“ಇಡೀ ಜಗತ್ತು ಈಗ ಬೇಗುಸರಾಯ್ ನತ್ತ ಕುತೂಹಲದಿಂದ ನೋಡುತ್ತಿದೆ. ಇಲ್ಲಿ ದ್ವೇಷ ಗೆಲ್ಲುವುದೇ ಅಥವಾ ಜನರ ನೈಜ ವಿಷಯಗಳು ಗೆಲ್ಲುವವೇ? ಸತ್ಯ ಗೆಲ್ಲುತ್ತದೆಯೋ ಇಲ್ಲವೇ ಸುಳ್ಳು ಗೆಲ್ಲುತ್ತದೆಯೋ ಎಂಬುದನ್ನು ಗಮನಿಸುತ್ತಿದೆ. ಹಾಗಾಗಿ ನನ್ನ ಗೆಲುವು ನಿಮ್ಮ ಗೆಲವು, ನನ್ನ ಸೋಲು ನಿಮ್ಮದೇ ಸೋಲು”.
ಇದು ಬಿಹಾರದ ಬೇಗುಸರಾಯ್ ನಲ್ಲಿ ಕಣಕ್ಕಿಳಿಯುವ ಮೂಲಕ ಕೇವಲ ಆ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ಅಲ್ಲದೆ, ಇಡೀ ದೇಶವ್ಯಾಪಿ ಬಿಜೆಪಿ ಮತ್ತು ಅದರ ಕೋಮುವಾದಿ ರಾಜಕಾರಣಕ್ಕೆ ಪ್ರತಿಯಾಗಿ ದೇಶದ ಜನಸಾಮಾನ್ಯರ, ದಮನಿತರ ಮತ್ತು ಎಲ್ಲ ಬಗೆಯ ನೈಜ ಪ್ರಜಾಪ್ರಭುತ್ವವಾದಿಗಳ ಪರ ಸವಾಲು ಎಸೆದಿರುವ ಕನ್ಹಯ್ಯ ಕುಮಾರ್ ಚುನಾವಣಾ ಪ್ರಚಾರದುದ್ದಕ್ಕೂ ಆಡುತ್ತಿರುವ ಮಾತು.
“ನಾವು ಹಣದಲ್ಲಿ ಬಡವರಿರಬಹುದು. ಆದರೆ, ತಿಳಿವಳಿಕೆಯಲ್ಲಿ ಅಲ್ಲ. ಕೆಲಸ ಹುಡುಕಿಕೊಂಡು ನಾವು ಯಾಕೆ ದೂರದ ಪಟ್ಟಣಗಳಿಗೆ ಹೋಗಬೇಕು? ನಮ್ಮ ಮಕ್ಕಳು ಓದಲು ನಗರಗಳಿಗೆ ತಂದೆತಾಯಿಯನ್ನು ಬಿಟ್ಟು ಹೋಗಬೇಕು ಏಕೆ? ರಾಷ್ಟ್ರಕವಿ ಎನಿಸಿಕೊಂಡ ದಿನಕರ ಹುಟ್ಟಿದ ಈ ಊರಲ್ಲಿ ಒಂದು ವಿಶ್ವವಿದ್ಯಾಲಯವನ್ನೂ ಕಟ್ಟಲಾಗಿಲ್ಲ ಯಾಕೆ? ದುಡಿಯವ ಕೈಗೆ ಉದ್ಯೋಗ, ಓದುವ ಮಕ್ಕಳಿಗೆ ಉತ್ತಮ ಶಿಕ್ಷಣ, ಹಳ್ಳಿಗೆ ರಸ್ತೆ, ಕುಡಿಯುವ ನೀರು, ಆರೋಗ್ಯ ಸೇವೆ ನೀಡಲಾಗದ ಜನ, ನಮ್ಮನ್ನು ಜಾತಿ, ಧರ್ಮದ ಮೇಲೆ ಒಡೆದು, ದ್ವೇಷ ಬಿತ್ತಿ ರಾಜಕಾರಣದ ಫಸಲು ಕೊಯ್ಯುತ್ತಿದ್ದಾರೆ. ನಮ್ಮನ್ನು ಪರಸ್ಪದ ಹೊಡೆದಾಡಲು ಬಿಟ್ಟು ಅವರು ಅಧಿಕಾರದ ಕುರ್ಚಿ ಏರುತ್ತಿದ್ದಾರೆ. ಇದನ್ನು ಅರ್ಥಮಾಡಿಕೊಂಡರೆ, ನಮ್ಮನ್ನು ನಾವೇ ಆಳಿಕೊಳ್ಳಬಹುದು” ಎಂಬುದು ಕನ್ಹಯ್ಯ ಪ್ರಚಾರದ ಕೆಲವು ಸ್ಯಾಂಪಲ್ಲುಗಳಷ್ಟೇ.
