ಭಯೋತ್ಪಾದನೆಗೆ ಧರ್ಮವಿಲ್ಲ. ಧರ್ಮದ ಹೆಸರಿನಲ್ಲಿ ಮನುಷ್ಯರ ಹತ್ಯೆ ಮಾಡುವವರು ಯಾವುದೇ ಧರ್ಮಕ್ಕೆ ಸೇರಿರಲಿ ಅವರು ಮನುಷ್ಯರೆನಿಸಿಕೊಳ್ಳಲು ಸಾಧ್ಯವಿಲ್ಲ. 2006-07ರಲ್ಲಿ ದೇಶದ ಕೆಲವು ಕಡೆಗಳಲ್ಲಿ ಬಾಂಬ್ ಸ್ಫೋಟಗಳು ನಡೆದು ನೂರಾರು ಅಮಾಯಕ ಭಾರತೀಯರು ಪ್ರಾಣ ಕಳೆದುಕೊಂಡರು. ಈ ಸ್ಫೋಟಗಳ ತನಿಖೆಯಿಂದ ಹೊರಬಂದ ಆಘಾತಕಾರಿ ಸಂಗತಿ ಏನೆಂದರೆ ದೇಶದಲ್ಲಿ “ಹಿಂದುತ್ವ ಭಯೋತ್ಪಾದನೆ” ಅಸ್ತಿತ್ವಕ್ಕೆ ಬಂದಿದ್ದು ಅಲ್ಲಲ್ಲಿ ಬಾಂಬ್ ಗಳನ್ನು ಸ್ಪೋಟಿಸುವ ಮೂಲಕ ಹಿಂಸೆಯನ್ನು ಹುಟ್ಟುಹಾಕುತ್ತಿದೆ ಎಂಬುದು.
ಹಿಂದುತ್ವ ಎಂಬ ರಾಜಕೀಯ ಸಿದ್ಧಾಂತದ ಹೆಸರಿನಲ್ಲಿ ಮತ್ತೊಂದು ಧರ್ಮದವರ ಪ್ರಾಣ ತೆಗೆಯುತ್ತೇವೆ ಎನ್ನುವವರು ಹಿಂದೂಗಳೂ ಆಗಿರುವುದಿಲ್ಲ. ಮನುಷ್ಯರೂ ಆಗಿರುವುದಿಲ್ಲ. ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್, ಅಸೀಮಾನಂದ, ಕರ್ನಲ್ ಪುರೋಹಿತ್, ಸುನಿಲ್ ಜೋಶಿ ಮೊದಲಾದವರೆಲ್ಲಾ ಆ ಹೊತ್ತಿನ ಬಾಂಬ್ ಸ್ಫೋಟಗಳನ್ನು ನಡೆಸಿದ ಆರೋಪದಲ್ಲಿ ಬಂಧಿತರಾದವರು.
ಹೇಮಂತ್ ಕರ್ಕರೆಯಂತಹ ದಕ್ಷ ಅಧಿಕಾರಿ ಈ ಭಯೋತ್ಪಾದನಾ ಪ್ರಕರಣದ ಬೆನ್ನತ್ತಿ ಒಬ್ಬೊಬ್ಬರನ್ನಾಗಿ ಬಂಧಿಸಿ ಇಡೀ ಸಂಚನ್ನು ಬಯಲು ಮಾಡುತ್ತಿದ್ದಂತೆ ಅವರನ್ನೇ ದೇಶದ್ರೋಹಿ ಎಂದು ಬಿಂಬಿಸುವ ಪ್ರಯತ್ನವನ್ನು ಸಂಘಪರಿವಾರದ ಸಂಘಟನೆಗಳು ಮಾಡತೊಡಗಿದ್ದವು. ದುರದೃಷ್ಟವಶಾತ್ ಹೇಮಂತ್ ಕರ್ಕರೆ 2008ರಲ್ಲಿ ನಡೆದ 26/11ರ ಮುಂಬೈ ಉಗ್ರರ ದಾಳಿಯಲ್ಲಿ ಪಾಕಿಸ್ತಾನಿ ಉಗ್ರ ಕಸಬ್ ಹಾರಿಸಿದ ಗುಂಡಿಗೆ ಬಲಿಯಾದರು.
ದೇಶದಲ್ಲಿ ಬೇರು ಬಿಡುತ್ತಿದ್ದ ಕೇಸರಿ ಭಯೋತ್ಪಾದನೆಯ ಪ್ರಕರಣದ ತನಿಖೆ ನಿರ್ದಿಷ್ಟವಾಗಿ 2014ರಿಂದ ಅಂದರೆ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ನಂತರ ಹಳ್ಳಹಿಡಿದಿದ್ದು ಸ್ಪಷ್ಟ. ಆರೋಪಿಗಳೆಲ್ಲಾ ಒಬ್ಬೊಬ್ಬರಾಗಿ ಖುಲಾಸೆಯಾಗತೊಡಗಿದರು. ಈ ಇಡೀ ಪ್ರಕ್ರಿಯೆಯನ್ನು ಮೊಹಿಸಿನ್ ಅಲಮ್ ಭಟ್ ಹಾಗೂ ಹರ್ಷ ಮಂದರ್ ಸ್ಕ್ರೋಲ್ ಇನ್ ಪತ್ರಿಕೆಗಾಗಿ ಸುದೀರ್ಘವಾಗಿ ಬರೆದಿದ್ದಾರೆ. ಬರೆಹದ ಪ್ರಾಮುಖ್ಯತೆಯನ್ನು ಗುರುತಿಸಿ ಇಡೀ ಲೇಖನವನ್ನು ಟ್ರೂಥ್ ಇಂಡಿಯಾ ಎರಡು ಕಂತುಗಳಲ್ಲಿ ಪ್ರಕಟಿಸುತ್ತಿದೆ.
ಭಾಗ ಒಂದು
ದೇಶದಲ್ಲಿ ಹಿಂದೂತ್ವ ಭಯೋತ್ಪಾದಕರನ್ನು ಬಿಡುಗಡೆಗೊಳಿಸುತ್ತಿರುವ ಪ್ರಕ್ರಿಯೆಯನ್ನು ಗಮನಿಸಿದರೆ ಈ ನೆಲದಲ್ಲಿ ಅಪರಾಧ ನ್ಯಾಯ ವ್ಯವಸ್ಥೆ ಎಲ್ಲರಿಗೂ ಸಮಾನವಾಗಿ ದಕ್ಕುತ್ತಿದೆಯೇ ಎಂಬ ಗಂಭೀರ ಸಂಶಯ ಮೂಡುತ್ತಿದೆ
ಹಿಂದೂತ್ವ ಭಯೋತ್ಪಾದಕ ಕೃತ್ಯಗಳಲ್ಲಿ ಗಂಭೀರ ಆಪಾದನೆಗೆ ಗುರಿಯಾದವರನ್ನು 2006ರಿಂದೀಚೆಗೆ ಒಬ್ಬರ ಮೇಲೊಬ್ಬರಂತೆ ನ್ಯಾಯಾಲಯಗಳು ಆರೋಪಮುಕ್ತಗೊಳಿಸುತ್ತಿವೆ. ಇದಕ್ಕೆ ಕಳಪೆ ಗುಣಮಟ್ಟದ ಪೊಲೀಸ್ ತನಿಖೆಯ ನೆಪ ಒಡ್ಡಲಾಗುತ್ತಿದೆ.
ದೇಶದ ದಮನಿತ ಜನಸಮುದಾಯಗಳಾದ ದಲಿತರು, ಆದಿವಾಸಿಗಳು, ಮುಸ್ಲಿಮರು, ಮಹಿಳೆಯರು ಮತ್ತು ಬಡವರ ವಿರುದ್ಧ ಈ ನೆಲದಾಳದಲ್ಲಿ ಹೊಕ್ಕಿರುವ ಪೂರ್ವಾಗ್ರಹದಿಂದ ಭಾರತದ ಅಪರಾಧ ನ್ಯಾಯವು ವ್ಯವಸ್ಥೆ ಬಹಳಷ್ಟು ರಾಜಿಯಾಗಿಬಿಟ್ಟಿದೆ. ಸತತವಾಗಿ ಎಲ್ಲಾ ಸರ್ಕಾರಗಳ ಕಣ್ಗಾವಲಿನಲ್ಲಿ ಈ ಸಾಂಸ್ಥಿಕ ಪಕ್ಷಪಾತ ಧೋರಣೆಯು ನ್ಯಾಯ ವ್ಯವಸ್ಥೆಯ ಪ್ರತಿಯೊಂದು ಅಂಗವನ್ನೂ – ಪೊಲೀಸ್, ಪ್ರಾಸಿಕ್ಯೂಷನ್ ಮತ್ತು ನ್ಯಾಯಾಲಯಗಳನ್ನು ತುಕ್ಕುಹಿಡಿಸಿದೆ.
