ಒಂದು ಕಾಲದಲ್ಲಿ ಕಾಂಗ್ರೆಸ್ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ದಿವಂಗತ ಧರ್ಮಸಿಂಗ್ ಅವರ ಶಿಷ್ಯನಾಗಿದ್ದ ಉಮೇಶ್ ಜಾಧವ್ ತಾವು ಪ್ರತಿನಿಧಿಸುತ್ತಿದ್ದ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಪ್ರತಿನಿಧಿ ಸ್ಥಾನಕ್ಕೆ ರಾಜಿನಾಮೆ ನೀಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡು ಈಗ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಧುರೀಣ ಮಲ್ಲಿಕಾರ್ಜುನ ಖರ್ಗೆಯವರ ಎದುರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದರೊಂದಿಗೆ ಕಲಬುರಗಿ ಕ್ಷೇತ್ರ ಇಡೀ ದೇಶದ ಗಮನ ಸೆಳೆಯಲಾರಂಭಿಸಿದೆ.
ಹಾಗೆ ನೋಡಿದರೆ ಇದು ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಈಗಾಗಲೇ ಎರಡು ಬಾರಿ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿರುವ ಖರ್ಗೆಯವರಿಗೆ ತಾವೇ ಬೆಳೆಸಿದ ಜಾಧವ್ ಎದುರು ಸೋಲುವುದನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಖರ್ಗೆಯವರು ಇದುವರೆಗೂ ತಾವು ಸ್ಪರ್ಧಿಸಿದ ಎಲ್ಲಾ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಗೆಲ್ಲುವ ಮೂಲಕ ಸೋಲಿಲ್ಲದ ಸರದಾರ ಎಂಬ ಖ್ಯಾತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಒಂಬತ್ತು ವಿಧಾನಸಭಾ ಚುನಾವಣೆಗಳನ್ನು (ಎಂಟು ಗುರುಮಿಠಕಲ್ ಕ್ಷೇತ್ರದಿಂದ ಮತ್ತು ಒಂದು ಚಿತ್ತಾಪುರ ಕ್ಷೇತ್ರದಿಂದ) ಹಾಗೂ ಎರಡು ಲೋಕಸಭಾ ಚುನಾವಣೆಗಳನ್ನು (ಕಲಬುರಗಿ ಕ್ಷೇತ್ರ) ಗೆದ್ದಿರುವ ಅವರು ಈಗ ಕಲಬುರಗಿ ಲೋಕಸಭೆಯಲ್ಲಿ ಸ್ಪರ್ಧಿಸುತ್ತಿರುವುದು ಹನ್ನೆರಡನೇ ಚುನಾವಣೆ. ಇದನ್ನೂ ಗೆದ್ದರೆ ಅವರು ಕಲಬುರಗಿಯಲ್ಲಿ ಹ್ಯಾಟ್ರಿಕ್ ಗೆಲವನ್ನು ಸಾಧಿಸಿದಂತಾಗುತ್ತದೆ.
ಲೋಕಸಭೆಯಲ್ಲಿ ಅವರು ಕೇವಲ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರೂ ವಾಸ್ತವದಲ್ಲಿ ಅವರು ಅಧಿಕೃತ ವಿರೋಧ ಪಕ್ಷದ ನಾಯಕ ಯಾರೂ ಇಲ್ಲದಿರುವ ಸಂದರ್ಭದಲ್ಲಿ ಹೆಚ್ಚೂ ಕಡಿಮೆ ಆ ಜವಾಬ್ದಾರಿಯನ್ನು ಇವರೇ ನಿರ್ವಹಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದುರಾಡಳಿತವನ್ನು, ಸುಳ್ಳುಗಳನ್ನು, ವಿಷಕಾರಿ ಸಿದ್ಧಾಂತವನ್ನು ಅವರು ಲೋಕಸಭೆಯಲ್ಲಿ ದಾಖಲೆ ಸಮೇತವಾಗಿ ಎಳೆ ಎಳೆಯಾಗಿ ಬಿಚ್ಚಿಡುತ್ತಾ ಆಳುವ ಸರ್ಕಾರವನ್ನು ಬೆತ್ತಲುಗೊಳಿಸುತ್ತಾ ಬಂದಿದ್ದಾರೆ. ಈ ರೀತಿಯಲ್ಲಿ ಅವರು ಮೋದಿಗೆ ಮತ್ತು ಬಿಜೆಪಿ ಸರ್ಕಾರಕ್ಕೆ ದಿಲ್ಲಿಯಲ್ಲಿ ಮಗ್ಗಲ ಮುಳ್ಳಾಗಿ ಕಾಡುತ್ತಿರುವುದರಿಂದ ಮುಂದಿನ ಲೋಕಸಭೆಗೆ ಖರ್ಗೆ ಪ್ರವೇಶಿಸದಂತೆ ನೋಡಿಕೊಳ್ಳುವುದಕ್ಕೆ ಬಿಜೆಪಿಯ ಇಡೀ ನಾಯಕತ್ವ ಶತಗತಾಯ ಪ್ರಯತ್ನ ನಡೆಸುತ್ತಿದೆ. ಒಂದು ಮೂಲದ ಪ್ರಕಾರ ಖರ್ಗೆಯನ್ನು ಸೋಲಿಸುವುದಕ್ಕಾಗಿಯೇ ಬಿಜೆಪಿ ಕಳೆದೊಂದು ವರ್ಷದಿಂದ ತಯಾರಿ ನಡೆಸಿದ್ದು ಸುಮಾರು ನೂರು ಕೋಟಿ ರೂಪಾಯಿಗಳನ್ನು ಅದಕ್ಕಾಗಿ ತೆಗೆದಿಟ್ಟಿದೆ. ಹೀಗಾಗಿ, ಈ ಚುನಾವಣೆ ಖರ್ಗೆಯ ಪಾಲಿಗೆ ಬಹಳ ಮುಖ್ಯವಾದ ಚುನಾವಣೆಯಾಗಿದೆ.