“ನೀವು ಮತ ಹಾಕಿ ಆರಿಸಿಕಳಿಸಿದ ನಾಯಕನನ್ನು ನೀವು ನಾಳೆ ಕೊರಳಪಟ್ಟಿ ಹಿಡಿದು ಕೆಲಸ ಮಾಡಿಸಿಕೊಳ್ಳುವಂತಿರಬೇಕು. ಆದರೆ, ಈ ನಾಯಕರು ಗೆದ್ದು ಹೋಗುತ್ತಲೇ ತಮ್ಮ ಮನೆ ಮುಂದೆ ನಾಯಿ ಇದೆ ಎಚ್ಚರಿಕೆ ಎಂಬ ಫಲಕ ನೇತುಹಾಕುತ್ತಾರೆ. ಆಗ ನಿಮಗೆ ಅವರ ಮನೆಗೆ ಹೋಗಿ ಕೊರಳಪಟ್ಟಿ ಹಿಡಿದು ಕೇಳುವುದು ಸಾಧ್ಯವಾ? ಹಾಗಾಗದರೆ ನೀವು ಯಾರನ್ನು ಕೇಳುತ್ತೀರಿ?” ಎನ್ನುವ ಮೂಲಕ ನಾಯಕ ಮತ್ತು ಮತದಾರರ ನಡುವಿನ ಮಾಲೀಕ, ಸೇವಕನ ರೀತಿಯ ಸಂಬಂಧದ ಅಪಾಯವನ್ನು ಜನರಿಗೆ ಮನವರಿಕೆ ಮಾಡುವ ಪ್ರಯತ್ನ ಕನ್ಹಯ್ಯ ಅವರದ್ದು.
ಹೀಗೆ ಜನರ ನಿತ್ಯದ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ತನ್ನ ಪ್ರತಿಸ್ಪರ್ಧಿ ಬಿಜೆಪಿಯ ಕೋಮುದ್ವೇಷ ಖ್ಯಾತಿಯ ಗಿರಿರಾಜ್ ಸಿಂಗ್ ವಿರುದ್ಧ ಚುನಾವಣಾ ಕಣದಲ್ಲಿ ಸೆಣಸುತ್ತಿರುವ ಕನ್ಹಯ್ಯ ಅವರ ಯೋಚನೆ, ಚಿಂತನೆಗಳಷ್ಟೇ ಅಲ್ಲ; ಅವರ ಭಾಷೆ, ನುಡಿಗಟ್ಟು ಮತ್ತು ಹಾವಭಾವ, ನಡಿಗೆ ಕೂಡ ತನ್ನ ಹುಟ್ಟೂರಿನ ಜನರ ನಡುವೆಯೇ ಬೆರೆತುಹೋಗಿದೆ ಎಂಬುದು ಬೇಗುಸರಾಯ್ ನಿಂದ ಬರುತ್ತಿರುವ ವಿವಿಧ ಮಾಧ್ಯಮಗಳ ನೇರ ವರದಿಗಳ ಸಾರ.
