ಬಹಳಷ್ಟು ಜನರಿಗೆ ಧರ್ಮದ ನೈಜ ಅರ್ಥವೆ ತಿಳಿದಿರುವುದಿಲ್ಲ. ಮನುಷ್ಯ ಜೀವನದ ಒಳಿತಿನ ಆಶಯಗಳನ್ನು ಅನುಷ್ಠಾನಗೊಳಿಸಿಕೊಳ್ಳಲು ಮನುಷ್ಯನೆ ಕಂಡುಕೊಂಡ ಒಂದು ವ್ಯವಸ್ಥೆಯನ್ನು ಕಾಲಾನಂತರಲ್ಲಿ ಧರ್ಮ ಎಂದು ಹೆಸರಿಸಲಾಯಿತು. ಆದರೆ ಸಾಮಾನ್ಯ ಜನರು ಧರ್ಮದ ನೈಜ ಜಿಜ್ಞಾಸೆಯನ್ನು ಮಾಡುವಷ್ಟು ಪ್ರಬುದ್ಧರಾಗಿರಲಾರದ ಕಾರಣ ಅದು ಇಂದು ಅನೇಕ ವಿಕೃತಾರ್ಥಗಳನ್ನು ಪ್ರತಿನಿಧಿಸಹತ್ತಿದೆ.
ಜಗತ್ತಿನಲ್ಲಿ ಪ್ರಥಮವಾಗಿ ಜನ್ಮತಳೆದದ್ದು ದ್ರಾವಿಡರ ಆಸ್ಮಿತೆ ಆದಿಯೋಗಿ ಶಿವ ಸ್ಥಾಪಿಸಿದ ಶೈವ ಧರ್ಮವಾದರೂ ಅಧಿಕೃತ ಸಂವಿಧಾನಿಕ ಮಾನ್ಯತೆ ಪಡೆದದ್ದು ಕ್ರೈಸ್ತ ಧರ್ಮ. ಆನಂತರ ಇಸ್ಲಾಂ ಧರ್ಮ. ತದನಂತರ ಉಳಿದವುಗಳು. ಅಂದರೆ ಈ ಮಾನವ ಜಗತ್ತಿನ ಪ್ರಪ್ರಥಮ ಧರ್ಮವೆಂದರೆ ಆದಿಯೋಗಿ ಶಿವ ಸ್ಥಾಪಿಸಿದ ಅಪ್ಪಟ ಭಾರತೀಯ ನೆಲದ ಶೈವ ಧರ್ಮ. ಭಾರತದ ಮಟ್ಟಿಗೆ ದ್ರಾವಿಡರ ಶೈವ ಧರ್ಮದ ಜೊತೆಜೊತೆಗೆ ಇಲ್ಲಿನ ಅಸಂಖ್ಯಾತ ಬುಡಕಟ್ಟು ಜನಾಂಗಗಳು ಅನುಸರಿಸುತ್ತ ಬರುತ್ತಿದ್ದ ಹಾಗು ಆಚರಿಸುತ್ತಿದ್ದದ್ದು ಜನಪದೀಯ ಸಮುದಾಯಗಳ ಧರ್ಮ. ವಲಸಿಗ ಆರ್ಯರ ಅತಿಕ್ರಮಣ ಪೂರ್ವದಲ್ಲಿ ಭರತ ಖಂಡದ ಜನರು ಆಚರಿಸುತ್ತಿದ್ದ ಶೈವ ಮತ್ತು ಜನಪದೀಯ ಸಮುದಾಯಗಳ ಧರ್ಮಗಳು ಅಧಿಕ್ರತ ಆಚರಣಾತ್ಮಕ ಸಾಂಸ್ಥಿಕ ಸ್ವರೂಪ ಪಡೆದುಕೊಳ್ಳುವ ಮೊದಲೆ ದುಷ್ಟ ಆರ್ಯರಿಗೆ ಆಹುತಿಯಾಗಿˌ ಅದರಲ್ಲೂ ಶೈವ ಧರ್ಮವು ಆರ್ಯ ಪ್ರಣೀತ ವೈದಿಕ ಕರ್ಮಠರ ಸನಾತನ ಧರ್ಮದ ಭಾಗವಾಗಿದ್ದು ದುರಂತದ ಸಂಗತಿ.
