ಪ್ರಪಂಚದಾದ್ಯಂತ ಪತ್ರಕರ್ತರ ವಿರುದ್ಧ ಹೆಚ್ಚುತ್ತಿರುವ ಹಗೆತನವನ್ನು 2019ರ ವಿಶ್ವ ಪತ್ರಿಕಾ ಸ್ವಾತಂತ್ರ್ಯಸೂಚ್ಯಂಕ ಬಹಿರಂಗಪಡಿಸುತ್ತದೆ. ಅದರಲ್ಲೂ ಭಾರತದಲ್ಲಿ ಕಳೆದ ವರ್ಷ ನಡೆದ ಹಿಂಸಾತ್ಮಕ ದಾಳಿಗಳಲ್ಲಿ ಆರು ಮಂದಿ ಸ್ಥಳೀಯ ಕಾರ್ಯನಿರತ ಪತ್ರಕರ್ತರು ಹತ್ಯೆಗೀಡಾಗಿರುವುದನ್ನು ಈ ವರದಿಯಲ್ಲಿ ಗುರುತಿಸಲಾಗಿದೆ. ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್ (RWB) ಸಂಸ್ಥೆಯು ಗುರುವಾರ ಬಿಡುಗಡೆಗೊಳಿಸಿರುವ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ವಿಶ್ಲೇಷಣಾ ವರದಿಯಲ್ಲಿ ಭಾರತವು 180 ರಾಷ್ಟ್ರಗಳ ಪೈಕಿ 140ನೇ ಸ್ಥಾನ ಪಡೆದು ಇನ್ನಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಭಾರತ 138ನೇ ಸ್ಥಾನದಲ್ಲಿತ್ತು.
ಪ್ರಪಂಚದಾದ್ಯಂತ ಪತ್ರಕರ್ತರ ವಿರುದ್ಧ ಅಸಹನೆ ಮತ್ತು ಹಗೆತನ ಹೆಚ್ಚುತ್ತಿರುವುದನ್ನು “ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ 2019” ಬಯಲುಗೊಳಿಸಿದೆ. ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಸರ್ಕಾರಗಳ ಸರ್ವಾಧಿಕಾರಿ ಧೋರಣೆ ಪತ್ರಿಕಾ ಸ್ವಾತಂತ್ರ್ಯಹರಣಕ್ಕೆ ಕಾರಣವಾಗುತ್ತಿರುವುದು ಮಾತ್ರವಲ್ಲ, ನಿರ್ಭಿಡೆಯಿಂದ ಪತ್ರಿಕಾಧರ್ಮವನ್ನು ಅನುಸರಿಸುವ ಪತ್ರಕರ್ತರ ಮೇಲೆ ಆಳುವ ಪಕ್ಷಗಳ ಬೆಂಬಲಿಗರು ಮತ್ತು ಭ್ರಷ್ಟ ರಾಜಕಾರಣಿಗಳು ದಾಳಿಗೈದು, ಮಾರಣಾಂತಿಕ ಹಲ್ಲೆ ನಡೆಸುವುದನ್ನು ಸ್ಪಷ್ಟವಾಗಿ ಗುರುತುಮಾಡಿದೆ.
“ಭಾರತದಲ್ಲಿ 2018ರಲ್ಲಿ ಕನಿಷ್ಟ ಆರು ಮಂದಿ ಭಾರತೀಯ ಕಾರ್ಯನಿರತ ಪತ್ರಕರ್ತರು ಬರ್ಬರವಾಗಿ ಕೊಲೆಗೀಡಾಗಿದ್ದರು. ಇನ್ನು ಏಳನೇ ಪ್ರಕರಣವು ಹಲವು ಸಂಶಯಗಳಿಂದ ಕೂಡಿವೆ” ಎಂದು ವರದಿ ತಿಳಿಸಿದೆ.
ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಇಂಗ್ಲೀಷೇತರ ಭಾಷಾ ಮಾಧ್ಯಮಗಳಲ್ಲಿ ದುಡಿಯುವ ಭಾರತೀಯ ಪತ್ರಕರ್ತರು ಸಾಕಷ್ಟು ಅಪಾಯಗಳನ್ನು ಎದುರಿಸಬೇಕಾಗುತ್ತದೆ ಎಂದು ಈ ಕೊಲೆಗಳು ತೋರಿಸುತ್ತವೆ ಎಂದೂ ಸಹ ಹೇಳಲಾಗಿದೆ.
2019ರ ಚುನಾವಣೆಗಳ ಮುನ್ನಾದಿನಗಳಿಂದಲೇ ಆಡಳಿತ ಪಕ್ಷವಾಗಿರುವ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಿಗರಿಂದ ಪತ್ರಕರ್ತರ ಮೇಲಿನ ಹಲ್ಲೆಗಳು ಹೆಚ್ಚಿದವೆಂದು ಪತ್ರಿಕಾ ಸ್ವಾತಂತ್ರ್ಯದ ವಿಶ್ಲೇಷಣಾ ವರದಿ ಆರೋಪಿಸಿದೆ.
ನಿರ್ದಿಷ್ಟವಾಗಿ ಭಾರತಕ್ಕೆ ಸಂಬಂಧಿಸಿದಂತೆ ವಿಶ್ಲೇಷಣೆ ನಡೆಸಿ ವರದಿ ನೀಡಿರುವ Reporters without Borders ಸಂಸ್ಥೆ, “ಹಿಂದೂತ್ವವನ್ನು ಪ್ರಶ್ನಿಸಿ ಅದಕ್ಕೆ ಕಿರಿಕಿರಿ ಉಂಟುಮಾಡುವ ವಿಷಯಗಳ ಬಗ್ಗೆ ಬರೆಯುವ ಇಲ್ಲವೇ ಮಾತನಾಡುವ ಪತ್ರಕರ್ತರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥಿತವಾಗಿ ದ್ವೇಷವನ್ನು ಪ್ರಚಾರ ಮಾಡುವುದು” ದಿಗಿಲು ಹುಟ್ಟಿಸುವಷ್ಟು ಪ್ರಮಾಣದಲ್ಲಿ ಹೆಚ್ಚಾಗಿರುವುದನ್ನು ಗುರುತಿಸುತ್ತದೆ.
ಭಾರತದಲ್ಲಿ ಮಹಿಳಾ ಪತ್ರಕರ್ತರ ಮೇಲೆ ಸಾಮಾಜಿಕ ಮಾಧ್ಯಮದಲ್ಲಿ ದಾಳಿ ಮಾಡುವುದನ್ನು ವಿಶೇಷವಾಗಿ ಗಮನಿಸಿರುವ ವರದಿ ಪತ್ರಕರ್ತೆಯರ ವಿರುದ್ಧ ವ್ಯವಸ್ಥಿತವಾದ ದ್ವೇಷದ ಪ್ರಚಾರಾಂದೋಲನ ನಡೆಸಲಾಗುತ್ತದೆ ಹಾಗೂ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳನ್ನೂ ಹಾಕಲಾಗುತ್ತದೆ ಎಂದು ಹೇಳಿದೆ. ಅಧಿಕಾರಸ್ಥರನ್ನು ಟೀಕಿಸುವ ಪತ್ರಕರ್ತರ ವಿರುದ್ಧ IPC ಸೆಕ್ಷನ್ 124A (ರಾಜ್ಯದ್ರೋಹ) ದ ಅಡಿ ಪಕ್ರರಣ ದಾಖಲಿಸಿ ಹಿಂಸಿಸಿ ಬೆದರಿಸಲಾಗುತ್ತದೆ.
