ದೇಶದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ಮುಖ್ಯ ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್ ಅವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನ್ಯಾಯಮೂರ್ತಿಗಳ ಕಚೇರಿಯಲ್ಲಿ ಕಿರಿಯ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಆರೋಪಿಸಿ ಈ ಕುರಿತು ಅಫಿಡವಿಟ್ ಗಳನ್ನು ಸುಪ್ರೀ ಕೋರ್ಟಿನ ಎಲ್ಲಾ ನ್ಯಾಯಾಧೀಶರಿಗೆ ಶುಕ್ರವಾರ ಕಳಿಸಿದ್ದು ಸುದ್ದಿಯಾಗಿತ್ತು. ಸುಪ್ರೀಂ ಕೋರ್ಟಿನ ಈ ಮಾಜಿ ಉದ್ಯೋಗಿಯ ಲೈಂಗಿಕ ಕಿರುಕುಳದ ದೂರನ್ನು ಸುಪ್ರೀಂ ಕೋರ್ಟ್ನ ವಿಶೇಷ ಪೀಠ ವು ಶನಿವಾರ ವಿಚಾರಣೆಗೆ ಕೈಗೆತ್ತಿಕೊಂಡಿತು. ಈ ವಿಶೇಷ ಪೀಠವು ಪ್ರಕರಣದ ಆರೋಪಿ ನ್ಯಾಯಮೂರ್ತಿ ರಂಜನ್ ಗೊಗೋಯಿ, ಅರುಣ್ ಮಿಶ್ರಾ ಮತ್ತು ಸಂಜೀವ್ ಖನ್ನಾ ಅವರುಗಳನ್ನೊಳಗೊಂಡಿದೆ.
ಮಹಿಳೆ ನೀಡಿರುವ ಮಾಹಿತಿಗಳ ಪ್ರಕಾರ ನೋಡುವುದಾದರೆ 2014ರಲ್ಲಿ ಕೋರ್ಟ್ ಉದ್ಯೋಗಿಯಾಗಿ ಸೇರಿದ್ದ ಮಹಿಳೆ 2016ರ ಹೊತ್ತಿಗೆ ರಂಜನ್ ಗೊಗೊಯ್ ಕೋರ್ಟಿನಲ್ಲಿ ಕಿರಿಯ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಕೆಯ ಕೆಲಸ ಮತ್ತು ಉತ್ಸಾಹವನ್ನು ನೋಡಿ ಗೊಗೋಯ್ ಆಕೆಯನ್ನು ತಮ್ಮ ಗೃಹ ಕಚೇರಿಗೆ ವರ್ಗ ಮಾಡಿಕೊಂಡಿರುತ್ತಾರಲ್ಲದೇ ಆಕೆಯ ಕೌಟುಂಬಿಕ ಬದುಕಿನ ಬಗೆಗೂ ವಿಚರಿಸುತ್ತಾ ಆಕೆಗೆ ಸಹಾಯ ಒದಗಿಸುತ್ತಾರೆ. ಆಕೆಯ ಮೈದುನನೊಬ್ಬ ಅಂಗವಿಕಲನಾಗಿದ್ದು ಅಸಹಾಯಕತೆಯಿಂದ ಇರುವುದನ್ನು ತಿಳಿದು ತಾವು ಮುಖ್ಯ ನ್ಯಾಯಮೂರ್ತಿ ಆದ ನಂತರ ಸಹಾಯ ಮಾಡುವುದಾಗಿ ಗೊಗೊಯ್ ತಿಳಿಸಿರುತ್ತಾರೆ. ಅದರಂತೆ ಅವರು ನ್ಯಾಯಾಲಯದ ಅತ್ಯುನ್ನತ ಹುದ್ದೆಗೇರುತ್ತಿದ್ದಂತೆ ತಮ್ಮ ವಿಶೇಷಾಧಿಕಾರದ ಮೂಲಕ ಮಹಿಳೆಯ ಮೈದುನನಿಗೆ (ವೈದ್ಯಕೀಯ ಅರ್ಹತೆ ಇಲ್ಲದಿದ್ದರೂ) ಕೆಲಸ ಕೊಡಿಸಿದ್ದರು ಎಂದು ಮಹಿಳೆ ತಿಳಿಸಿದ್ದಾರೆ.
