ಚುನಾವಣಾ ಆಯೋಗವು ಮೋದಿ ಕುರಿತ ವೆಬ್ ಸರಣಿಗೆ ನಿಷೇಧ ಹೇರಿದೆ. ಇರೋಸ್ ಒರಿಜಿನಲ್ ಸಿರೀಸ್ ಮೋದಿ: ಜರ್ನಿ ಆಫ್ ಕಾಮನ್ ಮ್ಯಾನ್ ಎಂಬ ತಲೆಬರಹದ ವೆಬ್ ಸರಣಿಯು ಪ್ರಧಾನಿ ನರೇಂದ್ರ ಮೋದಿಯ ಜೀವನವನ್ನು ವಿಜೃಂಭಿಸುವಂತೆ ಚಿತ್ರೀಕರಿಸಿದ್ದು ಚುನಾವಣೆಯ ಸಂದರ್ಭದಲ್ಲಿ ಮತದಾರರ ಮೇಲೆ ಪರಿಣಾಮ ಬೀರಲೆಂದೇ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಚುನಾವಣಾ ಆಯೋಗವು ಈ ವೆಬ್ ಸರಣಿಯನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು ಎಂದು ನಿರ್ದೇಶನ ನೀಡಿದೆ.
ಇದಕ್ಕೂ ಮುನ್ನ ಆಯೋಗವು ಪಿಎಂ ನರೇಂದ್ರ ಮೋದಿ ಹೆಸರಿನ ಬಾಲಿವುಡ್ ಸಿನಿಮಾದ ಬಿಡುಗಡೆಯನ್ನುತಡೆಹಿಡಿದಿತ್ತಲ್ಲದೇ ನಮೋ ಟೀವಿಯ ಪ್ರಸಾರಕ್ಕೂ ತಡೆಯೊಡ್ಡಿತ್ತು.
“5 ಕಂತುಗಳ ಮೋದಿ-ಜರ್ನಿ ಆಫ್ ಎ ಕಾಮನ್ ಮ್ಯಾನ್ ವೆಬ್ ಸರಣಿಯು ನಿಮ್ಮ ತಾಲತಾಣ ವೇದಿಕೆಯಲ್ಲಿ ಇರುವುದು ನಮ್ಮ ಗಮನಕ್ಕೆ ಬಂದಿದೆ. ಇದರ ಆನ್ ಲೈನ್ ಪ್ರಸಾರವನ್ನು ಕೂಡಲೇ ನಿಲ್ಲಿಸಿ, ಅದಕ್ಕೆ ಸಂಬಂಧಿಸಿದ್ದೆಲ್ಲವನ್ನೂ ಮುಂದಿನ ಆದೇಶದವರೆಗೂ ತೆಗೆದುಹಾಕುವಂತೆ ಈ ಮೂಲಕ ನಿರ್ದೇಶನ ನೀಡಲಾಗಿದೆ” ಎಂದು ಚುನಾವಣಾ ಆಯೋಗವು ನೊಟೀಸ್ ನೀಡಿದೆ.
Election Commission to Eros Now: It was brought to our notice that a web series "Modi-Journey of a Common Man, having 5 episodes is available on your platform. You're directed to stop forthwith the online streaming & remove all connected content of the series till further orders pic.twitter.com/ofs0neJMc3
— ANI (@ANI) April 20, 2019
ಈ ವೆಬ್ ಸರಣಿಯನ್ನು ಸೆನ್ಸಾರ್ ಮಂಡಳಿಯ ಸದಸ್ಯರಾಗಿರುವ ಮಿಹತ್ ಭುಟಾ ಹಾಗೂ ರಾಧಿಕಾ ಆನಂದ್ ಸೇರಿ ಬರೆದಿದ್ದರು. ಓ ಮೈ ಗಾಡ್ ಸಿನಿಮಾ ಖ್ಯಾತಿಯ ಉಮೇಶ್ ಶುಕ್ಲಾ ನಿರ್ದೇಶಿಸಿದ್ದರು. ನರೇಂದ್ರ ಮೋದಿ ಹುಟ್ಟಿ ಬೆಳೆದ ಗುಜರಾತಿನ ಸಿದ್ದಾಪುರ ಹಾಗೂ ವಡಾನಗರಗಳಲ್ಲಿ ಸರಣಿಯ ಚಿತ್ರೀಕರಣ ನಡೆದಿತ್ತು. ಹಿರಿಯ ನಟ ಮಹೇಶ್ ಠಾಕೂರ್ ಅವರು ಮೋದಿ ಗುಜರಾತಿನ ಮುಖ್ಯಮಂತ್ರಿ ಆದ ನಂತರದ ಪಾತ್ರವನ್ನು ನಿರ್ವಹಿಸಿದ್ದರು.