ಇನ್ನು ಜಾಧವ್ಗೂ ಕೂಡ ಇದು ಮಹತ್ವಪೂರ್ಣ ಚುನಾವಣೆ. ಏಕೆಂದರೆ, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆಯಲ್ಲಿ ಒಬ್ಬ ಸಾಮಾನ್ಯ ನೌಕರರಾಗಿದ್ದ ಅವರು ಧರ್ಮಸಿಂಗ್ ಮತ್ತು ಖರ್ಗೆ ಬೆಂಬಲದೊಂದಿಗೆ ಆ ನೌಕರಿಯನ್ನು ತೊರೆದು ರಾಜಕೀಯ ಪ್ರವೇಶ ಮಾಡಿದವರು. ಇದೇ ಖರ್ಗೆ ಮತ್ತು ಧರ್ಮಸಿಂಗ್ ಅವರ ನೆರವಿನಿಂದಲೇ ಕೆಲವೇ ದಿನಗಳಲ್ಲಿ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು 2013ರ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಮತ್ತು 2018 ರ ಚುನಾವಣೆಯಲ್ಲೂ ಎರಡನೇ ಬಾರಿಗೆ ಅದೇ ಕ್ಷೇತ್ರದಿಂದ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದರು. ಮೊದಲ ಸಲ ಗೆದ್ದಾಗಲೇ ಅವರನ್ನು ಸಂಸದೀಯ ಕಾರ್ಯದರ್ಶಿಯನ್ನೂ ಮಾಡಲಾಗಿತ್ತು. ಸಾಮಾನ್ಯವಾಗಿ ಹೊಸದಾಗಿ ರಾಜಕೀಯ ಪ್ರವೇಶ ಮಾಡಿದ ವ್ಯಕ್ತಿಗಳಿಗೆ ಬಂದ ತಕ್ಷಣವೇ ಪಕ್ಷದ ಟಿಕೆಟ್ ನೀಡಿ ಎಮ್ಮೆಲ್ಲೆ ಮಾಡುವ ಪರಂಪರೆ ಕಾಂಗ್ರೆಸ್ಸಿನಲ್ಲಿ ಇಲ್ಲ. ಹತ್ತಾರು ವರ್ಷಗಳ ಕಾಲ ದುಡಿದ ಮೇಲಷ್ಟೇ ಅವರಿಗೆ ಇಂತಹ ಅವಕಾಶಗಳು ಸಿಗುತ್ತವೆ. ಆದರೆ, ಖರ್ಗೆ ಮತ್ತು ಧರ್ಮಸಿಂಗ್ ಅವರ ಕೃಪೆಯಿಂದ ಜಾಧವ್ಗೆ ಇದೆಲ್ಲವೂ ಸಿಕ್ಕಿತು. ಆದರೆ, ತಕ್ಷಣವೇ ಮಂತ್ರಿಯಾಗಬೇಕೆಂಬ ದುರಾಸೆಯ ಕಾರಣಕ್ಕೆ ಅವರು ತನ್ನನ್ನು ಬೆಳೆಸಿದ ಕಾಂಗ್ರೆಸ್ಸನ್ನೂ, ಅದರ ನಾಯಕರನ್ನೂ “ಆಪರೇಷನ್ ಕಮಲ”ಕ್ಕೆ ಬಲಿಯಾಗಿ ಈಗ ತಮ್ಮನ್ನು ಬೆಳೆಸಿದ ನಾಯಕನಿಗೆ ಈ ಲೋಕಸಭಾ ಚುನಾವಣೆಯಲ್ಲಿ ತೊಡೆತಟ್ಟಿ ನಿಂತಿದ್ದಾರೆ. ಈಗ ಗೆದ್ದರೆ ಅವರ ರಾಜಕೀಯ ಭವಿಷ್ಯ ಉಜ್ವಲವಾಗಬಹುದು. ಸೋತರೆ ಅವರ ರಾಜಕೀಯ ಬದುಕೇ ಕೊನೆಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ತಾನು ಮುಖ್ಯಮಂತ್ರಿಯಾಗಬೇಕೆಂದು ಶತಗತಾಯ ಪ್ರಯತ್ನ ಮಾಡಿರುತ್ತಿರುವ ಬಿ.ಎಸ್. ಯಡ್ಯೂರಪ್ಪ ಕಾಂಗ್ರೆಸ್ ಎಮ್ಮೆಲ್ಲೆಗಳನ್ನು ಖರೀದಿಸುವ ಕೆಲಸಕ್ಕೆ ಕೈಹಾಕಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಹೀಗೆ ಬಿಕರಿಗೆ ನಿಂತಿರುವ ಕಾಂಗ್ರೆಸ್ ಎಮ್ಮೆಲ್ಲೆಗಳ ಪೈಕಿ ಉಮೇಶ್ ಜಾಧವ್ ಕೂಡ ಇದ್ದರು. ಅವರಿಗೆ ಹಣ, ಮಂತ್ರಿಗಿರಿ ಮತ್ತು ಕಲಬುರಗಿ ಲೋಕಸಭೆಯಿಂದ ಖರ್ಗೆ ಎದುರು ನಿಲ್ಲುವುದಕ್ಕೆ ಪಕ್ಷದ ಟಿಕೆಟ್ ಮುಂತಾದ ಆಶ್ವಾಸನೆಗಳನ್ನು ಕೊಟ್ಟು ಕರೆತರಲಾಗಿದೆ. ಹೀಗಿರುವಾಗ ಜಾಧವ್ ಸೋತರೆ ಅವರನ್ನು ಬಿಜೆಪಿ ಮೂಲೆಗುಂಪು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಚಾರಿತ್ರಿಕವಾಗಿ ನೋಡುವುದಾದರೆ ಕಲಬುರಗಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್ನ ಭದ್ರ ಕೋಟೆಯಾಗಿದೆ. ಇಲ್ಲಿ ನಡೆದಿರುವ 18 ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ 16 ಚುನಾವಣೆಗಳಲ್ಲಿ ಗೆದ್ದಿದೆ. 1996ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಖಮರ್-ಉಲ್ ಇಸ್ಲಾಂ ಹಾಗೂ 1998ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸವರಾಜ ಪಾಟೀಲ್ ಸೇಡಂ ಇಲ್ಲಿಂದ ಜಯಗಳಿಸಿದ್ದರು.