ಅಷ್ಟೇ ಅಲ್ಲ; 2016ರ ಫೆಬ್ರವರಿಯಲ್ಲಿ ದೆಹಲಿಯ ಜೆಎನ್ ಯು ವಿವಿಯಲ್ಲಿ ಆಜಾದಿ ಘೋಷಣೆ ಕೂಗಿದರು ಎಂಬ ಆರೋಪದ ಹಿನ್ನೆಲೆಯಲ್ಲಿ ದಿಢೀರ್ ಸುದ್ದಿಯಾದ ದಿನದಿಂದ ಅಂತಿಮವಾಗಿ ಲೋಕಸಭಾ ಚುನಾವಣೆಯ ನಾಮಪತ್ರ ಸಲ್ಲಿಸುವವರೆಗೆ ವಿದ್ಯಾರ್ಥಿನಾಯಕನಾಗಿ, ಯುವ ನಾಯಕನಾಗಿ ಗುರುತಿಸಿಕೊಂಡಿದ್ದ ಕನ್ಹಯ್ಯ, ಇದೀಗ ಘಟಾನುಘಟಿ ನಾಯಕರ ಎದುರು ಜನರ ಕಣ್ಣಲ್ಲಿ ‘ನಾಯಕ’ನಾಗಿ ಕಾಣುವ ಉದ್ದೇಶದಿಂದ ಒಂದಿಷ್ಟು ತೂಕವನ್ನು ಏರಿಸಿಕೊಂಡಿದ್ದಾರೆ ಎಂಬ ವರದಿಗಳೂ ಇವೆ!
“ನಿಮ್ಮ ಹಕ್ಕುಗಳನ್ನು, ಸೌಲಭ್ಯಗಳನ್ನು, ಸರ್ಕಾರಿ ಸೇವೆಗಳನ್ನು ಪಡೆಯಲು ನೀವು ಬಲಾಢ್ಯರ ಮುಂದೆ ಕೈಕಟ್ಟಿ ನಿಲ್ಲುವುದು ಡೆಮಾಕ್ರಸಿ ಅಲ್ಲ; ನೀವಿರುವಲ್ಲಿಗೇ ಸರ್ಕಾರ ಮತ್ತು ಆಡಳಿತವನ್ನು ತರುವುದು ಡೆಮಾಕ್ರಸಿ. ಬಲಾಢ್ಯರ ಆಣತಿಯಂತೆ ನಡೆಯುವುದು ಪ್ರಜಾಫ್ರಭುತ್ವ ಅಲ್ಲ” ಎಂಬ ಕನ್ಹಯ್ಯ ಮಾತುಗಳಿಗೆ ಪ್ರತಿಕ್ರಿಯೆಯಾಗಿ, ಪ್ರಚಾರ ಸಭೆಯಲ್ಲಿ ನೆರೆದ ಜನ “ನಾವು ಬರೀ ಗುಂಪಲ್ಲ, ಈ ಚುಣಾವಣೆಯಲ್ಲಿ ನಮ್ಮಲ್ಲಿ ಪ್ರತಿಯೊಬ್ಬರೂ ಅಭ್ಯರ್ಥಿಗಳೇ” ಎಂಬ ಘೋಷಣೆ ಮೊಳಗಿಸುತ್ತಿದ್ದಾರೆ.
ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೋದಿ ಆಡಳಿತದಲ್ಲಿ ಒದಗಿರುವ ಆತಂಕ, ಜನರ ಹಕ್ಕುಗಳನ್ನು ಮೊಟಕುಗೊಳಿಸುತ್ತಿರುವುದು, ಜಿಎಸ್ ಟಿ, ನೋಟು ಬಂಧಿಯಂತಹ ಕ್ರಮಗಳು ರೈತರು, ಕಾರ್ಮಿಕರು, ಚಿಕ್ಕಪುಟ್ಟ ವ್ಯಾಪಾರಿಗಳು ಮತ್ತು ಕೂಲಿಕಾರರ ಮೇಲೆ ಉಂಟುಮಾಡಿದ ಪರಿಣಾಮ, ಫಸಲ್ ಭಿಮಾ ಯೋಜನೆಯ ವಂಚನೆ, ಅಡುಗೆ ಅನಿಲ ಮತ್ತು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ಬರೆ, ಬಿಎಸ್ ಎನ್ ಎಲ್ ನಂತಹ ಸರ್ಕಾರಿ ಸಂಸ್ಥೆಗಳನ್ನು ಖಾಸಗಿ ಹಿತಾಸಕ್ತಿಗಳಿಗೆ ಬಲಿಕೊಟ್ಟಿದ್ದರ ಪರಿಣಾಮ, ಬ್ಯಾಂಕಿಂಗ್ ವಲಯದ ಅನುತ್ಪಾದಕ ಆಸ್ತಿಯ ಹೊರೆಯಿಂದ ಜನಸಾಮಾನ್ಯರಿಗೆ ಆಗುವ ಅನಾನುಕೂಲ,.. ಮುಂತಾದ ವಿಷಯಗಳನ್ನು ಬೇಗುಸರಾಯ್ ನಂತಹ ಗ್ರಾಮೀಣ ಪ್ರದೇಶದ ಜನರಿಗೆ ಮನಮುಟ್ಟುವಂತೆ ಹೇಳುತ್ತಿದ್ದಾರೆ.
ಆ ನಿಟ್ಟಿನಲ್ಲಿ ಕನ್ಹಯ್ಯ ಅವರ ತಿಳಿವಳಿಕೆ ಮತ್ತು ಅನುಭವದ ಜೊತೆಗೆ ಅವರ ಬಿಹಾರಿ ಹಿಂದಿ ಮಾತನಾಡುವ ಶೈಲಿ ಮತ್ತು ಸ್ಥಳೀಯ ಭಾಷೆಗಳ ಅರಿವು ಕೂಡ ಪೂರಕವಾಗಿ ಒದಗಿಬರುತ್ತಿದೆ. ಆ ಕಾರಣದಿಂದಾಗಿಯೇ ಬೇಗುಸರಾಯ್ ಮತದಾರರು ಅವರೊಂದಿಗೆ ಬಹಳ ಬೇಗ ತಮ್ಮನ್ನು ತಾವು ಬೆಸೆದುಕೊಳ್ಳುತ್ತಿದ್ದು, “ನೀನು ನಮ್ಮವನು. ನಮ್ಮ ಹೆಮ್ಮೆಯ ಮಗ, ನಿನ್ನನ್ನು ದೇಶದ್ರೋಹಿ ಎಂದವರಿಗೆ ಏಪ್ರಿಲ್ 29ರಂದು(ಮತದಾನದ ದಿನ) ಉತ್ತರ ಕೊಡುತ್ತೇವೆ. ಯಾರು ದೇಶದ್ರೋಹಿ, ಯಾರು ದೇಶಪ್ರೇಮಿ ಎಂಬುದನ್ನು ತೋರಿಸಿಕೊಡುತ್ತೇವೆ” ಎಂದು ಸವಾಲು ಹಾಕುತ್ತಿದ್ದಾರೆ.
