ನವದೆಹಲಿ: ಭೋಪಾಲ್ ನಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಪಕ್ಷದ ಅಭ್ಯರ್ಥಿ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರ ನಾಮಪತ್ರವನ್ನು ರದ್ದುಗೊಳಿಸಲು ಕೋರಿ ನಾಗರೀಕ ಸೇವಾ ಇಲಾಖೆ ಮತ್ತು ಕೇಂದ್ರ ಸೇವೆಗಳ ನಿವೃತ್ತ ಅಧಿಕಾರಿಗಳು (IAS,IPS,IFS) ಪ್ರಧಾನಿ ನರೆಂದ್ರ ಮೋದಿ ಅವರಿಗೆ ಬಹಿರಂಗ ಪತ್ರದ ಮೂಲಕ ಮನವಿ ಮಾಡಿದ್ದಾರೆ.
2008ರ ಮಲೆಗಾವ್ ಬಾಂಬ್ ಸ್ಫೋಟದ ಆರೋಪಿಯಾಗಿರುವ ಸಾದ್ವಿ ಪ್ರಗ್ಯಾ ಸಿಂಗ್ ಠಾಕೂರ್ ಇಂದಿಗೂ ಈ ಪ್ರಕರಣ ಸಂಬಂಧ ವಿಚಾರಣೆ ಎದುರಿಸುತ್ತಿದ್ದು, ಇಂಥಹ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದಂತೆ 71 ನಿವೃತ್ತ ಅಧಿಕಾರಿಗಳು ಸಹಿ ಮಾಡಿರುವ ಪತ್ರವನ್ನು ಮೋದಿಗೆ ಹಸ್ತಾಂತರಿಸಿದ್ದಾರೆ.




ಭಯೋತ್ಪಾದನೆಯ ಆರೋಪ ಹೊತ್ತವರನ್ನು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಿರುವ ಬಗ್ಗೆ ಹಾಗೂ ಸಾದ್ವಿ ನಾಮಪತ್ರ ಸಲ್ಲಿಸುತ್ತಿದ್ದಂತೆ ವಿವಾದಾತ್ಮಕ ಹಾಗೂ ಕೋಮುದ್ವೇಷ ಬಿತ್ತುವಂಥ ಹೇಳಿಕೆಗಳನ್ನು ನೀಡುತ್ತಿರುವುದನ್ನು ವಿರೋಧಿಸಿ ಆಡಳಿತ ಪಕ್ಷದ ನಿರ್ಧಾರವನ್ನು ನಿವೃತ್ತ ಅಧಿಕಾರಿಗಳು ಖಂಡಿಸಿದ್ದಾರೆ.
ಪತ್ರದಲ್ಲಿ “ಭೋಪಾಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ಞಾ ಸಿಂಗ್ ಬಗ್ಗೆ ನಮಗಿರುವ ಅಪನಂಬಿಕೆಗಳನ್ನು ಮತ್ತು ನಿರಾಶೆಯನ್ನು ವ್ಯಕ್ತಪಡಿಸುವ ಸಲುವಾಗಿ ಈ ಪತ್ರವನ್ನು ಬರೆದಿದ್ದೇವೆ. ಬಿಜೆಪಿಯ ಈ ನಿರ್ಧಾರವನ್ನು ಈಗಲೂ ಹಿಂಪಡೆದರೆ ಇದು ರಾಜಕೀಯ ವೇಗವರ್ಧನೆಗೆ ಮತ್ತೊಂದು ಉದಾಹರಣೆಯಾಗಲಿದೆ. ಅದರೆ, ಪ್ರಧಾನಿ ಮೋದಿ ಅವರು ನಾಗರೀಕ ಪಂರಂಪರೆಯ ಸಂಕೇತವಾಗಿ ಬಹಳ ಉತ್ಸಾಹದಿಂದ ಪ್ರಗ್ಯಾ ಅವರನ್ನು ಆಯ್ಕೆ ಮಾಡಿದ್ದಾರೆ’’ ಎಂದು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೇ, 2011ರ ನವೆಂಬರ್ ನಲ್ಲಿ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಉಗ್ರರಿಂದ ಹತ್ಯೆಯಾದ ಮಾಜಿ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಅವರ ವಿರುದ್ಧ ಪ್ರಗ್ಯಾ ಅವರು ನೀಡಿರುವ ಹೇಳಿಕೆಯನ್ನು ನಿವೃತ್ತ ಅಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ.