ತನಗೆ ವೈಯಕ್ತಿಕ ಸಹಾಯ ಮಾಡಿದ್ದಕ್ಕೆ ಪ್ರತಿಯಾಗಿ ರಂಜನ್ ಗೊಗೊಯ್ ತನ್ನಿಂದ ಲೈಂಗಿಕ ಸಂಬಂಧ ಬಯಸಿ ಅದನ್ನು ಹಲವಾರು ರೀತಿಗಳಲ್ಲಿ ವ್ಯಕ್ತಪಡಿಸಿದ್ದಾಗಿಯೂ, ಒಂದು ದಿನ ತನ್ನನ್ನು ಅಪ್ಪಿಕೊಳ್ಳಲು ಪ್ರಯತ್ನಿಸಿದಾಗ ತಾನವರನ್ನು ಬಲವಾಗಿ ತಳ್ಳಿದ್ದಾಗಿಯೂ ದೂರುದಾರ ಮಹಿಳೆ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ. ಹೀಗೆ ತಮ್ಮ ಅಭೀಪ್ಸೆಯನ್ನು ಮಹಿಳೆ ನಿರಾಕರಿಸಿದ ನಂತರದಲ್ಲಿ ತನ್ನನ್ನು ನಾಲ್ಕಾರು ಕಡೆ ವರ್ಗಾವಣೆ ಮಾಡಿದ್ದಲ್ಲದೇ ನಂತರ ಕೆಲಸದಿಂದ ಕಿತ್ತು ಹಾಕಿ, ತನ್ನ ಪತಿ, ಮೈದುನರನ್ನೂ ಕೆಲಸದಿಂದ ಕಿತ್ತು ಹಾಕಿದ್ದಾರೆ, ಇದಾದ ನಂತರ ಸುಪ್ರೀಂ ಕೋರ್ಟಿನಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸಿದ ಆರೋಪದ ಮೇಲೆ ತನ್ನ ಮೇಲೆ ಕ್ರಿಮಿನಲ್ ಕೇಸು ದಾಖಲಾಗುವಂತೆ ಮಾಡಿ, ಪೊಲೀಸರು ಹಿಂಸೆ ನೀಡಿ ಜೈಲಿಗೂ ತಳ್ಳಿದ್ದು, ಜಾಮೀನಿನ ಮೇಲೆ ಹೊರಕ್ಕೆ ಬಂದಿರುವುದಾಗಿ ಮಹಿಳೆ ತಿಳಿಸಿದ್ದಾರೆ.