ತದನಂತರ ಬೆರಳೆಣಿಕೆಯ ಸನಾತನಿಗಳು ಬಹುಸಂಖ್ಯಾತ ಭಾರತಿಯರ ತಲೆಯ ಹೇರಿದ್ದ ವೈದಿಕ ಧರ್ಮ ಮುಂದೆ ತನ್ನ ವಿಕ್ರತಿಗಳ ಫಲದಿಂದ ಸಮಾಜದಲ್ಲಿ ವಿದ್ರೋಹ ಹುಟ್ಟಲು ಕಾರಣವಾದುದ್ದರಿಂದ ಬೌದ್ಧ ˌ ಜೈನˌ ಲಿಂಗಾಯತ ಮತ್ತು ಸಿಖ್ ಧರ್ಮಗಳು ಈ ನೆಲದಲ್ಲಿ ಜನ್ಮತಳೆದವು. ಸ್ವತಂತ್ರಪೂರ್ವದಲ್ಲಿ ರಾಜಕೀಯ ಕಾರಣಗಳಿಂದ ಸಂಸ್ಥಾಪಕರಿಲ್ಲˌ ಸಾಂಸ್ಥಿಕ ಸ್ವರೂಪವಿಲ್ಲದˌ ಐತಿಹಾಸಿಕ ಹಿನ್ನೆಲೆಯೂ ಇಲ್ಲದ ಹಿಂದೂ ಎನ್ನುವ ಕಾಲ್ಪನಿಕ ಧರ್ಮದ ಪ್ರಸ್ಥಾಪ ಸನಾತನಿಗಳು ತೇಲಿಬಿಟ್ಟರು. ದುರಂತವೆಂದರೆ ಅದೇ ಸ್ವತಂತ್ರ ಭಾರತದಲ್ಲಿ ಸಂವಿಧಾನ ಮಾನ್ಯತೆಪಡೆದ ಧರ್ಮವಾಗಿದ್ದು. ಆನಂತರ ಬೌದ್ಧˌ ಸಿಖ್ˌ ಜೈನ ಧರ್ಮಗಳು ಅಧಿಕೃತ ಧರ್ಮಗಳಾಗಿ ಸಂವಿಧಾನ ಮಾನ್ಯತೆ ಪಡೆದವು. ಆದರೆ ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆ ಇಂದಿನವರೆಗೆ ನಿಲುಕದಂತಾಗಿದೆ. ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆಯ ಹೋರಾಟ ಆರಂಭವಾಗಿ ಸರಿಸುಮಾರು ಒಂದು ಶತಮಾನ ಕಳೆಯಿತು. ಕಳೆದ ಒಂದು ದಶಕದಲ್ಲಿ ಮೂರು ಬಾರಿ ಕೇಂದ್ರ ಸರಕಾರದಿಂದ ತಿರಸ್ಕ್ರತಗೊಂಡಿರುವುದು ನೋಡಿದರೆ ಆ ಧರ್ಮದೊಳಗಿರುವ ಉದಾತ್ತ ತತ್ವಗಳಿಂದ ಸನಾತನಿಳು ಹೇಗೆ ಕಂಗಾಲಾಗಿದ್ದಾರೆಂದು ಊಹಿಸಬಹುದಾಗಿದೆ.
