ಬೆಂಗಳೂರು: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ಸಚಿವ ಎಂ. ಬಿ ಪಾಟೀಲ್ ಹೆಸರಿನಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದ ಪ್ರಕರಣ ಸಂಬಂಧ ಬೆಂಗಳೂರು ಸಿಸಿಬಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಬಸವೇಶ್ವರ ನಗರ ಮೂಲದ ಹೇಮಂತ್ ಕುಮಾರ್ ಎಂಬಾತನೇ ಸಚಿವರ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿ ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದಲ್ಲಿ ಬಂಧಿತ.
ಹೇಮಂತ್ ದೆಹಲಿ ಮೂಲದ ಇಂಗ್ಲಿಷ್ ಮತ್ತು ಹಿಂದಿ ನಿಯತಕಾಲಿಕೆಯ ವಿಶೇಷ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪಾಟೀಲ್ ವಿರುದ್ಧ ಸುಳ್ಳು ಸುದ್ದಿ ಹರಡುವಲ್ಲಿ ಪಾತ್ರ ವಹಿಸಿದ್ದಾರೆ ಎಂಬ ಸಾಕ್ಷಿಯನ್ನು ಆಧರಿಸಿ ಪೊಲೀಸರು ಬಂಧಿಸಿ, ಆರೋಪಿಯನ್ನು ಕೋರ್ಟ್ ಗೆ ಹಾಜರಿಪಡಿಸಿದ್ದರು.
ಹೇಮಂತ್ ನನ್ನು ಏಪ್ರಿಲ್ 30ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ.
ತಮ್ಮ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣ ಹಾಗೂ ‘ವಿಜಯವಾಣಿ’ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದ್ದ ಸಂಬಂಧ ಸಚಿವ ಎಂ.ಬಿ. ಪಾಟೀಲ್ ದೂರು ನೀಡಿದ್ದರು. ದೂರು ನೀಡಿದ ದಿನದಂದೇ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವಹಿಸಲಾಗಿತ್ತು. ಈಗಾಗಲೇ ಪೋಸ್ಟ್ ಕಾರ್ಡ್ ಎಂಬ ಜಾಲತಾಣದ ಮಹೇಶ್ ಹೆಗ್ದೆ ಹಾಗೂ ಮತ್ತೊಬ್ಬ ಮಹಿಳಾ ಪತ್ರಕರ್ತೆಯನ್ನು ಪ್ರಕರಣದ ಸಂಬಂಧ ಬಂಧಿಸಲಾಗಿದೆ.