ಫೆಬ್ರವರಿ 9, 2011
ಗೌರವಾನ್ವಿತ ಪ್ರಧಾನ ಮಂತ್ರಿ ಡಾ.ಮನಮೋಹನ್ ಸಿಂಗ್ ಜೀ
ಸಾದಾರ ನಮಸ್ತೆ,
ಈ ಪತ್ರದಲ್ಲಿ ಬರೆದಿರುವ ವಿಷಯದ ಗಂಭೀರತೆಯನ್ನು ಪರಿಗಣಿಸಿ ನಿಮ್ಮ ಅಮೂಲ್ಯ ಸಮಯವನ್ನು ಇದಕ್ಕೆ ನೀಡಲು ಒತ್ತಾಯಿಸುತ್ತಿದ್ದೇನೆ. ನಿಮಗೆ ಈ ತೊಂದರೆ ಕೊಡುತ್ತಿರುವುದರ ಉದ್ದೇಶವಿಷ್ಟೇ, ಮಾಲೆಗಾಂವ್, ಅಜ್ಮೀರ್ ಮತ್ತು ಹೈದರಾಬಾದ್ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಗಳನ್ನು ಬೇಕೆಂದೇ ತಿರುಚಿ, ವಿಕೃತಗೊಳಿಸಿ ಹಾಗೂ ರಾಜಕೀಯಗೊಳಿಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ ಮಿಥ್ಯಾರೋಪ ಮಾಡುತ್ತಿರುವ ಪ್ರಯತ್ನಗಳನ್ನು ನಿಮ್ಮ ಗಮನಕ್ಕೆ ತರಬೇಕೆಂಬುದೇ ನಮ್ಮ ಉದ್ದೇಶವಾಗಿದೆ.
ಸರ್ಕಾರದ ಬಳಿ ಇರುವ ಒಂದೇ ಒಂದು ಅಂಶ ಸಾಕು ಈ ಸುಳ್ಳನ್ನು ಹೊಡೆದುಹಾಕಲು. ಕರ್ನಲ್ ಪುರೋಹಿತ್ ಮತ್ತು ದಯಾನಂದ್ ಪಾಂಡೆ ಅವರುಗಳು ಏಕಕಾಲದಲ್ಲಿ ಅಂದಿನ ಆರೆಸ್ಸೆಸ್ಸಿನ ಅಂದಿನ ಸರಕಾರ್ಯವಾಹ – ಪ್ರಧಾನ ಕಾರ್ಯದರ್ಶಿ- ಶ್ರೀ ಮೋಹನ್ ರಾವ್ ಭಾಗ್ವತ್ (ಇಂದಿನ ಸರಸಂಘಚಾಲಕ) ಮತ್ತು ಇನ್ನೊಬ್ಬ ಆರೆಸ್ಸೆಸ್ ಮುಖಂಡ ಶ್ರೀ ಇಂದ್ರೇಶ್ ಕುಮಾರ್ ಅವರನ್ನು ಹತ್ಯೆಗೈಯಲು ಸಂಚು ನಡೆಸಿದ್ದ ಕುರಿತು ಮಹಾರಾಷ್ಟ್ರ ಎಟಿಎಸ್ (MATS) ತನ್ನ ಬಳಿ ಸಾಕ್ಷಾಧಾರ ಇಟ್ಟುಕೊಂಡಿದೆ. ಮಾಲೆಗಾಂವ್ ಪ್ರಕರಣ ತನಿಖೆ ನಡೆಯುವ ವೇಳೆಯಲ್ಲಿಯೇ ಎಟಿಎಸ್ನ ಒಬ್ಬ ಹಿರಿಯ ಅಧಿಕಾರಿ ನಮ್ಮ ಪ್ರಮುಖ ನಾಯಕರಿಗೆ ಮೇಲೆ ತಿಳಿಸಿದ ಆರೋಪಿಗಳು ನಡೆಸಿರುವ ಈ ಸಂಚಿನ ಕುರಿತು ಮಾಹಿತಿ ನೀಡಿದ್ದರು. ಆದರೂ ಆಘಾತಕಾರಿಯೆಂಬಂತೆ ಆರೆಸ್ಸೆಸ್ ವಿರುದ್ಧವೇ ಸಂಚು ನಡೆಸಿದ ವ್ಯಕ್ತಿಗಳನ್ನು ಆರೆಸ್ಸೆಸ್ ನೊಂದಿಗೇ ತಳುಕು ಹಾಕುವ ಪ್ರಯತ್ನವನ್ನು ತನಿಖಾ ಸಂಸ್ಥೆಯಲ್ಲಿನ ಕೆಲವು ವ್ಯಕ್ತಿಗಳು ನಡೆಸುತ್ತಿದ್ದಾರೆ. ಇಲ್ಲಿರುವ ಮೂಲಭೂತ ಪ್ರಶ್ನೆ ಏನೆಂದರೆ, ನಮ್ಮ ನಾಯಕರನ್ನೇ ಹತ್ಯೆ ಮಾಡಲು ಸಂಚು ನಡೆಸಿದವರ ಜೊತೆಯಲ್ಲೇ ಆರೆಸ್ಸೆಸ್ಸನ್ನು ಸೇರಿಸಲು ಹೇಗೆ ಸಾಧ್ಯ?