ಬಿಜೆಪಿ ಮತ್ತು ಸಂಘಪರಿವಾರ ಎಷ್ಟೇ ಪ್ರಯತ್ನಗಳನ್ನು ನಡೆಸಿದರೂ ಇಲ್ಲಿ ಇನ್ನೂ ಗಟ್ಟಿಯಾಗಿ ನೆಲೆಯೂರುವುದಕ್ಕೆ ಸಾಧ್ಯವಾಗಿಲ್ಲ. 1992ರಲ್ಲಿ ಬಾಬ್ರಿ ಮಸೀದಿ ಧ್ವಂಸದ ನಂತರ ದೇಶಾದ್ಯಂತ ಕೋಮುಗಲಭೆಗಳು ಭುಗಿಲೆದ್ದರೂ ಕಲಬುರಗಿ ಮತ್ತು ಹೈದರಾಬಾದ್ ಕರ್ನಾಟಕ ಶಾಂತವಾಗಿಯೇ ಇತ್ತು. ಅದಕ್ಕೆ ಕಾರಣಗಳು ಹಲವು. ಮೊದಲನೆಯದಾಗಿ, ಶರಣ, ದಾಸ, ಸೂಫಿಗಳಂತಹ ಪ್ರೇಮಪ್ರಧಾನ ಪರಂಪರೆಗಳು ಈ ಭಾಗದಲ್ಲಿ ಹುಟ್ಟಿ ಬೆಳೆದಿರುವುದರಿಂದ ಅವುಗಳ ಪ್ರಭಾವ ಈ ನೆಲದಲ್ಲಿ ಬಹಳ ಗಾಢವಾಗಿದೆ. ಎರಡನೆಯದಾಗಿ, ಪೂರ್ವದಲ್ಲಿ ಈ ಭಾಗ ಹೈದರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದರಿಂದ ಇಲ್ಲಿ ಮುಸ್ಲಿಮರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿದೆ. ಮೂರನೆಯದಾಗಿ, ವೀರೇಂದ್ರ ಪಾಟೀಲ್, ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಮುಂತಾದ ಬಲಿಷ್ಠ ಕಾಂಗ್ರೆಸ್ ನಾಯಕರು ಸೆಕ್ಯೂಲರ್ ಪರಂಪರೆಯನ್ನು ಎತ್ತಿ ಹಿಡಿಯುತ್ತಾ ಬಿಜೆಪಿಯ ಕೋಮುವಾದಿಗಳು ಬೆಳೆಯದಂತೆ ನೋಡಿಕೊಂಡಿದ್ದು. ಈ ಕಾರಣಕ್ಕಾಗಿಯೇ ಬಿಜೆಪಿ ಇಲ್ಲಿ ಬಹುತೇಕ ಚುನಾವಣೆಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ.
2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಖರ್ಗೆಗೆ ಇದು ಸ್ವಲ್ಪ ಕಠಿಣ ಚುನಾವಣೆ ಎಂದೇ ಹೇಳಬಹುದು. ಕೆಲವರ ಪ್ರಕಾರ ಇದು ಖರ್ಗೆಯವರ ಇಡೀ ರಾಜಕೀಯ ಬದುಕಿನಲ್ಲೇ ಅತ್ಯಂತ ಕಠಿಣ ಚುನಾವಣೆಯಾಗಿದೆ ಎಂದೂ ಹೇಳುತ್ತಾರೆ.
2014ರ ಚುನಾವಣೆಯ ಸಮಯದಲ್ಲಿ ಖರ್ಗೆ ಉತ್ತಮ ಸ್ಥಿತಿಯಲ್ಲಿದ್ದರು. ಎರಡು ಬಾರಿ ಕೇಂದ್ರಲ್ಲಿ ಮಂತ್ರಿಗಳಾಗಿ ಹೈದರಾಬಾದ್ ಕರ್ನಾಟಕ್ಕೆ ಮತ್ತು ಅದರಲ್ಲೂ ವಿಶೇಷವಾಗಿ ಕಲಬುರಗಿಗೆ ಬೇಕಾದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇಎಸ್ಐಸಿ ಆಸ್ಪತ್ರೆ ಸ್ಥಾಪನೆ, ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ, ರೈಲು ಮತ್ತು ರಸ್ತೆ ಮಾರ್ಗಗಳ ವಿಸ್ತರಣೆ, ಪೊಲೀಸ್ ತರಬೇತಿ ಶಾಲೆಯ ಸ್ಥಾಪನೆ – ಹೀಗೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಅವರು ಕ್ಷೇತ್ರಕ್ಕಾಗಿ ಮಾಡಿದ್ದರು. ಇದೆಲ್ಲದಕ್ಕೆ ಕಲಶಪ್ರಾಯದಂತೆ ಸಂವಿಧಾನಕ್ಕೆ ತಿದ್ದುಪಡಿ ತಂದು 371ನೇ ವಿಧಿಗೆ ಜೆ ಕಲಮನ್ನು ಸೇರಿಸುವ ಮೂಲಕ ಹೈದರಾಬಾದ್ ಕರ್ನಾಟಕ್ಕೆ ವಿಶೇಷ ಸ್ಥಾನಮಾನ ಕೊಡಿಸುವಲ್ಲಿ ಅವರದ್ದು ವಿಶೇಷ ಶ್ರಮವಿತ್ತು. ಜೊತೆಗೆ, ಅವರು ಕೇಂದ್ರದಲ್ಲಿ ರೇಲ್ವೇ ಮಂತ್ರಿಯಾಗಿದ್ದಾಗ ಯಾದಗಿರಿಯ ಕಡೇಚೂರಿನಲ್ಲಿ ರೈಲು ಭೋಗಿ ತಯಾರಿಕಾ ಕಾರ್ಖಾನೆ ಮತ್ತು ಕಲಬರಗಿ ರೇಲ್ವೆ ವಿಭಾಗಗಳನ್ನೂ ಮಂಜೂರು ಮಾಡಿದ್ದರು. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳ ಕಾರಣಕ್ಕೆ 2014ರಲ್ಲಿ ಇಡೀ ದೇಶದಾದ್ಯಂತ ಮೋದಿ ಅಲೆ ಬೀಸುತ್ತಿದ್ದರೂ ಅದು ಕಲಬುರಗಿಗೆ ತಟ್ಟಿರಲಿಲ್ಲ. ಈ ಅಭಿವೃದ್ಧಿ ಕಾರ್ಯಗಳ ಕಾರಣಕ್ಕೇ ಅವರು 2009ರಲ್ಲಿ ಬಿಜೆಪಿಯ ರೇವು ನಾಯಕ ಬೆಳಮಗಿಯ ಎದುರು ಸುಮಾರು 13,000 ಮತಗಳ ಅಂತರದಲ್ಲಿ ಗೆದ್ದಿದ್ದ ಖರ್ಗೆಯವರು 2014ರಲ್ಲಿ ಅದೇ ವ್ಯಕ್ತಿಯ ವಿರುದ್ಧ 75,000 ಮತಗಳ ಅಂತರದಲ್ಲಿ ಗೆದ್ದರು.
