“ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?” ಶತಮಾನಗಳ ಹಿಂದೆಯೇ ಹೇಳಿದ ದಾಸಶ್ರೇಷ್ಠ ಕನಕದಾಸರು ಮತ್ತು ತಮ್ಮ ಬದುಕನ್ನೇ ಸೌಹಾರ್ದತೆಗೆ ಮೀಸಲಿಟ್ಟ ಸಂತ ಶಿಶುನಾಳ ಷರೀಫರ ನಾಡು ಹಾವೇರಿಯಲ್ಲಿ ಈಗ ಚುನಾವಣೆಗಳು ನಡೆಯುವುದೇ ಕೋಮು ಮತ್ತು ಜಾತಿ ಮೇಲಾಟದ ಮೇಲೆಯೇ. 2008ರಲ್ಲಿ ಕ್ಷೇತ್ರ ಮರುವಿಂಗಡಣೆಯ ಬಳಿಕ ಹಾವೇರಿ ಲೋಕಸಭಾ ಕ್ಷೇತ್ರ ಎಂದಾದ ಇದು, ಆ ಮೊದಲು ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರ ಎಂದಾಗಿತ್ತು.
ಹಾವೇರಿ ಹೆಸರಿನಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಆದ ಬಳಿಕ ನಡೆದ 2009 ಮತ್ತು 2014ರ ಚುನಾವಣೆಗಳಲ್ಲಿ ಬಿಜೆಪಿಯ ಹಾಲಿ ಸಂಸದ ಶಿವಕುಮಾರ ಉದಾಸಿಯವರೇ ಆಯ್ಕೆಯಾಗಿದ್ದು, ಈ ಬಾರಿ ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ಕಣಕ್ಕಿಳಿದಿದ್ದಾರೆ. ಧಾರವಾಡ ದಕ್ಷಿಣ ಕ್ಷೇತ್ರವಾಗಿದ್ದಾಗ ಮೊಟ್ಟಮೊದಲ ಮಹಾಚುನಾವಣೆ(1952)ಯಿಂದ 1998ರಲ್ಲಿ ಲೋಕಶಕ್ತಿ ಗೆಲುವು ದಾಖಲಿಸುವವರೆಗೆ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಪಾರುಪಥ್ಯವೇ ಮೆರೆದಿತ್ತು. ಲೋಕಶಕ್ತಿಯ ಅಭ್ಯರ್ಥಿ ಬಿ ಎಂ ಮೆಣಸಿನಕಾಯಿ ಒಂದೇ ವರ್ಷ ಸಂಸದರಾಗಿದ್ದರು. ಮತ್ತೆ 1999ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಐ ಜಿ ಸನದಿ ಆಯ್ಕೆಯಾದರು. ವಿಶೇಷವೆಂದರೆ, ಈವರೆಗಿನ ಒಟ್ಟು 16 ಚುನಾವಣೆಗಳ ಪೈಕಿ ಎರಡು ಬಾರಿ ಹೊರತುಪಡಿಸಿ ಉಳಿದಂತೆ 14 ಬಾರಿಯೂ ಕಾಂಗ್ರೆಸ್ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿತ್ತು. ಆ ಪೈಕಿ ನಾಲ್ಕು ಬಾರಿ ಹೊರತುಪಡಿಸಿ ಉಳಿದೆಲ್ಲಾ ಬಾರಿಯೂ ಜಯಗಳಿಸಿತ್ತು.
ಆದರೆ, ಈ ಬಾರಿ ಸತತ 14 ಚುನಾವಣೆಗಳ ನಂತರ ಮೊದಲ ಬಾರಿಗೆ ಕಾಂಗ್ರೆಸ್ ಹಿಂದೂ ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಹಿರಿಯ ನಾಯಕ ಕೆ ಎಚ್ ಪಾಟೀಲ ಅವರ ಸಹೋದರ, ಹಾಗೂ ನಾಲ್ಕು ಬಾರಿ ಗದಗ ಶಾಸಕರಾಗಿದ್ದ ಡಿ ಆರ್ ಪಾಟೀಲರು, ಬಿಜೆಪಿಯ ಶಿವಕುಮಾರ ಉದಾಸಿ ವಿರುದ್ಧ ಕಣಕ್ಕಿಳಿದಿದ್ದಾರೆ. ಗ್ರಾಮೀಣಾಭಿವೃದ್ಧಿಯ ತಮ್ಮ ಯಶೋಗಾಥೆ, ಸರಳ ಜೀವನ ಮತ್ತು ಗಾಂಧಿವಾದ ಪಾಲನೆಯ ಮೂಲಕ ತಮ್ಮದೇ ಆದ ಪ್ರಭಾವ ಹೊಂದಿರುವ, ಸಭ್ಯ ರಾಜಕಾರಣದ ಹೆಗ್ಗಳಿಕೆಯ ಪಾಟೀಲರಿಗೆ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳು ಮತ್ತು ಕ್ಷೇತ್ರದ ಬಹುಸಂಖ್ಯಾತ ಮುಸ್ಲಿಂ ಮತಗಳೇ ಆಸರೆ.
