ಬೇಗುಸರಾಯ್! ಬಹುಶಃ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದ ಗಮನ ಸೆಳೆದ ಕ್ಷೇತ್ರ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆಯ ವಾರಣಾಸಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಣಕ್ಕಿಳಿದಿರುವ ಕೇರಳದ ವಯನಾಡು ಕ್ಷೇತ್ರಗಳನ್ನು ಮೀರಿಸಿ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಬಿಹಾರದ ಬೇಗುಸರಾಯ್, ದೇಶದ ಹೊಸ ರಾಜಕೀಯ ದನಿ ಎಂದೇ ಗುರುತಿಸಿಕೊಂಡಿರುವ ಕನ್ನಯ್ಯಕುಮಾರ್ ಕಣಕ್ಕಿಳಿದಿರುವ ಕಾರಣಕ್ಕೆ ದಿಢೀರ್ ಸುದ್ದಿಗೆ ಬಂದಿದೆ.
ದೆಹಲಿಯ ಜವಾಹರಲಾಲ್ ನೆಹರು ವಿವಿಯ ಕಾರ್ಯಕ್ರಮವೊಂದರಲ್ಲಿ ಆಜಾದಿ ಘೋಷಣೆ ವಿವಾದದ ಹಿನ್ನೆಲೆಯಲ್ಲಿ ದಿಢೀರ್ ದೇಶದ ಗಮನ ಸೆಳೆದ ಕನ್ನಯ್ಯಕುಮಾರ್, ವಿರುದ್ಧ ಆಡಳಿತರೂಢ ಬಿಜೆಪಿ ಮತ್ತು ಅದರ ಪರಿವಾರಗಳು ‘ದೇಶದ್ರೋಹ’ ಅಸ್ತ್ರ ಝಳಪಿಸುವ ಹೊತ್ತಿಗೇ, ದೇಶದ ಪ್ರಜಾಪ್ರಭುತ್ವವಾದಿ ಶಕ್ತಿಗಳು ಅವರ ಪರ ನಿಂತವು. ಆ ಮೂಲಕ ಕನ್ನಯ್ಯ ಕುಮಾರ್ ಎಂಬ ಬಿಹಾರದ ಪುಟ್ಟ ಪಟ್ಟಣದ ಯುವಕ, ದೇಶದ ನರೇಂದ್ರ ಮೋದಿ ಮತ್ತು ಅವರ ಪರಿವಾರದ ಕೋಮುವಾದ, ದ್ವೇಷ ರಾಜಕಾರಣ ಮತ್ತು ಹುಸಿ ರಾಷ್ಟ್ರೀಯತೆಗೆ ಪ್ರತಿಯಾಗಿ ಸಾಮರಸ್ಯದ, ಸಮಾನತೆಯ ಮತ್ತು ಅಸಲೀ ದೇಶಪ್ರೇಮದ ದನಿಯಾಗಿ ಹೊರಹೊಮ್ಮಿದರು.
ನಾಲ್ಕು ವರ್ಷಗಳ ಅವಧಿಯಲ್ಲಿ ಕನ್ನಯ್ಯ ದೇಶದ ಆಡಳಿತರೂಢ ರಾಜಕೀಯ ವ್ಯವಸ್ಥೆಯ ಬಹುದೊಡ್ಡ ಟೀಕಾಕಾರರಾಗಿ, ಯುವ ಸಮುದಾಯದ ಭರವಸೆಯ ನಾಯಕನಾಗಿ ಬೆಳೆದುನಿಂತಿದ್ದಾರೆ ಎಂಬುದು ಅತಿಶಯೋಕ್ತಿಯಲ್ಲ. ಇದೀಗ ಸಿಪಿಐ ಅಭ್ಯರ್ಥಿಯಾಗಿ ಕನ್ನಯ್ಯ ಕಣಕ್ಕಿಳಿದಿರುವ ಕಾರಣದಿಂದಾಗಿಯೇ ಅವರ ಹುಟ್ಟೂರು ಬೇಗುಸರಾಯ್ ಇಡೀ ದೇಶದ ಗಮನ ಸೆಳೆದಿದೆ. ಲೋಕಸಭೆಗೆ ಹುಟ್ಟೂರಿನಿಂದ ಕಣಕ್ಕಿಳಿಯುವ ಕುರಿತು ಎರಡು ತಿಂಗಳ ಹಿಂದೆಯೇ ಕನ್ನಯ್ಯ ಘೋಷಿಸುತ್ತಲೇ ಅವರ ವಿರೋಧಿ ಪಾಳೆಯದ ಬಿಜೆಪಿ ತನ್ನ ತಂತ್ರಗಾರಿಕೆಯನ್ನು ಹೆಣೆಯತೊಡಗಿತ್ತು. ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರು ಹಾಗೂ ಮಹಿಳೆಯರ ಪರ ದನಿ ಎತ್ತುವ ಮೂಲಕ ಮತ್ತು ಮುಖ್ಯವಾಗಿ ದೇಶದ ನಿರುದ್ಯೋಗಿ ಯುವಕರ ಪರ ಹೋರಾಟದ ಮೂಲಕ ಪ್ರವರ್ಧಮಾನಕ್ಕೆ ಬಂದ ಕನ್ನಯ್ಯ ವಿರುದ್ಧ, ಮುಸ್ಲಿಂ ಮತ್ತು ದಲಿತರ ವಿರುದ್ಧದ ದ್ವೇಷಕಾರುವ ಹೇಳಿಕೆಗಳ ಮೂಲಕವೇ ಜನಪ್ರಿಯತೆ ಗಳಿಸಿರುವ ತನ್ನ ಸಚಿವ ಗಿರಿರಾಜ್ ಸಿಂಗ್ ಅವರನ್ನು ಬಿಜೆಪಿ ಇದೀಗ ಕಣಕ್ಕಿಳಿಸಿದೆ.
READ: ಬಿಹಾರದ ಬೇಗುಸರಾಯ್ ಕ್ಷೇತ್ರದ ‘ಎಡ ಅಭ್ಯರ್ಥಿ’ಯಾಗಿ ಜೆಎನ್ಯು ಫೈರ್ ಬ್ರಾಂಡ್ ಲೀಡರ್ ಕನ್ನಯ್ಯ ಕುಮಾರ್
2014ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ, “ಮೋದಿ ವಿರೋಧಿಗಳು ದೇಶದ್ರೋಹಿಗಳು. ಈ ಬಾರಿ ಮೋದಿ ಪ್ರಧಾನಿಯಾಗುವುದು ಖಚಿತ. ಅವರು ಅಧಿಕಾರಕ್ಕೆ ಬರುತ್ತಲೇ ಬಿಜೆಪಿ ಮತ್ತು ಮೋದಿ ವಿರೋಧಿಗಳನ್ನು ಪಾಕಿಸ್ತಾನಕ್ಕೆ ಗಡೀಪಾರು ಮಾಡಲಾಗುವುದು” ಎಂಬ ಹೇಳಿಕೆ ಮೂಲಕ ಸಾಕಷ್ಟು ವಿವಾದ ಹುಟ್ಟುಹಾಕಿದ್ದ ಗಿರಿರಾಜ್ ಸಿಂಗ್, ಈ ಬಾರಿಯೂ “ಬೇಗುಸರಾಯ್ ನಲ್ಲಿ ಎಲ್ಲಿ ನೋಡಿದರೂ ಹಸಿರು ಬಾವುಟಗಳೇ ಕಾಣುತ್ತಿವೆ. ಅದು ತನಗೆ ಹಿಡಿಸುವುದಿಲ್ಲ. ದ್ವೇಷ ಹುಟ್ಟುಹಾಕುವ ಮತ್ತು ಪಾಕಿಸ್ತಾನದ ದಾಳದಂತೆ ಕಾಣುವ ಹಸಿರು ಬಾವುಟಗಳನ್ನೆಲ್ಲಾ ತೆಗೆದುಹಾಕಬೇಕು” ಎಂದು ಚುನಾವಣಾ ಆಯೋಗಕ್ಕೆ ದೂರು ನೀಡುವ ಮೂಲಕ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ. ಆ ಮೂಲಕ ಕಣವನ್ನು ಕೋಮು ಭಾವನೆಗಳ ಮೇಲೆ ತೇಲಿಸುವ ತಂತ್ರಗಾರಿಕೆ ಬಿಜೆಪಿಯದ್ದು.