ಆದರೆ, ಈ ಬಾರಿ ಅವರ ಹಾದಿ 2014ರಷ್ಟು ಸುಗಮವಾಗಿಲ್ಲ.
ಮೊದಲನೆಯದಾಗಿ, ಮಾಲಿಕಯ್ಯ ಗುತ್ತೇದಾರ್, ಬಾಬುರಾವ್ ಚಿಂಚನಸೂರ್, ಎ.ಬಿ. ಮಾಲಕರೆಡ್ಡಿಯಂತಹ ಹಿರಿಯ ಕಾಂಗ್ರೆಸ್ ನಾಯಕರೆಲ್ಲಾ ಖರ್ಗೆಯವರ “ಪುತ್ರವ್ಯಾಮೋಹದಿಂದ” ಬೇಸತ್ತು ಕಾಂಗ್ರೆಸ್ ತೊರೆದಿದ್ದಾರೆ. ಖರ್ಗೆಯವರ ಬಲೈಯಂತೆ ದುಡಿದು ಅವರ ಹಲವು ಗೆಲುವುಗಳಲ್ಲಿ ನೆರವಾಗಿದ್ದ ದಲಿತ ನಾಯಕ ಅಂಬರಾಯ ಅಷ್ಟಗಿಯಂತಹ ಅವರ ನಿಷ್ಠರೂ ಕೂಡ ಈಗ ಅವರನ್ನು ತೊರೆದಿದ್ದಾರೆ. ಅವರೆಲ್ಲರ ಅಳಲು ಒಂದೇ. ಖರ್ಗೆಯವರು ತಮ್ಮ ಮಗ ಪ್ರಿಯಾಂಕ್ ಖರ್ಗೆಯನ್ನು ರಾಜಕೀಯವಾಗಿ ಬೆಳೆಸಲು ತಮ್ಮ ರಾಜಕೀಯ ಬದುಕನ್ನು ಚಿವುಟಿದರು ಎಂಬುದು. ಉಮೇಶ್ ಜಾಧವ್ ಆದಿಯಾಗಿ ಕಾಂಗ್ರೆಸ್ ತೊರೆದ ಎಲ್ಲರೂ ಈಗ ಬಿಜೆಪಿಯಲ್ಲಿ ಜೊತೆಗೂಡಿ ಖರ್ಗೆಗೆ ಮೊದಲ ಸೋಲಿನ ರುಚಿಯುಣಿಸಲು ಭಾರಿ ಕಸರತ್ತು ನಡೆಸಿದ್ದಾರೆ. ಇದು ಖರ್ಗೆಯ ಹಾದಿಯನ್ನು ಇನ್ನಷ್ಟು ದುರ್ಗಮಗೊಳಿಸಿದಂತಾಗಿದೆ.
ಎರಡೆನೆಯದಾಗಿ, ಕಲಬುರಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. 2014ರಲ್ಲಿ ಈ ಎಂಟು ಕ್ಷೇತ್ರಗಳಲ್ಲಿ ಏಳು ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಯಲ್ಲಿದ್ದವು. ಅವರ ಗೆಲುವಿಗೆ ಇದೂ ಕೂಡ ಕಾರಣವಾಗಿತ್ತು. ಆದರೆ ಈ ಬಾರಿ ಅವುಗಳ ಸಂಖ್ಯೆ ನಾಲ್ಕಕ್ಕೆ ಇಳಿದಿದೆ. ಗುರುಮಿಠಕಲ್ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಎಮ್ಮೆಲ್ಲೆ ನಾಗನಗೌಡ ಕಂದಕೂರು ಇದ್ದರೂ ಅವರು ಎಷ್ಟರ ಮಟ್ಟಿಗೆ ಮೈತ್ರಿ ಧರ್ಮ ಪಾಲಿಸುತ್ತಾರೆಂಬುದನ್ನು ನಿಖರವಾಗಿ ಹೇಳುವುದು ಕಷ್ಟ. ಆ ಕ್ಷೇತ್ರದಲ್ಲಿ ಖರ್ಗೆ ಮತ್ತು ನಾಗನಗೌಡ ಕಂದಕೂರು ಪಾರಂಪರಿಕ ಎದುರಾಗಳಿಗಳು. ಈಗ ರಾಜ್ಯಮಟ್ಟದಲ್ಲಿ ಮೈತ್ರಿಯಾದ ತಕ್ಷಣ ಅದು ತಳಮಟ್ಟದಲ್ಲೂ ನೈಜ ಮೈತ್ರಿಯಾಗಿ ಮಾರ್ಪಡುತ್ತದೆ ಎಂದು ಖಾತ್ರಿಯಾಗಿ ಹೇಳಲಾಗುವುದಿಲ್ಲ. ಮೊನ್ನೆ ತಾನೆ ಖರ್ಗೆ ಮತ್ತು ಕಂದಕೂರು ಇಬ್ಬರೂ ತಮ್ಮ ವೈಷಮ್ಯವನ್ನು