ಮಾಲೆಗಾಂವ್ ಸ್ಪೋಟದ ಕುರಿತು ದಿನಾಂಕ 20.01.2009ರಂದು ಮಹಾರಾಷ್ಟ್ರ ಎಟಿಎಸ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯು ಶ್ರೀ ಭಾಗ್ವತ್ ಅವರನ್ನು ಹತ್ಯೆಗೈಯಲು ನಡೆಸಿರುವ ಸಂಚಿನ ಭಾಗವಾಗಿ ಆರೋಪಿಗಳು ನಡೆಸಿದ ಸಂಭಾಷಣೆಯ ಆಡಿಯೋ ಸಿಡಿ ಹಾಗೂ ಅದರ ಬರೆಹರೂಪವನ್ನೂ ಒಳಗೊಂಡಿದೆ. ಸಂಚುಕೋರರು ಶ್ರೀ ಭಾಗ್ವತ್ ಅವರನ್ನು ಹತ್ಯೆಗೈಯಲು ರಾಸಾಯನಿಕ ಆಯುಧಗಳನ್ನು ಬಳಸಲು ಯೋಜನೆ ಹಾಕಿಕೊಂಡಿದ್ದರಲ್ಲದೇ ಶ್ರೀ ಇಂದ್ರೇಶ್ ಕುಮಾರ್ ಅವರನ್ನು ಹತ್ಯೆಗೈಯಲು ಒಬ್ಬ ನಿರ್ದಿಷ್ಟ ಹೆಸರಿನ ವ್ಯಕ್ತಿಗೆ ಒಂದು ಪಿಸ್ತೂಲನ್ನೂ ನೀಡಿದ್ದರು ಎಂಬುದು ಈ ಸಾಕ್ಷಾಧಾರಗಳಿಂದ ತಿಳಿದು ಬಂದಿದೆ. ಸಿಡಿ ರೆಕಾರ್ಡಿಂಗ್ ಗಳ ಮೂಲಕ ತಿಳಿದು ಬರುವ ಸಂಗತಿ ಏನೆಂದರೆ ಈ ಕೊಲೆ ಸಂಚುಕೋರರು ಆರೆಸ್ಸೆಸ್ ಮತ್ತು ಬಿಜೆಪಿ ವಿರುದ್ಧ ವಿಷ ಕಾರುತ್ತಿದ್ದರು. ಮಾಲೆಗಾಂವ್ ಸ್ಫೋಟದ ಈ ಆರೋಪಿಗಳು ಆರೆಸ್ಸೆಸ್ ನ್ನೂ ತಮ್ಮ ಗುರಿಯಾಗಿಸಿಕೊಂಡಿದ್ದರು ಎಂಬುದು ಪೊಲೀಸ್ ಕಸ್ಟಡಿಯಲ್ಲಿ ಅವರು ನೀಡಿರುವ ತಪ್ಪೊಪ್ಪಿಗೆಗಳಿಂದ ಯಾವುದೇ ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತುಪಡಿಸಿವೆ.
ಇತ್ತೀಚೆಗೆ ಮಾಧ್ಯಮಗಳಲ್ಲಿ _ಇಂಡಿಯನ್ ಎಕ್ಸ್ ಪ್ರೆಸ್ , ದಿ.28.1.2011) ಪತ್ರಿಕೆಯಲ್ಲಿ ವರದಿಯಾದಂತೆ, ಮಿಲಿಟರಿ ಗುಪ್ತಚರ (MI) ಇಲಾಖೆ ಮಾಹಿತಿ ಪ್ರಕಾರ ಕರ್ನಲ್ ಪುರೋಹಿತ್ ತಪ್ಪೊಪ್ಪಿಕೊಂಡಂತೆ (29.9.2008ರಲ್ಲಿ) ದಯಾನಂದ ಪಾಂಡೆಯ ನಿರ್ದೇಶನದ ಮೇರೆಗೆ ಅವರು ಶ್ರೀ ಇಂದ್ರೇಶ್ ಕುಮಾರ್ ಅವರನ್ನು ಕೊಲ್ಲಲು ಸಂಚು ನಡೆಸಿದ್ದರು. ಇಂದ್ರೇಶ್ ಕುಮಾರ್ ಒಬ್ಬ ISI ಏಜೆಂಟ್ ಆಗಿದ್ದರು ಎಂಬ ಶಂಕೆ ಕರ್ನಲ್ ಪುರೋಹಿತ್ ಅವರಿಗಿತ್ತು. 2008ರ ಜನವರಿಲ್ಲಿ ಕರ್ನಲ್ ಪುರೋಹಿತ್ ಪಂಚಮರಿಗೆ ಭೇಟಿ ನೀಡಿದಾಗಲೇ ಈ ಕೊಲೆ ಸಂಚಿಗೆ ಚಾಲನೆ ನೀಡಲಾಗಿತ್ತು. ಸಂಚು ನಡೆದ ಸಭೆಯಲ್ಲಿ, ಶ್ರೀ ಇಂದ್ರೇಶ್ ಕುಮಾರ್ ಅವರನ್ನು ಮುಗಿಸಲು ಶಸ್ತ್ರಗಳನ್ನು ಪಡೆದುಕೊಳ್ಳುವಂತೆ ದಯಾನಂದ್ ಪಾಂಡೆ ಕರ್ನಲ್ ಪುರೋಹಿತ್ ಅವರಿಗೆ ಕೇಳಿಕೊಂಡಿದ್ದರು. ಅದರಂತೆ ಕರ್ನಲ್ ಪುರೋಹಿತ್ ದಯಾನಂದ್ ಪಾಂಡೆಯ ದೋಸ್ತಿ ಅಲೋಕ್ ಎಂಬ ವ್ಯಕ್ತಿಗೆ ಭೂಪಾಲ್ ರೈಲು ನಿಲ್ದಾಣದಲ್ಲಿ ಸಿಕ್ಕು ಇಂದ್ರೇಶ್ ಕುಮಾರ್ ಅವರನ್ನು ದೆಹಲಿಯಲ್ಲಿ ಕೊಲೆ ಮಾಡಲು 9ಎಂಎಂ ಪಿಸ್ತೂಲ್ ಒಂದನ್ನು ಕೊಟ್ಟಿದ್ದ. ಮಹಾರಾಷ್ಟ್ರ ಎಟಿಎಸ್ ಹಾಗೂ ಎಂಐ ಎರಡೂ ಈ ಕುರಿತು ಕರ್ನಲ್ ಪುರೋಹಿತ್ ಅವರನ್ನು ವಿಚಾರಣೆಗೆ ಒಳಪಡಿಸಿ ಈ ತಪ್ಪೊಪ್ಪಿಗೆ ಪಡೆದಿದ್ದವು. ಹಿಂದೆ ಹೇಳಿದ ಆಡಿಯೋ ಸಂಭಾಷಣೆಗೂ, ಕರ್ನಲ್ ಪುರೋಹಿತ್ ತಪ್ಪೊಪ್ಪಿಗೆಗೂ ತಾಳೆಯಾಗುತ್ತಿದೆ. ಈ ಕಾರಣದಿಂದ ಆರೆಸ್ಸೆಸ್ ಮುಖಂಡರನ್ನು ಹತ್ಯೆ ಮಾಡುವ ಸಂಚಿನ ಕುರಿತು ಎಂಎಟಿಎಸ್ ಗೆ ಸಂಪೂರ್ಣ ಮಾಹಿತಿ ಇದೆ.
ಆದರೆ, ಕೊಲೆಸಂಚಿನ ಇಂತಹ ಸ್ಫೊಟಕ ಹಾಗೂ ಅತ್ಯಂತ ಪ್ರಮುಖ, ನಿರ್ದಿಷ್ಟ ಸಾಕ್ಷಾಧಾರಗಳನ್ನೂ ಕೈಲಿಟ್ಟುಕೊಂಡೂ ಸಹ ಎಂಎಟಿಎಸ್ “ಪ್ರಜ್ಞಾಪೂರ್ವಕ ತೀರ್ಮಾನ” ಕೈಗೊಂಡಿದ್ದು ಬಾಂಬೆ ಹೈಕೋರ್ಟಿಗೆ 2010ರ ಜುಲೈನಲ್ಲಿ, ಅಂತಹ ಯಾವುದೇ “ನಿರ್ದಿಷ್ಟ” ಮಾಹಿತಿ ಇಲ್ಲವೆಂದೂ, ಆರೆಸ್ಸೆಸ್ ನಾಯಕರನ್ನು ಕೊಲ್ಲುವ ಸಂಚಿನ ವಿಷಯದಲ್ಲಿ “ಮುಂದಿನ ವಿಚಾರಣೆ ವರೆಗೆ ಕಾಯುವ ಹೊರತಾಗಿ” “ಮುಂದಿನ ಯಾವುದೇ ಕ್ರಮ ಕೈಗೊಳ್ಳುವ ಅಗತ್ಯ ಇಲ್ಲ” ಎಂದೂ ತಿಳಿಸಿದೆ. ಎಂಎಟಿಎಸ್ ಕೋರ್ಟಿಗೆ ಸ್ಪಷ್ಟವಾಗಿ ಸುಳ್ಳು ಹೇಳಿದೆ. ಅದಕ್ಕೆ ಕೊಲೆಸಂಚಿನ ಕುರಿತು ನಿರ್ದಿಷ್ಟ ಮಾಹಿತಿ ಇದೆ. ಯಾರನ್ನೇ ಆಗಲೀ ಕೊಲೆ ಮಾಡುವ ಸಂಚು ಎಂದರೆ ಗಂಭೀರ ವಿಷಯ. ಈ ಪ್ರಕರಣದಲ್ಲಿ ಇದು ಪ್ರತ್ಯೇಕ ಅಪರಾಧವಾಗಿದ್ದು ಅದಕ್ಕೂ ಮಾಲೆಗಾಂವ್ ಪ್ರಕರಣ ಹಾಗೂ ವಿಚಾರಣೆಗೆ ಸಂಬಂಧ ಹೊಂದಿರುವಂತದ್ದಲ್ಲ. ಹೀಗಾಗಿ ಮಾಲೆಗಾಂವ್ ವಿಚಾರಣೆಯ ಫಲಿತಾಂಶಕ್ಕೆ ಈ ಕೊಲೆ ಸಂಚಿನ ಪ್ರಕರವನ್ನು ತಳುಕು ಹಾಕುವ ಅಗತ್ಯವಿರಲಿಲ್ಲ. ಇದೇನಿದ್ದರೂ ಕೊಲೆ ಸಂಚಿನ ಕುರಿತು ತನಿಖೆ ನಡೆಸದಿರಲು ಒಂದು ನೆಪವಷ್ಟೆ. ಈ ಕುರಿತು ತನಿಖೆ ನಡೆಸುವುದು ವಿಳಂಬವಾದಷ್ಟೂ ಸಾಕ್ಷ್ಯಗಳ ನಾಶಕ್ಕೆ ಅನುಕೂಲವಾಗುತ್ತದೆ. ಆದರೂ ಎಂಎಟಿಎಸ್ 2008ರಲ್ಲಿ ಒಂದು ಎಫ್ ಐ ಆರ್ ಕೂಡಾ ಕೊಲೆ ಸಂಚಿನ ವಿಷಯದಲ್ಲಿ ದಾಖಲಿಸಿಲ್ಲ. ಕೊಲೆ ಸಂಚನ್ನು ಮುಚ್ಚಿಹಾಕಲು ಮಾಡಿರುವ ತೀರ್ಮಾನ ಇದಾಗಿದೆ. ಆರೆಸ್ಸೆಸ್ ಮುಖಂಡರನ್ನು ಕೊಲೆ ಮಾಡುವ ಸಂಚನ್ನು ತನಿಖೆ ಮಾಡದಿರುಲು ಎಂಎಟಿಎಸ್ ಮಾಡಿರುವ ಆಘಾತಕಾರಿ ತೀರ್ಮಾನವು ಉತ್ತರವಿಲ್ಲದ ಪ್ರಶ್ನೆಗಳನ್ನು ಕೆಲವು ಹುಟ್ಟುಹಾಕಿದೆ.
