದಿದೆ. ಕೇವಲ ಎರಡು ಕಡೆ ಮಾತ್ರ(ದಾವಣಗೆರೆ ದಕ್ಷಿಣ ಮತ್ತು ಹರಿಹರ) ಕಾಂಗ್ರೆಸ್ ಶಾಸಕರಿದ್ದಾರೆ. ಹಾಗಾಗಿ ವಿಧಾನಸಭಾ ಕ್ಷೇತ್ರಮಟ್ಟದಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಿದೆ ಮತ್ತು ಹಿಂದುತ್ವದ ಸಾಕಷ್ಟು ಪ್ರಭಾವ ಹೊಂದಿರುವ ಕ್ಷೇತ್ರದಲ್ಲಿ ಮತ್ತೊಮ್ಮೆ ಮೋದಿ ಎಂಬ ಸದ್ದು ಜೋರಾಗಿದೆ. ಸಾಲುಸಾಲು ಉದ್ಯಮಗಳು ಮುಚ್ಚಿಹೋಗಿ ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಿ ದಶಕಗಳಿಂದ ಸಂಕಷ್ಟಲ್ಲಿದ್ದರೂ ಜವಳಿ ಪಾರ್ಕ್ ಸೇರಿದಂತೆ ಯಾವುದೇ ಉದ್ಯಮಗಳನ್ನು ತರಲಾಗದ ವೈಫಲ್ಯ, ಭದ್ರಾ ನಾಲೆ ತುದಿ ಭಾಗಕ್ಕೆ ನೀರು ಹರಿಸಲಾಗದ ವೈಫಲ್ಯ ಹೀಗೆ ಸಾಲು ವೈಫಲ್ಯಗಳನ್ನು ಮತ್ತು ಮೂರು ಅವಧಿಯ ಆಡಳಿತ ವಿರೋಧಿ ಅಲೆಯನ್ನು ಮತ್ತೊಮ್ಮೆ ಮೋದಿ ಅಲೆಯ ಮೂಲಕ ಹೊಡೆದುಹಾಕುವ ವಿಶ್ವಾಸ ಬಿಜೆಪಿ ಹುರಿಯಾಳಿನದ್ದು.
ಒಟ್ಟು 16.12 ಲಕ್ಷ ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ ಜಾತಿವಾರು ಪ್ರಾಬಲ್ಯ ಲಿಂಗಾಯತದ್ದೇ. ಆದರೆ, ಆ ನಂತರದ ಸ್ಥಾನದಲ್ಲಿರುವ ಮುಸ್ಲಿಂ, ಕುರುಬ, ದಲಿತ ಮತ್ತು ಲಿಂಗಾಯತರ ಅತೃಪ್ತಿ ಒಳಪಂಗಡ ಪಂಚಮಸಾಲಿ ಮತಗಳು ರಾಜಕೀಯ ಅವಕಾಶವಂಚಿತರು ಎಂಬ ಸಮಾನ ಅಂಶದ ಮೇಲೆ ಒಂದಾದರೆ, ಹಿಂದುತ್ವದ ನೆಲದಲ್ಲಿ ಕಮಲ ಬಾಡುವ ಸಾಧ್ಯತೆ ಇದೆ. ಆದರೆ, ಬಹುತೇಕ ಲಿಂಗಾಯರ ಶಾಸಕರನ್ನೇ ಹೊಂದಿರುವ ಬಿಜೆಪಿಗೆ ಒಳಪಂಗಡ ಮೀರಿದ ಜಾತಿ ಬೆಂಬಲವಿದೆ. ಹಾಗಾಗಿ ಅಂತಹ ಪವಾಡ ಸಂಭವಿಸುವುದು ಸರಳವಿಲ್ಲ!