ಬದಿಗಿಟ್ಟು ಜೊತೆಗೂಡಿ ಕೆಲಸಮಾಡುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ. ಆದರೂ ಕಂದಕರೂ ಎಷ್ಟು ಮನಃಪೂರ್ವಕವಾಗಿ ಖರ್ಗೆ ಪರವಾಗಿ ಕೆಲಸ ಮಾಡುತ್ತಾರೆ ಎಂಬುದು ಪ್ರಶ್ನಾರ್ಹವೇ. ಇನ್ನು ಖರ್ಗೆಯೊಂದಿಗೆ ಅಸಮಧಾನ ಹೊಂದಿರುವ ಅನೇಕ ನಾಯಕರು ಕಾಂಗ್ರೆಸ್ಸಿನಲ್ಲೂ ಇದ್ದಾರೆ. ಉದಾಹರಣೆಗೆ, ದಿವಂಗತ ಧರ್ಮಸಿಂಗ್ ಅವರ ಮಗ ಹಾಗೂ ಜೇವರ್ಗಿ ಎಮ್ಮೆಲ್ಲೆ ಅಜಯ್ ಸಿಂಗ್. ಈ ಮೈತ್ರಿ ಸರ್ಕಾರದಲ್ಲಿ ತಮ್ಮನ್ನು ಮಂತ್ರಿ ಮಾಡುತ್ತಾರೆ ಎಂದು ಬಹಳ ಆಸೆ ಇಟ್ಟುಕೊಂಡಿದ್ದರು. ಆದರೆ, ಪ್ರಿಯಾಂಕ್ ಖರ್ಗೆ ಮಂತ್ರಿಯಾದರೆ ಹೊರತು ಅವರಿಗೆ ಆ ಸ್ಥಾನ ಸಿಗಲಿಲ್ಲ. ತನ್ನ ಮಗನನ್ನು ಮಂತ್ರಿ ಮಾಡಿದರೆ ಹೊರತು ತನ್ನನ್ನು ಮಾಡಲಿಲ್ಲ, ತನ್ನ ತಂದೆ ಬದುಕಿದ್ದರೆ ತನಗೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಅವರು ಆಪ್ತರೊಂದಿಗೆ ಖರ್ಗೆ ವಿರುದ್ಧ ತಮ್ಮ ಅಸಮಧಾನ ತೋಡಿಕೊಂಡಿದ್ದಾರೆ. ಅವರೂ ಕೂಡ ಈ ಬಾರಿ ಖರ್ಗೆಯವನ್ನು ಗೆಲ್ಲಿಸಲು ಎಷ್ಟು ಮನಃಪೂರ್ವಕವಾಗಿ ಕೆಲಸ ಮಾಡುತ್ತಾರೆ ಎಂಬುದು ಗೊತ್ತಿಲ್ಲ.
ಖರ್ಗೆಗಿಂತ ಹೆಚ್ಚು ಅಡೆತಡೆಗಳು ಜಾಧವ್ಗೆ ಇವೆ.
ಮೊದಲನೆಯದಾಗಿ, ಕ್ಷೇತ್ರಕ್ಕೆ ಅಥವಾ ಹೈದರಾಬಾದ್ ಕರ್ನಾಟಕ್ಕೆ ತಾನು ಮತ್ತು ತನ್ನ ಪಕ್ಷ ಏನೇನು ಕೊಡುಗೆ ಕೊಟ್ಟಿದೆ, ಏನೆಲ್ಲಾ ಅಭಿವೃದ್ಧಿ ಕೆಲಸ ಮಾಡಿದೆ ಎಂದು ಹೇಳಿಕೊಳ್ಳುವುದಕ್ಕೆ ಖರ್ಗೆ ಬಳಿ ದೊಡ್ಡ ಪಟ್ಟಿಯೇ ಇದೆ. ಆದರೆ, ಜಾಧವ್ ಬಳಿ ತಾನೇನು ಮಾಡಿದ್ದೇನೆ, ನಾನು ಈಗ ಸೇರಿರುವ ಬಿಜೆಪಿ ಪಕ್ಷ ಏನು ಮಾಡಿದೆ ಎಂದು ಹೇಳಿಕೊಳ್ಳುವುದಕ್ಕೆ ಒಂದೇ ಒಂದು ಪ್ರಮುಖ ಸಾಧನೆ ಇಲ್ಲ. ಈ ಕಾರಣದಿಂದಲೇ ಇಡೀ ಚುನಾವಣಾ ಅಭಿಯಾನದುದ್ದಕ್ಕೂ ಖರ್ಗೆಯವರು ತಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನದಟ್ಟು ಮಾಡು ಪ್ರಯತ್ನ ಮಾಡುತ್ತಿದ್ದರೆ ಜಾಧವ್ ಮಾತೆತ್ತಿದರೆ ಮೋದಿ ಮುಖ ನೋಡಿ ಓಟು ಕೊಡಿ ಎಂದು ಕೇಳುತ್ತಿದ್ದಾರೆ.