ಮಾಲೆಗಾಂವ್ ಸ್ಪೋಟದ ಸಂಚುಕೋರರೊಂದಿಗೆ ಆರೆಸ್ಸೆಸ್ ಸಂಘಟನೆಯನ್ನು ಸೇರಿಸಿ ಆರೋಪಿಸಲು ಕೊಲೆ ಸಂಚಿನ ತನಿಖೆ ತಡೆಯೊಡ್ಡುತ್ತದೆ ಎಂದು ಈ ಕುರಿತ ತನಿಖೆಯನ್ನು ಸ್ಥಗಿತಗೊಳಿಸಲಾಗಿದೆಯೇ?
ಕೊಲೆ ಸಂಚಿನ ತನಿಖೆಯನ್ನು ಸ್ಥಗಿತಗೊಳಿಸಲು ಮಾಡಿರುವ ತೀರ್ಮಾನವು ಆರೆಸ್ಸೆಸ್ ವಿರುದ್ಧ ಪ್ರಚಾರ ನಡೆಸುವವರಿಗೆ ಮಾತ್ರ ಸಹಕಾರಿಯಾಗಿದೆ ಎಂಬುದು ಮೋಟಿವ್ ಒದಗಿಸುತ್ತದೆ. ಕೊಲೆ ಸಂಚಿನ ವಿಷಯವು ಕಳೆದ ವರ್ಷ ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಸಹ ಚರ್ಚೆಗೆ ಬಂದಿದೆ ಎಂಬುದನ್ನು ಸಹ ನಾವು ಗಮನಕ್ಕೆ ತರಬಯಸುತ್ತೇವೆ.
ಆರೆಸ್ಸೆಸ್ ಈ ವಿಷಯವನ್ನು ಎಂಎಟಿಎಸ್, ಮಹಾರಾಷ್ಟ್ರ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ವಿವೇಚನೆಗೆ ವಿಶ್ವಾಸದಿಂದ ಬಿಟ್ಟಿತ್ತು. ಆದರೆ ಎಂಎಟಿಎಸ್ ತನ್ನ ಮೂಲಭೂತ ಕರ್ತವ್ಯದಿಂದ ವಿಮುಖಗೊಂಡಿದ್ದು, ರಾಜ್ಯ, ಕೇಂದ್ರ ಸರ್ಕಾರಗಳೂ ಈ ಬಗ್ಗೆ ಮೌನ ವಹಿಸಿದಾಗ ಆರೆಸ್ಸೆಸ್ ತನ್ನ ಮುಂದಿನ ಕಾರ್ಯಾಚರಣೆ ಕುರಿತು ಸೂಕ್ತ ಕಾನೂನು ಸಲಹೆ ಪಡೆಯುತ್ತಿದೆ.
