ಬಾಲಾಕೋಟ್ ನಂತಹ ದಾಳಿಯ ಕುರಿತು, ನಮ್ಮ ವಾಯುಪಡೆ ಎಫ್ 16 ಹೊಡೆದುರುಳಿಸಿದ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಮಾನಗಳು ವ್ಯಕ್ತಗೊಂಡಾಗ ಆ ಕುರಿತು ನಿಖರ ಮಾಹಿತಿ ನೀಡಲು ಸರ್ಕಾರವನ್ನು ಪ್ರಶ್ನಿಸುವುದು ಇಲ್ಲವೇ ಮೋದಿ ಸರ್ಕಾರದ ಸಾಧನೆಗಳ ಕುರಿತು ಪ್ರಶ್ನಿಸುವುದು ದೇಶದ್ರೋಹವೇ?
ಇದು ಹಿರಿಯ ಪತ್ರಕರ್ತ ದೇಶದ ಎರಡನೇ ಉನ್ನತ ಹುದ್ದೆಯಲ್ಲಿ, ಪ್ರಧಾನಿ ಮೋದಿಗಿಂತಲೂ ಉನ್ನತ ಹುದ್ದೆಯಲ್ಲಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಹಮೀದ್ ಅನ್ಸಾರಿ ಅವರಿಗೆ ಕೇಳಿದ ಪ್ರಶ್ನೆ.
“ಪ್ರಜೆಗಳ ಇಂತಹ ಪ್ರಶ್ನೆಗಳಿಗೆ ಉತ್ತರಿಸುವುದು ಸರ್ಕಾರದ ಕರ್ತವ್ಯ. ದೇಶದ ಪ್ರತಿ ಪ್ರಜೆಗೂ ವಿದೇಶಾಂಗ ನೀತಿ ಮತ್ತು ಸೇನೆಯ ಬಗ್ಗೆ, ಇದರ ಕಾರ್ಯಕ್ಷಮತೆಯ ಬಗ್ಗೆ ಪ್ರಶ್ನಿಸುವ ಹಕ್ಕಿದೆ’’ ಇದು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಖಡಕ್ ಉತ್ತರ.
ತಿರಂಗಾ ಸುದ್ದಿವಾಹಿನಿಯಲ್ಲಿ ಹಿರಿಯ ಪತ್ರಕರ್ತ ಕರಣ್ ಥಾಪರ್ ಅವರು ಹಮೀದ್ ಅನ್ಸಾರಿ ಅವರೊಂದಿಗೆ ಸುಮಾರು ಅರ್ಧ ಗಂಟೆ ನಡೆಸಿದ ಅತ್ಯಂ ಮೌಲಿಕ ಹಾಗೂ ಬೌದ್ಧಿಕ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಮೀದ್ ಅನ್ಸಾರಿಯವರು ಹಂಚಿಕೊಂಡಿದ್ದಾರೆ.
ಪಾಕಿಸ್ತಾನ ಬಾಲಕೋಟ್ ನಲ್ಲಿ ಭಾರತೀಯ ಸೇನೆ ನಡೆಸಿದ ದಾಳಿಯ ಬಗ್ಗೆ ಸಾಕಷ್ಟು ವಿವಾದ ಹಾಗೂ ಪ್ರತಿಪಕ್ಷಗಳು ಟೀಕೆಗಳು ಮಾಡಿದ ಹಿನ್ನೆಲೆ ಅನ್ಸಾರಿ ಅವರು ಈ ಹೇಳಿಕೆ ನೀಡಿದ್ದಾರೆ.
