ವಾರಾಣಸಿ: ವಾರಾಣಸಿ ಕ್ಷೇತ್ರದಿಂದ ಲೋಕಸಭಾ ಚುನಾವಣೆ ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದು ವಾರಣಾಸಿ ಕ್ಷೇತ್ರದಲ್ಲಿ ಆರು ಕಿಲೋ ಮೀಟರ್ ಬೃಹತ್ (ರ್ಯಾಲಿ) ರಸ್ತೆ ಪ್ರಚಾರ ನಡೆಸಿದರು.
ಮೋದಿಯವರು ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ.
ವಾರಣಾಸಿಯ ರಸ್ತೆಗಳಲ್ಲಿ ಭಾರೀ ಬೆಂಬಲಿಗರ ನಡುವೆ ಮೋದಿ ರೋಡ್ ಶೋ ನಡೆಸಿದ ಸಂದರ್ಭದಲ್ಲಿ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಸೇರಿದಂತೆ ಎನ್ ಡಿಎ ನಾಯಕರು ಉಪಸ್ಥಿತರಿದ್ದರು. ಸಾವಿರಾರು ಕಾರ್ಯಕರ್ತರು ಪ್ರಚಾರದಲ್ಲಿ ಭಾಗಿಯಾಗಿ ಮೋದಿ ಮೋದಿ ಮೋದಿ ಎಂಬ ಘೋಷಣೆಗಳನ್ನು ಕೂಗುತ್ತಾ ಬೆಂಬಲ ಸೂಚಿಸಿದರು.
ಮೊದಲಿಗೆ ಪಂಡಿತ್ ಮದನ್ ಮೋಹನ್ ಮಾಳವಿಯಾ ಅವರಿಗೆ ವಂದಿಸಿದ ಮೋದಿ ನಂತರ ಲಂಕಾ ಗಟ್ ನಿಂದ ಪ್ರಚಾರ ಆರಂಭಿಸಿ, ಅಸ್ಸಿ ಘಾಟ್, ಭದೈನಿ, ಸೊನಾರ್ ಪುರ, ಮದನ್ ಪುರ, ಜಂಗಮಬದಿ, ಗೊಡೊವ್ಲೈ ನಂತರ ದಶಾಶ್ವಮೇಧ ಘಾಟ್ ನಲ್ಲಿ ರೋಡ್ ಶೋ ಅಂತ್ಯವಾಯಿತು.
ಪ್ರಚಾರದ ನಂತರ ದಶಾಶ್ವಮೇಧ ಘಾಟ್ ನಲ್ಲಿ ಮೋದಿ ಗಂಗಾ ಆರತಿ ನಡೆಸಿದರು. ಈ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಇತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು.
ವಾರಣಾಸಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿಯನ್ನು ಕಣಕ್ಕಿಳಿಸಲಾಗುತ್ತದೆ ಎಂಬ ಬಗ್ಗೆ ಊಹಾಪೋಹಗಳು ಕಳೆದ ಕೆಲವು ದಿನಗಳಿಂದ ಕೇಳಿಬಂದಿದ್ದವು. ಕಾಂಗ್ರೆಸ್ ಶಾಸಕ ಅಜಯ್ ರೈಯನ್ನು ವಾರಣಾಸಿಯಿಂದ ಕಣಕ್ಕಿಳಿಸುವುದಾಗಿ ಕಾಂಗ್ರೆಸ್ ಘೋಷಿಸಿದ ತರುವಾಯ ಈ ಊಹಾಪೋಹಗಳಿಗೆ ತೆರೆ ಬಿದ್ದಿವೆ. 2014ರ ಚುನಾವಣೆಯಲ್ಲಿ ವಾರಣಾಸಿ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಎದುರು ಆಮ್ ಆದ್ಮಿ ಮುಖಂಡ ಅರವಿಂದ ಕೇಜ್ರೀವಾಲ್ ಸ್ಪರ್ಧಿಸಿದ್ದರು. ನರೇಂದ್ರ ಮೋದಿ 5,81,022 ಮತ ಗಳಿಸಿ ವಿಜೇತರಾಗಿದ್ದರೆ, 2,09,238 ಮತ ಗಳಿಸುವ ಮೂಲಕ ಕೇಜ್ರೀವಾಲ್ ಎರಡನೇ ಸ್ಥಾನ ಪಡೆದಿದ್ದರು. ಅಜಯ್ ರೈ ಅವರು 75,615 ಮತ ಗಳಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.