ಆದರೆ, 2004ರಿಂದ ಸತತ ಮೂರು ಗೆಲುವುಗಳನ್ನು ಕಂಡಿರುವ ಬಿಜೆಪಿ ಹಿಂದುತ್ವ ಮತ್ತು ಮೋದಿ ಅಲೆಯನ್ನು ಕ್ಷೇತ್ರದಲ್ಲಿ ಸಾಕಷ್ಟು ಆಳಕ್ಕೆ ತಲುಪಿಸಿದೆ. 2004ರಲ್ಲಿ ಮಂಜುನಾಥ ಕುನ್ನೂರ ಆಯ್ಕೆಯಾಗಿದ್ದರು. ಬಳಿಕ ನಡೆದ ಎರಡು ಚುನಾವಣೆಗಳಲ್ಲಿ ಶಿವಕುಮಾರ ಉದಾಸಿ ಕಮಲ ಪಾಳೆಯ ಪ್ರತಿನಿಧಿಸಿದ್ದಾರೆ. ವೈಯಕ್ತಿಕವಾಗಿ ಸಂಸತ್ ಕಲಾಪಕ್ಕೆ ಶಿಸ್ತಾಗಿ ಹಾಜರಾಗುವ, ಕ್ಷೇತ್ರದ ಉದ್ದಗಲಕ್ಕೆ ಓಡಾಡಿ ಜನಸಂಪರ್ಕದಲ್ಲಿರುವುದನ್ನೇ ತಮ್ಮ ಹೆಚ್ಚುಗಾರಿಕೆ ಎಂದು ಶಿವಕುಮಾರ್ ಬಣ್ಣಿಸುತ್ತಾ ಮತ ಯಾಚಿಸುತ್ತಿದ್ದಾರೆ. ಕ್ಷೇತ್ರದ ನೀರಿನ ಸಮಸ್ಯೆ, ನಿರುದ್ಯೋಗ, ಅಪೂರ್ಣ ಯೋಜನೆಗಳು, ಅರ್ಧಕ್ಕೆ ನಿಂತ ಕಾಮಗಾರಿಗಳನ್ನು ಮುಂದುವರಿಸಲಾಗದ ವೈಫಲ್ಯಗಳನ್ನು ಮತ್ತೊಮ್ಮೆ ಮೋದಿ ಅಲೆಯಲ್ಲಿ ಮುಚ್ಚಿಹಾಕುವ ಲೆಕ್ಕಾಚಾರ ಅವರದು.
ಆದರೆ, ಈ ಬಾರಿ ಬಿಎಸ್ಪಿ ಅಭ್ಯರ್ಥಿಯಾಗಿ ಮುಸ್ಲಿಂ ಸಮುದಾಯದ ಅಯೂಬ್ ಖಾನ್ ಪಠಾಣ್ ನಿಂತಿರುವುದನ್ನು ಹೊರತುಪಡಿಸಿ, ಪ್ರಮುಖ ಪಕ್ಷಗಳಿಂದ ಆ ಸಮುದಾಯದ ಅಭ್ಯರ್ಥಿಗಳಿಲ್ಲ ಹಾಗೂ ಸಲೀಂ ಅಹಮದ್ ಸೇರಿದಂತೆ ಕಾಂಗ್ರೆಸ್ ನಾಯಕರು ಡಿ ಆರ್ ಪಾಟೀಲ್ ಪರ ಬದ್ಧತೆ ತೋರಿದ್ದಾರೆ ಮತ್ತು ಲಿಂಗಾಯತರಲ್ಲೇ ಇಬ್ಬರು ಕಣಕ್ಕಿಳಿದಿರುವುದರಿಂದ ಒಳಪಂಗಡ ರಾಜಕಾರಣ ಆರಂಭವಾಗಿದೆ ಎಂಬುದು ಉದಾಸಿಗೆ ಇರುವ ದೊಡ್ಡ ಸವಾಲು. ಅಲ್ಲದೆ, 2009ರಲ್ಲಿ ಯಡಿಯೂರಪ್ಪ ಅವರ ಲಿಂಗಾಯತರಿಗೆ ಅನ್ಯಾಯ ಘೋಷಣೆ ಮತ್ತು 2014ರಲ್ಲಿ ಮೋದಿ ಅಲೆಯಲ್ಲಿ ಗೆದ್ದಿದ್ದ ಉದಾಸಿ, ಎರಡೂ ಬಾರಿ ತಮ್ಮ ವೈಯಕ್ತಿಕ ವರ್ಚಸ್ಸನ್ನು ಪಣಕ್ಕಿಟ್ಟವರಲ್ಲ. ಈ ಬಾರಿ ಕೂಡ ಅವರು ತಮ್ಮ ವೈಯಕ್ತಿಕ ಸಾಧನೆ, ವರ್ಚಸ್ಸುಗಳಿಗಿಂತಲೂ ಮತ್ತೊಮ್ಮೆ ಮೋದಿ ಎಂಬ ಘೋಷಣೆಗೇ ಹೆಚ್ಚು ಜೋತುಬಿದ್ದಿದ್ದಾರೆ.
