ಚುನಾವಣೆ ಗೆಲ್ಲಲು ಏನನ್ನೂ ಮಾಡಲು ಸಿದ್ದವಾಗಿರುವ ಪ್ರಧಾನಿ ನರೇಂದ್ರ ಮೋದಿ ಇಡೀ ದೇಶದ ಗ್ರಾಹಕರನ್ನು ನಯವಾಗಿ ವಂಚಿಸುತ್ತಿದ್ದಾರೆ. ಇದು ನಯ ವಂಚನೆ. ನೇರವಾಗಿ ಮಾಡುತ್ತಿರುವ ವಂಚನೆಯಲ್ಲ. ವಂಚನೆಗೆ ಒಳಗಾದವರಿಗೆ ಗೊತ್ತೂ ಆಗುವುದಿಲ್ಲ. ಆದರೆ, ಈ ನಯವಂಚನೆ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಮತಜೋಳಿಗೆಯನ್ನು ತುಂಬಿಸಿಕೊಳ್ಳುತ್ತಾರೆ.
ಅಷ್ಟಕ್ಕೂ ಏನಿದು ವಂಚನೆ?
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಆರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆ. ಬ್ರೆಂಟ್ ಕ್ರೂಡ್ 75 ಡಾಲರ್ ಮುಟ್ಟಿದೆ. ಡಬ್ಲ್ಯೂಟಿಐ ಕ್ರೂಡ್ 66.16 ಡಾಲರ್ ಗೆ ಏರಿದೆ.
ಕಳೆದ 50 ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಏರುತ್ತಲೇ ಇದೆ. ಭಾರತದ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರದ ಏರಿಳಿತಕ್ಕೆ ಅನುಗುಣವಾಗಿ ನಿತ್ಯವೂ ನಿಗದಿಯಾಗುತ್ತದೆ.
ಪ್ರಧಾನಿ ಮೋದಿ ಅವರ ಚಮತ್ಕಾರ ಇಲ್ಲೇ ಇರೋದು! ಮಾರ್ಚ್ 10 ಕ್ಕೆ ಕೇಂದ್ರ ಚುನಾವಣಾ ಆಯೋಗ ಲೋಕಸಭಾ ಚುನಾವಣೆಗಳನ್ನು ಘೋಷಣೆ ಮಾಡಿ, ಚುನಾವಣಾ ನೀತಿ ಸಂಹಿತೆಯನ್ನು ಜಾರಿಗೆ ತಂದಿತು. ಪ್ರಧಾನಿ ಮೋದಿ ಈಗಾಗಲೇ ನೀತಿ ಸಂಹಿತೆ ಉಲ್ಲಂಘಿಸಿದ ಅರ್ಧ ಡಜನ್ ಆರೋಪ ಹೊತ್ತಿದ್ದಾರೆ. ಇಲ್ಲಿ ನಾವು ಹೇಳ ಹೊರಟಿರುವುದು ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ಅಲ್ಲ.
ಮಾರ್ಚ್ 10 ರಂದು ಚುನಾವಣೆ ಘೋಷಣೆ ಆದ ನಂತರ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕ್ರೂಡ್ ದರ 9.25 ಡಾಲರ್ ಏರಿಕೆಯಾಗಿದೆ. ಮಾರ್ಚ್ 10 ರಂದು ಭಾನುವಾರ. ಅಂದು ವಹಿವಾಟು ನಡೆಯುವುದಿಲ್ಲ. ಮಾರ್ಚ್ 8ರಂದು ವಹಿವಾಟು ಮುಕ್ತಾಯಗೊಂಡಾಗ ಕಚ್ಚಾ ತೈಲ ದರ 65.75 ಡಾಲರ್ ಇತ್ತು. ಏಪ್ರಿಲ್ 25 ರಂದು 75 ಡಾಲರ್ ಮುಟ್ಟಿದೆ. ಈ 45 ದಿನಗಳಲ್ಲಿ ಶೇ.14ರಷ್ಟು ಏರಿಕೆಯಾಗಿದೆ.
