ನವದೆಹಲಿ: ಗುಜರಾತ್ ನಲ್ಲಿ 2002ರಲ್ಲಿ ನಡೆದ ನರಮೇಧದ ವೇಳೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆ ಬಿಲ್ಕಿಸ್ ಬಾನುಗೆ 50 ಲಕ್ಷ ರೂಪಾಯಿ ಪರಿಹಾರ, ವಸತಿ ಹಾಗೂ ಸರ್ಕಾರಿ ಉದ್ಯೋಗವನ್ನು ಗುಜರಾತ್ ಸರ್ಕಾರ ನೀಡಬೇಕೆಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ಇಂದು ನೀಡಿದೆ.
ಅತ್ಯಾಚಾರ ಪ್ರಕರಣದ ಸಂಬಂಧ ಭಾಗಿಯಾಗಿರುವ ಭ್ರಷ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು, ಬಾಂಬೆ ಹೈ ಕೋರ್ಟ್ ನಿಂದ ಅಪರಾಧಿ ಎಂದು ಘೋಷಿಸಲ್ಪಟ್ಟ ಐಪಿಎಸ್ ಅಧಿಕಾರಿಗೆ ಎರಡು ದರ್ಜೆ ಹಿಂಬಡ್ತಿ ನೀಡುವಂತೆಯೂ ಗುಜರಾತ್ ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ.
ಅಲ್ಲದೇ, ಪ್ರತಿ ಅಪರಾಧಿಯು ಸಂತ್ರಸ್ತೆಗೆ ತಲಾ 55 ಸಾವಿರ ದಂಡ ಪಾವತಿಸಬೇಕು, ಈ ಹಣವು ಬಿಲ್ಕಿಸ್ ಬಾನು ಪರಿಹಾರ ಹಣಕ್ಕೆ ಸೇರಿಸಲಾಗುವುದು ಎಂದು ಕೋರ್ಟ್ ತಿಳಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಧೀಶ ರಂಜನ್ ಗೊಗೋಯ್ ನೇತೃತ್ವದಲ್ಲಿ ನ್ಯಾ. ದೀಪಕ್ ಗುಪ್ತಾ ಮತ್ತು ಸಂಜೀವ್ ಖನ್ನಾ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.
ಈ ಹಿಂದೆ ಕೋರ್ಟ್ ಬಾನು ಅವರಿಗೆ ಘೋಷಿಸಿದ್ದ 5 ಲಕ್ಷ ರೂ. ಪರಿಹಾರವನ್ನು ತಿರಸ್ಕರಿಸಿದ್ದರು ಹಾಗೂ ದೇಶಕ್ಕೆ ಮಾದರಿಯಾಗುವಂಥ ಪರಿಹಾರವನ್ನು ರಾಜ್ಯ ಸರ್ಕಾರ ನೀಡಬೇಕೆಂದು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು.
ಐಪಿಎಸ್ ಅಧಿಕಾರಿ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿರುವ ಭ್ರಷ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಗುಜರಾತ್ ಸರ್ಕಾರ ಎರಡು ವಾರದಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಹಿಂದೆಯೇ ಸೂಚನೆ ನೀಡಿತ್ತು.
ಅಲ್ಪಸಂಖ್ಯಾತ ಸಮುದಾಯದ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ಕುಟುಂಬಸ್ಥರನ್ನು ಕೊಂದ 11 ಅಪರಾಧಿಗಳಿಗೆ 2008ರ ಜನವರಿ 21ರಂದು ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಹಾಗೂ ಓರ್ವ ಪೊಲೀಸ್ ಹಾಗೂ ವೈದ್ಯ ಸೇರಿದಂತೆ ಏಳು ಮಂದಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು.
ತೀರ್ಪಿನ ಕುರಿತು ಪ್ರತಿಕ್ರಯಿಸಿರುವ ಬಿಲ್ಕಿಸ್ ಬಾನು, “ಸತ್ಯಕ್ಕೆ ಜಯ ಸಿಕ್ಕಿದೆ ಮತ್ತು ನ್ಯಾಯಾಂಗದ ಮೇಲೆ ಇನ್ನಷ್ಟು ನಂಬಿಕೆ, ಗೌರವ ಹೆಚ್ಚಿದೆ. ನನಗೆ ಪ್ರತೀಕಾರ ತೀರಿಸಕೊಳ್ಳುವ ಹಂಬಲ ಇರಲಿಲ್ಲ, ನ್ಯಾಯ ಬೇಕಿತ್ತು ಅಷ್ಟೇ. ನನ್ನ ಮಗಳು ಸುರಕ್ಷಿತ ಭಾರತದಲ್ಲಿ ಬೆಳೆಯಬೇಕು” ಎಂದು ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಘಟನೆ ಹಿನ್ನೆಲೆ
2002 ರಲ್ಲಿ ಗೋದ್ರಾದಲ್ಲಿ ರೈಲು ಭೋಗಿಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಕರಸೇವಕರು ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯನ್ನು ನೆಪವಾಗಿಸಿಕೊಂಡು ಮೊದಲೇ ತಯಾರಿ ನಡೆಸಿದ್ದ ಗುಜರಾತಿನ ಸಂಘಪರಿವಾರದ ಸಂಘಟನೆಗಳು ವ್ಯಾಪಕ ಹಿಂಸಾಚಾರ, ಜನಾಂಗೀಯ ನರಮೇಧ ನಡೆಸಿದ್ದವು. ಈ ನರಮೇಧದಲ್ಲಿ 2000 ಕ್ಕೂ ಹೆಚ್ಚು ಜನರ ಕಗ್ಗೊಲೆ ನಡೆದಿತ್ತು. 2002ರ ಮಾರ್ಚ್ 3ರಂದು ಅಹಮದಾಬಾದ್ ನ ರಂಧಿಕ್ ಪುರದಲ್ಲಿ ಗುಂಪೊಂದು ಬಿಲ್ಕಿಸ್ ಬಾನು ಅವರ ಕುಟುಂಬದ ಮೇಲೆ ದಾಳಿ ನಡೆಸಿತ್ತು.

ದಾಳಿ ನಡೆಸಿದ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಅವರು ಐದು ತಿಂಗಳ ಗರ್ಭಿಣಿಯಾಗಿದ್ದರು. ಹೀಗಿದ್ದರೂ ದಾಳಿ ನಡೆಸಿದ ಮತಾಂಧರು ಆಕೆಯ ಮೇಲೆ ಸಾಮೂಹಿಕ ಅತ್ಯಚಾರ ನಡೆಸಿದ್ದರು, ಅಷ್ಟೇ ಅಲ್ಲದೇ ಆಕೆಯ ಕುಟುಂಬಸ್ಥರನ್ನು ಹತ್ಯೆಗೈದಿದ್ದರು.
ಈ ಘಟನೆ ಸಂಬಂಧ ಅಹಮದಾಬಾದ್ ನಲ್ಲಿ ಪ್ರಕರಣದ ವಿಚಾರಣೆ ಮೊದಲು ನಡೆದಿತ್ತು.
More Articles
By the same author