ಅದು 2002ನೇ ಇಸವಿ!
2002ರಲ್ಲಿ ನರೇಂದ್ರ ಮೋದಿ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭವದು. ಗೋಧ್ರಾದಲ್ಲಿ ಸಾಬರಮತಿ ಎಕ್ಸ್ಪ್ರೆಸ್ ರೈಲಿನ ಎಸ್6 ಬೋಗಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದಾಗ ಅಯೋಧ್ಯೆಯಿಂದ ವಾಪಸ್ಸಾಗುತ್ತಿದ್ದ ಕರಸೇವಕರು ಪ್ರಾಣ ಕಳೆದುಕೊಂಡು ದಾರುಣ ಘಟನೆ ನಡೆಯಿತು. ಈ ಘಟನೆಯನ್ನು ಒಂದು ನೆಪವಾಗಿಸಿಕೊಂಡ ಸಂಘಪರಿವಾರದ ಸಂಘಟನೆಗಳು ತಕ್ಷಣವೇ ರಾಜ್ಯಾದ್ಯಂತ ಕೋಮುಗಲಭೆಗಳನ್ನು ವ್ಯವಸ್ಥಿತವಾಗಿ ನಡೆಸಿದವು. ಸಾವಿರಾರು ಅಮಾಯಕ ಮುಸ್ಲಿಮ್ ಕುಟುಂಬಗಳು ಮತ್ತು ಅವರಿಗೆ ನೆರವು ನೀಡುತ್ತಿದ್ದ ಹಿಂದೂಗಳ ಮೇಲೆ ತೀವ್ರ ದಾಳಿ ನಡೆಸಲಾಯಿತು. ಎರಡು ಸಾವಿರಕ್ಕೂ ಹೆಚ್ಚು ಮುಸ್ಲಿಮರ ಜನಾಂಗೀಯ ಮಾರಣಹೋಮ ನಡೆದು ಸ್ವತಂತ್ರಭಾರತದ ಚರಿತ್ರೆಯ ಪುಟಗಳಲ್ಲಿ ಒಂದು ಕರಾಳ ಅಧ್ಯಾಯದ ಸೇರ್ಪಡೆಯಾಯಿತು. 1984ರಲ್ಲಿ ಇಂದಿರಾಗಾಂಧಿ ಹತ್ಯೆಯ ನಂತರ ನಡೆದಿದ್ದ ಸಿಖ್ಖರ ಮಾರಣ ಹೋಮದ ನಂತರದಲ್ಲಿ ದೇಶದಲ್ಲಿ ನಡೆದ ಮತ್ತೊಂದು ಭೀಕರ ನರಹತ್ಯೆ ಪ್ರಕರಣ ಅಂದರೆ 2002ರ ಗುಜರಾತ್ ನರಹತ್ಯೆಗಳು. ಇಂತಹ ಭೀಕರ ನರಹತ್ಯೆ, ಸಾಮೂಹಿಕ ಅತ್ಯಾಚಾರಗಳಿಗೆ ಬಲಿಯಾದ ಕುಟುಂಬವೊಂದರ ವ್ಯಕ್ತಿಯೇ ನತದೃಷ್ಟೆ ಬಿಲ್ಕಿಸ್ ಬಾನು.