ಲಿಂಗಾಯತ ಧರ್ಮ ಸಂವಿಧಾನ ಮಾನ್ಯತೆಗಾಗಿ ಹೋರಾಟ ಆರಂಭವಾದ ಕೂಡಲೆ ಲಿಂಗಾಯತ ವಿರೋಧಿಗಳು ಹೋರಾಟದ ಮುಂಚೂಣಿ ನಾಯಕರು ಹಾಗೂ ಮಠಾಧೀಶರನ್ನು ಹೆದರಿಸುವˌ ಬೆದರಿಸುವ ಮತ್ತು ಕೆಲವೊಮ್ಮೆ ಕೊಲೆ ಬೆದರಿಕೆಗಳನ್ನೊಡ್ಡುವ ಮತ್ತು ಯಾವುದಕ್ಕೂ ಬಗ್ಗದಿದ್ದಾಗ ಚಾರಿತ್ಯಹರಣ ಮಾಡುವˌ ಅಪಪ್ರಚಾರ ಮಾಡುವ ಮಟ್ಟಿಗಿನ ಹತಾಷೆಯ ವರ್ತನೆ ಬಸವ ವಿರೋಧಿಗಳು ಮಾಡುತ್ತ ಬಂದರು. ಅವರು ತಡೆಯೊಡ್ಡಿದಷ್ಟು ಚಳುವಳಿ ದಿನದಿಂದದಿನಕ್ಕೆ ತೀವ್ರತೆ ಪಡೆಯುತ್ತ ಸಾಗಿತು. ಇದು ಪಟ್ಟಭದ್ರ ಶಕ್ತಿಗಳ ಜಂಘಾಬಲವನ್ನೆ ಉಡುಗಿಸಲಾರಂಭಿಸಿತು. ಆಗ ಈ ದುಷ್ಟಶಕ್ತಿಗಳು ಚಳುವಳಿಗಾರರ ಮೇಲೆ ಹೊರಿಸಲಾರಂಭಿಸಿದ ಆರೋಪವೆಂದರೆ ‘ಧರ್ಮ ಒಡೆಯುತ್ತಿದ್ದಾರೆ’ ಎನ್ನುವುದು. ಅಸಲಿಗೆ ಯಾವ ಧರ್ಮ ಒಡೆಯುತ್ತಿದ್ದಾರೆ ಎಂದು ಕೇಳಿದರೆ ಕೆಲವರು ಹಿಂದೂ ಧರ್ಮವೆಂತಲು ಇನ್ನೂ ಕೆಲವರು ವೀರಶೈವ ಧರ್ಮವೆಂತಲೂ ಬಡಬಡಿಸುವುದನ್ನು ನೋಡಿದ್ದೇವೆ. ಹಲವು ನ್ಯಾಯಾಲಯಗಳ ತೀರ್ಪು ಮತ್ತು ಐತಿಹಾಸಿಕ ಸತ್ಯಗಳ ಪ್ರಕಾರ ಭಾರತದಲ್ಲಿ ಹಿಂದೂ ಎನ್ನುವ ಧರ್ಮವೊಂದರ ಅಸ್ತಿತ್ವವೆ ಇರುವುದಿಲ್ಲ. ಈ ಭೂಭಾಗದಲ್ಲಿ ಜೀವಂತವಿರುವ ನಾಗರಿಕತೆ ಮತ್ತು ಜೀವನ ಶೈಲಿಯನ್ನು ಹಿಂದೂ ಎಂದು ಗುರುತಿಸಸ್ತಿಲಾಗಿದ್ದು ಅದೊಂದು ಇಸ್ಲಾಂˌ ಕ್ರೈಸ್ತ ˌ ಬುದ್ಧ ˌ ಜೈನˌ ಲಿಂಗಾಯತ ಮತ್ತು ಸಿಖ್ಖ ಧರ್ಮಗಳಂತೆ ಸಾಂಸ್ಥಿಕ ಸ್ವರೂಪದ ಧರ್ಮವಲ್ಲ.

