ಗೃಹ ಸಚಿವ ಎಂ ಬಿ ಪಾಟೀಲರ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಸಿ ಹಂಚಿಕೊಂಡಿದ್ದ ಆರೋಪದಲ್ಲಿ ಪೋಸ್ಟ್ ಕಾರ್ಡ್ ಸುಳ್ಸುದ್ದಿ ತಾಣದ ಮಾಲೀಕ ವಿಕ್ರಂ ಹೆಗಡೆಯನ್ನು ವಿಜಯಪುರ ಆದರ್ಶನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತು ಧಾರವಾಡ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷ ಪರಮೇಶ್ ಉಳ್ಳಣ್ಣ ಅವರ ಪತ್ನಿ ಶೃತಿ ಬೆಳ್ಳಕ್ಕಿ ಎಂಬುವವರನ್ನು ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಐಡಿ ಸೈಬರ್ ವಿಂಗ್ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗೃಹ ಸಚಿವ ಎಂ ಬಿ ಪಾಟೀಲರು ನೀಡಿದ್ದ ದೂರಿನ ಮೇರೆಗೆ ಈ ಬಂಧನಗಳನ್ನು ನಡೆಸಲಾಗಿದೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ಬಿಜೆಪಿಯ ಮುಖಂಡರು ಎಂಬಿ ಪಾಟೀಲರ ಹೆಸರಲ್ಲಿ ಸೃಷ್ಟಿಸಲಾಗಿದ್ದ ಫೋರ್ಜರಿ ಪತ್ರವೊಂದನ್ನು ಹಂಚಿಕೊಂಡು ವೈರಲ್ ಮಾಡಿದ್ದು, ಈ ಪತ್ರದ ಕುರಿತು ವಿಡಿಯೋ ಮಾಡಿದ ಹಂಚಿದ್ದ ಶೃತಿ ಬೆಳ್ಳಕ್ಕಿ ಹಾಗೂ 2018ರಲ್ಲಿ ಈ ನಕಲಿ ಪತ್ರ ಸೃಷ್ಟಿಸಿದ್ದ ಆರೋಪದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ವಿಕ್ರಂ ಹೆಗಡೆಯನ್ನು ಬಂಧಿಸಲಾಗಿದೆ.
‘ಲಿಂಗಾಯತ ಮುಖಂಡ ಎಂ ಬಿ ಪಾಟೀಲ ಅವರು ಹಿಂದೂ ಧರ್ಮ ಒಡೆಯುತ್ತಿದ್ದಾರೆ’ ಎಂದು ಮಾತನಾಡಿ, ಶೃತಿ ಬೆಳ್ಳಕ್ಕಿ ವಿಡಿಯೋ ಚಿತ್ರೀಕರಿಸಿ ಹಂಚಿಕೊಂಡಿದ್ದು ವೈರಲ್ ಆಗಿತ್ತು. ‘ರಾಜಕೀಯ ದುರುದ್ದೇಶದಿಂದ ನಕಲಿ ಪತ್ರ ಸೃಷ್ಟಿಸಿ ಅದನ್ನು ಹಂಚಿಕೊಂಡು ಅದನ್ನು ಸಾಮಾಜಿಕ ಮಾಧ್ಯಮದ ಮೂಲಕ ಪ್ರಸಾರ ಮಾಡಿ ಗೃಹ ಸಚಿವರ ವಿರುದ್ಧ ಸಂಚು ನಡೆಸಲಾಗಿದೆ’ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಬಂಧನ ನಡೆಸಲಾಗಿದೆ ಎಂದು ಗೃಹ ಇಲಾಖೆಯ ಮೂಲಗಳು ತಿಳಿಸಿವೆ.
ವಿಕ್ರಂ ಹೆಗಡೆ ಬಂಧನದ ಕುರಿತು ಬಿಜೆಪಿಯ ಐಟಿ ಸೆಲ್ #IStandWithVikramHegde ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡುತ್ತಿದೆ. ಈ ಕುರಿತು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಯವರೂ ಟ್ವೀಟ್ ಮಾಡಿದ್ದಾರೆ.
Karnataka govt again arrested @mvmeet today!
The only crime of Mahesh Vikram hegde is that, he has been exposing the lies of Gandhi family.
Height of Vendetta politics, Coalition govt is imposing real emergency.