ಆ ಮೂಲಕ ಬೇಗುಸರಾಯ್ ನ ಚುನಾವಣಾ ಕಣವನ್ನು ಧರ್ಮ ದ್ವೇಷ, ಇಸ್ಲಮೋಫೋಬಿಯಾ, ದೇಶದ್ರೋಹಿ ವರ್ಸಸ್ ದೇಶಭಕ್ತ ಎಂಬ ನಕಾರಾತ್ಮಕ ಚರ್ಚೆಯ ಅಂಕಣವಾಗಿ ಪರಿವರ್ತಿಸುವ ಬಿಜೆಪಿಯ ಯತ್ನಕ್ಕೆ ಪ್ರತಿಯಾಗಿ ಸಿಪಿಐನ ಕನ್ನಯ್ಯ ಕುಮಾರ್, ದೇಶದ ನಿರುದ್ಯೋಗ ಸಮಸ್ಯೆ, ಸಾಮರಸ್ಯಕ್ಕೆ ಎದುರಾಗಿರುವ ಆತಂಕ, ಕಾರ್ಮಿಕರು ಮತ್ತು ಕೃಷಿಕರು ಮೋದಿ ಸರ್ಕಾರದ ನೀತಿಗಳಿಂದಾಗಿ ಅನುಭವಿಸುತ್ತಿರುವ ಸಂಕಷ್ಟ, ಜನಸಾಮಾನ್ಯರ ಮೇಲಿನ ಬೆಲೆ ಏರಿಕೆಯ ಬರೆ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕೆ ಬಿಜೆಪಿ ಆಡಳಿತ ಕೊಟ್ಟಿರುವ ಪೆಟ್ಟುಗಳನ್ನು ಉಲ್ಲೇಖಿಸುವ ಮೂಲಕ ಅವರ ತಂತ್ರಗಾರಿಕೆಯನ್ನು ಬುಡಮೇಲು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.
ಒಂದು ರೀತಿಯಲ್ಲಿ ಇಡೀ ದೇಶದ ಒಂದು ಸಣ್ಣ ತುಣುಕಿನಂತೆ, ಒಂದು ರೂಪಕದಂತೆ ಕಾಣುತ್ತಿರುವ ಬೇಗುಸರಾಯ್ ಲೋಕಸಭಾ ಕಣ, ಸದ್ಯ ನರೇಂದ್ರ ಮೋದಿಯವರ ಆಡಳಿತ ವರಸೆಯ ಪರ ಮತ್ತು ವಿರೋಧದ ನೆಲೆಯನ್ನು ನಿರ್ಧರಿಸುವ ಕಣವಾಗಿ ಬದಲಾಗಿದೆ.
ಆದರೆ, ಕಣದಲ್ಲಿ ಮೋದಿ ಮತ್ತು ಅವರು ಪ್ರತಿನಿಧಿಸುವ ಹಿಂದುತ್ವವಾದಿ ಭಾರತದ ಪ್ರತಿನಿಧಿಯಾಗಿ ಗಿರಿರಾಜ್ ಸಿಂಗ್ ಇದ್ದರೆ, ಅದಕ್ಕೆ ಪ್ರತಿಯಾಗಿ ಪ್ರಜಾಸತ್ತಾತ್ಮಕ ರಾಜಕೀಯ ಶಕ್ತಿಗಳು ಮತ್ತು ಅವರ ಪ್ರಾತಿನಿಧ್ಯದ ಸಾಮರಸ್ಯದ ಭಾರತದ ಪ್ರತಿನಿಧಿಯಾಗಿ ಕನ್ನಯ್ಯಕುಮಾರ್ ಕಣದಲ್ಲಿದ್ದಾರೆ. ಆದರೆ, ಅಷ್ಟಕ್ಕೇ ಕಣದ ಚಿತ್ರಣ ಪೂರ್ಣವಾಗುವುದಿಲ್ಲ. ಏಕೆಂದರೆ, ಸಿಪಿಐ ಮತ್ತು ಇತರ ಎಲ್ಲಾ ಎಡ ಪಕ್ಷಗಳ ಬೆಂಬಲಿತ ಕನ್ನಯ್ಯ ಅವರ ಪ್ರಾತಿನಿಧ್ಯವನ್ನು ಒಪ್ಪಿಕೊಳ್ಳದ ಬಿಹಾರದ ಪ್ರಭಾವಿ ಪಕ್ಷ ಆರ್ ಜೆಡಿ ತನ್ನದೇ ಅಭ್ಯರ್ಥಿ ತನ್ವೀರ್ ಹಸನ್ ಅವರನ್ನು ಕಣಕ್ಕಿಳಿಸಿದೆ. ಕನ್ನಯ್ಯಗೆ ಬೆಂಬಲವಾಗಿ ತಮ್ಮ ಅಭ್ಯರ್ಥಿಯನ್ನು