ಮತ್ತೊಂದು ಕಡೆ ವೀರಶೈವವೆನ್ನುವುದು ಪ್ರಾಚೀನ ಶೈವ ಧರ್ಮದ ಸಪ್ತಶೈವಗಳಲ್ಲಿ ಬರುವ ಒಂದು ವ್ರತವಾಗಿದ್ದು ಅದೊಂದು ಮತವಾಗಿ ಕಾಲಾನಂತರದಲ್ಲಿ ವೈದಿಕರ ಸನಾತನ ಪರಂಪರೆಯ ಭಾಗವಾಗಿ ಗುರುತಿಸಿಕೊಂಡಿತು. ಈ ಸನಾತನ ವೈದಿಕ ಪರಂಪರೆಯ ಭಾಗವಾಗಿದ್ದ ಶೈವ ಮತಸ್ಥರ ಮನೆಯಲ್ಲಿ ಜನಿಸಿದ್ದ ಬಸವಣ್ಣನವರು ಅಲ್ಲಿನ ಕ್ರೂರˌ ಅಮಾನುಷ ಆಚರಣೆಗಳನ್ನು ವಿರೋಧಿಸಿ ಹಗುರವಾದ ಕರ್ಮಪ್ರಧಾನ ಮೂರೆಳೆಯ ದಾರವನ್ನು ಕಿತ್ತೆಸೆದು ಅರುಹಿನ ಕುರುಹಾದ ಇಷ್ಟಲಿಂಗವೆಂದ ಘನವಸ್ತುವನ್ನು ಹೊತ್ತ ತೂಕದ ಕಾಯಕ ಪ್ರಧಾನ ಶಿವದಾರವನ್ನು ಅವಿಷ್ಕರಿಸಿ ಕೊರಳಲ್ಲಿ ಕಟ್ಟಿಕೊಂಡವರು. ಬಸವಣ್ಣನವರು ಆರಂಭಿಸಿದ ಈ ಚಳುವಳಿಯು ಸಮಾನತೆ ಸಾರುವ ವಚನ ಚಳುವಳಿಯಾಗಿ ಗುರುತಿಸಿಕೊಂಡು ತನ್ನ ವಿಭಿನ್ನ ಆಚರಣೆಗಳ ಮೂಲಕ ಪ್ರಗತಿಪರ ಲಿಂಗಾಯತ ಧರ್ಮವಾಗಿ ಜನ್ಮತಳೆಯಿತು. ಅಂದರೆ ಲಿಂಗಾಯತವು ಯಾವುದೇ ಧರ್ಮದ ಭಾಗವಾಗಿರದೆ ಅಂದಿನ ದಿನಮಾನದ ಶೋಷಣೆಯ ವಿರುದ್ಧ ಸಿಡಿದೆದ್ದು ಹುಟ್ಟಿಕೊಂಡ ಒಂದು ಸಂಪೂರ್ಣ ಹೊಸ ವ್ಯವಸ್ಥೆ. ಅದು ಯಾವುದೇ ಒಂದು ಧರ್ಮವನ್ನು ಒಡೆದು ಅವತರಿಸದೆ ತನ್ನದೆ ವಿಚಾರಧಾರೆಗಳನ್ನು ಪ್ರತಿಷ್ಠಾಪಿಸುವ ಮೂಲಕ ಮೈದಳೆದ ಒಂದು ನೈಸರ್ಗಿಕ ಧರ್ಮ.