ಕರ್ನಲ್ ಪುರೋಹಿತ್ ಮಾಲೆಗಾಂವ್ ಸ್ಪೋಟ ಪ್ರಕರಣದಲ್ಲಿ ಹಾಗೂ ಆರೆಸ್ಸೆಸ್ ವಿರುದ್ಧದ ಸಂಚಿನಲ್ಲಿ ಭಾಗಿಯಾಗಿರುವ ವಿಷಯ ತಿಳಿದು ನಮಗೆ ಆಘಾತವಾಗಿದೆ. ಆದರೆ ಈ ವಿಷಯ ಬಹಳ ಗಂಭಿರವಾದುದರಿಂದ ಸರ್ಕಾರವೇ ಇದರ ತನಿಖೆ ನಡೆಸಿ ಸತ್ಯ ಹೊರ ಬರಲಿ ಎಂದು ಬಿಟ್ಟಿದ್ದೆವು. ಆದರೆ ಹಾಗೆ ನಡೆಯದ ಕಾರಣ ಕರ್ನಲ್ ಪುರೋಹಿತ್ ರಾಜಕೀಯ ಪಾತ್ರ ವಹಿಸುತ್ತಿದ್ದ ಕುರಿತು ಸಾಂಧರ್ಭಿಕ ಸಾಕ್ಷ್ಯವನ್ನು ನಾವಿಲ್ಲಿ ಸಾದರಪಡಿಸುತ್ತಿದ್ದೇವೆ. ಕರ್ನಲ್ ಪುರೋಹಿತ್ ಆರೆಸ್ಸೆಸ್ ಮತ್ತು ಅದರ ಸ್ನೇಹಿ ಸಂಘಟನೆಗಳನ್ನು ಒಳಗಿನಿಂದಲೇ ಒಡೆಯಲು ಹೇಗೆ ಪ್ರಯತ್ನಿಸುತ್ತಿ ಎಂಬುದನ್ನು ನಾವು ತಿಳಿಸಬಯಸುತ್ತೇವೆ. ತನ್ನ ಸ್ಥಾನ ಹಾಗೂ ತನಗಿದ್ದ ರಾಷ್ಟ್ರವಾದಿ ಚಿಂತನೆಗಳನ್ನು ಬಳಸಿಕೊಂಡು ಅವನು 2005ರಿಂದಲೇ ಆರೆಸ್ಸೆಸ್ ಹಿರಿಯ ನಾಯಕರೊಂದಿಗೆ ಸಂಪರ್ಕ ಸಾಧಿಸಲು ತೊಡಗಿದ್ದ. ಯಾರಿಗೂ ಇಲ್ಲದ ಬುದ್ಧಿವಂತಿಕೆ ತನಗಿದೆ ಎಂದು ಹೇಳಿಕೊಂಡು ಅವನು ಮತ್ತು ಅವನ ಜೊತೆಗಾರರು ಸೇರಿಕೊಂಡು ಇಂದ್ರೇಶ್ ಕುಮಾರ್ ಒಬ್ಬ ಐಎಸ್ ಐ ಏಜೆಂಟ್, ಅವರು ಆರೆಸ್ಸೆಸ್ ನಾಯಕರಿಗೆ ಅನಾಹುತ ಮಾಡಲಿದ್ದಾರೆ ಎಂಬ ಸಂಶಯಪ್ರಚಾರ ಹುಟ್ಟುಹಾಕಿದರು. ಇದರಿಂದ ಆಘಾತಗೊಂಡ ನಾಯಕರಿಗೆ ಎಲ್ಲವನ್ನೂ ಅರಗಿಸಿಕೊಂಡು ಕರ್ನಲ್ ಪುರೋಹಿತ್ ಮತ್ತವರ ಜೊತೆಗಾರರು ನಿಜಕ್ಕೂ ಆರೆಸ್ಸೆಸ್ ನ್ನು ಒಳಗಿನಿಂದಲೇ ಒಡೆಯಲು ಪ್ರಯತ್ನ ನಡೆಸುತ್ತಿರುವ ವಸ್ತುಸ್ಥಿತಿ ಅರಿವಾಗಲು ಸ್ವಲ್ಪ ಕಾಲವೇ ಹಿಡಿಯಿತು.
ನಮ್ಮ ನಂಬಿಕೆ ಏನೆಂದರೆ ಕರ್ನಲ್ ಪುರೋಹಿತ್ ನ ಪಾತ್ರವೇನಿದ್ದರೂ ರಾಜಕೀಯವಾದದ್ದೇ ವಿನಃ ಆತ ತಾನೇ ತಾನಾಗಿ ಕ್ರಿಯೆಗಿಳಿಯುವವನಲ್ಲ. ಆದರೂ ಆರೆಸ್ಸೆಸ್ ನ್ನು ಒಡೆಯುವ ಪ್ರಯತ್ನದ ಹಿಂದೆ ಅವನ ಬೆನ್ನಿಗೆ ಯಾರಿದ್ದಾರೆ ಎಂಬುದನ್ನು ತನಿಖೆ ಮೂಲಕವೇ ಪತ್ತೆ ಹಚ್ಚಬೇಕಿದೆ. ಈ ದೊಡ್ಡ ಮಟ್ಟದ ರಾಜಕೀಯ ಸಂಚನ್ನು ಕೇವಲ ಕ್ರಿಮಿನಲ್ ತನಿಖೆ ಮೂಲಕ ಪತ್ತೆ ಹಚ್ಚಲಾಗದು. ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆ ಬಹಿರಂಗಪಡಿಸಿರುವ ಪ್ರಕಾರ ಕರ್ನಲ್ ಪುರೋಹಿತ್ ಆರೆಸ್ಸೆಸ್ ಮತ್ತು ಬಿಜೆಪಿಗಳ ವಿರೋಧಿ ನಿಲುವು ಹೊಂದಿರುವ ವ್ಯಕ್ತಿ.
