ರಾಜ್ಯದ ಉತ್ತರ ಮತ್ತು ಮಧ್ಯ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಮತದಾನ ಮುಗಿದು, ಶೇಕಡವಾರು ಸಮಾಧಾನಕರ ಪ್ರಮಾಣದಲ್ಲಿ(ಶೇ.68.41) ಮತದಾನ ನಡೆದಿರುವ ಬೆನ್ನಲ್ಲೇ ರಾಜ್ಯಾದ್ಯಂತ ಪಕ್ಷಗಳ ಬಲಾಬಲದ ಲೆಕ್ಕಾಚಾರಗಳು ಗರಿಗೆದರಿವೆ.
ಮೊದಲ ಸುತ್ತಿನಲ್ಲಿ ಏ.18ರಂದು ನಡೆದ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳ ಮತದಾನ ಕೂಡ ಶೇ.68.81ರಷ್ಟಿತ್ತು. ಬೆಂಗಳೂರು ನಗರ ವ್ಯಾಪ್ತಿಯ ಕ್ಷೇತ್ರಗಳಲ್ಲಿ ನೀರಸ ಮತದಾನವಾಗಿತ್ತು. ಅದನ್ನು ಹೊರತುಪಡಿಸಿ ಇನ್ನುಳಿದಂತೆ ಮಂಡ್ಯ, ಹಾಸನ, ತಮಕೂರು, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಶೇ.70ರಿಂದ 80ರ ಆಸುಪಾಸಿನಲ್ಲೇ ಮತದಾನ ಪ್ರಮಾಣ ದಾಖಲಾಗಿತ್ತು.
ನಿನ್ನೆ ಮುಕ್ತಾಯವಾದ ರಾಜ್ಯದ ಎರಡನೇ ಮತ್ತು ಕೊನೆಯ ಹಂತದಲ್ಲಿಯೂ ಬಿರುಬಿಸಿಲನ್ನೂ ಲೆಕ್ಕಿಸದೆ ಮತದಾರರು ಉತ್ಸಾಹದಿಂದ ಮತದಾನ ಮಾಡಿದ್ದು, ಕಲಬುರಗಿಯಲ್ಲಿ ಅತಿ ಕಡಿಮೆ; ಶೇ 61ರಷ್ಟು ಮತ್ತು ಶಿವಮೊಗ್ಗದಲ್ಲಿ ಅತಿ ಹೆಚ್ಚು; ಶೇ76.40ರಷ್ಟು ಮತದಾನವಾಗಿದೆ. ಉಳಿದಂತೆ, ಬಹುತೇಕ ಕಡೆ 65-75ರ ಶೇಕಡವಾರು ಆಸುಪಾಸಿನಲ್ಲಿ ಮತದಾನವಾಗಿದೆ.
ಎರಡೂ ಹಂತಗಳಲ್ಲಿ ಒಟ್ಟಾರೆ, ಮತದಾನದ ಬಗ್ಗೆ ಮತದಾರರು ಆಸಕ್ತಿ ತಾಳಿದ್ದು ಎದ್ದು ಕಾಣುವ ಅಂಶವಾಗಿದ್ದು, ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಮತ್ತು ಹೆಚ್ಚಾಗಿ ವಯಸ್ಕ ಮತದಾರರು ಇರುವ ಬೂತುಗಳಲ್ಲೇ ಅತಿ ಹೆಚ್ಚಿನ ಮತದಾನವಾಗಿರುವುದು ಮತ್ತೊಂದು ವಿಶೇಷ. ಅದರಲ್ಲೂ ಮತದಾನದ ಜಾಗೃತಿ ವಿಷಯದಲ್ಲಿ ಹಿಂದೆಂದೂ ಕಂಡಿರದ ಪ್ರಮಾಣದಲ್ಲಿ ಆಯೋಗ ಮತ್ತು ಸರ್ಕಾರಗಳು ಪ್ರಯತ್ನಿಸಿದರೂ, ಬೆಂಗಳೂರು ನಗರ ವ್ಯಾಪ್ತಿಯೂ ಸೇರಿದಂತೆ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಪ್ರಮುಖ ನಗರಸಭಾ ವ್ಯಾಪ್ತಿಗಳಲ್ಲೇ ಮತದಾನದ ಪ್ರಮಾಣದಲ್ಲಿ ಕುಸಿತ ಮುಂದುವರಿದಿದೆ.
