ಸುಪ್ರೀಂ ಕೋರ್ಟಿನ ಯುವ ವಕೀಲ ಉತ್ಸವ್ ಸಿಂಗ್ ಬೈನ್ಸ್ ತಮ್ಮ ಫೇಸ್ ಬುಕ್ ಖಾತೆ ಮತ್ತು ಟ್ವಿಟರ್ ನಲ್ಲಿ ಪ್ರಕಟಿಸಿರುವ ಸಂದೇಶಗಳ ಹಿನ್ನೆಲೆಯಲ್ಲಿ ಈಗ ಮುಖ್ಯ ನ್ಯಾಯಮೂರ್ತಿಗಳ ಮೇಲಿನ ಲೈಂಗಿಕ ಕಿರುಕುಳ ಆರೋಪದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಉತ್ಸವ್ ಬೈನ್ಸ್ 32ರ ಹರೆಯದ, ಚಂಢೀಗಡ ಮೂಲದ ಉತ್ಸಾಹಿ ಯುವ ವಕೀಲನಾಗಿದ್ದಾರೆ. ಕಾನೂನು ವಿದ್ಯಾಭ್ಯಾಸ ಮುಗಿಸಿ ಚಂಢೀಗಡದಲ್ಲಿ ಕೆಲಕಾಲ ವಕೀಲಿಕೆ ನಡೆಸಿಸಿ ಈಗ ಸುಪ್ರೀಂ ಕೋರ್ಟಿನಲ್ಲಿರುವ ಉತ್ಸವ್ ದುರ್ಬಲ ವರ್ಗದ ಮಕ್ಕಳ ಹಕ್ಕುಗಳಿಗಾಗಿ ಸಾಕಷ್ಟು ಕೆಲಸ ಮಾಡಿರುವುದೇ ಅಲ್ಲದೇ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗದ ರಾಜ್ಯ ಕಾನೂನು ಸಲಹೆಗಾರರೂ ಆಗಿದ್ದಾರೆ. ಮಾನವ ಹಕ್ಕುಗಳ ಕುರಿತು ವಿಶೇಷ ಒಲವಿರುವ ಇವರು ಲೈಂಗಿಕ ದೌರ್ಜನ್ಯಗಳ ಪ್ರಕರಣಗಳಲ್ಲಿ ಸಹ ಸೂಕ್ಷ್ಮ ಸಂವೇದನೆ ಹೊಂದಿರುವುದು ಅವರ ಬರೆಹಗಳು ಮತ್ತು ಅವರ ಕೆಲಸಗಳಿಂದ ತಿಳಿದು ಬರುತ್ತದೆ.
“ಯಾವುದೇ ಮಾಧ್ಯಮದವರಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ, ಯಾಕೆಂದರೆ ನಂತರದಲ್ಲಿ ನ್ಯಾಯಮೂರ್ತಿಗಳ ವಿರುದ್ಧ ದೂರು ನೀಡಿರುವ ಮಹಿಳೆಯ “ಮಾಧ್ಯಮ ವಿಚಾರಣೆ” ನನಗೆ ಇಷ್ಟವಿಲ್ಲ” ಎಂದೂ ಉತ್ಸವ್ ತಿಳಿಸಿದ್ದಾರೆ
ಉತ್ಸವ್ ಸಿಂಗ್ ಬೈನ್ ಫೇಸ್ಬುಕ್ ನಲ್ಲಿ ಪ್ರಕಟಿಸಿರುವ ಬರೆಹದ ಪೂರ್ಣಪಾಟವನ್ನು ಟ್ರೂಥ್ ಇಂಡಿಯಾ ಇಲ್ಲಿ ಕನ್ನಡದಲ್ಲಿ ನೀಡಿದೆ.
“ಭಾರತದ ಮುಖ್ಯನ್ಯಾಯಮೂರ್ತಿಗಳ (ಸಿಜೆಐ) ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ದೂರು ನೀಡಿರುವ ಸುಪ್ರೀಂ ಕೋರ್ಟಿನ ಮಾಜಿ ಉದ್ಯೋಗಿಯ ಪರವಾಗಿ ವಕೀಲಿಕೆ ನಡೆಸಲು ಹಾಗೂ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ನಿರ್ದಿಷ್ಟವಾಗಿ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲೇ ಸುದ್ದಿಗೋಷ್ಠಿ ಆಯೋಜಿಸಲು ಕೆಲವು ದಿನಗಳ ಹಿಂದೆ ನನಗೆ ಲಂಚದ ಆಮಿಷ ಒಡ್ಡಲಾಗಿತ್ತು.