ಹಿಂತೆಗೆದುಕೊಳ್ಳಿ ಎಂಬ ಎಡಪಕ್ಷಗಳ ಮನವಿಗಳು ಮುಂದುವರಿದಿದ್ದರೂ, ಆರ್ ಜೆಡಿ ಆ ವಿಷಯದಲ್ಲಿ ತನ್ನ ನಿಲುವು ಬದಲಾಯಿಸಿಲ್ಲ. ಹಾಗಾಗಿ ಸದ್ಯಕ್ಕೆ ಕಣದಲ್ಲಿ ಬಿಜೆಪಿ, ಸಿಪಿಐ ಮತ್ತು ಆರ್ ಜೆಡಿ ನಡುವೆ ತ್ರಿಕೋನ ಸ್ಪರ್ಧೆಯ ವಾತಾವರಣ ಕಾಣುತ್ತಿದೆ.
READ: ನನ್ನ ನೇರಾನೇರ ಹೋರಾಟ ಬಿಜೆಪಿ ಅಭ್ಯರ್ಥಿ ಗಿರಿರಾಜ್ ಸಿಂಗ್ ವಿರುದ್ಧ: ಕನ್ಹಯ್ಯ ಕುಮಾರ್
ಬಿಹಾರದ ‘ಲೆನಿನ್ ಗ್ರಾಡ್’ ಎಂದೇ ಹೆಸರಾಗಿರುವ ಕಮ್ಯುನಿಸ್ಟ್ ಪ್ರಾಬಲ್ಯದ ಕ್ಷೇತ್ರದಲ್ಲಿ 1967ರಲ್ಲಿ ಸಿಪಿಐನ ಯೋಗೇಂದ್ರ ಶರ್ಮಾ ಜಯ ಗಳಿಸಿದ್ದರು. ಆದರೆ, ಆ ಬಳಿಕ ಕ್ಷೇತ್ರದಲ್ಲಿ ಕಾಂಗ್ರೆಸ್, ಜನತಾ ಪಕ್ಷ, ಜೆಡಿಯು, ಆರ್ ಜೆಡಿ ಮತ್ತು ಬಿಜೆಪಿ ಕ್ಷೇತ್ರದಲ್ಲಿ ಜಯಭೇರಿ ಭಾರಿಸಿದ್ದರೂ, ಎಡಪಕ್ಷಗಳ ಮತಗಳು ಮಾತ್ರ ಪ್ರತಿ ಬಾರಿಯೂ ಪಕ್ಷದ ಅಭ್ಯರ್ಥಿಯ ಪರ ಅಚಲವಾಗಿ ನಿಂತಿವೆ. ಹಾಗಾಗಿ ಪ್ರತಿ ಚುನಾವಣೆಯಲ್ಲಿಯೂ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಜಯ ಪಡೆಯದೇ ಹೋದರೂ, ಎರಡು ಅಥವಾ ಮೂರನೇ ಸ್ಥಾನದ ಪೈಪೋಟಿ ಕಾಯ್ದುಕೊಂಡುಬಂದಿದ್ದಾರೆ. ಕಳೆದ 2014ರ ಚುನಾವಣೆಯಲ್ಲಿ ಕೂಡ ಬಿಜೆಪಿಯ ಭೋಲಾ ಸಿಂಗ್, ಆರ್ ಜೆ ಡಿಯ ತನ್ವೀರ್ ಹಸನ್ ವಿರುದ್ಧ 58 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಭೋಲಾ ಸಿಂಗ್ ಶೇ.39.72 ಮತ ಪಡೆದಿದ್ದರೆ, ಪರಾಜಿತ ತನ್ವೀರ್ ಹಸನ್ ಶೇ.34.31ರಷ್ಟು ಮತ ಪಡೆದಿದ್ದರು. ಮೂರನೇ ಸ್ಥಾನದಲ್ಲಿದ್ದ ಸಿಪಿಐ ಅಭ್ಯರ್ಥಿ ರಾಜೇಂದ್ರ ಪ್ರಸಾದ್ ಸಿಂಗ್ ಶೇ.17.87 ಮತ ಪಡೆದಿದ್ದರು. ಕೈಗಾರಿಕೆ ಮತ್ತು ಉದ್ಯಮಗಳ ಕೇಂದ್ರವಾಗಿರುವ ಬೇಗುಸರಾಯ್ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಕಾರ್ಮಿಕ ಸಂಘಟನೆಗಳ ಪ್ರಾಬಲ್ಯವಿದ್ದು, ಅದು ಎಡಪಕ್ಷಗಳಿಗೆ ಗಟ್ಟಿ ನೆಲೆ ಒದಗಿಸಿದೆ.