ಅಲ್ಲದೆ, ಕಳೆದ ಮೂರು ಚುನಾವಣೆಗಳಲ್ಲಿ ಲಿಂಗಾಯತ ಮತಗಳ ಕ್ರೋಡೀಕರಣದಿಂದಲೇ ಗೆದ್ದು ಬೀಗಿದ್ದ ಬಿಜೆಪಿಗೆ, ಈ ಬಾರಿ ಕಾಂಗ್ರೆಸ್ ಕೂಡ ಲಿಂಗಾಯತ ಸಮುದಾಯದ ಹಿರಿಯ ನಾಯಕನನ್ನೇ ಕಣಕ್ಕಿಳಿಸುವ ಮೂಲಕ ಭರ್ಜರಿ ಟಕ್ಕರ್ ಕೊಟ್ಟಿದೆ. ಹಾಗಾಗಿ ಈ ಹಿಂದಿನಂತೆ ಎದುರಾಳಿಯ ಧರ್ಮವನ್ನೇ ಮುಂದುಮಾಡಿ ಹಿಂದುತ್ವದ ಕೋಮು ಭಾವನೆ ಕೆರಳಿಸಿ ಮತ ಯಾಚಿಸುವ ಅವಕಾಶ ಈ ಬಾರಿ ಉದಾಸಿಯವರಿಗೆ ಕೈತಪ್ಪಿದೆ. ಅಷ್ಟರಮಟ್ಟಿಗೆ ಕಾಂಗ್ರೆಸ್ ತಂತ್ರಗಾರಿಕೆ ಯಶ ಪಡೆದಿದೆ.
ಮೈತ್ರಿಪಕ್ಷ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿಪರ ಒಮ್ಮನಸ್ಸಿನಿಂದ ನಿಂತಿದ್ದರೂ, ಕ್ಷೇತ್ರವ್ಯಾಪ್ತಿಯಲ್ಲಿ ಆ ಪಕ್ಷದ ಪ್ರಭಾವ ಅಷ್ಟೇನೂ ಇಲ್ಲವಾದ್ದರಿಂದ, ಅದು ಹೆಚ್ಚಿನ ವ್ಯತ್ಯಾಸವನ್ನೇನೂ ಮಾಡಲಾರದು.
ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಹಂಚಿಹೋಗಿರುವ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಆ ಪೈಕಿ ಐದು ಕಡೆ(ಹಾವೇರಿ, ಹಾನಗಲ್, ಬ್ಯಾಡಗಿ, ಶಿರಹಟ್ಟಿ, ರೋಣ) ಬಿಜೆಪಿ ಅಧಿಕಾರ ಹಿಡಿದಿದೆ. ಗದಗ ಮತ್ತು ಹಿರೇಕೆರೂರಿನಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದ್ದರೆ, ರಾಣೆಬೆನ್ನೂರಿನಲ್ಲಿ ಕೆಪಿಜೆಪಿಯ ಆರ್ ಶಂಕರ್ ಶಾಸಕರಾಗಿದ್ದಾರೆ. ಹಾಗಾಗಿ ಕ್ಷೇತ್ರವಾರು ಪ್ರಾಬಲ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಅನುಕೂಲಗಳಿವೆ. ಕ್ಷೇತ್ರದಲ್ಲಿ ಒಟ್ಟು 17.02 ಲಕ್ಷ ಮತದಾರರಿದ್ದು, ಆ ಪೈಕಿ ಲಿಂಗಾಯತ ಮತ್ತು ಮುಸ್ಲಿಂ ಪ್ರಾಬಲ್ಯವೇ ಹೆಚ್ಚು. ಉಳಿದಂತೆ ಪರಿಶಿಷ್ಟರು, ಕುರುಬ ಮತಗಳೂ ಸಾಕಷ್ಟು ಸಂಖ್ಯೆಯಲ್ಲಿವೆ.