ಇದನ್ನು ನಾನು ನಿರಾಕರಿಸಿದಾಗ ಈ ಹಿಂದೆ ಅಸಾರಾಮ್ ಅತ್ಯಾಚಾರ ಪ್ರಕರಣದಲ್ಲಿ ನೊಂದ ಬಾಲಕಿಯ ಪರವಾಗಿ ನಾನು ಮಾಡಿದ್ದ ಕೆಲಸಕ್ಕೆ ಬಹಳ ಹೊಗಳಿದ್ದ ವ್ಯಕ್ತಿ, ಆ ಬಾಲಕಿಯ ಸಂಬಂಧಿ ಎಂದು ಹೇಳಿಕೊಂಡಿದ್ದ ವ್ಯಕ್ತಿ ನನಗೆ ಒಬ್ಬ ತರಬೇತಿ ಪಡೆದ ಏಜೆಂಟ್ ರೀತಿ ಕಾಣಿಸಿದನಲ್ಲದೇ ಸುಪ್ರೀ ಕೋರ್ಟ್ ಮಾಜಿ ಉದ್ಯೋಗಿಯ ಜೊತೆ ತನಗೆ ಸಂಬಂಧ ಏನೆಂದು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸಲಿಲ್ಲ. ಬದಲಿಗೆ ಆ ಕೂಡಲೇ ಅವನು ನನಗೆ ಲೀಗಲ್ ಫೀಸ್ ಎಂದು 50 ಲಕ್ಷ ರೂಪಾಯಿ ಕೊಡುವುದಾಗಿ ತಿಳಿಸಿ ಪ್ರಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಸುದ್ದಿಗೋಷ್ಠಿ ನಡೆಸಲು ಕೇಳಿಕೊಂಡ. ಆದರೆ ಆ ಪ್ರಕರಣದ ಕುರಿತು ನಾನು ಕೇಳಿದ ಹಲವು ಪ್ರಶ್ನೆಗಳಿಗೆ ಅವನು ಸರಿಯಾಗಿ ಉತ್ತರಿಸದ ಕಾರಣ ಹಾಗೂ ನನಗೆ ಅದರಲ್ಲಿ ನನಗೆ ಅನುಮಾನಗಳು ಕಂಡ ಕಾರಣ ನಾನು ಪ್ರಕರಣ ಕೈಗೆತ್ತಿಕೊಳ್ಳಲು ನಿರಾಕರಿಸಿದೆ. ಕೂಡಲೇ ಅವನು ನನಗೆ 1.5ಕೋಟಿ ರೂಪಾಯಿ ಕೊಡುತ್ತೇನೆ ಎಂದು ಹೇಳಿದ. ಕೂಡಲೇ ನಾನು ಅವನನ್ನು ಅಲ್ಲಿಂದ ಜಾಗ ಖಾಲಿ ಮಾಡಿಸಿದೆ.
ನಂತರ ಕೆಲವಾರು ದಿನಗಳವರೆಗೆ ಈ ವಿಷಯದ ಕುರಿತಾಗಿ ಹೆಚ್ಚು ಸಂಗತಿಗಳನ್ನು ನಂಬಲರ್ಹ ಮೂಲಗಳಿಂದ ಕಲೆಹಾಕಿದೆ. ಆ ಮಾಹಿತಿಗಳೆಲ್ಲವೂ ಸಹ ಮುಖ್ಯನ್ಯಾಯಮೂರ್ತಿಗಳನ್ನು ರಾಜೀನಾಮೆ ಕೊಡಿಸುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಸಂಚೊಂದು ನಡೆದಿರುವ ಕುರಿತು ನನಗೆ ಮಾಹಿತಿ ಒದಗಿಸಿದವು. ಈ ಸಂಚಿನ ಕಿಂಗ್ ಪಿನ್ ಗಳಾಗಿ ದೆಹಲಿಯಲ್ಲಿರುವ ಹಲವು ಸುಪ್ರೀಂ ಕೋರ್ಟ್ ಫಿಕ್ಸರ್ ಗಳಿದ್ದು ಅವರೆಲ್ಲರೂ ಸಹ ಕೋರ್ಟಿನ ತೀರ್ಪುಗಳಿಗೆ ಹಣದ ವ್ಯವಹಾರ ನಡೆಸುವವರೇ ಆಗಿದ್ದಾರೆ.