2007ರಿಂದ 2017ರವರೆಗೆ ಉಪ ರಾಷ್ಟ್ರಪತಿಯಾಗಿದ್ದ ಅನ್ಸಾರಿ ಅವರಿಗೆ ಭಾರತೀಯ ಸೇನೆ ಮತ್ತು ಸರ್ಕಾರದ ಬಗ್ಗೆ ಪ್ರಶ್ನೆ ಮಾಡಿದರೆ ಅದು ದೇಶದ್ರೋಹಿ ಅಥವಾ ದೇಶಭಕ್ತಿ ಇಲ್ಲದವರು ಎಂದರ್ಥವೇ ಎಂದು ಪ್ರಶ್ನಿಸಿದಾಗ, “ವಿದೇಶದ ಹಲವು ನಂಬಲರ್ಹ ಸಂಸ್ಥೆಗಳಿಂದ ದಾಳಿಯ ಬಗ್ಗೆ ಸಾಕಷ್ಟು ಸಾಕ್ಷಿಗಳನ್ನು ಪಡೆಯಬಹುದು, ಇದನ್ನು ನೀವು ಅಳಿಸಿಹಾಕಲು ಸಾಧ್ಯವಿಲ್ಲ,’’ ಎಂದೂ ತಿಳಿಸಿದ್ದಾರೆ.
“ಹುಲಿ ಶಿಕಾರಿ ಮಾಡಿದ್ದೇನೆ ಎನ್ನುವವರು ಕೊಂದ ಹುಲಿಯನ್ನು ತೋರಿಸಬೇಕಿರುತ್ತದೆ. ಆದರೆ ಭಾರತೀಯ ವಾಯುಪಡೆಯ ತಾಂತ್ರಿಕ ವಿಷಯಗಳ ಬಗ್ಗೆ ನನಗೆ ತಿಳಿದಿಲ್ಲ. ಒಂದು ಕಡೆ ವಿಮಾನವನ್ನು ಹೊಡೆದುರಳಿಸಿದ್ದೇವೆಂದು ಹೇಳಿಕೊಳ್ಳುತ್ತಿದ್ದಾರೆ, ಮತ್ತೊಂದೆಡೆ ಇಲ್ಲ ಎಂದು ವಾದಿಸುತ್ತಿದ್ದಾರೆ. ಖಂಡಿತವಾಗಿಯೂ ಎರಡೂ ದೇಶಗಳ ನಡುವೆ ಏನೋ ಇದೆ’’ ಎಂದೂ ಹನ್ಸಾರಿಯವರು ಹೇಳಿದ್ದಾರೆ.
“ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಾಕಷ್ಟು ಹಿಂದೆ ಸರಿದಿದೆ. ಅಂದು ಅವರು ಏನು ಮಾತು ಕೊಟ್ಟಿದ್ದರು, ಇಂದು ಏನು ಈಡೇರಿಸಿದ್ದಾರೆ ಎಂದು ನೋಡಿದಾಗ ಸತ್ಯ ತಿಳಿಯುತ್ತದೆ” ಎಂದಿದ್ದಾರೆ.
“1992ರಲ್ಲಿ ಅಯೋಧ್ಯಾದಲ್ಲಿರುವ ಬಾಬ್ರಿ ಮಸೀದಿಯನ್ನು ನಾಶಗೊಳಿಸಿದರಲ್ಲಿ ತಾನು ಭಾಗಿಯಾಗಿದ್ದೇನೆ ಎಂದು ಹೇಳಿಕೊಂಡಿರುವ ಬಿಜೆಪಿಯ ಭೋಪಾಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಕುರಿತು ಕೇಳಿದ ಪ್ರಶ್ನೆಗೆ “ಬಾಬರಿ ಮಸೀದಿ ಧ್ವಂಸ ಘಟನೆಯಲ್ಲಿ ಪಾಲ್ಗೊಂಡವರು ಕಾನೂನಿನ ಅಡಿಯಲ್ಲಿ ತಪಿಸ್ಥತರು ಎಂದಾಗಿರುವಾಗ ಪ್ರಗ್ಯಾ ಹಾಗೆ ಹೇಳಿರುವುದನ್ನು ಖಂಡಿತಾ ನ್ಯಾಯಾಲಯ ಪರಿಗಣನೆಗೆ ತೆಗೆದುಕೊಳ್ಳಲಿದೆ” ಎಂದೂ ಹಮೀದ್ ಅನ್ಸಾರಿ ಹೇಳಿದ್ದಾರೆ.