ಆ ಹಿನ್ನೆಲೆಯಲ್ಲಿ ಪಕ್ಷಗಳ ಬಲಾಬಲದ ಕುರಿತ ಚರ್ಚೆಗಳು ಗರಿಗೆದರಿದ್ದು, ಹೈವೋಲ್ಟೇಜ್ ಹಣಾಹಣಿಯ ಕ್ಷೇತ್ರಗಳ ಫಲಿತಾಂಶದ ಕುರಿತು ವ್ಯಾಪಕ ಬೆಟ್ಟಿಂಗ್ ಕೂಡ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಪೊಲೀಸ್ ನಿರ್ದೇಶಕರು ಚುನಾವಣಾ ಬೆಟ್ಟಿಂಗಿಗೆ ಕಡಿವಾಣ ಹಾಕುವಂತೆ ಜಿಲ್ಲಾ ಪೊಲೀಸ್ ಮುಖ್ಯಸ್ಥರುಗಳಿಗೆ ಸೂಚನೆ ನೀಡಿದ್ದಾರೆ. ಪ್ರಮುಖವಾಗಿ ಮಂಡ್ಯ, ಹಾಸನ, ಬೆಂಗಳೂರು ದಕ್ಷಿಣ, ಮೈಸೂರು, ಶಿವಮೊಗ್ಗ, ಕಲಬುರಗಿ, ಧಾರವಾಡ ಕ್ಷೇತ್ರಗಳಲ್ಲಿನ ಕುತೂಹಲಕಾರಿ ನೇರ ಹಣಾಹಣಿಯ ಹಿನ್ನೆಲೆಯಲ್ಲಿ ಆಯಾ ಕ್ಷೇತ್ರಗಳ ವ್ಯಾಪ್ತಿಯಲ್ಲಷ್ಟೇ ಅಲ್ಲದೆ, ರಾಜ್ಯಾದ್ಯಂತ ಆ ಕ್ಷೇತ್ರಗಳ ಫಲಿತಾಂಶದ ಕುರಿತ ಭಾರೀ ಚರ್ಚೆಗಳು ನಡೆಯುತ್ತಿವೆ. ಮೇ 23ರಂದು ಫಲಿತಾಂಶ ಹೊರಬೀಳುವವರೆಗೆ ಬರೋಬ್ಬರಿ ಒಂದು ತಿಂಗಳ ಅವಧಿಯಲ್ಲಿ ಈ ಕುತೂಹಲ ಮತ್ತು ವಾದ-ಪ್ರತಿವಾದಗಳಿಗೆ ಬ್ರೇಕ್ ಬೀಳುವ ಲಕ್ಷಣಗಳು ಇಲ್ಲ.