ರಕ್ತದ ಮಡುವಲ್ಲಿ ಬಿಲ್ಕಿಸ್ ಕುಟುಂಬದ ದೇಹಗಳು
2002ರಲ್ಲಿ ದಾಹೋದ್ ಜಿಲ್ಲೆಯ ರಾಧಿಕಪುರ್ ಗ್ರಾಮದ ವಾಸಿಯಾಗಿದ್ದ 19 ವರ್ಷದ ಬಿಲ್ಕಿಸ್ ಆಗ ಐದು ತಿಂಗಳ ಗರ್ಭಿಣಿ. ಗುಜರಾತ್ ನರಮೇಧ ನಡೆದಾಗ ಬಿಲ್ಕಿಸ್ ಬಾನು ತನ್ನ ಮೂರು ವರ್ಷದ ಮಗಳು ಸಲೇಹ ಮತ್ತಿತರ 15 ಕುಟುಂಬ ಸದಸ್ಯರೊಂದಿಗೆ ಸುರಕ್ಷಿತ ಸ್ಥಳ ಹುಡುಕಿಕೊಂಡು ಹಳ್ಳಿ ಬಿಟ್ಟುಹೋಗಲು ನಿರ್ಧರಿಸಿದರು. ತನ್ನೂರಿನಲ್ಲಿ ಮುಸ್ಲಿಮರ ಮನೆಗಳನ್ನು ಲೂಟಿ ಮಾಡಿ ಬೆಂಕಿ ಹಚ್ಚುತ್ತಿದ್ದ ಗಲಭೆಕೋರ ಗುಂಪುಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬಕ್ರೀದ್ ದಿನದಂದು ಲಾರಿಯೊಂದರಲ್ಲಿ ಬಚ್ಚಿಟ್ಟುಕೊಂಡು ಊರುಬಿಟ್ಟು ಹೊರಟರು. ಅವರು 17 ಜನರಿದ್ದರು. ಅಹಮದಾಬಾದ್ ನ ಸಮೀಪದಲ್ಲೇ ಇರುವ ರಣಧಿಕಪುರ ಗ್ರಾಮ ತಲುಪುತ್ತಿದ್ದಂತೆ ಒಮ್ಮೆಗೆ 30-35 ಜನರ ಮತಾಂಧರ ಉದ್ರಿಕ್ತ ಗುಂಪು ಮೇಲೆರಗಿ ದಾಳಿ ಆರಂಭಿಸಿದ ಒಂದು ಗಂಟೆಯೊಳಗೆ ಮನೆಮಂದಿಯ ದೇಹವೆಲ್ಲಾ ಛಿದ್ರವಾಗಿ ರಕ್ತದ ಮಡುವಿನಲ್ಲಿ ಚೆಲ್ಲಾಡಿತ್ತು. 20-30 ಮಂದಿ ಕತ್ತಿ, ಮಚ್ಚು, ದೊಣ್ಣೆಗಳನ್ನು ಹಿಡಿದು ಬಿಲ್ಕಿಸ್ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು.
ಬಿಲ್ಕಿಸ್ ಬಾನು ಸತ್ತಿರಲಿಲ್ಲ!
ಬಿಲ್ಕಿಸ್ ಬಾನೊ ಐದು ತಿಂಗಳ ಗರ್ಭವತಿಯಾಗಿದ್ದು ಆಕೆಯನ್ನು ಮತ್ತು ಅವಳ ತಾಯಿ ಸೇರಿದಂತೆ ಇತರ 4 ಮಹಿಳೆಯರ ಮೇಲೆ ಹೇಯವಾಗಿ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಬಿಲ್ಕಿಸ್ ಳ ಕಣ್ಣೆದುರೇ ತನ್ನ ಮೂರು ವರ್ಷದ ಕರುಳಕುಡಿ ಸಲೇಹಳ ತಲೆಬುರುಡೆಯನ್ನು ಒಬ್ಬ ಮತಾಂಧ ಜಜ್ಜಿ ಕೊಂದರೆ ಮತ್ತೊಂದು ಗುಂಪು ಅವಳ ಮೇಲಿನ ಬಟ್ಟೆಗಳನ್ನು ಹರಿದು ಚಿಂದಿ ಮಾಡಿತ್ತು. ತಾನು ಐದು ತಿಂಗಳ ಗರ್ಭಿಣಿ ಎಂದು ಬಿಲ್ಕಿಸ್ ಗುಜರಾತಿ ಭಾಷೆಯಲ್ಲಿ ಎಷ್ಟೇ ಗೋಗರೆದರೂ ಕ್ರೂರಿಗಳಿಗೆ ಯಾವ ಕರುಣೆಯೂ ಇರಲಿಲ್ಲ. ಅವರಿಗೆ ಅಮಾಯಕರನ್ನು ಕೊಲೆಗೈಯುವುದು ಪಾಪ ಎನಿಸಲೇ ಇಲ್ಲ. ಗರ್ಭವತಿಯಾಗಿದ್ದ ಬಿಲ್ಕಿಸ್ ಬಾನೋಳನ್ನು ಒಬ್ಬನ ಮೇಲೊಬ್ಬ ಅತ್ಯಾಚಾರ ಎಸಗಿ ಅವಳನ್ನು ಚಾಕುಚೂರಿಗಳಿಂದ ಮೈತುಂಬಾ ಗಾಯಗೊಳಿಸಿದರು. ಎರಡು ದಿನಗಳ ಹಿಂದಷ್ಟೇ ಹೆರಿಗೆಯಾಗಿದ್ದ ಅವಳ ತಂಗಿಯನ್ನೂ ಬಿಡದಂತೆ ಅತ್ಯಾಚಾರ ನಡೆಸಿ ಕೊನೆಗೆ ಅವಳನ್ನು ಕೊಲ್ಲಲು ಹಲ್ಲೆ ನಡೆಸಿದಾಗ ಅದೇ ಗುಂಪಿನಲ್ಲಿದ್ದ ಇನ್ನೊಬ್ಬ ಆಕೆಯ ತಾಯಿಯ ಗಂಟಲು ಸೀಳಿಬಿಟ್ಟಿದ್ದ.