2014ರಲ್ಲಿ ನರೇಂದ್ರ ಮೋದಿಯವರು ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕ್ಷಣದಿಂದಲೂ ಮುಸ್ಲಿಮರ ವಿರುದ್ಧ ಹಗೆತನ ತೋರುತ್ತ ನ್ಯಾಯ ವ್ಯವಸ್ಥೆ ಅತ್ಯಂತ ನೀಚಮಟ್ಟಕ್ಕಿಳಿದಿದೆ ಎಂದರೆ ತಪ್ಪಾಗಲಾರದು. ಗೋವಿನ ಹೆಸರಲ್ಲಿ ಮನುಷ್ಯರನ್ನು ಹೊಡೆದು ಕೊಲ್ಲುವುದು ಮತ್ತಿತರ ದ್ವೇಷದ ಅಪರಾಧ ಕೃತ್ಯಗಳು ಹೆಚ್ಚಾಗಿ ಅವು ಸಮಾಜದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದರೂ ಪೊಲೀಸರು ಮಾತ್ರ ಹಲ್ಲೆಕೋರರನ್ನು ರಕ್ಷಿಸಿ, ಬಹುತೇಕ ಸಂದರ್ಭಗಳಲ್ಲಿ ಸಂತ್ರಸ್ತರ ವಿರುದ್ಧವೇ ಅಪರಾಧದ ದೂರುಗಳನ್ನು ದಾಖಲಿಸಿಕೊಂಡಿರುವುದನ್ನು ಕಾಣಬಹುದು. ಆಗಾಗ್ಗೆ ಗೋ ರಕ್ಷಕರು ಅಥವಾ ಲವ್ ಜಿಹಾದ್ ತಡೆಯುತ್ತೇವೆನ್ನುವ ಅನೈತಿಕ ಪೊಲೀಸರು ಮತ್ತು ಪೊಲೀಸರು ಶಾಮೀಲಾಗಿ ಕಾರ್ಯ ನಿರ್ವಹಿಸುವುದನ್ನು ನೋಡುತ್ತೇವೆ. ಉತ್ತರಪ್ರದೇಶ ಮತ್ತು ಹರ್ಯಾಣಗಳಲ್ಲಿ ನಿರ್ದಿಷ್ಟ ಜನರನ್ನು ಗುರಿಪಡಿಸಿ ನಡೆಸಿದ ನ್ಯಾಯ ವಿಧಾನೇತರ ಹತ್ಯೆಗಳು (Extrajudicial killings) ಹೆಚ್ಚಿವೆ.
ಮೋದಿ ದರ್ಬಾರಿನ ಪಕ್ಷಪಾತಿ ನ್ಯಾಯಾಲಯಗಳು
2014ರಲ್ಲಿ ಕೇಂದ್ರ ಸರ್ಕಾರದ ಆಡಳಿತ ಬದಲಾದ ಕ್ಷಣವೇ, 2002ರಲ್ಲಿ ಮತ್ತು ಆನಂತರದಲ್ಲಿ ಗುಜರಾತಿನ ಹಿರಿಯ ಸಚಿವರು ಮತ್ತು ಸಮವಸ್ತ್ರದಲ್ಲಿನ ಹಲವು ವ್ಯಕ್ತಿಗಳೂ ಸೇರಿದಂತೆ, ನಕಲಿ ನ್ಯಾಯ ವಿಧಾನೇತರ ಹತ್ಯೆಗಳನ್ನು ನಡೆಸಿದ ಆರೋಪಿಗಳು ಹಾಗೂ ಕೋಮುದ್ವೇಷದ ಅಪರಾಧ ನಡೆಸಿದ್ದ ಆರೋಪಿಗಳು ಮೊದಲಿಗೆ ಜಾಮೀನಿನ ಮೇಲೆ ಬಿಡುಗಡೆಯಾದರು. ತದನಂತರ ಮಿಕ್ಕವರೂ ಒಬ್ಬೊಬ್ಬರಾಗೇ ದೋಷಮುಕ್ತರಾದರು. ನ್ಯಾಯ ವಿಧಾನೇತರ ಹತ್ಯೆಗಳಲ್ಲಿ ಆಳುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷನ ವಿರುದ್ಧ ದಾಖಲಾಗಿದ್ದ ಶಿಕ್ಷಾರ್ಹ ಆರೋಪವನ್ನು, ನ್ಯಾಯಾಲಯದಲ್ಲಿ ಸಾಕ್ಷಿಯನ್ನು ಹಾಜರುಪಡಿಸಲು ಅನುಮತಿಸುವ ಮುನ್ನವೇ ಖುಲಾಸೆಗೊಳಿಸಲಾಯಿತು.
ಆದರೆ ಕಳಪೆ ಮಟ್ಟದ ಪೊಲೀಸ್ ತನಿಖೆ ಮತ್ತು ಪ್ರಾಸಿಕ್ಯೂಷನ್ಗಳ ನೆಪವೊಡ್ಡಿ (ಉದ್ದೇಶಪೂರಿತ ಎಂದೇ ಕಾಣುತ್ತದೆ) 2006ರ ನಂತರ ನಡೆದ ಹಿಂದೂತ್ವ ಭಯೋತ್ಪಾದಕ ಕೃತ್ಯಗಳನ್ನೆಸಗಿರುವವರನ್ನು ಒಬ್ಬರ ನಂತರ ಒಬ್ಬರನ್ನಂತೆ, ನ್ಯಾಯಾಲಯಗಳು ಬಿಡುಗಡೆಗೊಳಿಸುತ್ತಿರುವುದು ಕೋಮುವಾದಿ ಪಕ್ಷಪಾತಿ ಧೋರಣೆಯನ್ನು ಸ್ಪಷ್ಟವಾಗಿ ಬಯಲುಗೊಳಿಸುತ್ತದೆ.
ಈ ಸರಣಿಯಲ್ಲಿ ಇತ್ತೀಚಿನದ್ದೆಂದರೆ 2007ರ ಸಂಜೋತಾ ಎಕ್ಸ್ ಪ್ರೆಸ್ ಮೇಲಿನ ಬಾಂಬ್ ದಾಳಿ ಪ್ರಕರಣದಿಂದ ಸ್ವಾಮಿ ಅಸೀಮಾನಂದನನ್ನು ಬಿಡುಗಡೆಗೊಳಿಸಿದ್ದು. ರಾಷ್ಟ್ರೀಯ ತನಿಖಾ ದಳವು “ಪಿತೂರಿ ಆಪಾದನೆಯನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ” ಎಂಬ ಕಾರಣ ನೀಡಿರುವ ವಿಶೇಷ ನ್ಯಾಯಾಲಯ, “ಸಂಶಯದ ಲಾಭ ಆರೋಪಿಗೆ ಸಲ್ಲುತ್ತದೆ” ಎಂದಿದೆ. ಹರ್ಯಾಣದ ಪಂಚಕುಲದಲ್ಲಿ ರಾಷ್ಟ್ರೀಯ ತನಿಖಾ ದಳದ (NIA) ವಿಶೇಷ ನ್ಯಾಯಾಲಯವು 2019ರ ಮಾರ್ಚ್ 20ರಂದು ಪ್ರಮುಖ ಆರೋಪಿ ಅಸೀಮಾನಂದ ಸೇರಿದಂತೆ ನಾಲ್ಕು ಮಂದಿ ಆಪಾದಿತರನ್ನು ಖುಲಾಸೆಗೊಳಿಸಿತ್ತು.
2015ರಲ್ಲಿ ಮೊದಲಿಗೆ ಜಾಮೀನಿನ ಮೇಲೆ ಬಿಡುಗಡೆಯಾದ ಅಸೀಮಾನಂದನನ್ನು, ಮಾರ್ಚ್ 2017ರಲ್ಲಿ ಅಜ್ಮೀರ್ ದರ್ಗಾ ಸ್ಫೋಟದಲ್ಲಿ (2007ರ ಪ್ರಕರಣ) ಮತ್ತು 2007ರ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಏಪ್ರಿಲ್ 2018ರಲ್ಲಿ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯಗಳು ಆರೋಪಮುಕ್ತಗೊಳಿಸಿದ್ದವು.
ಕೇಸರಿ ಭಯೋತ್ಪಾದನೆ
2006ರಿಂದ ಭಾರತದ ಎಲ್ಲಾ ಸ್ಥಳಗಳನ್ನೂ ಎಲ್ಲಾ ಕಾಲಗಳಲ್ಲೂ ಸರಣಿ ಬಾಂಬ್ ಸ್ಪೋಟಗಳ ಭಯೋತ್ಪಾದಕ ಕೃತ್ಯಗಳು ನಡುಗಿಸಿದವು. ಇವುಗಳಲ್ಲಿ ಬಹುತೇಕ ಸ್ಫೋಟಗಳು ಮುಸ್ಲಿಮರು ವಾಸಿಸಬಹುದೆಂದು ನಿರೀಕ್ಷಿಸಲಾದ ಪ್ರದೇಶಗಳಲ್ಲಿ ನಡೆದಿದ್ದವು. ಮುಸ್ಲಿಮರ ಪ್ರಾರ್ಥನಾ ಸ್ಥಳಗಳು, ಪಾಕಿಸ್ತಾನಕ್ಕೆ ಹೋಗುವ ರೈಲು ಮತ್ತು ಶುಕ್ರವಾರದ ನಮಾಜ್ ಅಥವಾ ಮುಸ್ಲಿಮ್ ಹಬ್ಬಗಳ ದಿನಗಳಲ್ಲಿ ಸ್ಫೋಟಗಳು ಸಂಭವಿಸಿದ್ದವು.
2006ರ ಸೆಪ್ಟೆಂಬರ್ 8ರಂದು ಮಹಾರಾಷ್ಟ್ರದ ಮಾಲೆಗಾಂವ್ ಪಟ್ಟಣದಲ್ಲಿ ಸಂಭವಿಸಿದ್ದ ಮೊದಲ ಸ್ಫೋಟದಲ್ಲಿ 37 ಜನ ಸಾವನ್ನಪ್ಪಿದ್ದರು. ಫೆಬ್ರವರಿ 2007ರಲ್ಲಿ ಇನ್ನೂ ಘೋರವಾದ ಬಾಂಬ್ ಸ್ಫೋಟಗಳಾಗಿದ್ದು ಲಾಹೋರ್ ಮತ್ತು ದೆಹಲಿಯ ನಡುವೆ ಸಂಚರಿಸುವ ಸಂಜೋತಾ ಎಕ್ಸ್ ಪ್ರೆಸ್ ರೈಲಿನಲ್ಲಿ. ಇದರಲ್ಲಿ 68 ಜನ ಸತ್ತಿದ್ದು, ಅವರ ಪೈಕಿ 43 ಮಂದಿ ಪಾಕಿಸ್ತಾನಿ ಪ್ರಜೆಗಳಾಗಿದ್ದರು.

