ಪಾಕಿಸ್ತಾನಿ ಉಗ್ರ ಕಸಬ್ ನಿಂದ ಹತ್ಯೆಗೆ ಈಡಾಗಿದ್ದ ಧೀಮಂತ ಅಧಿಕಾರಿ ಹೇಮಂತ್ ಕರ್ಕರೆ ಸತ್ತಿದ್ದು ನನ್ನ ಶಾಪದಿಂದಲೇ ಎಂದು ಹೇಳಿದ್ದ ಸಾಧ್ವಿ ಪ್ರಗ್ಯಾ ಸಿಂಗ್ ತಮ್ಮ ಮಾತಿಗಾಗಿ ಕ್ಷಮೆ ಯಾಚಿಸಿದ್ದಾರೆ.
“ನನ್ನ ಮಾತಿನಿಂದ ದೇಶದ ವಿರೋಧಿಗಳಿಗೆ (ಪಾಕಿಸ್ತಾನದ ಭಯೋತ್ಪಾದಕರು) ಲಾಭ ಆಗುತ್ತಿದೆ ಎನ್ನುವುದಾದರೆ ನನ್ನ ಮಾತನ್ನು ವಾಪಾಸು ಪಡೆಯುತ್ತೇನೆ. ಇದು ನಮ್ಮ ಮನೆಯೊಳಗಿನ (ಭಾರತ)ವಿಷಯ. ನನ್ನ ಮಾತಿಗಾಗಿ ನಾನು ಕ್ಷಮೆ ಯಾಚಿಸುತ್ತೇನೆ” ಎಂದು ಸುದ್ದಿ ಮಾಧ್ಯಮಗಳೆದುರು ಸಾಧ್ವಿ ಹೇಳಿದ್ದಾರೆ.
ಮಧ್ಯಪ್ರದೇಶದ ಭೂಪಾಲ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿರುವ ಮಾಲೆಗಾಂವ್ ಭಯೋತ್ಪಾದನಾ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಹುತಾತ್ಮ ಅಧಿಕಾರಿ ಹೇಮಂತ್ ಕರ್ಕರೆಯವರ ಕುರಿತು ಕೀಳು ಮಟ್ಟದ ಹೇಳಿಕೆ ನೀಡುತ್ತಿದ್ದಂತೆ ದೇಶದಾದ್ಯಂತ ಆಕೆಯ ಕುರಿತು ಹಾಗೂ ಬಿಜೆಪಿ ಕುರಿತು ತೀವ್ರ ಆಕ್ರೋಶ ವ್ಯಕ್ತಗೊಂಡಿತ್ತು. ಸಾಧ್ವಿಯ ಹೇಳಿಕೆ ದೇಶದಲ್ಲಿ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟು ದಕ್ಷತೆಯಿಂದ ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಎಲ್ಲಾ ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು ಕುಸಿಯುವ ರೀತಿಯದ್ದಾಗಿತ್ತು.
26/11ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಿಂದ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳದ (ಎಟಿಎಸ್) ಅಧಿಕಾರಿ ಹೇಮಂತ್ ಕರ್ಕರೆ ಹತರಾಗಿದ್ದರು. ಅದಕ್ಕೂ ಮುನ್ನ ಮಾಲೆಗಾಂವ್ ಬಾಂಬ್ ಸ್ಪೋಟ ಪ್ರಕರಣವನ್ನು ಭೇಧಿಸಿದ್ದ ಹೇಮಂತ್ ಕರ್ಕರೆ ಸಾಧ್ವಿ ಪ್ರಗ್ಯಾ ಸಿಂಗ್ ಹಾಗೂ ಶ್ರೀಕಾಂತ್ ಪುರೋಹಿತ್ ರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಈ ಪ್ರಕರಣದಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ ಎಂಬ ಆರೋಪವಿರುವ ಸಾಧ್ವಿ ಪ್ರಗ್ಯಾ ಸಿಂಗ್ ಸಧ್ಯ ಜಾಮೀನು ಪಡೆದು ಜೈಲಿನಿಂದ ಹೊರಗಿದ್ದಾರೆ. ಆದರೂ ಪ್ರಗ್ಯಾ ಸಿಂಗ್ ಬಿಜೆಪಿ ತನ್ನ ಚುನಾವಣಾ ಅಭ್ಯರ್ಥಿ ಎಂದು ಘೋಷಿಸಿದೆ.
ಹೇಮಂತ್ ಕರ್ಕರೆ ಭಯೋತ್ಪಾದಕರಿಂದ ಸತ್ತಿದ್ದೇ ತನ್ನ ಶಾಪದಿಂದ ಎಂದು ಹೇಳಿದ್ದ ಸಾಧ್ವಿ ಪ್ರಗ್ಯಾಸಿಂಗ್ ಅವರ ಮಾತು ದೇಶದ ನಾಗರಿಕರಲ್ಲಿ ಆಕ್ರೋಶ ತರಿಸಿತ್ತಲ್ಲದೇ ‘ಒಬ್ಬ ನಿಷ್ಟಾವಂತ ಅಧಿಕಾರಿ ಹಾಗೂ ತನ್ನ ಜೀವವನ್ನೂ ಲೆಕ್ಕಿಸದೇ ಪಾಕಿಸ್ತಾನಿ ಉಗ್ರರ ದಾಳಿ ನಡೆದ ಸ್ಥಳಕ್ಕೆ ಧಾವಿಸಿ ಜೀವವನ್ನೇ ಕಳೆದುಕೊಂಡು ಹುತಾತ್ಮ ಅಧಿಕಾರಿ ಕುರಿತು ಇಂತಹ ನೀಚ ಹೇಳಿಕೆಯನ್ನು ಬಿಜೆಪಿ ಅಭ್ಯರ್ಥಿ ಸಾಧ್ವಿ ನೀಡಿದ್ದು ಹೇಸಿಗೆ ಮೂಡಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಆಕ್ರೋಶ ವ್ಯಕ್ತವಾಗಿತ್ತು. ಈಗ ಸಾಧ್ವಿಯ ಹೇಳಿಕೆ ಬಿಜೆಪಿಗೆ ನಕಾರಾತ್ಮಕವಾಗಿ ಪರಿಣಮಿಸುತ್ತಿದ್ದಂತೆ ಅದು ಸಾಧ್ವಿ ಬಾಯಿಂದ ಕ್ಷಮೆ ಕೇಳಿಸಿದೆ.
ಸಂಬಂಧಿಸಿದ ಸುದ್ದಿ:
More Articles
By the same author