ಇಷ್ಟೆಲ್ಲಾ ಮುಗಿಸಿದ ನಂತರ ಬಿಲ್ಕಿಸ್ ಸತ್ತಿದ್ದಾಳೆಂದು ತಿಳಿದು ಗಲಭೆಕೋರರು ಅವಳನ್ನು ಅಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟು ಹೋದರು. ಅದೃಷ್ಟವಶಾತ್ ಬಿಲ್ಕಿಸ್ ಬಾನು ಬದುಕಿ ಉಳಿದಿದ್ದಳು!
ಸುಮಾರು ಮೂರು ಗಂಟೆಗಳ ನಂತರ ಎಚ್ಚರಗೊಂಡ ಬಿಲ್ಕಿಸ್ ತನ್ನ ದೇಹವನ್ನು ಲಂಗದಿಂದ ಮುಚ್ಚಿಕೊಂಡು ಪಕ್ಕದ ಗ್ರಾಮಕ್ಕೆ ನಡೆದು ಹೋದಾಗ ಆದಿವಾಸಿ ಮಹಿಳೆಯೊಬ್ಬಳು ಈಕೆಗೆ ಸಹಾಯ ಮಾಡಿದ್ದಳು.
ಆರೋಪಿಗಳ ಪರ ನಿಂತ ಗುಜರಾತ್ ಪೊಲೀಸರು
ವಿದ್ಯಾವಂತೆಯಲ್ಲದಿದ್ದರೂ ಬಿಲ್ಕಿಸ್ ಬಾನೊ ವಿವೇಚನೆಯಿಂದ ಮೊಟ್ಟಮೊದಲಿಗೆ ಲಿಂಖೇಡ ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೋದಳು. ಆಗ ಪೊಲೀಸರು ಆಕೆಯ ದೂರನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿ ಆರೋಪಿಗಳ ಹೆಸರುಗಳನ್ನು ಎಫ್ಐಆರ್ ನಲ್ಲಿ ಸೇರಿಸಲು ನಿರಾಕರಿಸಿದರು. ಎಫ್ಐಆರ್ ನಲ್ಲಿ ಹೆಸರುಗಳನ್ನು ಸೇರಿಸಲೇಬೇಕೆಂದು ಒತ್ತಾಯಿಸಿದರೆ ಮತ್ತು ಹಾಗೇನಾದರೂ ಅತ್ಯಾಚಾರ ಆರೋಪ ಮಾಡಿದ್ದೇ ಆದಲ್ಲಿ ವಿಷದ ಇಂಜೆಕ್ಷನ್ ನೀಡುವುದಾಗಿ ಪೊಲೀಸರು ಬೆದರಿಕೆ ಒಡ್ಡಿದ್ದರು. ಆದರೆ ಕುಟುಂಬವನ್ನು ಕಣ್ಣೆದುರೇ ಕಳೆದುಕೊಂಡಿದ್ದ ಬಿಲ್ಕಿಸ್ ನ್ಯಾಯ ಪಡೆಯಲೇಬೇಕೆಂಬ ಒತ್ತಾಸೆಯಿಂದ ಈ ಸವಾಲುಗಳನ್ನೆಲ್ಲಾ ಎದುರಿಸಿದಳು. ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ದೂರು ದಾಖಲಿಸಲು ಈಕೆಗೆ ನೆರವಾದರು.