ಮಹಿಳೆ ಅಫಿಡವಿಟ್ ಮೂಲಕ ಸಲ್ಲಿಸಿರುವ ಈ ದೂರಿನ ಅಂಶಗಳು ದ ವೈರ್, ಕ್ಯಾರವಾನ್ ಮೊದಲಾದ ಆನ್ ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದಂತೆ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠವು ಈ ವಿಷಯದ ಕುರಿತು ಇಂದು ತನ್ನ ಅಭಿಪ್ರಾಯ ತಿಳಿಸಿದೆ. ಇದರಲ್ಲಿ ಸ್ವತಃ ಆರೋಪಿಯಾಗಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು “ನ್ಯಾಯಾಂಗ ಅತ್ಯಂತ ಅಪಾಯದಲ್ಲಿದೆ” “20 ವರ್ಷಗಳ ಸೇವೆಯಲ್ಲಿ ಮೊದಲ ಬಾರಿಗೆ ಇಂತಹ ಒಂದು ಆರೋಪ ನನ್ನ ಮೇಲೆ ಬಂದಿದೆ. ಅದೂ ಬ್ಯಾಂಕ್ ಅಕೌಂಟಿನಲ್ಲಿ ಕೇವಲ 6 ಲಕ್ಷ ರೂಪಾಯಿ ಇಟ್ಟುಕೊಂಡಿರುವ ನನ್ನಂಥವನಿಗೆ ಇಂತಹ ಉಡುಗೊರೆ ಸಿಕ್ಕಿದೆ” ಎಂದು ಗೋಗರೆದಿದ್ದಾರೆ. ತಮ್ಮ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ವ್ಯಕ್ತಿಯ ಮೇಲೆ ಈ ಹಿಂದೆ ಕ್ರಿಮಿನಲ್ ವಂಚನೆ ಪ್ರಕರಣ ದಾಖಲಾಗಿದೆ. ಆ ಮಹಿಳೆಯು ಸುಪ್ರೀಂ ಕೋರ್ಟಿನಲ್ಲಿ ತನಗೆ ಇದ್ದ ಸ್ಥಾನಮಾನದ ದುರ್ಬಳಕೆ ಮಾಡಿಕೊಂಡು ತನ್ನ ಸಂಬಂಧಿಕರ ಮೂಲಕ ಅವ್ಯವಹಾರದಲ್ಲಿ ತೊಡಗಿದ್ದು, ಕೆಲಸ ಕೊಡಿಸುವುದಾಗಿ ಹಣ ವಸೂಲಿ ಮಾಡಿರುವ ಸಂಬಂಧ ಕ್ರಿಮಿನಲ್ ಕೇಸುಗಳು ದಾಖಲಾಗಿವೆ. ಅದರ ಆಧಾರದಲ್ಲಿ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಇಂತಹ ಲೈಂಗಿಕ ದೌರ್ಜನ್ಯದ ಆರೋಪವನ್ನು ತಮ್ಮ ಮೇಲೆ ನಡೆಸಿದ್ದಾರೆ ಎಂದು ರಂಜನ್ ಗೊಗೊಯ್ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಬಾರ್ ಕೌನ್ಸಿಲ್ ಮುಖ್ಯ ನ್ಯಾಯಮೂರ್ತಿಗಳ ಪರವಾದ ನಿಲುವು ತೆಗೆದುಕೊಂಡಿದೆ. ಸುಪ್ರೀಂ ಕೋರ್ಟ್ ನ ಪ್ರಧಾನ ಕಾರ್ಯದರ್ಶಿ ನೀಡಿರುವ ಹೇಳಿಕೆಯಲ್ಲಿ, ಮುಖ್ಯ ನ್ಯಾಯಮೂರ್ತಿಗಳ ಮೇಲಿನ ಲೈಂಗಿಕ ಕಿರುಕುಳ ಆರೋಪವು ಶುದ್ಧಾಂಗ ಸುಳ್ಳು ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟಿನ ಮಹಿಳಾ ನ್ಯಾಯವಾದಿಗಳು ಈ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿಗಳು ನಡೆದುಕೊಂಡಿರುವ ರೀತಿಯನ್ನು ಪ್ರಶ್ನಿಸಿದ್ದಾರೆ. ಇಂದಿರಾ ಜೈಸಿಂಗ್, ಮಿಸ್ ಗ್ರೋವರ್ ರಂತಹ ಹಿರಿಯ ನ್ಯಾಯವಾದಿಗಳು ಮುಖ್ಯನ್ಯಾಯಮೂರ್ತಿಗಳಾದವರ ಮೇಲೆ ಇಂತಹ ಆರೋಪಗಳು ಕೇಳಿ ಬರುವ ಸಂದರ್ಭದಲ್ಲಿ ನ್ಯಾಯಾಲಯ ಅನುಸರಿಸಬೇಕಾದ ವಿಧಿವಿಧಾನಗಳಲ್ಲಿನ ಲೋಪಗಳ ಕುರಿತು ಗಮನ ಸೆಳೆದಿದ್ದಾರೆ.