ಹೀಗಾಗಿ ಆತನ ಹಿಡನ್ ರಾಜಕೀಯ ಸಂಪರ್ಕಗಳೇನು ಮತ್ತು ಅಜೆಂಡಾಗಳೇನು ಎಂಬ ವಿಷಯ ಉದ್ಭವವಾಗುತ್ತದೆ. ಇಂತಹ ತಂತ್ರಗಾರಿಕೆಯಿಂದ ಯಾರಿಗೆ ಹೆಚ್ಚು ಲಾಭವಾಗುತ್ತದೆಯೋ ಅವರೇ ಇದರ ಹಿಂದಿರುತ್ತಾರೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಆದರೂ ಕೇವಲ ಸೂಕ್ತ, ಸ್ವತಂತ್ರ ತನಿಖೆಯಿಂದ ಮಾತ್ರ ಈ ರಾಜಕೀಯ ಅಜೆಂಡಾ ಹಾಗೂ ಸಂಪರ್ಕಗಳನ್ನು ಪತ್ತೆಹಚ್ಚಬಹುದಾಗಿದೆ. ಇದೇ ಬಗೆಯ ತನಿಖೆಯನ್ನು ದಯಾನಂದ ಪಾಂಡೆ ಕುರಿತೂ ಸಹ ನಡೆಸುವ ಅಗತ್ಯವಿದೆ. ಇವನ ಪಾತ್ರವೂ ಅಷ್ಟೇ ನಿಗೂಢವಾಗಿದೆಯಲ್ಲದೇ ತನಿಖೆ ನಡೆಸದಿದ್ದಲ್ಲಿ ಪೂರ್ತಿ ಸತ್ಯ ಹೊರಬರುವುದಿಲ್ಲ.
ಆರೆಸ್ಸೆಸ್ ಮತ್ತು ಅದರ ಪರಿವಾರದ ಸಂಘಟನೆಗಳು ರಾಷ್ಟ್ರ ನಿರ್ಮಾಣದ ಕೆಲಸದಲ್ಲಿ ದೇಶದಾದ್ಯಂತ ಮತ್ತು ದೇಶದ ಹೊರಕ್ಕೂ ತೊಡಗಿಕೊಂಡಿರುವುದು ಸರ್ಕಾರಕ್ಕೆ ತಿಳಿದ ವಿಷಯ. ಅದರ ಕೆಲಸವನ್ನು ಹಿಂದಕ್ಕೆಳೆಯುವ ಪ್ರಯತ್ನಗಳೆಲ್ಲಾ ವಿಫಲವಾಗಿವೆ. ಡಾ. ಸರ್ವೇಪಲ್ಲಿ ರಾಧಾಕೃಷ್ಣನ್, ಜಯಪ್ರಕಾಶ್ ನಾರಾಯಣ್, ಆಚಾರ್ಯ ವಿನೋಭಾ ಬಾವೆ, ಆಚಾರ್ಯ ಕೃಪಲಾನಿ, ಪಂಡಿತ್ ಮದನ್ ಮೋಹನ್ ಮಾಳವೀಯ, ಭಾರತ ರತ್ನ ಭಗವಾನ್ ದಾಸ್, ಸರ್ದಾರ್ ವಲ್ಲಭಬಾಯಿ ಪಟೇಲ್, ಡಾ.ಝಾಕಿರ್ ಹುಸೇನ್, ಲಾಲ್ ಬಹದೂರ್ ಶಾಸ್ತ್ರಿ ಮತ್ತು ಜನರಲ್ ಕಾರಿಯಪ್ಪ ಮುಂತಾದ ಗಣ್ಯರ ಹಿಂಡೇ ಆರೆಸ್ಸೆಸ್ ಕಾರ್ಯಕ್ರಮಗಳಲ್ಲಿ ಭಾಗವಹಗಿಸಿ ಹರಸಿರುವ ಉದಾಹರಣೆ ಇದೆ. ಆರೆಸ್ಸೆಸ್ಸಿನೊಂದಿಗೆ ಗಂಭೀರ ಭಿನ್ನಾಭಿಪ್ರಾಯ ಹೊಂದಿರುವ ಪಂಡಿತ ನೆಹರೂ ಸಹ 2963ರ ಜನವರಿಯಲ್ಲಿ ಗಣರಾಜ್ಯ ದಿನದಂದು ಪೆರೇಡ್ ನಲ್ಲಿ ಭಾಗವಹಿಸಲು ಆರೆಸ್ಸೆಸ್ ಸ್ವಯಂಸೇವಕರನ್ನು ಆಹ್ವಾನಿಸಿದ್ದರು. ನಮ್ಮ ದೇಶ ಮತ್ತು ಸಂವಿಧಾನಕ್ಕೆ ಆರೆಸ್ಸೆತ್ ತೋರಿರುವ ಬದ್ಧತೆ ಸ್ಪಷ್ಟ ಮತ್ತು ಖಚಿತವಾಗಿದೆ. ಆರೆಸ್ಸೆಸ್ ಪ್ರಚಾರಕ ಶ್ರೀ ದೇವೆಂದರ್ ಗುಪ್ತಾ ಅವರ ಬಂಧನದ ಹಿನ್ನೆಲೆಯಲ್ಲಿ ನಾನು ಮೇ 1, 2010ರಂದು ನಾನು ನೀಡಿದ್ದ ಹೇಳಿಕೆಯಲ್ಲಿ ನಾನು ಎಲ್ಲಾ ಬಗೆಯ ತನಿಖೆಗೆ ನಾವು ಸಹಕಾರ ನೀಡುವುದಾಗಿ ಹೇಳಿದ್ದಲ್ಲದೇ ಈ ಪ್ರಕರಣಗಳಲ್ಲಿ ಪಾರದರ್ಶಕ, ಅಮೂಲಾಗ್ರ ತನಿಖೆ ನಡೆಸಲೂ ಆರೆಸ್ಸೆಸ್ ಬಯಸುತ್ತದೆ ಎಂದು ತಿಳಿಸಿದ್ದು ಮೇಲಿನ ಸ್ಪೂರ್ತಿಯಲ್ಲೇ.