ಅತ್ಯಾಚಾರದ ಪ್ರಕರಣಗಳಲ್ಲಿ ತಕ್ಷಣ ವೈದ್ಯಕೀಯ ಪರೀಕ್ಷೆಯಾಗಬೇಕೆಂಬ ನಿಯಮವಿದ್ದರೂ ಬಿಲ್ಕಿಸ್ ಳನ್ನು ಗೋಧ್ರಾ ಪರಿಹಾರ ಕ್ಯಾಂಪ್ ಗೆ ಹೋದ ನಂತರವೇ ತಪಾಸಣೆ ಮಾಡಿಸಿದ್ದು. ದೂರು ದಾಖಲಿಸಿದ ಒಂದು ವರ್ಷದ ವರೆಗೂ ತಾವೇ ತನಿಖೆ ಕೈಗೊಂಡು ನಂತರ ಆಕೆಯ ಹೇಳಿಕೆಗಳು ಸ್ಥಿರವಾಗಿಲ್ಲ ಎಂದು ಹೇಳಿ ತನಿಖೆಯನ್ನು ಅವಸರದಲ್ಲಿ ಮುಗಿಸಲು ಯತ್ನಿಸಿದ ಸ್ಥಳೀಯ ಪೊಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿಬಿಟ್ಟರು. ಬಹುತೇಕ ಎಲ್ಲಾ ಗೋಧ್ರಾ ಹಿಂಸಾಚಾರ ಪ್ರಕರಣಗಳಲ್ಲೂ ಗುಜರಾತ್ ಪೊಲೀಸ್ ಇಲಾಖೆಯ ನಡವಳಿಕೆ ಇದೇ ರೀತಿ ಇದ್ದದ್ದನ್ನು ಕಾಣಬಹುದು.
ತದನಂತರ ಈ ಪ್ರಕರಣ ಗುಜರಾತ್ ಸಿಐಡಿಗೆ ವರ್ಗಾವಣೆಯಾಗಿದ್ದರಿಂದ ಇನ್ನಷ್ಟು ಕಿರುಕುಳಗಳನ್ನು ಬಿಲ್ಕಿಸ್ ಎದುರಿಸಬೇಕಾಯಿತು. ಅತ್ಯಾಚಾರ ಎಸಗಿ ಕೊಂದವರು ಸುರಕ್ಷಿತವಾಗಿರುವ ವ್ಯವಸ್ಥೆಯನ್ನು ಮೋದಿಯ ಗುಜರಾತ್ ಸರ್ಕಾರ ದಯಪಾಲಿಸಿತ್ತು.
ಸುಪ್ರೀಮ್ ಕದ ತಟ್ಟಿದ ಬಿಲ್ಕಿಸ್
2003ರಲ್ಲಿ ಬಿಲ್ಕಿಸ್ ಬಾನೊ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕದ ತಟ್ಟಿ ನಂತರ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋದಳು. ಕಿರುಕುಳ, ಬೆದರಿಕೆಗಳಿಂದಾಗಿ ಆಕೆ ಎರಡು ವರ್ಷಗಳಲ್ಲಿ 20 ಬಾರಿ ಮನೆಯನ್ನು ಬದಲಿಸಬೇಕಾಯಿತು. ಪೊಲೀಸ್ ಅಧಿಕಾರಿಗಳು ಬಿಲ್ಕಿಸ್ ಳಿಗೆ ತೀವ್ರ ಬೆದರಿಕೆ ಒಡ್ಡಿದ ಬಗ್ಗೆ ವರದಿಯಾದವು. ಗುಜರಾತ್ ರಾಜ್ಯ ಸರ್ಕಾರದ ಬಗ್ಗೆ ತನ್ನ ಅವಿಶ್ವಾಸವನ್ನು ವ್ಯಕ್ತಪಡಿಸಿದಾಗ 2004ರಲ್ಲಿ ಸರ್ವೋಚ್ಚ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಿ ನಂತರ ಸಿಬಿಐ ತನಿಖೆಗೆ ಆದೇಶಿಸಿತು. ಗುಜರಾತ್ ಪೊಲೀಸರು ಆರೋಪಿಗಳನ್ನು ಬಂಧಿಸದಿದ್ದಾಗ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸಿಬಿಐ ಮೊದಲ ಬಾರಿಗೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಜನವರಿ 2004ರಲ್ಲಿ ಬಂಧಿಸಿತು. ಅಲ್ಲದೆ ಮರುಪರೀಕ್ಷೆಗಾಗಿ ಕೊಲೆಯಾಗಿದ್ದವರ ದೇಹಗಳನ್ನು ಗೋರಿಗಳಿಂದ ಹೊರತೆಗೆಯಲಾಯಿತು.