Shame!!#IStandWithMaheshHegde pic.twitter.com/cByWkAJBpo— Chowkidar Shobha Karandlaje (@ShobhaBJP) April 24, 2019
ಗೃಹ ಸಚಿವರೂ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿನ ಅಂದೋಲದ ಬೆಂಬಲಿಗರೂ ಆಗಿರುವ ಎಂ ಬಿ ಪಾಟೀಲರ ಹೆಸರಿನಲ್ಲಿ ನಕಲಿ ಪತ್ರವೊಂದನ್ನು 2018ರ ಚುನಾವಣೆಯ ಸಂದರ್ಭದಲ್ಲಿ ಸೃಷ್ಟಿಸಲಾಗಿತ್ತು. ಇದನ್ನು ಪೋಸ್ಟ್ ಕಾರ್ಡ್ ಸುದ್ದಿ ತಾಣವು ಪ್ರಕಟಿಸಿತ್ತು. ಎಂಬಿ ಪಾಟೀಲರ ಫೋರ್ಜರಿ ಸಹಿ ಇದ್ದ ಈ ಪತ್ರವು ನಕಲಿ ಎಂದು ನಂತರ ಸಾಬೀತಾಗಿತ್ತು. ಈ ಫೋರ್ಜರಿ ಪತ್ರದಲ್ಲಿ ಎಂ ಬಿ ಪಾಟೀಲರು ಸೋನಿಯಾ ಗಾಂಧಿಗೆ ಪತ್ರ ಬರೆದಿರುವಂತೆಯೂ, ‘Global Christian Council’ ಮತ್ತು ‘World Islamic Organisation’ಎಂಬ (ಪ್ರಪಂಚದಲ್ಲಿ ಅಸ್ತಿತ್ವದಲ್ಲೇ ಇರದ) ಸಂಘಟನೆಗಳ ಜೊತೆ ಮಾತುಕತೆ ಮಾಡಿ ಹಿಂದೂ ಧರ್ಮವನ್ನು ಒಡೆಯಲು ಸಂಚು ರೂಪಿಸಿರುವುದಾಗಿಯೂ ಚಿತ್ರಿಸಲಾಗಿತ್ತು.
ಇದನ್ನೂ ಓದಿ: ಸಚಿವ ಎಂ ಬಿ ಪಾಟೀಲ್ ಹೆಸರಿನಲ್ಲಿ ಬರೆದಿದ್ದ ಫೋರ್ಜರಿ ಪತ್ರವನ್ನು ಮತ್ತೆ ಹಂಚುತ್ತಿರುವ ಬಿಜೆಪಿ : ಹಿಂದೂ ಮತದಾರರನ್ನು ಪ್ರಭಾವಿ ಲಿಂಗಾಯತ ಮುಖಂಡನ ವಿರುದ್ಧ ಎತ್ತಿ ಕಟ್ಟಲು ಷಡ್ಯಂತ್ರ
ಮತ್ತೆ 2019ರ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳ ಮುಂಚೆ ಬಿಜೆಪಿ ಮುಖಂಡ ವಿಜಯ ಸಂಕೇಶ್ವರ ಮತ್ತವರ ಪುತ್ರ ಆನಂದ್ ಸಂಕೇಶ್ವರ ಮಾಲೀಕತ್ವದ ವಿಜಯವಾಣಿಯಲ್ಲಿ ಆ ನಕಲಿ ಪತ್ರದ ಕನ್ನಡ ಅನುವಾದ ಪ್ರಕಟಗೊಂಡಿದ್ದು. ಅದೇ ದಿನ ನಕಲಿ ಪತ್ರವನ್ನು ಬಿಜೆಪಿ ಐಟಿ ಸೆಲ್ ಹಂಚಿಕೊಂಡಿತ್ತಲ್ಲದೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ನಕಲಿ ಪತ್ರದಲ್ಲಿರುವ ವಿಷಯಗಳನ್ನೇ ನಿಜ ಎಂದು ಮತದಾರರಿಗೆ ಹೇಳಿದ್ದರು.
ಈ ಕುರಿತು ಗೃಹ ಸಚಿವರೇ ಖುದ್ದಾಗಿ ದೂರು ದಾಖಲಿಸಿದ್ದರಲ್ಲದೇ ನೆನ್ನೆ ಕಾಂಗ್ರೆಸ್ ವಕ್ತಾರ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ಕುರಿತು ವಿಡಿಯೋ ಗೃಹ ಸಚಿವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ
ವಿಜಯವಾಣಿ ಪತ್ರಿಕೆ ಪ್ರಕಟ ಮಾಡಿರುವ ಫೇಕ್ ಲೆಟರ್ ಕುರಿತು ಕಾಂಗ್ರೆಸ್ ವಕ್ತಾರ ಹಿರಿಯ ನ್ಯಾಯವಾದಿ ಕಪಿಲ್ ಸಿಬ್ಬಲ್ ಅವರು ಇಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿ ಕ್ರಿಮಿನಲ್ ಕೇಸ್ ಅನ್ವಯ ಕ್ರಮ ಜರುಗಿಸಲು ವಿನಂತಿಸಿದರು.@INCKarnataka @INCIndia pic.twitter.com/GZxWFPcHbH
— M B Patil (@MBPatil) April 22, 2019