ಉದ್ಯೋಗ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವ ಶಾಸನವನ್ನು ಜಾರಿಗೊಳಿಸಬೇಕೆಂದು ಮತ್ತು ಎಲ್ಲಾ ಉದ್ಯೋಗ ಕ್ಷೇತ್ರಗಳ ಎಲ್ಲಾ ಉದ್ಯೋಗಿಗಳಲ್ಲೂ ಲಿಂಗತ್ವ ಸಂವೇದನೆಯ ಪ್ರಜ್ಞೆ ಮೂಡಿಸಬೇಕೆಂದು ಇದೇ ಸರ್ವೋಚ್ಛ ನ್ಯಾಯಾಲಯ 1997ರಲ್ಲಿ ವಿಶಾಖಾ vs ಸ್ಟೇಟ್ ಆಫ್ ರಾಜಾಸ್ತಾನ್ ಪ್ರಕರಣದ ತೀರ್ಪಿನಲ್ಲಿ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ದೇಶದ ಮಹಿಳಾ ಸಂಘಟನೆಗಳ ಮತ್ತು ಕಾರ್ಮಿಕ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ 2013ರಲ್ಲಿ ಈ ಸಂಬಂಧ ಶಾಸನ ರೂಪುಗೊಂಡಿತು. ಆದರೆ ಈ ವರೆಗೂ ಈ ಕಾನೂನಿನ ಅನುಷ್ಠಾನ ಸಮರ್ಪಕವಾಗಿ ನಡೆದಿಲ್ಲ ಎಂಬ ವಾಸ್ತವ ಸಂಗತಿಯನ್ನು, ಈ ಘಟನೆಯೂ ತಿಳಿಸುತ್ತದೆ.

1997-1998ರ ಅವಧಿಯಲ್ಲಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಜೆ.ಎಸ್.ವರ್ಮಾ ಅವರು ಅತ್ಯಂತ ಸೂಕ್ಷ್ಮ ಸಂವೇದಿಯಾಗಿ ಕಾರ್ಯನಿರ್ವಹಿಸಿದ್ದರು. ವಿಶಾಖಾ ತೀರ್ಪಿನಲ್ಲಿ ಸರ್ಕಾರಗಳು ಪಾಲಿಸಲೇಬೇಕಾದಂತಹ ನಿರ್ದೇಶನಗಳನ್ನು ಸೂಚಿಸಿದ್ದರು. ಹಾಗೂ ನಿರ್ಭಯಾ ಅತ್ಯಾಚಾರ ಪ್ರಕರಣದ ತಕ್ಷಣ 2013ರಲ್ಲಿ, ಅಂದಿನ ಯುಪಿಎ-2 ಸರ್ಕಾರವು ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಅಪರಾಧ ಕಾನೂನುಗಳ ತಿದ್ದುಪಡಿಗಾಗಿ ವರದಿಯೊಂದನ್ನು ಪಡೆದಿತ್ತು. ಇವೆಲ್ಲವೂ ಇಂದು ನ್ಯಾಯಾಲಯಗಳಿಗೆ ಕೇವಲ ಪ್ರಕರಣಗಳ ತೀರ್ಪು ನೀಡಲು ಬೇಕಾದ ರೆಫರೆನ್ಸ್ ಮೆಟೀರಿಯಲ್ ಆಗಬಾರದು. ನ್ಯಾಯಾಲಯದ ಆವರಣದೊಳಗೂ, ಹೊರಗೂ ಮಹಿಳೆಯರ ಘನತೆಯನ್ನು ಎತ್ತಿಹಿಡಿಯುವ ಮನಸ್ಥಿತಿಗೆ ಈ ಆದೇಶಗಳು, ವರದಿಗಳು ಪೂರಕವಾಗಬೇಕಿದೆ.
ಹಾಲಿ ಪ್ರಕರಣದಲ್ಲಿ ಇರುವ ಸಾಧ್ಯತೆಗಳೇನು?