“ಪೊಲೀಸ್ ಕ್ರೌರ್ಯ, ಮಾವೋವಾದಿಗಳು ನಡೆಸುವ ದಾಳಿಗಳು ಮತ್ತು ಅಪರಾಧಿ ಗುಂಪುಗಳು ಅಥವಾ ಭ್ರಷ್ಟ ರಾಜಕಾರಣಿಗಳು ಕೈಗೊಳ್ಳುವ ಪ್ರತೀಕಾರಗಳು ಸೇರಿದಂತೆ ಪತ್ರಕರ್ತರ ಮೇಲಿನ ಹಿಂಸಾಕೃತ್ಯಗಳು, ಇವು ಇಂದು ಭಾರತದಲ್ಲಿನ ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಕಣ್ಣಿಗೆ ರಾಚುವ ಸಂಗತಿಗಳಾಗಿವೆ” ಎಂದೂ ವರದಿ ತಿಳಿಸಿದೆ.
“ಅಂತಿಮವಾಗಿ, ಸೂಕ್ಷ್ಮ ಪ್ರದೇಶಗಳೆಂದು ಸರ್ಕಾರಗಳು ಪರಿಗಣಿಸಿರುವ ಕಾಶ್ಮೀರದಂತಹ ಪ್ರದೇಶಗಳನ್ನು ತಲುಪುವುದು ನಮಗೆ ಇನ್ನೂ ದುಃಸಾಧ್ಯವೇ. ಕಾಶ್ಮೀರಕ್ಕೆ ವಿದೇಶಿ ವರದಿಗಾರರನ್ನು ನಿಷೇಧಿಸಲಾಗಿದೆ ಮತ್ತು ಅಲ್ಲಿ ಬಹುತೇಕ ಸಂದರ್ಭಗಳಲ್ಲಿ ಅಂತರ್ಜಾಲದ ಸಂಪರ್ಕ ಕಡಿತಗೊಂಡಿರುತ್ತದೆ” ಎಂದೂ ಸಹ ತಿಳಿಸಿದೆ.
ಆದರೆ, ಹರ್ಯಾಣದ ಸೀರ್ಸಾ ಮೂಲದ ಪತ್ರಕರ್ತ ರಾಮ್ ಚಂದರ್ ಛತ್ರಪತಿಯ ಕೊಲೆಯ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಇನ್ಸಾನ್ ಎಂಬುವನಿಗೆ ಜೀವಾವಧಿ ಕಾರಾಗೃಹವಾಸ ಶಿಕ್ಷೆನೀಡಿದ ಭಾರತದ ನ್ಯಾಯಾಲಯಗಳ ಮಹತ್ವದ ಆದೇಶವನ್ನು ವರದಿ ಪ್ರಸ್ತಾಪಿಸಿಲ್ಲ. ರಾಮ್ ರಹೀಮ್ ಸಿಂಗ್ ಒಂದು ಮತಧಾರ್ಮಿಕ ಪಂಥದ ಮುಖ್ಯಸ್ಥನಾಗಿ ಸುಮಾರು 6 ಕೋಟಿ ಅನುಯಾಯಿಗಳನ್ನು ಹೊಂದಿದ್ದನೆಂದು ಹೇಳಲಾಗಿದೆ. ಆತ ತನ್ನ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಅಪರಾಧಕ್ಕಾಗಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ.
Reporters Sans Frontiers (RSF) ಅಥವಾ Reporters without Borders (ಇದರ ಅರ್ಥ ಗಡಿಗಳಿಲ್ಲದ ಪತ್ರಕರ್ತರು ಎಂದು) ಪ್ಯಾರಿಸ್ ಮೂಲದ ಒಂದು ಸ್ವಯಂ ಸೇವಾ ಸಂಸ್ಥೆಯಾಗಿದೆ. ಜಗತ್ತಿನಾದ್ಯಂತ ನಡೆಯುತ್ತಿರುವ ಪತ್ರಕರ್ತರ ಮೇಲಿನ ದಾಳಿಗಳ ವಿರುದ್ಧ ಸಮರ ಸಾರಿರುವ ಮತ್ತು ಅವುಗಳ ದಾಖಲೀಕರಣ ಪ್ರಕ್ರಿಯೆಯಲ್ಲಿ ತೊಡಗಿರುವ ಸಂಸ್ಥೆ ಇದಾಗಿದೆ.