ಅದೇ ಹೊತ್ತಿಗೆ, “ನನ್ನ ಕಣ್ಣಾರೆ ನಿನ್ನನ್ನು ಕಾಣಲು ಬಂದೆ. ಈಗ ನಿನ್ನ ನೋಡಿ ಅಪ್ಪಿಕೊಂಡ ಮೇಲೆ ಸಮಾಧಾನವಾಯಿತು. ನೀನು ನಮ್ಮ ಮಣ್ಣಿನ ಮಗ. ಬಡವರನ್ನು ಎಂದೂ ಮರೆಯಬೇಡ. ನಿನ್ನ ಬಡತನದ ದಿನಗಳನ್ನು ಮರೆಯಬೇಡ. ದೇಶ ನಿನ್ನ ಕೈಯಲ್ಲಿದೆ ಅನ್ನೋದನ್ನು ಮರೆಯಬೇಡ” ಎಂಬ ಎಚ್ಚರಿಕೆಯನ್ನೂ ಹರಕಲು, ಮುರಕಲು ಬಟ್ಟೆಯ ಹಳ್ಳಿಗಾಡಿನ ಜನ ಕನ್ಹಯ್ಯನಿಗೆ ನೀಡುತ್ತಿದ್ದಾರೆ ಎಂಬುದನ್ನು ‘ಲೈವ್ ಮಿಂಟ್’ ಸಾಕ್ಷಾತ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಒಟ್ಟಾರೆ ತನ್ನ ಹುಟ್ಟೂರು ಬೇಗುಸರಾಯ್ ನ ಜನಸಾಮಾನ್ಯರ ನಡುವೆ ‘ಇವ ನಮ್ಮವ’ ಎಂಬ ಗಟ್ಟಿ ಭಾವನೆಯನ್ನು ಬಿತ್ತುವಲ್ಲಿ ಕನ್ಹಯ್ಯ ಯಶಸ್ವಿಯಾದಂತೆ ಕಾಣುತ್ತಿದೆ. ಅದೇ ಕಾರಣದಿಂದ ಅವರ ಪ್ರಮುಖ ಎದುರಾಳಿ ಬಿಜೆಪಿ ತನ್ನ ಪ್ರಚಾರ ತಂತ್ರವನ್ನೇ ಸಂಪೂರ್ಣ ಬದಲಾಯಿಸಿಕೊಂಡಿದೆ. ತೀವ್ರ ಮುಸ್ಲಿಂ ದ್ವೇಷದ ಮೂಲಕವೇ ರಾಜಕೀಯ ಅಸ್ತಿತ್ವ ಕಂಡುಕೊಂಡಿರುವ ಗಿರಿರಾಜ್ ಸಿಂಗ್, ಈ ಬಾರಿ ಬೇಗುಸರಾಯ್ ನಲ್ಲಿ ಕೋಮು ಸಾಮರಸ್ಯದ ಮಾತನಾಡಿದ್ದಾರೆ. ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಪ್ರಚಾರ ಸಭೆಯೊಂದರಲ್ಲಿ ಅವರು “ತಾನು ಈ ಬಾರಿ ಗೆದ್ದರೆ, ಕ್ಷೇತ್ರದಲ್ಲಿ ಕೋಮು ಸಾಮರಸ್ಯ ಕಾಪಾಡಲು ಆಧ್ಯತೆ ನೀಡುತ್ತೇನೆ” ಎಂದಿರುವುದಾಗಿ ವರದಿಗಳು ಹೇಳಿವೆ. ಅಲ್ಲದೆ, ಗಿರಿರಾಜ್ ಅವರಾಗಲೀ ಅಥವಾ ಇತರ ಬಿಜೆಪಿ ನಾಯಕರಾಗಲೀ ಪ್ರಚಾರಾಂದೋಲನದ ಉದ್ದಕ್ಕೂ ಅಪ್ಪಿತಪ್ಪಿಯೂ ಕನ್ಹಯ್ಯ ಹೆಸರನ್ನು ಪ್ರಸ್ತಾಪಿಸುತ್ತಿಲ್ಲ. ಎದುರಾಳಿಯ ಬಗ್ಗೆ ಮಾತನಾಡುವಾಗ ‘ತುಕಡೆ ತುಕಡೆ ಗ್ಯಾಂಗ್ ನಾಯಕ’ ಎಂದೋ, ‘ಅಪರೂಪದ ಪ್ರಬೇಧ’ ಎಂದೋ ಪ್ರಸ್ತಾಪಿಸುತ್ತಿರುವ ಬಿಜೆಪಿ ನಾಯಕರು, ಆ ಮೂಲಕ ಕನ್ಹಯ್ಯ ಮತ್ತು ಬೇಗುಸರಾಯ್ ನಡುವಿನ ಭಾವನಾತ್ಮಕ ಬಂಧಕ್ಕೆ ಅಪಮಾನ ಮಾಡಿದರು ಎಂಬ ಆರೋಪ ಬರದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.