ಅದೇ ಮೇ ತಿಂಗಳಲ್ಲಿ, ಹೈದರಾಬಾದಿನ ಐತಿಹಾಸಿಕ ಮೆಕ್ಕಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ಸಂದರ್ಭದಲ್ಲಿ ಸ್ಫೋಟ ಸಂಭವಿಸಿ 9 ಜನರನ್ನು ಬಲಿ ಪಡೆದಿತ್ತು. ಅಕ್ಟೋಬರಿನಲ್ಲಿ ಅಜ್ಮೀರ್ ನ ಪ್ರಖ್ಯಾತ ಖ್ವಾಜಾ ಕಿಸ್ಟಿ ದರ್ಗಾದಲ್ಲಿ ಮತ್ತೊಂದು ಬಾಂಬ್ ಆಸ್ಫೋಟಗೊಂಡು ಮೂವರು ಹತರಾಗಿದ್ದರು. ಸೆಪ್ಟೆಂಬರ್ 2008ರಲ್ಲಿ ಮಾಲೆಗಾಂವ್ ನಲ್ಲಿ ಇನ್ನೊಂದು ಬಾಂಬ್ ಸ್ಫೋಟವಾಗಿ ಆರು ಜನ ಅಸು ನೀಗಿದ್ದರು.
ಈ ಸರಣಿ ಭಯೋತ್ಪಾದಕ ದಾಳಿ ಕೃತ್ಯಗಳು ಮುಸ್ಲಿಮರನ್ನು ಮತ್ತು ಅವರ ಪ್ರಾರ್ಥನಾ ಸ್ಥಳಗಳನ್ನು ಗುರಿಯಾಗಿಸಿದ್ದು ಸ್ಪಷ್ಟವಾಗಿದ್ದರೂ, ಸಾಮಾನ್ಯವಾಗಿ ಅವುಗಳು ಘಟಿಸಿದ ಕೆಲವೇ ನಿಮಿಷಗಳಲ್ಲಿ, “ಗಡಿಯಾಚೆಗಿನ ಹಲವು ಇಸ್ಲಾಮಿಕ್ ಸಂಘಟನೆಗಳು ಈ ಸ್ಫೋಟಗಳ ಹಿಂದಿವೆ” ಎಂದು ಸರ್ಕಾರಿ ಮೂಲಗಳು ಘೋಷಿಸಿಬಿಡುತ್ತಿದ್ದವು. ಇದರಿಂದ ಭಾರತದ ಸುರಕ್ಷತಾ ವ್ಯವಸ್ಥೆಯ ಆಳಕ್ಕಿಳಿದು ರೂಢಿಯಾಗಿಬಿಟ್ಟಿರುವ ಪಕ್ಷಪಾತ ಧೋರಣೆ ಮತ್ತೊಮ್ಮೆ ಬಯಲಾಗಿದೆ. ಇದರ ನಂತರ ಹಲವು ಅಮಾಯಕ ಮುಸ್ಲಿಮರನ್ನು ಬಂಧಿಸಲಾಗಿ, ಅವರು ಕಾರಾಗೃಹದಲ್ಲಿ ಬಹಳ ಕಾಲ ಕಳೆಯಬೇಕಾಯಿತು. ಎಷ್ಟೋ ವರ್ಷಗಳ ನಂತರ ಅವರನ್ನು ನಿರಪರಾಧಿಗಳೆಂದು ಘೋಷಿಸಿ ಬಿಡುಗಡೆಗೊಳಿಸಲಾಯಿತು.
ಬಿಜೆಪಿಯ ಸೈದ್ಧಾಂತಿಕ ಪೋಷಕ ಸ್ಥಾನದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರೆಸ್ಸೆಸ್) ಸೇರ್ಪಡೆಯಾದ ಉಗ್ರ ಹಿಂದೂತ್ವ ಸಂಘಟನೆಗಳು ಈ ಎಲ್ಲಾ ವಿವಿಧ ಭಯೋತ್ಪಾದಕ ದಾಳಿ ಕೃತ್ಯಗಳನ್ನು ನಡೆಸಿದ್ದವೆಂದು ಕಾಲಾನಂತರದಲ್ಲಿ ತನಿಖೆಗಳಿಂದ ತಿಳಿದುಬಂದಿತು. ಇದರಿಂದಾಗಿ ಧಾರ್ಮಿಕ ವ್ಯಕ್ತಿಗಳು ಮತ್ತು ಹಾಲಿ ಸೇವೆಯಲ್ಲಿದ್ದ ಹಾಗು ಸೇವೆಯಿಂದ ನಿವೃತ್ತರಾಗಿದ್ದ ಸೇನಾಧಿಕಾರಿಗಳು ಸೇರಿದಂತೆ ಅನೇಕ ಹಿಂದೂತ್ವ ಕಾರ್ಯಕರ್ತರ ಬಂಧನವಾಯಿತು. ಆದರೆ 2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಗದ್ದುಗೆ ಏರಿದೊಡನೆಯೇ ಇವರ ವಿರುದ್ಧದ ಪ್ರಕರಣಗಳೆಲ್ಲವನ್ನೂ ಕೈಬಿಡಲಾಯಿತು. ಹೀಗೆ ಬಿಡುಗಡೆಗೊಳಿಸಿದಂತಹ ಸರಣಿಯಲ್ಲಿ ಸ್ವಾಮಿ ಅಸೀಮಾನಂದನ ಖುಲಾಸೆ ಇತ್ತೀಚನದ್ದು.
ಅಭಿನವ ಭಾರತ ಮತ್ತು ಹಿಂದೂತ್ವ ಭಯೋತ್ಪಾದನೆ
ಹೇಮಂತ್ ಕರ್ಕರೆ ಎಂಬ ಅತ್ಯಂತ ಪ್ರಾಮಾಣಿಕ ಮತ್ತು ದಿಟ್ಟ ಪೊಲೀಸ್ ಅಧಿಕಾರಿ ಮಧ್ಯಪ್ರವೇಶ ಮಾಡದೇ ಇದ್ದಿದ್ದರೆ ಈ ಎಲ್ಲಾ ಸರಣಿ ಸ್ಫೋಟಗಳಲ್ಲಿ ಹಿಂದೂತ್ವ ಭಯೋತ್ಪಾದನೆಯ ನಂಟಿದ್ದದ್ದು ಮುಚ್ಚಿಹೋಗುತ್ತಿತ್ತು. 2008ರ ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ನಡೆಸುತ್ತಿದ್ದ ತನಿಖೆಯ ಮುಂದಾಳತ್ವ ವಹಿಸಿಕೊಂಡಿದ್ದರು.
ಭಯೋತ್ಪಾದನಾ ನಿಗ್ರಹ ದಳವು ಮಾಜಿ ಎಬಿವಿಪಿ ನಾಯಕಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕುರ್, ಸ್ವಾಮಿ ಅಮೃತಾನಂದ ಅಲಿಯಾಸ್ ದಯಾನಂದ ಪಾಂಡೆ, ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ ಮತ್ತು ಸೇವಾನಿರತ ಸೇನಾ ಅಧಿಕಾರಿ ಲೆಫ್ಟೆನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಸೇರಿದಂತೆ 11 ಶಂಕಿತರನ್ನು, ಎಲ್ಲಾ ಹಿಂದೂತ್ವವಾದಿ ಉಗ್ರರನ್ನು ಬಂಧಿಸಿತು. ಇದೀಗ ಏಪ್ರಿಲ್ 17ರಂದು ಸಾಧ್ವಿ ಪ್ರಜ್ಞಾಳನ್ನು ಭೂಪಾಲದಿಂದ ಲೋಕಸಭೆಗೆ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ.
ಬಹುತೇಕ ಶಂಕಿತ ಆರೋಪಿಗಳು ಅಭಿನವ ಭಾರತ ಎಂಬ ಉಗ್ರ ಹಿಂದೂತ್ವವಾದಿ ಗುಂಪಿನ ಸದಸ್ಯರಾಗಿದ್ದು ಆರೆಸ್ಸೆಸ್ ಅಥವಾ ಅದರ ಅಂಗಸಂಸ್ಥೆಗಳ ಜೊತೆ ಒಡನಾಟ ಹೊಂದಿದ್ದವರು. ನವೆಂಬರ್ 2008ರಲ್ಲಿ ಪುರೋಹಿತ್ ಪೊಲೀಸರಿಗೆ ಅನೇಕ ಮಾಹಿತಿಗಳನ್ನು ಒದಗಿಸಿದ. ಸಂಜೋತಾ ಎಕ್ಸ್ ಪ್ರೆಸ್ ಬಾಂಬ್ ಸ್ಪೋಟ ಮತ್ತಿನ್ನೆರಡು ಸ್ಫೋಟಗಳಿಗೆ ತಾನೇ RDX ಸ್ಫೋಟಕಗಳನ್ನು ಪೂರೈಸಿದ್ದೆಂದು ಪುರೋಹಿತ್ ತಪ್ಪೊಪ್ಪಿಕೊಂಡಿರುವುದಾಗಿ ವರದಿಯಾಗಿತ್ತು.
ಪೊಲೀಸ್ ಅಧಿಕಾರಿ ಕರ್ಕರೆ ಮತ್ತು ಭಯೋತ್ಪಾದನಾ ನಿಗ್ರಹ ದಳದ ವಿರುದ್ಧ ಬಿಜೆಪಿ ಹಾಗು ಆರೆಸ್ಸೆಸ್ ಕಾರ್ಯಕರ್ತರು ತೀವ್ರವಾಗಿ ದಾಳಿ ಮಾಡಿದ್ದರು. ಕರ್ಕರೆಯವರನ್ನು ದೇಶದ್ರೋಹಿ ಎಂದು ಕರೆದು, ಭಾರತದ ಮುಸ್ಲಿಮರನ್ನು ಓಲೈಸುವ ಸಲುವಾಗಿ ಕಾಂಗ್ರೆಸ್ ಸರ್ಕಾರದ ಒತ್ತಡದಿಂದ ಈ ಬಂಧನಗಳನ್ನು ಮಾಡಲಾಗಿದೆ ಎಂದು ಆರೋಪಿಸಿಲಾಗಿತ್ತು.