ಕಾರ್ಗಿಲ್ ನಿಂದ ಕನ್ಯಾಕುಮಾರಿವರೆಗೆ, ಗುಜರಾತ್ ನಿಂದ ತ್ರಿಪುರಾದ ವರೆಗೆ ನಮ್ಮ ದೇಶ ಅತ್ಯಂತ ವೈವಿದ್ಯತೆ ಹೊಂದಿದೆ, ಇದನ್ನು ಏಕರೂಪದ ಆಡಳಿತ ಸೂತ್ರದಿಂದ ಕಟ್ಟಿಹಾಕಲು ಸಾಧ್ಯವಿಲ್ಲ ಎಂದಿರುವ ಹಮೀದ್ ಅನ್ಸಾರಿ ಕಾಶ್ಮೀರದ ವಿಷಯದಲ್ಲಿ ಮೋದಿ ಸರ್ಕಾರ ಪ್ರಮಾದ ನಡೆಸಿದೆ ಎಂದು ಹೇಳಿದ್ದಾರೆ. 370ನೇ ವಿಧಿ ಹಾಗೂ 53 ಎ ವಿಧಿಗಳನ್ನು ರದ್ದುಪಡಿಸುವ ಪ್ರಸ್ತಾವಗಳನ್ನು ಯಾವುದೇ ಜವಾಬ್ದಾರಿಯುತ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಸೇರಿಸಕೂಡದು. 370ನೇ ವಿಧಿಯೇ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸಿರುವ ಸಂವಿಧಾನದ ಅಂಶ ಎಂಬುದು ಸ್ಪಷ್ಟವಾಗಿದ್ದಾಗ ಅದನ್ನು ರದ್ದು ಪಡಿಸುವ ಮಾತಾಡುವ ಮೂಲಕ ಅತ್ಯಂತ ಸಣ್ಣ ಸಂಖ್ಯೆಯಲ್ಲಿರುವ ಪ್ರತ್ಯೇಕತಾವಾದಿಗಳಿಗೆ ದೊಡ್ಡ ಬೆಂಬಲ ಒದಗಿಸಿದಂತಾಗುತ್ತದೆ ಎಂದು ಅನ್ಸಾರಿ ಸಂದರ್ಶನದಲ್ಲಿ ತಿಳಿಸಿದ್ದಾರೆ.
2018ರ ಗುಜರಾತ್ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ನಿಮ್ಮನ್ನು ಪಾಕಿಸ್ತಾನದೊಂದಿಗೆ ಸೇರಿ ಸಂಚು ಮಾಡಿದ ಸುಳ್ಳು ಆರೋಪದ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅನ್ಸಾರಿಯವರು, “ಮೋದಿ ಆರೋಪ ಮಾಡಿದ ಐದಾರು ಜನರಲ್ಲಿ ಅನೇಕ ವರ್ಷಗಳಿಂದ ಪಾಕಿಸ್ತಾನದೊಂದಿಗೆ ವ್ಯವಹರಿಸುತ್ತಾ ಬಂದಿರುವವರು, ಅವರಲ್ಲಿ ಮಾಜಿ ಪ್ರಧಾನಿ, ಭಾರತದ ಸೇನಾ ಮುಖ್ಯಸ್ಥರು, ಮಾಜಿ ವಿದೇಶಾಂಗ ಕಾರ್ಯದರ್ಶಿಗಳೆಲ್ಲಾ ಇದ್ದರು, ಪಾಕಿಸ್ತಾನದೊಂದಿಗೆ ಒಡನಾಟ ಮಾಡದೇ ಇದ್ದವನೆಂದರೆ ನಾನೊಬ್ಬನೇ, ಈ ಬಗ್ಗೆ ಏನು ಹೇಳಿದರೂ ಪ್ರಯೋಜನವಿಲ್ಲ, ಮೋದಿಯವರು ಈ ಬಗ್ಗೆ ನನ್ನ ಬಳಿ ಎಂದೂ ಕ್ಷಮೆಯಾಚಿಸಲೂ ಇಲ್ಲ” ಎಂದಿದ್ದಾರೆ.