ಮಂಡ್ಯದಲ್ಲಿ ಮುಖ್ಯಮಂತ್ರಿಯವರ ಪ್ರತಿಷ್ಠೆಯನ್ನೇ ಪಣಕ್ಕಿಟ್ಟಿದ್ದು, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಸುಮಲತಾ ಅಂಬರೀಶ್ ವಿರುದ್ಧ ಕಣಕ್ಕಿಳಿಯುವ ಮೂಲಕ ತಮ್ಮ ರಾಜಕೀಯ ಜೀವನದ ಮೊಟ್ಟಮೊದಲ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಜನಪ್ರಿಯ ನಟ ಮತ್ತು ಮಾಜಿ ಸಚಿವ ಅಂಬರೀಶ್ ಅವರ ನಾಮಬಲದ ಮೇಲೆ ಅವರ ಪತ್ನಿ ಹಾಗೂ ನಟಿ ಸುಮಲತಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೂ, ಅವರಿಗೆ ಬಿಜೆಪಿ ಬೆಂಬಲ ಘೋಷಣೆಯೊಂದಿಗೆ ಇಡೀ ಚುನಾವಣಾ ಕಣಕ್ಕೆ ಹೊಸ ಆಯಾಮ ಬಂದಿದೆ. ಜೊತೆಗೆ ಸುಮಲತಾ ಪರವಾಗಿ ಕನ್ನಡದ ಇಬ್ಬರ ಮಾಸ್ ಹೀರೋಗಳಾದ ದರ್ಶನ್ ಮತ್ತು ಯಶ್ ಸಂಪೂರ್ಣ ಪ್ರಚಾರದಲ್ಲಿ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ಮತ್ತು ಸ್ವತಃ ನಿಖಿಲ್ ಕೂಡ ಜನಪ್ರಿಯ ನಾಯಕನಟನಾದ ಕಾರಣ ಇಡೀ ಕ್ಷೇತ್ರ ಕರ್ನಾಟಕದ ಒಳಹೊರಗೆ ಭಾರೀ ಕುತೂಹಲ ಕೆರಳಿಸಿದೆ.
ಹಾಗೇ ಜೆಡಿಎಸ್ ವರಿಷ್ಠ ದೇವೇಗೌಡರ ಕುಟುಂಬದ ಮೂರನೇ ತಲೆಮಾರಿನ ಮತ್ತೊಬ್ಬ ಯುವ ನಾಯಕ ಪ್ರಜ್ವಲ್ ರೇವಣ್ಣ ಅವರು ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿರುವ ಹಾಸನ ಲೋಕಸಭಾ ಕ್ಷೇತ್ರ, ಜೆಡಿಎಸ್ ಮತ್ತು ಬಿಜೆಪಿ ಹಣಾಹಣಿಯ ಕಾರಣಕ್ಕೆ ರಾಜ್ಯದ ಗಮನ ಸೆಳೆದಿದೆ. ಜೊತೆಗೆ ಸ್ವತಃ ದೇವೇಗೌಡರೇ ಕಣಕ್ಕಿಳಿದಿರುವ ತುಮಕೂರು ಲೋಕಸಭಾ ಕ್ಷೇತ್ರ ಕೂಡ, ದಶಕಗಳ ಬಳಿಕ ಏಕಾಏಕಿ ತಮ್ಮ ಸ್ವಕ್ಷೇತ್ರ ಹಾಸನವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟು, ಲಿಂಗಾಯತ ಪ್ರಾಬಲ್ಯದ ತುಮಕೂರಿಗೆ ವಲಸೆ ಬಂದಿರುವ ದೊಡ್ಡ ಗೌಡರ ಜೀವನದ ಕೊನೆಯ ಚುನಾವಣಾ ಕದನದಲ್ಲಿ ಉಂಟಾದ ತೀವ್ರ ಹಣಾಹಣಿಯ ಹಿನ್ನೆಲೆಯಲ್ಲಿ ಅಲ್ಲಿನ ಫಲಿತಾಂಶದ ಮೇಲೆ ಎಲ್ಲರ ಕಣ್ಣಿದೆ. ಮೈಸೂರಿನಲ್ಲಿ ಕೂಡ ಬಿಜೆಪಿಯ ವಿವಾದಾತ್ಮಕ ಸಂಸದ ಪ್ರತಾಪ ಸಿಂಹ ವಿರುದ್ಧ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಆಪ್ತ ವಿಜಯಶಂಕರ್ ಕಣಕ್ಕಿಳಿದಿರುವ ಹಿನ್ನೆಲೆಯಲ್ಲಿ ಅಲ್ಲಿನ ಸೋಲುಗೆಲುವು ಪ್ರತಾಪ ಸಿಂಹ ಅಷ್ಟೇ ಅಲ್ಲದೆ, ಸಿದ್ದರಾಮಯ್ಯ ಅವರ ರಾಜಕೀಯ ಪ್ರಭಾವವನ್ನೂ ನಿರ್ಧರಿಸಲಿದೆ. ಆ ಹಿನ್ನೆಲೆಯಲ್ಲಿ ಮೈಸೂರು ಕೂಡ ಎಲ್ಲರ ಕುತೂಹಲದ ಕೇಂದ್ರವಾಗಿದೆ.
