ಶಿವಮೊಗ್ಗ: ಇಂದು ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ನಡೆಯುತ್ತಿರುವ ಸಂದರ್ಭದಲ್ಲಿ
ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಿವಮೊಗ್ಗ ನಗರದ ಅಂಬೇಡ್ಕರ್ ನಗರದ ನಿವಾಸಿಗಳು ಮತದಾನ ಬಹಿಷ್ಕರಿಸಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಅಂಬೇಡ್ಕರ್ ನಗರ ನಿವಾಸಿಗಳು ಹಕ್ಕಿಪಿಕ್ಕಿಗಳು ಹಾಗೂ ಅಲೆಮಾರಿ ಬುಡಕಟ್ಟು ಸಮುದಾಯದವರಾಗಿದ್ದಾರೆ. ಕೆಲವಾರು ತಿಂಗಳಿಂದಲೂ ಮೂಲಭೂತ ಸೌಕರ್ಯಗಳಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೂ ಜಿಲ್ಲಾಡಳಿತ ಯಾವುದೇ ಮೂಲಭೂತ ಸೌಲಭ್ಯ ನೀಡದ ಹಿನ್ನಲೆ ಮತದಾನದ ದಿನವಾದ ಇಂದು ಮತದಾನವನ್ನು ಬಹಿಷ್ಕರಿಸಿ ಧರಣಿ ನಿರತರಾಗಿದ್ದಾರೆ.
ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿರುವ ಅಲೆಮಾರಿಗಳು ಜಿಲ್ಲಾಡಳಿತ ನಮಗೆ ಮೂಲಭೂತ ಸೌಕರ್ಯ ನೀಡುವ ಭರವಸೆ ನೀಡದ ಹೊರತು ಮತದಾನ ಮಡುವುದಿಲ್ಲ ಎಂದಿದ್ದಾರೆ.
‘ಟ್ರೂಥ್ ಇಂಡಿಯಾ’ದೊಂದಿಗೆ ಮಾತನಾಡಿದ ಹಕ್ಕಿಪಿಕ್ಕಿ ಸಮುದಾಯದ ಮೀನಾ ಅವರು, “ನಮಗೆ ಕುಡಿಯಲು ನೀರಿಲ್ಲ. ಚರಂಡಿ ವ್ಯವಸ್ಥೆ ಇಲ್ಲ. ಈ ಕಾರಣದಿಂದ ಇಂದು ನಾವು ಮತದಾನ ಮಾಡುವುದಿಲ್ಲ,’’ ಎಂದರು.
ಡಿಎಸ್ಎಸ್ ಸಂಚಾಲಕ ಗುರುಮೂರ್ತಿ ಅವರು, “ಈ ಹಿಂದೆ ಹಲವಾರು ಬಾರಿ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದರೂ ಈ ಅಲೆಮಾರಿಗಳಿಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಇಂದು ಜಿಲ್ಲಾಧಿಕಾರಿಗಳೇ ಖುದ್ದಾಗಿ ಭರವಸೆ ನೀಡಿದರೆ ಮಾತ್ರ ಇಲ್ಲಿರುವ 500 ಅಲೆಮಾರಿಗಳು ಮತದಾನ ನಡೆಸಲಿದ್ದಾರೆ,’’ ಎಂದು ಎಚ್ಚರಿಸಿದ್ದಾರೆ.
ವಿಡಿಯೋ ವೀಕ್ಷಿಸಲು ಕೆಳಗಿನ ಲಿಂಕ್ ಬಳಸಿ