-
ದೂರು ನೀಡಿರುವ ಮಹಿಳೆಯ ಅಭಿಪ್ರಾಯದಂತೆ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಕಿರಿಯ ಸಹಾಯಕಿ ಆಗಿದ್ದ ಆಕೆಯ ಮೇಲೆ ಅನುಚಿತ ಪ್ರಭಾವ ಬೀರಿ (undue influence) ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದು, ನಂತರ ಆ ಮಹಿಳೆ ನಿರಾಕರಿಸಿದ ಕಾರಣ ಆಕೆಯನ್ನೂ ಒಳಗೊಂಡಂತೆ ಆಕೆಯ ಕುಟುಂಬ ಸದಸ್ಯರ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಆರೋಪಿ ಇಡೀ ನ್ಯಾಯ ವ್ಯವಸ್ಥೆಯನ್ನೇ ದುರ್ಬಳಕೆ ಮಾಡಿಕೊಂಡಿರಬಹುದು.
-
ಅಥವಾ ಮುಖ್ಯ ನ್ಯಾಯಮೂರ್ತಿಗಳು ಆರೋಪಿಸುತ್ತಿರುವುಂತೆ ಆ ಮಹಿಳೆ ಮತ್ತು ಆಕೆಯ ನಿಕಟವರ್ತಿಗಳು ಆಕೆಗೆ ಮುಖ್ಯನ್ಯಾಯಮೂರ್ತಿಗಳೊಂದಿಗೆ ಇರುವ ನಿಕಟ ಸಂಪರ್ಕವನ್ನು, ಪ್ರಾಮುಖ್ಯತೆಯನ್ನು ಬಳಸಿಕೊಂಡು ಲಾಭದಾಯಕ ಹುದ್ದೆಯಲ್ಲಿ ತೊಡಗಿ ಅದಕ್ಕೆ ನ್ಯಾಯಮೂರ್ತಿಗಳು ತಡೆಯೊಡ್ಡಿರಬಹುದು.
-
ಇಲ್ಲವೇ ಈ ಎರಡರ ನಡುವೆಯೇ ಎಲ್ಲೋ ಸತ್ಯವಿರಬಹುದು.
ಆದರೆ ಆ ಸತ್ಯ ಹೊರಬರುವುದು ಹೇಗೆ? ಹೆಚ್ಚಿನ ಅಧಿಕಾರಬಲ ಮುಖ್ಯನ್ಯಾಯಮೂರ್ತಿಗಳಿಗೇ ಇರುವಾಗ ಒಂದೊಮ್ಮೆ ಮಹಿಳೆಯೇ ಅನ್ಯಾಯಕ್ಕೆ ಒಳಗಾಗಿದ್ದ ಪಕ್ಷದಲ್ಲಿ ಆಕೆಗೆ ನ್ಯಾಯವನ್ನು ಖಚಿತಪಡಿಸುವ ಮಾರ್ಗವೇನು ಎಂಬುದು ಇಲ್ಲಿ ಮುಖ್ಯವಾಗುತ್ತದೆ.
ಈ ದೃಷ್ಟಿಯಿಂದ ಯೋಚಿಸಿದಾಗ ಶನಿವಾರ ಮುಖ್ಯನ್ಯಾಯಮೂರ್ತಿಗಳು ತಮ್ಮ ಮೇಲೆ ಬಂದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಿದ ವಿಶೇಷ ಪೀಠದಲ್ಲಿ ತಾವೇ ಇದ್ದು ವಿಚಾರಣೆ ಕೈಗೊಂಡಿದ್ದು ನ್ಯಾಯೋಚಿತ ನಡವಳಿಕೆ ಆಗಿರಲಿಲ್ಲ ಎಂಬುದು ಮುಖ್ಯ ಅಂಶ. ತಮ್ಮ ಮೇಲೆಯೇ ಆರೋಪ ಬಂದಾಗ ತಮ್ಮಿಂದ ಹೊರತಾದ ತನಿಖಾ ಸಮಿತಿಯೊಂದನ್ನು ರಚಿಸಿ, ತನಿಖೆ ನಡೆಸುಸಿ ಆ ಮೂಲಕ ತಾವು ನಿರ್ದೋಷಿಯಾಗಿ ಬರುವ ಬದ್ಧತೆಯನ್ನು ಮುಖ್ಯನ್ಯಾಯಮೂರ್ತಿಗಳು ತೋರಬೇಕಿತ್ತು. ಸಾಧ್ಯವಾದರೆ ನಿವೃತ್ತ ನ್ಯಾಯಮೂರ್ತಿಗಳ ತನಿಖಾ ಸಮಿತಿಯನ್ನು ನೇಮಕ ಮಾಡಬಹುದಿತ್ತು. ಆದರೆ ಈ ಪ್ರಕರಣದಲ್ಲಿ ಹೀಗಾಗದಿರುವುದು ವಿಷಾದಕರ ಸಂಗತಿ.