ಅಂದು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ, ಮಿಲಿಟರಿಯ ಸ್ಥೈರ್ಯ ಕುಗ್ಗಿಸುತ್ತಿರುವುದಾಗಿ ಭಯೋತ್ಪಾದನಾ ನಿಗ್ರಹ ದಳದ ವಿರುದ್ಧ ಕಿಡಿಕಾರಿದ್ದರು. 2008ರ ನವೆಂಬರ್ ನಲ್ಲಿ ಮುಂಬಯಿ ನಗರದಲ್ಲಿ ನಡೆದ ಉಗ್ರರ ದಾಳಿಯ ಸಂದರ್ಭದಲ್ಲಿ ಕರ್ತವ್ಯನಿರತರಾಗಿದ್ದ ಕರ್ಕರೆ ಕೊಲ್ಲಲ್ಪಟ್ಟರು. ತದನಂತರದಲ್ಲಿ ತೀವ್ರಗಾಮಿ ಬಲಪಂಥೀಯ ಹಿಂದೂತ್ವ ಸಂಘಟನೆಗಳ ಆಘಾತಕಾರಿ ಜಾಲವೊಂದನ್ನು ಸಿಬಿಐ ಮತ್ತು ಎನ್ಐಎ ತನಿಖೆಗಳು ಪತ್ತೆಹಚ್ಚಿದವು.
ಆರೆಸ್ಸೆಸ್ ಮತ್ತು ಅದರ ಇತರ ಅಂಗಸಂಘಟನೆಗಳ ಜೊತೆ ಹತ್ತಿರದ ಸಂಬಂಧ ಇರಿಸಿಕೊಂಡಿದ್ದರೆಂದು ಹೇಳಲಾದ ಭಯೋತ್ಪಾದಕರು ಭಾಗಿಯಾಗಿದ್ದ ಇತರ ಪ್ರಕರಣಗಳನ್ನು ಜೋಡಿಸುವಲ್ಲಿ ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣ ಪ್ರಮುಖ ಪಾತ್ರ ವಹಿಸಿತು. ಪ್ರಾಸಿಕ್ಯೂಷನ್ ಪ್ರಕಾರ ಈ ಎಲ್ಲಾ ಪ್ರಕರಣಗಳನ್ನೂ ಸೇರಿಸುವಾಗ ಸ್ಪಷ್ಟತೆ ದೊರಕಿದ್ದು ಇಬ್ಬರು ವ್ಯಕ್ತಿಗಳಿಂದ. ಮೊದಲನೆಯವನು ಇಂದೋರ್ ನ ಆರೆಸ್ಸಸ್ ಜಿಲ್ಲಾ ಮುಖಂಡ ಸುನೀಲ್ ಜೋಷಿ. ಕೆಲವು ಕಾಂಗ್ರೆಸ್ ನಾಯಕರನ್ನು ಕೊಲೆಗೈದ ಶಂಕಿತ ಆರೋಪಿ ಜೋಷಿಯನ್ನು ಈ ಕಾರಣದಿಂದಲೇ ಆರೆಸ್ಸೆಸ್ ಹೊರಹಾಕಿತ್ತೆಂದು ಹೇಳಲಾಗಿತ್ತು. ಸಂಜೋತಾ ಸ್ಫೋಟ ಪ್ರಕರಣದ ರೂವಾರಿಯೇ ಜೋಷಿ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಆದರೆ 2007ರಲ್ಲಿ ಆತನನ್ನು ಬಂಧಿಸುವ ಮೊದಲೇ ಜೋಷಿ ಸಂಶಯಾಸ್ಪದವಾಗಿ ಕೊಲೆಯಾಗಿದ್ದ.
ಜೋಷಿಯ ಅನುಪಸ್ಥಿತಿಯಲ್ಲಿ ಪ್ರಾಸಿಕ್ಯೂಷನ್ ಗೆ ಸ್ವಾಮಿ ಅಸೀಮಾನಂದನ ತಪ್ಪೊಪ್ಪಿಗೆ ನಿರ್ಣಾಯಕವಾಗಿದ್ದು, ಈ ಪ್ರಕರಣಗಳೆಲ್ಲಾ ಒಟ್ಟಿಗೆ ಬಂದವು. ಆರೆಸ್ಸೆಸ್ ಪ್ರಚಾರಕನಾಗಿದ್ದ ಅವನು ಅನೇಕ ಅಡ್ಡಹೆಸರುಗಳನ್ನು ಹೊಂದಿದ್ದ. ನಭಾಕುಮಾರ್ ಸರ್ಕಾರ್ ಎಂಬ ಹುಟ್ಟುಹೆಸರಿನ ಆತ ಜಿತೇನ್ ಚಟರ್ಜಿ ಮತ್ತು ಓಂಕಾರನಾಥ ಎಂಬ ಹೆಸರುಗಳನ್ನೂ ಬಳಸುತ್ತಿದ್ದ. ಆದಿವಾಸಿ ಜನರ ನಡುವೆ, ಪ್ರಮುಖವಾಗಿ ಕ್ರೈಸ್ತ ಮತಾಂತರಗಳ ವಿರುದ್ಧ ಹೋರಾಡಲು, ವನವಾಸಿ ಕಲ್ಯಾಣ ಆಶ್ರಮ ಎಂಬ ಆರೆಸ್ಸೆಸ್ ಸಂಘಟನೆಯಲ್ಲಿ, ಮೊದಲು ಪಶ್ಚಿಮ ಬಂಗಾಳದ ಬುರ್ದ್ವಾನ್ ನಲ್ಲಿ, ಆನಂತರ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿ ಹಾಗೂ ಛತ್ತೀಸ್ಗಢದ ಜಶ್ಪುರದಲ್ಲಿ ಪ್ರಚಾರಕನಾಗಿ ಕೆಲಸ ಮಾಡಿದ್ದ.
2010ರ ನವೆಂಬರ್ 18ರಂದು ಉತ್ತರಾಖಂಡದ ಹರಿದ್ವಾರದಿಂದ ಅಸೀಮಾನಂದನನ್ನು ಸಿಬಿಐ ಬಂಧಿಸಿತು. ಡಿಸೆಂಬರ್ 18ರಂದು ದೆಹಲಿಯ ತೀಸ್ ಹಜಾರಿ ಕೋರ್ಟ್ ನಲ್ಲಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ದೀಪಕ್ ದಾಬಾಸ್ ಅವರೆದುರು ಅಸೀಮಾನಂದ ಹಾಜರಿದ್ದು, ಮುಸ್ಲಿಮರನ್ನು ಗುರಿಯಾಗಿಸಿ ನಡೆಸಲಾದ ಸರಣಿ ಭಯೋತ್ಪಾದಕ ದಾಳಿಗಳಲ್ಲಿ ತಾನು ಭಾಗಿಯಾಗಿರುವುದಾಗಿ ನುಡಿದ ಹೇಳಿಕೆಯನ್ನು CrPC ಸೆಕ್ಷನ್ 164 ಅಡಿ ದಾಖಲಿಸಲಾಯಿತು.
ಈ ಭಯೋತ್ಪಾದಕ ಕೃತ್ಯಗಳಿಗೆ ತನ್ನ ಮತ್ತು ತನ್ನ ಸಹ-ಸಂಚುಕೋರರ ಪ್ರೇರಣೆ ಏನಾಗಿತ್ತೆಂದು ಸವಿವರವಾಗಿ ಆತ ಹೇಳಿದ್ದ. ಹಿಂದೂಗಳ ವಿರುದ್ಧದ ಇಸ್ಲಾಮಿಕ್ ಭಯೋತ್ಪಾದಕ ದಾಳಿಗಳಿಗೆ ಪ್ರತಿಕ್ರಿಯೆ ನೀಡಬೇಕಾಗಿದ್ದರಿಂದ ಇತರ ಹಿಂದೂ ಕಾರ್ಯಕರ್ತರ ಜೊತೆಗೆ ತಾನು ಮುಸ್ಲಿಂ ಪ್ರಾರ್ಥನಾ ಸ್ಥಳಗಳ ಮೇಲೆ ಬಾಂಬ್ ಎಸೆಯುವಲ್ಲಿ ನಿರತನಾಗಿದ್ದನೆಂದೂ ಆತ ಹೇಳಿಕೆ ನೀಡಿದ್ದ. ತನಿಖೆ ಮತ್ತು ಪ್ರಾಸಿಕ್ಯೂಷನ್ ಮಂಡನೆಯ ಸಂದರ್ಭದಲ್ಲಿ ಇದನ್ನು “ಬಾಂಬ್ ಬದಲಿಗೆ ಬಾಂಬ್” ಸಿದ್ಧಾಂತ ಎಂದು ಕರೆಯಲಾಗಿತ್ತು. ತಪ್ಪೊಪ್ಪಿಗೆಯಲ್ಲಿ ಇಂದ್ರೇಶ್ ಕುಮಾರ್ ಅಂತಹ ಹಿರಿಯ ಆರೆಸ್ಸೆಸ್ ಪದಾಧಿಕಾರಿಗಳ ಪಾತ್ರವನ್ನು ಆರೋಪಿಸಲಾಗಿತ್ತು. ಘಟನೆಗಳ ಸರಣಿ, ಅಸೀಮಾನಂದ ಮತ್ತಿತರರ ಉದ್ದೇಶ ಮತ್ತು ಅಪರಾಧವನ್ನು ರುಜುವಾತು ಮಾಡಲು ಹಾಗೂ ಹಿಂದೂತ್ವ ಭಯೋತ್ಪಾದಕರನ್ನು ಒಳಗೊಂಡ ಒಂದು ದೊಡ್ಡ ಪಿತೂರಿಗೆ ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟಗಳನ್ನು ತಳಕು ಹಾಕುವುದಕ್ಕೆ ಈ ತಪ್ಪೊಪ್ಪಿಗೆ ಹೇಳಿಕೆಗಳು ನಿರ್ಣಾಯಕ ಸಾಕ್ಷ್ಯಾಧಾರಗಳಾಗಿದ್ದವು.