ಪತ್ರಿಕಾ ಸ್ವಾತಂತ್ರ್ಯದ ವಿಷಯದಲ್ಲಿ ದಕ್ಷಿಣ ಏಷ್ಯಾದ ದೇಶಗಳು ಅತ್ಯಂತ ಕಳಪೆ ಸಾಧನೆ ತೋರಿರುವುದನ್ನು ಗಮನಿಸಬಹುದು. ಪಾಕಿಸ್ತಾನ ಮೂರು ಸ್ಥಾನಗಳು ಕೆಳಗಿಳಿದು 142ರಲ್ಲಿಯೂ ಬಾಂಗ್ಲಾದೇಶ ನಾಲ್ಕು ಸ್ಥಾನಗಳು ಕುಸಿದು 150ಕ್ಕೆ ಬಂದು ನಿಂತಿದೆ. ನಾರ್ವೆ ದೇಶ ಈ ಸೂಚ್ಯಂಕದಲ್ಲಿ ಸತತ ಮೂರನೇ ವರ್ಷ ಮೊದಲ ಶ್ರೇಣಿ ಗಳಿಸಿದ್ದರೆ ಫಿನ್ಲ್ಯಾಂಡ್ ಎರಡನೇ ಸ್ಥಾನದಲ್ಲಿ ಬಂದು ಎರಡು ಶ್ರೇಣಿಗಳು ಮೇಲೇರಿದಂತಾಗಿದೆ. ಆಫ್ರಿಕಾದಲ್ಲಿ ಇಥಿಯೋಪಿಯ (150ರಿಂದ 110ಕ್ಕೆ) ಮತ್ತು ಗಾಂಬಿಯಾ (112ರಿಂದ 92) ದೇಶಗಳು ಕಳೆದ ವರ್ಷದಿಂದ ಈ ವರ್ಷಕ್ಕೆ ಗಣನೀಯವಾಗಿ ಸುಧಾರಿಸಿವೆ ಎಂದು ಸೂಚ್ಯಂಕದಿಂದ ತಿಳಿದುಬರುತ್ತದೆ. ವಿಯೆತ್ನಾಂ (176) ಮತ್ತು ಚೀನಾ (177) ಸೂಚ್ಯಂಕದ ತಳದಲ್ಲಿದ್ದು ಒಂದು ಸ್ಥಾನ ಕುಸಿತ ಕಂಡಿವೆ. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ಕಟ್ಟಕಡೆಯ (180) ಸ್ಥಾನವನ್ನು ತುರ್ಕ್ಮೇನಿಸ್ತಾನ್ ಪಡೆದಿದ್ದು ಉತ್ತರ ಕೊರಿಯಾವನ್ನು (179) ಹಿಂದಿಕ್ಕಿದೆ.
Reporters Without Borders ಸಂಸ್ಥೆಯ ಸೆಕ್ರೆಟರಿ ಜನರಲ್ ಕ್ರಿಸ್ಟೊಫರ್ ಡಿಲೋರ್ ಹೇಳುವಂತೆ, “ರಾಜಕೀಯ ಚರ್ಚೆಗಳು ರಹಸ್ಯವಾಗಿ ಅಥವಾ ಬಹಿರಂಗವಾಗಿಯೇ ಅಂತರ್ಯುದ್ಧದ ವಾತಾವರಣದತ್ತ ವಾಲಿಕೊಂಡು ಪತ್ರಕರ್ತರು ಅದಕ್ಕೆ ಬಲಿಪಶುಗಳಾದರೆ, ಪ್ರಜಾಪ್ರಭುತ್ವವು ಭಾರೀ ಆಪತ್ತಿನಲ್ಲಿದೆ ಎಂದೇ ಅರ್ಥ.”