ನಾವು ನಮ್ಮ ಕಣ್ಣೆದುರಿಗೇ ನೋಡುತ್ತಿರುವಂತೆ ಒಂದು ಕಡೆ ಸ್ವಾವಲಂಬಿಯಾಗಿ ಬದುಕು ನಡೆಸಲೆಂದು ಉದ್ಯೋಗ ಅರಸಿ ಬಂದ ಮಹಿಳೆಯರ ಮೇಲೆ ಅಧಿಕಾರಸ್ತರು ಲೈಂಗಿಕ ಹಿಂಸೆ ನಡೆಸುವುದು, ಮತ್ತೊಂದೆಡೆ ಅದರಿಂದ ಪಾರಾಗಲು ಅವರು ಎಲ್ಲಾ ದುರ್ಮಾರ್ಗಗಳನ್ನೂ ಬಳಸುವುದು ಹೆಜ್ಜೆ ಹೆಜ್ಜೆಗೂ ನಡೆಯುತ್ತಿದೆ. ಇದು ಅತ್ಯಂತ ಗಾಬರಿ ಹುಟ್ಟಿಸುವಂತಹ ವಿಚಾರವೂ ಹೌದು. ಈ ವಿಷಯದಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗಗಳ ಅಧಿಕಾರದ ದುರ್ಬಳಕೆಯಲ್ಲಿ ಈ ನೆಲ ಈಗಾಗಲೇ ನಲುಗಿಹೋಗಿದೆ. ಇದೀಗ ಕನಿಷ್ಟ ನ್ಯಾಯಾಂಗವಾದರೂ ಪ್ರಬುದ್ಧತೆ ತೋರಬೇಕಿತ್ತು. ದೇಶದ ಜನ ನ್ಯಾಯಾಂಗದಿಂದ ಕನಿಷ್ಟ ಅಷ್ಟನ್ನು ನಿರೀಕ್ಷಿಸುತ್ತಾರೆ.
ಇಲ್ಲಿ ಎರಡು ವಿಷಯಗಳು ಮುಖ್ಯವಾಗುತ್ತವೆ. ಮೊದಲನೆಯದಾಗಿ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಮೇಲೆ ಮಹಿಳಾ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡುವಾಗ, ಅದನ್ನು ವಿಚಾರಣೆಗೊಳಪಡಿಸಿ ಕಾನೂನುರೀತ್ಯಾ ನಿರ್ವಹಿಸಬೇಕಿತ್ತು. ತಮ್ಮ ಹುದ್ದೆಯಿಂದ ತಾತ್ಕಾಲಿಕವಾಗಿ ವಿಚಾರಣೆ ಮುಗಿಯುವ ವರೆಗೂ ದೂರ ಉಳಿದು ದೂರುದಾರ ಮಹಿಳೆಗೆ ವ್ಯವಸ್ಥೆಯ ಬಗ್ಗೆ ವಿಶ್ವಾಸ ಮೂಡಿಸಬೇಕಿತ್ತು. ಇದಾವುದೂ ಆದಂತಿಲ್ಲ.
More Articles
By the same author
Related Articles
From the same category