ಗುಜರಾತ್ ಸರ್ಕಾರಕ್ಕೆ ಚಾಟಿ
2004ರಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ಬಿಲ್ಕಿಸ್ ಬಾನೊ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದರು:
“ನಮ್ಮನ್ನು ರಕ್ಷಿಸುವುದು ಸರ್ಕಾರದ ಕೆಲಸವಲ್ಲವೇನು? ಆ ಘಟನೆಗೆ ನಮಗೆ ಪರಿಹಾರ ನೀಡಬಾರದೇನು? ಇದೀಗ ಸರ್ವೋಚ್ಛ ನ್ಯಾಯಾಲಯ ಈ ವಿಚಾರವನ್ನು ಕೈಗೆತ್ತಿಕೊಂಡಿರುವುದರಿಂದ ಲೈಂಗಿಕ ಹಿಂಸಾಚಾರಕ್ಕೆ ಪರಿಹಾರ ಮತ್ತು ಅದನ್ನು ತಡೆಗಟ್ಟುವ ಕುರಿತು ಚರ್ಚೆಯಾಗಲಿದೆ ಎಂಬ ವಿಶ್ವಾಸ ಹೊಂದಿದ್ದೇನೆ. ಇಂದು ಇದನ್ನು ಭರವಸೆಯ ಜೊತೆ ನೋವಿನಿಂದ ಹೇಳುತ್ತಿದ್ದೇನೆ, ಏಕೆಂದರೆ 2002ರ ಗುಜರಾತ್ ನರಮೇಧದಲ್ಲಿ ನನ್ನ ಸಮುದಾಯದ ಅದೆಷ್ಟೋ ಮಹಿಳೆಯರ ಮೇಲೆ ಲೈಂಗಿಕ ಹಿಂಸೆಯನ್ನು ವ್ಯವಸ್ಥಿತವಾಗಿ ಪ್ರಯೋಗಿಸಿದ್ದು ನನಗೆ ತಿಳಿದಿದೆ. ನಾನೊಬ್ಬಳೇ ಅಲ್ಲ ಇದಕ್ಕೆ ಬಲಿಯಾಗಿರುವುದು.”
2004ರಲ್ಲಿ ಇದೇ ರೀತಿಯದ್ದೇ ಆದ ಬೆಸ್ಟ್ ಬೇಕರಿ ಪ್ರಕರಣ ಸರ್ವೋಚ್ಛ ನ್ಯಾಯಾಲಯದ ಮುಂದೆ ಬಂದಾಗ, ನ್ಯಾಯಪೀಠವು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, “ಬೆಸ್ಟ್ ಬೇಕರಿ ಮತ್ತು ಅಮಾಯಕ ಮಕ್ಕಳು ಮತ್ತು ಅಸಾಹಯಕ ಮಹಿಳೆಯರು ಸುಟ್ಟು ಹಾಕುತ್ತಿರುವಾಗ, ಆಧುನಿಕ ನೀರೋಗಳು ಬೇರೆಲ್ಲೋ ನೋಡುತ್ತಿದ್ದರು ಮತ್ತು ಬಹುಶಃ ತಪ್ಪಿತಸ್ಥರನ್ನು ಹೇಗೆ ರಕ್ಷಿಸಬಹುದೆಂದು ಚಿಂತಾಮಗ್ನರಾಗಿದ್ದರೇನೊ” ಎಂದಿತ್ತು.
ಆರೋಪಿಗಳಿಗೆ ಶಿಕ್ಷೆ
2008ರಲ್ಲಿ ಮುಂಬಯಿಯ ಕೆಳನ್ಯಾಯಾಲಯ 20 ಆರೋಪಿಗಳ ಪೈಕಿ 13 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಇದು 2002ರ ಗುಜರಾತ್ ಕೋಮುಗಲಭೆಗಳಲ್ಲಿ ನಡೆದಿದ್ದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮೊಟ್ಟಮೊದಲ ಶಿಕ್ಷೆಯ ತೀರ್ಪಾಗಿತ್ತು.