ತನಿಖಾ ಸಂಸ್ಥೆಗಳ ತನಿಖೆಗಳಿಗೆ ನಾವು ಎಲ್ಲಾ ರೀತಿಯ ಸಹಕಾರ ನೀಡಿದ್ದೇವೆ. ಆದರೆ ತನಿಖಾ ಸಂಸ್ಥೆಗಳು ಉದ್ದೇಶಪೂರ್ವಕವಾಗಿ ಕಿರುಕುಳ ನೀಡಿದ್ದಾರಲ್ಲದೇ ಚಾರಿತ್ರ್ಯಹರಣಕ್ಕೂ ಮುಂದಾಗಿದ್ದಾರೆ. ಅವರ ತನಿಖೆ ಕೇವಲ ಕ್ರಿಮಿನಲ್ ತನಿಖೆಗೆ ಕೊನೆಗೊಂಡು ಆರೆಸ್ಸೆಸ್ ವಿರುದ್ಧ ರಾಜಕೀಯ ಪ್ರಚಾರಕ್ಕೆ ನೆಪವಾಗಿ ಬಳಕೆಯಾಗಿದೆ. ಆರೆಸ್ಸೆಸ್ ವಿರುದ್ಧ ಈ ಪ್ರಚಾರಾಭಿಯಾನಕ್ಕೆ ರಾಜಕೀಯ ಹಿನ್ನೆಲೆಯಿದೆ. ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚಿನ ಸಮಯದಿಂದ ಆಡಳಿತ ಪಕ್ಷವಾದ ಕಾಂಗ್ರೆಸ್ ನ ಹಿರಿಯ ಪ್ರಧಾನ ಕಾರ್ಯದರ್ಶಿ ಅವರು ಕರೆಯುವ “ಕೇಸರಿ ಭಯೋತ್ಪಾದನೆ” ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಈ ಆಧಾರದಲ್ಲಿಯೇ ಆರೆಸ್ಸೆಸ್ ನ್ನೇ ತನಿಖೆಗೆ ಒಳಪಡಿಸುವಂತೆ ಆಳುವ ಪಕ್ಷ ತಿಳಿಸಿತ್ತಲ್ಲದೇ, ಆರೆಸ್ಸೆಸ್ ವಿರುದ್ಧ ರಾಜಕೀಯ ದ್ವೇಷವನ್ನು ಔಪಚಾರಿಕಗೊಳಿಸಲು ಯತ್ನಿಸಿತ್ತು.
ಈ ಹಿನ್ನೆಲೆಯಲ್ಲಿ ಇದು ಆರೆಸ್ಸೆಸ್ ನಾಯಕರನ್ನು ಕೊಲ್ಲುವ ಸಂಚು ಮಾತ್ರವಾಗಿರದೇ ಆರೆಸ್ಸೆಸ್ ವಿರುದ್ಧ ಹೂಡಲಾಗಿರುವ ದೊಡ್ಡ ಪಿತೂರಿ ಎಂಬುದನ್ನು ತಮ್ಮ ಗಮನಕ್ಕೆ ತರುವುದು ನನ್ನ ಕರ್ತವ್ಯವೆಂದು ಭಾವಿಸಿರುವೆ. ಕರ್ನಲ್ ಪುರೋಹಿತ್, ದಯಾನಂದ ಪಾಂಡೆ ಮತ್ತವರ ಸಹಚರರ ಗುಪ್ತ ಕಾರ್ಯಾಚರಣೆಯ ಬಗ್ಗೆ ನಿಷ್ಪಕ್ಷಪಾತ ಮತ್ತು ಸ್ವತಂತ್ರ ತನಿಖೆ ನಡೆಸಬೇಕೆಂದು ನಾವು ಸರ್ಕಾರವನ್ನು ಆಗ್ರಹಿಸುತ್ತೇವೆ. ಆಡಳಿತ ಪಕ್ಷದ ವೈಷಮ್ಯ ಮತ್ತು ಈ ವರೆಗೂ ತನಿಖಾ ಸಂಸ್ಥೆಗಳು ನಡೆಸಿರುವ ತನಿಖೆಯನ್ನು ಗಮನಿಸಿದರೆ ಇಂದು ಈ ಕೆಲಸವನ್ನು ಕೈಗೆತ್ತಿಕೊಳ್ಳುವ ವಿಶ್ವಾಸಾರ್ಹತೆಯನ್ನು ಯಾವುದೇ ಸರ್ಕಾರಿ ಸಂಸ್ಥೆಯೂ ಉಳಿಸಿಕೊಂಡಿಲ್ಲ. ಹಾಗಾಗಿಯೇ ನಾವು ಇದನ್ನು ಸ್ವತಂತ್ರ ಸಂಸ್ಥೆಯಿಂದ ತನಿಖೆ ಮಾಡಿಸಬೇಕೆಂದು ಒತ್ತಾಯಿಸುತ್ತಿದ್ದೇವೆ. ಮಾನ್ಯ ಪ್ರಧಾನಮಂತ್ರಿಯವರು ಈ ಕುರಿತು ನ್ಯಾಯೋಚಿತವಾದ ಮತ್ತು ವಸ್ತುನಿಷ್ಠ ನಿಲುವನ್ನು ತಳೆದು, ಆರೆಸ್ಸೆಸ್ ಮುಖಂಡರನ್ನು ಕೊಲ್ಲುವ ಒಳಸಂಚಿನ ಬಗ್ಗೆ ನಿಷ್ಪಕ್ಷಪಾತವಾದ ತನಿಖೆಗೆ ಆದೇಶಿಸುವರೆಂದು ನಂಬಿದ್ದೇವೆ. ಈ ಸಂಚನ್ನು ಎಂಎಟಿಎಸ್ ಏಕೆ ಹತ್ತಿಕ್ಕಿತು? ಅದನ್ನು ತನಿಖೆಗೆ ಒಳಪಡಿಸಲಿಲ್ಲವೇಕೆ?
