ಬೆಂಗಳೂರು: ಪ್ರಧಾನಿ ಮೋದಿಯ ಹೆಲಿಕಾಪ್ಟರನ್ನು ತಪಾಸಣೆ ನಡೆಸಿದ್ದ ಐಎಎಸ್ ಅಧಿಕಾರಿಯನ್ನು ಅಮಾನತುಗೊಳಿಸಿದ್ದ ಚುನಾವಣಾ ಆಯೋಗದ ಆದೇಶಕ್ಕೆ ಕೇಂದ್ರ ಆಡಳಿತ ನ್ಯಾಯಮಂಡಳಿ ತಡೆಯಾಜ್ಞೆ ನೀಡಿದೆ.
ಕಳೆದ ವಾರ ಒಡಿಶಾ ರಾಜ್ಯದ ಸಂಬಾಲಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಳಿದ ಹೆಲಿಕಾಪ್ಟರನ್ನು ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್ ಅವರು ತಪಾಸಣೆಗೊಳಪಡಿಸಿದ್ದರು. ಪ್ರಧಾನಿಯವರ ಹೆಲಿಕಾಪ್ಟರ್ ತಪಾಸಣೆ ‘ವಿಶೇಷ ರಕ್ಷಣಾ ದಳದ (ಎಸ್ ಪಿ ಜಿ) ಸೂಚನೆಗಳಿಗೆ ಹೊಂದಿಕೆಯಾಗುವುದಿಲ್ಲ ಎಂಬ ಕಾರಣವನ್ನು ನೀಡಿದ್ದ ಚುನಾವಣಾ ಆಯೋಗ ಅಧಿಕಾರಿಯನ್ನು ಅಮಾನತುಗೊಳಿಸಿತ್ತು.
ಇದಕ್ಕೂ ಕೆಲವು ದಿನಗಳ ಮೊದಲು ಪ್ರಧಾನಿ ಮೋದಿ ಚಿತ್ರದುರ್ಗ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರು ಇಳಿದ ಹೆಲಿಕಾಪ್ಟರಿನಿಂದ ಅನುಮಾನಾಸ್ಪದ ರೀತಿಯಲ್ಲಿ ಭಾರವಾದ ಕಪ್ಪು ಪೆಟ್ಟಿಗೆಯೊಂದನ್ನು ಇಬ್ಬರು ತರಾತುರಿಯಲ್ಲಿ ದೂರದಲ್ಲಿದ್ದ ಇನೋವಾ ಕಾರಿಗೆ ಸಾಗಿಸಿದ್ದರು. ಈ ಕುರಿತು ಕಾಂಗ್ರೆಸ್ ಪಕ್ಷವು ದೂರನ್ನೂ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಸಂಬಾಲಪುರದಲ್ಲಿ ಪ್ರಧಾನಿ ಹೆಲಿಕಾಪ್ಟರ್ ತಪಾಸಣೆ ನಡೆಸಿದ್ದ ಅಧಿಕಾರಿಯನ್ನೇ ಚುನಾವಣಾ ಆಯೋಗ ಅಮಾನತು ಗೊಳಿಸಿತ್ತು.
ಚುನಾವಣಾ ಆಯೋಗದ ಈ ನಡೆಯ ಕುರಿತು ಪ್ರತಿಪಕ್ಷಗಳು ತೀವ್ರ ಟೀಕೆ ನಡೆಸಿದ್ದವು. ಚುನಾವಣೆಯ ಸಂದರ್ಭದಲ್ಲಿ ತಪಾಸಣೆ ನಡೆಸುವುದರಿಂದ ಯಾರನ್ನೂ ಹೊರಗಿಡುವ ನಿಯಮವಿಲ್ಲ, ಪ್ರಧಾನಿಯ ಹೆಲಿಕಾಪ್ಟರ್ ಕೂಡಾ ತಪಾಸಣೆಗೆ ನಡೆಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.
1996ರ ಬ್ಯಾಚಿನ ಕರ್ನಾಟಕ ಕೇಡರ್ ಆಗಿರುವ ಐಎಎಸ್ ಅಧಿಕಾರಿ ಮೊಹಮದ್ ಮೊಹ್ಸಿನ್ ಮೇಲೆ ಕರ್ತವ್ಯ ಲೋಪದ ಆರೋಪ ಹೊರಿಸಲಾಗಿತ್ತು. ಸಂಬಾಲಪುರ ಲೋಕಸಭಾ ಕ್ಷೇತ್ರದ ಸಾಮಾನ್ಯ ವಿಚಕ್ಷಕರಾಗಿ ನಿಯೋಜನೆಗೊಂಡಿದ್ದ ಐಎಎಸ್ ಅಧಿಕಾರಿ ಮೋದಿಯವರ ಹೆಲಿಕಾಪ್ಟರ್ ತಪಾಸಣೆ ನಡೆಸಿದ್ದರಿಂದ ಪ್ರಧಾನಿಗಳಿಗೆ 15 ನಿಮಿಷ ವಿಳಂಬವಾಗಿತ್ತು ಎಂದು ಆರೋಪಿಸಲಾಗಿತ್ತು.
ಸಾರ್ವಜನಿಕ ಸೇವೆಗಳ ನೇಮಕಾತಿಗಳ ಕುರಿತ ವಾಜ್ಯಗಳನ್ನು ಪರಿಹರಿಸುವ ಕೇಂದ್ರ ಆಡಳಿತ ನ್ಯಾಯಮಂಡಳಿಯು ಈ ವಿಚಾರವನ್ನು ಕೈಗೆತ್ತಿಕೊಂಡು ಚುನಾವಣಾ ಆಯೋಗದ ಅಮಾನತನ್ನು ತಡೆಹಿಡಿದಿದೆ. ಜೂನ್ 3ರಂದು ಮುಂದಿನ ವಿಚಾರಣೆ ನಡೆಯಲಿದೆ.
Read : ಚಿತ್ರದುರ್ಗದಲ್ಲಿ ಮೋದಿ ಹೆಲಿಕಾಪ್ಟರಿನಿಂದ ಇಳಿಸಿ ಕೊಂಡೊಯ್ದ ನಿಗೂಢ ಪಟ್ಟಿಗೆ!!
ಒಳ್ಳೆಯ ಕೆಲಸ ಸರ್,ಮೋದಿ ಎನ್ ಮೇಲಿಂದ ಇಳಿದು ಬಂದಿದ್ದಾನ