ಎರಡನೆಯದಾಗಿ, ಇಲ್ಲಿನ ಬಿಜೆಪಿಯಲ್ಲಿ ಜನರ ಮೇಲೆ ಪ್ರಭಾವ ಬೀರಬಲ್ಲ ದೊಡ್ಡ ನಾಯಕನೇ ಇಲ್ಲ. ಇದ್ದಬದ್ದ ನಾಯಕರಲ್ಲಿ ಯಾರೂ ಖರ್ಗೆ ವಿರುದ್ಧ ಕೆಲಸ ಮಾಡುವವರಲ್ಲ. ಕೆಲಸ ಮಾಡುವುದು ದೂರ ಇರಲಿ, ಬಿಜೆಪಿಯ ಬಹಿರಂಗ ಸಭೆಗಳಲ್ಲಿ ಖರ್ಗೆಯವರನ್ನು ವಿಮರ್ಶೆ, ಟೀಕೆ ಮಾಡುವುದಕ್ಕೂ ಅವರು ಮುಂದಾಗುವುದಿಲ್ಲ. ಖರ್ಗೆ ವಿರುದ್ಧ ಈಗ ಬಿಜೆಪಿಯಲ್ಲಿ ಯಾರಾದರೂ ಮಾತಾಡುತ್ತಿದ್ದರೆ ಅಥವಾ ಕೆಲಸ ಮಾಡುತ್ತಿದ್ದರೆ ಅದು ಕಾಂಗ್ರೆಸ್ ತೊರೆದು ಬಿಜೆಪಿಗೆ ವಲಸೆ ಬಂದವರೇ ಹೊರತು ಮೂಲ ಬಿಜೆಪಿಗರಲ್ಲ. ಹಾಗಾಗಿ, ಖುದ್ದು ವಲಸಿಗನಾಗಿರುವ ಜಾಧವ್ ಈಗ ತನ್ನ ಗೆಲುವಿಗೆ ತನ್ನಂತೆ ಕಾಂಗ್ರೆಸ್ ತೊರೆದು ಬಂದ ಇತರ ವಲಸಿಗರನ್ನೇ ಅತಿಯಾಗಿ ನೆಚ್ಚಿಕೊಂಡಿದ್ದಾರೆ. ಆದರೆ, ಅವರೆಲ್ಲರಿಗೆ ಖರ್ಗೆ ಮೇಲೆ ಸಿಟ್ಟಿರುವುದು ನಿಜವಾದರೂ ಇನ್ನೊಬ್ಬರನ್ನು ಗೆಲ್ಲಿಸುವುದಕ್ಕೆ ತಾವೇಕೆ ಮೈಕೈ ಹಣ್ಣು ಮಾಡಿಕೊಳ್ಳಬೇಕು ಎಂದೂ ಅವರು ಆಲೋಚಿಸುತ್ತಿದ್ದಾರೆ.
ಮೂರನೆಯದಾಗಿ, ಜಾಧವ್ ಎರಡು ಬಾರಿ ಶಾಸಕನಾಗಿ ಗೆದ್ದು ಬಂದ ಚಿಂಚೋಳಿ ವಿಧಾನಸಭಾ ಕ್ಷೇತ್ರ ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಹಾಗಾಗಿ, ಆ ಕ್ಷೇತ್ರದಲ್ಲಿ ಅವರಿಗೆ ಎಷ್ಟೇ ಬೆಂಬಲಿಗರಿದ್ದರೂ, ಅಲ್ಲಿನ ಜನ ಇವರನ್ನು ಎಷ್ಟೇ ಇಷ್ಟಪಟ್ಟರೂ ಅದ್ಯಾವುದೂ ಇವರಿಗೆ ಉಪಯೋಗಕ್ಕೆ ಬರುವುದಿಲ್ಲ.
ನಾಲ್ಕನೆಯದಾಗಿ, ಉಮೇಶ್ ಜಾಧವ್ ತಾವು ಲಂಬಾಣಿ ಸಮುದಾಯದ ನಾಯಕ ಎಂದು ಬಿಂಬಿಸಿಕೊಳ್ಳುತ್ತಾ ಲಂಬಾಣಿ ಮತಗಳನ್ನು ಸೆಳೆಯುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಕೂಡ ಪ್ರತಿತಂತ್ರ ರೂಪಿಸಿ ಇವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಿದ್ದಂತೆಯೇ ಬಿಜೆಪಿಯಲ್ಲಿದ್ದ ಸುಭಾಷ್ ರಾಥೋಡ್ ಥರದ ಕೆಲವು ಲಂಬಾಣಿ ನಾಯಕರನ್ನು ತನ್ನತ್ತ ಸೆಳೆದುಕೊಂಡಿದೆ. ಅಲ್ಲದೇ ಹಿಂದಿನ ಎರಡು ಲೋಕಸಭಾ ಚುನಾವಣೆಯಲ್ಲಿ ಖರ್ಗೆಯ ವಿರುದ್ಧ ಬಿಜೆಪಿಯಿಂದ ಎರಡು ಬಾರಿ ಸ್ಪರ್ಧಿಸಿ ಸೋತಿದ್ದ ಲಂಬಾಣಿ ನಾಯಕ ರೇವುನಾಯಕ ಬೆಳಮಗಿಯವರು ಈಗ ಬಿಜೆಪಿ ತೊರೆದು ಜೇಡಿಎಸ್ನಲ್ಲಿದ್ದಾರೆ. ರಾಜ್ಯದಲ್ಲಿರುವ ಮೈತ್ರಿಧರ್ಮ ಪರಿಪಾಲನೆಗಾಗಿ ಅವರು ದೇವೇಗೌಡರ ಆಜ್ಞೆಯಂತೆ ಖರ್ಗೆಯನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಇಬ್ಬರೂ ಲಂಬಾಣಿ ನಾಯಕರು ಖರ್ಗೆ ಪರವಾಗಿ ಕೆಲಸ ಮಾಡುತ್ತಿರುವುದರಿಂದ ಉಮೇಶ್ ಜಾಧವ್ ನೆಚ್ಚಿಕೊಂಡಿರುವ ಲಂಬಾಣಿ ಮತಗಳು ಒಡೆದು ಒಂದಿಷ್ಟು ಕಾಂಗ್ರೆಸ್ ಪಾಲಾಗುವುದು ಖಚಿತ.