ಜಸ್ವಂತ್ ನಾಯ್, ಗೋವಿಂದ್ ನಾಯ್ ಮತ್ತು ಶೈಲೇಶ್ ಭಟ್ ಇವರುಗಳಿಗೆ ಅತ್ಯಾಚಾರ ಮತ್ತು ಕೊಲೆ ಅಪರಾಧಗಳಿಗಾಗಿ ಗಲ್ಲುಶಿಕ್ಷೆ ನೀಡಬೇಕೆಂದು ಮತ್ತು ಇತರ ಏಳು ಆರೋಪಿಗಳ ಬಿಡುಗಡೆಗಾಗಿ ಕೆಳಕೋರ್ಟಿನ ತೀರ್ಪನ್ನು ಬಾಂಬೆ ಹೈಕೋರ್ಟ್ ನಲ್ಲಿ ಸಿಬಿಐ ಪ್ರಶ್ನಿಸಿತು. ಮೇ 2017ರಲ್ಲಿ ಬಾಂಬೆ ಹೈ ಕೋರ್ಟ್ ಕೆಳನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು, ಉಳಿದ ಏಳು ಮಂದಿ ಆರೋಪಿಗಳನ್ನೂ ಶಿಕ್ಷೆಗೆ ಗುರಿಪಡಿಸಿತು.
ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಬಿಲ್ಕಿಸ್ ಬಾನೊಳ ಮೊದಲ ದೂರನ್ನು ದಾಖಲಿಸಲು ನಿರಾಕರಿಸಿದ್ದಕ್ಕಾಗಿ ಮುಂಬಯಿ ಉಚ್ಚನ್ಯಾಯಾಲಯ ಲಿಂಖೇಡ ಪೊಲೀಸ್ ಠಾಣೆಯ ಅಧಿಕಾರಿ ಸೊಮಾಭಾಯಿ ಗೋರಿಗೆ ಮೂರು ವರ್ಷಗಳ ಸಜೆ ಆದೇಶಿಸಿತು. ಆದರೆ ಕೆಳನ್ಯಾಯಾಲಯ ತೀರ್ಪು ನೀಡಿದಾಗಲೇ ಈತ ನಾಲ್ಕು ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಿದ್ದರಿಂದ ಆತನನ್ನು ಮುಕ್ತಗೊಳಿಸಲಾಯಿತು.
ಘನತೆಗಾಗಿ ಸಂತ್ರಸ್ತೆಯರ ಹೋರಾಟ
ಬಿಲ್ಕಿಸ್ ಬಾನೊ ಎಂದೇ ಹೆಸರುವಾಸಿಯಾಗಿರುವ ಬಿಲ್ಕಿಸ್ ಯಾಕೂಬ್ ರಸೂಲ್, 2002ರಲ್ಲಿ ಗುಜರಾತಿನಲ್ಲಿ ನಡೆಸಲಾದ ನರಮೇಧದದ ಒಂದು ಅಧ್ಯಾಯವಷ್ಟೇ. ಅಂದು ಸಹಸ್ರಾರು ಮುಸ್ಲಿಮರ ಮಾರಣಹೋಮ ನಡೆಸಿ, ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದವರನ್ನು ಗುಜರಾತ್ನ ಮೋದಿ ಸರ್ಕಾರವೇ ಖುದ್ದು ರಕ್ಷಿಸಿತ್ತೆಂಬ ಆರೋಪವಿದೆ. 2002ರ ಗುಜರಾತ್ ಗಲಭೆಗಳ ಬಗ್ಗೆ ಅಧ್ಯಯನ ನಡೆಸಿರುವ ಕಾನೂನು ಹೋರಾಟಗಾರರಾದ ವಾರಿಷಾ ಫರಾಸತ್ ಮತ್ತು ಪ್ರಿತಾ ಝಾ ಹೇಳುವಂತೆ, “ಗುಜರಾತಿನ ಅತ್ಯಾಚಾರ ಸಂತ್ರಸ್ತೆಯರ ಹೋರಾಟ ಕೇವಲ ನ್ಯಾಯಾಲಯಗಳಿಗೆ ಸೀಮಿತವಾಗಿರಲಿಲ್ಲ, ಈಗಲೂ ಆಗಿಲ್ಲ. ಅವರು ತಮ್ಮದೇ ಸಮುದಾಯಗಳಲ್ಲೂ ಸಹ ತಮ್ಮ ಘನತೆಗಾಗಿ ಹೋರಾಡಬೇಕಾಗುತ್ತದೆ.”
