ಪಿಯೌ/ಬ್ರೆಜಿಲ್: ಡ್ರಗ್ಸ್ ಸ್ಮಗ್ಲಿಂಗ್ ದಂಧೆ ಮಾಡುವ ಮಾಲೀಕನನ್ನು ಪೊಲೀಸರಿಂದ ಕಾಪಾಡುವ ಸಲುವಾಗಿ ಗಿಳಿಯೊಂದು ಎಚ್ಚರಿಸಿದ ಕಾರಣ ಪೊಲೀಸರು ಗಿಳಿಯನ್ನೇ ಬಂಧಿಸಿದ ವಿಚಿತ್ರ ಘಟನೆ ನಡೆದಿದೆ.
ಬ್ರೆಜಿಲ್ ನ ಪಿಯೌ ರಾಜ್ಯದಲ್ಲಿ ಮಾದಕ ದ್ರವ್ಯ ವ್ಯವಹಾರ ನಡೆಸುವವರ ಮೇಲೆ ಪೊಲೀಸರು ದಾಳಿ ನಡೆಸುವಾಗ ಈ ಅಪರೂಪದ ಘಟನೆ ನಡೆದಿದೆ.
ಬ್ರೆಜಿಲ್ ನಾದ್ಯಂತ ಈ ಸುದ್ದಿ ಇದೀಗ ವೈರಲ್ ಆಗಿದ್ದು, ಗಿಳಿ ಮೂಲಕ ಮಾದಕ ದ್ರವ್ಯ ರವಾನೆ ಅಥವಾ ಗಿಳಿಗಳ ಕಳ್ಳಸಾಗಾಣೆ ಎಂದೆಲ್ಲಾ ಸುದ್ದಿಗಳು ಹರಿದಾಡುತ್ತಿದೆ.
ಶಂಕಿತ ಕೊಕೈನ್ ಮಾರಾಟಗಾರರನ್ನು ಪೊಲೀಸರು ಪತ್ತೆ ಮಾಡುವ ವೇಳೆ ಗಿಳಿಯು “ಮಮೀ ಪೊಲಿಶಿಯಾ “ಮಾಮಾ ಪೊಲೀಸ್ ಎಂದು ಚೀರುವ ಮೂಲಕ ಆರೋಪಿಗಳನ್ನು ಎಚ್ಚರಿಸಿದೆ. ಪೊಲೀಸರು ಸಮೀಸುತ್ತಿದ್ದಂತೆ ಗಿಳಿಯು ಜೋರಾಗಿ ಚೀರಿಕೊಳ್ಳಲು ಆರಂಭಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಗಿಳಿಗೆ ಅತ್ಯುತ್ತಮವಾಗಿ ತರಬೇತಿ ನೀಡಿದ್ದಾನೆ. ಆದ್ದರಿಂದಲೇ ಪೊಲೀಸರು ಬಂದ ಕೂಡಲೇ ಗಿಳಿ ಎಚ್ಚರಿಸಿದೆ. ಆದರೆ ಗಿಳಿಯ ಪ್ರಯತ್ನ ಯಶಸ್ವಿಯಾಗಿಲ್ಲ, ಯುವತಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ ಠಾಣೆಗೆ ಕರೆದೊಯ್ಯಲಾಗಿದ್ದು, ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆಯಲಾಗಿದೆ.
ಇದೇ ವೇಳೆ ಪಂಜರದಲ್ಲಿದ್ದ ಗಿಳಿಯನ್ನೂ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ಅದನ್ನು ಹಾರಲು ಬಿಟ್ಟರೂ ಎಲ್ಲೂ ಹೋಗದೇ ಠಾಣೆಯಲ್ಲೇ ಮೌನವಾಗಿದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆರೋಪಿಗಳ ಪರ ವಕೀಲೆ ಸಲ್ಮಾ ಬ್ಯಾರೊಸ್ ಸಹ ಗಿಳಿಯನ್ನು ಪ್ರಶ್ನಿಸಲು ಯತ್ನಿಸಿದರೂ, ನೊಂದ ಗಿಳಿಯು ಏನನ್ನು ಮಾತನಾಡದೇ ಸುಮ್ಮನಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಗಿಳಿಯು ಪೊಲೀಸರನ್ನು ನೋಡಿದ್ದರಿಂದ ಬೆಚ್ಚಿಬಿದ್ದಿದೆ ಎಂದು ಆರೋಪಿ ಹೇಳಿದ್ದಾನೆ.
ನಂತರ ಪರಿಸರವಾದಿಯೊಬ್ಬರು ಬಂದು ಗಿಳಿಯನ್ನು ಠಾಣೆಯಿಂದ ಪಡೆದು ಸ್ಥಳೀಯ ಪ್ರಾಣಿ ಸಂಗ್ರಹಾಲಯಕ್ಕೆ ನೀಡಲಾಗಿದೆ. ಅಲ್ಲಿ ಗಿಳಿಗೆ ಹಾರುವುದನ್ನು ಅಭ್ಯಾಸ ಮಾಡಿಸಲಾಗುವುದು ಎಂದು ಹೇಳಲಾಗಿದೆ.
ಕಳ್ಳದಂದೆಗೆ ಸಹಾಯ ಮಾಡಿದ ಆರೋಪದಲ್ಲಿ ಗಿಳಿಯೊಂದನ್ನು ಬಂಧಿಸಿದ ಬ್ರೆಜಿಲ್ ಪೊಲೀಸರು
ಶಂಕಿತ ಕೊಕೈನ್ ಮಾರಾಟಗಾರರನ್ನು ಪೊಲೀಸರು ಪತ್ತೆ ಮಾಡುವ ವೇಳೆ ಗಿಳಿಯು “ಮಮೀ ಪೊಲಿಶಿಯಾ “ಮಾಮಾ ಪೊಲೀಸ್ ಎಂದು ಚೀರುವ ಮೂಲಕ ಆರೋಪಿಗಳನ್ನು ಎಚ್ಚರಿಸಿದೆ. ಪೊಲೀಸರು ಸಮೀಸುತ್ತಿದ್ದಂತೆ ಗಿಳಿಯು ಜೋರಾಗಿ ಚೀರಿಕೊಳ್ಳಲು ಆರಂಭಿಸಿದೆ-ಪೊಲೀಸ್ ಅಧಿಕಾರಿಗಳು