ಐದನೆಯದಾಗಿ, ಉಮೇಶ್ ಜಾಧವ್ ನೆಚ್ಚಿಕೊಂಡಿರುವ ಲಂಬಾಣಿ ಮತಗಳು ಒಟ್ಟು ಇರೋದೇ 80,000. ಅವುಗಳಲ್ಲಿ ಸುಮಾರು 25,000 ಮತಗಳು ಕ್ಷೇತ್ರದಿಂದ ಹೊರಗೆ ಮುಂಬೈಯಲ್ಲಿ, ಪುಣೆಯಲ್ಲಿ, ಬೆಂಗಳೂರಿನಲ್ಲಿ ಇವೆ. ಕೆಲಸ ಅರಸಿಕೊಂಡು ವಲಸೆ ಹೋಗಿರುವ ಅವರನ್ನು ಚುನಾವಣೆಗೆ ಕರೆಸಬೇಕೆಂದರೆ ಅದು ದುಬಾರಿ ಕೆಲಸವಾಗುತ್ತದೆ. ಉಮೇಶ್ ಜಾಧವರ್ ಅವರ ಲಂಬಾಣಿ ಸಮುದಾಯಕ್ಕೆ ಹೋಲಿಸಿದರೆ 3,00,000 ಮತಗಳಿರುವ ಖರ್ಗೆಯವರ ಹೊಲೆಯ ಸಮುದಾಯ ದೊಡ್ಡದು. ಈ ಸಮುದಾಯದ ಒಂದು ಮತಗಳೂ ಅತ್ತಿತ್ತ ಹೋಗದೇ ಎಲ್ಲವೂ ಖರ್ಗೆಗೆ ಬರುತ್ತವೆ. ಆದರೆ, 1,00,000 ಲಕ್ಷದಷ್ಟಿರುವ ಮಾದಿಗರು ಖರ್ಗೆಗೆ ಓಟು ಹಾಕುವುದು ಕಷ್ಟ. ಸದಾಶಿವ ಆಯೋಗ ವರದಿಯ ವಿಷಯದಲ್ಲಿ ಅವರು ಸ್ಪಷ್ಟ ನಿಲುವು ತಾಳಿಲ್ಲ ಅಥವಾ ಅದನ್ನು ಬೆಂಬಲಿಸಲಿಲ್ಲ ಎಂಬ ಅಸಮಧಾನ ಈ ಸಮುದಾಯದಲ್ಲಿರುವುದು ಇದಕ್ಕೆ ಕಾರಣ. ಮಾದಿಗರಿಗೆ ಒಳಮೀಸಲಾತಿ ಕಲ್ಪಿಸುವ ವಿಷಯ ಕೇಂದ್ರ ಸರ್ಕಾರದ ಅಂಗಳದಲ್ಲಿಯೇ ಇದ್ದರೂ ಸಹ ಅನೇಕ ಮಾದಿಗ ಮುಖಂಡರು ಸಮುದಾಯವನ್ನು ಈ ಬಗ್ಗೆ ಮಾಹಿತಿವಂಚಿತರನ್ನಾಗಿ ಮಾಡಿ ಕೇವಲ ಸದಾಶಿವ ಆಯೋಗವನ್ನೇ ತೋರಿಸುತ್ತಿರುವುದರಿಂದ ಸಹಜವಾಗಿ ಮಾದಿಗರು ಅದನ್ನೇ ನಂಬಿಕೊಂಡಿದ್ದಾರೆ. ಹಿಂದಿನ ಕಾಂಗ್ರೆಸ್ ಸಿದ್ದರಾಮಯ್ಯ ಸರ್ಕಾರ ಈ ವಿಷಯದಲ್ಲಿ ಮೀನಾಮೇಷ ಎಣಿಸಿದ್ದೂ ಇದಕ್ಕೆ ಕಾರಣ.
ಆರನೆಯದಾಗಿ, 2,00,000ದಷ್ಟಿರುವ ಮುಸ್ಲೀಮ್ ಮತಗಳು ಸಾರಾಸಗಟಾಗಿ ಖರ್ಗೆ ಜೋಳಿಗೆಗೆ ಬೀಳುತ್ತವೆ. 2,25,000 ದಷ್ಟಿರುವ ಕಬ್ಬಲಿಗರು ಮೂಲತಃ ಕಾಂಗ್ರೆಸ್ ಬೆಂಬಲಿಗರು. ಆದರೆ, ಈ ಬಾರಿ ಅವರ ನಾಯಕರಲ್ಲೊಬ್ಬನಾದ ಬಾಬುರಾವ್ ಚಿಂಚನಸೂರ್ ಖರ್ಗೆಯೊಂದಿಗೆ ಮುನಿಸಿಕೊಂಡು ಬಿಜೆಪಿ ಸೇರಿರುವುದರಿಂದ ಒಂದಿಷ್ಟು ಮತಗಳು ಬಿಜೆಪಿಗೆ ಹೋದರೂ ಹೋಗಬುದು. ಇನ್ನು ಕುರುಬರ 1,50,000 ಮತಗಳಿದ್ದು ಅವುಗಳಲ್ಲಿ ಬಹುತೇಕವು ಸಿದ್ಧರಾಮ್ಯನ ಕಾರಣಕ್ಕೆ ಕಾಂಗ್ರೆಸ್ಗೆ ಹೋಗುತ್ತವೆ.
ಅಂತಿಮವಾಗಿ ನಿರ್ಣಾಯಕವಾಗಿರುವುದು ಲಿಂಗಾಯತರು ಯಾರಿಗೆ ಓಟು ಹಾಕುತ್ತಾರೆ ಎಂಬುದು. ಈ ಸಮುದಾಯ ದೊಡ್ಡ ಮಟ್ಟದಲ್ಲಿ ಬಿಜೆಪಿ ಕಡೆ ವಾಲಿರುವುದು ನಿಜವಾದರೂ ಖರ್ಗೆಯವರು ಇಲ್ಲಿಯ ತನಕ ಈ ಸಮುದಾಯದ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗುತ್ತಾ ಬಂದಿದ್ದಾರೆ. “ಮೋದಿ ಅಲೆ” ಈ ಸಮುದಾಯದ ಯುವಕರ ನಡುವೆ ಜೋರಾಗಿಯೇ ಬೀಸುತ್ತಿದೆ. ಹಿರಿಯ ತಲೆಗಳು ಖರ್ಗೆ ಪರ ನಿಲ್ಲಬಹುದು. ಈ ಸಮುದಾಯದ ಮುಕ್ಕಾಲು ಭಾಗ ಬಿಜೆಪಿಗೆ ಹೋದರೂ ಖರ್ಗೆಯವರು ಕಾಲು ಭಾಗವನ್ನಾದರೂ ಸೆಳೆಯುವಲ್ಲಿ ಯಶಸ್ವಿಯಾಗುತ್ತಾರೆ.