ಸಾಧ್ವಿ ಅವರು ಪ್ರಮುಖ ಆರೋಪಿಯಾಗಿರುವ ಮಲೇಗಾವ್ ಬಾಂಬ್ ಸ್ಫೋಟ ಪ್ರಕರಣವನ್ನು ಹೇಮಂತ್ ಕರ್ಕರೆ ಅವರು ತನಿಖೆ ನಡೆಸುತ್ತಿದ್ದರು. ಈ ಸಂಬಂಧ ಏಪ್ರಿಲ್ 19ರಂದು ಭೋಪಾಲ್ ನಲ್ಲಿ ನಡೆದ ರೋಡ್ ಶೋ ವೇಳೆ, “ಕರ್ಕರೆ ಅವರು ನನ್ನ ಶಾಪದಿಂದಲೇ ಮೃತಪಟ್ಟಿದ್ದಾರೆ,’’ ಎಂದು ಪ್ರಜ್ಞಾ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಪ್ರಗ್ಯಾ ಅವರ ಹೇಳಿಕೆ ಹಲವು ವಲಯಗಳಲ್ಲಿ ಸಾಕಷ್ಟು ವಿರೋಧದ ಅಲೆ ಎಬ್ಬಿಸಿತು. ಅದರಲ್ಲೂ IPS ಅಸೋಸಿಯೇಷನ್ “ಅಶೋಕ್ ಚಕ್ರ ಪ್ರಶಸ್ತಿ ಪುರಸ್ಕೃತ, ದಿವಂಗತ ಶ್ರೀ ಹೇಮಂತ್ ಕರ್ಕರೆ ಅವರು ಭಯೋತ್ಪಾದಕರ ವಿರುದ್ಧ ದಾಳಿ ನಡೆಸಿ ಪ್ರಾಣತ್ಯಾಗ ಮಾಡಿ ಹುತಾತ್ಮರಾಗಿದ್ದಾರೆ. ಆದರೆ, ಅಭ್ಯರ್ಥಿಯೊಬ್ಬರು ನೀಡಿರುವ ಅವಮಾನಕರ ಹೇಳಿಕೆಯನ್ನು ಸಮವಸ್ತ್ರ ಧರಿಸಿರುವ ನಾವೆಲ್ಲಾ ಖಂಡಿಸುತ್ತೇವೆ ಮತ್ತು ಹುತಾತ್ಮರಾದ ಎಲ್ಲಾ ಯೋಧರಿಗೂ ಗೌರವ ಸಲ್ಲಬೇಕು ಎಂದು ಬೇಡಿಕೆ ಇಡುತ್ತಿದ್ದೇವೆ,’’ ಎಂದು ಆಕ್ರೋಶ ಭರಿತವಾಗಿ ಪ್ರತಿಕ್ರಿಯಿಸಿತ್ತು.
ನಿವೃತ್ತ ಅಧಿಕಾರಿಗಳ ಜತೆ ನಾಗರೀಕರು ಸಹ ಕೈಜೋಡಿಸಿ ಪ್ರಜ್ಞಾ ಅವರ ಹೇಳಿಕೆ ಹಾಗೂ ವರ್ತನೆಯನ್ನು ನಿಸ್ಸಂದೇಹವಾಗಿ ಖಂಡಿಸಬೇಕು ಎಂದು ಪತ್ರದಲ್ಲಿ ನಾಗರಿಕರಿಗೆ ಮನವಿ ಮಾಡಿದ್ದಾರೆ.
ಇದೇ ವೇಳೆ, ಬಿಜೆಪಿ ಸಾಧ್ವಿ ಅವರನ್ನು ಕಣದಿಂದ ಹಿಂದೆ ಸರಿಸಬೇಕು ಎಂದು ಬೇಡಿಕೆಯನ್ನು ನಿವೃತ್ತ ಹಿರಿಯ ಅಧಿಕಾರಿಗಳ ಸಮೂಹ ಇಟ್ಟಿದೆ. ‘ಪ್ರಧಾನಿ ಮೋದಿ ಅವರು ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯುತ್ತೇನೆಂದು ಪ್ರಮಾಣ ವಚನ ಸ್ವೀಕರಿಸುವ ವೇಳೆ ಹೇಳಿರುವುದನ್ನು ನೆನಪಿಸಿರುವು ಪತ್ರದಲ್ಲಿ ಇಡೀ ಚುನಾವಣಾ ಪ್ರಕ್ರಿಯೆಯಲ್ಲಿ ವ್ಯಾಪಿಸುತ್ತಿರುವ ಭಯ, ಬೆದರಿಕೆ, ಗುಂಪುಗಟ್ಟಿ ಸಾಯಹೊಡೆಯುವಂತಹ ವಾತಾವರಣಕ್ಕೆ ಅಂತ್ಯ ಹಾಡಬೇಕು, ಇದರ ಮುಂದಾಳತ್ವವನ್ನು ನೀವೆ ವಹಿಸಿಕೊಳ್ಳಬೇಕು’ ಎಂದು ಪತ್ರದಲ್ಲಿ ಕೋರಿದ್ದಾರೆ.
ಸಾದ್ವಿ ಪ್ರಗ್ಯಾ ಸಿಂಗ್ ಅವರು ಸದ್ಯ ಕಾನೂನು ಬಾಹಿರ ಚಟುವಟಿಕೆ (ನಿಗ್ರಹ) ಕಾಯ್ದೆಯಡಿ ಭಯೋತ್ಪಾದನಾ ಆರೋಪ ಹೊತ್ತು ವಿಚಾರಣೆ ಎದುರಿಸುತ್ತಿದ್ದಾರೆ. ಸೆಕ್ಷನ್ 16 (ಭಯೋತ್ಪಾದನಾ ಕೃತ್ಯ ಎಸಗುವ ಕಾಯ್ದೆ) ಮತ್ತು ಐಪಿಸಿ ಸೆಕ್ಷನ್ ಅಡಿ ಕೊಲೆ ಪ್ರಕರಣ, ಅಪರಾಧ ಸಂಚು ರೂಪಿಸುವುದು ಮತ್ತು ಕೋಮುವಾದ ಬಿತ್ತುವಿಕೆಗಳಂಥ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣವನ್ನು ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ಭೇದಿಸಿದಾಗ ಸಾಧ್ವಿ ಅವರ ಹೆಸರಿನಲ್ಲಿ ದಾಖಲೆ ಇರುವ ಮೊಟಾರ್ ಬೈಕಿನಲ್ಲಿ ಬಾಂಬ್ ಇಟ್ಟು ಸ್ಫೋಟ ನಡೆಸಿದ್ದು ಬಯಲಾಗಿತ್ತು.
More Articles
By the same author
Related Articles
From the same category