ತಪ್ಪೊಪ್ಪಿಗೆ ಹೇಳಿಕೆ ಹೊರಬಂದ ಕೂಡಲೇ ಅಂತರರಾಷ್ಟ್ರೀಯ ಮಾಧ್ಯಮವು “ಹಿಂದೂ ಭಯೋತ್ಪಾದನೆ” ವಿಷಯದ ಬಗ್ಗೆ ಬರೆದವು. ಉದಾಹರಣೆಗೆ, ಹಿಂದೂ ಉಗ್ರವಾದ ಮತ್ತು ಬಲಪಂಥೀಯ ಸಂಘಟನೆಗಳನ್ನು ಮತ್ತು ಮುಸ್ಲಿಂ-ವಿರೋಧಿ ಸಾಂಸ್ಥಿಕ ಪೂರ್ವಾಗ್ರಹ ಮತ್ತು ಸಿದ್ಧಮಾದರಿಗಳನ್ನು ಗಮನದಲ್ಲಿಟ್ಟುಕೊಂಡು, ಇದನ್ನು “ಹಿಂದೂ ಭಯೋತ್ಪಾದನೆ” ಎಂದು The Washington Post ಪತ್ರಿಕೆ ಬಣ್ಣಿಸಿತು.
The Caravan ನಿಯತಕಾಲಿಕೆಯ ಜೊತೆ ಸುಸ್ಪಷ್ಟವಾದ ಮುಕ್ತ ಸಂವಾದದಲ್ಲಿ ಮಾತನಾಡಿದ ಅಸೀಮಾನಂದ, ಈ ಭಯೋತ್ಪಾದಕ ದಾಳಿಗಳಲ್ಲಿನ ಪಿತೂರಿಗಳನ್ನು ಇನ್ನಷ್ಟು ವಿವರಿಸಿದ. ತಾನು ಆರೆಸ್ಸೆಸ್ ನಾಯಕರ ಜೊತೆ ಸಂಪರ್ಕದಲ್ಲಿದ್ದುದಾಗಿ ಮತ್ತು ಆರೆಸ್ಸೆಸ್ ಪ್ರಮುಖ ಮೋಹನ್ ಭಾಗವತ ಈ ಸ್ಫೋಟಗಳಿಗೆ ಬೆಂಬಲ ನೀಡಿದ್ದಾಗಿಯೂ ಆತ ಈ ಸಂದರ್ಶನಗಳಲ್ಲಿ ಹೇಳಿಬಿಟ್ಟಿದ್ದ. ಇದು ರಾಜಕೀಯ ವಲಯದಲ್ಲಿ ಸಹಜವಾಗಿಯೇ ಬಿರುಗಾಳಿ ಎಬ್ಬಿಸಿತು. ನಂತರ ಅಸೀಮಾನಂದ ತನ್ನ ಕೈ ಬರಹದಲ್ಲಿ ಪತ್ರವೊಂದನ್ನು ಬರೆದು, ಅಂತಹ ಯಾವುದೇ ಹೇಳಿಕೆಯನ್ನೂ ತಾನು ನೀಡಿಲ್ಲವೆಂದು ಅದನ್ನು “ಸುಳ್ಳು ಮತ್ತು ಕಟ್ಟುಕತೆ” ಎಂದು ಹೇಳಿಬಿಟ್ಟ.
2011ರ ಜೂನ್ 20ರಂದು ರಾಷ್ಟ್ರೀಯ ತನಿಖಾ ದಳ (NIA) ಸಂಝೌತಾ ಸ್ಫೋಟ ಪ್ರಕರಣದಲ್ಲಿ ದೋಷಾರೋಪಣಾ ಪಟ್ಟಿಯನ್ನು (chargesheet) ಸಲ್ಲಿಸಿತು. ಜನವರಿ 2013ರಲ್ಲಿ “ಹಿಂದೂ ಭಯೋತ್ಪಾದನೆ” ಅಥವಾ “ಕೇಸರಿ ಭಯೋತ್ಪಾದನೆ” ಶೀರ್ಷಿಕೆ ರಾಷ್ಟ್ರೀಯ ಸುದ್ದಿಯಾಯಿತು.
ಭಯೋತ್ಪಾದಕ ಕೃತ್ಯಗಳು ಆರೆಸ್ಸೆಸ್ ಜೊತೆ ತಳಕು ಹಾಕಲು ತಮ್ಮ ಬಳಿ ಸಾಕ್ಷ್ಯಾಧಾರ ಇರುವುದಾಗಿ ಗೃಹ ಸಚಿವ ಶಿಂಧೆ ಮತ್ತು ಗೃಹ ಕಾರ್ಯದರ್ಶಿ ಆರ್.ಕೆ.ಸಿಂಗ್ (ನಿವೃತ್ತಿಯಾದ ತಕ್ಷಣವೇ ಬಿಜೆಪಿ ಸೇರಬೇಕಿದ್ದವರು) ಪತ್ರಿಕೆಗಳಿಗೆ ಹೇಳಿದರು. “ಆರೆಸ್ಸೆಸ್ ಮತ್ತದರ ಅಂಗ ಸಂಘಟನೆಗಳ ಜೊತೆ ಹತ್ತಿರದ ಸಂಬಂಧ ಹೊಂದಿರುವ ಕನಿಷ್ಟ 10 ಮಂದಿಯನ್ನು ಭಾರತದಾದ್ಯಂತ ವಿವಿಧ ಭಯೋತ್ಪಾದನಾ ಕೃತ್ಯಗಳಗಳಲ್ಲಿ ಆಪಾದಿತರನ್ನಾಗಿ ಹೆಸರಿಸಲಾಗಿದೆ” ಎಂದು ಸಿಂಗ್ ತಿಳಿಸಿದ್ದರು. ಬಿಜೆಪಿ ಮತ್ತು ಆರೆಸ್ಸೆಸ್ “ಕೇಸರಿ ಭಯೋತ್ಪಾದನೆಯನ್ನು ಹರಡಲು ಭಯೋತ್ಪಾದನಾ ತರಬೇತಿ ಶಿಬಿರಗಳನ್ನು” ನಡೆಸುತ್ತಿರುವುದಾಗಿ ಸುಶೀಲ್ ಕುಮಾರ್ ಶಿಂಧೆ ಆರೋಪಿಸಿದ್ದರು.
ಹೇಳಿಕೆ ಹಿಂಪಡೆದ ಅಸೀಮಾನಂದ
ಸೆಕ್ಷನ್ 164ರಲ್ಲಿ ಹೇಳಿಕೆ ನೀಡಿದ್ದ ಅಸೀಮಾನಂದ, ತಾನು ಭಾಗಿಯಾಗಿಲ್ಲದ ಅಪರಾಧಕ್ಕೆ ತನ್ನಿಂದ ಒತ್ತಾಯದಿಂದ ತಪ್ಪೊಪ್ಪಿಗೆ ಹೇಳಿಕೆ ಪಡೆಯಲಾಗಿದೆ ಎಂದು ಆರೋಪಿಸಿ ತದನಂತರದಲ್ಲಿ ಹೇಳಿಕೆಯನ್ನು ಹಿಂಪಡೆದಿದ್ದು ಪ್ರಾಸಿಕ್ಯೂಷನ್ ಗೆ ತಲೆನೋವಾಗಿ ಪರಿಣಮಿಸಿತು. The Caravan ಪತ್ರಿಕೆಗೆ ತಾನು ಸಂದರ್ಶನ ನೀಡಿರುವುದನ್ನು ನಿರಾಕರಿಸಿ ಆ ಸಂದರ್ಶನದ ಟೇಪ್ಗಳ ಅಧಿಕೃತತೆಯನ್ನು ಪರೀಕ್ಷಿಸಲು ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿಲ್ಲ ಎಂದು ಆರೋಪಿಸಿದ.
ಕಾನೂನಿನ ಪ್ರಕಾರ ನ್ಯಾಯಾಧೀಶರ ಮುಂದೆ ದಾಖಲಾದ ತಪ್ಪೊಪ್ಪಿಗೆ ಹೇಳಿಕೆಗಳಷ್ಟೇ ನ್ಯಾಯಾಲಯ ಒಪ್ಪಿಕೊಳ್ಳಬಹುದಾದ ಪುರಾವೆಗಳಾಗುತ್ತವೆ. ಒಂದು ವೇಳೆ ಆಪಾದಿತ ವ್ಯಕ್ತಿ ಅಂತಹ ತಪ್ಪೊಪ್ಪಿಗೆ ಹೇಳಿಕೆ ನೀಡಿ ಆನಂತರ ಅದನ್ನು ಹಿಂಪಡೆದರೆ, ತಪ್ಪೊಪ್ಪಿಗೆ ಮಾಡಲಾದ ಮತ್ತು ಹಿಂಪಡೆಯಲಾದ ಸಂದರ್ಭಗಳ ಬಗ್ಗೆ ನ್ಯಾಯಾಲಯ ನಿರ್ಣಯ ಕೈಗೊಳ್ಳುವುದು. ಬಹಳ ಪ್ರಮುಖವಾಗಿ ದಾಖಲಾಗಿರುವ ವಾಸ್ತವ ಸಂಗತಿಗಳು ಹೇಳಿಕೆಯನ್ನು ಎಷ್ಟರ ಮಟ್ಟಿಗೆ ದೃಢೀಕರಿಸುತ್ತವೆ ಎಂಬುದನ್ನು ಗಮನಿಸಿ ನ್ಯಾಯಾಲಯವು ತಪ್ಪೊಪ್ಪಿಗೆ ಹೇಳಿಕೆಯನ್ನು ಸ್ವೀಕರಿಸಬೇಕು.