ಜೊತೆಗೆ ಈ ಬಾರಿ, ಬಿಜೆಪಿ ಅಭ್ಯರ್ಥಿ ಗಿರಿರಾಜ್ ಮತ್ತು ಸಿಪಿಐ ಅಭ್ಯರ್ಥಿ ಕನ್ನಯ್ಯ ಇಬ್ಬರೂ ಕ್ಷೇತ್ರದ ಬಹುಸಂಖ್ಯಾತ ಭೂಮಿಹಾರ್ ಸಮುದಾಯಕ್ಕೆ ಸೇರಿದ್ದು, ಒಟ್ಟು 19 ಲಕ್ಷ ಮತದಾರರ ಪೈಕಿ, ಸುಮಾರು 4.5 ಲಕ್ಷ ಮತದಾರರನ್ನು ಹೊಂದಿರುವ ಭೂಮಿಹಾರ್ ಸಮುದಾಯ ಒಟ್ಟು ಮತದಾರರ ಪೈಕಿ ಶೇ.20ರಷ್ಟು ಪಾಲು ಹೊಂದಿದೆ. ಸಂಖ್ಯಾಬಲದಲ್ಲಿ ನಂತರದ ಸ್ಥಾನದಲ್ಲಿ ಮುಸ್ಲಿಮರು(2.5 ಲಕ್ಷ), ಯಾದವರು(80 ಸಾವಿರ) ಹಾಗೂ ಹಿಂದುಳಿದ ಸಮುದಾಯ( ಒಂದು ಲಕ್ಷ)ಗಳು ಇವೆ.
ಬಿಜೆಪಿ ಮತ್ತು ಸಿಪಿಐ ಅಭ್ಯರ್ಥಿಗಳಿಬ್ಬರೂ ಪ್ರಬಲ ಸಮುದಾಯಕ್ಕೆ ಸೇರಿರುವ ಹಿನ್ನೆಲೆಯಲ್ಲಿ ಆ ಸಮುದಾಯದ ಮತಗಳು ಹಂಚಿಹೋಗುವುದರಿಂದ ತಮ್ಮ ಖಾಯಂ ಮತಬ್ಯಾಂಕ್ ಆದ ಮತ್ತು ತಮ್ಮದೇ ಸಮುದಾಯದ ಮುಸ್ಲಿಂ ಮತ ಹಾಗೂ ಪಕ್ಷದ ಯಾದವ ಮತಗಳ ಬಲದ ಮೇಲೆ ಗೆಲುವು ತಮ್ಮದೆ ಎಂಬ ವಿಶ್ವಾಸದಲ್ಲಿ ಆರ್ ಜೆಡಿ ಅಭ್ಯರ್ಥಿ ಹಸನ್ ಇದ್ದಾರೆ. ಆದರೆ, ಭೂಮಿಹಾರ್ ಸಮುದಾಯದ ಹಿರಿಯ ನಾಯಕ ಗಿರಿರಾಜ್ ಮತ್ತು ಅವರು ಪ್ರತಿನಿಧಿಸುವ ಕಟ್ಟಾ ಹಿಂದುತ್ವದ ಪರ ಸಮುದಾಯದ ಮತಗಳು ಧ್ರುವೀಕರಣಗೊಳ್ಳಲಿವೆ. ಇನ್ನುಳಿದಂತೆ ಕುರ್ಮಿ ಮತ್ತಿತರ ಹಿಂದುಳಿದ ವರ್ಗಗಳ ಮತ ಸೆಳೆಯುತ್ತೇವೆ. ಅಲ್ಲದೆ, ಅದೇ ಹೊತ್ತಿಗೆ ಬಿಜೆಪಿ ವಿರೋಧಿ ಮತಗಳು ಕನ್ನಯ್ಯ ಮತ್ತು ಹಸನ್ ನಡುವೆ ಹಂಚಿಹೋಗಲಿವೆ. ಆ ಮತ ವಿಭಜನೆಯ ಲಾಭ ತಮಗೇ ಆಗಲಿದೆ ಎಂಬುದು ಬಿಜೆಪಿ ನಾಯಕರ ವಾದ.