ಗಲಭೆ ಸಂತ್ರಸ್ತರ ಬದುಕು ಸರ್ಕಾರದ ಹೊಣೆ
ಸರ್ವೋಚ್ಛ ನ್ಯಾಯಾಲಯ ಗುಜರಾತ್ ಸರ್ಕಾರದ ಹೊಣೆಗಾರಿಕೆಯನ್ನು ಸ್ಪಷ್ಟವಾಗಿ ಗುರುತಿಸಿ ಬಿಲ್ಕಿಸ್ ಬಾನೊ ಬದುಕನ್ನು ಕಟ್ಟಿಕೊಡುವಂತಹ ತೀರ್ಪು ನೀಡಿದೆ. ಕಣ್ಣೆದುರೇ 3 ವರ್ಷದ ಪುಟ್ಟ ಮಗಳೂ ಸೇರಿದಂತೆ ಕುಟಂಬದ 14 ಮಂದಿಯನ್ನು ಕೊಚ್ಚಿ ಹಾಕಿದ್ದ ಕೊಲೆಗಡುಕರಿಂದ ತಪ್ಪಿಸಿಕೊಂಡಿದ್ದ ಬಿಲ್ಕಿಸ್ ಬಾನು 17 ವರ್ಷಗಳ ಕಾನೂನು ಹೋರಾಟದ ನಂತರ ಪಡೆದಿರುವ ತೀರ್ಪಿನ ಕುರಿತು ಮಾತನಾಡಿ, “ನನ್ನ 3 ವರ್ಷದ ಮಗಳು ಸಲೇಹಳನ್ನು ಜಜ್ಜಿ ಕೊಂದರು. ಅವಳ ದೇಹವೂ ಸಿಗದಂತಾಯಿತು. ಅವಳ ಅಂತ್ಯಕ್ರಿಯೆಯನ್ನೂ ಮಾಡಲಾಗಲಿಲ್ಲ. ಆ ನೋವು ನನ್ನನ್ನಿನ್ನೂ ಕಾಡುತ್ತಿದೆ” ಎಂದು ತಮ್ಮ ಸಂಕಟವನ್ನು ತೋಡಿಕೊಂಡಿದ್ದಾರೆ. ಅಲ್ಲದೆ ಸರ್ವೋಚ್ಛ ನ್ಯಾಯಾಲಯವು ತಾನು ಪಟ್ಟಿರುವ ವೇದನೆಯನ್ನು ಅರ್ಥಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಪರಿಹಾರದ ಮೊತ್ತದಲ್ಲಿ ಸ್ವಲ್ಪ ಭಾಗವನ್ನು ಅತ್ಯಾಚಾರ ಮತ್ತು ಮತೀಯ ಹಿಂಸೆಗಳ ಸಂತ್ರಸ್ತರಿಗೆ ಮೀಸಲಿಟ್ಟು ಆ ನಿಧಿಗೆ ಸಲೇಹಳ ಹೆಸರಿಡುವುದಾಗಿ ಬಿಲ್ಕಿಸ್ ಬಾನೊ ಘೋಷಿಸಿದ್ದಾರೆ.
2002ರ ಗುಜರಾತ್ ಹಿಂಸಾಚಾರಗಳು ಇತ್ತೀಚಿನ ವರ್ಷಗಳಲ್ಲಿ ಭಾರತ ಕಂಡಂತಹ ಅತ್ಯಂತ ಬರ್ಬರ ಮತ್ತು ವ್ಯವಸ್ಥಿತ ಕೋಮುಗಲಭೆಗಳಾಗಿವೆ. ಸಾವಿರಾರು ಮಹಿಳೆಯರು ಅತ್ಯಾಚಾರಕ್ಕೆ ಬಲಿಯಾದರು, ಕೊಲೆಯಾದರು; ಅಸಂಖ್ಯಾತ ಮುಸ್ಲಿಮರು ಕಗ್ಗೊಲೆಯಾದರು. ಇಂತಹ ಸಂದರ್ಭದಲ್ಲಿ ಸಂಘಸಂಸ್ಥೆಗಳ ನೆರವಿನಿಂದ ಕೆಚ್ಚೆದೆಯಿಂದ ರಾಜ್ಯಾಡಳಿತದ ಅನ್ಯಾಯದ ವಿರುದ್ಧ ನಿಂತು ಹೋರಾಡಿದವರಲ್ಲಿ ಬಿಲ್ಕಿಸ್ ಬಾನೊ ಪ್ರಮುಖರು. ಅವರ ಅವಿರತ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ.