ಅಂತಹ ನಂಬಲರ್ಹ ಮಾಹಿತಿಗಳನ್ನು ನಾನು ಸಂಗ್ರಹಿಸಿಕೊಂಡ ಬಳಿಕ ಇಲ್ಲೊಂದು ದೊಡ್ಡ ಮಟ್ಟದ ಸಂಚು ನಡೆದಿದೆ ಎಂದು ನನಗೆ ಮನವರಿಕೆ ಆಯಿತು.
ಕೊನೆಗೆ ನಾನು ನೆನ್ನೆ (ಶುಕ್ರವಾರ) ಸಂಜೆ 7 ಗಂಟೆಯ ಸುಮಾರಿಗೆ ಮುಖ್ಯ ನ್ಯಾಯಮೂರ್ತಿಗಳ ನಿವಾಸಕ್ಕೆ ಹೋಗಿ ನಡೆದಿರುವ ಸಂಚಿನ ಕುರಿತು ಹಾಗೂ ನನಗೆ ಬಂದ ಲಂಚದ ಆಮಿಷದ ಕುರಿತು ತಿಳಿಸಿ ಬರಲು ಹೋದೆ. ಆದರೆ ಮುಖ್ಯ ನ್ಯಾಯಮೂರ್ತಿಗಳು ಮನೆಯಲ್ಲಿ ಇಲ್ಲ ಎಂದು ಅವರ ಸಿಬ್ಬಂದಿಗಳು ತಿಳಿಸಿದರು. ನನ್ನ ಸಿಡಿಆರ್ ಲೊಕೇಶನ್ ವಿವರಗಳ ಮೂಲಕ ಬೇಕಿದ್ದರೆ ಇದನ್ನು ಪರೀಕ್ಷಿಸಬಹುದು.
ನಂತರ ರಾತ್ರಿ ನಾನು ಅತ್ಯಂತ ಬದ್ಧತೆ ಇರುವ ಸುಪ್ರೀಂ ಕೋರ್ಟ್ ವರದಿಗಾರರೊಬ್ಬರಿಗೆ ಕರೆ ಮಾಡಿ ಬಹಳ ಮುಖ್ಯವಾದ ವಿಷಯದ ಕುರಿತು ಮಾತಾಡಬೇಕು, ದಯವಿಟ್ಟು ನನ್ನನ್ನು ಭೇಟಿ ಮಾಡಿ ಎಂದು ಕೇಳಿಕೊಂಡೆನಲ್ಲದೇ ಮುಖ್ಯನ್ಯಾಯಮೂರ್ತಿಗಳೊಂದಿಗೆ ತುರ್ತು ಭೇಟಿ ಮಾಡಿಸಲು ಇಲ್ಲವೇ ಅವರಿಗೆ ಸಂದೇಶವೊಂದನ್ನು ತಿಳಿಸಲು ಏನಾದರೂ ಏರ್ಪಾಡು ಮಾಡಬೇಕೆಂದು ಕೇಳಿಕೊಂಡೆ. ಇಂದು ಬೆಳಿಗ್ಗೆ ಪ್ರಶಾಂತ್ ಭೂಷಣ್ ಸರ್ ಹಾಗೂ ಕಾಮಿನಿ ಜೈಸ್ವಾಲ್ ಮೇಡಂ ಅವರನ್ನೂ ಭೇಟಿ ಮಾಡಲು ಯೋಜಿಸಿದ್ದೆ.
ಆದರೆ ಅಷ್ಟರಲ್ಲಿ ಬೆಳಿಗ್ಗೆ ನನ್ನ ಅನಿಸಿಕೆ ನಿಜವೇ ಆಗಿಬಿಟ್ಟಿದೆ.