ತುಂಗಭದ್ರಾ ಮತ್ತು ವರದಾ ನದಿಗಳ ನಡುವಿನ ಒಣಭೂಮಿಗೆ ಈವರೆಗೆ ನೀರು ಹರಿದಿಲ್ಲ, ಕೇವಲ ಒಣ ಭರವಸೆಗಳಷ್ಟೇ ಹರಿದಿವೆ. ಹಾಗಾಗಿ ರಾಜ್ಯದ ಮೂಲೆಮೂಲೆಗೆ ಪ್ರತಿ ಬೇಸಿಗೆಯಲ್ಲಿ ವಲಸೆ ಹೋಗುವ ಉತ್ತರಕರ್ನಾಟಕದ ಮಂದಿಯಲ್ಲಿ ಸಿಂಹಪಾಲು ಈ ಅವಳಿ ಜಿಲ್ಲೆಗಳದ್ದೇ ಎಂಬುದು ಗಮನಾರ್ಹ. ಅಲ್ಲದೆ, ಸತತ ಮೂರು ಬಾರಿ ಆಯ್ಕೆಯಾದರೂ ಮಂಜುನಾಥ ಕುನ್ನೂರ ಮತ್ತು ಉದಾಸಿ ಅವಧಿಯಲ್ಲಿ ಗುಳೇ ತಡೆಯುವ ನಿಟ್ಟಿನಲ್ಲಿ ನೀರಾವರಿ ಯೋಜನೆಗಳಾಗಲೀ, ಅಥವಾ ಪರ್ಯಾಯ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕೈಗಾರಿಕೆಗಳ ಆರಂಭದ ಪ್ರಯತ್ನವಾಗಲೀ ಆಗಿಲ್ಲ. ಅತ್ಯಂತ ಶ್ರಮಜೀವಿಗಳಾದ ಜಿಲ್ಲೆಯ ರೈತರ ಪಾಲಿಗೆ ಈ ವೈಫಲ್ಯಗಳು ದೊಡ್ಡ ಅನ್ಯಾಯಗಳಾಗಿ ಕಾಣುತ್ತಿವೆ.
ಆದರೆ, ಅಂತಿಮವಾಗಿ ಇಲ್ಲಿನ ಚುನಾವಣೆಗಳು ನಡೆಯುವುದೇ ಧರ್ಮ ಮತ್ತು ಜಾತಿ- ಪಂಗಡಗಳ ಆಧಾರದ ಮೇಲೆ. ಹಾಗಾಗಿ ಇಂತಹ ಜಲ್ವಂತ ಬಿಕ್ಕಟ್ಟುಗಳು ಚುನಾವಣಾ ಕಣದಲ್ಲಿಯೂ ಸದ್ದುಮಾಡವು, ಅಂತಿಮವಾಗಿ ಮತಯಂತ್ರದ ಬಟನ್ ಮೇಲೆಯು ಪರಿಣಾಮ ಬೀರಲಾರವು. ಹಾಗಾಗಿ, ಇದೇ ಮೊದಲ ಬಾರಿಗೆ ಇಬ್ಬರು ಲಿಂಗಾಯತ ನಾಯಕರ ನಡುವಿನ ಕದನ ಕಣವಾಗಿರುವ ಹಾವೇರಿ ಲೋಕಸಭಾ ಕ್ಷೇತ್ರ, ಅಂತಿಮವಾಗಿ ಯಾರಿಗೆ ವರವಾಗಲಿದೆ ಮತ್ತು ಯಾರಿಗೆ ಶಾಪವಾಗಲಿದೆ ಎಂಬುದನ್ನು ನಿರ್ಧರಿಸುವುದು ಅಲ್ಲಿನ ಎರಡನೇ ದೊಡ್ಡ ಸಂಖ್ಯೆಯ ಮತದಾರರಾಗಿರುವ ಮುಸ್ಲಿಮರೇ! ಕೊನೆಗೂ ಇಲ್ಲಿ ಈಗ ಹಿಂದುತ್ವವಾದ ವರ್ಸಸ್ ಗಾಂಧಿವಾದ ಮುಖಾಮುಖಿಯಾಗಿವೆ!