ಇದರ ಪರಿಣಾಮ ಅಂತಿಮವಾಗಿ ಸಂಜೋತಾ ರೈಲು ಸ್ಫೋಟ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಗೆ ಒದಗಿದ ಗಂಡಾಂತರವೆಂದರೆ ಹಿಂಪಡೆಯಲಾಗಿದ್ದ ತಪ್ಪೊಪ್ಪಿಗೆ ಹೇಳಿಕೆಯನ್ನು ದೃಢೀಕರಿಸುವ ಯಾವುದೇ ವಾಸ್ತವ ಸಂಗತಿಯನ್ನೂ ಅದು ರುಜುವಾತು ಮಾಡಲಾಗಲಿಲ್ಲ. ಮಾರ್ಚ್ ನಲ್ಲಿ ಸಂಜೋತಾ ರೈಲು ಸ್ಫೋಟದ ಕುರಿತ ತೀರ್ಪು ನೀಡಿದ ವಿಶೇಷ ನ್ಯಾಯಾಧೀಶ ಜಗದೀಪ್ ಸಿಂಗ್ ತಮ್ಮ ಆದೇಶದಲ್ಲಿ ಬರೆಯುತ್ತಾರೆ, “ಆಪಾದಿತ ವ್ಯಕ್ತಿಗಳ ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್/NIA ಮುಖ್ಯವಾಗಿ ಆಪಾದಿತ ಸ್ವಾಮಿ ಅಸೀಮಾನಂದನ ಹಿಂಪಡೆದ ತಪ್ಪೊಪ್ಪಿಗೆ ಹೇಳಿಕೆಯನ್ನು ಮತ್ತು ಆರೋಪಿತರ ಬಹಿರಂಗ ಹೇಳಿಕೆಯನ್ನು ಅವಲಂಬಿಸಿದೆ.”
ಇವುಗಳನ್ನು ಸಮರ್ಥಿಸುವಲ್ಲಿ ವಿಫಲವಾಗಿರುವುದು ವೃತ್ತಿಪರ ಅಸಮರ್ಥತೆಗೆ ಸಾಕ್ಷಿಯಾಗಿದೆ ಇಲ್ಲವೆ ಹಿಂದೂತ್ವ ಭಯೋತ್ಪಾದಕರು ಮತ್ತು ಆರೆಸ್ಸೆಸ್ ವಿರುದ್ಧದ ಮೊಕದ್ದಮೆಯನ್ನು ನೆಲಕಚ್ಚಿಸುವ ಬುದ್ಧಿಪೂರ್ವಕ ಪ್ರಯತ್ನವಾಗಿದೆ.
ಪ್ರಾಸಿಕ್ಯೂಷನ್ ಪ್ರಕಾರ ಅಸೀಮಾನಂದ ತನ್ನಂತಹ ಇತರ ಸಹಚರರೊಂದಿಗೆ, ಭಾರತದಲ್ಲಿ ಇಸ್ಲಾಮಿಕ್ ಭಯೋತ್ಪಾದನಾ ಕೃತ್ಯಗಳಿಗೆ ತಿರುಗೇಟು ನೀಡಬೇಕೆಂಬ ಪ್ರಚೋದನೆಗೊಳಗಾಗಿದ್ದ ಮತ್ತು ಸುನೀಲ್ ಜೋಷಿ ಸ್ಫೋಟಗಳ ರೂವಾರಿಯಾಗಿದ್ದ. ಈತ ಆನಂತರದಲ್ಲಿ ಕೊಲೆಯಾಗಿದ್ದ. ಪ್ರಾಸಿಕ್ಯೂಷನ್ ಇದನ್ನು “ಬಾಂಬ್ ಬದಲಿಗೆ ಬಾಂಬ್” ಎಂದು ಕರೆದು ಈ ವಿಚಾರವನ್ನು ಅಸೀಮಾನಂದನೇ ಪ್ರಸ್ತಾಪಿಸಿದ್ದೆಂದು ಹೇಳಿಕೊಂಡಿತ್ತು.
2005ರಲ್ಲಿ ಆತ ತನ್ನ ಸಹ-ಸಂಚುಗಾರರ ಜೊತೆಗೂಡಿ ಹಿರಿಯ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಅವರನ್ನು ಭೇಟಿಯಾದಾಗ ಅವರು ತಮ್ಮ “ಸಿದ್ಧಾಂತ”ದ ಸೇವೆಗಾಗಿ ಅವರನ್ನು ಈ ರೀತಿಯಲ್ಲಿ ಯೋಚಿಸಲು ಉತ್ತೇಜಿಸಿದರೆಂದು ಹೇಳಲಾಗಿದೆ. ದೋಷಾರೋಪಣಾ ಪಟ್ಟಿಯ ಅನ್ವಯ ಮುಖ್ಯವಾದ “ಪಿತೂರಿ ಸಭೆ” ಜೂನ್ 2006ರಲ್ಲಿ ನಡೆದಿದ್ದು ಅಸೀಮಾನಂದ ಇದರ ಅಧ್ಯಕ್ಷತೆ ವಹಿಸಿದ್ದನೆಂದು ಸಾಧ್ವಿ ಪ್ರಜ್ಞಾ ಸಿಂಗ್, ಜೋಷಿ, ಸಂದೀಪ್ ಡಾಂಗೆ, ರಾಮಚಂದರ್ ಕಲಸಂಗ್ರಾ, ಲೋಕೇಶ್ ಶರ್ಮಾ, ಅಮಿತ್ ಮತ್ತು ಭರತ್ ಬಾಯಿ ಭಾಗವಹಿಸಿದ್ದರೆಂದು ತಿಳಿಸಲಾಗಿದೆ.
ಅಸೀಮಾನಂದ ತನ್ನ “ಬಾಂಬ್ ಬದಲಿಗೆ ಬಾಂಬ್” ಸಿದ್ಧಾಂತವನ್ನು ಪುನಃ ಪ್ರತಿಪಾದಿಸಿ ಅಜ್ಮೀರ್ ದರ್ಗಾ, ಮೆಕ್ಕಾ ಮಸೀದಿ ಮತ್ತು ಮಾಲೆಗಾಂವ್ ಗಳಂತಹ ಗುರಿಗಳನ್ನು ಸೂಚಿಸಿದ್ದ. ಸುನೀಲ್ ಜೋಷಿ ಈ ದಾಳಿಗಳನ್ನು ಸಂಘಟಿಸುವ ಹೊಣೆ ಹೊತ್ತಿದ್ದನೆಂದು ಹೇಳಲಾಗಿದೆ.
ಎರಡನೇ ಬಾರಿ ಸಲ್ಲಿಸಲಾದ ದೋಷಾರೋಪಣಾ ಪಟ್ಟಿಯು ಬಾಂಬ್ ಎಸೆಯುವ ತರಬೇತಿ ಮತ್ತು ಸ್ಥಳ ಆಯ್ಕೆಯ ಕುರಿತು ವಿವರಿಸುತ್ತದೆ. ಆರೋಪ ಪಟ್ಟಿಯ ಪ್ರಕಾರ ಜನವರಿ 2006ರಲ್ಲಿ ಮಧ್ಯಪ್ರದೇಶದ ದಿವಾಸ್ ಜಿಲ್ಲೆಯ ಬಗಲಿ ಅರಣ್ಯಪ್ರದೇಶದಲ್ಲಿ ಆಪಾದಿತರಿಗೆ ಜೋಷಿ ತರಬೇತಿಯನ್ನು ಹಮ್ಮಿಕೊಂಡಿದ್ದ. ಲೋಕೇಶ್ ಶರ್ಮ, ಕಮಲ್ ಚೌಹಾನ್ ಮತ್ತು ರಾಜಿಂದರ್ ಚೌಧರಿ ಬಾಂಬ್ ಒಯ್ಯಲು ಇಂದೋರ್ ನಿಂದ 17 ಫೆಬ್ರವರಿ 2007ರಂದು ಪೆಟ್ಟಿಗೆಗಳನ್ನು ಸಂಗ್ರಹಿಸಿದರು.
ಬಾಂಬ್ ಗಳಿಗೆ RDX ಸಂಗ್ರಹ ಮಾಡುವಲ್ಲಿ ಚೌಧರಿಯ ಪಾತ್ರದ ಕುರಿತು ಮೂರನೇ ಆರೋಪಪಟ್ಟಿಯಲ್ಲಿ ಒತ್ತು ನೀಡಲಾಗಿದೆ. ಭಯೋತ್ಪಾದಕ ಕೃತ್ಯಗಳ ತಯಾರಿಯ ಭಾಗವಾಗಿ ಬಾಂಬ್ ಸ್ಫೋಟವನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತಿದ್ದ ದಿವಾಸ್ ಗೆ ಆತ ರಾಷ್ಟ್ರೀಯ ತನಿಖಾ ದಳವನ್ನು ಕರೆದುಕೊಂಡು ಹೋದನೆಂದು ಹೇಳಲಾಗಿದೆ. ಮಣ್ಣಿನ ಮಾದರಿಗಳು ಭಾರೀ ಸ್ಫೋಟಕವಾಗಿದ್ದ RDX ಹೊಂದಿದ್ದವೆಂದು NIA ಪತ್ತೆಹಚ್ಚಿರುವುದಾಗಿ ಹೇಳಲಾಗಿತ್ತು.
ಪ್ರಾಸಿಕ್ಯೂಷನ್ ಸಮಸ್ಯೆ
ಸಂಜೋತಾ ಎಕ್ಸ್ ಪ್ರೆಸ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳ ಹಸ್ತಕ್ಷೇಪ ಮಾಡಿದ ಕ್ಷಣದಿಂದಲೂ ಕೆಲವು ಕಾರ್ಯತಾಂತ್ರಿಕ ಮತ್ತು ಸಾಂಸ್ಥಿಕ ಸಮಸ್ಯೆಗಳು ಕಾಣಿಸಿಕೊಳ್ಳತೊಡಿಗಿದವು. ಎಲ್ಲವೂ ಮುಗಿದು ಹೋದ ನಂತರ ಅರಿವಿಗೆ ಬಂದ ಸಂಗತಿ, ಇದು ಪ್ರಾಸಿಕ್ಯೂಷನ್ ಮೇಲೆ ತೀವ್ರ ದುಷ್ಪರಿಣಾಮ ಬೀರಿತ್ತು ಎಂದು.