ಇನ್ನು ಎರಡನೇ ಹಂತದ ಮತದಾನ ನಡೆದಿರುವ ಕ್ಷೇತ್ರಗಳ ಪೈಕಿ ತೀವ್ರ ಹಣಾಹಣಿಯ ಕ್ಷೇತ್ರಗಳಾಗಿ ಕಂಡುಬಂದದ್ದು ಶಿವಮೊಗ್ಗ ಮತ್ತು ಕಲಬುರಗಿ ಕ್ಷೇತ್ರಗಳು. ಶಿವಮೊಗ್ಗದಲ್ಲಿ ಇಬ್ಬರು ಮಾಜಿ ಸಿಎಂಗಳಾದ ದಿ ಎಸ್ ಬಂಗಾರಪ್ಪ ಮತ್ತು ಬಿ ಎಸ್ ಯಡಿಯೂರಪ್ಪ ಅವರ ಪುತ್ರರಿಬ್ಬರು ಪರಸ್ಪರ ತೊಡೆತಟ್ಟಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಬಿ ವೈ ರಾಘವೇಂದ್ರ ಅವರು ಐದು ತಿಂಗಳ ಹಿಂದೆ ನಡೆದ ಕ್ಷೇತ್ರದ ಉಪ ಚುನಾವಣೆಯಲ್ಲಿ ಪರಸ್ಪರ ಹಣಾಹಣಿ ನಡೆಸಿದ್ದರು. ಆಗ ರಾಘವೇಂದ್ರ ಅವರು 52000 ಮತಗಳ ಅಂತರದಿಂದ ಜಯ ಗಳಿಸಿದ್ದರು. ಈ ಬಾರಿ ಮತ್ತೆ ಅದೇ ಇಬ್ಬರು ಯುವ ನಾಯಕರ ನಡುವೆ ತೀವ್ರ ಹಣಾಹಣಿ ಇದ್ದು, ಇಬ್ಬರ ಪೈಕಿ ಯಾರು ಗೆಲುವು ಪಡೆಯಬಹುದು ಎಂಬ ಚರ್ಚೆ ಕಾವೇರಿದೆ.
ಹಾಗೇ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧಿಸಿರುವ ಕಲಬುರಗಿ ಲೋಕಸಭಾ ಕ್ಷೇತ್ರ, ಈ ಬಾರಿ ಇಡೀ ರಾಜ್ಯದ ಗಮನ ಸೆಳೆಯಲು ಕಾರಣ, ಸ್ವತಃ ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ್ ಜಾಧವ್ ಅವರು ಚುನಾವಣೆ ಘೋಷಣೆ ಬಳಿಕ ಬಿಜೆಪಿ ಸೇರಿ ಆ ಪಕ್ಷದ ಹುರಿಯಾಳಾಗಿ ಕಣಕ್ಕಿಳಿದಿರುವುದು. ಲೋಕಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಮತ್ತು ಪ್ರಮುಖ ಪ್ರತಿಪಕ್ಷ ನಾಯಕರೂ ಆಗಿದ್ದ ಖರ್ಗೆ ಅವರನ್ನು ಅವರ ಸ್ವಕ್ಷೇತ್ರದಲ್ಲೆ ಮಣಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ದೊಡ್ಡ ಸಂದೇಶ ನೀಡುವ ಜಿದ್ದಿಗೆ ಬಿದ್ದಿರುವ ಬಿಜೆಪಿಯ ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ನಾಯಕರು ಮೇಲಿಂದ ಮೇಲೆ ಪ್ರಚಾರ ಸಭೆಗಳನ್ನು ಮಾಡಿ ಕ್ಷೇತ್ರದಲ್ಲಿ ಬಿಜೆಪಿ ಬಲವೃದ್ಧಿಗೆ ಪ್ರಯತ್ನಿಸಿದ್ದಾರೆ. ಹಾಗಾಗಿ ಸದ್ಯ ಕ್ಷೇತ್ರದ ಫಲಿತಾಂಶದ ಮೇಲೆ ಇಡೀ ರಾಜ್ಯದ ಕಣ್ಣು ನೆಟ್ಟಿದ್ದು, ಸದ್ಯ ಶೇ.61ರಷ್ಟು ಮತದಾನದ ಮೂಲಕ ಎರಡನೇ ಹಂತದ ಮತದಾನದ ಪೈಕಿ ಅತಿ ಕಡಿಮೆ ಮತದಾನ ಕಂಡಿರುವ ಕ್ಷೇತ್ರದ ಮತದಾನದ ಪ್ರಮಾಣ ಏನು ಹೇಳುತ್ತಿದೆ ಎಂಬ ಚರ್ಚೆಗಳು ನಡೆದಿವೆ.
