ವಾರಾಣಸಿ: ವಾರಾಣಸಿಯ ಶೇಕಡಾ 30ರಷ್ಟು ಜನತೆ ಇನ್ನೂ ನಲ್ಲಿ ನೀರು ಪಡೆಯುವ ಸೌಲಭ್ಯವನ್ನೇ ಪಡೆದಿಲ್ಲ, ಆದರೆ ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ವಾರಾಣಸಿಯ ರಸ್ತೆಗಳನ್ನು ಬರೋಬ್ಬರಿ 1.4 ಲಕ್ಷ ಲೀಟರ್ ನೀರು ಬಳಸಿ ಶುಚಿಗೊಳಿಸಲಾಗಿದೆ.
ಮೋದಿ ರೋಡ್ ಶೋ ನಡೆಸಿದ ಚುನಾವಣಾ ಪ್ರಚಾರ ನಡೆಸುವ ರಸ್ತೆಗಳನ್ನು ಬುಧವಾರ ರಾತ್ರಿಯಿಡೀ 400 ಕೂಲಿ ಕಾರ್ಮಿಕರು ಸ್ವಚ್ಛಗೊಳಿಸಿದ್ದಾರೆ ಎನ್ನಲಾಗಿದೆ.
ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಶುಕ್ರವಾರ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಗುರುವಾರ ಇಲ್ಲಿನ 6 ಕಿಲೋ ಮೀಟರ್ ರಸ್ತೆ ಮಾರ್ಗದಲ್ಲಿ ಪ್ರಧಾನಿ ಮೋದಿ ಪ್ರಚಾರ ನಡೆಸಿದರು. ಇದಕ್ಕಾಗಿ ಅವರು ಹೋಗಲಿದ್ದ ರಸ್ತೆಯನ್ನು ನೀರಿನಿಂದ ತೊಳೆಯುವ ಈ ವಿಶೇಷ ಹೆಚ್ಚುವರಿ ಕೆಲಸವನ್ನು ರಾಜ್ಯ ಸರ್ಕಾರ ನಡೆಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಧಾನಿ ಮೋದಿಗಾಗಿ ರಸ್ತೆಗಳನ್ನು ಸ್ವಚ್ಛಗೊಳಿಸಲು ನಾವೇ ಸೂಚಿಸಿದ್ದೇವೆ. ವಾರಾಣಸಿ ಮುನ್ಸಿಪಲ್ ಕಾರ್ಪೊರೇಷನ್ ನಿಂದ ಪೂರೈಸಲ್ಪಟ್ಟ 40 ಟ್ಯಾಂಕರ್ ನೀರು ಮತ್ತು 400 ಕಾರ್ಮಿಕರನ್ನು ರಸ್ತೆ ಸ್ವಚ್ಛತೆಗಾಗಿ ನಿಯೋಜಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ಅಷ್ಟಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸಿರುವ ವ್ಯಕ್ತಿ ಪ್ರಧಾನಿ ಆದ ಮಾತ್ರಕ್ಕೆ ರೋಡ್ ಶೋ ಮಾಡುವ ರಸ್ತೆಗಳನ್ನು ತೊಳೆದು ಸ್ವಚ್ಛಗೊಳಿಸುವ ಅಗತ್ಯವಿತ್ತೇ?, ವಾರಣಾಸಿ ಜನರು ಕುಡಿಯುವ ನೀರಿಗಾಗಿ ಈಗಲೂ ಕಷ್ಟಪಡುತ್ತಿರುವಾಗ ಇಷ್ಟು ಪ್ರಮಾಣದ ನೀರನ್ನು ಪ್ರಧಾನಿಯಾದವರು ಪೋಲು ಮಾಡಿದರೆ ದೇಶಕ್ಕೆ ಯಾವ ಸಂದೇಶ ಹೋಗುತ್ತದೆ?