ಹಾಗಾಗಿ, ಸ್ಟಾರ್ ಪ್ರಚಾರಕರ ಪ್ರಚಾರ, ಜೆಎನ್ ಯು ಗೆಳೆಯರ ಬೆಂಬಲ, ಕಮ್ಯುನಿಸ್ಟ್ ಕೇಡರ್ ಬಲದ ಹೊರತಾಗಿಯೂ ಕನ್ನಯ್ಯ ಕುಮಾರ್ ಅವರಿಗೆ ಕಣದಲ್ಲಿ ದೊಡ್ಡ ಸವಾಲು ಇದೆ. ಮಾಧ್ಯಮ ಪ್ರಚಾರ, ಭಾಷಣ, ಸಭೆ-ಸಮಾರಂಭ ಹಾಗೂ ಮನೆಮನೆ ಭೇಟಿಯ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಮತದಾರರನ್ನು ತಲುಪುವ ಮತ್ತು ಅವರ ವಿಶ್ವಾಸ ಗಳಿಸುವ ಯತ್ನವನ್ನು ಕನ್ನಯ್ಯ ಮಾಡಿದ್ದರೂ, ಅಂತಿಮವಾಗಿ ಏ.29ರಂದು ಮತದಾನ ನಡೆಯಲಿರುವ ಕ್ಷೇತ್ರದಲ್ಲಿ ಇದೀಗ ಉಳಿದಿರುವ ಮೂರು ದಿನಗಳಲ್ಲಿ ಎಷ್ಟರಮಟ್ಟಿಗೆ ಕೊನೇ ಕ್ಷಣದ ಕಾರ್ಯತಂತ್ರಗಳನ್ನು ಯಶಸ್ವಿಯಾಗಿ ಕೈಗೊಳ್ಳುತ್ತಾರೆ ಎಂಬುದರ ಮೇಲೆ ಎಲ್ಲವೂ ನಿಂತಿದೆ.
ಕನ್ನಯ್ಯ ಪರವಾಗಿ ಈಗಾಗಲೇ ಜಾವೇದ್ ಅಖ್ತರ್, ಸ್ವರ ಭಾಸ್ಕರ, ಪ್ರಕಾಶ್ ರಾಜ್, ಜಿಗ್ನೇಶ್ ಮೆವಾನಿ, ಸೀತಾರಾಂ ಯೆಚೂರಿ, ಯೋಗೇಂದ್ರ ಯಾದವ್, ಶಬಾನಾ ಆಜ್ಮಿ ಮುಂತಾದವರು ಪ್ರಚಾರ ನಡೆಸಿದ್ದಾರೆ. ಜೊತೆಗೆ ತಳಮಟ್ಟದಲ್ಲಿ ಎಡಪಕ್ಷಗಳ ಯುವ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇ ಹೊತ್ತಿಗೆ ಆರ್ ಎಸ್ ಎಸ್ ಮತ್ತು ಸಂಘಪರಿವಾರದ ಜಾಲ ಹೊಂದಿರುವ ಬಿಜೆಪಿ ಕೂಡ ಕ್ಷೇತ್ರದಲ್ಲಿ ತನ್ನ ಹಿರಿಯ ನಾಯಕನನ್ನು ಗೆಲ್ಲಿಸುವ ಮೂಲಕ ಇಡೀ ದೇಶಕ್ಕೇ ಒಂದು ಸಂದೇಶ ರವಾನಿಸುವ ಜಿದ್ದಿಗೆ ಬಿದ್ದಿದೆ.