ಇಂದ್ರೇಶ್ ಕುಮಾರ್ ಮತ್ತು ಪ್ರಜ್ಞಾ ಠಾಕುರ್ ಹೆಸರುಗಳು ಕೇಳಿ ಬಂದಾಗ್ಯೂ, ಅವರುಗಳನ್ನು ಸಹ-ಆರೋಪಿಗಳನ್ನಾಗಿ ಮಾಡಲಾಗಲಿಲ್ಲ. ಅವರನ್ನು ಹೊರಗಿಡಲು ಯಾವುದೇ ಕಾರಣವನ್ನೂ ನೀಡಲಾಗಲಿಲ್ಲ. ಸಂಜೋತಾ ಪ್ರಕರಣದಲ್ಲಿ ಪ್ರತಿವಾದಿ ವಕೀಲರು ನ್ಯಾಯಾಲಯದಲ್ಲಿ ಈ ಪ್ರಶ್ನೆ ಎತ್ತಿದ್ದರು ಮತ್ತು ಸಂಜೋತಾ ತೀರ್ಪು ಇದನ್ನು “ಬಹಳ ವಿಚಿತ್ರ” ಎಂದು ಬಣ್ಣಿಸಿತ್ತು.
ಮೂರು ಬಾಂಬ್ ಸ್ಫೋಟ ಪ್ರಕರಣಗಳನ್ನು ಸೇರಿಸಿ ಒಟ್ಟಿಗೆ ವಿಚಾರಣೆ ನಡೆಸಲು ರಾಷ್ಟ್ರೀಯ ತನಿಖಾ ದಳ ಪರಿಶೀಲಿಸುತ್ತಿತ್ತು. ಆದರೆ “ಕಾನೂನು ಅಭಿಪ್ರಾಯ ವ್ಯತಿರಿಕ್ತವಾಗಿ” ಬಂದಿದ್ದರಿಂದ ಜನವರಿ 2014ರಲ್ಲಿ ಈ ಆಲೋಚನೆಯನ್ನು NIA ಕೈಬಿಟ್ಟಿತು.
ಪ್ರತ್ಯೇಕ ವಿಚಾರಣೆಗಳಿಂದಾಗಿ ಪ್ರಾಸಿಕ್ಯೂಟರುಗಳು ಅಡ್ಡಾದಿಡ್ಡಿಯಾಗಿ ವಾದ ಮಂಡಿಸುವಂತಾಯಿತು. ಉದಾಹರಣೆಗೆ, ಅಜ್ಮೀರ್ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ದೇವೇಂದ್ರ ಗುಪ್ತಾ ಮೆಕ್ಕಾ ಮಸೀದಿ ಪ್ರಕರಣದಲ್ಲಿ ಬಿಡುಗಡೆಯಾದ. ಕೆಲವರನ್ನು ಎರಡು ಪ್ರಕರಣಗಳಲ್ಲಿ ಶಂಕಿತರೆಂದು ವಿಚಾರಣೆಗೆ ಗುರಿಪಡಿಸಲಾಗಿ ಮೂರನೆಯದ್ದರಲ್ಲಿ ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ಹಾಜರುಪಡಿಸಲಾಯಿತು. ಕೆಲವು NIA ಅಧಿಕಾರಿಗಳು ಇವುಗಳಿಂದಾಗಿ ಬೇಸರಗೊಂಡಿದ್ದರೆಂದು ಮಾಧ್ಯಮಗಳು ವರದಿ ಮಾಡಿದ್ದವು.
NIA ಪ್ರಕರಣಗಳು ಹೊರಹಾಕುವ ಸತ್ಯವೇನು?
2014ರಿಂದೀಚೆಗೆ ರಾಷ್ಟ್ರೀಯ ತನಿಖಾ ದಳ ವಿಚಾರಣೆ ನಡೆಸುತ್ತಿದ್ದ ಪ್ರಕರಣಗಳು ಒಂದು ಸ್ಪಷ್ಟ ಮಾದರಿಯನ್ನು ತೆರೆದಿಡುತ್ತದೆ. ಇದರ ಬಗ್ಗೆ ಮೊದಲು ಸೂಚನೆ ನೀಡಿದ್ದು 2008 ಮಾಲೆಗಾಂವ್ ಸ್ಫೋಟ ಪ್ರಕರಣದ ವಿಶೇಷ ಅಭಿಯೋಜಕರಾಗಿದ್ದ ರೋಹಿಣಿ ಸಾಲಿಯಾನ್. “ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದಲೂ” ಈ ಪ್ರಕರಣದಲ್ಲಿ “ಮೃದು” ಧೋರಣೆ ತಳೆಯುವಂತೆ ತಾವು ತನಿಖಾ ದಳದಿಂದ ಒತ್ತಡಕ್ಕೊಳಗಾಗಿರುವುದಾಗಿ ಅವರು ಆರೋಪಿಸಿದ್ದರು. ರಾಷ್ಟ್ರೀಯ ತನಿಖಾ ದಳವು ಇದನ್ನು ನಿರಾಕರಿಸಿದ್ದರೂ, ತದನಂತರದಲ್ಲಿ ತನ್ನ ನ್ಯಾಯವಾದಿಗಳ ಸಮಿತಿಯಿಂದ ರೋಹಿಣಿಯವರನ್ನು ತೆಗೆಯಲು ಶಿಫಾರಸ್ಸು ಮಾಡಿತು.
ಕೂಡಲೇ ಆಗಸ್ಟ್ 2014ರಲ್ಲಿ ಅಜ್ಮೀರ್ ದರ್ಗಾ ಸ್ಪೋಟ ಮೊಕದ್ದಮೆಯ ಸರ್ಕಾರಿ ವಕೀಲರು (ಪಬ್ಲಿಕ್ ಪ್ರಾಸಿಕ್ಯೂಟರ್) ಅಶ್ವಿನಿ ಶರ್ಮಾ ಮಾಧ್ಯಮದೊಂದಿಗೆ ಮಾತನಾಡಿ, ಸಾಕ್ಷಿಗಳು ಪ್ರತಿಕೂಲವಾಗದಂತೆ ಖಾತ್ರಿಪಡಿಸಲು ರಾಷ್ಟ್ರೀಯ ತನಿಖಾ ದಳ ಸಾಕಷ್ಟು ಮುತುವರ್ಜಿ ವಹಿಸುತ್ತಿಲ್ಲ ಎಂದು ತಮ್ಮ ಆತಂಕ ವ್ಯಕ್ತಪಡಿಸಿದ್ದರು. ಸಾಕ್ಷಿದಾರರು ಪ್ರತಿವಾದಿ ವಕೀಲರಿಂದ ಪ್ರಭಾವಿತರಾಗದಂತೆ ಖಾತ್ರಿಪಡಿಸಿಕೊಳ್ಳುವುದು ವಿಚಾರಣಾಧೀನ ಸಂಸ್ಥೆಯ ಕರ್ತವ್ಯವಾಗಿರುತ್ತದೆ ಎಂದು ಅವರು ಹೇಳಿದ್ದರು. ಕೊನೆ ಪಕ್ಷ, ಪ್ರತಿವಾದಿ ವಕೀಲರಿಂದ ಸಾಕ್ಷಿಗಳು ಪ್ರಭಾವಕ್ಕೊಳಗಾಗಿದ್ದಾರೆ ಎಂದು ಅದು ಸಾಬೀತುಪಡಿಸಬೇಕು. ಆದರೆ ಅವರ ಪ್ರಕಾರ, ಸಲಹೆಗಳನ್ನು “ಅಲಕ್ಷ್ಯ” ಮಾಡಲಾಗಿತ್ತು. ಭಯೋತ್ಪಾದನಾ ಪ್ರಕರಣಗಳಲ್ಲಿ “ಅಲ್ಪ ಪ್ರಮಾಣದ ನೇರ ಸಾಕ್ಷಿ” ಸಿಗುವುದರಿಂದ ಸಾಕ್ಷಿ ಸರ್ಕಾರಿ ಅಭಿಯೋಜಕರಿಗೆ ಪುರಾವೆಗಳನ್ನು ಸುರಕ್ಷಿತವಾಗಿರಿಸುವುದು ಅತಿ ಮುಖ್ಯವಾಗುತ್ತದೆ ಎಂದು ಅವರು ವಿವರಿಸಿದ್ದರು.
2014 ಆಗಸ್ಟ್ 28ರಂದು ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಅಸೀಮಾನಂದನ ಜಾಮೀನು ಅರ್ಜಿಯನ್ನು ಸ್ವೀಕರಿಸಿದಾಗಲೇ ಬಹುಶಃ ಸಂಜೋತಾ ಪ್ರಕರಣ ಹೊರಹಾಕುತ್ತಿದ್ದ ಸತ್ಯದ ಮೊದಲ ಸೂಚನೆ ಸಿಕ್ಕಿತ್ತೇನೋ! ಪ್ರಕರಣದಲ್ಲಿ “ಪ್ರಕ್ರಿಯಾ ವಿಳಂಬಗಳು” ಆಗಿವೆ ಎಂದೂ, 299 ರಲ್ಲಿ ಕೇವಲ 35 ಸಾಕ್ಷಿದಾರರನ್ನು ಮಾತ್ರ ವಿಚಾರಣೆಗೆ ಒಳಪಡಿಸಲಾಗಿತ್ತು ಎಂದು ನ್ಯಾಯಾಲಯವು ಗುರುತಿಸಿತ್ತು.