ಕರ್ನಲ್ ಪುರೋಹಿತ್, ದಯಾನಂದ ಪಾಂಡೆ ಮತ್ತು ಡಾ.ಆರ್.ಪಿ.ಸಿಂಗ್ ರಂತಹ ಅವರ ಸಹಚರರ ರಾಜಕೀಯ ಪಾತ್ರ ಮತ್ತು ಕಾರ್ಯಸೂಚಿ ಏನು?
ಅವರ ಕಾರ್ಯಾಚರಣೆಯ ಹಿಂದೆ ಅವರ ಜೊತೆ ಇದ್ದವರು ಯಾರು?
ನಿಷ್ಪಕ್ಷಪಾತ ವಿಚಾರಣೆಯಾಗದೆ ಈ ಪ್ರಶ್ನೆಗಳಿಗೆ ಉತ್ತರ ಸಿಗಲಾರದು ಮತ್ತು ಅದರಿಂದಾಗಿ ಪೂರ್ಣಸತ್ಯ ಹೊರಬರುವುದಿಲ್ಲ.
ಸಾಮಾಜಿಕ ಸಂಘಟನೆಯಾಗಿರುವ ಆರೆಸ್ಸೆಸ್ ತನ್ನ ಸೇವಾ ಚಟುವಟಿಕೆಗಳ ಮೂಲಕವಲ್ಲದೆ ರಾಜಕೀಯ ವ್ಯವಸ್ಥೆಯ ಜೊತೆ ತೀಕ್ಷ್ಣವಾಗಿ ಸಂವಹನ ಮಾಡುವುದಿಲ್ಲ. ಆದ್ದರಿಂದ ಮಾನ್ಯ ಪ್ರಧಾನಮಂತ್ರಿಯವರಿಗೆ ಪತ್ರ ಬರೆಯಲು ಇಲ್ಲವೇ ಭೇಟಿ ಮಾಡುವ ಪ್ರಮೇಯವಿರುವುದಿಲ್ಲ. ನಾನು ತಮಗೆ ಬರೆಯುತ್ತಿರುವ ಮೊಟ್ಟಮೊದಲನೇ ಪತ್ರದಲ್ಲೇ ತೀರಾ ಅಹಿತಕರವಾದ ವಾಸ್ತವ ಸಂಗತಿಗಳನ್ನು ತಮ್ಮ ಗಮನಕ್ಕೆ ತರಬಯಸುತ್ತಿದ್ದೇನೆ ಎಂಬ ಬೇಸರವಿದೆ. ಅಲ್ಲದೆ ಪತ್ರದಲ್ಲಿನ ಸತ್ಯಾಂಶಗಳೇ ಹೇಳುವಂತೆ ಈ ವಿಷಯ ಬಹಳ ಮುಖ್ಯವಾಗಿರುವುದರಿಂದ ನಾನು ಅಂದುಕೊಂಡದ್ದಕ್ಕಿಂತ ಪತ್ರ ದೀರ್ಘವಾಗಿಬಿಟ್ಟಿದೆ. ಆದರೂ ತಮ್ಮ ಒತ್ತಡದ ರಾಷ್ಟ್ರೀಯ ಕೆಲಸಗಳ ಮಧ್ಯೆ, ಈ ಪತ್ರದಲ್ಲಿ ಉಲ್ಲೇಖಿಸಲಾಗಿರುವ ಸತ್ಯಾಂಶಗಳು ಮತ್ತು ಸಮಸ್ಯೆಗಳ ಕಡೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಿರೆಂದು ನಂಬಿದ್ದೇನೆ.
ಈ ವಿಷಯದ ಗಂಭೀರತೆಯ ಕಾರಣದಿಂದ ತಮ್ಮನ್ನು ಖುದ್ದಾಗಿ ಭೇಟಿ ಮಾಡಿ ಚರ್ಚಿಸಲು ಅನುಕೂಲವಾದ ಸಮಯವನ್ನು ನಿಗದಿಪಡಿಸಲು ಕೋರುತ್ತೇವೆ.
ಗೌರವಾದರಗಳೊಂದಿಗೆ
ವಿಶ್ವಾಸದಿಂದ,
ಸುರೇಶ್ (ಭಯ್ಯಾ) ಜೋಶಿ
ಸರಕಾರ್ಯವಾಹ, ಆರೆಸ್ಸೆಸ್
ಆಧಾರ: ಆರೆಸ್ಸೆಸ್ ಆರ್ಕೈವ್ಸ್
More Articles
By the same author