ಸುಪ್ರೀಂ ಕೋರ್ಟು ನೀಡಿದ ತೀರ್ಪಿನ ನಂತರ ಪ್ರತಿಕ್ರಿಯಿಸಿರುವ ಬಿಲ್ಕಿಸ್ ಬಾನು “ನನಗೆ ಪ್ರತೀಕಾರ ತೀರಿಸಕೊಳ್ಳುವ ಹಂಬಲ ಇರಲಿಲ್ಲ, ನ್ಯಾಯ ಬೇಕಿತ್ತು ಅಷ್ಟೇ. ನನ್ನ ಮಗಳು ಸುರಕ್ಷಿತ ಭಾರತದಲ್ಲಿ ಬೆಳೆಯಬೇಕೆಂಬುದಷ್ಟೇ ನನ್ನ ಹಂಬಲವಾಗಿತ್ತು” ಎಂದಿರುವುದು ಅವರ ಹೃದಯವಂತಿಕೆಗೆ ಹಿಡಿದ ಕನ್ನಡಿಯಾಗಿದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಪಾರ ನಂಬಿಕೆ ಇಟ್ಟುಕೊಂಡಿರುವ ಅವರು ತಮ್ಮ ನೆರವಿಗೆ ಬಂದ ಮಾನವ ಹಕ್ಕು ಆಯೋಗ, ಸಿಬಿಐಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಮಾತ್ರವಲ್ಲ, ಕಳೆದ 17 ವರ್ಷಗಳಿಂದ ನೆಲೆಯಿಲ್ಲದೇ ಎಲ್ಲೆಂದರಲ್ಲಿ ಅಲೆಯಬೇಕಾಗಿ ಬಂದ ಅವರು ಮೊನ್ನೆಯಷ್ಟೇ ಮತ ಚಲಾಯಿಸಿ ಸಂಭ್ರಮಿಸಿದ್ದಾರೆ.
ಒಬ್ಬ ಮುಸ್ಲಿಂ ಆಗಿ ‘ಇಸ್ಲಾಂ’ ಎಂದರೆ ಶಾಂತಿ ಎಂಬ ಮಾತಿಗೆ ಅನ್ವರ್ಥವಾಗಿರುವ ಬಿಲ್ಕಿಸ್ ಬಾನು ಮಹಿಳೆಯಾಗಿ ಬತ್ತದ ಭರವಸೆ, ಛಲ ಬಿಡದ ಹೋರಾಟ, ಅಂತಃಕರಣ ಹಾಗೂ ಹೃದಯ ವಿಶಾಲತೆಗಳ ಸಾಕಾರ ಮೂರ್ತಿಯಾಗಿದ್ದಾರೆ.
ಕಾಶ್ಮಿರ ಹತ್ಯಾಕಾಂಡದಬಗ್ಗೆ ಯಾಕೆ ಸುಪ್ರಿಮ ಕೊರ್ಟ್ ಇಲ್ಲಿಯವರಿಗೆ ಸುಮ್ಮನಿದೆ. ಯಾಕೆ ಬುದ್ದಿಜಿವಿಗಳು ಬಾಯಿ ಮುಚ್ಚಿಕೊಂಡು ಕುತಿದ್ದಾರೆ. ಯಾಕೆ ಲೆಖರು ಇ ಬಗ್ಗೆ ಎನು ಬರೆಯುತ್ತಿಲ್ಲ? ಕಾಶ್ಮಿರಿ ಪಂಡಿತರು ಮಾನವರಲ್ಲವೆ. ಈ ಹೆಣ್ಣುಮಕ್ಕಳನ್ನು ಹೆಗೆ ಅತ್ಯಾಚಾರ ಮಾಡಿದರು, ಎಷ್ಟು ಜನರನ್ನು ಮಕ್ಕಳನ್ನುಮಕ್ಕಳನ್ನು ಕೊಲೆ ಮಾಡಿದ್ದಾರೆ. ಈ ಬಗ್ಗೆ ವಿವರವಾಗಿ ಬರೆಯಿರಿ ದ್ಯೆರ್ಯವಿದ್ದರೆ.