ಸಾರಾಂಶೀಕರಿಸಿ ಹೇಳುವುದಾದರೆ, ಈಗಿನ ಪರಿಸ್ಥಿತಿಯಲ್ಲಿ ಇಬ್ಬರೂ ಕಠಿಣ ಸ್ಪರ್ಧೆಯಲ್ಲಿದ್ದಂತೆ ಕಾಣುತ್ತಿದೆಯಾದರೂ ಸತತವಾಗಿ ಹನ್ನೊಂದು ಚುನಾವಣೆಗಳನ್ನು ಗೆದ್ದಿರುವ ಖರ್ಗೆಯವರನ್ನು ಸೋಲಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅರ್ಧ ಶತಮಾನದ ತಮ್ಮ ರಾಜಕೀಯ ಬದುಕಿನಲ್ಲಿ ಎಲೆಕ್ಷನ್ ಮ್ಯಾನೇಜ್ಮ್ಮೆಂಟ್ ಕೌಶಲ್ಯಗಳನ್ನು ಅವರು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ. ಹಾಗಾಗಿ, ಖರ್ಗೆ ಗೆಲ್ಲುವ ಸಂಭವ ಹೆಚ್ಚಿದೆ. ಆದರೆ, ಗೆಲುವಿನ ಅಂತರ ಕಳೆದಬಾರಿಗಿಂತ ಸ್ವಲ್ಪ ಕಡಿಮೆಯಾಗಬಹುದಷ್ಟೆ. (eom)
ಕ್ಷೇತ್ರದ ಮುಖ್ಯಾಂಶಗಳು
- ಮೊದಲನೇ ಲೋಕಸಭೆಯಲ್ಲಿ ಸ್ವಾಮಿ ರಮಾನಂದ ತೀರ್ಥರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಈ ಕ್ಷೇತ್ರವು ಆಗ ಹೈದರಾಬಾದ್ ರಾಜ್ಯದ ಭಾಗವಾಗಿತ್ತು.
- 1999ರಿಂದ ಕಾಂಗ್ರೆಸ್ ಸತತವಾಗಿ ನಾಲ್ಕು ಬಾರಿ ಇಲ್ಲಿ ಜಯ ಸಾಧಿಸಿದೆ.
- ಇದು ಕಾಂಗ್ರೆಸ್ ಪಕ್ಷ ಭದ್ರ ನೆಲೆಯಾಗಿದ್ದು ಇಲ್ಲಿ ನಡೆದಿರುವ 18 ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ 16 ಚುನಾವಣೆಗಳಲ್ಲಿ ಗೆದ್ದಿದೆ. 1996ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಖಮರ್-ಉಲ್ ಇಸ್ಲಾಂ ಹಾಗೂ 1998ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸವರಾಜ ಪಾಟೀಲ್ ಸೇಡಂ ಇಲ್ಲಿಂದ ಜಯಗಳಿಸಿದ್ದರು.
- ಈ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿರುವ ಏಕೈಕ ವ್ಯಕ್ತಿಯೆಂದರೆ ಕಾಂಗ್ರೆಸ್ಸಿನ ಮಹಾದೇವಪ್ಪ ರಾಂಪುರೆ – 1957, 1962 ಮತ್ತು 1967 ರಲ್ಲಿ.
- ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಎನ್. ಧರ್ಮಸಿಂಗ್ ಅವರು ಈ ಕ್ಷೇತ್ರದಿಂದ 1980ರಲ್ಲಿ ಗೆದ್ದರಾದರೂ ಲೋಕಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ಮುನ್ನವೇ ಇಂದಿರಾ ಗಾಂಧಿವರ ಆಜ್ಞೆಯಂತೆ ರಾಜೀನಾಮೆ ಕೊಟ್ಟು ಅದೇ ವರ್ಷ ದೆಹಲಿಯಲ್ಲಿ ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿಯವರ ವಿರುದ್ಧ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಂ. ಸ್ಟೀಫನ್ ಅವರನ್ನು ಇಲ್ಲಿಂದ ಉಪಚುನಾವಣೆಗೆ ನಿಲ್ಲುವುದಕ್ಕೆ ಅನುವು ಮಾಡಿಕೊಟಿದ್ದರು. ಅದೇ ವರ್ಷ ನಡೆದ ಉಪಚುನಾವಣೆಯಲ್ಲಿ ಸ್ಟೀಫನ್ ಅವರು 1,50,665 ಮತಗಳನ್ನು (62.33%) ಗಳಿಸುವ ಮೂಲಕ 76,985 ಮತಗಳನ್ನು (31.84%) ಪಡೆದಿದ್ದ ತಮ್ಮ ಸಮೀಪದ ಪ್ರತಿಸ್ಪರ್ಧಿ ಜನತಾ ಪಕ್ಷದ ಬಾಪುಗೌಡ ದರ್ಶನಾಪುರ ಅವರ ವಿರುದ್ಧ ಅಮೋಘ ಜಯ ಸಾಧಿಸಿದರು.
ಕ್ಷೇತ್ರದಲ್ಲಿ ಬರುವ ವಿಧಾನಸಭಾ ಮತಕ್ಷೇತ್ರಗಳು
- 34-ಅಫಜಲ್ಪುರ (ಕಾಂಗ್ರೆಸ್)
- 35-ಜೇವರರ್ಗಿ (ಕಾಂಗ್ರೆಸ್)
- 39-ಗುರುಮಿಠಕಲ್ (ಜೆಡಿಎಸ್)
- 40-ಚಿತ್ತಾಪುರ (ಕಾಂಗ್ರೆಸ್)
- 41-ಸೇಡಂ (ಬಿಜೆಪಿ)
- 43-ಗುಲ್ಬರ್ಗಾ ಗ್ರಾಮೀಣ (ಬಿಜೆಪಿ)
- 44-ಗುಲ್ಬರ್ಗಾ ದಕ್ಷಿಣ (ಬಿಜೆಪಿ)
- 45-ಗುಲ್ಬರ್ಗಾ ಉತ್ತರ (ಕಾಂಗ್ರೆಸ್)
ಮತದಾರರು
ಒಟ್ಟು ಮತದಾರರು: 19,20,977
ಪುರುಷರು: 9,68,242
ಮಹಿಳೆಯರು: 9,52,735
ಕಳೆದ ಬಾರಿಯ ಮತದಾನ ಪ್ರಮಾಣ: 57.90%