ಕನ್ಹಯ್ಯ ಮತ್ತು ಗಿರಿರಾಜ್ ಇಬ್ಬರೂ ಸೇರಿರುವ ಬಹುಸಂಖ್ಯಾತ ಭೂಮಿಹಾರ್ ಸಮುದಾಯವನ್ನು ಹೊರತುಪಡಿಸಿ ಮುಸ್ಲಿಮರೇ ಎರಡನೇ ಅತಿದೊಡ್ಡ ಸಮುದಾಯವಾಗಿರುವ ಕ್ಷೇತ್ರದಲ್ಲಿ ಬಹುಶಃ ಕನ್ಹಯ್ಯ ಅಲ್ಲದೆ ಬೇರಾರೇ ಎದುರಾಳಿಯಾಗಿದ್ದರೂ ಬಿಜೆಪಿಯ ವರಸೆ ಬೇರೆಯೇ ಆಗಿರುತ್ತಿತ್ತು. ಈ ಬಾರಿಯೂ ಆರಂಭದಲ್ಲಿ ಕೆಲವು ಕಡೆ ಕೋಮು ಗಲಭೆ ಸೃಷ್ಟಿಸುವ ಮೂಲಕ ಧಾರ್ಮಿಕ ಭಾವನೆ ಕೆರಳಿಸಿ ಚುನಾವಣೆ ಗೆಲ್ಲುವ ಪ್ರಯತ್ನ ಮಾಡಲಾಯಿತು. ಆದರೆ, ಕನ್ಹಯ್ಯ ಮತ್ತು ಅವರ ಸ್ವಯಂಸೇವಕ ಪಡೆಯ ಸಕಾಲಿಕ ಮಧ್ಯಪ್ರವೇಶದಿಂದಾಗಿ ಅಂತಹ ಪ್ರಯತ್ನಗಳು ವಿಫಲವಾದವು. ಹಾಗಾಗಿ ಈಗ ಬಿಜೆಪಿ ಮತ್ತೊಮ್ಮೆ ಮೋದಿ, ವಿಕಾಸ್ ಮಂತ್ರ ಪಠಿಸತೊಡಗಿದೆ. ಜೊತೆಗೆ ಕನ್ಹಯ್ಯ ಹೆಸರು ಪ್ರಸ್ತಾಪಿಸದಂತೆ ಗಿರಿರಾಜ್ ಸಿಂಗ್ ಮತ್ತು ಬಿಜೆಪಿ ನಾಯಕರಿಗೆ ಸ್ವತಃ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರೇ ತಾಕೀತು ಮಾಡಿದ್ದಾರೆ ಎಂಬ ವರದಿಗಳೂ ಇವೆ.
ಇನ್ನು ಆರ್ ಜೆಡಿ ಅಭ್ಯರ್ಥಿ ಹಸನ್ ಮತ್ತು ಕನ್ಹಯ್ಯ ನಡುವೆ ಪರಸ್ಪರ ಯಾವುದೇ ರೀತಿಯ ವೈಯಕ್ತಿಕ ಆರೋಪ, ಟೀಕೆಗಳು ಕಣದಲ್ಲಿ ಕೇಳಿಬಂದಿಲ್ಲ ಎನ್ನಲಾಗುತ್ತಿದೆ.
ಅಷ್ಟರಮಟ್ಟಿಗೆ ದೆಹಲಿಯಿಂದ ತನ್ನ ಹುಟ್ಟೂರಿಗೆ ಮರಳಿ ಸಕ್ರಿಯ ರಾಜಕಾರಣದ ಪ್ರಯೋಗಕ್ಕೆ ಇಳಿದಿರುವ ಈ 32 ವರ್ಷದ ಯುವ ನಾಯಕ, ಕನಿಷ್ಠ ಬೇಗುಸರಾಯ್ ಮಟ್ಟಿಗಾದರೂ ಚುನಾವಣಾ ಪರಿಭಾಷೆಯನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಯಶಸ್ಸಿನ ಪರಿಣಾಮ ಎಷ್ಟರಮಟ್ಟಿಗೆ ಮತಗಳ ಮೇಲೆ ಆಗಿದೆ ಎಂಬುದನ್ನು ಕಾದುನೋಡಬೇಕಿದೆ.