ಆದರೆ, ಚುನಾವಣೆ ಘೋಷಣೆ ಆದ ನಂತರ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರ ಶೇ. 0.75ರಷ್ಟು ಮತ್ತು ಡಿಸೇಲ್ ದರ ಶೇ.1.50ರಷ್ಟು ಮಾತ್ರ ಏರಿಕೆಯಾಗಿದೆ! ಮಾರ್ಚ್ 11 ರಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ 74.90 ರುಪಾಯಿ ಇತ್ತು. ಏಪ್ರಿಲ್ 25ರಂದು 75.40 ರುಪಾಯಿಗೆ ಏರಿದೆ. ಅಂದರೆ, ಈ ನಲ್ವತ್ತೈದು ದಿನಗಳಲ್ಲಿ ಏರಿಕೆಯಾಗಿರುವುದು ಕೇವಲ 50 ಪೈಸೆ ಮಾತ್ರ. ಡಿಸೇಲ್ ದರ ಸಹ ಬೆಂಗಳೂರಿನಲ್ಲಿ ಮಾರ್ಚ್ 11 ರಂದು 68.70 ರುಪಾಯಿ ಇತ್ತು. ಏಪ್ರಿಲ್ 25ರಂದು 69.70ಕ್ಕೆ ಏರಿದೆ. ಒಟ್ಟು ಏರಿಕೆ ಕೇವಲ ಒಂದು ರುಪಾಯಿ.
ಇದೇ ನೋಡಿ ಪ್ರದಾನಿ ಮೋದಿಯ ಚಮತ್ಕಾರ! ಚುನಾವಣೆ ಮುಗಿಯುವವರೆಗೂ ಅಂತಾರಾಷ್ಟ್ರೀಯ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮಾಡಬಾರದು ಎಂದು ಪ್ರಧಾನಿ ಮೋದಿ ಪೆಟ್ರೋಲಿಯಂ ಖಾತೆ ಸಚಿವ ಧರ್ಮೆಂದ್ರ ಪ್ರಧಾನ್ ಅವರಿಗೆ ಫರ್ಮಾನು ನೀಡಿದ್ದಾರೆ. ಹೀಗಾಗಿ ಮಾರ್ಚ್ 11 ರಿಂದ ವಾರಕ್ಕೊಮ್ಮೆ ಪೆಟ್ರೋಲ್ ಗೆ ಐದು ಪೈಸೆ, ಡಿಸೇಲ್ ಗೆ 8 ಪೈಸೆಯಷ್ಟು ಏರಿಸಲಾಗಿದೆ. ಒಟ್ಟಿನಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಯ ಬಿಸಿಯು ಚುನಾವಣಾ ವಿಷಯವಾಗದಂತೆ ನೋಡಿಕೊಳ್ಳುವಲ್ಲಿ ‘ಚಮತ್ಕಾರಿ ಚೌಕಿದಾರ್’ ಮೋದಿ ಯಶಸ್ವಿಯಾಗಿದ್ದಾರೆ.
ವಾಸ್ತವವಾಗಿ ಏನಾಗಬೇಕಿತ್ತು?
2018 ಅಕ್ಟೋಬರ್ 31 ರಂದು ಬ್ರೆಂಟ್ ಕ್ರೂಡ್ ದರ 75 ಡಾಲರ್ ಗೆ ಏರಿದ್ದಾಗ ಬೆಂಗಳೂರಿನಲ್ಲಿ ಪೆಟ್ರೋಲ್ ದರ 81.17 ರುಪಾಯಿಗೆ ಮತ್ತು ಡಿಸೇಲ್ ದರ 74.16 ರುಪಾಯಿಗೆ ಏರಿತ್ತು. ಆ ದರವು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿನ ದರಕ್ಕೆ ಅನುಗುಣವಾಗಿ ದೇಶೀಯ ಮಾರುಕಟ್ಟೆಯಲ್ಲಿ ನಿಗದಿ ಮಾಡುವ ದರ.
ಇದರಲ್ಲಿ ನಯವಂಚನೆ ಹೇಗೆ?
ಪೆಟ್ರೋಲ್- ಡಿಸೇಲ್ ದರ ಏರಿಕೆ ಮಾಡದಿದ್ದರೆ ಗ್ರಾಹಕರಿಗೆ ಅನುಕೂಲವಲ್ಲವೇ? ಇದರಲ್ಲಿ ವಂಚನೆ ಏನು ಬಂತು? ಇಲ್ಲಿ ವಂಚನೆ ಇಲ್ಲ. ನಿಜಾ. ಆದರೆ, ಇದು ನಯ ವಂಚನೆ ಇದೆ.