ಹನ್ನೆರಡನೇ ಶತಮಾನಗಳಷ್ಟು ಹಿಂದೆ ಬಸವಣ್ಣನವರ ನೇತ್ರತ್ವದಲ್ಲಿ ಅಸಂಖ್ಯಾತ ಶರಣರು ಕಲ್ಯಾಣದಲ್ಲಿ ಸೇರಿ ಹುಟ್ಟುಹಾಕಿದ ಲಿಂಗಾಯತ ಧರ್ಮದ ಮೂಲ ಅವಯವಗಳೆಂದರೆ ಶ್ರಮಸಂಸ್ಕ್ರತಿಯನ್ನು ಪ್ರತಿನಿಧಿಸುವ ತಳ ಸಮುವರ್ಗದ ಜನಪದೀಯ ಸಮುದಾಯ. ಈಗ ಶರಣರು ಅಂದು ಸ್ಥಾಪಿಸಿದ ಲಿಂಗಾಯತವೆಂದ ವ್ಯವಸ್ಥೆಗೆ ಧರ್ಮಸ್ಥರದ ಸಂವಿಧಾನ ಮಾನ್ಯತೆ ಮಾತ್ರ ಅಗತ್ಯವಿದ್ದುˌ ಅದನ್ನು ಪಡೆಯುದಕ್ಕೋಸ್ಕರ ಚಳುವಳಿ ಆರಂಭವಾಗಿದೆ. ಅದನ್ನು ಯಾವುದೋ ಅಸ್ಥಿತ್ವದಲ್ಲಿಲ್ಲದ ಧರ್ಮ ಒಡೆಯುವ ಕೆಲಸ ಎಂದು ಪಟ್ಟಭದ್ರರು ಬೊಬ್ಬೆ ಹಾಕುತ್ತಿರುವುದು ಅವರ ಪರಾವಲಂಬಿ ಜೀವನ ಕ್ರಮದ ಅಸ್ಥಿತ್ವಕ್ಕೆ ಒದಗಬಹುದಾದ ಭಯದಿಂದ ಮಾತ್ರ. ಕಲ್ಯಾಣದಲ್ಲಿ ಬಸವಾದಿ ಶರಣರು ಅಂದು ಆರಂಭಿಸಿದ ಈ ಲಿಂಗಾಯತವೆಂಬ ವಚನ ಚಳುವಳಿಯನ್ನು ಕೂಡ ಪಟ್ಟಭದ್ರ ವೈದಿಕ ಕರ್ಮಠರು ಹೀಗೆಯೆ ವಿರೋಧಿಸಿದ್ದರು. ಈಗ ಸಂವಿಧಾನ ಮಾನ್ಯತೆಯ ಹಕ್ಕೊತ್ತಾಯ ಚಳುವಳಿಯನ್ನು ಧರ್ಮ ಒಡೆಯುವ ಕೆಲಸವೆಂದು ಹಲಬುತ್ತಿರುವವರು ಕೂಡ ಅದೇ ವೈದಿಕ ಕರ್ಮಠರ ಸಂತಾನಗಳು. ಶರಣರು ಹುಟ್ಟುಹಾಕಿದ್ದು ಲಿಂಗಾಯತವೆನ್ನುವ ಒಂದು ಹೊಸ ಧರ್ಮˌ ಅದರ ಸಂವಿಧಾನಿಕ ಮಾನ್ಯತೆ ಇಂದಿನ ಅಸಂಖ್ಯಾತ ಬಸವಾನುಯಾಯಿಗಳ ಬೇಡಿಕೆ. ಇದರಲ್ಲಿ ಇಲ್ಲದೆ ಇರುವ ಧರ್ಮಗಳನ್ನು ಒಡೆಯುವ ಪ್ರಸಂಗವೇ ಉದ್ಭವಿಸುವುದಿಲ್ಲ. ಹಾಗಾಗಿ ಈ ಧರ್ಮ ವಿಭಜನೆಯ ಆರೋಪವು ಸಮಾಜಘಾತುಕ ಪಟ್ಟಭದ್ರ ಶಕ್ತಿಗಳ ವ್ರತಾ ಪ್ರಲಾಪವಷ್ಟೆ.
