ವಯನಾಡು, ಕೇರಳ- “ನನ್ನ ಸಹೋದರ ಅತ್ಯುತ್ತಮ ಚಾರಿತ್ರ್ಯ ಉಳ್ಳವನು, ನಿಮ್ಮ ಮುಂದಿನ ಭವಿಷ್ಯ ಆತನ ಕೈಯಲ್ಲಿ ಸುಭದ್ರವಾಗಿರುತ್ತದೆ” ಎಂದು ತನ್ನ ಸಹೋದರ ರಾಹುಲ್ ಗಾಂಧಿಯ ಪರವಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಗಕಾ ಗಾಂಧಿ ವಾದ್ರಾ ವಯನಾಡಿನ ಜನತೆಗೆ ಭರವಸೆ ನೀಡಿದರು.
ಇಂದು ವಯನಾಡಿನಲ್ಲಿ ತಮ್ಮ ಸಹೋದರ ರಾಹುಲ್ ಗಾಂಧಿ ಪರವಾಗಿ ಪ್ರಿಯಾಂಕಾ ಗಾಂಧಿ ಬೃಹತ್ ಪ್ರಚಾರ ನಡೆಸಿದರು.
ಏಪ್ರಿಲ್ 23ರಂದು ದೇಶ ಎದುರಿಸಲಿರುವ ಮೂರನೇ ಹಂತದ ಚುನಾವಣಾ ಪ್ರಚಾರ ಭರದಿಂದ ಸಾಗಿದ್ದು, ಕೇರಳದ ವಯನಾಡು 3ನೇ ಹಂತದ ಚುನಾವಣೆಯ ಕೇಂದ್ರಬಿಂದುವಾಗಿದೆ.
ಮತದಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ತಮ್ಮ ಕುಟುಂಬದ ಬಗ್ಗೆಯೂ ಪ್ರಸ್ತಾಪಿಸಿದರಲ್ಲದೇ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ (ಅಜ್ಜಿ) ಯನ್ನು ಮತ್ತು ರಾಜೀವ್ ಗಾಂಧಿಯನ್ನು ನೆನಪಿಸಿಕೊಂಡರು. 1991ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಎಲ್ ಟಿಟಿಇ ಆತ್ಮಾಹುತಿ ದಾಳಿಗೆ ಬಲಿಯಾದ ರಾಜೀವ್ ಗಾಂಧಿಯ ಚಿತಾಭಸ್ಮ ವನ್ನು ವಯನಾಡಿನ ಪಾಪನಾಶಿನಿ ನದಿಯಲ್ಲಿ ಬಿಡಲಾಗಿತ್ತು ಎಂದು ವಯನಾಡಿಗೂ ರಾಹುಲ್ ಗಾಂಧಿಗೂ ಇರುವ ನಂಟನ್ನು ನೆನೆದರು.
ಕಳೆದ ವಾರವಷ್ಟೇ ರಾಹುಲ್ ಅವರು ವಯನಾಡಿ ಪಾಪಾನಾಶಿನಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.
“ನಾನಿಲ್ಲಿ ರಾಹುಲ್ ಸಹೋದರಿಯಾಗಿ ನಿಂತಿದ್ದೇನೆ, ನನ್ನ ಸಹೋದರನಿಗಾಗಿ ನಿಂತಿದ್ದೇನೆ. ರಾಹುಲ್ ಕಳೆದ 10 ವರ್ಷಗಳಿಂದ ಸಾಕಷ್ಟು ಶ್ರಮಪಟ್ಟು ದೇಶಕ್ಕಾಗಿ ಅವಿರತ ಸೇವೆ ಸಲ್ಲಿಸುತ್ತಿದ್ದಾರೆ. ಆತನನ್ನು ವೈಯಕ್ತಿವಾಗಿ ಗುರಿ ಮಾಡಲಾಗಿದೆ, ನಾವು ಸಾಕಷ್ಟು ನೋವು ಅನುಭವಿಸಿದ್ದೇವೆ, ನಲುಗಿದ್ದೇವೆ. ನನ್ನ ಅಜ್ಜಿ ಹತ್ಯೆಯಾದಾಗ ನನಗೆ 12 ವರ್ಷ, ಏಳು ವರ್ಷಗಳ ನಂತರ ನನ್ನ ತಂದೆಯನ್ನೂ ಹತ್ಯೆಗೈದರು,” ಎಂದು ನೋವಿನ ನುಡಿಗಳನ್ನಾಡಿದರು.
ಬಿಜೆಪಿಯನ್ನು ಗುರಿಮಾಡಿ ಮಾತನಾಡಿದ ಪ್ರಿಯಾಂಕ, 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಸುಳ್ಳು ಭರವಸೆಗಳನ್ನು ನೀಡಿತ್ತು. ಐದು ವರ್ಷದ ಹಿಂದೆ ಬಹುಮತ ಪಡೆದು ಬಿಜೆಪಿ ಅಧಿಕಾರಕ್ಕೆ ಬಂತು. ಅವರ ಮಾತು, ಭರವಸೆಗಳನ್ನು ನಂಬಿದ ಜನತೆ ಅವರಲ್ಲಿ ವಿಶ್ವಾಸವಿಟ್ಟು ಸರ್ಕಾರ ರಚಿಸಲು ಅವಕಾಶ ಕೊಟ್ಟರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಜನತೆಗೆ ದ್ರೋಹವೆಸಗಿ, ವಿಶ್ವಾಸಘಾತುಕ ಆಡಳಿತ ನಡೆಸಿದೆ,’ ಎಂದು ಆರೋಪಿಸಿದರು.
ಪ್ರಿಯಾಂಕ ಗಾಂಧಿ ಅವರ ಬಹಿರಂಗ ಪ್ರಚಾರದ ಬೆನ್ನಲ್ಲೇ ಎನ್ ಡಿಎ ಅಭ್ಯರ್ಥಿ ತುಷಾರ್ ವೆಳ್ಳಪ್ಪಳ್ಳಿ ಪರವಾಗಿ ಪ್ರಚಾರ ನಡೆಸಲು ಬಿಜೆಪಿ ಸಚಿವೆ ಸ್ಮೃತಿ ಇರಾನಿ ಸಹ ಇಂದು ವಯನಾಡಲ್ಲಿ ಪ್ರಚಾರ ನಡೆಸಲಿದ್ದಾರೆ.
ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿರುವ ರಾಹುಲ್ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಸಚಿವೆ ಸ್ಮೃತಿ ಇರಾನಿ ಅವರು ಸ್ಪರ್ಧಿಸುತ್ತಿದ್ದು, ಸ್ಮೃತಿ ಅವರು ವಯನಾಡಿನಲ್ಲಿ ಪ್ರಚಾರ ನಡೆಸುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.