ನ್ಯಾಯಾಲಯದ ಜಾಮೀನು ಆದೇಶದಲ್ಲಿ ಹೀಗೆ ಹೇಳಲಾಗಿತ್ತು:
“ಇತರ ಸಾಕ್ಷಿಗಳ ವಿಚಾರಣೆ ಸಾಕಷ್ಟು ಸಮಯ ತೆಗೆದುಕೊಳ್ಳಲಿದ್ದು, ಅಲ್ಲಿಯವರೆಗೂ ಅರ್ಜಿದಾರ (ಆರೋಪಿ) ಬಂಧನದಲ್ಲಿದ್ದರೆ, ಅವರ ವಿಚಾರಣೆಯ ಉದ್ದೇಶವೇ ಈಡೇರದು. ಏಕೆಂದರೆ ಹೇಗಿದ್ದರೂ ಅವನು ಶಿಕ್ಷೆಯನ್ನು ಅಥವಾ ಅದರ ಬಹುಭಾಗವನ್ನು ಈಗಲೇ ಕಳೆದಿರುತ್ತಾನೆ ಮತ್ತು ಅವನು ಒಂದು ವೇಳೆ ನಿರ್ದೋಷಿ ಎಂದು ಬಿಡುಗಡೆಯಾದರೆ ಈಗಾಗಲೇ ಕಾರಾಗೃಹವಾಸ ಅನುಭವಿಸಿದ ಅವಧಿಯ ಸ್ವಾತಂತ್ರ್ಯವನ್ನು (ಅವನಿಗೆ) ಹಿಂದಿರುಗಿಸಲಾರದು… ಆದ್ದರಿಂದ ಅರ್ಜಿದಾರನ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಭಯೋತ್ಪಾದನೆ ಮತ್ತು ವಿಧ್ವಂಸಕಾರಿ ಚಟುವಟಿಕೆಗಳಿಂದ ರಕ್ಷಣೆ ಪಡೆಯುವ ಸಮುದಾಯ ಮತ್ತು ರಾಷ್ಟ್ರದ ಹಕ್ಕು ಇವೆರಡನ್ನೂ ಸರಿದೂಗಿಸುವ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುತ್ತ, ಅರ್ಜಿದಾರನ ಬಹಕಾಲದ ಸೆರೆಮನೆವಾಸ, ಆತನ ಗುಣ ವಿಶೇಷಗಳು, ಬಂಧನದ ನಂತರದಲ್ಲಿ ಆತನ ನಡವಳಿಕೆ, ಆತನ 77 ರ ವಯಸ್ಸು, ಭೌತಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದಿರುವುದು ಇವೆಲ್ಲವನ್ನೂ ಪರಿಗಣಿಸಿದಾಗ, ಅವು ಆತನ ಪರವಾಗಿ ಹೆಚ್ಚು ವಾಲುವಂತೆ ಮಾಡುತ್ತವೆ. ಅಲ್ಲದೆ ಪ್ರಕರಣದ ವಿಚಾರಣೆ ಇನ್ನೂ ವಿಳಂಬವಾದಲ್ಲಿ ಆತನಿಗೆ ಜಾಮೀನಿನ ವಿನಾಯಿತಿ ನೀಡುವುದು ನ್ಯಾಯೋಚಿತ ಮತ್ತು ಸಮಯೋಚಿತವೂ ಆಗಿರುತ್ತದೆ.”
ಸಂಜೋತಾ ತೀರ್ಪು ಬರುವ ಮೊದಲೇ ಇನ್ನೆರಡು ಸಹ-ಪ್ರಕರಣಗಳಾದ ಮೆಕ್ಕಾ ಮಸೀದಿ ಸ್ಫೋಟ ಮತ್ತು ಅಜ್ಮೀರ್ ದರ್ಗಾ ಸ್ಫೋಟ ಮೊಕದ್ದಮೆಗಳು ಅಸೀಮಾನಂದನ ವಿಚಾರಣೆ ಯಾವ ದಿಕ್ಕಿನಲ್ಲಿ ಹೋಗಲಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸಿದ್ದವು. ಪ್ರಜ್ಞಾ ಠಾಕುರ್ ವಿರುದ್ಧದ ಪ್ರಕರಣವೂ ವಿಫಲವಾಯಿತು ಇಲ್ಲವೇ ಅದನ್ನು ಕೈಬಿಡಲಾಯಿತು. ಮೇ 2018ರಲ್ಲಿ ರಾಷ್ಟ್ರೀಯ ತನಿಖಾ ದಳವು ಪ್ರಜ್ಞಾ ಠಾಕುರ್ ಳನ್ನು 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ದೋಷಾರೋಪಣಾ ಪಟ್ಟಿಯಿಂದ ಕೈಬಿಟ್ಟಿತು. 2017 ಫೆಬ್ರವರಿಯಲ್ಲಿ ಆಕೆಯನ್ನು ಮಧ್ಯಪ್ರದೇಶದ ನ್ಯಾಯಾಲಯವು ಸುನೀಲ್ ಜೋಷಿ ಕೊಲೆ ಮೊಕದ್ದಮೆಯಿಂದ ನಿರ್ದೋಷಿ ಎಂದು ಮುಕ್ತಗೊಳಿಸಿತು. ಅದೇ ಏಪ್ರಿಲ್ ನಲ್ಲಿ ಅಜ್ಮೀರ್ ದರ್ಗಾ ಸ್ಫೋಟ ಮೊಕದ್ದೆಮಯಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕುರ್ ಮತ್ತು ಇಂದ್ರೇಶ್ ಕುಮಾರ್ ಅವರುಗಳ ವಿರುದ್ಧ ಸಾಕಷ್ಟು ಪುರಾವೆಗಳಿಲ್ಲ ಎಂದು ಕಾರಣ ನೀಡಿದ NIA ಮುಕ್ತಾಯ ವರದಿಯನ್ನು ಸಲ್ಲಿಸಿತು.
ಮೆಕ್ಕಾ ಮಸೀದಿ ಪ್ರಕರಣದಲ್ಲಿ “ಕೆಲವು ಸಾಕ್ಷಿದಾರರು ಪ್ರತಿಕೂಲ ಹೇಳಿಕೆ ನೀಡಿದ ನಂತರ ನಿರ್ದಿಷ್ಟ ಪುರಾವೆ ಇಲ್ಲದ ಕಾರಣ” ಹೈದರಾಬಾದಿನ NIA ನ್ಯಾಯಾಲಯವು ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದ್ದ ಎಲ್ಲಾ ಐವರನ್ನೂ ದೋಷಮುಕ್ತಗೊಳಿಸಿತು.
ಅಸೀಮಾನಂದನ ಜೊತೆಗೆ ಖುಲಾಸೆಗೊಂಡವರಲ್ಲಿ ದೇವೇಂದ್ರ ಗುಪ್ತಾ, ಲೋಕೇಶ್ ಶರ್ಮಾ, ಭರತ್ ಮೋಹನ್ ಲಾಲ್ ರತೇಶ್ವರ್ ಮತ್ತು ರಜೀಂದರ್ ಚೌಧುರಿ ಸೇರಿದ್ದಾರೆ. ಇನ್ನಿಬ್ಬರು ಆರೋಪಿಗಳು, ಸಂದೀಪ್ ವಿ. ಡಾಂಗೆ ಮತ್ತು ರಾಮಚಂದ್ರ ಕಲಸಂಗ್ರಾ ತಲೆ ಮರೆಸಿಕೊಂಡಿದ್ದರು.
ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಜೈಪುರದ NIA ನ್ಯಾಯಾಲಯವು 2017ರಲ್ಲಿ ಅಸೀಮಾನಂದ ಮತ್ತು ಇತರ ಆರು ಮಂದಿಯನ್ನು ಸಂಶಯದ ಲಾಭ ಅನುಗ್ರಹಿಸಿ ದೋಷಮುಕ್ತಗೊಳಿಸಿತು. ಆದರೆ ಸುನೀಲ್ ಜೋಷಿ, ದೇವೇಂದ್ರ ಗುಪ್ತಾ ಮತ್ತು ಭಾವೇಶ್ ಭಾಯಿ ಪಟೇಲ್ ಅವರುಗಳ ಅಪರಾಧವನ್ನು ಎತ್ತಿಹಿಡಿಯಿತು. ದೇವೇಂದ್ರ ಗುಪ್ತಾ ಅಜ್ಮೀರ್ ನಗರದ ನಿವಾಸಿಯಾಗಿದ್ದು ಮಧ್ಯಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಆರೆಸ್ಸೆಸ್ ಗಾಗಿ ದುಡಿಯುತ್ತಿದ್ದ. ಭಾವೇಶ್ ಪಟೇಲ್ ಗುಜರಾತಿನ ಆರೆಸ್ಸೆಸ್ ಕಾರ್ಯಕರ್ತ. ಈಗಾಗಲೇ ಹೇಳಿದಂತೆ ಸುನೀಲ್ ಜೋಷಿ 2007ರಲ್ಲೇ ಕೊಲೆಯಾಗಿದ್ದ.
ನ್ಯಾಯಾಲಯವು ಗುಪ್ತಾ ಮತ್ತು ಪಟೇಲ್ ಇಬ್ಬರಿಗೂ ಜೀವಾವಧಿ ಶಿಕ್ಷೆ ಆದೇಶಿಸಿತು. ಇಂತಹ ಭಯೋತ್ಪಾದನೆಯ ಪ್ರಕರಣಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರಿಗೆ ಇದೇ ಮೊಟ್ಟ ಮೊದಲ ಶಿಕ್ಷೆಯಾಗಿತ್ತು. ಆದರೆ ಶಿಕ್ಷೆಯ ವಿರುದ್ಧ ಅವರು ಮೇಲ್ಮನವಿ ಸಲ್ಲಿಸಿದ ಸಂದರ್ಭದಲ್ಲಿ 2018ರ ಆಗಸ್ಟ್ 30ರಂದು ರಾಜಸ್ತಾನ ಹೈಕೋರ್ಟ್ ಈ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು, “ಮಾನವ ಸಂಭವನೀಯತೆ”ಗಳನ್ನು ಆಧರಿಸಿ ಅವರು ಅದರಲ್ಲಿ (ಭಯೋತ್ಪಾದನಾ ಚಟುವಟಿಕೆಗಳಲ್ಲಿ) ತೊಡಗಿಕೊಂಡಿದ್ದಾರೆ ಎಂದು ತನ್ನ ಆದೇಶದಲ್ಲಿ ಉಲ್ಲೇಖಿಸಿತು. ಬಹುಶಃ ಮೇಲ್ಮನವಿಯ ಭವಿಷ್ಯವನ್ನು ಇದು ಸೂಚಿಸುವಂತಿದೆ.
ಇದನ್ನೂ ಓದಿ ಮಾಲೆಗಾಂವ್ ಸ್ಫೋಟದ ತನಿಖೆ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಆರೆಸ್ಸೆಸ್ ಮುಖಂಡ ಸುರೇಶ್ (ಭಯ್ಯಾ) ಬರೆದ ಪತ್ರ