ಲಿಂಗಾಯತ ಧರ್ಮವು ಸನಾತನ ಚತುರ್ವರ್ಣಧರ್ಮದಹೆಸರಲ್ಲಿ ಜನರನ್ನು ಒಡೆದದ್ದು ವಿರೋಧಿಸಿ ಎಲ್ಲರನ್ನು ಒಟ್ಟಗೂಡಿಸಲೆಂದೇ ಜನಿಸಿದೆ. ಅಂದರೆ ಲಿಂಗಾಯತ ಧರ್ಮವು ಸನಾತನ ವೈದಿಕರ ಧರ್ಮ ವಿಭಜನೆಯನ್ನು ವಿರೋಧಿಸುತ್ತದೆ. ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮವು ವಿವಿಧ ಕಾಯಕ ಆಧಾರಿತ ಸಮುದಾಯಗಳನ್ನೆಲ್ಲ ಒಂದೇ ಸೂರಿನಡಿಯಲ್ಲಿ ಒಟ್ಟುಗೂಡಿಸುತ್ತದೆ ಹೊರತು ವಿವಿಧ ವರ್ಣˌ ಜಾತಿಗಳ ಹೆಸರಲ್ಲಿ ಒಡೆಯುವುದಿಲ್ಲ. ಅಂದು ಅನುಭವ ಮಂಟಪದಲ್ಲಿ ಎಲ್ಲ ಸಮುದಾಯಗಳು ಸೇರಿ ವೈಚಾರಿಕ ಚಿಂತನೆ ಮಾಡಿದಂತೆ ಇಂದು ಲಿಂಗಾಯತ ಧಾರ್ಮಿಕ ಚಳುವಳಿಯಲ್ಲಿ ಸಕಲ ಸಮುದಾಯದ ಜನರೆಲ್ಲ ಸಹೋದರತೆಯ ಭಾವದಿಂದ ಆ ಗತವೈಭವವನ್ನು ಮರುಸ್ಥಾಪಿಸಲು ಸೇರಿದ್ದಾರೆ. ಭಾರತದಲ್ಲಿ ಒಡೆಯುವ ಕೆಲಸವೇನಾದರೂ ಇದ್ದರೆ ಅದು ಸನಾತನ ಕರ್ಮಠ ವೈದಿಕರ ಕೆಲಸವೇ ಹೊರತು ಲಿಂಗಾಯತ ಧರ್ಮವರದ್ಥಲ್ಲ ಎನ್ನುವ ಸತ್ಯ ಈ ವಿಘಟನಕಾರಿ ಶಕ್ತಿಗಳು ಅರ್ಥಮಾಡಿಕೊಳ್ಳಬೇಕಿದೆ. ಜಾತಿ ವಿನಾಶ ಮಾಡುವ ಸದುದ್ದೇಶದಿಂದ ಜನ್ಮಿಸಿದ ಲಿಂಗಾಯತ ಧರ್ಮವನ್ನು ವೈದಿಕಶಾಹಿಗಳು ಅಪಹರಿಸಿ ಮತ್ತೆ ನೂರಾರು ಜಾತಿ ಸೃಷ್ಟಿಸುವ ಮೂಲಕ ಲಿಂಗಾಯತ ಧರ್ಮವನ್ನು ಒಡೆದಿದ್ದಾರೆ. ಈಗ ಲಿಂಗಾಯತರೆಲ್ಲ ಆ ಧರ್ಮ ವಿಭಜಕ ವೈದಿಕರ ವಿರುದ್ಧ ಒಗ್ಗಟ್ಟಾಗಿ ನಮ್ಮ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆ ಕೇಳುತ್ತಿದ್ದಾರೆ. ಇದರಿಂದ ಧರ್ಮವನ್ನು ಒಡೆದ ಸನಾತನ ವೈದಿಕ ಕರ್ಮಠರು ಕಂಗಾಲಾಗಿದ್ದಾರೆ.
~ ಡಾ. ಜೆ ಎಸ್ ಪಾಟೀಲ.
ಡಿಸ್ ಕ್ಲೇಮರ್: ಬರೆಹದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಬರೆಹಗಾರರ ವೈಯಕ್ತಿಕ ನಿಲುವುಗಳನ್ನು ಪ್ರತಿಫಲಿಸುತ್ತವೆ