ಹಾಗೇ ಬಿಜೆಪಿ ಮಾಜಿ ಸಚಿವ ಪ್ರಹ್ಲಾದ್ ಜೋಷಿ ಮತ್ತು ಕಾಂಗ್ರೆಸ್ ಮಾಜಿ ಸಚಿವ ವಿನಯ ಕುಲಕರ್ಣಿ ನಡುವಿನ ತೀವ್ರ ಹಣಾಹಣಿಯ ಧಾರವಾಡ, ಬಿಜೆಪಿ ಫೈರ್ ಬ್ರಾಂಡ್ ನಾಯಕ ಅನಂತಕುಮಾರ ಹೆಗಡೆ ಮತ್ತು ಜೆಡಿಎಸ್ ಯುವ ನಾಯಕ ಆನಂದ ಅಸ್ನೋಟಿಕರ್ ನಡುವಿನ ಹಣಾಹಣಿಯ ಉತ್ತರಕನ್ನಡ, ಕಾಂಗ್ರೆಸ್ ಮುತ್ಸದ್ಧಿ ನಾಯಕ ವಿ ಎಸ್ ಉಗ್ರಪ್ಪ ಮತ್ತು ಬಿಜೆಪಿಯ ದೇವೇಂದ್ರಪ್ಪ ನಡುವಿನ ಹಣಾಹಣಿಯ ಬಳ್ಳಾರಿ ಹಾಗೂ ಬಿಜೆಪಿ ನಾಯಕ ಶಿವಕುಮಾರ ಉದಾಸಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಡಿ ಆರ್ ಪಾಟೀಲ್ ಹಣಾಹಣಿಯ ಹಾವೇರಿ ಲೋಕಸಭಾ ಕ್ಷೇತ್ರಗಳು ಕೂಡ ಸಾಕಷ್ಟು ಗಮನ ಸೆಳೆದಿವೆ.
ಈ ಎಲ್ಲಾ ಕುತೂಹಲ, ಲೆಕ್ಕಾಚಾರ, ಚರ್ಚೆ, ವಾಗ್ವಾದ ಮತ್ತು ಬೆಟ್ಟಿಂಗಗಳಿಗೆ ಅಂತಿಮ ವಿರಾಮ ಬೀಳಲು ಇನ್ನೂ ಮೂವತ್ತು ದಿನ ಕಾಯಲೇಬೇಕಿದೆ!
ನಿಖಿಲ್ ಕುಮಾರ ಸ್ವಾಮಿಯನ್ನು ಜನಪ್ರಿಯ ನಾಯಕನಟ ಎಂದಿದ್ದೀರೀ ನಿಖಿಲ್ ಕುಮಾರಸ್ವಾಮಿ ಎಷ್ಟು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ? ಅವರು ಅಭಿನಯಿಸಿದ
ಎಷ್ಟು ಸಿನಿಮಾಗಳು ಶತದಿನೋತ್ಸವ ಕಂಡಿವೆ ಹೇಳುವಿರಾ?