ತಾಸುಗಟ್ಟಲೆ ಯೋಚಿಸಿ, ಆತ್ಮಶೋಧನೆ ನಡೆಸಿದ ನಂತರದಲ್ಲಿ ನಾನು ಸತ್ಯವನ್ನು ಹೇಳಲು ತೀರ್ಮಾನಿಸಿದ್ದೇನೆ. ಅಲ್ಲದೇ ಅಸಂತುಷ್ಟರಾಗಿರುವ ನ್ಯಾಯಾಧೀಶರ, ಸುಪ್ರೀಂ ಕೋರ್ಟ್ ಫಿಕ್ಸರ್ ಗಳ, ಕಾರ್ಪೊರೇಟ್ ಹಗರಣಗಳ ಪಾಲುದಾರರ ಹಾಗೂ ಕೆಲವು ಭ್ರಷ್ಟ ರಾಜಕಾರಣಿಗಳ ದೊಡ್ಡ ಲಾಬಿಯೊಂದು ಸೇರಿಕೊಂಡು ಸುಪ್ರೀಂ ಕೋರ್ಟಿನ ಮೂಲಕ ತಮ್ಮ ಭ್ರಷ್ಟಾಚಾರ ಸರಾಗವಾಗಿ ನಡೆಯದ ಕಾರಣಕ್ಕೆ ಮುಖ್ಯನ್ಯಾಯಮೂರ್ತಿಗಳ ವಿರುದ್ಧ ಸಂಚು ನಡೆಸಿರುವುದರ ಕುರಿತು ಸೂಕ್ತ ಸಾಕ್ಷ್ಯಾಧಾರಗಳ ಸಮೇತ ನಾನು ಸುಪ್ರೀಂ ಕೋರ್ಟಿನಲ್ಲಿ ಅಫಿಡವಿಟ್ ಸಲ್ಲಿಸಲು ನಿಶ್ಚಯಿಸಿಕೊಂಡಿದ್ದೇನೆ.
ಇಂದಿನಿಂದ ನಾನು ಮುಖ್ಯ ನ್ಯಾಯಮೂರ್ತಿಗಳು ಹಾಜರಾಗುವ ಯಾವುದೇ ಕೋರ್ಟಿನಲ್ಲಿ ಹಾಜರಾಗುವುದಿಲ್ಲ. ನಾನು ಇದುವರೆಗೂ ಯಾವತ್ತೂ ಮುಖ್ಯನ್ಯಾಯಮೂರ್ತಿಗಳ ಜೊತೆಗಾಗಲೀ, ಅವರ ನಿಕಟವರ್ತಿಗಳ ಜೊತೆಗಾಗಲೀ ಎಂದೂ ವೈಯಕ್ತಿಕ ಒಡನಾಟ ಬೆಳೆಸಿಕೊಂಡಿಲ್ಲ. ಈ ಕುರಿತು ನನ್ನ ಎಲೆಕ್ಟ್ರಾನಿಕ್ ದಾಖಲೆಗಳೆಲ್ಲವನ್ನೂ ಯಾವುದೇ ಸ್ವತಂತ್ರ ಬಹಿರಂಗ ತನಿಖೆಗೆ ಒಳಪಡಿಸಲು ಅಡ್ಡಿಯಿಲ್ಲ. ನಾನು ಮುಖ್ಯನ್ಯಾಯಮೂರ್ತಿಗಳೊಂದಿಗೆ ಕೋರ್ಟ್ ಹೊರಗಾಗಲೀ, ಕೋರ್ಟ್ ಕೊಠಡಿಯಲ್ಲಾಗಲೀ ಎಂದಾದರೂ ಒಡನಾಟ ನಡೆಸಿಸಿದ್ದೇನೆ ಎಂದು ಯಾರೇ ಸಾಬೀತುಪಡಿಸಿದರೆ ನಾನು ನನ್ನ ಲೀಗಲ್ ಪ್ರಾಕ್ಟೀಸನ್ನೇ ತೊರೆಯುತ್ತೇನೆ. ನಾನು ನಂಬಿಕೊಂಡಿರು ತತ್ವಾದರ್ಶಕ್ಕೆ ಬದ್ಧನಾಗಿರುವ ನಾನು ಯಾವುದೇ ನ್ಯಾಯಾಧೀಶರ ಬೂಟು ನೆಕ್ಕುವ ವ್ಯಕ್ತಿ ಅಲ್ಲ.