ಈ ನಡುವೆ, ಕ್ಷೇತ್ರದಲ್ಲಿ ಕನ್ನಯ್ಯ ಪರ ಅಲೆ ಪ್ರಬಲವಾಗುತ್ತಿದೆ. ಆ ಹಿನ್ನೆಲೆಯಲ್ಲಿ ಮತ ವಿಭಜನೆಯ ಮೂಲಕ ಬಿಜೆಪಿಗೆ ಅನುಕೂಲವಾಗುವುದನ್ನು ತಡೆಯಲು ಆರ್ ಜೆಡಿ ತನ್ನ ಅಭ್ಯರ್ಥಿ ಹಸನ್ ಅವರನ್ನು ನಿವೃತ್ತಿಗೊಳಿಸಬೇಕು(ನಾಮಪತ್ರ ವಾಪಸ್ ಗಡುವು ಮುಗಿದಿರುವ ಹಿನ್ನೆಲೆಯಲ್ಲಿ) ಎಂದು ಸಿಪಿಐ ನಾಯಕರು ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೆ ಒತ್ತಾಯಿಸಿದ್ದಾರೆ. ಆರ್ ಜೆಡಿ ವರಿಷ್ಠ ಲಾಲೂ ಅವರಿಗೆ ಮೂಲತಃ ಕನ್ನಯ್ಯ ವಿರುದ್ಧ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಒಲವು ಇರಲಿಲ್ಲ. ಆದರೆ, ಅವರ ಪುತ್ರ ಮತ್ತು ಪಕ್ಷದ ಚುಕ್ಕಾಣಿ ಹಿಡಿದಿರುವ ತೇಜಸ್ವಿ ಮಾತ್ರ ಈ ವಿಷಯದಲ್ಲಿ ಸ್ಪಷ್ಟ ನಿರ್ಧಾರ ಹೊಂದಿದ್ದರು. ಹಾಗಾಗಿಯೇ ಅವರು ಹಸನ್ ಅವರನ್ನು ಕಣಕ್ಕಿಳಿಸಿದ್ದಾರೆ. ಕನ್ನಯ್ಯನಂತಹ ಪ್ರಭಾವಿ ನಾಯಕ ಬಿಹಾರದಲ್ಲಿ ಬೆಳೆಯುವುದು ನಾಳೆ ತನ್ನ ರಾಜಕೀಯ ಭವಿಷ್ಯಕ್ಕೆ ಅಪಾಯಕಾರಿ ಎಂಬುದು ತೇಜಸ್ವಿ ಲೆಕ್ಕಾಚಾರ. ಆ ಹಿನ್ನೆಲೆಯಲ್ಲೇ ಅವರು ತಂದೆಯ ಸಲಹೆಯನ್ನೂ ಧಿಕ್ಕರಿಸಿ ಅಭ್ಯರ್ಥಿಯನ್ನು ಹಾಕಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಾರೆ, ಸದ್ಯಕ್ಕಂತೂ ದೇಶದ ಗಮನ ಸೆಳೆದಿರುವ ಬೇಗುಸರಾಯ್ ನಲ್ಲಿ ತ್ರಿಕೋನ ಹಣಾಹಣಿ ಕಾಣುತ್ತಿದ್ದು, ದೇಶದ ಹೊಸ ರಾಜಕೀಯ ಭರವಸೆ ಎಂದೇ ಪರಿಗಣಿಸಲಾಗುತ್ತಿರುವ ಕನ್ನಯ್ಯ ಅವರ ರಾಜಕೀಯ ಭವಿಷ್ಯ ಕೂಡ ಇದೇ ಕಣದಲ್ಲಿ ನಿರ್ಧಾರವಾಗಲಿದೆ ಎಂಬುದು ಗಮನಾರ್ಹ.
READ: ನಾನೊಬ್ಬ ‘ಆಕಸ್ಮಿಕ ರಾಜಕಾರಣಿ’ : ಕನ್ಹಯ್ಯ ಕುಮಾರ್ ಲೇಖನ
READ: ಕನ್ಹಯ್ಯ ಕುಮಾರ್ ಎದುರು ತೇಜಸ್ವಿ ಸೂರ್ಯ ಏನು ಮಾಡಿದ ಗೊತ್ತಾ?