ಆದರೆ, ಇಂದಿರಾ ಗಾಂಧಿಯ ಬಳಿಕ ದೇಶದ ಪ್ರಜಾಪ್ರಭುತ್ವದ ನೈಜ ಆಶಯಗಳಿಗೆ ಅಪಾಯಕಾರಿ ಎಂದು ಪರಿಗಣಿಸಿರುವ ನರೇಂದ್ರ ಮೋದಿಯವರ ವಿರುದ್ಧದ ಪ್ರಬಲ ಯುವ ದನಿಯಾಗಿ ಕನ್ಹಯ್ಯ ಹೊರಹೊಮ್ಮಿದ್ದಾರೆ. ಅದರಲ್ಲೂ ಜನ ಸಾಮಾನ್ಯರ ಕಣ್ಣಲ್ಲಿ ಆತ ‘ದೇಶವನ್ನು ಅಪಾಯದಿಂದ ಪಾರುಮಾಡುವ ನಾಯಕ’ನಾಗಿ ಕಾಣುತ್ತಿದ್ದಾನೆ ಎಂಬುದಕ್ಕೆ ಬೇಗುಸರಾಯ್ನ ಕೂಲಿ ಕಾರ್ಮಿಕರು, ಬಡ ರೈತರು, ಸಾಮಾನ್ಯರ ಫ್ಯಾಕ್ಟರಿ ಕಾರ್ಮಿಕರ ಕಣ್ಣಲ್ಲಿ ಆತ ಆಪತ್ಭಾಂಧವನಾಗುತ್ತಿರುವುದೇ ನಿದರ್ಶನ. ಕಾಕತಾಳೀಯ ಎಂದರೆ; ಸುಮಾರು ನಲವತ್ತು ವರ್ಷಗಳ ಹಿಂದೆ ತುರ್ತುಪರಿಸ್ಥಿತಿ ಹೇರಿಕೆಯ ಮೂಲಕ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಸವಾರಿ ಮಾಡಲು ಹೊರಟ ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಧೋರಣೆಗೆ ಪ್ರಬಲ ಪ್ರತಿರೋಧದ ದನಿ ಹುಟ್ಟಿದ್ದು ಕೂಡ ಇದೇ ಬಿಹಾರದಲ್ಲಿ; ಲೋಹಿಯಾ ಮತ್ತು ಜಯಪ್ರಕಾಶ ನಾರಾಯಣರ ಹೋರಾಟದ ಮೂಲಕ!
ಈಗ ಮತ್ತೆ ಚರಿತ್ರೆ ಮರುಕಳಿಸುವಂತಿದೆ. ದೇಶದ ಆಡಳಿತದ ಚುಕ್ಕಾಣಿ ಹಿಡಿದವರು, ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಾದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಮತ್ತು ಮಾಧ್ಯಮವನ್ನು ಹಾಗೂ ಚುನಾವಣಾ ಆಯೋಗವೂ ಸೇರಿದಂತೆ ಉನ್ನತ ಸ್ವಾಯತ್ತ ಸಂಸ್ಥೆಗಳನ್ನೇ ತಮ್ಮ ಮೂಗಿನ ನೇರಕ್ಕೆ ಬಗ್ಗಿಸುತ್ತಿರುವ ಆರೋಪಗಳು ಕೇಳಿಬರುತ್ತಿರುವ ಹೊತ್ತಲ್ಲಿ ಬಿಹಾರದ ಬೇಗುಸರಾಯ್ ನಿಂದ ಮತ್ತೊಂದು ಪರ್ಯಾಯ ದನಿ ಸಂಸತ್ ಪ್ರವೇಶಿಸುವ ತಯಾರಿಯಲ್ಲಿದೆ! ಅದು ಬಿಹಾರದ ನೆಲದ ಖದರು!