ಮೇ 19 ರಂದು ಲೋಕಸಭಾ ಚುನಾವಣೆಯ ಏಳನೇ ಹಂತದ ಮತದಾನ ಮುಗಿಯುತ್ತದೆ. ಆದಾದ ಮರು ದಿನದಿಂದಲೇ ಪೆಟ್ರೋಲ್ ಮತ್ತು ಡಿಸೇಲ್ ದರವು ತ್ವರಿತವಾಗಿ ಏರುತ್ತದೆ. ಎಷ್ಟು ತ್ವರಿತ ಎಂದರೆ ನಿತ್ಯವೂ 50-60 ಪೈಸೆಯಂತೆ ಸತತ ಹತ್ತರಿಂದ 12 ದಿನಗಳ ಕಾಲ ಏರಿಕೆ ಮಾಡುವ ಸಾಧ್ಯತೆ ಇರುತ್ತದೆ. ಇದು ಗ್ರಾಹಕರಿಗೆ ತ್ವರಿತವಾಗಿ ಹೊರೆ ಹೇರಿದಂತಾಗುತ್ತದೆ.
ಅಷ್ಟಕ್ಕೆ ಅದು ನಿಲ್ಲದು. ಈ 60 ದಿನಗಳ ಕಾಲ ದರ ಏರಿಸದಿದ್ದ ತೈಲ ಮಾರಾಟ ಕಂಪನಿಗಳು ಈ ಅವಧಿಯಲ್ಲಿ ಆಗಿರುವ ನಷ್ಟವನ್ನು ತುಂಬಿಕೊಳ್ಳಲು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಕುಸಿದರೂ ದೇಶೀಯ ಮಾರುಕಟ್ಟೆಯಲ್ಲಿ ಮಾತ್ರ ಪೆಟ್ರೋಲ್ ಮತ್ತು ಡಿಸೇಲ್ ದರ ಇಳಿಸುವುದಿಲ್ಲ. ಅಂದರೆ, ಗ್ರಾಹಕರು 60 ದಿನಗಳಲ್ಲಿ ಉಳಿಸಿದ್ದನ್ನು ಆರೇಳು ದಿನಗಳಲ್ಲೇ ವಾಪಸು ಪೀಕಬೇಕಾಗುತ್ತದೆ.
ಮೋದಿ ಸರ್ಕಾರದ ನಯವಂಚನೆಯ ಈ ಆಟ ಹೊಸದೇನೂ ಅಲ್ಲ. ಈ ಹಿಂದೆ ವಿಧಾನಸಭಾ ಚುನಾವಣೆಗಳು ನಡೆಯುತ್ತಿದ್ದಾಗ ಮೂರು ವಾರಗಳ ಕಾಲ ಪೆಟ್ರೋಲ್, ಡಿಸೇಲ್ ದರ ಏರಿಕೆ ಮಾಡಿರಲಿಲ್ಲ. ಚುನಾವಣೆ ಮುಗಿದ ಒಂದು ವಾರದಲ್ಲೇ ಪೆಟ್ರೋಲ್, ಡೀಸೆಲ್ ದರ ಶೇ.5-6ರಷ್ಟು ಏರಿಕೆಯಾಗಿತ್ತು. ಪ್ರಧಾನಿ ಮೋದಿಯ ಈ ತಂತ್ರದಿಂದಾಗಿ ಚುನಾವಣೆ ಹೊತ್ತಿಗೆ ಬೆಲೆ ಏರಿಕೆಯ ವಿಷಯವು ಪ್ರಮುಖವಾಗಲೇ ಇಲ್ಲ. ಈಗಲೂ ಮೋದಿ ಅದೇ ತಂತ್ರ ಅನುಸರಿಸಿದ್ದಾರೆ. ಇಡೀ ದೇಶದ ಗ್ರಾಹಕರಿಗೆ ನಯವಾಗಿ ವಂಚಿಸುತ್ತಿದ್ದಾರೆ!
ದಿನ ಬ್ರೆಂಟ್ ಪೆಟ್ರೋಲ್ ಡಿಸೇಲ್
ಅಕ್ಟೋಬರ್ 31 $75 ₹81.17 ₹74.16
ಮಾರ್ಚ್ 11 $66.58 ₹74.90 ₹68.70
ಏಪ್ರಿಲ್ 25 $74.50 ₹75.40 ₹69.70
Shame.